ಪೌರಾಣಿಕ ಕತೆ

ಕಾವ್ಯ ಭಾಗವತ 96 : ಶ್ರೀಕೃಷ್ಣ ಪಾಣಿಗ್ರಹಣ ಪರ್ವ

Share Button

ದಶಮಸ್ಕಂದ – ಉತ್ತರಾರ್ಧ -ಅಧ್ಯಾಯ – 9
ಶ್ರೀಕೃಷ್ಣ ಪಾಣಿಗ್ರಹಣ ಪರ್ವ

ದ್ರುಪದ ರಾಜನ ರಾಜಧಾನಿಯಲಿ
ದ್ರೌಪತಿ ದೇವಿಯ ಪರಿಣಯೋತ್ಸವ ಮುಗಿಸಿ
ಇಂದ್ರಪ್ರಸ್ಥ ರಾಜಧಾನಿಗೆ ಬಂದ
ಪಾಂಡವರು ಸಂದರ್ಶನಾರ್ಥವಾಗಿ ಬಂದ
ಶ್ರೀಕೃಷ್ಣನ ಪರಮಸಂತೋಷದಿ ಸ್ವಾಗತಿಸಿದರು

ನೂತನವಾಗಿ ಲಗ್ನವಾಗಿ ಮನೆಗೆ ಬಂದಿದ್ದ
ದ್ರೌಪತಿ ಲಜ್ಜಾವಿಶಿಷ್ಟಳಾಗಿ ಕೃಷ್ಣನಿಗೆ
ಪಾದಾಭಿವಂದನೆ ಮಾಡಿದಳು

ಕೃಷ್ಣ, ಯುದಿಷ್ಠಿರನ ಪ್ರಾರ್ಥನೆಯ ಮನ್ನಿಸಿ
ಮಳೆಗಾಲದಂತ್ಯದವರೆಗೆ
ಇಂದ್ರಪ್ರಸ್ಥದಲ್ಲಿರಲು ಅಭಯವಿತ್ತನು

ಕೃಷ್ಣಾರ್ಜುನರು ವನವಿಹಾರಕ್ಕಾಗಿ ತೆರಳಿ
ಕ್ರೂರಮೃಗಗಳ ಸಂಹರಿಸಿ
ಧರ್ಮರಾಜನಿಗೊಪ್ಪಿಸಿದರು

ಮತ್ತೊಂದು ದಿನ ಬೇಟೆಯಾಡುತ್ತ
ಬಳಲಿ, ಬಾಯಾರಿಕೆಯ ತೀರಿಸಲು
ಯಮುನಾ ತೀರಕಾಗಮಿಸಿ
ಜಲಪಾಲ ಮಾಡಿ ವಿಶ್ರಮಿಸುತಿರೆ
ಸುಂದರ ಸ್ತ್ರೀಯೊಬ್ಬಳ ಸಮೀಪದಲಿ ಕಂಡು
ವಿಚಾರಿಸೆ, ಸವಿತೃದೇವನ ಮಗಳು ಕಾಳಿಂದಿ
ಶ್ರೀ ವಿಷ್ಣುವನ್ನೇ ವರಿಸಿ ಲಗ್ನವಾಗಬೇಕೆಂಬ ಸಂಕಲ್ಪದಿ
ಯಮುನಾತೀರದಿ ವಾಸಿಸುತ
ಅನಾಥರಕ್ಷಕ ಭಗವಂತನ ಪ್ರಸನ್ನತೆಯ
ಅಪೇಕ್ಷಿಸಿ ತಪಸ್ಸು ಮಾಡುತಿಹಳೆಂದು ತಿಳಿದ
ಶ್ರೀಕೃಷ್ಣ ಆಕೆಗೆ ಅಭಯಹಸ್ತ ನೀಡಿ
ಇಂದ್ರಪ್ರಸ್ಥ ರಾಜಧಾನಿಗೆ ಕರೆತಂದನು

ಅರ್ಜುನನಿಂದ ಖಾಂಡವ ವನವ ದಹನ ಮಾಡಿಸಿ
ಸಂತುಷ್ಟ ಅಗ್ನಿದೇವನಿಂದ
ಗಾಂಡೀವ ಧನುಸ್ಸನ್ನೂ
ಅಕ್ಷಯಬಾಣಗಳುಳ್ಳೆರಡು ಬತ್ತಳಿಕೆಗಳನ್ನೂ
ಕೊಡಿಸಿ ಹರಸಿದನು

ವನದಹನ ಕಾಲದಿ ಮಯನೆಂಬ
ಶಿಲ್ಪಿಯು ಆಪತ್ತಿನಿಂದ ರಕ್ಷಿತನಾದ ಸಂತಸದಿ
ಅರ್ಜುನನಿಗೆ ಆಶ್ಚರ್ಯಕರ ಸಭಾಭವನವ
ನಿರ್ಮಿಸಿಕೊಟ್ಟನು

ಮುಂದಿನ ದಿನಗಳಲಿ ಮಹಾಭಾರತ ಸಂಗ್ರಾಮಕೆ
ದುರ್ಯೋಧನ ಆ ಮಯ ನಿರ್ಮಿತ ಭವನದಲಿ
ಅವಮಾನ ಪಟ್ಟುದೇ ಬೀಜರೂಪವೆಂಬುದು
ಕೃಷ್ಣಗೆ ಮಾತ್ರ ತಿಳಿದ ವಿಷಯವಾಗಿತ್ತು

ನಂತರದಿ ಕೃಷ್ಣ ದ್ವಾರಕೆಗೆ ಪಯಣಿಸಿ
ಕಾಳಿಂದಿ ದೇವಿಯನು ವೈಭವದಲಿ
ವಿವಾಹವಾದನು

ನಂತರದಲಿ ಅವಂತೀ ದೇಶದ
ರಾಜನ ಸೋದರಿ ಮಿತ್ರವಿಂದೆ
ಕೃಷ್ಣನಲಿ ಅನುರಾಗಗೊಂಡಿಹ
ವಿಷಯ ತಿಳಿದಲ್ಲಿಗೆ ತೆರಳಿ
ದುರ್ಯೋಧನ ಪಕ್ಷದ
ಆ ರಾಜ ನೋಡುತ್ತಿರುವಂತೆಯೇ
ಅವಳ ಅಪಹರಿಸಿ ಬಂದು
ದ್ವಾರಕೆಯಲಿ ಮಿತ್ರವಿಂದೆಯ ಲಗ್ನವಾದನು

ನಂತರದಿ ಕೋಸಲದೇಶಾಧಿಪತಿ ನಗ್ನಚಿತ್ತನ ಪುತ್ರಿ
ಸತ್ಯಳೆಂಬ ಪರಮಸುಂದರಿಯ ವರಿಸಲು
ಬಹು ಬಲಿಷ್ಠವಾದ ಏಳು ವೃಷಭಗಳ
ಏಕಕಾಲದಿ ಹಿಡಿದು ಬಂಧಿಸಿ
ಪಣದಲಿ ಗೆದ್ದು ಬಳುವಳಿಯಲಿ
ನಗ್ನಚಿತ್ತ ರಾಜನು ನೀಡಿದ
ಹತ್ತುಸಾವಿರ ಧೇನುಗಳ
ಮೂರು ಸಾವಿರ ಮಂದಿ ದಾಸಿಯರ
ನೂರಾರು ರಥ ಆನೆಗಳ ಕುದುರೆಗಳ ಸ್ವೀಕರಿಸಿ
ದ್ವಾರಕೆಗೆ ಬಂದು ವಿವಾಹವಾದನು

ನಂತರದಿ ಕೇಸರರಾಜ ಪುತ್ರಿ ಭದ್ರೆ
ನೀಲಾದೇವಿಯೆಂಬ ಸುಂದರಿ
ಮಧುರಾರಾಜಪುತ್ರಿ
ಲಕ್ಷಣೆಯರನೂ ವರಿಸಿದನು

ಈ ಅಷ್ಟಮಹಾ ಭಾರ್ಯೆಯರಾದ
ಕಾಳಿಂದಿ ಮಿತ್ರವಿಂದೆ ಸತ್ಯೆ ಭದ್ರೆ
ನೀಲಾದೇವಿ ಲಕ್ಷಣೆ ರುಕ್ಮಿಣಿ ಸಾತ್ಯಭಾಮೆಯರಲ್ಲದೆ
ಕೃಷ್ಣ ಪಾಣಿಗ್ರಹಣ ಪರ್ವಕೆ ಕೊನೆಯೆಂಬುದಿಲ್ಲ
ಅವನ ಲೀಲಾವಿನೋದಕೆ
ಕೊನೆಯಿಲ್ಲ ಎಣೆಯಿಲ್ಲ

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
https://surahonne.com/?p=45161

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *