(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ನಿಮಗಂತೂ ಚಿನ್ನದಂತಹ ಮಕ್ಕಳು ಹುಟ್ಟಿದ್ದಾರೆ. ಒಬ್ಬರಿಗಿಂತ ಒಬ್ಬರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನೀವು ಅರಾಮವಾಗಿರಿ” ಎಂದಳು ಭಾರ್ಗವಿ.
“ಹ್ಹ..ಹ್ಹಾ ಚಿನ್ನದಂತಹ ಮಕ್ಕಳು, ಸೂಜಿ ಚಿನ್ನದ್ದೆಂದು ಕಣ್ಣು ಚುಚ್ಚಿಕೊಳ್ಳಕ್ಕಾಗುತ್ಯೇ. ಹೆಂಗೆ ಮಾತಾಡ್ತಾರೆ ಗೊತ್ತೇನು. ಬಿಡು, ತೀರಾ ಕತ್ತಲಾದಮೇಲೆ ಮನೆಗೆ ಹೋಗಬೇಡಿ. ತಥ್ತೇರಿ ನಾನೊಬ್ಬಳು ನೀವೆಲ್ಲರೂ ಉದ್ಯೋಗಸ್ಥ ಮಹಿಳೆಯರಲ್ಲವೇ. ಹೊತ್ತಿನ ಬಗ್ಗೆ ನಾನು ಹೇಳುತ್ತಿದ್ದೀನಲ್ಲ ನಾನೊಬ್ಬ ಪೆದ್ದಮ್ಮ. ಇಷ್ಟ ಬಂದಾಗ ಹೋಗು. ನನಗೀಗ ಕಣ್ಣಿಗೆ ನಿದ್ರೆ ಹತ್ತಿದಂಗೆ ಆಗುತ್ತಿದೆ ಮಲಗ್ತೀನಿ. ಹಾಂ ಹಾಗಂತ ಎಲ್ಲರೂ ಹೊರಗಡೆ ಪಟ್ಟಾಂಗ ಹೊಡೀತಾ ಕುಳಿತುಬಿಟ್ಟೀರಾ. ಇಲ್ಲಿ ನನ್ನೊಬ್ಬಳನ್ನೇ ಒಂಟಿಯಾಗಿ ಪಿಶಾಚಿ ತರ ಬಿಟ್ಟು.” ಎಂದು ಹೇಳಿ ಮಗ್ಗುಲಿಗೆ ಹೊರಳಿ ಮಲಗಿದರು.
ಇನ್ನು ಇಲ್ಲಿಂದ ಹೊರಡುವುದೇ ಸೂಕ್ತವೆಂದು ಅರಿತು ಭಾರ್ಗವಿ ರಜನಿಗೆ ಸಂಜ್ಞೆ ಮೂಲಕ ಬೈ ಹೇಳಿ ಸುಮನಾಳ ಕೈ ಹಿಡಿದು ಸದ್ದಾಗದಂತೆ ಬಾಗಿಲು ಮುಚ್ಚಿ ಹೊರಗೆ ಅಡಿಯಿಟ್ಟಳು. ನರ್ಸಿಂಗ್ ಹೋಂನ ಆವರಣದಿಂದ ಹೊರಬಂದ ನಂತರ “ಬೇಸರ ಮಾಡಿಕೊಳ್ಳಬೇಡವೇ ಭಾರ್ಗವಿ” ಎಂದಳು ಸುಮನಾ.
“ಇದೆಲ್ಲ ಗೊತ್ತಿರುವುದೇ ತಾನೇ ಸುಮನಾ, ಹೊಸದೇನಿದೆ.” ಎಂದು ಹೇಳಿ ತನ್ನ ಫಾಸ್ಕ್ ಇದ್ದ ಚೀಲವನ್ನು ಅವಳಿಂದ ತೆಗೆದುಕೊಂಡು “ಏನಾದರೂ ಬೇಕೆನಿಸಿದರೆ ಫೋನ್ ಮಾಡು. ಈಗ ಮನೆಗೆ ಹೋಗಿ ರೆಸ್ಟ್ ತೊಗೋ.” ಎಂದು ಹೊರಗೆ ನಿಂತಿದ್ದ ಒಂದು ರಿಕ್ಷಾದೆಡೆಗೆ ಹೆಜ್ಜೆ ಹಾಕಿದಳು ಭಾರ್ಗವಿ. ವಿಧಿಯಿಲ್ಲದೆ ಸುಮನಾ ಸಹ ಮರುಮಾತಾಡದೆ ಗೆಳತಿಯ ಕಡೆ ಕೈಬೀಸಿ ತಾನೊಂದು ರಿಕ್ಷಾ ಹಿಡಿದು ತನ್ನ ಮನೆಯ ದಿಕ್ಕಿಗೆ ನಡೆದಳು.
ರಿಕ್ಷಾದೊಳಗೆ ಕುಳಿತಿದ್ದ ಭಾರ್ಗವಿಯ ಮನಸ್ಸು ರೋಸಿ ಹೋದಂತಾಗಿತ್ತು. ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ಬಲವಂತವಾಗಿ ಅದುಮಿಟ್ಟುಕೊಂಡೇ ಮನೆ ತಲುಪಿದಳು. ರಿಕ್ಷಾ ನಿಂತಕೂಡಲೇ ಕೆಳಗಿಳಿದು ಗೂಗಲ್ ಪೇ ಮಾಡೋಣವೆಂದು ತನ್ನ ಮೊಬೈಲ್‌ಗಾಗಿ ತಡಕಾಡಿದಳು. ಆದರೆ ಹೊರಡುವ ಮೊದಲು ಮನೆಯಲ್ಲೇ ಅದನ್ನು ಚಾರ್ಜಿಗೆ ಹಾಕಿದ್ದು ನೆನಪಾಗಿ ಪರ್ಸಿನಿಂದ ಕ್ಯಾಷ್ ಕೊಟ್ಟು ಗೇಟಿನ ಹತ್ತಿರ ಬಂದಳು.
“ನಿನಗೇನು ಹೊತ್ತುಗೊತ್ತಿನ ಪರಿವೆಯೇ ಇಲ್ಲವೇನು? ಎಲ್ಲಿಗೆ ಹೋಗಿತ್ತು ಸವಾರಿ? ಫೋನ್ ಮಾಡಿದರೂ ಉತ್ತರಿಸಲಾರದಷ್ಟು ಸೊಕ್ಕೇ?” ಎಂಬ ಅಬ್ಬರದ ದನಿಕೇಳಿ ತಲೆಯೆತ್ತಿದಳು ಭಾರ್ಗವಿ. ಎದುರಿಗೆ ಪತಿ ಮಹಾಶಯ ಸಿದ್ಧಾರ್ಥ ನಿಂತಿದ್ದ.
ಒಳಗೆ ದಾವಾಗ್ನಿ ಉರಿಯುತ್ತಿದ್ದರೂ ತೋರ್ಪಡಿಸಿಕೊಳ್ಳದೆ “ಫೋನ್ ಚಾರ್ಜಿಗೆ ಹಾಕಿದ್ದೆ. ಮನೆಯಲ್ಲಿಯೇ ಬಿಟ್ಟು ಮರೆತು ಹೋಗಿದ್ದೆ. ಸುಮನಾಳ ತಾಯಿ ಆಸ್ಪತ್ರೆಯಲ್ಲಿದ್ದಾರೆ . ಅವರನ್ನು ನೋಡಲು ಹೋಗಿದ್ದೆ” ಎಂದು ಆದಷ್ಟು ಶಾಂತ ಸ್ವರದಲ್ಲಿ ಹೇಳಿ ಮನೆಯ ಬೀಗ ತೆರೆದಳು.
“ಹೂಂ ಏನೊ ಒಂದು ಕುಂಟು ನೆಪ. ಇತ್ತೀಚೆಗೆ ನೀನು ತುಂಬ ಬದಲಾಗಿಬಿಟ್ಟೆ ಭಾರ್ಗವಿ” ಎಂದು ಹೇಳುತ್ತ ಒಳಗೆ ಬಂದು ಬಾಗಿಲನ್ನು ಮುಚ್ಚಿದ ಸಿದ್ಧಾರ್ಥ.
ಬದಲಾಗಿದ್ದೇನಂತೆ ! ಯಾರೋ ಹಾಗೇನಾದರೂ ಹೇಳಿದರೆ ಬೆಳಗಿನವರೆಗೂ ವಿಷಯ ಎಳೆದೆಳೆದು ಹೋಗುತ್ತದೆಂದರಿತಿದ್ದ ಭಾರ್ಗವಿ ತುಟಿ ಎರಡು ಮಾಡದೆ ಬಟ್ಟೆ ಬದಲಾಯಿಸಿ ಕೈಕಾಲು ತೊಳೆದುಕೊಂಡು ದೇವರಕೋಣೆಯ ದೀಪ ಹಚ್ಚಿದಳು.
“ನಿಮಗೆ ಕಾಫಿ, ಟೀ ಏನಾದರು ಬೇಕೇ?” ಎಂದು ಕೇಳಿದಳು.
“ಅವೆಲ್ಲ ಏನೂ ಬೇಡ, ಮಧ್ಯಾನ್ಹದ್ದೇನಾದರೂ ಮಿಕ್ಕಿದ್ದರೆ ಅಥವಾ ನಿನ್ನ ತಂಗಳು ಪೆಟ್ಟಿಗೆಯಲ್ಲಿದ್ದರೆ ಬಿಸಿಮಾಡಿ ಕೊಡು ಹೊಟ್ಟೆ ಹಸಿಯುತ್ತಿದೆ.”ಎಂದು ಹೇಳುತ್ತ ಅಲ್ಲಿಯೇ ಗೂಟದಲ್ಲಿದ್ದ ಟವೆಲ್ ತೆಗೆದುಕೊಂಡು ಬಾತ್‌ರೂಮಿನತ್ತ ನಡೆದ ಸಿದ್ಧಾರ್ಥ.
ದೇವರೇ..ಮಾಡಿದ್ದಂತೂ ಗೆಳತಿಯ ಪಾಲಾಯತು. ಒಂದು ಚೂರೂ ಇಲ್ಲ. ಫ್ರಿಜ್‌ನಲ್ಲಿ ಏನಾದರೂ ಸಿಕ್ಕೀತೇ ಎಂದು ಬಾಗಿಲು ತೆರೆದಳು. ದೋಸೆಹಿಟ್ಟಿನ ಡಬ್ಬಿ ಕಾಣಿಸಿತು. ನಿಧಿ ದೊರಕಿದಂತಾಯಿತು. ಮುಂದಿನ ಡಬ್ಬಿಯೊಂದರಲ್ಲಿ ಟೊಮ್ಯಾಟೋ ಚಟ್ಣಿಯಿದ್ದದ್ದು ಕಾಣಿಸಿತು. ವಾವ್ ಪರವಾಗಿಲ್ಲ ಅಂದುಕೊಂಡು ಭಾರ್ಗವಿ ಬೇಗಬೇಗ ಅವನ್ನೆಲ್ಲ ತೆಗೆದಿಟ್ಟುಕೊಂಡು ಹೊರಗಿಟ್ಟಳು. ಗ್ಯಾಸ್ ಹೊತ್ತಿಸಿ ದೋಸೆಕಾವಲಿಯನ್ನಿಟ್ಟು ಜಗ್ಗಿನಿಂದ ನೀರು ತುಂಬಿಸಿ ಟೇಬಲ್ಲಿನ ಮೇಲಿಟ್ಟಳು. ಹೆಂಚು ಕಾಯ್ದ ಮೇಲೆ ದೋಸೆ ಹಾಕಿ ತಟ್ಟೆಯನ್ನಿಟ್ಟು ಬಡಿಸಿದಳು. ಒಂದರ ಮೇಲೊಂದರಂತೆ ನಾಲ್ಕಾರು ದೋಸೆಗಳನ್ನು ಹೊಟ್ಟೆಗಿಳಿಸಿದ ಪತಿರಾಯ ತೃಪ್ತಿಯಿಂದ ನೀರುಕುಡಿದು ತೇಗಿದ. ತಟ್ಟೆಯಲ್ಲೇ ಕೈತೊಳೆದು ಗಟಗಟ ಮತ್ತಷ್ಟು ನೀರು ಕುಡಿದನು. ಗಂಡನನ್ನು ನೋಡಿ ನಾನು ಬದಲಾಗಿದ್ದೀನಂತೆ, ಮೊದಲೆಲ್ಲ ಊಟ ತಿಂಡಿ ಮಾಡುವಾಗ ಜೊತೆಯಲ್ಲಿಯೇ ಕುಳಿತು ತಿನ್ನುತ್ತಿರಲಿಲ್ಲವೇ. ಆ ಮಾತುಗಳು, ಕಾಳಜಿ ಎಲ್ಲಿ ಹೋಯಿತು. ನಿನಗೆ ಇನ್ನೂ ಉಳಿದಿದೆಯಾ ಇಲ್ಲವಾ ಎಂಬ ಮಾತೇ ಇಲ್ಲದಂತೆ ತನ್ನ ಪಾಡಿಗೆ ತಾನು ತಿಂದು ಹೊರಟರಲ್ಲಾ.
ಹೂಂ ಎಷ್ಟು ದಿನಗಳ ಠಿಕಾಣಿಯೋ. ಬೆಳಗ್ಗೆ ಮಗಳು ನನಗೆ ಫೋನ್ ಮಾಡಿದಂತೆ ಅಪ್ಪನಿಗೂ ಮಾಡಿರಬೇಕು. ಅದಕ್ಕೇ ಇಲ್ಲಿಗೆ ಸವಾರಿ ಚಿತ್ತೈಸಿದೆ. ಮನವಿಲ್ಲದಿದ್ದರೂ ಮೇಲ್ನೋಟಕ್ಕಾದರೂ ನಾಟಕ ಮಾಡಲೇಬೇಕಲ್ಲ ಎಂದುಕೊಂಡು ಮಿಕ್ಕ ಕೆಲಸಗಳನ್ನು ಮುಗಿಸಿ ಅಲ್ಲಿಯೇ ಇದ್ದ ಬಾಳೇಹಣ್ಣನ್ನು ತಿಂದು ನೀರು ಕುಡಿದು ಹಿಂದಿನ ಬಾಗಿಲು ಭದ್ರಪಡಿಸಿ ಅಡುಗೆ ಮನೆಯಿಂದ ಹೊರಬಂದಳು. ಹಾಲಿನಲ್ಲಿ ಅತ್ತಿಂದಿತ್ತ ಅಡ್ಡಾಡುತ್ತಿದ್ದ ಗಂಡನನ್ನು ನೋಡಿದಳು. ಏನಾದರೂ ಹೇಳುತ್ತಾರೇನೊ ಎಂದು ಸ್ವಲ್ಪ ಹೊತ್ತು ಕಾಯ್ದಳು. ಊಹುಂ..ಅವರ ಕಿವಿಗಿಟ್ಟುಕೊಂಡಿದ್ದ ಫೋನನ್ನು ಕೆಳಗಿಳಿಸಲೇ ಇಲ್ಲ.
ಯಾರೊಡನೆಯೋ ಸಂಭಾಷಣೆ ಅವ್ಯಾಹತವಾಗಿ ಸಾಗಿತ್ತು. ಮರು ಮಾತನಾಡದೆ ರೂಮಿಗೆ ಬಂದು ಹಾಸಿಗೆ ಸಜ್ಜುಗೊಳಿಸಲು ಸಿದ್ಧವಾದವಳಿಗೆ ಕರೆದಂತಾಯಿತು. ಮಾಡುತ್ತಿದ್ದ ಕೆಲಸವನ್ನು ಅಲ್ಲೇ ಬಿಟ್ಟು ಹೊರಬಂದಳು. “ನೋಡು ಊರಿನಿಂದ ಫೋನ್ ಬಂದಿತ್ತು. ನನ್ನ ಗೆಳೆಯ ರಂಗು ಬಂದಿದ್ದಾನಂತೆ. ಏನೊ ಬಹಳ ಸಂಕಷ್ಟಕ್ಕೆ ಸಿಲುಕಿರುವಂತೆ ಅವನ ಮಾತಿನಿಂದ ಗೊತ್ತಾಗ್ತಿದೆ. ಫೋನಿನಲ್ಲಿ ಹೇಳಲಾಗದೆ ಮುದ್ದಾಂ ಮಾತನಾಡಲು ಬಂದಿದ್ದಾನೆ. ತಕ್ಷಣ ಹೊರಟು ಬಾ ಅಂದ. ನಾನೀಗಲೇ ಹೊರಡಬೇಕು.” ಎಂದು ಹೇಳಿ ಬಟ್ಟೆ ಬದಲಾಯಿಸಿಕೊಳ್ಳಲು ರೂಮಿಗೆ ಹೋದ.
ಭಾರ್ಗವಿ ತಲೆಎತ್ತಿ ಗಡಿಯಾರದತ್ತ ನೋಡಿದಳು. ಒಂಬತ್ತೂವರೆ. ಇಷ್ಟು ಹೊತ್ತಿನಲ್ಲಿ ಹೇಗೆ? ಗಾಡಿಯನ್ನೂ ತಂದ ಹಾಗಿಲ್ಲ. ಬೆಳಗ್ಗೆ ಬೇಗನೆ ಎದ್ದು ಹೋದರಾಗದೇ ಎಂಬ ಮಾತು ನಾಲಿಗೆ ತುದಿವರೆಗೆ ಬಂದಿತ್ತು. ಕಷ್ಟಪಟ್ಟು ತಡೆದುಕೊಂಡಳು. ಪ್ರಯಾಣ ಹೊರಟಾಗ ಅಡ್ಡ ಮಾತನಾಡುವ ಬುದ್ಧಿ ನನಗೆ ಹಿಡಿಸುವುದಿಲ್ಲ ಎಂದು ಆತ ಹೇಳುತ್ತಿದ್ದುದು ನೆನಪಿಗೆ ಬಂದು ಮರು ಮಾತನಾಡಲಿಲ್ಲ.
ಸಿದ್ಧವಾಗಿ ಬಂದ ಸಿದ್ಧಾರ್ಥ “ಭಾರ್ಗವಿ ಹಣವೇನಾದರೂ ಇದೆಯಾ? ಇದ್ದರೆ ಕೊಟ್ಟಿರು ಕೊಡುತ್ತೇನೆ” ಎಂದ.
ಹೂಂ ಕೊಡುತ್ತಾರಂತೆ, ಎಂದಾದರೂ ಹಿಂತಿರುಗಿ ಕೊಟ್ಟದ್ದಿದೆಯಾ. ‘ಕೊಟ್ಟೋನು ಕೋಡಂಗಿ ಇಸುಕೊಂಡೋನು ಈರಭದ್ರ’ ಎಂದು ತುಟಿಯ ಮೇಲೆ ವ್ಯಂಗ್ಯ ನಗೆಯೊಂದು ಸುಳಿದುಹೋಯಿತು. ಏನು ಕೇಳಿಸಲಿಲ್ಲವೇ ಎಂಬ ಮಾತಿಗೆ “ಎಷ್ಟು ಬೇಕಾಗಿತ್ತು? ಮನೆಯಲ್ಲಿ ಹೆಚ್ಚು ದುಡ್ಡಿಟ್ಟುಕೊಂಡಿರುವುದಿಲ್ಲ ಅದಕ್ಕೇ..” ಹೇಳಿದಳು ಭಾರ್ಗವಿ.
“ಓಹೋ ಬ್ಯಾಂಕಿನಲ್ಲಿಟ್ಟರೆ ಮರಿ ಹಾಕುತ್ತಲ್ಲವಾ? ಮರೆತೇಬಿಟ್ಟಿದ್ದೆ. ಅರ‍್ಯಾವ ಸೀಮೆ ಬಡ್ಡಿ ಕೊಡ್ತಾರೋ. ಬೇರೆಕಡೆ ಇನ್‌ವೆಸ್ಟ್ ಮಾಡ್ತೀನಿ ಅಂದರೆ ಪಿಸನಾರಿ ಕೈ ಬಿಚ್ಚೋದೇ ಇಲ್ಲ. ಎಷ್ಟಿದೆಯೋ ಅದನ್ನೇ ಕೊಡು. ಅವನ ಮಾತಿನ ವರಸೆ ನೋಡಿದರೆ ಆರ್ಥಿಕವಾಗಿ ತೊದರೆಯಲ್ಲಿದ್ದಾನೆ ಅನ್ನಿಸಿತು. ಸಹಾಯಕ್ಕಾಗಿ ಬಂದಿದ್ದಾನೆ. ಹಿಂತಿರುಗಿ ಕೊಡ್ತಾನೆ” ಎಂದ ಸಿದ್ಧಾರ್ಥ.
ಬೇರೆ ಕಡೆ ಇನ್‌ವೆಸ್ಟ್ ಮಾಡ್ತಾನಂತೆ ಈ ಪುಣ್ಯಾತ್ಮ. ಅಲ್ಲಿ ಕೊಟ್ಟು ಬಡ್ಡಿ ಹೋಗಲಿ ಅಸಲೂ ಕೈಗತ್ತಲಿಲ್ಲ. ಎನೋ ಮಹಾ ಬುದ್ಧಿವಂತರಂತೆ ಪೋಸು ಕೊಡುತ್ತಾರೆ ಅಂದುಕೊಂಡು ರೂಮಿನೊಳಕ್ಕೆ ಹೋಗಿ ವಾರ್ಡ್ರೋಬಿನಲ್ಲಿದ್ದ ಪರ್ಸ್ ತೆಗೆದು ನೋಡಿದಳು. ಬೆಳಗ್ಗೆ ಕೆಲಸದವಳ ಮಗಳಿಗೆ ಫೀಸು ಕೊಡಲೆಂದು ಡ್ರಾ ಮಾಡಿಕೊಂಡು ಬರುವಾಗ ಒಂದೈದು ಸಾವಿರ ಹೆಚ್ಚಿಗೆಯೇ ತಂದಿದ್ದಳು ಅದಿತ್ತು. ಪೂರ್ತಿಯಾಗಿ ಅಷ್ಟನ್ನು ಕೊಟ್ಟರೆ ತನಗೆ ಅಗತ್ಯವಾದಾಗ ಮತ್ತೆ ಬ್ಯಾಂಕಿಗೆ ಹೋಗಬೇಕು. ಜೊತೆಗೆ ಯಾರಿಗೋ ಕೊಡಬೇಕೆಂದು ಅವರ ಹೆಸರೇಳಿ ತೆಗೆದುಕೊಂಡು ಹೋಗಿ ದರ್ಬಾರು ಮಾಡುತ್ತ ಉಢಾಯಿಸಿದ ಪ್ರಕರಣಗಳು ಕಣ್ಮುಂದೆ ಸಾಕಷ್ಟು ಬಂದವು. ಬೈದರೂ ಸರಿಯೆಂದು ಒಂದೆರಡು ಸಾವಿರವನ್ನು ತಂದು ಅವನ ಕೈಗಿತ್ತಳು. ಸಿದ್ಧಾರ್ಥ ಇದ್ಯಾವ ಮೂಲೆಗೆ ಎನ್ನುತ್ತಾ ಅದನ್ನು ಜೇಬಿಗಿಳಿಸಿ ಚಪ್ಪಲಿ ಮೆಟ್ಟಿ ಹೊರನಡೆದ.
ಅವನನ್ನು ಕಳುಹಿಸಿ ಗೇಟಿಗೆ ಬೀಗಹಾಕಿ ಬಾಗಿಲು ಭದ್ರಪಡಿಸಿದ ಭಾರ್ಗವಿ ಈ ಸಂಪತ್ತಿಗೆ ಏಕಾದರೂ ಬರುತ್ತಾರೋ ಈ ಮಹಾರಾಯ ಎಂದುಕೊಂಡು ಸೊಫಾದ ಮೇಲೆ ದಸಕ್ಕೆಂದು ಕುಳಿತಳು. ಮತ್ತೆ ಹಳೆಯ ನೆನಪುಗಳು ಮರುಕಳಿಸಿದವು.
ಎಂ.ಎ., ಪದವಿ ಗಳಿಸಿದ ಮೇಲೆ ಮದುವೆ ಎಂದು ತೀರ್ಮಾನವಾದ ಮೇಲೆ ನಿರಾಳವಾದ ಭಾರ್ಗವಿ ಗಂಗೋತ್ರಿಗೆ ಹೋಗಿ ಅಪ್ಲಿಕೇಷನ್ ತರಬೇಕೆನ್ನುವಷ್ಟರಲ್ಲಿ ಸಿದ್ಧಾರ್ಥನೇ ಅದನ್ನು ತಂದು ಕೈಗಿಟ್ಟ. ಎದ್ದು ಕುಣಿದಾಡುವಂತಾಯಿತು. ಆ ಸಂತೋಷವನ್ನು ಹತ್ತಿಕ್ಕಲಾಗದೆ ಅತ್ತಿತ್ತ ಕಣ್ಣುಹಾಯಿಸಿ ಯಾರೂ ಇಲ್ಲವೆಂದು ಖಚಿತವಾದಕೂಡಲೇ ಸಿದ್ಧಾರ್ಥನನ್ನಪ್ಪಿ ಕೆನ್ನೆಗೆ ಮುತ್ತೊಂದನ್ನು ಕೊಟ್ಟು ಒಳಕ್ಕೋಡಿದಳು. ಅನಿರೀಕ್ಷಿತವಾದ ಭಾರ್ಗವಿಯ ಈ ವರ್ತನೆಯಿಂದ ತಬ್ಬಿಬ್ಬಾದ ಸಿದ್ಧಾರ್ಥ ನಸುನಗುತ್ತಲೇ ಅಲ್ಲಿಂದ ಜಾಗ ಖಾಲಿಮಾಡಿದ.
ಮುಂದಿನ ಎರಡು ವರ್ಷ ಭಾರ್ಗವಿಗೆ ವಿದ್ಯಾಭ್ಯಾಸದಲ್ಲಿ ಹೇಗೆ ಕಳೆಯಿತೋ ಅರಿವಾಗಲಿಲ್ಲ. ಅಷ್ಟು ಚೆನ್ನಾಗಿ ಸಿದ್ಧಾರ್ಥ ಅವಳಿಗೆ ನೆರವಾಗಿದ್ದ. ಮೊದಲ ವರ್ಷ ಮೈಸೂರಿನಿಂದ ಓಡಾಡುತ್ತಲೇ ಅಭ್ಯಾಸ ಮುಗಿಸಿದ್ದ ಭಾರ್ಗವಿ ಎರಡನೆಯ ವರ್ಷದ ಅಭ್ಯಾಸಕ್ಕೆ ಹಾಸ್ಟೆಲಿನ ಸೌಲಭ್ಯ ಒದಗುವಂತೆ ಮಾಡಿ ಆಕೆಯು ಯಾವುದೇ ಜಂಝಾಟವಿಲ್ಲದೆ ಎಂ.ಎ.,ವಿದ್ಯಾಭ್ಯಾಸ ಪೂರ್ತಿಯಾಗುವಂತೆ ನೋಡಿಕೊಂಡಿದ್ದ. ಭಾರ್ಗವಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದು ಎರಡೂ ಮನೆಯವರಿಗೆಲ್ಲರಿಗೂ ಸಂತೋಷದ ವಿಷಯವಾಗಿತ್ತು.
ಎಂ.ಎ. ಮುಗಿದ ಕೂಡಲೇ ಮದುವೆ ಎಂಬ ತೀರ್ಮಾನಕ್ಕೆ ಬದ್ಧರಾಗಿದ್ದ ಎರಡೂ ಕುಟುಂಬದವರು ತಂತಮ್ಮ ಮಕ್ಕಳ ಮುಂದೆ ಪ್ರಸ್ತಾಪ ಇಟ್ಟರು. ಭಾರ್ಗವಿಗೆ ಮುಂದಕ್ಕೆ ಮತ್ತಷ್ಟು ಓದಿ ಕೆಲಸ ಮಾಡಬೇಕೆಂಬ ಮಹದಾಸೆಯಿದ್ದರೂ ಸಿದ್ಧಾರ್ಥನನ್ನು ಇನ್ನು ಕಾಯಿಸುವುದು, ಅದಕ್ಕಾಗಿ ಎರಡೂ ಮನೆಯವರಿಂದ ಮಾತುಗಳನ್ನು ಕೇಳುವುದು ಉಚಿತವಲ್ಲ ಎಂದರಿತು ತಾಳಿಗೆ ಕೊರಳೊಡ್ಡಿದಳು.
ಊರಿನಲ್ಲಿದ್ದುಕೊಂಡೇ ಕೆಲಸಕ್ಕಾಗಿ ಅರ್ಜಿಗಳನ್ನು ಹಾಕುತ್ತಿದ್ದಳು. ಒಂದು ಖಾಸಗಿ ಹೈಸ್ಕೂಲಿನಲ್ಲಿ ಕೆಲಸ ಸಿಕ್ಕಿತು. ಈ ವಿಷಯವನ್ನು ಮೊದಲು ಸಿದ್ಧಾರ್ಥನಿಗೆ ತಿಳಿಸಿ ಅವನ ಅಭಿಪ್ರಾಯವನ್ನು ಕೋರಿದಳು. “ಇಷ್ಟೊಂದು ಓದಿ ಯಾವುದೋ ಖಾಸಗಿ ಸ್ಕೂಲಿನಲ್ಲಿ ಟೀಚರಾ? ಅವರೆಷ್ಟು ಸಂಬಳ ಕೊಟ್ಟಾರು? ಅದು ನಿನ್ನ ಓಡಾಟಕ್ಕೇ ಸಾಲುವುದಿಲ್ಲ. ಸರ್ಕಾರಿ ಕೆಲಸಕ್ಕೆ ಅಪ್ಲೈ ಮಾಡಿದ್ದೀಯಲ್ಲಾ ಅದಕ್ಕೆ ಕಾಯೋಣ ಬಿಡು” ಎಂದನು.
ಸಿದ್ಧಾರ್ಥನ ಮಾತುಗಳಲ್ಲೂ ಸತ್ಯಾಂಶವಿದ್ದರೂ ತನ್ನ ಮುಂದಿನ ಅಭ್ಯಾಸಕ್ಕೆ ಅಡಿಪಾಯ ಹಾಕಿಕೊಳ್ಳಬೇಕಾದರೆ ಮೈಸೂರಿಗೆ ಹೋಗಲೇಬೇಕೆಂಬ ನಿಲುವಿಗೆ ಬದ್ಧಳಾಗಿದ್ದಳು ಭಾರ್ಗವಿ. ಊರಿನಲ್ಲೇ ಇದ್ದರೆ ವರ್ತಮಾನದ ಆಗುಹೋಗುಗಳಾಗಲೀ, ಶೈಕ್ಷಣಿಕ ಕ್ಷೇತ್ರದ ವಿದ್ಯಮಾನಗಳಾಗಲೀ ತಿಳಿಯುವುದು ಕಷ್ಟ. ಈ ಅರಿವಿದ್ದುದರಿಂದ ತುಂಬ ಯೋಚಿಸಿ ಅಳೆದೂ ಸುರಿದೂ ತನ್ನ ಮನದಿಂಗಿತವನ್ನು ಸಿದ್ಧಾರ್ಥನಿಗೆ ಹೇಳಿಯೇ ಬಿಟ್ಟಳು.
ಭಾರ್ಗವಿಯ ಮಾತುಗಳನ್ನು ಕೇಳಿದ ಸಿದ್ಧಾರ್ಥ “ನೀನು ಹೇಳಿದ್ದು ನನಗರ್ಥವಾಗುತ್ತದೆ. ಆದರೆ ಮೈಸೂರಿನಲ್ಲಿ ಮನೆ ಮಾಡುವುದು, ಅಲ್ಲಿನ ಖರ್ಚುವೆಚ್ಚಗಳನ್ನೆಲ್ಲ ನಿನಗೆ ಬರುವ ಸಂಬಳದಲ್ಲಿ ನಿಭಾಯಿಸಲು ಸಾಧ್ಯವೇ? ಮೊದಲೇ ಅದೊಂದು ಖಾಸಗಿ ಶಾಲೆ, ಅವರು ಹೇಳುವುದು ಒಂದು ಕೊಡುವುದು ಬೇರೇನೇ. ನಮ್ಮದೋ ರೈತಾಪಿ ಕುಟುಂಬ. ನಮಗೆ ನಿಗದಿತ ಆದಾಯವಿರುವುದಿಲ್ಲ. ಈ ಅಂಶ ನಿನಗೂ ಗೊತ್ತು. ಎಲ್ಲಕ್ಕೂ ಹೆಚ್ಚಾಗಿ ಮನೆಯಲ್ಲಿ ಹಿರಿಯರು ಏನು ಹೇಳುತ್ತಾರೋ. ಅವರಿಗೆದುರಾಗಿ ನೀನು ನಿಂತು ಇಷ್ಟನ್ನು ನಿಭಾಯಿಸಿದ್ದಾಯಿತು. ಇನ್ನು ಮುಂದಕ್ಕೂ ..” ಎಂದು ರಾಗ ಎಳೆದ.
“ಛೇ..ಹಾಗೇನೂ ಆಗಲಾರದು, ನಾನು ಕೆಲಸದಲ್ಲಿ ನನಗೆ ಬರುವ ಸಂಬಳದ ಜೊತೆಗೆ ಮನೆಪಾಠ ಹೇಳುತ್ತೇನೆ. ಹೇಗೋ ಅಡ್ಜಸ್ಟ್ ಮಾಡಬಹುದು. ರಜೆಯಿದ್ದಾಗ ಊರಿಗೆ ಬಂದು ಹೋಗುತ್ತಿರುತ್ತೇನೆ. ಪ್ಲೀಸ್ ಒಪ್ಪಿಕೊಳ್ಳಿ” ಎಂದು ಗೋಗರೆದಳು ಭಾರ್ಗವಿ. “ಇಷ್ಟೇ ಓದಿಸಿದ್ದೀರಿ ಇನ್ನು ಸ್ವಲ್ಪ ಮೇಲಕ್ಕೂ ತಳ್ಳಿ, ಅದರಿಂದ ನನಗೆ ಒಳ್ಳೆಯ ಹುದ್ದೆ ಸಿಗಬಹುದು” ಎಂಬ ಆಸೆಯ ಎಳೆಯನ್ನೂ ಸೇರಿಸಿದಳು.
(ಮುಂದುವರಿಯುವುದು)

-ಬಿ.ಆರ್.ನಾಗರತ್ನ, ಮೈಸೂರು
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=45571

