ಧರ್ಮ ಸಂದೇಶ
1
ಕೊಳೆಯುವದು ಧರ್ಮ
ಕೊಚ್ಚೆ ನೀರಂತೆ
ನಿಂತಲ್ಲೇ ನಿಂತರೆ
ಕರುಣೆಯೊಳು ಬೆಳೆಯುವುದು
ಹರಿದರೆ ನದಿಯಂತೆ!
2
ಆ ಧರ್ಮದವನು ಹೇಳಿದ:
ನಿನ್ನನ್ನು ಕೊಲ್ಲುವೆ
ಈ ಧರ್ಮದವನು ಉತ್ತರಿಸಿದ
ನಾನೂ ನಿನ್ನನ್ನು ಕೊಲ್ಲುವೆ
ಕೊನೆಗಿಬ್ಬರೂ ಸೇರಿ
ಧರ್ಮವನೇ ಕೊಂದರು!
3
ಒಂದು ಧರ್ಮ ಹೇಳಿತು
ಸತ್ತವರನು ಸುಡಬೇಕು
ಇನ್ನೊಂದು ಹೇಳಿತು
ಸತ್ತವರನು ಹೂಳಬೇಕು
ಯಾವ ಧರ್ಮವೂ ಹೇಳಿದಂತೆ
ಕಾಣಲಿಲ್ಲ
ಬದುಕಿರುವವರನ್ನು
ಪ್ರೀತಿಸಬೇಕು!
– ಕು.ಸ.ಮಧುಸೂದನ್