ಪ್ರವಾಸ

ಮಲೇಷ್ಯಾದ ಚೆಂದದ ಅಂದದ ಪ್ರಕೃತಿಯ ನೋಡಿಲ್ಲಿ : ಹೆಜ್ಜೆ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಸಿಂಗಪೂರ್‌ನ ಪ್ರಮುಖ ಪ್ರವಾಸೀ ತಾಣಗಳನ್ನು ನೋಡಿದ ಮೇಲೆ ಅದರ ತಾಯಿಬೇರಾಗಿದ್ದ ಮಲೇಷ್ಯಾ ಕಡೆ ಕೋಚ್‌ನಲ್ಲಿ ಹೊರಟೆವು. ಮಲೇಷ್ಯಾದಲ್ಲಿ ಭಾರತೀಯರಿಗೆ ವೀಸಾ ಬೇಕಿಲ್ಲ ಎಂಬ ಮಾಹಿತಿಯನ್ನು ನಮ್ಮ ಮ್ಯಾನೇಜರ್ ನೀಡಿದರು. ಮಲೇಷ್ಯಾವನ್ನು ಪ್ರವೇಶಿಸುತ್ತಿದ್ದ ಹಾಗೆಯೇ, ಅಕ್ಕಪಕ್ಕದಲ್ಲಿ ಹಚ್ಚಹಸಿರು ಮರಗಿಡಗಳು, ಪಕ್ಷಿಗಳ ಉಲಿತ, ಹೂವಿಂದ ಹೂವಿಗೆ ಹಾರುವ ರಂಗು ರಂಗಿನ ಚಿಟ್ಟೆಗಳು – ಮನಸ್ಸಿಗೆ, ಹೃದಯಕ್ಕೆ ತಂಪು ನೀಡುವ ಪರಿಸರ. ಯಾಕೋ ಏನೋ, ಸಿಂಗಪೂರ್‌ನಲ್ಲಿ ಕಂಡ ಮರಗಿಡಗಳು ಮನಸ್ಸಿಗೆ ಮುದ ನೀಡಿರಲಿಲ್ಲ. ಅಲ್ಲಿ ಗಿಡ ಮರಗಳನ್ನು ಶಿಸ್ತುಬದ್ಧವಾಗಿ ನೆಟ್ಟು, ನೀರುಣಿಸಿ, ಗೊಬ್ಬರ ಹಾಕಿ ಬೆಳೆಸಿದ ಆಕರ್ಷಕ ತೋಟಗಳು. ದಿನನಿತ್ಯ ಒಣಗಿದ ಎಲೆಗಳನ್ನು ಕತ್ತರಿಸಿ ಇಡೀ ಉದ್ಯಾನವನ್ನು ಮದುವಣಗಿತ್ತಿಯಂತೆ ಸಿಂಗರಿಸುವ ತೋಟದ ಮಾಲಿಗಳು. ಎಲ್ಲೆಡೆ ಮಾನವ ನಿರ್ಮಿತ ಜಲಪಾತಗಳು, ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಅರಣ್ಯಗಳು. ಒಮ್ಮೆ ನಾನು ಗಿಡಗಳಲ್ಲಿ ಅರಳಿದ್ದ ಆರ್ಕಿಡ್ ಪುಷ್ಪಗಳನ್ನು ಸಂಭ್ರಮದಿಂದ ಮುಟ್ಟಿನೋಡಿದೆ, ಅದು ಪ್ಲಾಸ್ಟಿಕ್ ಹೂಗುಚ್ಛ ಆಗಿತ್ತು. ಬೆಟ್ಟದಲ್ಲಿ ಅರಳಿದ್ದ ಕೆಂಪು ಗುಲಾಬಿಯನ್ನು ಕೀಳಲು ನೋಡಿದರೆ, ಒಂದು ಹೂಕುಂಡವೇ ಜಾರಿ ಬಿದ್ದಿತ್ತು. ಇಡೀ ಬೆಟ್ಟವನ್ನೇ ಹೂಕುಂಡಗಳಿಂದ ಜೋಡಿಸಿದ್ದಾರೆ ಎಂದರೆ ನೀವು ನಂಬುವಿರಾ? ಯಾವುದು ಕೃತಕ, ಯಾವುದು ನಿಜವಾದ ಹೂಗಿಡ ಎಂದು ಗೊತ್ತಾಗದೇ ಗೊಂದಲ ಉಂಟಾಗಿತ್ತು. ಅಲ್ಲಿ ಪಕ್ಷಿಗಳ ಚಿಲಿಪಿಲಿ ಕೇಳುತ್ತಿರಲಿಲ್ಲ, ಚಿಟ್ಟೆಗಳು ನಮ್ಮ ಕಣ್ಣಿಗಂತೂ ಕಾಣಲಿಲ್ಲ, ಗುಯ್ ಗುಡುವ ಕೀಟಗಳಿರಲಿಲ್ಲ. ಹಾಗಾಗಿ ಮಲೇಷ್ಯಾದ ಸಹಜ ಸೌಂದರ್ಯ ನಮ್ಮನ್ನು ಸ್ವಾಗತಿಸಿತ್ತು. ಇಲ್ಲಿ ಯಾರ ಅಂಕೆಯೂ ಇಲ್ಲದೆ ಬೆಳದಿದ್ದ ಗಿಡಮರಗಳು, ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಪಕ್ಷಿ ಪ್ರಾಣಿಗಳು ನಮಗೆಲ್ಲಾ ಖುಷಿ ನೀಡಿದವು.

ನಮ್ಮ ಮ್ಯಾನೇಜರ್ ಗೊತ್ತು ಮಾಡಿದ್ದ ಗೈಡ್ ಮಲೇಷ್ಯಾದ ಪರಿಚಯವನ್ನು ಮಡಿಸಿದಳು – ‘ಮಲೇಷ್ಯಾದಲ್ಲಿ ಏನುಂಟು ಏನಿಲ್ಲ? ಇಲ್ಲಿ ನಿತ್ಯ ಹರಿದ್ವರ್ಣ ಅರಣ್ಯಗಳಿವೆ, ಜಲಪಾತಗಳಿವೆ, ಎತ್ತರವಾದ ಗಿರಿ ಶಿಖರಗಳಿವೆ, ಪ್ರಶಾಂತವಾದ ಕಡಲತೀರಗಳಿವೆ, ಸುಂದರವಾದ ದ್ವೀಪಗಳಿವೆ. ನೋಡಿ, ನಿಮ್ಮ ಅಕ್ಕ ಪಕ್ಕದಲ್ಲಿರುವ ತಾಳೆ ಮರಗಳನ್ನು, ನಿಮ್ಮ ದೇಶಕ್ಕೆ ಅಮದಾಗುವ ತಾಳೆ ಎಣ್ಣೆಯನ್ನು ನಾವು ರಫ್ತು ಮಾಡುತ್ತೇವೆ. ನಮ್ಮ ನಾಡಿನ ಜನಸಂಖ್ಯೆ ಸುಮಾರು ಮೂವತ್ಮೂರು ಮಿಲಿಯನ್ ಇದೆ. ನಮ್ಮ ದೇಶದ ರಾಜಧಾನಿ ಕೌಲಾ ಲಂಪರ್. ಆದರೆ ನಿಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನಂತೆ ಜನಸಂಖ್ಯೆ ಹೆಚ್ಚಾದಾಗ, ನಮ್ಮ ಆಡಳಿತ ಕೇಂದ್ರವನ್ನು ‘ಪುತ್ರಜಯ’ ಎಂಬ ನಗರಕ್ಕೆ ವರ್ಗಾಯಿಸಿದೆವು. ಈ ನಾಡು ಬಹುಮುಖಿ ಸಂಸ್ಕೃತಿಗಳ ಬೀಡು, ಹಲವು ಜನಾಂಗಗಳು ತಮ್ಮ ಬದುಕು ಕಟ್ಟಿಕೊಂಡಿರುವ ನೆಲೆವೀಡು. ಇಲ್ಲಿ ಮಲಯ್ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ, ಜೊತೆ ಜೊತೆಗೇ ಚೈನೀಸ್, ಭಾರತೀಯರು ಹಾಗೂ ಆದಿವಾಸಿಗಳೂ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಇಲ್ಲಿನ ಅಧಿಕೃತ ಧರ್ಮ – ಇಸ್ಲಾಮ್, ಜೊತೆಯಲ್ಲಿ ಬೌದ್ಧರು, ಹಿಂದೂಗಳು ಹಾಗೂ ಚೈನೀಸ್ ಸಹ ಇದ್ದಾರೆ. ಇವರ ರಾಷ್ಟ್ರೀಯ ಭಾಷೆ ಮಲಯ್ ಆದರೆ ಇವರಾಡುವ ಭಾಷೆ ಇಂಗ್ಲಿಷ್. ಮ್ಯಾಂಡರಿನ್, ತಮಿಳು ಭಾಷೆಯನ್ನು ಮಾತನಾಡುವವರೂ ಸಾಕಷ್ಟು ಮಂದಿ ಇದ್ದಾರೆ.’

ನಮ್ಮ ಗೈಡ್ ತನ್ನ ಮಾತುಗಳನ್ನು ಮುಂದುವರೆಸಿದಳು, ‘ನಮ್ಮ ದೇಶದಲ್ಲಿ ಇರುವ ಪ್ರಮುಖ ಪ್ರವಾಸಿ ತಾಣಗಳು – ವಿಶ್ವದಲ್ಲಿಯೇ ಪ್ರಖ್ಯಾತವಾದ ಪೆಟ್ರೋನಾಸ್ ಅವಳಿ ಗೋಪುರಗಳು, ಕೆ.ಎಲ್. ಟವರ್, ನಮ್ಮ ನಾಡಿನ ಸ್ವಾತಂತ್ರ್ಯ ಘೋಷಣೆಯಾದ ಸ್ಥಳ ಮರ್ಡೇಕಾ ಸ್ಕ್ವೇರ್ , ಹಿಂದೂ ಧಾರ್ಮಿಕ ಕ್ಷೇತ್ರವಾದ ಬಟು ಗುಹೆಗಳು, ೧,೮೦೦ ಮೀಟರ್ ಎತ್ತರದಲ್ಲಿರುವ ಗಿರಿಧಾಮ ಗೆಂಟಿಂಗ್ ಹೈಲ್ಯಾಂಡ್, ವಕ್ರವಾದ ಸೇತುವೆ ಇರುವ ಲಂಕಾವಿ ದ್ವೀಪ, ಯುನೆಸ್ಕೋ ಪಾರಂಪರಿಕ ತಾಣವಾದ ಪೆನಾಂಗ್, ಚಹಾ ತೋಟಗಳ ಬೀಡಾದ ಕ್ಯಾಮರೂನ್ ಹೈಲ್ಯಾಂಡ್ಸ್, ಐತಿಹಾಸಿಕ ಸ್ಥಳವಾದ ಮಲಕ್ಕಾ ನಗರ ಇತ್ಯಾದಿ.

ನಮ್ಮ ಪ್ರವಾಸಿ ಗೈಡ್‌ನ ಮಾತುಗಳನ್ನು ಕೇಳುತ್ತಾ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ನಾವು ಮಲೇಷ್ಯಾ ತಲುಪಿದಾಗ ಸಂಜೆಯಾಗಿತ್ತು, ಭವ್ಯವಾದ ಪೆಟ್ರೋನಾ ಅವಳಿ ಗೋಪುರಗಳ ಮುಂದೆ ನಿಂತಿದ್ದೆವು.

ಅಬ್ಬಾ, ವಿಶ್ವದಲ್ಲಿಯೇ ಅತ್ಯಂತ ಎತ್ತರವಾದ ಅವಳಿ ಗೋಪುರಗಳು. ಈ ಗೋಪುರಗಳ ಎತ್ತರ 1482 ಅಡಿಗಳು. ಇಲ್ಲಿ ಎಷ್ಟು ಅಂತಸ್ತುಗಳು ಇವೆ ಎಂದು ಎಣಿಸಿ ನೋಡೋಣ ಬನ್ನಿ – 88 ಮಹಡಿಗಳು. ಈ ಗೋಪುರಗಳ ಮಧ್ಯೆ ಸುಮಾರು 170 ಮೀಟರ್ ಎತ್ತರದಲ್ಲಿ 41 ಮತ್ತು 42 ಮಹಡಿಗಳ ಮಧ್ಯೆ ಎರಡು ತೂಗು ಸೇತುವೆಗಳು ಇದ್ದು, ಇವುಗಳಿಗೆ ‘ಸ್ಕೈ ಬ್ರಿಡ್ಜ್’ ಎಂದು ಹೆಸರಿಸಲಾಗಿದೆ. ಈ ಸೇತುವೆಗಳನ್ನು ಅವಳಿ ಗೋಪುರಗಳಿಗೆ ಕಾಂಕ್ರೀಟ್ ಹಾಕಿ ಜೋಡಿಸಿದಂತಿಲ್ಲ, ಕಾರಣ ಜೋರಾಗಿ ಬೀಸುವ ಬಿರುಗಾಳಿಗೆ ಸಿಕ್ಕು ಈ ಸೇತುವೆಗಳು ಹೊಯ್ದಾಡಿದಾಗ ಈ ಗೋಪುರಗಳಿಗೆ ಹಾನಿಯಾಗದಿರಲೆಂದು. ಪೆಟ್ರೋನಾ ಅವಳಿ ಗೋಪುರಗಳ ಹಿನ್ನೆಲೆ ತಿಳಿಸಲು ನಮ್ಮ ಗೈಡ್ ಸಿದ್ಧರಾಗಿದ್ರು, ‘ಪೆಟ್ರೋಲಿಯಂ ಸಂಸ್ಥೆಯ ಆಫೀಸುಗಳು ಇಲ್ಲಿರುವುದರಿಂದ ಈ ಅವಳಿ ಗೋಪುರಗಳಿಗೆ ಪೆಟ್ರೋನಾಸ್ ಎಂಬ ಹೆಸರು. ಇತ್ತೀಚೆಗೆ ಹಲವು ದೇಶಗಳಲ್ಲಿ ಇದಕ್ಕಿಂತ ಎತ್ತರವಾದ ಗೋಪುರಗಳನ್ನು ನಿರ್ಮಾಣ ಮಾಡಲಾಗಿದೆ. 1998 ರಿಂದ 2004 ರ ಅವಧಿಯಲ್ಲಿ ಪೆಟ್ರೋನಾಸ್ ಅವಳಿ ಗೋಪುರಗಳು ವಿಶ್ವದಾದ್ಯಂತ ಸದ್ದು ಮಾಡಿದ್ದವು. ಈಗ ದುಬೈ, ಸಿಂಗಪೂರ್, ಅಮೆರಿಕ ಮುಂತಾದ ರಾಷ್ಟçಗಳಲ್ಲಿ ಇಂತಹ ಒಂಟಿಯಾದ ಗೋಪುರಗಳನ್ನು ನಿರ್ಮಿಸಲಾಗಿದೆ. ಇದರ ಕತೃ ಅರ್ಜೆಂಟೀನಾದ ವಾಸ್ತುಶಿಲ್ಪಿ ಸೀಸರ್ ಪೆಲ್ಲಿ. ಈ ಗೋಪುರಗಳು ಇಸ್ಲಾಮಿಕ್ ವಾಸ್ತುಶಿಲ್ಪವನ್ನು ಬಿಂಬಿಸುವಂತಿದ್ದು ಎಂಟು ಕೋನಗಳ ನಕ್ಷತ್ರದ ಆಕಾರದಲ್ಲಿದೆ. ಈ ನಕ್ಷತ್ರಾಕಾರವು ಏಕತೆ, ಸಾಮರಸ್ಯ ಹಾಗೂ ಸ್ಥಿರತೆಯ ಸಂಕೇತವಾಗಿದ್ದು ಈ ನಾಡಿನ ರೂಪಕವಾಗಿ ನಿಂತಿದೆ. ಈ ಅವಳಿ ಗೋಪುರಗಳನ್ನು ಉಕ್ಕು ಮತ್ತು ಗಾಜಿನಿಂದ ನಿರ್ಮಿಸಲಾಗಿದೆ. ಕೆಳ ಅಂತಸ್ತಿನಲ್ಲಿ ಕೆ.ಎಲ್.ಸಿ.ಸಿ.ಯ ಬೃಹತ್ ಶಾಪಿಂಗ್ ಮಾಲ್ ಇದೆ. 87 ನೇ ಮಹಡಿಯಲ್ಲಿ ಪ್ರವಾಸಿಗರಿಗಾಗಿ ವೀಕ್ಷಣಾ ವೇದಿಕೆ ಇದೆ. ಪೆಟ್ರೋನಾಸ್ ಅವಳಿ ಗೋಪುರಗಳು ಮಲೇಷ್ಯಾದ ಆರ್ಥಿಕ ಸಮೃದ್ಧಿ ಹಾಗೂ ಆಧುನಿಕತೆಯ ಪ್ರತೀಕ.’

ನಮ್ಮ ಗೈಡ್ ಹೇಳುತ್ತಿದ್ದ ಮಾಹಿತಿಯನ್ನು ಕೇಳುತ್ತಾ ನಾವೆಲ್ಲಾ ಆ ಎತ್ತರವಾದ ಅವಳಿ ಗೋಪುರಗಳ ಮುಂದೆ ನಿಂತು ಫೋಟೋ ಕ್ಲಿಕ್ಕಿಸುತ್ತಿದ್ದೆವು. ಅಷ್ಟು ಎತ್ತರವಾದ ಗೋಪುರಗಳನ್ನು ನಮ್ಮ ಪುಟ್ಟದಾದ ಮೊಬೈಲಿನಲ್ಲಿ ಕ್ಲಿಕ್ಕಿಸಲು ಹರಸಾಹಸ ಪಡುತ್ತಿದ್ದೆವು. ಕೊನೆಗೆ ಅಲ್ಲಿಗೆ ಬಂದ ಫೋಟೋಗ್ರಾಫರ್ ಬಳಿ ಹಣ ಕೊಟ್ಟು ಫೋಟೋ ತೆಗೆಸಿಕೊಂಡೆವು. ಇರುಳು ಕವಿಯುತ್ತಿದ್ದಂತೆ ಪೆಟ್ರೋನಾಸ್ ಗೋಪುರಗಳ ದೀಪಾಲಂಕಾರ ಎಲ್ಲರ ಮನ ಸೂರೆಗೊಂಡಿತ್ತು. ಆಗ ಅಲ್ಲಿಗೆ ಬಂದ ತಾಯಿ ಮಗಳಿಬ್ಬರು ಮೊಬೈಲಿನಲ್ಲಿ ತಮ್ಮ ಫೋಟೋ ತೆಗೆಯಬೇಕೆಂದು ಕೇಳಿದರು. ನಾನು ವಿವಿಧ ಭಂಗಿಗಳಲ್ಲಿ ಅವರ ಫೋಟೋ ತೆಗೆದಾದ ಮೇಲೆ, ‘ನಮಗೆ ಸ್ಕೈ ಬ್ರಿಡ್ಜ್ಗೆ ಹೋಗಲು ಟಿಕೆಟ್ ಸಿಗಲಿಲ್ಲ, ನಿಮಗೆ ಟಿಕೆಟ್ ಸಿಕ್ಕಿತಾ ಎಂದು ಕೇಳಿದೆ.’ ಅವರು, ‘ಹೌದು ನಾವು ಆನ್‌ಲೈನ್‌ನಲ್ಲಿ ಮೊದಲೇ ಟಿಕೆಟ್ ಕೊಂಡಿದ್ದೆವು’ ಎಂದು ಹೇಳುತ್ತಾ ಅಲ್ಲಿ ತೆಗೆದಿದ್ದ ವಿಡಿಯೋ ತೋರಿಸಿದರು. ಅವರ ಮಾತುಗಳಲ್ಲಿಯೇ ಅವರ ಅನುಭವ ಕೇಳೋಣ ಬನ್ನಿ – ನಾವು ಮೊದಲು ನೆಲಮಾಳಿಗೆಗೆ ಹೋದೆವು.. ಅಲ್ಲಿ ಪ್ರವಾಸಿಗರನ್ನು ತಂಡಗಳನ್ನಾಗಿ ಮಾಡಿ ಒಂದೊಂದು ಬಣ್ಣದ ಸ್ಟಿಕರ್ ಕೊಡುವರು. ನಮಗೆ ಹಳದಿ ಬಣ್ಣದ ಸ್ಟಿಕರ್ ಕೊಡಲಾಗಿತ್ತು. ನಮ್ಮ ತಂಡದವರನ್ನೆಲ್ಲಾ ಒಟ್ಟಿಗೆ ಲಿಫ್ಟ್ ನಲ್ಲಿ 41 ನೇ ಮಹಡಿಗೆ ಕರೆದೊಯ್ದರು. ಅಲ್ಲಿರುವ ಸ್ಕೈ ಬ್ರಿಡ್ಜ್ ಮೇಲೆ ಸಾಗುತ್ತಾ ಸುತ್ತಲೂ ಇದ್ದ ಗಾಜಿನ ಕಿಟಿಕಿಗಳ ಮೂಲಕ ಕೌಲಾಲಂಪರ್ ನಗರದ ದೃಶ್ಯವನ್ನು ಕಣ್ತುಂಬಿಕೊಂಡೆವು. ಇಡೀ ನಗರವು ಗಲಿವರ್‌ಗೆ ಲಿಲಿಪುಟಿನ್ನಿಯರ ವಾಸಸ್ಥಳ ಕಂಡಂತೆ ನಮಗೆ ಭಾಸವಾಯಿತು. ನಾವು ಅಲ್ಲಿಗೆ ಹೋದಾಗ ಭೋರೆಂದು ಮಳೆ ಬಂದದ್ದರಿಂದ ಎಲ್ಲವೂ ಮಸುಕು ಮಸುಕಾಗಿ ಕಂಡು ಬಂತು. ಅಷ್ಟರಲ್ಲಿ ನಮ್ಮ ಗುಂಪಿನ ಲೀಡರ್, ವೀಕ್ಷಣೆಯ ಸಮಯ ಮುಗಿಯಿತೆಂದು ಸೂಚಿಸಲು ಜೋರಾದ ವಿಸಲ್ ಊದಿದರು, ನಮಗೆ ಕೇವಲ ಹತ್ತು ನಿಮಿಷಗಳ ಕಾಲಾವಕಾಶ ನೀಡಿದ್ದರು.’ ‘42 ನೇ ಸ್ಕೈ ಬ್ರಿಡ್ಜ್ ಮೇಲೆ ನೀವು ಹೋಗಲಿಲ್ವಾ?’ ಎಂದು ನಾನು ಕೇಳಿದಾಗ, ಅವರ ಉತ್ತರ, ‘ಇಲ್ಲಾ, ಅದು ಕೇವಲ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಓಡಾಟಕ್ಕೆ ಮಾತ್ರ ಸೀಮಿತ. ಮುಂದೆ ನಮ್ಮನ್ನೆಲ್ಲಾ ಸ್ಕೈ ಡೆಕ್ ಇರುವ 86 ನೇ ಮಹಡಿಗೆ ಲಿಫ್ಟ್ ಮೂಲಕ ಕರೆದೊಯ್ದರು. ಆ ಸ್ಕೈ ಡೆಕ್ ಅಂತೂ ಮೋಡಗಳ ಮೇಲೆ ಸವಾರಿ ಮಾಡುವಂತಿತ್ತು. ಬಹುಶಃ ದೇವಾನುದೇವತೆಗಳು, ಯಕ್ಷರೂ ಕಿನ್ನರರೂ ಹೀಗೆ ಮೋಡಗಳ ಮೇಲೆ ಸವಾರಿ ಮಾಡುತ್ತಿದ್ದರೇನೋ. ಜನರೆಲ್ಲಾ ಚುಕ್ಕಿಗಳ ಹಾಗೆ, ಅವರ ಮನೆಗಳು, ಕಾರು, ಟ್ರಾಮ್‌ಗಳು ಬೆಂಕಿಪೊಟ್ಟಣಗಳ ಹಾಗೆ ಕಾಣುತ್ತಿದ್ದವು. ಅಲ್ಲಿ ಕಾಫಿ ಶಾಪ್‌ಗಳು, ಸೊವೆನೇರ್ ಅಂಗಡಿಗಳೂ ಇದ್ದವು.’ ತಾಯಿ ಮಗಳಿಬ್ಬರೂ ತಾವು ಕೊಂಡ ಟೀಶರ್ಟ್ ಗಳನ್ನು ಹೆಮ್ಮೆಯಿಂದ ತೋರಿಸಿದರು. ಆ ಶರ್ಟ್ಗಳ ಮೆಲೆ ಪೆಟ್ರೋನಾಸ್ ಅವಳಿ ಗೋಪುರಗಳ ಚಿತ್ರವಿತ್ತೆಂದು ಹೇಳುವುದೇ ಬೇಡ ಅಲ್ಲವೇ?

ನಾನು ಅವರ ವಿಡಿಯೋ ನೋಡಿ, ಮಾತುಗಳನ್ನು ಕೇಳಿ, ಅವರಿಗೆ ಬೈ ಹೇಳಿ ನಮ್ಮ ಗುಂಪಿನತ್ತ ಹೊರಟೆ. ಅಷ್ಟರಲ್ಲಿ ಬಣ್ಣ ಬಣ್ಣದ ಸಂಗೀತದ ಕಾರಂಜಿ ಮೇಲೆ ಮೇಲೆ ಪುಟಿಯತೊಡಗಿತ್ತು. ಸಂಗೀತಗಾರರು ವಾದ್ಯ ನುಡಿಸುತ್ತಿದ್ದ ಹಾಗೆಯೇ ನೀರಿನ ಚಿಲುಮೆ ಸಂಗೀತದ ಅಲೆಗಳಿಗೆ ತಕ್ಕಂತೆ ನರ್ತಿಸತೊಡಗಿತ್ತು. ಪ್ರವಾಸಿಗರೆಲ್ಲಾ ಅಲ್ಲಿದ್ದ ಮೆಟ್ಟಿಲುಗಳ ಮೇಲೆ ಕುಳಿತು ಈ ಸುಂದರವಾದ ದೃಶ್ಯವನ್ನು ಸವಿಯತೊಡಗಿದ್ದರು. ಎಲ್ಲರ ಕೈಲಿದ್ದ ಮೊಬೈಲು ಚುರುಕಾಗಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿತ್ತು. ಎಷ್ಟು ಬಾರಿ ಈ ಸಂಗೀತ ಕಾರಂಜಿಯನ್ನು ನೋಡಿದರೂ ಮತ್ತೆ ಮತ್ತೆ ನೋಡುವ ತವಕ ಎಲ್ಲರಿಗೂ. ಅಂದಿನ ನಮ್ಮ ಕಾರ್ಯಕ್ರಮ ಸಂಗೀತ ಕಾರಂಜಿಯೊಂದಿಗೆ ಸಂಪನ್ನವಾಗಿತ್ತು. ಎಲ್ಲರೂ ನಮ್ಮ ಪ್ರವಾಸಿ ತಂಡದ ಮ್ಯಾನೇಜರ್‌ರವರೊಂದಿಗೆ ನಮ್ಮ ಹೊಟೇಲ್ ಸೇರಿದೆವು. ಮಲೇಷ್ಯಾದ ಸುಂದರ ದೃಶ್ಯಗಳು ನಮ್ಮ ಕಣ್ಮುಂದೆ ಹಾದು ಹೋಗುತ್ತಿದ್ದವು.

(ಮುಂದುವರೆಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ :  https://surahonne.com/?p=45166

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *