ಕಾರಿರುಳ ರಾತ್ರಿಯಲಿ ಸಣ್ಣ ಹಣತೆಯ ಬೆಳಕಲ್ಲಿ ಸಾಗಿರುವೆ
ಸಾಗುವ ಹಾದಿ ಸರಿಯಾಗಿದೆಯೋ ಆ ಭಗವಂತನೇ ಬಲ್ಲ
ಆಗಾಗ ಸಿಗುವ ಗುಣಿ ತಗ್ಗುಗಳು
ಕಾಲಿಗೆ ಎಡತಾಕುವ ಎದ್ದ ಕಲ್ಲುಗಳು
ಪ್ರತಿ ಹೆಜ್ಜೆಗೂ ಅವ್ಯಕ್ತ ಭಯ ಆವರಿಸಿದೆ
ಮುಂದಿನ ಪಯಣ ಗೊಂದಲದ ಗೂಡಾಗಿ ಅಸ್ಪಷ್ಟವಾಗಿದೆ
ನೆಚ್ಚಿಕೊಂಡ ದೀಪದ ಬೆಳಕು ಕಾಲ ಮುಂದಿನ ದಾರಿ ಮಾತ್ರ ತೋರಿದೆ
ಮುಂಬರುವ ದಿಣ್ಣೆ ಕುಳಿಗಳ ನೋಡಲು ಪ್ರಕಾಶ ಸಾಕಾಗದೆ ಹೋಗಿದೆ
ಜೀವನದ ಸಾಗುವಿಕೆಯೆಲ್ಲಾ ಹೀಗೆ ಕಳೆದಿರುವೆ
ದಾಟಿ ಬಂದಿರುವ ನಿಲ್ದಾಣಗಳನೆಲ್ಲಾ ಕಣ್ಣ ತುಂಬಿಕೊಂಡಿರುವೆ
ಮೊದಲಾದರೂ ಹೊಳೆಯುವ ಕೈ ಬೆಳಕು ನನ್ನ ಬಳಿ ಎಲ್ಲಿತ್ತು?
ಇದೇ ಪುಟ್ಟ ಹಣತೆ ಬೀಳಿಸದೆ ಇಷ್ಟು ದೂರ ಕರೆದುಕೊಂಡು ಬಂದಿತ್ತು
ಪ್ರಣತಿಯ ನಂಬಿದ ಬದುಕು ಎಡವದೆ ಮುಂದೆ ಸಾಗಲಿ
ಭಗವಂತನ ಕರುಣೆಯೆಂಬ ಎಣ್ಣೆ ಬಳಸಿಕೊಂಡು ಸದಾ ಬೆಳಗುತಿರಲಿ
ಪರಿಶ್ರಮವೆಂಬ ಹತ್ತಿಯಿಂದ ಬತ್ತಿ ಹೊಸೆದಿರುವೆ
ನಿಷ್ಠೆಯೆಂಬ ಕೈಗಳನ್ನು ದೀಪದ ಸುತ್ತ ಆರದಂತೆ ಹಿಡಿದಿರುವೆ
ಅನಾರೋಗ್ಯವೆಂಬ ಗಾಳಿ ಬೀಸಿ ಜೀವನದ ದೀಪವ ಆರಿಸದಿರಲಿ
ಭರವಸೆಯ ಬೆಳಕು ಮೈ ಮನಗಳಲಿ ತುಂಬಿರಲಿ
-ಕೆ.ಎಂ ಶರಣಬಸವೇಶ

