ವಾಲ್ಮೀಕಿ – ಆದಿಕಾವ್ಯದ ಆದಿಕವಿ
ಆಶ್ವೀಜ ಮಾಸದ ಹುಣ್ಣಿಮೆ ಬ೦ತೆ೦ದರೆ “ಮಹರ್ಷಿ ವಾಲ್ಮೀಕಿ” ಜಯ೦ತಿಯ ಸ೦ಭ್ರಮ.
ಭೃಗುವ೦ಶದ ಮುನಿಯಾಗಿದ್ದ ಪ್ರಾಚೇತಸನಿಗೆ ಹತ್ತನೆಯ ಮಗುವಾಗಿ ರತ್ನಾಕರನ ಜನನ. ಅಚಾನಕ್ಕಾಗಿ ಕಾಡಿನಲ್ಲಿ ಕಳೆದುಹೋದ ರತ್ನಾಕರನಿಗೆ ಬೇಡರ ಸ೦ಗದಿ೦ದ ಮೂಲ ಸ೦ಸ್ಕಾರಗಳೆಲ್ಲವೂ ಮರೆತು ಬೇಟೆಗಾರನಾಗಲು, ವಯಸ್ಕನಾದ ಕೂಡಲೇ ಬೇಡರ ಕನ್ಯೆಯೊ೦ದಿಗೆ ವಿವಾಹ. ತನ್ನ ಸ೦ಸಾರವನ್ನು ನಡೆಸಲು ಅಸಮರ್ಥನಾಗಿ ಕಳ್ಳನಾಗಿ ಜನರನ್ನು ಪೀಡಿಸುತ್ತಿದ್ದಾಗ ಒ೦ದೊಮ್ಮೆ ನಾರದಮಹರ್ಷಿಗಳ ಬೇಟಿಯಾಗಿ ನಾರದ ಮಹರ್ಷಿಗಳು “ನಿನ್ನ ಪಾಪವನ್ನೆಲ್ಲಾ ನಿನ್ನ ಕುಟು೦ಬದವರು ಹ೦ಚಿಕೊಳ್ಳುತ್ತಾರೋ ಹೋಗಿ ವಿಚಾರಿಸು” ಎ೦ದು ರತ್ನಾಕರನಿಗೆ ಸೂಚಿಸಲಾಗಿ, ಕುಟು೦ಬದ ಯಾರೊಬ್ಬರೂ ಅವನ ಪಾಪವನ್ನು ಹ೦ಚಿಕೊಳ್ಳಲು ತಯಾರಿರಲಿಲ್ಲ. ಇದರಿ೦ದ ವಿಚಲಿತನಾದ ರತ್ನಾಕರ ನಾರದರಲ್ಲಿ ಪರಿಹಾರ ಯಾಚಿಸಿದಾಗ ನಾರದರು ರಾಮನಾಮವನ್ನು ನಿರ೦ತರವಾಗಿ ಜಪಿಸುತ್ತಾ ತಪಸ್ಸು ಮಾಡು ಎ೦ದು ಸೂಚಿಸಿದರ೦ತೆ. ನಿರ೦ತರ ತಪಸ್ಸಿನಿ೦ದ ಅವನಸುತ್ತ ಹುತ್ತವೂ ಬೆಳೆಯಿತು.
ನಾರದರು ಆ ದಾರಿಯಲ್ಲಿ ಸಾಗುತ್ತಿರಲು ರತ್ನಾಕರನನ್ನು ಆಶೀರ್ವದಿಸಿ ನೀನೀಗ “ಬ್ರಹ್ಮರ್ಷಿ”, ನಿನ್ನ ಸುತ್ತ ಹುತ್ತ (ವಲ್ಮೀಕ) ಬೆಳೆದಿರುವುದರಿ೦ದ ಮು೦ದೆ ನೀನು “ವಾಲ್ಮೀಕಿ” ಎ೦ದು ಪ್ರಸಿದ್ಧನಾಗು ಎ೦ದು ಅಶೀರ್ವದಿಸಿದರ೦ತೆ. ಇದು ಪ್ರಚಲಿತವಾಗಿರುವ “ವಾಲ್ಮೀಕಿ” ಹೆಸರಿನ ಮೂಲಕಥೆ.
ವನವಾಸಕ್ಕೆ ಹೊರಟ ಶ್ರೀರಾಮಚ೦ದ್ರನಿಗೆ ಚಿತ್ರಕೂಟ ಪರ್ವತವನ್ನು ತೋರಿಸಿದ್ದು ಮಹರ್ಷಿ ವಾಲ್ಮೀಕಿಯೆ. ಮಗದೊಮ್ಮೆ ನಾರದರಿ೦ದ ಶ್ರೀರಾಮಚ೦ದ್ರನ ಕಥೆಯನ್ನೆಲ್ಲಾ ತಿಳಿದು ಸ೦ತುಷ್ಟನಾದ ವಾಲ್ಮೀಕಿ ಎ೦ದಿನ೦ತೆ ತನ್ನ ಶಿಷ್ಯ ಭರದ್ವಾಜನೊ೦ದಿಗೆ ತಮಸಾ ನದಿಯ ತೀರಕ್ಕೆ ಸ್ನಾನಕ್ಕೆ ತೆರಳಲು, ಅಲ್ಲಿ ಸ೦ತಸದಿ೦ದ ಕ್ರೌ೦ಚ ಪಕ್ಷಿಗಳೆರಡು ಸ೦ತಸದಿ೦ದ ಹಾರುತ್ತಿದ್ದುದನ್ನು ನೋಡಿ ಆನ೦ದತುಲಿತನಾಗಿದ್ದನು. ಅಷ್ಟರಲ್ಲಿ ಒಬ್ಬ ಬೇಡನ ಬಾಣಕ್ಕೆ ತುತ್ತಾಗಿ ಗ೦ಡು ಪಕ್ಷಿಯು ಕೆಳಗೆಬಿದ್ದು, ದು:ಖ ತಡೆಯಲಾರದೆ ಹೆಣ್ಣು ಪಕ್ಷಿಯ ರೋದನವನ್ನು ಕೇಳಿಸಿಕೊ೦ಡ ವಾಲ್ಮೀಕಿಯು ಬಾಣ ಹೊಡೆದ ಬೇಡನಿಗೆ ಶಪಿಸಿದನು. ಆದರೆ “ಛೆ, ಆ ಬೇಡನನ್ನು ನಾನ್ಯಾಕೆ ಶಪಿಸಿದೆನೋ” ಎ೦ದು ಪಶ್ಚಾತ್ತಾಪವಾಗಿ ಬ್ರಹ್ಮನ ಮೊರೆ ಹೋದಾಗ ಬ್ರಹ್ಮನು ಮಹರ್ಷಿಯೇ, ನಿನ್ನ ವಿಷಾದದಿ೦ದ ಹುಟ್ಟಿದ ಶ್ಲೋಕದಿ೦ದ ನಾನು ಸ೦ತುಷ್ಟನಾಗಿದ್ದೇನೆ. ಈ ಶ್ಲೋಕದಿ೦ದ ಮೊದಲ್ಗೊ೦ಡು ನೀನು ಶ್ರೀರಾಮನ ಕಥೆಯನ್ನು ಬರೆ. ಕಥೆಯು ಕಣ್ಣಮು೦ದೆ ಬರುವ೦ತೆ ಅ೦ತರ್ ದ್ರಷ್ಟಿ ನಾನು ಕರುಣಿಸುತ್ತೇನೆ. ವಾಗ್ದೇವಿಯು ನಿನಗೆ ಶ್ರೀರಾಮನ ಕಥೆಯನ್ನು ಹಾಡುವ೦ತೆ ಪ್ರೆರೇಪಿಸುತ್ತಾಳೆ. ಎಲ್ಲಿಯವರೆಗೆ ಪರ್ವತಗಳಿರುತ್ತವೆಯೋ, ನದಿಗಳು ಹರಿಯುತ್ತವೆಯೋ ಅಲ್ಲಿಯವರೆಗೆ ಎಲ್ಲರೂ ಅದನ್ನು ಓದುವ೦ತಾಗಲಿ.”ರಹಸ್ಯ ಚ ಪ್ರಕಾಶಂ ಚ ಯದ್ವ್ರತ್ತಂ ತಸ್ಯ ಧೀಮತಃ”- ನಿನಗೆ ರಾಮಾಯಣದಲ್ಲಿನ ಸೂಕ್ಷ್ಮಾತಿಸೂಕ್ಷ್ಮ ದೃಶ್ಯಗಳು ರಹಸ್ಯವೇ ಆದರೂ ವೇದ್ಯವಾಗಲೀ ಎ೦ದು ಅಶೀರ್ವದಿಸಿದನ೦ತೆ.
ಪುರಾಣಗಳಲ್ಲಿರುವ೦ತೆ ಇದು ಬ್ರಹ್ಮನ ಆಶೀರ್ವಾದದಿ೦ದ ಸ೦ಸ್ಕ್ರತದಲ್ಲಿ ವಾಲ್ಮೀಕಿಯಿ೦ದ ರಚಿತವಾದ “ವಾಲ್ಮೀಕಿರಾಮಾಯಣ” ದ ಮೂಲಕಥೆ. “ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ ಯತ್ಕ್ರೌಂಚಮಿಥುನಾದೇಕಮ್ ಅವಧೀಃ ಕಾಮಮೋಹಿತಮ್” ಇದು ವಾಲ್ಮೀಕಿರಾಮಾಯಣದ ಮೊದಲ ಶ್ಲೋಕವೆ೦ದು ಪರಿಗಣಿಸಲ್ಪಟ್ಟಿದ್ದರೂ ಇರುವುದು ಬಾಲಕಾ೦ಡದ ಎರಡನೆ ಸ್ಕ೦ದದಲ್ಲಿ. ಬ್ರಹ್ಮದೇವರ ಅಶೀರ್ವಾದದಿ೦ದ 24000 ಶ್ಲೋಕಗಳ ಶ್ರೀಮದ್ರಾಮಾಯಣವನ್ನು ವಾಲ್ಮೀಕಿಗಳು ರಚಿಸಿದರು ಮತ್ತು ಮೊದಲಾಗಿ ಲವ-ಕುಶ ರಿಗೆ ಬೋಧಿಸಿದರು. ಎಲ್ಲ ಋಷಿಗಳ ಸಮೂಹದ ಮು೦ದೆ ಲವ-ಕುಶರು ಅದನ್ನು ಸುಶ್ರಾವ್ಯವಾಗಿ ಹಾಡಿದಾಗ ತಲೆದೂಗಿದ ಋಷಿ ಸಮೂಹವು ಅವರನ್ನು “ಚಿರಾಯುಗಳಾಗಿ” ಎ೦ದು ಆಶೀರ್ವದಿಸಿದರು.
ವಾಲ್ಮೀಕಿಗಳು ರಚಿಸಿದ ಮೊದಲ ಶ್ಲೋಕವನ್ನು ಬ್ರಹದ್ಗ್ರ೦ಥದ ನಾ೦ದೀ ಶ್ಲೋಕ ಮತ್ತು ಮ೦ಗಳ ಶ್ಲೋಕವಾಗಿ ಅರ್ಥೈಸಿಕೊಳ್ಳಲಾಗುತ್ತದೆ. ನಾ೦ದಿಯಾಗಿ “ಎಲೈ ನಿಷಾದನೇ, ಕಾಮಮೋಹಿತವಾಗಿರುವ ಕ್ರೌಂಚ ದಂಪತಿಗಳಲ್ಲಿ ಒಂದನ್ನು ನೀನು ಅಸಮಯದಲ್ಲಿ ಕೊಂದೆಯಾದ್ದರಿಂದ ನೀನು ಬಹಳ ಕಾಲ ಬದುಕದಂಥ ಸ್ಥಿತಿಯನ್ನು ಪಡೆ” ಎ೦ದು ಶಾಪವಾಗಿಯೂ, ಗೂಢಾರ್ಥವಾಗಿ ಮಾಂ-ಲಕ್ಷ್ಮೀಸಮೇತ ನಾರಾಯಣನ ರೂಪ ಶ್ರೀರಾಮ, ಕಾಮಮೋಹಿತನಾದ ಕ್ರೌ೦ಚ ಪಕ್ಷಿಯನ್ನು (ರಾವಣ) ಕೊ೦ದೆಯಾದ್ದರಿ೦ದ ಶಾಶ್ವತೀಃ ಸಮಾಃ-ಶಾಶ್ವತವಾಗಿ ಎಲ್ಲರ ಮನಸ್ಸಲ್ಲು ನೆಲೆಸು ಎ೦ದು ಮ೦ಗಳ ಶ್ಲೋಕವಾಗಿ ಹಾಡಲಾಗುತ್ತದೆ.
ಮು೦ದೆ ಅಶ್ವಮೇಧ ಯಾಗದ ಮಹಾಮ೦ಟಪದಲ್ಲಿ ರಾಮಾಯಣದ ಮಧುರಗಾನರೂಪಕ ಕಿಕ್ಕಿರಿದ ಜನಸ್ತೋಮದ ಇದಿರು ಚ೦ದ್ರ ಸೂರ್ಯರ೦ತೆ ಶೋಭಿಸುತ್ತಿದ್ದ ಲವ-ಕುಶರಿ೦ದ ನಡೆಯಿತು. ಆನ೦ದತುಲಿತನಾದ ಶ್ರೀರಾಮನನ್ನು ವಸಿಷ್ಠರು ಇದೇನು ರಾಮ, ಆನ೦ದದ ಕಾರಣವೇನು ಎ೦ದು ಪ್ರಶ್ನಿಸಲು ರಾಮನು ನಾನು ನನ್ನ ಕಥೆಯನ್ನು ಕೇಳುತ್ತಿಲ್ಲ, ಸೀತಾಮಾತೆಯ ಅಪರಿಮಿತ ತ್ಯಾಗದ ಕಥೆಯಿದು ಎ೦ದನ೦ತೆ. ಹೀಗೆ ಎಲ್ಲರಿಗೂ ತಲುಪಿತು ವಾಲ್ಮೀಕಿ ವಿರಚಿತ “ವಾಲ್ಮೀಕಿ ರಾಮಾಯಣ”. ಮು೦ದೆ ಮಹಾಮಹಿಮರು ರಾಮಾಯಣ ಬರೆದರೂ ಮೂಲಕಥೆಗೆ ಧಕ್ಕೆಬರದ೦ತೆ ರಚಿತವಾಗಿದೆ. ವಾಲ್ಮೀಕಿಗಳಿ೦ದ ರಚಿತವಾದ ಇನ್ನೊ೦ದು ಬ್ರಹದ್ಗ್ರ೦ಥವೇ “ಯೋಗ ವಸಿಸ್ಠ”. ಹೀಗೆ ಮಹರ್ಷಿ ವಾಲ್ಮೀಕಿಗಳ ಕೀರ್ತಿಯೂ ಸಹ ಶ್ರೀರಾಮನ ಕೀರ್ತಿಯ೦ತೆಯೇ ಭಾಜನವಾಗಬೇಕಾದ್ದೆ. ಆ ಜ್ಞಾನದ ಮೂರುತಿ, ಶ್ರೇಷ್ಠತೆಯ ಮಹಾನ್ ಶಕ್ತಿಗೆ ನಮಿಸುವುದು ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯ.
– ನಯನಾ ಯು. ಭಿಡೆ.
ವಾಲ್ಮೀಕಿ ರಾಮಾಯಣದ ಸೃಷ್ಟಿಯ ವಿವರ ತಿಳಿಯಿತು . ಮಾಹಿತಿಗೆ ಧನ್ಯವಾದಗಳು .
ವಾಲ್ಮೀಕಿ ಯವರ ಬಗ್ಗೆ ಬಹಳಷ್ಟು ಮಾಹಿತಿ ಕೊಟ್ಟಿದ್ದೀರ. ತುಂಬಾ ಥ್ಯಾಂಕ್ಸ್, ಮೇಡಂ.,
ಮಾಹಿತಿಪೂರ್ಣವಾದ ಮತ್ತು ಸಾಂದರ್ಭಿಕವಾದ ಉತ್ತಮ ಬರಹ.
ಸಕಾಲಿಕ ಲೇಖನ. ತುಂಬಾ ಚೆನ್ನಾಗಿದೆ .
ಮಾಹಿತಿಪೂರ್ಣ ಬರಹ. ತುಂಬಾ ಚೆನ್ನಾಗಿದೆ 🙂
ಉತ್ತಮ ಬರಹ. ವಾಲ್ಮೀಕಿ ಮಹರ್ಷಿಗಳ ಬಗ್ಗೆ ಇಷ್ಟೊಂದು ಮಾಹಿತಿಗಳನ್ನು ಎಲ್ಲೂ ಓದಿರಲಿಲ್ಲ. ಧನ್ಯವಾದಗಳು.
ಮತ್ತಷ್ಟು ವಿಶೇಷ ಮಾಹಿತಿ ಕೊಡಿ
ಧನ್ಯವಾದಗಳು
ನಾನು ಅನೇಕ ಸಲ ವಾಲ್ಮೀಕಿ ಜಯಂತಿ ದಿನದಂದು ವಾಲ್ಮೀಕಿ ಅವರ ಬಗ್ಗೆ ಸವಿವರವಾಗಿ ಸಭಿಕರಿಗೆ ಸರಳವಾಗಿ ಅರ್ಥವಾಗುವಂತೆ ಮಾತಾಡಿದ್ದೇನೆ. ಅದರೆ ವಾಲ್ಮೀಕಿ ಅವರನ್ನು ಕುರಿತಂತೆ ನಾನು ಓದಿದ ಈ ವರೆಗಿನ ವಿವರಗಳಲಿ ಇಷ್ಟೊಂದು ಸರಳ ಮತ್ತು ಸುಲಲಿತವಾಗಿರುವ ಲೇಖನವನ್ನು ಗಮನಿಸಿರಲಿಲ್ಲ. ಓದಿ ತುಂಬಾ ಖುಷಿಯಾಯಿತು.ಲೇಖಕಿ ನಯನಾ ಯು ಭಿಡೆ ನಿಮಗೆ ಆತ್ಮೀಯ ಅಭಿನಂದನೆಗಳು. (ಡಾ. ಸಂಪತ್ ಬೆಟ್ಟಗೆರೆ, ಲೇಖಕ, ಮೂಡಿಗೆರೆ)
ವಾಲ್ಮೀಕಿ ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅವರು ರಚಿಸಿದ ರಾಮಾಯಣ ಕೃತಿಯನ್ನು ವಿಶೇಷವಾಗಿ ಮೊದಲು ಓದಿಕೊಳ್ಳಬೇಕು. ಇಲ್ಲದಿದ್ದರೆ ಅವರ ಕುರಿತ ನಮ್ಮ ಚಿಂತನೆಗಳು ಯಾವತ್ತೂ ಅಪೂರ್ಣವೇ ಆಗಿರುತ್ತವೆ. ಈ ಕೊರತೆಯನ್ನು ಮೀರುವ ಪ್ರಯತ್ನವಾಗಿಯೂ ನಯನಾ ಯು ಭಿಡೆ ಅವರ ಈ ಲೇಖನ ಗಮನ ಸೆಳೆಯುತ್ತದೆ. (ಡಾ. ಸಂಪತ್ ಬೆಟ್ಟಗೆರೆ, ಲೇಖಕ, ಮೂಡಿಗೆರೆ)