ಪಾರ್ವತಮ್ಮನವರು ಟಿವಿಯಲ್ಲಿ ತೋರಿಸುತ್ತಿದ್ದ ಕರೋನಾ ಪೀಡಿತರ ಸಾವು ನೋವುಗಳ ದೃಶ್ಯಗಳನ್ನು ನೋಡುತ್ತಾ ಭಯಬೀತರಾಗಿದ್ದರು. ಅವರ ಮನದಲ್ಲಿ – ಇದೇನಿದು, ಇಂತಹ ಕರಾಳ ರೋಗ ಏಕೆ ಜಗತ್ತಿಗೆ ಕಾಲಿಟ್ಟಿತು, ಇದು ಕಲಿಯುಗ ಕೊನೆಯಾಗುವ ಸೂಚನೆಯೇ, ನಾನು ಇಷ್ಟು ಕಷ್ಟಪಟ್ಟು ಆಸ್ಥೆಯಿಂದ ಸಂಸಾರವನ್ನು ಕಟ್ಟಿ ಒಂದು ಹದಕ್ಕೆ ತಂದು ಅದರ ಸುಖಫಲವನ್ನು ಅನುಭವಿಸುವ ಹೊತ್ತಿನಲ್ಲಿ ಹೀಗಾಯಿತಲ್ಲಾ ಎನ್ನುವ ಭಾವಗಳು ಸುಳಿದು ವಿಷಣ್ಣರಾಗುತ್ತಿದ್ದರು.
ಎರಡೆರಡು ಗಂಟೆಗಳ ಎರಡು ತರಗತಿಗಳ ಆನ್ ಲೈನ್ ಪಾಠವನ್ನು ಮುಗಿಸಿ ಕೋಣೆಯಿಂದ ಹೊರಬಂದ, ಸರ್ಕಾರೀ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕನಾಗಿದ್ದ ಪಾರ್ವತಮ್ಮನವರ ಕಿರಿಯ ಮಗ ಗಿರಿರಾಜ.
ಮಗ ಹೊರಗೆ ಬಂದದನ್ನು ನೋಡಿ, ಮೈಕೊಡವಿಕೊಂಡು ಎದ್ದು ಅಡುಗೆಮನೆಗೆ ಹೋಗಿ ಹಿರಿಯ ಸೊಸೆ ಶೈಲಜಾ ಫ್ಲಾಸ್ಕಿನಲ್ಲಿ ಹಾಕಿಟ್ಟಿದ್ದ ಟೀಯನ್ನು ಒಂದು ಕಪ್ಪಿಗೆ ಬಗ್ಗಿಸಿ ಮಗನಿಗೆ ತಂದುಕೊಟ್ಟರು ಪಾರ್ವತಮ್ಮ.
ನಾಲ್ಕುಗಂಟೆಗಳ ಕಾಲ ಒಂದೇ ಸಮನೆ ಕಂಪ್ಯೂಟರ್ ಮುಂದೆ ಕುಳಿತು ಆನ್ ಲೈನ್ ಪಾಠಮಾಡಿ ಸಾಕಾಗಿದ್ದ ಗಿರಿರಾಜನಿಗೆ ಅಮ್ಮ ತಂದುಕೊಟ್ಟ ಟೀಯನ್ನು ಕುಡಿಯುತ್ತಲೇ ಮುದುರಹತ್ತಿದ್ದ ಉತ್ಸಾಹ ಮರುಕಳಿಸಿದಂತೆ ಆಯಿತು. ಅಮ್ಮನ ಮುಖದಲ್ಲಿ ತುಂಬಿಕೊಂಡಿದ್ದ ಆತಂಕವನ್ನು ನೋಡಿ ಕೇಳಿದ ಗಿರಿರಾಜ – ಅಮ್ಮಾ, ಯಾಕೆ ಯಾವಾಗಲೂ ಏನೋ ಯೋಚನೆಮಾಡುತ್ತಾ ಆತಂಕಪಟ್ಟುಕೊಳ್ಳುತ್ತಿರುತ್ತೀಯಾ?
ಅಲ್ಲಾ ಮಗ, ನಂಗ್ಯಾಕೋ ಇದು ಕಲಿಯುಗ ಮುಗಿಯುವ ಸೂಚನೆಯೇ ಅನಿಸ್ತಾ ಇದೆ, ಇಂಥಾ ರೋಗ ಜಗಕ್ಕೆ ಯಾಕೆ ಕಾಲಿಟ್ಟಿತು?
ಅಮ್ಮಾ, ಯೋಚಿಸಿ ಯೋಚಿಸಿ ತಲೆಕೆಡಿಸಿಕೊಳ್ಳ ಬೇಡ, ಹೌದು ಬರಬಾರದಾಗಿತ್ತು, ಬಂದಾಗಿದೆ, ಈಗ ಎಲ್ಲಾ ಮುಂಜಾಗ್ರತೆಗಳನ್ನು ತೆಗೆದುಕೊಂಡು ಜೋಪಾನವಾಗಿ ಬದುಕಬೇಕು ಅಲ್ವಾ? ಇಡೀ ಜಗಕ್ಕೆ ಆದುದೇ ನಮಗೂ ಆಗುತ್ತೆ ಚಿಂತೆ ಮಾಡ್ಬೇಡ ಅಮ್ಮಾ.
ಟಿವಿಲೀ ಈ ರೋಗ ಬಂದ್ರೆ ಜನ ಹೇಗೆ ನರಳ್ತಾರೆ, ನರಳೀ ನರಳೀ ಹೇಗೆ ಸಾಯ್ತಾರೆ, ಉಸಿರಾಡೋಕ್ಕೆ ಎಷ್ಟು ಕಷ್ಟ ಆಗುತ್ತೆ, ಸತ್ರೆ ಒಂದು ಸಂಸ್ಕಾರಾನೂ ಇಲ್ಲದಂತಾಗುತ್ತದೆ, ಯಾಕೆ ಹೀಗಾಯ್ತು ಅನ್ಸುತ್ತೇ ಗಿರೀ..
ಅಮ್ಮಾ ಅದಕ್ಕೇ ಅಪ್ಪ ನಿಂಗೆ ಸದಾ ಹೇಳೋದು, ಟಿವಿ ನೋಡಬೇಡ ಅಂತ. ಅಷ್ಟು ದೇವರನ್ನು ನಂಬಿದೋಳು ನೀನು, ಅವನನ್ನೇ ಕೇಳಿಕೋ, ಜಗಕೆ ಬಂದಿರೋ ಕಷ್ಟಾನೆಲ್ಲ ಪರಿಹರಿಸು ಅಂತ. ಈಗ ಎಲ್ಲಾರ್ದೂ ಓಡಾಟ ನಿಂತು ಹೋಗಿದೆ. ಹಾಗಾಗಿ ಟಿವಿ ನೋಡೋದು ಜಾಸ್ತಿ ಆಗಿದೆ. ಟಿವಿನವರುಗಳು ತಮ್ಮ ಟಿ ಆರ್ ಪಿ ಹೆಚ್ಚಿಕೊಳ್ಳೋಕೆ ವಿಷಯಗಳನ್ನು ಇನ್ನೂ ವೈಭವೀಕರಿಸುತ್ತಿದ್ದಾರೆ. ದಯವಿಟ್ಟು ಜಾಸ್ತಿ ಟಿವಿ ನೋಡಬೇಡ.
ಇನ್ನು ಹೇಗೆ ಹೊತ್ತು ಕಳೆಯಲಿ ಮಗಾ? ಚಿನ್ನದಂತಹ ಸೊಸೆ, ನಿನ್ನತ್ತಿಗೆ ಮನೆ ಕೆಲಸ ಎಲ್ಲಾ ನೋಡ್ಕೋತಾಳೆ, ಮುಂಚೆ ಆಗಿದ್ರೆ ದಿನಕ್ಕೆ ಒಂದು ಸಲ ತೋಟದ ಕಡೆ ಹೋಗಿ ಬರ್ತಾ ಇದ್ದೆ. ಅಲ್ಲಿರೋ ಒಂದೊಂದು ಗಿಡಾನೂ ನೋಡ್ಕೊಂಡು ಬರೋದ್ರೊಳಗೆ ಎರಡು, ಮೂರು ಗಂಟೆ ಆಗಿ ಹೋಗ್ತಾ ಇತ್ತು. ನಾಲ್ಕಾರು ಮೈಲಿ ನಡೆದ ಹಾಗೂ ಆಗ್ತಾ ಇತ್ತು. ಹೊತ್ತು ಹೋಗೋದೇ ಗೊತ್ತಾಗ್ತಾ ಇರಲಿಲ್ಲ, ಸುಸ್ತೂ ಆಗುತಿತ್ತು, ಒಳ್ಳೆ ನಿದ್ದೆನೂ ಬರ್ತಾ ಇತ್ತು, ಈಗೇನು ಮಾಡ್ಲಿ?
ಅಮ್ಮಾ ನೆಂಟರು ಇಷ್ಟರ ಹತ್ತಿರ ಎಲ್ಲಾ ಕರೋನಾ ವಿಷಯ ಬಿಟ್ಟು ಬೇರೆ ವಿಷಯಗಳನ್ನು ಫೋನಿನಲ್ಲಿ ಮಾತಾಡು, ಅತ್ತಿಗೆಗೆ ಹೇಳಿಕೊಟ್ಟು ಹೊಸಾ ಹೊಸಾ ಅಡುಗೆ ಮಾಡು, ಈಗಾಗಲೇ ಮಾಡುತ್ತಿರುವ ಒಂದು ಗಂಟೆಯ ದೇವರ ಪೂಜೆಯನ್ನು ಇನ್ನೂ ಹೆಚ್ಚು ಮಾಡು, ದೇವರನಾಮ, ವಚನಗಳು, ಭಜನೆ ಎಲ್ಲಾ ಹಾಡಿಕೋ, ಕಾಲ ಹೋಗೋದೆ ಗೊತ್ತಾಗೊಲ್ಲ, ಇದೆಲ್ಲ ಸ್ವಲ್ಪ ದಿನದ ಕಷ್ಟ ಅಷ್ಟೆ. ಆಗಲೇ ಪ್ರಪಂಚದ ಮೂಲೆ ಮೂಲೆಯಲ್ಲಿ ಸಾವಿರಾರು ವಿಜ್ಞಾನಿಗಳು ಲಸಿಕೆ ಕಂಡುಹಿಡಿಯಲು ಹಗಲೂ ರಾತ್ರೀ ಕಷ್ಟ ಪಡುತ್ತಾ ಇದ್ದಾರೆ. ಆದಷ್ಟು ಬೇಗ ಈ ಪೀಡೇನಾ ತೊಲಗಿಸ್ತಾರೆ. ಅಲ್ಲದೆ ಅಕಸ್ಮಾತ್ ಬಂದ್ರೂ ಸಹ ನಮ್ಮ ಸುತ್ತಮುತ್ತಲಿನವರುಗಳೇ ಎಷ್ಟೋ ಜನ ಆಸ್ಪತ್ರೆಗೆ ಹೋಗಿ ಗುಣಮುಖರಾಗಿ ಬಂದಿಲ್ವಾ, ಒಳ್ಳೊಳೆಯದನ್ನೇ ಕೇಳಿ, ಯೋಚನೆ ಮಾಡು ಅಮ್ಮಾ, ಸುಮ್ಮನೆ ಮನಸ್ಸು ಕೆಡಿಸಿಕೊಳ್ಳಬೇಡ.
ಆದ್ರೂ ಯಾಕೋ ಭಯ ಆಗುತ್ತೆ ಮಗಾ . .
ಭಯ ಪಟ್ಕೋಬೇಡ ಅಮ್ಮಾ, ನಾವೂ ಸಹ ಎಲ್ಲಾ ಮುಂಜಾಗ್ರತೆ ತೆಗೊಂಡಿದೀವಿ ಅಲ್ವಾ? ಮೊನ್ನೆ ಯಾವುದೋ ಪೆಟ್ರೋಲ್ ಬಂಕಿನಿಂದ ವೈರಾಣು ಹರಡಿತು ಅಂತ ಟಿವೀಲಿ ಹೇಳಿದ್ದು ನೋಡಿ ನೀನು ಹೆದರಿಕೊಂಡೆ ಅಂತ ಅಪ್ಪಾಜಿ ಒಂದು ದೊಡ್ಡ ಬ್ಯಾರೆಲ್ ಪೆಟ್ರೋಲ್ ತರಿಸಿಟ್ಟು ಬಿಟ್ಟಿದ್ದಾರೆ. ಜೀಪಿಗೆ, ಕಾರಿಗೆ, ಎರಡೆರಡು ಮೋಟಾರ್ ಬೈಕ್ ಎಲ್ಲಾದಕ್ಕೂ ತಿಂಗಳಾನುಗಟ್ಟಲೆ ಸಾಕಾಗಲಿ ಅಂತ. ಮನೆ ಹೊರಗೆ ಎರಡು ದೊಡ್ಡ ಬೇಸಿನ್ ಇಟ್ಟಾಗಿದೆ, ಆನ್ ಲೈನಿನಲ್ಲಿ ತರಿಸಿದ ಸಾಮಾನುಗಳನ್ನು ಇಟ್ಟುಹೋಗಲು ಎಂದು. ತಜ್ಞರುಗಳು ಅರ್ಧಗಂಟೆಯ ನಂತರ ಉಪಯೋಗಿಸಿ ಅಂದ್ರೆ ಅತ್ತಿಗೆ ಅಂತೂ ಎರಡು ಗಂಟೆ ಬಿಟ್ಟೇ ಒಳಗೆ ತರುತ್ತಾರೆ, ಇನ್ನೂ ಯಾಕೆ ಹೆದರಿಕೊಳ್ಳುತ್ತೀಯಾ?
ಹಾಗಂತೀಯಾ? ಇಷ್ಟೆಲ್ಲ ಜೋಪಾನವಾಗಿ ಇರೋದ್ರಿಂದ ಬರೋಲ್ಲಾ ಅಲ್ವಾ?
ಖಂಡಿತಾ ಬರೋಲ್ಲಾ, ಧೈರ್ಯವಾಗಿರು. ಜನರ ಸಂಪರ್ಕಾನೇ ನಿಂತುಹೋದ ಹಾಗೆ ಆಗಿದೆ. ಹಾಗಾಗಿ ಬರುವ ಛಾನ್ಸೇ ಇಲ್ಲ. ಅಕಸ್ಮಾತ, ಅಕಸ್ಮಾತ್ ನೂರಕ್ಕೆ ಹತ್ತನೇ ಒಂದು ಭಾಗ ಬಂದರೂ ವೈದ್ಯರು ಹೇಳಿದಂತೆ ಕೇಳಿ ಹುಷಾರಾಗಿ ಬರುತ್ತೀವಿ ಅಂದುಕೋ, ಎಲ್ಲಾ ಸರಿಯಾಗುತ್ತೆ.
ಏನೋ ಗಿರಿ, ದೇವ್ರು ಎಲ್ಲಾರಿಗೂ ಒಳ್ಳೆಯದು ಮಾಡ್ಲಿ.
ಅಮ್ಮಾ, ಮಗ ಇಬ್ಬರೂ ಏನೋ ದೇವರನ್ನು ಅಡ್ಜಸ್ಟ್ ಮಾಡ್ಕೋತಾ ಇದ್ದೀರಲ್ಲಾ ಏನು ಸಮಾಚಾರ – ಎನ್ನುತ್ತಾ ಇನ್ನೊಂದು ಕೋಣೆಯಂದ ಕೆಲಸದಲ್ಲಿ ನಿರತನಾಗಿದ್ದ ಹಿರಿಯಮಗ ಶಿವರಾಜ ಹೊರಗೆ ಬಂದ.
ಅಮ್ಮ ಮತ್ತೆ ಅವನಿಗೂ ಮೊದಲಿನಿಂದ ಪ್ರವರ ಹೇಳುವುದನ್ನೂ, ಇಷ್ಟು ಹೊತ್ತೂ ತಿಳಿ ಹೇಳಿ ತಿಳಿಗೊಳಿಸಿದ್ದ ಮನಸ್ಸನ್ನು ಮತ್ತೆ ಕೆಡಿಸಿಕೊಳ್ಳದಂತೆ ಗಿರಿರಾಜ ವಿಷಯಾಂತರಿಸಿ ತನ್ನ ಆನ್ ಲೈನ್ ತರಗತಿಗಳಲ್ಲಿ ನಡೆದ ನಗೆಚಟಾಕೆಗಳನ್ನು ಹೇಳುತ್ತಾ ವಾತಾವರಣವನ್ನು ತಿಳಿಗೊಳಿಸಿದ.
ಅಷ್ಟರಲ್ಲಿ ಅಡುಗೆಮನೆಯಿಂದ ಕೈಒರೆಸಿಕೊಳ್ಳುತ್ತಾ ಹೊರಬಂದ ಸೊಸೆ ಶೈಲಜಾ ಅಡುಗೆ ಆಗಿರುವುದರ ಸೂಚನೆ ನೀಡುತ್ತಾ ಎಲ್ಲರನ್ನೂ ಊಟಕ್ಕೆ ಎಬ್ಬಿಸಿದಳು. ಹಾಗೆಯೇ ಬೀರುವಿನ ತುಂಬಾ ಜೋಡಿಸಿಟ್ಟುಕೊಂಡಿದ್ದ ಆದ್ಯಾತ್ಮದ ಪುಸ್ತಕಗಳಲ್ಲೊಂದನ್ನು ಓದುತ್ತಾ ತನ್ಮಯರಾಗಿದ್ದ ಮಾವನವರಾದ ಶಿವಲಿಂಗಪ್ಪನವರನ್ನೂ ಅವರ ಕೋಣೆಯಲ್ಲಿ ಇಣುಕಿ ಊಟಕ್ಕೆ ಎಬ್ಬಿಸಿದಳು.
ಎಲ್ಲರೂ ನಗುನಗುತ್ತಾ ಊಟ ಮಾಡಿದರು. ಊಟ ಮಾಡಿ ಬಾಯಿಗೆ ಬಣ್ಣಕಟ್ಟಿದ ಅಡಿಕೆ ಎಸೆದುಕೊಳ್ಳುತ್ತಾ ಎಲ್ಲರೂ ಕುಳಿತಿರಲು ಶಿವರಾಜ ಮತ್ತು ಶೈಲಜಾ ಕಣ್ಣಲ್ಲೇ ʼನೀವು ಹೇಳಿ, ನೀವು ಹೇಳಿʼ ಎಂದು ಸನ್ನೆ ಮಾಡಿಕೊಳ್ಳುತ್ತಿದ್ದರು. ಅದನ್ನು ಗಮನಿಸಿದ ಶಿವಲಿಂಗಪ್ಪನವರು – ಏನದು, ಏನು ಹೇಳಬೇಕಿದೆಯೋ ಹೇಳಿ, ನಮ್ಮನಮ್ಮಲ್ಲೇ ಕಣ್ಣಾಮುಚ್ಚಾಲೆ ಏಕೆ – ಎಂದರು.
ಇಂತಹ ವಿಷಯಗಳಲ್ಲಿ ಸದಾ ಹದ್ದಿನ ಕಣ್ಣಿನವರಂತೆ ಸುಳಿವು ಸೂಕ್ಷ್ಮಗಳನ್ನು ಅರಿಯುತ್ತಿದ್ದ ಪಾರ್ವತಮ್ಮನವರು ಯಾವುದೋ ಲೋಕದಲ್ಲಿರುವಂತೆ ಅನ್ಯಮನಸ್ಕರಾಗಿಯೇ ಕುಳಿತಿದ್ದರು.
ಗಿರಿರಾಜ ಮನಸ್ಸನಲ್ಲೇ – ಅಮ್ಮ ಈ ನಡುವೆ ಮನಸ್ಸಿಗೆ ಹಚ್ಚಿಕೊಳ್ಳುವುದು ಜಾಸ್ತಿಯಾಗಿದೆ, ಅವರು ಜಾಸ್ತಿ ಟಿವಿ ನೋಡದಂತೆ ರಿಮೋಟನ್ನಾದರೂ ಎತ್ತಿಟ್ಟು ಬಿಡಬೇಕು ಅಷ್ಟೆ – ಅಂದುಕೊಳ್ಳುತ್ತಾ, ಶಿವರಾಜು, ಶೈಲಜಾ ಏನು ಹೇಳಲು ಹೊರಟಿದ್ದಾರೆಂಬುದರತ್ತ ಗಮನ ಹರಿಸಿದನು.
ನೀವೇ ಹೇಳಿ – ಎನ್ನುತ್ತಾ ಶೈಲಜಾ ನಾಚಿ ಒಳಗೋಡಿಯಾಗಿತ್ತು. ಶಿವರಾಜು ಮನದ ತುಂಬಾ ಸಂತಸ ತುಂಬಿ ಹೇಳಿದನು –
ಏನಿಲ್ಲಾ ಅಪ್ಪಾಜಿ, ಈ ಮನೆಗೊಂದು ಮಗು ಬರುತ್ತಿದೆ, ನೀವು ತಾತ ಆಗುತ್ತೀರಿ!
ಎಲ್ಲರಿಂದೂ ಆ – – ಎಂಬ ಉದ್ಗಾರ ಹೊರಟಿತು. ಎಲ್ಲರ ಉದ್ಗಾರದಲ್ಲಿ ಸಂತಸವಿದ್ದರೆ ಪಾರ್ವತಮ್ಮನಮ್ಮನವರ ಉದ್ಗಾರದಲ್ಲಿ ಆತಂಕವೇ ಹೆಚ್ಚಾಗಿತ್ತು.
ತಕ್ಷಣ ಅದನ್ನರಿತ ಗಿರಿರಾಜ ಅವರನ್ನು ಸಮಾಧಾನಿಸಿದ. – ಅಮ್ಮಾ ಸಂತೋಷದ ಸಮಾಚಾರ. ಖುಷಿ ಪಡು. ಅಣ್ಣ ಅತ್ತಿಗೆಯರಿಗೆ ನೀನೇ ಧೈರ್ಯ ಹೇಳಬೇಕು. ಹಿಂದಿನ ಕಾಲದಲೆಲ್ಲಾ ಮನೆಯಲ್ಲೇ ಎಲ್ಲಾ ನಡೆಯುತ್ತಿರಲಿಲ್ಲವೇ? ಈಗಲೂ ಬೇಕಾದ ಮುಂಜಾಗ್ರತೆಗಳನ್ನೆಲ್ಲಾ ತೆಗೆದುಕೊಳ್ಳೋಣ, ಜಾಗ್ರತೆಯಾಗಿರೋಣ, ಡಾಕ್ಟರ್ ಹೇಳುವ ಸಲಹೆಗಳನ್ನೆಲ್ಲಾ ಪಾಲಿಸೋಣ, ಅಲ್ವೇನಮ್ಮಾ? – ಎಂದನು.
ಪಾರ್ವತಮ್ಮ ಮೈಕೊಡವಿಕೊಂಡು ಎದ್ದವರು, ತಮ್ಮಲ್ಲಿ ತಾವೇ – ಛೇ, ನನಗೇನಾಗಿದೆ, ನಾಲ್ಕಾರು ವರುಷಗಳಿಂದ ಎಲ್ಲರಿಗಿಂತ ಜಾಸ್ತಿ ನಾನೇ ಇನ್ನೂ ಮಗುವಾಗಿಲ್ಲ ಎಂದು ಹಲುಬುತ್ತಿದ್ದವಳು, ಇಷ್ಟು ಒಳ್ಳೆಯ ಸುದ್ದಿ ಕೇಳಿ ಹೀಗಿದ್ದೀನಿ – ಎಂದುಕೊಳ್ಳುತ್ತಾ – ಹೌದೂ ಗಿರಿ, ನೀನು ಹೇಳುವುದೂ ಸರಿಯಾಗಿಯೇ ಇದೆ. ಇರು, ಮೊದಲು ಶೈಲಜಾ ಬಾಯಿಗೆ ಸಕ್ಕರೆಯನ್ನು ಹಾಕಿ ಬರುತ್ತೇನೆ – ಎಂದು ಎದ್ದರು.
ಅಲ್ಲೇ ಇದ್ದ ಶಿವರಾಜ – ಅಮ್ಮಾ ನಂಗೆ ಸಕ್ರೆ? – ಎಂದನು.
ಆಯ್ತು ನಿನಗೂ, ಎಲ್ಲರಿಗೂ ತರುತ್ತೀನಿ ಮೊದಲು ಶೈಲುಗೆ – ಎನ್ನುತ್ತಾ ಮುದುರಿದ್ದ ಮನಸನ್ನುಉತ್ಸಾಹದೆಡೆಗೆ ಹೊರಳಿಸಿದರು.
ಎರಡು ಮೂರು ತಿಂಗಳುಗಳು ಕಳೆಯಿತು. ಶೈಲಜಾಗೆ ಮನೆಯವರೆಲ್ಲರ ಉಪಚಾರ ಜೋರಾಗಿ ನಡೆದಿತ್ತು. ಎಲ್ಲರೂ ಬರಲಿರುವ ಕಂದನ ನಿರೀಕ್ಷೆಯಲ್ಲಿ, ತಮ್ಮ ಜಾಗ್ರತೆಯಲ್ಲಿ ತಾವಿರುತ್ತಾ ದಿನಗಳನ್ನು ಮುಂದೂಡುತ್ತಿದ್ದರು.
ಒಬ್ಬರೇ ಸೋಫಾದ ಮೇಲೆ ಕುಳಿತ ಪಾರ್ವತಮ್ಮನವರಿಗೆ ಹಿಂದಿನ ದಿನಗಳೆಲ್ಲಾ ನೆನಪಿಗೆ ಬರುತಿತ್ತು.
೦೦೦೦೦
ಶೈಲಜಾ ತಾಯಿ ಗಿರಿಜಾ ತಮ್ಮ ಮನೆಗೆ ಅಡುಗೆ ಕೆಲಸಕ್ಕೆ ಸಹಾಯ ಮಾಡಲು ಬರುತ್ತಿದ್ದ ದಿನಗಳು ಅವು.
ಮೂರು ವರ್ಷದ ಶೈಲಜಾ, ಒಂದು ವರ್ಷದ ಮಹೇಶರೊಂದಿಗೆ ಇಪ್ಪತ್ನಾಲ್ಕು ವರ್ಷದ ಗಿರಿಜಾ ಗಂಡನನ್ನು ಕಳೆದುಕೊಂಡು ಒಂಟಿಯಾಗಿದ್ದಳು. ಗಂಡನ ಕಡೆಯಿಂದ ಬಂದಿದ್ದ ಒಂದಷ್ಟು ಜಮೀನು, ವಾಸಿಸಲು ಒಂದು ಸಣ್ಣ ಮನೆಯ ಹೊರತಾಗಿ ಬೇರೆ ಯಾವ ವರಮಾನವೂ ಇಲ್ಲದಿದ್ದ ಸಮಯದಲ್ಲಿ ಪಾರ್ವತಮ್ಮ ಶಿವನಂಜಪ್ಪನವರು ಆ ಕುಟುಂಬದ ಸಹಾಯಕ್ಕೆ ಒತ್ತಾಸೆಯಾಗಿ ನಿಂತುಕೊಂಡರು. ಗಿರಿಜಾ, ಪಾರ್ವತಮ್ಮನವರ ಬಲಗೈಯಂತೆ ಅವರ ಎಲ್ಲಾ ಕೆಲಸಗಳಲ್ಲಿ ಸಹಾಯಕಳಾದಳು.
ಶಿವನಂಜಪ್ಪನವರು ಸೋದರಿಯಂತೆ ಕಾಣುತ್ತಿದ್ದ ಗಿರಿಜಾಳಲ್ಲಿ ಹೇಳುತ್ತಿದ್ದರು – ಮಕ್ಕಳನ್ನು ಚೆನ್ನಾಗಿ ಓದಿಸು ಗಿರಿಜಾ, ಅದೇ ನಾವು ಮಕ್ಕಳಿಗೆ ಕೊಡುವ ಆಸ್ತಿ.
ಇಬ್ಬರು ಮಕ್ಕಳೂ ಚೆನ್ನಾಗಿ ಓದುತ್ತಿದ್ದರು. ಶೈಲಜಾ ಬಿ.ಕಾಂ., ಮುಗಿಸಿ ಖಾಸಗೀ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದಳು. ಗಿರಿಜಾ ಮದುವೆಯ ಸುದ್ದಿಯೆತ್ತಿದರೆ – ಅಮ್ಮಾ, ಮಹೇಶನ ಓದು ಮುಗಿಸಿ ಅವನ ಕಾಲಮೇಲೆ ಅವನು ನಿಲ್ಲುವ ತನಕ ನನಗೆ ಮದುವೆ ಬೇಡ – ಎನ್ನುತಿದ್ದಳು.
ಮಹೇಶನ ಓದೂ ಮುಗಿಯಿತು. ಅವನಿಗೂ ಒಂದು ಒಳ್ಳೆಯ ಕೆಲಸವಾಯಿತು.
ಗಿರಿಜಾ, ಪಾರ್ವತಮ್ಮ ಮತ್ತು ಶಿವಲಿಂಗಪ್ಪನವರೊಂದಿಗೆ ಹೇಳಿದಳು – ವಯಸ್ಸಾಗುತ್ತಾ ಇದೆ, ಶೈಲಜಾಗೆ ಮದುವೆ ಮಾಡಬೇಕು, ನಮ್ಮಂತಹವರಿಗೆ ಏನು ಗಂಡು ಸಿಗುವುದು ಅಷ್ಟು ಸುಲಭವೇ? ಈಗ ಹುಡುಕಲು ಪ್ರಾರಂಭ ಮಾಡಿದರೆ ಮುಂದಿನ ವರ್ಷವಾದರೂ ಮದುವೆಯಾಗಬಹುದು. ಅವಳು ಇನ್ನೂ ಏನೂ ನೆಪ ಹೇಳದಂತೆ ದಯವಿಟ್ಟು ತಾವುಗಳು ಬುದ್ಧಿ ಹೇಳಬೇಕು.
ಆಯಿತು, ಮೊದಲು ನೀನು ಮಾತನಾಡು, ಒಪ್ಪದಿದ್ದರೆ ನಾವು ಮಾತನಾಡುತ್ತೇನೆ – ಪಾರ್ವತಮ್ಮ ಹೇಳಿದರು.
ಗಿರಿಜಾ ಹೊರಟ ಮೇಲೆ ಶಿವನಂಜಪ್ಪನವರು ಹೇಳಿದರು –
ಪಾರೂ, ಶೈಲಜಾಳನ್ನು ನಮ್ಮ ಶಿವರಾಜೂಗೇ ತಂದುಕೊಂಡರೆ ಹೇಗೆ? ಕಂಡು ಕೇಳಿದ ಹುಡುಗಿ. ದುಡ್ಡು ಕಾಸಿನ ವಿಷಯದಲ್ಲಿ ನಮಗೂ ಅವರಿಗೂ ಅಂತರವಿದ್ದರೂ ನನಗದರಲೆಲ್ಲಾ ನಂಬಿಕೆಯಿಲ್ಲ, ಈಡು ಜೋಡು ಚೆನ್ನಾಗಿದೆ. ನೀನೂ ಯೋಚಿಸು, ನಿನಗೆ ಸರಿ ಅನ್ನಿಸದರೆ ಶಿವರಾಜುವಿನೊಂದಿಗೆ ಮಾತನಾಡೋಣ. ಗಿರಿಜಾಳಿಗೆ ಹೇಳಿ ಶೈಲಜಾಳಿಗೂ ಬಲವಂತ ಮಾಡದೆ ಅಭಿಪ್ರಾಯ ತಿಳಿದು ಶಿವನಿಚ್ಚೆಯಿದ್ದರೆ ಶುಭಕಾರ್ಯ ನೆರವೇರಿಸಿಯೇ ಬಿಡೋಣ, ಯೋಚಿಸು – ಎನ್ನುತ್ತಾ ಯಾವುದೇ ರೀತಿ ಬಲವಂತವನ್ನೂ ಹೇರದೆ ತಮ್ಮ ಅಭಿಪ್ರಾಯವನ್ನು ತೆರೆದಿಟ್ಟರು.
ಮುಂದಿನದೆಲ್ಲಾ ಹೂವಿನ ಸರ ಎತ್ತಿದಂತೆ ಆಗಿಹೋಯಿತು. ಶೈಲಜಾ ಮನೆಯವರೆಲ್ಲರ ಅಚ್ಚಮೆಚ್ಚಿನ ಹುಡುಗಿಯಾಗಿಬಿಟ್ಟಳು. ಮಹೇಶನಿಗೆ ಬೆಂಗಳೂರಿನಲ್ಲಿ ಇನ್ನೂ ಒಳ್ಳೆಯ ಕೆಲಸ ಸಿಕ್ಕಿತು. ತಾಯಿಯನ್ನು ಕರೆದುಕೊಂಡು ಹೋದನು. ಗಿರಿಜಾ ನೆಮ್ಮದಿಯ ನಿಟ್ಟುಸಿರು ಬಿಟ್ಟಳು.
ಮದುವೆಯಾದ ಎರಡು ವರುಷಗಳು ಕೆಲಸ ಮಾಡಿದ ಶೈಲಜಾ, ತನಗೆ ಹೊರಗೆ ಕೆಲಸಕ್ಕೆ ಹೋಗುವುದಕ್ಕಿಂತಾ ಮನೆಯ ಉಸ್ತುವಾರಿ ನೋಡಿಕೊಳ್ಳುವುದರಲ್ಲೇ ಹೆಚ್ಚಿನ ಆಸಕ್ತಿ – ಎಂದಾಗ, ಶಿವಲಿಂಗಪ್ಪನವರು –
ನಿನ್ನಿಷ್ಟ ಬಂದಂತೆ ಮಾಡು ಮಗಳೇ, ನೀನು ಈಗ ಕೆಲಸ ಬಿಟ್ಟರೂ, ನಿನ್ನ ಉಳಿತಾಯ, ಮತ್ತು ಬಿಟ್ಟಾಗ ಬರುವ ಹಣವನ್ನೆಲ್ಲಾ ನಿನ್ನ ತಾಯಿ ತಮ್ಮನಿಗೆ ನೀಡಿ, ಬೆಂಗಳೂರಿನಲ್ಲಿ ಅವರೊಂದು ಮನೆಯನ್ನು ಖರೀದಿಸಲು ಸಹಾಯ ಮಾಡು. ಸುಮ್ಮನೆ ತಿಂಗಳು ತಿಂಗಳು ಸಾವಿರಾರು ರೂಪಾಯಿ ಬಾಡಿಗೆ ಕಟ್ಟುವುದು ತಪ್ಪುತ್ತದೆ. ನಿನಗೇನು ಬೇಕಿದ್ದರೂ, ಆಸೆಯಿದ್ದರೂ ಹೇಳು, ನಾವು ತೀರಿಸುತ್ತೇವೆ. ಇಲ್ಲಿರುವುದೆಲ್ಲಾ ನಿಮ್ಮ ಮತ್ತು ಗಿರಿರಾಜ ಇಬ್ಬರದೇ ಅಲ್ಲವಾ? – ಎಂದರು. ಪಾರ್ವತಮ್ಮನವರೂ ಪತಿಯ ಮಾತಿಗೆ ʼಅಹುದಹುದೆʼನ್ನುವಂತೆ ತಲೆ ಹಾಕಿದರು.
ಅವರುಗಳ ಹೃದಯ ವೈಶಾಲ್ಯತೆಗೆ ಶೈಲಜಾ ಮೂಕಳಾಗಿಬಿಟ್ಟಳು. ಮಹೇಶ ಬ್ಯಾಂಕಿನಿಂದ ಲೋನ್ ತೆಗೆದುಕೊಂಡ. ವಾಸವಿರಲು ತಯಾರಿದ್ದ ಒಂದು ಫ್ಲಾಟಿನ ಖರೀದಿಯೂ ಆಯಿತು. ಸರಳವಾಗಿ, ಆದರೆ ಸಂಪ್ರದಾಯಬದ್ಧವಾಗಿ ಗೃಹಪ್ರವೇಶವೂ ನೆರವೇರಿತು.
ಇಂತಹ ಅತ್ತೆ ಮಾವನ್ನು ನಾನು ಎಷ್ಟು ಚಿನ್ನಾಗಿ ನೋಡಿಕೊಂಡರೂ ಸಾಲದು ಎಂದು ಶೈಲಜಾ ಅಂದುಕೊಂಡರೆ, ಮಕ್ಕಳುಗಳು ಸುಸೂತ್ರವಾಗಿ ಬಾಳದಾರಿಯಲ್ಲಿ ಸಾಗುತ್ತಿರುವುದ ಕಂಡು ಗಿರಿಜಾಳು ನೆಮ್ಮದಿಯನ್ನು ಹೊಂದಿದಳು.
ಇತ್ತ ಪಾರ್ವತಮ್ಮ ಮತ್ತು ಕುಟುಂಬದ ಸದಸ್ಯರುಗಳೆಲ್ಲರೂ ಮನೆಗೆ ನೆಚ್ಚಿನ ಸೊಸೆಯಾಗಿ, ಶಿವರಾಜನ ಮನದನ್ನೆಯಯಾಗಿ, ಗಿರಿರಾಜನ ಅಕ್ಕರೆಯ ಅತ್ತಿಗೆಯಾಗಿ ಬಂದ ಶೈಲಜಾಳನ್ನು ಹೂವಿನಂತೆ ನೋಡಿಕೊಳ್ಳುತ್ತಿದ್ದರು.
ಒಳ್ಳೆಯತನವು ಹಾಗೇ ಅಲ್ಲವೇ? ಹಂಚಿದಷ್ಟೂ ಹೆಚ್ಚಾಗುತ್ತದೆ, ಹೆಚ್ಚಾದಷ್ಟೂ ಮನಸ್ಸು ನೆಮ್ಮದಿಯ ನೆಲೆಯಾಗುತ್ತೆ.
೦೦೦೦೦
ಆದರೆ ಪಾರ್ವತಮ್ಮನವರಿಗೆ ಮಾತ್ರ ಎಲ್ಲಿ ನನ್ನ ಕುಟುಂಬಕ್ಕೆ ದೃಷ್ಟಿಯಾಗಿಬಿಡುತ್ತೋ, ಯಾರಿಗೆ ಕರೋನಾ ತಗಲುವುದೋ ಎಂಬ ಭೀತಿ ಕಾಡುತಿತ್ತು.
ಮುಂಚಿನ ದಿನಗಳಲ್ಲಿ ತಮ್ಮ ಭಯ, ಆತಂಕಗಳನ್ನು ಗಂಡ, ಮಕ್ಕಳ ಜೊತೆ ಆಗಾಗ ಹಂಚಿಕೊಳ್ಳುತ್ತಿದ್ದರು. ಈಗಂತೂ ಮನೆಯಲ್ಲಿ ಬಸುರಿ ಹುಡುಗಿ ಇದ್ದಾಳೆ, ನನ್ನ ಭಯ, ಆತಂಕಗಳು ಅವಳ ಧೃತಿಗೆಡಸಬಾರದು ಎಂದು ತಾವೇ ಒಳಗೊಳಗೇ ನವೆಯತೊಡಗಿದರು, ಯಾರ ಎದುರಿಗೂ ಏನೊಂದನ್ನೂ ತೋರಿಸಿಕೊಳ್ಳುತ್ತಿರಲಿಲ್ಲ.
ಮನೆಯವರೆಲ್ಲಾ ಸಧ್ಯ, ಬರಲಿರುವ ಕಂದನಿಗಾಗಿ ಅಮ್ಮ ತಾವು ಟಿವಿ ನೋಡುವುದನ್ನು ಕಮ್ಮಿ ಮಾಡಿದ್ದೂ ಅಲ್ಲದೆ, ತಮ್ಮ ಆತಂಕದಿಂದಲೂ ಹೊರಬಂದರು ಎಂದುಕೊಂಡು ಸ್ವಲ್ಪ ನಿರಾಳರಾದರು.
೦೦೦೦೦
ಇದೇನು ಪಾರ್ವತಕ್ಕಾ, ಮನೆಯಿಂದ ಆಚೀಚೆನೇ ಬರ್ದೇ ಇದ್ದೋರು ಬೆಳಗ್ಗೆ ಬೆಳಗ್ಗೇನೇ ಈ ಕಡೆ ಬಂದು ಬಿಟ್ಟಿದ್ದೀರಿ, ಕೈಯಲ್ಲಿ ಬೇರೆ ಕ್ಯಾನ್ ಮಡಿಕ್ಕೊಂಡಿವ್ರಿ?
ಮಾಸ್ಕ್ ಧರಿಸಿ ತನ್ನ ತೋಟದ ಕಡೆ ಹೊರಟಿದ್ದ ಸಿದ್ದಯ್ಯ, ಊರ ಹೊರಬಾಗದಲ್ಲಿ ಎದುರಿಗೆ ಸಿಕ್ಕ ಮಾರ್ವತಮ್ಮನವರನ್ನು ಕೇಳಿದ.
ಏನಿಲ್ಲ ಸಿದ್ದಯ್ಯ, ನಮ್ಮ ತೋಟದಲ್ಲಿ ಗಿಡಮರಗಳಿಗೆಲ್ಲಾ ಕೆಂಜಿರುವೆ ಬಂದು ಬಿಟ್ಟಿದೆಯಂತೆ, ನಿನ್ನೆ ಕೆಂಚ ಫೋನ್ ಮಾಡಿದ್ದ. ಮನೇಲಿ ಎಲ್ಲಾ ಮಲಗಿದ್ರು. ನಂಗೂ ಕೂತು ಕೂತು ಬೇಜಾರಾಗಿತ್ತು, ಮನೇಲಿ ಪೆಟ್ರೋಲೂನೂ ಬೇಕಾದಷ್ಟು ಇತ್ತು. ಒಂದು ಸುತ್ತು ಹಾಕ್ಕೊಂಡು, ಕೆಂಪಿರುವೆಗೆ ಹಾಕಕ್ಕೆ ಒಂದಷ್ಟು ಪೆಟ್ರೋಲು ಕೊಟ್ಟು ಬರೋಣ ಅಂತ ಹೊಂಟೆ – ಎಂದರು ಪಾರ್ತಮ್ಮ.
ಕೆಂಜಿರುವೆಗೆ ಪೆಟ್ರೋಲ್ಲಾ? – ಆಶ್ಚರ್ಯ ವ್ಯಕ್ತಪಡಿಸಿದ ಸಿದ್ದಯ್ಯ.
ಹುಂ, ಔಷಧಿ ಎಲ್ಲಾ ಮುಗ್ದು ಹೋಗಿದೆಯಂತೆ, ಎಲ್ಲೂ ಸಿಗ್ತಾ ಇಲ್ವಲ್ಲಾ, ಅದುಕ್ಕೆ
ಓ ಹಂಗಾ, ಸರಿ, ಸರಿ – ಮುಂದೆ ಹೋದ ಸಿದ್ದಯ್ಯ. ತಮ್ಮ ತೋಟದ ಕಡೆ ತಿರುಗಿದರು ಪಾರ್ವತಮ್ಮ.
೦೦೦೦೦
ಬುದ್ಧೀ, ಬುದ್ಧೀ ಅನಾಹುತ ಆಗೋಯ್ತು . . . ಓಡಿ ಬಂದ ಕೆಂಚ ಮನೆಯವರನ್ನೆಲ್ಲಾ ತೋಟದ ಮನೆಯೆಡೆಗೆ ಕರೆದೊಯ್ದ.
ಬೆಂಕಿ ಕೆನ್ನಾಲಿಗೆಯನ್ನು ಚಾಚಿ ದಗದಗನೆ ಉರಿಯುತಿತ್ತು.
ಹಿಂದಿನ ದಿನ ತಮ್ಮನ್ನು ಕಾಡಿದ ಮೈಕೈನೋವಿಗೆ, ಬೆಚ್ಛಗಾದ ಶರೀರಕ್ಕೆ ಬೆದರಿದ ಪಾರ್ವತಮ್ಮ “ಶೈಲು ಹೊಟ್ಟೆಯಲ್ಲಿ ಮಗಳಾಗಿ ಮತ್ತೆ ಇದೇ ಮನೆಯಲ್ಲಿ ಹುಟ್ಟಿ ಬರ್ತೀನಿ” ಎಂದು ಚೀಟಿ ಬರೆದಿಟ್ಟು, ತಮ್ಮದೇ ತೋಟಕ್ಕೆ ಹೋಗಿ, ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಎರಡು ಒಣಗಿದ ತೆಂಗಿನ ಗರಿಗಳ ಮೇಲೆ ಮಲಗಿ ಮತ್ತೆರಡು ಒಣಗಿದ ಗರಿಗಳನ್ನು ಮೈಮೇಲೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಬಿಟ್ಟಿದ್ದಾರೆ.
ಕರೋನಾ ಭೀತಿ ಸಂತಸದ ಸಂಸಾರವನ್ನು ಸ್ವಶಾನ ಮಾಡಿಬಿಟ್ಟಿತ್ತು.

ಪದ್ಮಾ ಆನಂದ್, ಮೈಸೂರು

