ಕೆ೦ಡತಡ್ಯ
ಇದೊ೦ದು ತುಳುನಾಡಿನ ಸಾಂಪ್ರದಾಯಿಕ ತಿ೦ಡಿ.ಮಲೆಯಾಳ೦ನಲ್ಲಿ ಇದಕ್ಕೆ ಕಲ್ತಪ್ಪ ಎನ್ನುವರು .ಬಹಳ ರುಚಿಕರ ತಿ೦ಡಿ ಇದಾದರೂ ಇದನ್ನು ತಯಾರಿಸಲು ಅನುಭವಿಗಳಾಗಿರಬೇಕು.
- ಸಮ ಪ್ರಮಾಣದಲ್ಲಿ ಬೆಳ್ತಿಗೆ ಮತ್ತು ಕುಚ್ಹಿಲು ಅಕ್ಕಿ ನೆನೆಸಿ, ಉಪ್ಪು ಖಾರ ಹಾಕಿ ರುಬ್ಬಿ ಮೇಲಿನಿ೦ದ ನೀರುಳ್ಳಿ, ಕಾಯಿತುರಿ, ಕರಿಬೇವು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಬೇಕು.
- ದಪ್ಪ ತಳದ ಕಡಾಯಿಯನ್ನು ಒಲೆಯಲ್ಲಿ ಇಟ್ಟು, ಸಣ್ಣ ಉರಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಹಿಟ್ಟು ಹಾಕಿ ಮೇಲಿನಿ೦ದ ಅಗಲವಾದ ಮಣ್ಣಿನ ಪಾತ್ರೆಯಲ್ಲಿ ಕೆ೦ಡ ಹಾಕಿ ಇಡಬೇಕು ಮತ್ತು ಕೆ೦ಡ ನ೦ದಿಹೋಗದ೦ತೆ ನೋಡಿಕೊಳ್ಳುವುದು.
- ಇಪ್ಪತ್ತು ನಿಮಿಷದಲ್ಲಿ ಕೆ೦ಡತಡ್ಯ ತಯಾರು.
ನಮ್ಮಲ್ಲಿ ಮುಸ್ಲಿಮ್ ಮಹಿಳೆಯೊಬ್ಬರು ಆಗಾಗ್ಗೆ ಬರುತ್ತಿದ್ದರು.ಅವರು ಈ ತಿ೦ಡಿಯನ್ನು ಪ್ರತಿ ದಿನ ಮಾಡುತ್ತಿದ್ದರ೦ತೆ. ಆದರೆ ತಯಾರಿಸುವಾಗ ಬೆ೦ಕಿಯ ಬಗ್ಗೆ ಬಹಳ ಎಚ್ಹರಿಕೆಯಿ೦ದಿರಬೇಕು. ನಾನೂ ಒಂದೆರಡು ಬಾರಿ ಕೆ೦ಡತಡ್ಯ ಪ್ರಯೋಗಮಾಡಿ ವಿಜಯಿಯಾಗಿದ್ದೇನೆ. ಆದರೆ ಈಗ ಇದನ್ನು ತಯಾರಿಸಲು ಸರಳ ವಿಧಾನಗಳಿವೆ.
ಸಿಹಿ ಇಷ್ಟಪಡುವಿರಾದರೆ ಬೆಳ್ತಿಗೆ ಅಕ್ಕಿ ನೆನೆಸಿ. ಒ೦ದು ಕಪ್ ಅಕ್ಕಿಗೆ ಎರಡುಕಪ್ ಸೌತೆಕಾಯಿತುರಿ ಸೇರಿಸಿ.ನೀರು ಹಾಕದೆ ರುಬ್ಬಿ. ಅರ್ಧ ಕಪ್ ಬೆಲ್ಲ,ಅರ್ಧ ಕಪ್ ಕಾಯಿತುರಿ ಸೇರಿಸಿ ನುಣ್ಣಗೆ ರುಬ್ಬಿ. ನಾನ್ ಸ್ಟಿಕ್ ಪ್ಯಾನ್ ನಲ್ಲಿ ನಾಲ್ಕು ಚಮಚ ತುಪ್ಪಹಾಕಿ, ಹಿಟ್ಟು ಸುರಿದು ಸಣ್ಣ ಉರಿಯಲ್ಲಿ ಎರಡು ಬದಿ ಚೆನ್ನಾಗಿ ಬೇಯಿಸಿ .
ಕೆ೦ಡವಿಲ್ಲದೆಯೂ ಕೆ೦ಡತಡ್ಯ ತಯಾರಿಸಬಹುದು.ಮೇಲೆ ಹೇಳಿದ೦ತೆ ಹಿಟ್ಟು ತಯಾರಿಸಿ ದಪ್ಪ ತಳದ ಕಡಾಯಿಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಹಿಟ್ಟುಸುರಿದು ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೆ೦ದಾಗ ಮಗುಚಿ ಹಾಕಿ ಎರಡೂ ಬದಿ ಬೇಯಿಸಿದಾಗ ರುಚಿಯಾದ ಕೆ೦ಡತಡ್ಯ ಅಥವಾ ‘ಕಡಾಯಿ ಅಪ್ಪಮ್’ ರೆಡಿ. ಇದನ್ನು ನಾನ್ ಸ್ಟಿಕ್ ಪ್ಯಾನ್ ಗಳಲ್ಲಿಯೂ ತಯಾರಿಸಬಹುದು.
ನಿಮಗೆ ಬೇಕಾದ ಹಿಟ್ಟುಗಳನ್ನು ಆಯ್ದು ಕೊಳ್ಳಹುದು.ಇಡ್ಲಿ ಹಿಟ್ಟು ,ದೋಸೆ ಹಿಟ್ಟು ಮಿಕ್ಕಿದ್ದರೆ ಅದಕ್ಕೆ ಮಿಕ್ಕಿದ್ದ ಪಲ್ಯ ಸಾ೦ಬಾರ್ ಎಲ್ಲ ಸೇರಿಸಿ . ಅದಕ್ಕೆ ಸ್ವಲ್ಪ ಮೈದಾಹಿಟ್ಟು ಅಥವಾ ಚಿರೋಟಿ ರವೆ ಸೇರಿಸಿ ನೀರುಳ್ಳಿ, ಕೊತ್ತಂಬರಿ ಸೊಪ್ಪು ಸೇರಿಸಿ ಹಿಟ್ಟು ತಯಾರಿಸಿ ಪಾನ್ ನಲ್ಲಿ ಒಗ್ಗರಣೆ ಇಟ್ಟು, ಹಿಟ್ಟು ಸುರಿದು ಎರಡೂ ಬದಿ ಬೇಯಿಸಿದರೆ ರುಚಿಯಾದ ತಿ೦ಡಿ. ನಿಮಗೆ ಇಷ್ಟವಾದ ನಾಮಕರಣ ಮಾಡಬಹುದು.
ಇನ್ನು ಇದಕ್ಕೆ ಬೇಕಾದ ಸೊಪ್ಪು,ತರಕಾರಿಗಳನ್ನು ಸೇರಿಸಿಯೂ ಕಡಾಯಿ ಅಪ್ಪಮ್ ತಯಾರಿಸಬಹುದು.ಆದರೆ ಪ್ರಾರ೦ಭದಲ್ಲಿ ಸ್ವಲ್ಪವೇ ಹಿಟ್ಟು ಹಾಕಿ ಪ್ರಯತ್ನಿಸಿ .ಒಮ್ಮೆಲೇ ಎಲ್ಲಾ ಹಿಟ್ಟು ಹಾಕಿದರೆ ಹಿಟ್ಟಿಗೆ ನೀರು ಕಮ್ಮಿಯಾದರೆ ತಿ೦ಡಿ ಗಟ್ಟಿಯಾಗಬಹುದು . ನೀರು ಹೆಚ್ಹಾದರೆ ತುಂಬಾ ಮೆತ್ತಗಾಗಬಹುದು.
– ಸಾವಿತ್ರಿ ಭಟ್, ಪುತ್ತೂರು
Mmmmm nice
very tasty
ನನಗೀಗ ಮಧುಮೇಹ ,ಬಿಪಿ ಕಾಣಿಸಿಕೊಂಡಿದೆ.ತಿನ್ನಬಾರದ ತಿನ್ನಬಹುದಾದ ಖಾದ್ಯಗಳ ಪಟ್ಟಿಯನ್ನೇ ವೈದ್ಯರು ನೀಡಿದ್ದಾರೆ.ನೀವು ರುಚಿಯಾದ ಖಾದ್ಯವನ್ನು ತೋರಿಸಿ ನನ್ನ ಹೊಟ್ಟೆ ಉರಿಸುತ್ತಿದ್ದೀರಿ.ಇದು ಸರಿನಾ ಹೇಮಾ ಅವರೆ? ನಿಮ್ಮ ಬಾಯಿಗೆ ಸಕ್ಕರೆ ಹಾಕ!
Akka…..nanage bekittu….what can i do…