ಲಹರಿ

ಸಂಬೋಧನೆಯ ಹೊಸ ಟ್ರೆಂಡ್

Share Button

ಇತ್ತೀಚಿಗೆ ಮನೆಯ ಪಕ್ಕದ ಅಂಗಡಿಗೆ ದಿನಸಿ ಖರೀದಿಸಲು ಹೋಗಿದ್ದೆ. ಅಲ್ಲಿ ಅಂಗಡಿಯಲ್ಲಿದ್ದ ಯುವಕನೊಬ್ಬ ಎಲ್ಲರನ್ನೂ ಸರ್, ಮೇಡಂ, ಅಕ್ಕ, ಅಣ್ಣ ಹೀಗೆ ಗೌರವ ಸೂಚಕವಾಗಿ ಸಂಬೋಧಿಸುತ್ತಿದ್ದ. ತುಂಬಾ ಖುಷಿಯಾಯಿತು. ಮೆಚ್ಚುಗೆ ಪಟ್ಟು, ನಾನು ಇದನ್ನು ಅವನ ಗಮನಕ್ಕೆ ತಂದಾಗ, “ಹೌದು ಮೇಡಂ, ಈಗ ಯಾರನ್ನೂ ಆಂಟಿ, ಅಂಕಲ್ ಎಂದು ಕರೆಯುವ ಹಾಗಿಲ್ಲ. ಆ ಕಾಲ ಹೋಯಿತು. ಒಮ್ಮೆ ನಮ್ಮ ಅಮ್ಮನ ಪ್ರಾಯದವರೊಬ್ಬರು ಇಲ್ಲಿಗೆ ಬಂದಿದ್ದರು. ನಾನು ಆತ್ಮೀಯತೆಯಿಂದ ಆಂಟಿ ಎಂದು ಅವರನ್ನು ಕರೆದಾಗ, ಬಹಳ ಮುಜುಗರ ಹಾಗೂ ಬೇಸರ ಪಟ್ಟುಕೊಂಡರು. ಅದೇ ಕೊನೆ. ಎಲ್ಲರನ್ನೂ ಸರ್, ಮೇಡಂ ಅಂತಾನೇ ಕರೆಯೋದು” ಅಂದ. ಹೌದು. ಇದು ಕಳೆದ ಹತ್ತಾರು ವರ್ಷಗಳಿಂದ ಉಂಟಾದ ಬದಲಾವಣೆ. ನನ್ನ ಮಗಳು ಚಿಕ್ಕವಳಿದ್ದಾಗ ಎಲ್ಲಾ ಯುವಕರನ್ನೂ, ಯುವತಿಯರನ್ನೂ ಅಂಕಲ್, ಆಂಟಿ ಎಂದೇ ಕರೆಯುತ್ತಿದ್ದಳು. ಆವಾಗ ನೆರೆಹೊರೆಯಲ್ಲಿ ನನಗಿಂತ ಒಂದೆರಡು ವರ್ಷ ಕಿರಿದಾಗಿರುವ ಹೆಣ್ಣುಮಕ್ಕಳು ನನ್ನನ್ನೂ ಆಂಟಿ ಎಂದೂ ಕರೆಯುತ್ತಿದ್ದರು. ನಮಗೇನೂ ಅನಿಸುತ್ತಿರಲಿಲ್ಲ. ಒಂದು ಕಾಲದಲ್ಲಿ ನಮಗಿಂತ ಕಿರಿಯರು ನಮ್ಮನ್ನು ಹೀಗೆ ಸಂಬೋಧಿಸುವುದು ಸಾಮಾನ್ಯವಾಗಿತ್ತು. ಹಿರಿಯರನ್ನು ಗೌರವದಿಂದ, ‘ಆಂಟಿ’, ‘ಅಂಕಲ್’ ಕರೆಯುವ ಸಂಪ್ರದಾಯವಿತ್ತು. ಆ ಪದಗಳಲ್ಲಿ ಗೌರವದ ಜೊತೆಗೆ, ಆತ್ಮೀಯತೆಯೂ ಇತ್ತು. ಆ ಸಂಬೋಧನೆ ಕೇಳಿದಾಗ ಯಾರೂ ತಮ್ಮ ವಯಸ್ಸಿನ ಬಗ್ಗೆ ಬೇಸರ ಪಡುತ್ತಿರಲಿಲ್ಲ. ಜೀವನದ ಸಹಜ ಹಂತವೆಂದು ತಿಳಿದು, ಅದನ್ನು ಒಪ್ಪಿಕೊಳ್ಳುತ್ತಿದ್ದರು.

ಆದರೆ, ಆಧುನಿಕ ಸಮಾಜದಲ್ಲಿ ಈ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಭಾಷೆ ಎನ್ನುವುದು ಸಮಾಜದ ಪ್ರತಿಬಿಂಬ. ಸಮಾಜದಲ್ಲಿ ಉಂಟಾಗುವ ಬದಲಾವಣೆಗಳು ಭಾಷೆಯಲ್ಲಿಯೂ ಕಾಣಿಸಿಕೊಳ್ಳುತ್ತವೆ. ಹಿಂದೆ, ಹಿರಿಯರನ್ನು ಸರ್, ಮ್ಯಾಡಂ, ಅಂಕಲ್, ಆಂಟಿ ಎಂದೆಲ್ಲಾ ಗೌರವದಿಂದ ಸಂಬೋಧಿಸುವ ಸಂಸ್ಕೃತಿ ಇತ್ತು. ಆದರೆ ಇಂದಿನ ಯುವಜನತೆ, ಬ್ರೋ, ಬಾಸ್, ಡ್ಯೂಡ್, ಸಿಸ್, ಬಡ್ಡೀ, ಮೇಟ್ ಮುಂತಾದ ಪದಗಳನ್ನು ಬಳಸುತ್ತಾರೆ. ಇವು ಸ್ನೇಹ, ಸಮಾನತೆ ಮತ್ತು ಆತ್ಮೀಯತೆಯನ್ನು ವ್ಯಕ್ತ ಪಡಿಸುವ ಪದಗಳಾಗಿ ಹೊರಹೊಮ್ಮುತ್ತಿವೆ. ಹೆಚ್ಚಿನ ಎಲ್ಲಾ ಯುವಕ, ಯುವತಿಯರು ದೈನಂದಿನ ವ್ಯವಹಾರಗಳಲ್ಲಿ, ಅಥವಾ ಮಳಿಗೆಗಳಿಗೆ ಭೇಟಿ ನೀಡಿದಾಗ ಅಲ್ಲಿಯ ಮಾಲಕರನ್ನು ಬಾಸ್, ಬ್ರೋ ಎಂದೇ ಸಂಬೋಧಿಸುತ್ತಾರೆ. ಮೊದಲೆಲ್ಲಾ, ಧಣಿ, ಅಣ್ಣಾ, ಅಮ್ಮಾ, ಸಾಹೇಬ್ರು ಹೀಗೆ ಕರೆಯುವ ವಾಡಿಕೆಯಿತ್ತು. ಹೀಗೆ ಆಧುನಿಕತೆಯೊಂದಿಗೆ, ಹಳೆಯ ಮೌಲ್ಯಗಳೂ ಬದಲಾಗುತ್ತಿರುತ್ತವೆ. ಒಂದು ಕಾಲದಲ್ಲಿ ಪ್ರೀತಿಯ ಸಂಕೇತವಾಗಿದ್ದ ಆಂಟಿ, ಅಂಕಲ್ ಪದಗಳು ಇಂದು ಅನೇಕರಿಗೆ ವಯಸ್ಸನ್ನು ನೆನಪು ಮಾಡಿಸುವ ಪದಗಳಾಗಿ ಗೋಚರಿಸುತ್ತಿವೆ.

ಇಂದಿನ ತಲೆಮಾರಿನ ಯುವಕ ಯುವತಿಯರು ಯಾಕೆ ಆಂಟಿ, ಅಂಕಲ್ ಪದ ಬಳಕೆಗೆ ಹಿಂದೇಟು ಹಾಕುತ್ತಾರೆ? ಏಕೆ? ಇದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮನೋವೈಜ್ಞಾನಿಕ ಕಾರಣಗಳನ್ನು ಗುರುತಿಸಬಹುದು. ಈ ಪೀಳೀಗೆಯ ಯುವ ಜನರಲ್ಲಿ ಯೌವನವನ್ನು ಕಾಪಾಡಿಕೊಳ್ಳುವ ಮನೋಭಾವ ಹೆಚ್ಚಾಗಿದ್ದು, ವಯಸ್ಸನ್ನು ನೆನಪಿಸುವ ಪಟ್ಟವನ್ನು ಒಪ್ಪಿಕೊಳ್ಳಲು ಇಷ್ಟ ಪಡುವುದಿಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವೂ ಇಂದಿನ ಪೀಳಿಗೆಯವರಲ್ಲಿ ಹೆಚ್ಚಾಗಿದ್ದು, ನೇರವಾಗಿ ಹೆಸರಿನಿಂದ ಕರೆಯುವುದು ಅಥವಾ ಬ್ರೋ, ಡ್ಯೂಡ್, ಸಿಸ್ ಮುಂತಾದ ಪದಗಳು ಸ್ನೇಹದ ಸಂಕೇತವಾಗಿ ಬಳಕೆಯಾಗುತ್ತಿವೆ. ಇನ್ನು ಸಾಮಾಜಿಕ ಮಾಧ್ಯಮವು ಯುವಜನತೆಯ ಮನೋಭಾವನೆಗೆ ದೊಡ್ಡ ಪ್ರಭಾವ ಬೀರಿದ್ದು, ಸ್ವತಂತ್ರತೆಯ ಅಭಿವ್ಯಕ್ತಿ ಹಾಗೂ ಹೊಸತನವನ್ನು ಬಯಸುವ ನಿಟ್ಟಿನಲ್ಲಿ ಸ್ನೇಹಪರ ಪದಗಳಿಂದ ಕರೆಯುವುದನ್ನು ಹೆಚ್ಚು ಮೆಚ್ಚಿಕೊಳ್ಳುತ್ತಾರೆ.

ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಿಗಳು ಹೆಸರಿನಿಂದ ಸಂಬೋಧಿಸುವುದು ಆಧುನಿಕ ಕಾರ್ಯಸಂಸ್ಕೃತಿಯ ಭಾಗವಾಗಿದ್ದು, ಹಿರಿಯ ಅಧಿಕಾರಿಗಳೂ ತಮ್ಮನ್ನು ಹೆಸರಿನಿಂದಲೇ ಕರೆಯಲು ಪ್ರೋತ್ಸಾಹಿಸುತ್ತಾರೆ. ಇದು ಕಂಪೆನಿಯ ಸಭೆಗಳಲ್ಲಿ, ಮುಕ್ತ ಸಂವಹನ ಮತ್ತು ತಂಡದಲ್ಲಿ ನಿರ್ಭೀತಿಯ ವಾತಾವರಣ ಕಲ್ಪಿಸಲು ನೆರವಾಗುತ್ತದೆ. ಗೌರವವು ಮಾತಿನ ಶೈಲಿಯಲ್ಲಿರದೆ, ಪರಸ್ಪರ ವಿಶ್ವಾಸ ಮತ್ತು ವೃತ್ತಿಪರ ನಡವಳಿಕೆಗಳಲ್ಲಿ ವ್ಯಕ್ತವಾಗುತ್ತದೆ. ಸರ್ಕಾರಿ ಕಛೇರಿಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ ಹಾಗೂ ಹಿರಿಯರೊಂದಿಗೆ ಮಾತನಾಡುವ ಸಂದರ್ಭಗಳಲ್ಲಿ, ಗೌರವಯುತ ಸಂಬೋಧನೆಯನ್ನು ಬಳಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಇಲ್ಲಿ ನಾವು ತಿಳಿಯಬೇಕಾದದ್ದು ಏನೆಂದರೆ, ಸಂಬೋಧನೆಯನ್ನು ಆಯ್ಕೆ ಮಾಡುವಾಗ, ಎದುರಿನ ವ್ಯಕ್ತಿಯ ಇಷ್ಟವನ್ನೂ ಗೌರವಿಸಬೇಕು. ಸಂಬಂಧಗಳನ್ನು ಗುರುತಿಸಿ, ಕರೆಯುವುದನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ವೃತ್ತಿಪರ ಸಂಬಂಧಗಳಲ್ಲಿ, ಸರ್, ಮೇಡಂ ಪದಗಳು ಅನಿವಾರ್ಯವಾಗಿದ್ದು, ಆತ್ಮೀಯತೆಯಿದ್ದಾಗ, ವಯಸ್ಸಿನ ಅಂತರ ಕಡಿಮೆ ಇದ್ದಲ್ಲಿ ಹೆಸರು ಹಿಡಿದು ಮಾತನಾಡಿಸುವುದು ಸೂಕ್ತವೆನಿಸುತ್ತದೆ. ಆಂಟಿ, ಅಂಕಲ್ ಪದಗಳನ್ನು ಕುಟುಂಬ ಸದಸ್ಯರಿಗೆ ಮೀಸಲಿಡಬೇಕು. ನಾವೆಲ್ಲರೂ ಚಿಕ್ಕಮ್ಮ, ದೊಡ್ದಮ್ಮ, ಚಿಕ್ಕಪ್ಪ, ದೊಡ್ಡಪ್ಪ ಎಂದೇ ಕರೆಯುತ್ತಿದ್ದರೂ, ನಂತರ ಇಂಗ್ಲೀಷ್ ಬಳಕೆಯ ವ್ಯಾಮೋಹದಿಂದಾಗಿ, ಆಂಟಿ, ಅಂಕಲ್ ಬಳಕೆಗೆ ಬಂತು. ಕೆಲವರು ಇನ್ನೊಬ್ಬರನ್ನು ಪೀಡಿಸುವ ಸಲುವಾಗಿ ಕುಹಕವಾಡಲು, ವ್ಯಂಗ್ಯವಾಡಲು ಆಂಟಿ ಪದದ ದುರ್ಬಳಕೆ ಮಾಡಿದ ಪರಿಣಾಮವಾಗಿಯೂ ಮಹಿಳಾ ಸಮುದಾಯ ಆಂಟಿ ಪದ ಬಳಕೆಯನ್ನು ತೀರಾ ವಿರೋಧಿಸಿತು. ಅವರ ವ್ಯಕ್ತಿತ್ವಕ್ಕೆ ಕುಂದು ಬರುವಂತೆ ಭಾಸವಾಗುವ ಈ ಆಂಟಿ ಎಂಬ ಸಂಬೋಧನೆಯ ಬದಲು, ಮೇಡಂ ಅಥವಾ ಹೆಸರಿನಿಂದ ಕರೆಯುವುದನ್ನು ಇಷ್ಟ ಪಡುತ್ತಾರೆ. ವಯಸ್ಸಿನ ಅಂತರ ಹೆಚ್ಚಾದಾಗ, ಅಣ್ಣ- ಅಕ್ಕಂದಿರ ಬಳಕೆ ಸೂಕ್ತವೆಂದೆನಿಸುತ್ತದೆ.

ವೈಯಕ್ತಿಕ ಆಯ್ಕೆಯನ್ನು ಗೌರವಿಸುವುದೇ ನಿಜವಾದ ಸಂಸ್ಕಾರ. ಸಂಬೋಧನೆಯ ಸೌಂದರ್ಯ ಅದರ ಪದಗಳ ಬಳಕೆಯಲ್ಲಿರದೆ, ಮನೋಭಾವದಿಂದಲೂ ಇರಬೇಕು. ಯಾರಾದರೂ ನಮ್ಮನ್ನು ಆಂಟಿ ಎಂದು ಕರೆದಾಗ, ಮುಜುಗರ ಪಡಬೇಕಾಗಿಲ್ಲ. ಸುಮ್ಮನಿರದೆ, ನೇರವಾಗಿ ‘ಹಾಗೆ ಕರೆಯಬೇಡಿ’ ಎಂದು ಹೇಳಬೇಕು. ‘ಆಂಟಿ’ ಎಂಬ ಪದವನ್ನು ಹಾಸ್ಯ ಅಥವಾ ಕುಹಕಗೊಳಿಸಬೇಕೆಂಬ ಉದ್ದೇಶದಿಂದ ಬಳಸುವುದನ್ನು ತಪ್ಪಿಸಿ, ಗೌರವಪೂರ್ಣ ಅಥವಾ ಸ್ನೇಹಪರ ಪದಗಳಿಂದ ಕರೆಯುವುದು ಉತ್ತಮ. ಇದರಿಂದ ಮಹಿಳೆಯರ ಆತ್ಮಗೌರವದ ಜೊತೆಗೆ ಸಮಾಜದಲ್ಲಿ ಪರಸ್ಪರ ಆತ್ಮೀಯತೆಯ ವಾತಾವರಣ ಬೆಳೆಯುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಹಿರಿಯವರೊಂದಿಗೆ ಮಾತನಾಡುವ ಶೈಲಿಯನ್ನು ತಿಳಿಸಿಕೊಡಬೇಕು. ಚಿಕ್ಕ-ಮಕ್ಕಳು ಎಲ್ಲೆಂದರಲ್ಲಿ ‘ಆಂಟಿ-ಅಂಕಲ್’ ಪ್ರಯೋಗಿಸಿದಾಗ ಅವರನ್ನು ತಿದ್ದುವುದು ಮುಖ್ಯ. ಮನೆಯಲ್ಲೇ ಹಿರಿಯರನ್ನು ಗೌರವದಿಂದ ಕರೆಯುವ ಮೂಲಕ ಮಕ್ಕಳಿಗೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಂಬೋಧನೆಗಳು ಬದಲಾಗುತ್ತಿರುವ ಈ ಹೊಸ ಟ್ರೆಂಡ್‌ನಲ್ಲಿ, ಗೌರವದ ಮೌಲ್ಯ ಎಂದಿಗೂ ಬದಲಾಗಬಾರದು. ಹೊಸ ಪದಗಳನ್ನು ಸ್ವೀಕರಿಸುತ್ತಾ, ಹಳೆಯ ಪದಗಳ ಗೌರವವನ್ನು ಉಳಿಸಿಕೊಳ್ಳುವುದು ನಮ್ಮ ಸಂಸ್ಕöÈತಿಯ ಸೊಗಸಾಗಿದೆ. ಈಗಲೂ ಕೆಲವು ಅಂಗನವಾಡಿ ಶಾಲೆಗಳಲ್ಲಿ, ನರ್ಸರಿಗಳಲ್ಲಿ, ಕಛೇರಿ ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಆಯಾಗಳನ್ನು ಆಂಟಿ ಎಂದು ಕರೆಯುವುದನ್ನು ಕಾಣಬಹುದು. ಇದಕ್ಕೆ ಬದಲಾಗಿ ಅಕ್ಕ, ಅಮ್ಮ ಎಂದು ಕರೆದು, ವಿಶೇಷ ಗೌರವ ಕೊಡುವುದು ಒಳಿತು ಎಂದು ನನ್ನ ಅಭಿಪ್ರಾಯ. ಏನಂತಿರಾ?

ಶೈಲಾರಾಣಿ ಬೋಳಾರ್, ಮಂಗಳೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *