ಒಂದು ಶಾಪಿಂಗ್ ಸಂಜೆ
ರಸ್ತೆಯಂಚಿನಲ್ಲಿ ಸಣ್ಣ ಸಣ್ಣ
ಗುಪ್ಪೆಗಳಲ್ಲಿ ಎಷ್ಟೊಂದು ಬಳೆ
ಬೆಡಗ ಬಲೆ ಹೊಳೆವ ಶಿಲೆಯ
ಚೂರುಗಳ ಪೋಣಿಸಿ ಮಾರುವ
ಬಿಳಿ ಕುರುಚಲ ಕರಿ ಮೊಗದ ಹಿರಿಯ
.
ಅಮ್ಮನ ಕಿರು ಬೆರಳ ಹಿಡಿತ ಸರಿಸಿ
ಕಿಶೋರಿ ಪುಟಿದು ಓಡಿ
ಕಣ್ಣನಗಲಿಸಿ ಸಣ್ಣ ನಗುವಲ್ಲಿ
ಕೇಳುತ್ತಿದ್ದಾಳೆ,
” ಮಾಮ, ಅಮ್ಮ ಬರುತ್ತಾಳೆ
ಬೆರಳು ಕೈ ಕಾಲು ಕೊರಳ ತುಂಬಾ
ತೊಡಿಸುತ್ತಾಳೆ ಕುಸುರಿ ಮಾಡಿದ
ಬಣ್ಣ ಬಣ್ಣದ ಸರ ಉಂಗುರ
ಹಸುರು ಕೆಂಪಿನ ಬಳೆ
ಎಷ್ಟು ಇವೆಲ್ಲವುಗಳ ಬೆಲೆ?” .
’ಮನಸೆಳೆವ ಕಣ್ಣ ತುಂಬುವ
ಮುಖದಗಲ ಮೋದ ಹರಡುವ
ಈ ಕುಸುರಿ ಕೆಲಸಗಳು
ನಕ್ಷತ್ರಗಳ ತುಂಡುಗಳೇನು
ಆಕಾಶದಿಂದ ಇಳಿಸಿಕೊಂಡದ್ದೇನು
ಗಿಳಿ ನವಿಲುಗಳು ಕೊಟ್ಟ ಬಣ್ಣ ಹಚ್ಚಿ
ಈ ಚಿಟ್ಟೆಗಳ ಸೃಷ್ಟಿಸಿದೆಯೇನು
.
ಇವು ಮೊನ್ನೆ ಗುಡುಗಿದ ಮೋಡ
ಮಧ್ಯದ ಮಿಂಚೇನು
ನಕ್ಕ ಕಾಮನಬಿಲ್ಲ ಉದುರುಗಳೇನು
ಅಜ್ಜಿ ಹೇಳುವ ಕತೆಯ ರಾಜ
ಕುಮಾರಿಯ ಒಡವೆಗಳೇನು!’
ಸಂಭಾಷಣೆಯ ತವಕಿ
ಆದರವಳಚ್ಚರಿಯ ಎತ್ತರ
ಮುಟ್ಟದ ಭಾಷೆ ಗಿರಕಿ!
.
ಜಗದ ಸೋಜಿಗಕ್ಕೆ ಅರಳಿದ
ಅವಳ ಕಣ್ಣ ಹೊಳಪು
ಲಲ್ಲೆಗರೆದುಕೊಂಡ
ತುಸುವೆ ಉಬ್ಬಿದ ಕದಪು
ಪುಟ್ಟ ಚೀಲ ಗಟ್ಟಿ ಹಿಡಿದು
ಅಮ್ಮನರಸುವ ಹುರುಪು
ಬೆರಳ ಹೊರಳಿಗೆ ಜಾರಿ
ಹೋದ ಅರೆ ಘಳಿಗೆಯಲ್ಲೆ
ಕಣ್ಣ ಹನಿಸಿಕೊಂಡವಳು
ಅರಸು ಕಂಗಳ ಹರವಿ
ಹಿಡಿದು ಮಗಳ ಬರಸೆಳೆದಪ್ಪಿದಳು
.
ಕೋಲ್ಮಿಂಚಿನ ಸರ
ಕಾಮನಬಿಲ್ಲ ಬಳೆ
ತಲೆ ತುಂಬುವ ಚಿಟ್ಟೆಗಳಾರಿಸಿ
ಬೆಲೆಗೆ ಕೊಸರಿಸಿ ಚೀಲ ತುಂಬಿಸಿ …
ಆಯತಪ್ಪದೆ ನಡೆದವು
ದಾರಿಗುಂಟವು ಹೆಜ್ಜೆಯುಲಿದವು
ಹೊಸೆದವು ಕಿರುಬೆರಳುಗಳು
ಕರುಳ ಬಳ್ಳಿ ಮತ್ತೆ ಬೆಸೆದವು !
.
ಕುಣಿವ ಕಿಶೋರಿ ಅಮ್ಮನೊಡನಾಡಿ
ಇಬ್ಬರ ಕುರುಳ ಹಾರಿಸಿದವು ತೀಡಿ
ಸಂಜೆ ಬೀಸುವ ಆ ಸೊಂಪು ಗಾಳಿ
– ಅನಂತ ರಮೇಶ್