ಅವಳು ಮಳೆಯಾಗಲಿ ನಾನು ಇಳೆಯಾಗುವೆ..!
ಅದೊಂದು ದಿನ ನನ್ನ ಗೆಳತಿ ನಾ.ಡಿಸೋಜರವರು ಬರೆದ ಎರಡು ಕಾದಂಬರಿಗಳನ್ನು (ಮುಖವಾಡ ಮತ್ತು ಮುಳುಗಡೆ) ತಂದು ಕೊಟ್ಟು ‘ಗೆಳಯಾ, ನೀನು ಆದಷ್ಟು ಬೇಗ ಈ ಎರಡೂ ಪುಸ್ತಕಗಳನ್ನು ಓದಬೇಕೆಂದು ಹೇಳಿ ಹೋದಳು.’ ಗೆಳತಿಯ ಆಶಯವನ್ನು ಆದೇಶವೆಂದು ಭಾವಿಸಿ ‘ಮುಳುಗಡೆ’ಯನ್ನೆ ಮೊದಲು ಓದಲು ಕೈಗೆತ್ತಿಕೊಂಡೆ, ಕಾರಣ ಆಲಮಟ್ಟಿ ಆಣೆಕಟ್ಟಿನ ಹಿನ್ನಿರಿನಿಂದ ನಮ್ಮ ಜಿಲ್ಲೆಯ (ಬಾಗಲಕೋಟೆ) ಬುಹುತೇಕ ಭಾಗ ಮುಳುಗಡೆಯಾದ ನಿಮಿತ್ಯ, ಡಿಸೋಜರವರ ‘ಮುಳುಗಡೆ’ಯಲ್ಲಿ ಏನೇನು ಅಡಕವಾಗಿರಬಹುದೆಂಬ ತುಡಿತದಿಂದ ಕೂಡಲೆ ಓದು ಆರಂಭಿಸಿದೆ. ತುಂಬಾ ಅರ್ಥಪೂರ್ಣವಾಗಿರುವ ಅವರ ಬರಹ ಶೈಲಿ ಕುತೂಹಲದೊಂದಿಗೆ ನನ್ನನ್ನು ಓದಿಸಿಕೊಂಡು ಹೋಯಿತು.
‘ಮುಳುಗಡೆ’ಯ ಓದು ಮುಗಿಸಿ ಇನ್ನೆನು ನಿದ್ದೆಗೆ ಜಾರಬೇಕೆನ್ನುವುಷ್ಟರಲ್ಲಿಯೇ ಗೆಳತಿಯ ದೂರವಾಣಿ ಕರೆ ‘ಹಲೋ.. ಓದುವುದನ್ನು ಮುಗಿಸಿದರಾ..?’ ಆಗ ನಾನು, ‘ಮುಳುಗಡೆ’ಯನ್ನು ಮಾತ್ರ ಓದಿರುವೆ ಅಂತಾ ಹೇಳಿದೆ. ‘ನಿಮಗೆ ಆ ಪುಸ್ತಕಗಳನ್ನು ಓದಲು ಕೊಟ್ಟಿರುವುದರ ಹಿಂದೆ ನನ್ನ ಸ್ವಾರ್ಥವೂ ಅಡಗಿದೆ, ಅದೇನಂದ್ರೆ ಈ ಸಾರಿ ಮಡಿಕೇರಿಯಲ್ಲಿ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ‘ಸರ್ವಾಧ್ಯಕ್ಷರೊಡನೆ ಸಂವಾದ ಗೋಷ್ಠಿ’ಯಲ್ಲಿ ನನ್ನ ಹೆಸರಿದೆ. ಗೋಷ್ಠಿಯಲಿ ನನಗೊಂದು ಪ್ರಶ್ನೆ ಕೇಳಲು ಅವಕಾಶವಿದೆ. ತನ್ನಿಮಿತ್ಯ ನೀವು ಆದಷ್ಟು ಬೇಗ ನಾನು ಕೊಟ್ಟಿರುವ ಎರಡೂ ಪುಸ್ತಕಗಳನ್ನು ಓದಿ ಎರಡು ಪ್ರಶ್ನೆಗಳನ್ನು ಬರೆದಿಡಬೇಕೆಂದು‘ ವಿನಂತಿಸಿಕೊಂಡಳು.
ಸಮಯದ ಅಭಾವದ ಕಾರಣ ಇನ್ನೊಂದು ಪುಸ್ತಕವನ್ನು ಓದುವ ಗೋಜಿಗೆ ಹೋಗದೆ, ಓದಿರುವ ‘ಮುಳಗಡೆ’ಯ ಕುರಿತೆ ಪ್ರಶ್ನೆಗಳನ್ನು ಸಿದ್ದಪಡಿಸಿ ಕೊಟ್ಟಿದ್ದೆ. ಮರುದಿನ ಮಡಿಕೇರಿಯಲ್ಲಿ ಸಂವಾದ ಗೋಷ್ಠಿ ಮುಗಿಯುತ್ತಿದ್ದಂತೆ ಗೆಳತಿ ಮೊಬೈಲ್‌ನಲಿ ‘ಹಲೋ ಪ್ರೆಂಡ್ ಇಡೀ ಗೋಷ್ಠಿಯಲಿ ನನ್ನದೆ ಅರ್ಥಾತ್ ನಿಮ್ಮದೆ ಪ್ರಶ್ನೆ ಹೆಚ್ಚು ಚರ್ಚೆಯಾಯಿತು. ನಮ್ಮ ಪ್ರಶ್ನೆಗೆ ಡಿಸೋಜರವರು ತುಂಬಾ ಭಾವುಕರಾಗಿ ಉತ್ತರಿಸಿದರು. ಇಲ್ಲಿ ಎಲ್ಲರೂ (ಮಾಧ್ಯಮದವರು ಮತ್ತು ಸಾಹಿತ್ಯಾಸಕ್ತರು) ನನ್ನನ್ನೀಗ ಪ್ರೀತಿಯಿಂದ ಮಾತನಾಡಿಸುತ್ತಿದ್ದಾರೆ, ಎಷ್ಟು ಪುಸ್ತಕ ಬಂದಿವೆ ಅಂತಾ ಕೇಳ್ತಾ ಇದ್ದಾರೆ, ಗೆಳಯಾ ನಿನಗೂ ಗೊತ್ತಿದೆ ನನ್ನದು ಒಂದೂ ಪುಸ್ತಕ ಬಂದಿಲ್ಲ, ಆದರೂ ನಾನಿಲ್ಲಿ ಯಶಸ್ವಿಯಾಗಿರುವೆ ಇದೆಲ್ಲವೂ ನಿನ್ನ ಕೃಪೆ, ಊರಿಗೆ ಬಂದ್ಮೇಲೆ ಎಲ್ಲವನ್ನೂ ಎಳೆಎಳೆಯಾಗಿ ಹೇಳುವೆ.’ ಅಂತಾ ಪೋನ್ ಕಟ್ ಮಾಡಿದಳು.
ಮರುದಿನ ಪ್ರಮುಖ ಪತ್ರಿಕೆಗಳಲ್ಲಿ ನನ್ನ ಗೆಳತಿಯ ಭಾವಚಿತ್ರ ಮತ್ತು ಸುದ್ದಿ ಓದಿ ಗೆಳಯನೊರ್ವ ಹೀಗೆ ಹೇಳಿದ ‘ಲೇ.. ನೀ ಗೆಳತಿಗಾಗಿ ಮೊನ್ನೆ ಸಿದ್ದಪಡಿಸಿ ಕೊಟ್ಟಿರುವ ಆ ಪ್ರಶ್ನೆಯಲ್ಲಿಯೇ ‘ಮುಳುಗಡೆ’ಯಾದೆ’ ಅಂತಾ ಗೇಲಿಮಾಡಿದ. ಮತ್ತೊರ್ವ ಗೆಳಯ ‘ಸಾಹಿತ್ಯದ ಗಂಧ-ಗಾಳಿ ಗೊತ್ತಿರದ ಆಕೆಯನ್ನು ಸರ್ವಾಧ್ಯಕ್ಷರೊಡನೆ ಸಂವಾದ ಗೋಷ್ಠಿಗೆ ಹೇಗೆ ಆಯ್ಕೆ ಮಾಡಿದರು?’ ಅಂತಾ ದಿಗ್ಮೂಢನಾದ. ಗೆಳಯರಂತೆಯೇ ನನ್ನ ಪರಿಚಯಸ್ತ ಹಿರಿಯರೊಬ್ಬರು ‘ಗೌಡಪ್ಪ ನೋಡೊ ಆ ಹೆಣ್ಮಗಳು ಎಷ್ಟು ಎತ್ತರಕೆ ಬೆಳದುಬಿಟ್ಲು, ನೀನೂ ಸಾಹಿತ್ಯ ಕ್ಷೇತ್ರದಲ್ಲಿ ಸುಮಾರು ವರ್ಷ ಸಣ್ಣಪುಟ್ಟ ಕೆಲಸ ಮಾಡ್ತಾ ಇದ್ದಿ, ಸಾಲದ್ದಕ್ಕೆ ಸಣ್ಣ ಪತ್ರಿಕೆಯೊಂದನ್ನು (ಅದೂ ಸಾಹಿತ್ಯಿಕವಾಗಿ) ನಡೆಸಾಕಹತ್ತಿ ಆದರೆ ಆಕೆಯ ಹಾಗೆ ಒಂದು ಬಾರಿಯೂ ನೀ ಚರ್ಚೆಯಾಗಾಲಿಲ್ಲ. ಇನ್ಮೇಲಾದರೂ ಅಂತಹ ಪ್ರಯತ್ನ ಮಾಡು, ಅಂತಾ ಬುದ್ದಿವಾದ ಹೇಳಿದರು. ಮರು ಮಾತನಾಡದೆ ಮುಗಳ್ನಕ್ಕು ಮನೆಯತ್ತ ಹೆಜ್ಜೆ ಹಾಕಿದೆ.
ಗೆಳತಿ ಮಡಿಕೇರಿಯಿಂದ ನನಗೊಸ್ಕರ ತಂದಿದ್ದ ಒಂದು ಕಾಫಿಪುಡಿ ಪ್ಯಾಕೆಟ್ ಹಾಗೂ ಸರಜೂ ಕಾಟ್ಕರ್‌ರವರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ‘ಬಂಡಾಯ ಸಾಹಿತ್ಯ’ ಪುಸ್ತಕವನ್ನು ಮನೆಗೆ ತಲುಪಿಸಿ ಆಗಷ್ಟೆ ಹೋಗಿದ್ದಳು. ನನ್ನ ಪ್ರೀತಿಯ ಗೆಳತಿ ಅದೆಷ್ಟೆ ಎತ್ತರಕೆ ಬೆಳೆದರೂ ಕೆಳಗಿದ್ದುಕೊಂಡೆ ಒಳಗೊಳಗೆ ಖುಷಿ ಪಟ್ಟವನು ನಾನು. ಕೆಲ ಒಳ್ಳೆಯ ಪುಸ್ತಕಗಳನ್ನು ಕೊಂಡು ಓದುವ ಸಾಮರ್ಥ್ಯ ನನಗಿಲ್ಲದಂತಹ ಸಂದರ್ಭದಲ್ಲಿ ಆಕೆ ಅದೇಷ್ಟೋ ಅಮೂಲ್ಯವಾದ ಪುಸ್ತಕಗಳನ್ನು ಪುಕ್ಕಟೆಯಾಗಿ ಕೊಟ್ಟು ಓದಿಸಿದ್ದಾಳೆ, ಹೊಸ ಹೊಸ ಹೊಳುಹುಗಳನ್ನು ನನ್ನೊಳಗೆ ಹರಿಬಿಟ್ಟಿದ್ದಾಳೆ. ನನ್ನ ಓದುವಿಕೆಯಿಂದ ಅವಳು ಬೆಳೆಯುತ್ತಿರುವಳೊ..? ಅಥವಾ ಅವಳು ಕೊಟ್ಟಿರುವ ಪುಸ್ತಕಗಳಿಂದ ನಾನು ಬೆಳೆಯುತ್ತಿರುವೆನೊ..? ಈ ಎರಡು ಪ್ರಶ್ನೆಗಳಿಗಿಂತ ಮಿಗಿಲಾಗಿ ಗೆಳತಿ ಮುಗಿಲೆತ್ತರಕೆ ಬೆಳೆದು, ತಿಳಿ ಮುಗಿಲಾಗಿ ಮಳೆಯಾಗಲಿ. ಇಳೆಯಾಗಿ ಆ ಮಳೆಹನಿಗಳನು ಹೀರಿಕೊಂಡು ಗರ್ಭಧರಿಸಿ ಅಸಂಖ್ಯ ಮುತ್ತುಗಳಿಗೆ ಜನ್ಮ ನೀಡುವ ಕನಸು ಕಟ್ಟಿಕೊಂಡವನು ನಾನು.
– ಕೆ.ಬಿ.ವೀರಲಿಂಗನಗೌಡ್ರ, ಬಾಗಲಕೋಟ ಜಿಲ್ಲೆ.
ಸಹೃದಯಿಗಳು ನೀವು, ನಿಮಗೆ ಒಳಿತಾಗುತ್ತದೆ.
ನಿಮ್ಮ ನಿಸ್ವಾರ್ಥ ಸ್ನೇಹ ತುಂಬಾ ಇಷ್ಟ ಆಯ್ತು.
ನಿಮಗೂ ಹಾಗೂ ನಿಮ್ಮ ಸ್ನೇಹಕ್ಕೆ ಜಯವಾಗಲಿ.
ಸರ್ ಚಂದದ ಅನುಭವ ಬೆಲೆ ಕಟ್ಟಲಾಗದ ನಿಮ್ಮ ಆತ್ಮೀಯತೆ…ಮನಸಿಗೆ ಮುಟ್ಟಿತು. ಶೀರ್ಷಿಕೆ ಉತ್ತಮವಾಗಿದೆ.
ತುಂಬ ಚೆನ್ನಾಗಿದೆ ನಗುತ ಓದಿದೆ