ವ್ಯಕ್ತಿ ಪರಿಚಯ

ಮಿಲರೇಪ : ಸಂತ ಅಪರೂಪ !

Share Button

ಟಿಬೆಟ್ಟಿನ ಸುಪ್ರಸಿದ್ಧ ಯೋಗಿಯೀತ. ಕಾಲಮಾನ ಶಕವರ್ಷ ೧೦೫೨ ರಿಂದ ೧೧೩೫. ‌‘ಕನ್ನಡದ ಜಾನ್ ಡನ್’ ಎಂದೇ ಹೆಸರಾದ ಹೊಸಗನ್ನಡದ ಕವಿ ಎಚ್ ಎಸ್ ಶಿವಪ್ರಕಾಶ್ ಅವರ ‘ಮಿಲರೇಪ ಮತ್ತು ಇತರ ಕವನಗಳು’ ಎಂಬ ಸಂಕಲನದಲ್ಲಿ ಮೊದಲ ಬಾರಿಗೆ ಈತನ ಹೆಸರನ್ನು ಕಂಡಾಗ ತಿಳಿಯುವ ಉಮೇದು ಹೆಚ್ಚಾಯಿತು. ಶುರುವಿನಲ್ಲಿ ಸೇಡು, ಜಿದ್ದು, ಆಕ್ರೋಶಗಳಿಂದ ಕೂಡಿದ್ದ ತರುಣನೊಬ್ಬನು ಕ್ರಮೇಣ ಬುದ್ಧತ್ವದ ದಾರಿ ತುಳಿದ ರೋಚಕತೆ ಮಿಲರೇಪನದು. ಟಿಬೆಟ್ ದೇಶದ ಸಿರಿವಂತ ಕುಟುಂಬದಲ್ಲಿ ಜನಿಸಿದ ಈತನಿಗೆ ತಂದೆಯ ಮರಣಾನಂತರ ಸಂಬಂಧಿಕರಿಂದ ಅನ್ಯಾಯ, ಶೋಷಣೆಗಳಾಗುತ್ತವೆ. ಕುಟುಂಬದ ಆಸ್ತಿಯನ್ನು ಕಸಿದುಕೊಂಡು, ತಾಯಿ ಮಕ್ಕಳನ್ನು ಹೊರ ಹಾಕುತ್ತಾರೆ. ‘ತಮಗೆ ವಿನಾಕಾರಣ ನೋವು ನೀಡಿದವರ ವಿರುದ್ಧ ಹಿಂಸಾತ್ಮಕ ಕ್ರಮ ತೆಗೆದುಕೋ’ ಎಂಬ ತಾಯಿಯ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ಮಿಲರೇಪನು ಮನೆಯನ್ನು ತೊರೆದು, ತಂತ್ರವೇ ಮೊದಲಾದ ಮಾಯಾವಿದ್ಯೆಗಳನ್ನು ಕಲಿತುಕೊಂಡು ಬರುತ್ತಾನೆ. ಸಂಬಂಧಿಕರ ಮದುವೆ ಸಮಾರಂಭ ನಡೆಯುವಾಗ ಆಲಿಕಲ್ಲು ಮಳೆ ಸುರಿಸಿ, ಮನೆಗಳನ್ನು ಕೆಡವಿಸಿ, ನಲವತ್ತಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣನಾಗುತ್ತಾನೆ; ಈ ಮೂಲಕ ಪ್ರತೀಕಾರ ತೀರಿಸಿಕೊಳ್ಳುತ್ತಾನೆ. ಕಷ್ಟಕಾಲದಲ್ಲಿ ತಮ್ಮ ನೆರವಿಗೆ ಬರದೇ ಹೋದ ಊರಿನವರ ಬೆಳೆಗಳನ್ನು ನಾಶ ಮಾಡುತ್ತಾನೆ. ತರುವಾಯ ತನ್ನ ಘೋರಕೃತ್ಯಗಳಿಂದ ಪಶ್ಚಾತ್ತಾಪಗೊಂಡ ಈತನು ಧರ್ಮಮಾರ್ಗದಲ್ಲಿ ನಡೆಯಲು ಮನಸ್ಸು ಮಾಡಿ, ಗುರುವನ್ನು ಹುಡುಕಿಕೊಂಡು ಹೋಗುತ್ತಾನೆ. ಆಗ ಈತನ ಅಂತರಾಳವನ್ನು ಅರಿತು ಹಲವು ಬಗೆಯಲ್ಲಿ ಪರೀಕ್ಷೆ ಮಾಡಿ, ದೀಕ್ಷೆ ನೀಡಿದವರು ‘ಮಾರ್ಪ’ ಎಂಬ ಗುರು. ಮಾರ್ಪರು ಅದಾಗಲೇ ಭಾರತದ ‘ನರೋಪ’ ಎಂಬ ಖ್ಯಾತನಾಮರ ಶಿಷ್ಯರಾಗಿದ್ದು, ಬೌದ್ಧಧರ್ಮದ ವಜ್ರಯಾನ ಪಂಥದ ಕಾಗ್ಯೂ ಪರಂಪರೆಯಲ್ಲಿ ಹೆಸರು ಮಾಡಿದ್ದರು. ಮಿಲರೇಪನನ್ನು ಹಲವು ಕಠಿಣ ಪರೀಕ್ಷೆಗಳಿಗೆ ಒಳಪಡಿಸಿದರು. ಆತನ ಪಾಪಕೃತ್ಯಗಳ ಪ್ರಾಯಶ್ಚಿತ್ತದತ್ತ ಆದ್ಯಗಮನ ಕೊಟ್ಟರು. ಕೊನೆಗೆ ಇವರ ಮಾರ್ಗದರ್ಶನದಲ್ಲಿ ಹಿಮಾಲಯದ ಗುಹೆಗಳಲ್ಲಿ ಏಕಾಂತವಾಗಿದ್ದುಕೊಂಡ ಮಿಲರೇಪರು ಹನ್ನೆರಡು ವರುಷಗಳ ಕಾಲ ಕಠಿಣ ತಪಸ್ಸು ಮಾಡಿ, ಆಧ್ಯಾತ್ಮಿಕ ಸಿದ್ಧಿ ಪಡೆದರು. ಕವಿ ಶಿವಪ್ರಕಾಶರ ಕಲ್ಪನೆಯು ಇಲ್ಲಿಂದ ಶುರುವಾಗುವುದು! ತನ್ನೂರಿಗೆ ಮರಳಿದ ಆತನ ಮುಂದೆ ಈಗ ಎರಡು ದಾರಿಗಳಿವೆ: ಒಂದು ತನ್ನ ತಪಶ್ಶಕ್ತಿಯಿಂದ ಕಾಲವಾದ ತನ್ನ ತಾಯ್ತಂದೆ, ತಂಗಿಯರನ್ನೂ ವಾಸವಿದ್ದ ಮನೆಯನ್ನೂ ಮರಳಿ ನಿರ್ಮಿಸುವುದು; ಇನ್ನೊಂದು ಮತ್ತೆ ಲೌಕಿಕದ ಬಂಧನಕ್ಕೆ ಒಳಗಾಗದೇ ಸಂನ್ಯಾಸಿಯಾಗಿ ಹೊರಟು ಹೋಗುವುದು. ಮಿಲರೇಪರು ಎರಡನೆಯದನ್ನೇ ಆಯ್ಕೆ ಮಾಡಿಕೊಳ್ಳುವರು. ಒಂದು ಪಕ್ಷ ಈತನು ಮೊದಲನೆಯದನ್ನು ಆಯ್ಕೆ ಮಾಡಿಕೊಂಡಿದ್ದರೆ ಕಠಿಣ ತಪಸ್ಸಿಗಾಗಲೀ ಅದರ ಸಿದ್ಧಿಗಾಗಲೀ ಅರ್ಥವೇ ಇರುತ್ತಿರಲಿಲ್ಲ. ಇಡೀ ಕವಿತೆಯು ಬುದ್ಧಚರಿತೆಯನ್ನು ಅನುಸರಿಸುವುದು.

              ಯೌಗಿಕ ಗುರು ಮಾರ್ಪ ಲೋತ್ಸಾವಾರಿಂದ ಅಧ್ಯಾತ್ಮ ಸಿದ್ಧಿ ಪಡೆಯಲು ಸಾಧ್ಯವಾಯಿತು. Every saint has a past and every sinner has a futureಎಂಬ  ಆಸ್ಕರ್‌ ವೈಲ್ಡ್‌ನ ಮಾತಿಗೆ ಈ ಸಂತನೇ ಸಾಕ್ಷಿ. ಟಿಬೆಟಿನಲ್ಲಿ ಹುಟ್ಟಿ ಟಿಬೆಟಿನಲ್ಲೇ ಬೋಧಿಯನ್ನು ಪಡೆದ ಬುದ್ಧರೆಂದು ಮಿಲರೇಪರನ್ನು ಜಗತ್ತು ಕೊಂಡಾಡಿದೆ. ಇವರ ಶಿಷ್ಯ ಗಂಪೋಪ. ಗಂಪೋಪನ ನಾಲ್ವರು ಶಿಷ್ಯರು ನಾಲ್ಕು ಶಾಖೆಗಳನ್ನು ಸ್ಥಾಪಿಸಿದರು. ಬೌದ್ಧಧರ್ಮವು ಭರತಖಂಡದಿಂದ ತನ್ನ ಪೂರ್ವದೇಶಗಳಿಗೆ ವಿಸ್ತರಿಸಿಕೊಳ್ಳುತ್ತಿದ್ದ ಪ್ರಸರಣಕಾಲದಲ್ಲಿ ಮಿಲರೇಪ ಕಾಣಿಸಿಕೊಂಡರು. ಆಗ ಟಿಬೇಟಿನಲ್ಲಿ ಧಾರ್ಮಿಕ ಪುನರುಜ್ಜೀವನ ಕಾಲ. ಮಾರ್ಪರ ಸಮಕಾಲೀನರಾಗಿದ್ದ ಇನ್ನೊಬ್ಬ ಬೌದ್ಧಗುರು ಅತೀಶರು. ಈ ಅತೀಶರ ಸೂತ್ರಗಳನ್ನು ಕುರಿತು ಓಶೋ ರಜನೀಶರು ಹಲವಾರು ವಿಶೇಷೋಪನ್ಯಾಸಗಳ ಸರಣಿಯನ್ನೇ ಕೊಟ್ಟಿದ್ದಾರೆ. ಭಾರತದಿಂದ ತಾಂತ್ರಿಕ ಗ್ರಂಥಗಳನ್ನು ಎರವಲು ಪಡೆದು, ಟಿಬೇಟಿನಲ್ಲಿ ಅನುವಾದಿಸಿ, ಅಲ್ಲಿ ತಂತ್ರವು ಹರಡಲು ಸಹಾಯಕರಾದವರು ಮಿಲರೇಪನ ಗುರು ಮತ್ತವರ ಸಮಕಾಲೀನರಾದ ಅತೀಶರು. ಈ ಅಪರೂಪದ ಸಂತ ಮಿಲರೇಪರ ವಿಶಿಷ್ಟತೆಯೆಂದರೆ, ತಮ್ಮ ಗುರುವಿನೊಂದಿಗೆ ಭಾರತ ಪ್ರವಾಸ ಮಾಡಿದ್ದು.

              ಹದಿನೈದನೇ ಶತಮಾನದಲ್ಲಿದ್ದ ತ್ಸಾಂಗ್‌ನ್ಯೋನ್ ಹೆರುಕಾ ಎಂಬ ಮತ್ತೊಬ್ಬ ಮಹಾನ್ ಯೋಗಿಯು ಅಲ್ಲಿಯವರೆಗೆ ಮಿಲರೇಪರನ್ನು ಕುರಿತು ಹರಡಿಕೊಂಡಿದ್ದ ಜನಪದವನ್ನು ಸಂಗ್ರಹಿಸಿ, ‘ದಿ ಲೈಫ್ ಆಫ್ ಮಿಲರೇಪ’ ಎಂಬ ಪುಸ್ತಕವನ್ನು ಬರೆಯುತ್ತಾರೆ. ಇದು ಮಿಲರೇಪರನ್ನು ಕುರಿತ ಸಂಪೂರ್ಣ ಜೀವನಚಿತ್ರವನ್ನು ನೀಡುವ ಅಧಿಕೃತ ಕೃತಿ. ಇದರಲ್ಲಿ ದಿ ಹಂಡ್ರೆಡ್ ತೌಸಂಡ್ ಸಾಂಗ್ಸ್ ಆಫ್ ಮಿಲರೇಪ ಎಂಬ ಅವರ ಬೋಧನೆಗಳ ಸಾರವೇ ಸಂಗ್ರಹವಾಗಿದೆ. ಟಿಬೆಟ್ಟಿನ ಧರ್ಮ, ಸಂಸ್ಕೃತಿ ಮತ್ತು ಅಲ್ಲಿಯ ಆಧ್ಯಾತ್ಮಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಇದು ಸಹಕಾರಿಯಾಗಿದ್ದು, ಜಗತ್ತಿನ ಹಲವು ಭಾಷೆಗಳಿಗೆ ಅನುವಾದವಾಗಿದೆ.  ಮಿಲರೇಪರ ಆಧ್ಯಾತ್ಮಿಕ ಅನುಭೂತಿಯನ್ನು ಗೀತೆಗಳ ರೂಪದಲ್ಲಿ ಸಂಕಲಿಸಲಾಗಿದೆ. ನಮ್ಮ ಶಿವಶರಣರಾದ ವಚನಕಾರರ ಸಂವಾದರೂಪವಾಗಿರುವ ‘ಶೂನ್ಯಸಂಪಾದನೆ’ಯು ಇಂಥಲ್ಲಿ ನೆನಪಾಗುವುದು. ಹಂಡ್ರೆಡ್ ತೌಸಂಡ್ ಎಂದರೆ ನೂರು ಸಾವಿರ ಅರ್ಥಾತ್ ಒಂದು ಲಕ್ಷ ಹಾಡುಗಳು ಎಂಬ ವಾಚ್ಯಾರ್ಥಕ್ಕಿಂತ ಅಪಾರ ಮತ್ತು ವಿಶಾಲ ಎಂಬರ್ಥವನ್ನು ಮಾಡಬೇಕು. ಮಿಲರೇಪರ ಈ ಗೀತೆಗಳಲ್ಲಿ ಬೌದ್ಧಧರ್ಮದ ಗಹನವಾದ ತತ್ತ್ವ ಸಿದ್ಧಾಂತಗಳನ್ನು ಕಾವ್ಯಾತ್ಮಕ ಪರಿಭಾಷೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಗುಹೆಯೇ ಅರಮನೆಯಾಗಿ, ಏಕಾಂತವೇ ಸಂಗಾತಿಯಾಗಿ, ಧ್ಯಾನವೇ ಆಹಾರವಾಗಿ, ಶೂನ್ಯತೆಯೇ ಸಂಪತ್ತಾಗಿ ನಾನು ನಿರುಮ್ಮಳವಾಗಿದ್ದೇನೆ ಎನ್ನುತ್ತಾರೆ ಮಿಲರೇಪ. ಮನಸೆಂಬುದು ವಿಶಾಲದಾಕಾಶ; ಯೋಚನಾಲೋಚನೆಗಳು ಅಲ್ಲಿ ತೇಲುವ ಮೋಡಗಳು. ಹುಟ್ಟುತ್ತವೆ, ಚಲಿಸುತ್ತವೆ, ಕರಗುತ್ತವೆ, ಆದರೆಂದೂ ಬದಲಾಗದ ಆಗಸ, ಅದು ನಿರ್ಮಲ. ಮೋಡವನೆಂದೂ ಹಿಡಿಯಲು ಹೋಗದಿರು; ಅವುಗಳಿಂದ ದೂರವೂ ಸರಿಯದಿರು. ಅವುಗಳ ಪಾಡಿಗೆ ಬಿಟ್ಟುಬಿಡು; ನೀ ಆಗಸದಂತೆ ಅಚಲವಾಗಿರು! ಆಗ ಮೋಡಗಳು ಆಕಾಶಕ್ಕೆ ಹೇಗೆ ಅಂಟಿಕೊಳ್ಳುವುದಿಲ್ಲವೋ ಹಾಗೆಯೇ ಬಂದು ಹೋಗುವ ಯೋಚನೆಗಳು ನಿನ್ನ ನಿಜ ಸ್ವರೂಪಕೆ ಅಂಟಿಕೊಳ್ಳದು. ಮಿಲರೇಪರು ಹೀಗೆ ಮಾತಾಡುತ್ತಿದ್ದರೆ ಮನುಷ್ಯ ಜೀವನದ ಗೊಂದಲದ ಗೂಡಿಗೆ ನಿಧಾನ ಬೆಳಕು ಪ್ರವೇಶಿಸಿ, ಎಲ್ಲವನೂ ಬಟ್ಟಬಯಲಾಗಿಸುವುದು. ಆಕಾಶ ಮತ್ತು ಮೋಡಗಳ ಪ್ರತೀಕದಿಂದಾಗಿ ಮಿಲರೇಪರ ಮಾತಿಗೆ ಕಾವ್ಯತ್ವ ಪ್ರಾಪ್ತವಾಗುವುದು. ಅವರು ಇನ್ನೂ ಮುಂದುವರೆದು, ಧ್ಯಾನವೆಂದರೆ ಯೋಚನೆಗಳನ್ನು ನಿಲ್ಲಿಸುವುದಲ್ಲ, ಬದಲಾಗಿ ಅವುಗಳೊಂದಿಗೆ ಗುರುತಿಸಿಕೊಳ್ಳದೇ, ಕೇವಲ ಸಾಕ್ಷಿಯಾಗಿ ಗಮನಿಸುವುದು ಎನ್ನುವರು. ಯೋಚನೆಗಳನ್ನು ಹಿಡಿಯ ಹೊರಡುವುದು ಆಸೆ; ದೂರ ತಳ್ಳುವುದೇ ದ್ವೇಷ. ಇವೆರಡೂ ನಮ್ಮ ದುಃಖಕ್ಕೆ ಕಾರಣ. ಅವನ್ನು ಸಹಜ ಸ್ಥಿತಿಯಲ್ಲಿ ಹರಿಯಲು ಬಿಟ್ಟಾಗ, ಅವು ತಾವಾಗಿಯೇ ಕರಗಿ ಹೋಗುವುವು. ಮನದ ನಿಜ ಸ್ವರೂಪವನ್ನರಿತವರಿಗೆ ಯೋಚನೆಗಳು ತೊಂದರೆ ಕೊಡಲಾರವು.

ಅಧ್ಯಾತ್ಮದಲ್ಲಿ ಮೊದಲ ಬಾರಿಗೆ ಸಾಕ್ಷಿತ್ವ ಪರಿಕಲ್ಪನೆಯನ್ನು ಈ ಪ್ರಕಾರವಾಗಿ ಅನ್ವಯಿಸಿ ಮಾತಾಡಿದ್ದು ಮಿಲರೇಪರೇ. ಆ ತರುವಾಯ ಮುಂದೆ ಬಂದ ಜಗತ್ತಿನ ಬಹಳಷ್ಟು ಸಂತರು, ದಾರ್ಶನಿಕರು ಈ ಪ್ರತೀಕವನ್ನು ಮುಂದುವರಿಸಿದರು. ಎಲ್ಲವೂ ಬದಲಾಗುವುದು, ಎಲ್ಲವೂ ನಾಶವಾಗುವುದು; ಈ ಸತ್ಯವನು ಕಂಡ ನಾನು, ಧರ್ಮದ ಹಾದಿ ಹಿಡಿದೆನು ಎಂದು ಒಂದೆಡೆ ಬರೆದುಕೊಂಡಿದ್ದಾರೆ. ಬಹಳ ಮುಖ್ಯವಾಗಿ ಬೌದ್ಧ ಧರ್ಮದ ಮೂಲತತ್ತ್ವವಾದ ಅನಿತ್ಯತೆಯನ್ನು ಹೃದಯಸ್ಪರ್ಶಿಯಾಗಿ ವಿವರಿಸುವರು. ಪ್ರೀತಿಪಾತ್ರ ವ್ಯಕ್ತಿ, ವಸ್ತು ಮತ್ತು ಸಂಬಂಧಗಳು ಸಹ ಶಾಶ್ವತವಲ್ಲ ಎಂಬ ಅರಿವು ಮೂಡಿದಾಗ ಮಾತ್ರ ನಿಜವೈರಾಗ್ಯ ಜನಿಸುವುದು; ಆಗ ನಾವು ಆಧ್ಯಾತ್ಮಿಕರಾಗುತ್ತೇವೆ ಎಂದಿರುವರು.

ಇವರು ತಮ್ಮ ಜೀವಿತದ ಬಹುಭಾಗವನ್ನು ಹಿಮಾಲಯದಲ್ಲಿ ಕಳೆದಿದ್ದರಿಂದ ಇವರ ಗೀತೆಗಳಲ್ಲಿ ಪರ್ವತ, ನದಿ, ಅದರ ಪ್ರತೀಕ ಪ್ರತಿಮೆಗಳು ಪದೇ ಪದೇ ಬಂದಿವೆ. ಧ್ಯಾನದ ಅಚಲತೆಗೆ ಪರ್ವತವನ್ನೂ ಜೀವ ಜೀವನದ ನಿರಂತರ ಹರಿವಿಗೆ ನದಿಯನ್ನೂ ಮನಕ್ಕೆ ಬಂದು ತಾಗುವ ಇಹದ ಯೋಚನಾತರಂಗಗಳನ್ನು ಪ್ರತಿಧ್ವನಿಗೂ ಹೋಲಿಸುವರು. ಕಡಮೆ ತಿನ್ನಿ, ಕಡಮೆ ನಿದ್ರಿಸಿ, ಹೆಚ್ಚು ಧ್ಯಾನಸ್ಥರಾಗಿ ಎಂದೂ ಜನಸಂದಣಿಯನ್ನು ತ್ಯಜಿಸಿ, ಏಕಾಂತವನ್ನು ಪ್ರೀತಿಸಿ; ಏಕೆಂದರೆ ಜಗದ ಮಾತುಕತೆಗಳು ನಮ್ಮ ಮನವನ್ನು ವಿಚಲಿತಗೊಳಿಸುವುವು ಎಂದೂ ಸಂಪತ್ತನ್ನು ಸಂಗ್ರಹಿಸುವುದೆಂದರೆ ಜೇನುನೊಣಗಳು ಜೇನು ಸಂಗ್ರಹಿಸಿದಂತೆ; ಕೊನೆಗೆ ಬೇರೊಬ್ಬರು ಅದನ್ನು ಅನುಭವಿಸುವರು ಎಂದೂ ನೇರವಾಗಿ ತಮ್ಮ ಉಪದೇಶವನ್ನು ನೀಡಿದರು. ಇವರ ಉಪದೇಶದ ಇನ್ನೊಂದು ಲಕ್ಷಣವೆಂದರೆ ಪ್ರಶ್ನೋತ್ತರ ಧಾಟಿ.

ಮಿಲರೇಪರ ಕೆಲವು ಮಾರ್ಮಿಕ ನುಡಿಗಳು ಹೀಗಿವೆ :

  • ನನಗೇನೂ ಬೇಕಾಗಿಲ್ಲ; ನಾನು ಏನನ್ನೂ ಹುಡುಕುವುದಿಲ್ಲ ಮತ್ತು ಏನನ್ನೂ ಬಯಸುವುದಿಲ್ಲ.
  • ಮನದ ಕಳ್ಳಾಟವನು ಕಂಡು ಮನವೇ ನಕ್ಕು ಹಗುರಾಗುವುದು ಈ ಜಗದ ಬಲು ಚೋದ್ಯ. ಹಾಡು ಎಷ್ಟೇ ಸುಶ್ರಾವ್ಯವಾಗಿದ್ದರೂ ಅದರ ಅರ್ಥ ಗೊತ್ತಿಲ್ಲದವರಿಗೆ ಕೇವಲ ನಾದವಷ್ಟೇ.
  • ವಿಷಾದಕ್ಕೆ ಆಸ್ಪದವಿಲ್ಲದಂತೆ ಬದುಕಿ ಸಾಯುವುದೇ ನನ್ನ ಧರ್ಮ. ನಿಮ್ಮ ಹೃದಯ ವಿಹಾರದಲ್ಲಿ ನೂರು ಸಾವಿರ ಬುದ್ಧರ ಮಂದಿರವೇ ಇದೆ. ಕಗ್ಗಾಡಿನಾಚೆ ಇರುವ ಕಡಿದಾದ ಬೆಟ್ಟವೂ ಸಂತೆಯ ಮಾರುಕಟ್ಟೆಯೇ! ಆದರೆ ಅಲ್ಲಿ ಮಾತ್ರ ಜಗದ ಗದ್ದಲಗಳನ್ನು ಅಡವಿಟ್ಟು ಶಾಶ್ವತ ಬೆಳಕನ್ನು ಪಡೆದುಕೊಳ್ಳಬಹುದು.
  • ಜ್ಞಾನೋದಯವಾಗುತ್ತದೆಂಬ ಭರವಸೆಯಿಂದ ಕಾಯಬಾರದು; ಬದುಕಿಡೀ ಅದನ್ನೇ ಆಚರಿಸಬೇಕು

ಪರಮಸತ್ಯವನರಿತ ಮಿಲರೇಪರು ಇನ್ನು ಏನು ತಾನೇ ಹುಡುಕಬೇಕಿದೆ? ಹಾಗಾಗಿ ಅವರು ತನಗೇನೂ ಬೇಕಾಗಿಲ್ಲ ; ನಾನಿನ್ನೇನನ್ನೂ ಹುಡುಕುವುದಿಲ್ಲ ಎನ್ನುವುದು ಸಹಜವಾಗಿಯೇ ಇದೆ. ಬದುಕು ಅರ್ಥವಾದವರಿಗೆ ಮಾತ್ರ; ಅರ್ಥ ಆಗದವರಿಗೆ ಕೇವಲ ತೋರಿಕೆ. ಏಕೆಂದರೆ ಸಂಗೀತವು ಮನವನ್ನು ಪರವಶಗೊಳಿಸಬಹುದು; ಆದರೆ ಅದನ್ನು ಅನುಭವಿಸಬೇಕಾದರೆ ಅರ್ಥೈಸುವ ಶಕ್ತಿ ಹೊಂದಬೇಕು. ಯಾವ ಕರೆಕರೆಯಿಲ್ಲದೇ ಅಪರಾಧಿ ಭಾವ ಇಲ್ಲದೇ ಸಾಯುವುದೇ ಘನತೆ, ಬಹ್ವಂಶ ಅಪರಾಧಿ ಭಾವದಲ್ಲೇ ಸತ್ತವರೇ ಬಹಳ. ಹೃದಯವನ್ನೇ ಮಂದಿರವಾಗಿಸಿಕೊಳ್ಳಬೇಕು; ಮಂದಿರಕ್ಕಾಗಿ ಊರೂರು ಅಲೆಯಬಾರದು ಎನ್ನುವ ಈತ ಲೌಕಿಕ ತೊರೆದು ಜನರಹಿತ ಜಾಗಕ್ಕೆ ಹೋದರೂ ಮನದಲ್ಲಿ ಹೊಯ್ದಾಟವಿದ್ದರೆ ಅದು ಸಹ ನಮ್ಮ ಪಾಲಿಗೆ ಸಂತೆಯೇ ಸರಿ ಎಂದಿರುವರು. ಜ್ಞಾನೋದಯ ಎಂಬುದು ಯಾವಾಗಲೋ ಘಟಿಸುವುದಲ್ಲ; ಅದೇ ಜೀವನವೆಂದು ಬದುಕಬೇಕು ಎನ್ನುವ ಈತನ ಕೊನೆಯ ಮಾತು ಅತ್ಯಂತ ಮನನೀಯ. ಏಕೆಂದರೆ ಈ ಶಬ್ದವು ಕೇವಲ ಫ್ಯಾಶನ್ ಆಗಬಾರದು; ಅದು ಜೀವನದ ಗುರಿಯೂ ಆಗಿರಬೇಕು; ದಾರಿಯೂ ಆಗಿರಬೇಕು ಎಂಬುದೀತನ ಅಭಿಮತ. ಅನುಭಾವವನ್ನು ಕಾವ್ಯವಾಗಿಸುವುದು ಕಷ್ಟದ ಕಸುಬು. ಈ ನಿಟ್ಟಿನಲ್ಲಿ ನಡೆದ ಲಾವೋತ್ಸೆ, ಚಾಂಗ್‌ತ್ಸು, ಅಲ್ಲಮರ ಹಾದಿಯಲ್ಲಿ ನಡೆದವರು ಮಿಲರೇಪರು. ಹಾಗಾಗಿ ಈತ ಅಪರೂಪದ ನಿಜಸಂತ.

ಡಾ. ಹೆಚ್ ಎನ್ ಮಂಜುರಾಜ್,   ಹೊಳೆನರಸೀಪುರ  

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *