ಲಹರಿ

ಒಂದು ಕಪ್ ಚಹಾದ ಕತೆ

Share Button

ಪ್ರತಿಯೊಬ್ಬರ ದೈನಂದಿನ ಬದುಕಿನಲ್ಲಿ ಚಹಾ ಮಹತ್ವದ ಸ್ಥಾನವನ್ನು ಪಡೆದಿದೆ. ಅನೇಕರ ದಿನಚರಿ ಆರಂಭವಾಗುವುದೇ ಒಂದು ಕಪ್ ಬಿಸಿ ಬಿಸಿ ಚಹಾದೊಂದಿಗೆ ಎಂದರೆ ತಪ್ಪಾಗಲಾರದು. ಒಂದು ಕಪ್ ಚಹಾ ಕ್ಷಣಾರ್ಧದಲ್ಲಿ ಮನಸ್ಸನ್ನು ಹಗುರಗೊಳಿಸಬಹುದು ಎಂಬುದು ಎಷ್ಟು ಸತ್ಯವೋ, ಅಷ್ಟೇ ಸುಂದರವಾದ ಸಂಗತಿ. ಇದೇ ಒಂದು ಕಪ್ ಚಹಾದಲ್ಲಿ ಅದೆಷ್ಟು ಮಾತುಕತೆಗಳು ನಡೆಯುತ್ತವೆ ಎಂಬುದು ಕೆಲವೊಮ್ಮೆ ಆಶ್ಚರ್ಯ ಉಂಟು ಮಾಡುತ್ತದೆ. ಮನೆಗೆ ಅತಿಥಿಗಳು ಬಂದಾಗ ಮೊದಲು ನೀಡುವುದೇ ಚಹಾ. ಬಿಸಿ ಚಹಾ ನಿಧಾನವಾಗಿ ಕುಡಿಯುತ್ತಿದ್ದಂತೆ, ಸಂಬಂಧಗಳೂ ನಿಧಾನವಾಗಿ ಗಾಢವಾಗುತ್ತಾ ಹೋಗುತ್ತದೆ. ಬೆಳಗಿನ ಮಾತುಕತೆಗಳಿಂದ ಹಿಡಿದು ರಾತ್ರಿಯ ನೀರವ ಮೌನ ಚಿಂತನೆಗಳಲ್ಲಿ ಚಹಾ ನಮ್ಮ ನಿಶ್ಯಬ್ಧ ಸಂಗಾತಿಯಾಗಿರುತ್ತದೆ. ಚಹಾ ಕುಡಿದಾಗ, ಮನಸ್ಸಿನ ಚಿಂತೆ ದೂರವಾಗಿ, ದೇಹದ ದಣಿವೂ ಮಾಯವಾಗಿ ನವ ಚೈತನ್ಯ ಮೂಡುವುದು. ತಲೆನೋವಿದ್ದಾಗ ಒಂದು ಕಪ್ ಸ್ಟ್ರಾಂಗ್ ಟೀ ಕುಡಿದರೆ ಸಾಕು. ತಕ್ಷಣ ಮಾಯ. ದೂರವಾದ ಸಂಬಂಧಗಳನ್ನು ಮತ್ತೆ ಜೋಡಿಸುವ ಶಕ್ತಿ ಈ ಚಹಾಕ್ಕೆ ಇದೆ. ಮರೆಯಲಾಗದ ನೆನಪುಗಳನ್ನು ಸೃಷ್ಟಿಸುವ ಸಾಮರ್ಥ್ಯವೂ ಇದೆ. ನೋವು, ನಗು. ಮೌನ, ಖಿನ್ನತೆ ಹಾಗೂ ಏಕಾಂತದಲ್ಲಿ ಚಹಾ ನಮ್ಮ ಅತ್ಯುತ್ತಮ ಸಂಗಾತಿ. ಕುದಿಯುತ್ತಿರುವ ಚಹಾದ ಸುವಾಸನೆ ಹಳೆಯ ನೆನಪುಗಳನ್ನು ಜ್ಞಾಪಿಸುತ್ತದೆ. ಅನೇಕ ಕವಿಗಳು, ಲೇಖಕರು ತಮ್ಮ ಕೃತಿಯಲ್ಲಿ ಚಹಾವನ್ನು ಸ್ನೇಹ, ಪ್ರೀತಿ ಹಾಗೂ ನೆನಪಿನ ಸಂಕೇತವಾಗಿರಿಸಿದ್ದಾರೆ. ಅಲ್ಲದೆ ಜಿಟಿ ಜಿಟಿ ಮಳೆ, ಬಿಸಿ ಬಿಸಿ ಚಹಾ, ರಾತ್ರಿಯ ನೀರವತೆ, ಏಕಾಂತತೆ ಇವೆಲ್ಲವೂ ಚಹಾದ ಮಹತ್ವವನ್ನು ಸಾರುತ್ತದೆ.

ಚಹಾದ ಮೂಲವು ಸಾವಿರಾರು ವರ್ಷಗಳ ಹಿಂದೆ ಚೈನಾ ದೇಶದಲ್ಲಿ ಆರಂಭವಾಯಿತೆಂದು ಓದಿದ ನೆನಪು. ಒಂದು ಕಾಲದಲ್ಲಿ ಔಷಧ ರೂಪದಲ್ಲಿ ಬಳಸಲಾಗುತ್ತಿದ್ದ ಈ ಪಾನೀಯವು ಮುಂದೆ ನಿಧಾನವಾಗಿ ದಿನನಿತ್ಯದ ಪೇಯವಾಗಿ ಜನಪ್ರಿಯವಾಯಿತೆಂದು ನಂಬಲಾಗುತ್ತಿದೆ. ಭಾರತದಲ್ಲಿ ಅಸ್ಸಾಂ ಮತ್ತು ಡಾರ್ಜಲಿಂಗ್ ಪ್ರದೇಶಗಳಲ್ಲಿ ಹೆಚ್ಚಾಗಿ ಚಹಾ ತೋಟಗಳನ್ನು ಕಾಣಬಹುದು ಭಾರತದ ಆರ್ಥಿಕತೆಯಲ್ಲೂ ಪ್ರಮುಖ ಪಾತ್ರ ವಹಿಸಿರುವ ಭಾರತೀಯ ಚಹಾ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ.

ಬಹಳಷ್ಟು ಜನರಿಗೆ ಬೆಳಗ್ಗಿನ ಹೊತ್ತು ಪತ್ರಿಕೆಯ ಜೊತೆಗೆ ಒಂದು ಕಪ್ ಚಹಾ ಖುಷಿಯ ಕ್ಷಣಗಳಲ್ಲೊಂದು. ತುಸು ಚಹಾ ಸಿಕ್ಕರೆ ಸಾಕು, ದಿನವಿಡೀ ಚೈತನ್ಯದ ಚಿಲುಮೆಯಾಗುತ್ತಾರೆ. ಬೆಳಿಗ್ಗೆ ಎದ್ದ ಕೂಡಲೇ, ಊಟ, ತಿಂಡಿ ಮುಗಿದ ಬಳಿಕ ಟೀ ಕುಡಿಯುವ ಅಭ್ಯಾಸ ಅನೇಕರಿಗಿರುತ್ತದೆ. ಕೆಲವರಂತೂ ಕೆಲಸ ಮಾಡುವಾಗ ಆಗಾಗ್ಗೆ ಟೀ ಬ್ರೇಕ್ ತೆಗೆದುಕೊಳ್ಳುತ್ತಲೇ ಇರುತ್ತಾರೆ. ದಕ್ಷಿಣ ಭಾರತದಲ್ಲಿ ಸಾಮಾನ್ಯ ಟೀ ಹೆಚ್ಚು ಪ್ರಚಲಿತದಲ್ಲಿದ್ದರೆ, ಉತ್ತರ ಭಾರತದಲ್ಲಿ ಶುಂಠಿ, ಮಸಲಾ ಚಹಾಕ್ಕೆ ಅತ್ಯಂತ ಬೇಡಿಕೆ ಇದೆ. ಅಲ್ಲಿನ ಜನರು ಮಸಾಲ ಟೀಯನ್ನು ಹೆಚ್ಚು ಇಷ್ಟ ಪಡುತ್ತಾರೆ. ನಾನು ಮೊದಲ ಬಾರಿ ಶುಂಠಿ ಚಹವನ್ನು ಸವಿದದ್ದು, ಡೆಲ್ಲಿಯಲ್ಲಿ. ಮಗಳ ಮದುವೆಯ ಸಮಯದಲ್ಲಿ ಜಿಂಜರ್ ಟಿ ಕುಡಿಯುವ ಸುಯೋಗ ದೊರಕಿತ್ತು. ಮೊದಲು ಸ್ವಲ್ಪ ಖಾರ ಅನಿಸಿದರೂ ರುಚಿಯಾಗಿತ್ತು. ಅದರ ಸವಿಯೇ ವಿಭಿನ್ನ.

‘ಚಾಯ್ ಪೇ ಚರ್ಚಾ’ ಎಂಬ ಘೋಷ ವಾಕ್ಯವು ಚಹಾಕ್ಕೆ ಹೊಸ ಅರ್ಥವನ್ನೇ ನೀಡಿತಲ್ಲದೇ, ಚಹಾದ ಜೊತೆ ನಡೆಯುವ ಮಾತುಕತೆ, ಸಭೆಗಳು, ಸಂಭಾಷಣೆಗಳು ಅನೇಕ ಹೊಸ ಆಲೋಚನೆಗಳಿಗೆ, ವಿಚಾರಗಳಿಗೆ ಮುಕ್ತ ವೇದಿಕೆಯನ್ನು ಒದಗಿಸಿಕೊಟ್ಟಿತು. ಯುವಕರು ತಮ್ಮ ಕನಸುಗಳು ಮತ್ತು ಅಭಿವೃದ್ಧಿಯ ವಿಚಾರಗಳನ್ನು ಎಲ್ಲರ ಜತೆಗೂಡಿ, ಚಹಾದೊಂದಿಗೆ ಒಂದೆಡೆ ಕುಳಿತು ಮುಕ್ತವಾಗಿ ಚರ್ಚಿಸುವ ಈ ಪರಿಕಲ್ಪನೆ ಬಹಳಷ್ಟು ಜನಪ್ರಿಯತೆಯನ್ನು ಪಡೆಯಿತು. ಚಾ ಎಂಬುದು ಕೇವಲ ಮನೆಯಲ್ಲಿ ಕುಡಿಯುವ ಪಾನೀಯವಲ್ಲದೆ, ಬೇರೆ ಬೇರೆ ಪ್ರದೇಶದ ಜನರನ್ನು ಒಗ್ಗೂಡಿಸುವ ಸೇತುವೆಯಾಯಿತು ಎಂದೇ ಹೇಳಬಹುದು.

ಇನ್ನು ‘ಬೈಟು ಚಾ’ ಎಂಬ ಹಂಚಿಕೊಂಡು ಕುಡಿಯುವ ಜನಪ್ರಿಯ ಚಹಾವು ಟೀ ಸಂಸ್ಕೃತಿಯು ವಿಶಿಷ್ಟ ಭಾಗವಾಗಿದೆ. ಒಂದು ಲೋಟ ಚಹಾವನ್ನು ಇಬ್ಬರು ಹಂಚಿಕೊಂಡು ಕುಡಿಯುವ ಮಜಾವೇ ಬೇರೆ. ಕಾಲೇಜು ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಸ್ನೇಹಿತರು, ಪ್ರಯಾಣಿಕರು ಬೈ ಟು ಚಹಾ ಕುಡಿಯುವ ಅಭ್ಯಾಸವನ್ನು ಇರಿಸಿಕೊಂಡಿರುತ್ತಾರೆ. ಒಂದು ಕಪ್ ಚಾ ಹಂಚಿಕೊಂಡು ಕುಡಿಯುವಾಗ ಅನುಭವಿಸುವ ಮಧುರ ಕ್ಷಣಗಳು, ಮಾತು, ನಗೆ, ಕೆಲವೊಮ್ಮೆ ಜೀವನದ ನಿರ್ಧಾರಗಳೂ, ದೊಡ್ಡ ಚರ್ಚೆಗಳೂ ನಡೆಯುವುದೂ ಇಲ್ಲಿಯೇ. ರಾಜಕೀಯ, ಕ್ರಿಕೆಟ್, ಸಿನಿಮಾ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸುತ್ತಾ, ಜೀವನದ ಸುಂದರ ನೆನಪುಗಳನ್ನೂ, ಸ್ನೇಹ, ಆತ್ಮೀಯತೆ ಮತ್ತು ಸಣ್ಣ ಸಂತೋಷಗಳನ್ನೂ ಅನುಭವಿಸುವ ಈ ಬೈ ಟು ಚಾ ಕೇವಲ ಅರ್ಧ ಕಪ್ ಚಾ ಮಾತ್ರವಲ್ಲದೆ, ಸರಳತೆ ಹಾಗೂ ಸುಂದರ ಸ್ನೇಹದ ಪ್ರತಿಬಿಂಬವಾಗಿದೆ.

ಈ ಸಂದರ್ಭದಲ್ಲಿ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ನಾನು ಕೆಲಸ ಮಾಡುತ್ತಿದ್ದಾಗ, ನಮ್ಮ ಕಾಲೇಜಿನಲ್ಲಿರುವ ಕ್ಯಾಂಟೀನ್‌ಗೆ ವಿರಾಮ ಸಮಯದಲ್ಲಿ ನಾವು ಮಹಿಳಾ ಉಪನ್ಯಾಸಕರು ಟೀ ಕುಡಿಯಲು ಹೋಗುತ್ತಿದ್ದೆವು. ಅದೊಂದು ನಮ್ಮ ಮಾತುಕತೆ, ವಿಶ್ರಾಂತಿ ಹಾಗೂ ಆರಾಮದ ಸಣ್ಣ ಜಾಗವಾಗಿತ್ತು. ಕೆಲವೊಮ್ಮೆ ನಮ್ಮ ಜೊತೆಗೆ ಕೆಲವು ಪುರುಷ ಉಪನ್ಯಾಸಕರೂ ಜತೆಗೂಡುತ್ತಿದ್ದರು. ಆಗ ನಾನು ಒಂದು ವಿಷಯವನ್ನು ಗಮನಿಸಿದ್ದೆ. ನಾವು ಮಹಿಳೆಯರು ಹೋದಾಗ ಸಾಮಾನ್ಯ ಚಹಾವನ್ನು ಕೊಡುತ್ತಿದ್ದ, ಕ್ಯಾಂಟೀನ್ ಮಾಲಕರು, ಪುರುಷ ಉಪನ್ಯಾಸಕರೊಂದಿಗೆ ಹೋದಾಗ ವಿಶೇಷವಾಗಿ ದಪ್ಪ ಹಾಲು ಹಾಕಿ ತಯಾರಿಸಿದ ಉತ್ಕೃಷ್ಟ ದರ್ಜೆಯ ಚಹಾವನ್ನು ನೀಡುತ್ತಿದ್ದರು. ಒಂದು ಕಪ್ ಚಾ ನೀಡುವಾಗ ಈ ರೀತಿಯ ಅಸಮಾನತೆ ನನಗೆ ತುಂಬಾ ಬೇಸರ ಉಂಟು ಮಾಡುತ್ತಿತ್ತು. ಸಮಾಜದಲ್ಲಿ ಮಹಿಳೆಯರು ವಿದ್ಯೆಯಲ್ಲೂ, ಉದ್ಯೋಗದಲ್ಲೂ ಸರಿಸಮಾನರಾಗಿರುವಾಗ ಇಂತಹ ಸಣ್ಣ ಘಟನೆಗಳು ಲಿಂಗಭೇದ ಇನ್ನೂ ಜೀವಂತವಾಗಿದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕೊನೆಗೆ ನಾವು ಮಹಿಳೆಯರು ಇದನ್ನು ಕ್ಯಾಂಟೀನ್ ಮಾಲಕರ ಗಮನಕ್ಕೆ ತಂದಾಗ ಅವರಿಗೆ ಮುಜುಗರವಾದದಂತೂ ನಿಜ. ಇನ್ನು ಮುಂದೆ ಯಾರಿಗೂ ಈ ತರ ಮಾಡಬಾರದೆಂದು ನಮ್ಮ ಅಭಿಪ್ರಾಯವಾಗಿತ್ತು.

ಇತ್ತೀಚಿಗೆ, ಬೆಂಗಳೂರಿನಲ್ಲಿರುವ ನನ್ನ ಆತ್ಮೀಯ ಗೆಳತಿ ಕುಶಲ ಅವರ ಮನೆಗೆ ಭೇಟಿ ನೀಡಿದ್ದೆ. ಸಾಯಂಕಾಲದ ಹೊತ್ತು. ಮಾತುಕತೆಯ ಬಳಿಕ, ಸಹಜವಾಗಿಯೇ ಟೀ ಮಾಡುತ್ತೇನೆ ಎಂದರು. ಸಾಮಾನ್ಯವಾಗಿ ಪ್ರತಿದಿನ ನಾವು ಕುಡಿಯುವ ಚಹಾದಂತೆಯೇ ಇರಬಹುದು ಎಂದು ಭಾವಿಸಿದ ನನಗೆ ಮೊದಲ ಸಿಪ್ ಬಾಯಿಗೆ ಇಡುತ್ತಿದ್ದಂತೆ, ಅದರ ವಿಶಿಷ್ಟ ರುಚಿ ಮನಸ್ಸನ್ನು ಸೆಳೆಯಿತು. ನಿಜಕ್ಕೂ ಅದೊಂದು ಅದ್ಭುತ ಚಹಾ ಆಗಿತ್ತು. ಹಾಲು, ಸಕ್ಕರೆ, ಚಾ ಹುಡಿ ಎಲ್ಲವೂ ಹಿತವಾಗಿ ಮಿತವಾಗಿ ಬೆರೆತ ಅಚ್ಚುಕಟ್ಟಾದ ಪಾನೀಯವಾಗಿತ್ತು. ನಾನು ಸಂಪೂರ್ಣವಾಗಿ ಮಾರುಹೋಗಿ, ಅದನ್ನು ತಯಾರಿಸುವ ಪರಿಯನ್ನೂ ಕೇಳಿ, ತಿಳಿದುಕೊಂಡೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಆ ಚಹಾವನ್ನು ವಿಶೇಷವಾಗಿರಿಸಿದ ಸಂಗತಿ ಏನೆಂದರೆ, ಅವರು ಚಹಾವನ್ನು ಅತ್ಯಂತ ಬಿಸಿಯೂ ಅಲ್ಲದ, ತಣ್ಣಗೆಯೂ ಅಲ್ಲದ, ಕುಡಿಯುವ ಹದಕ್ಕೆ ತಯಾರಿಸಿ ಕೊಟ್ಟಿದ್ದರು. ಸಾಮಾನ್ಯವಾಗಿ ಸಂಜೆಯ ಹೊತ್ತು ಚಾ ಕುಡಿಯುವ ಅಭ್ಯಾಸ ಇಟ್ಟುಕೊಂಡವಳಲ್ಲ. ರಾತ್ರಿ ನಿದ್ದೆ ಬರುವುದಿಲ್ಲ ಎಂಬ ಭಾವನೆಯಿಂದ ಚಾ ಸೇವನೆ ತಪ್ಪಿಸುತ್ತಿದ್ದೆ. ಆದರೆ ನನ್ನ ಗೆಳತಿಯು ಪ್ರೀತಿಯಿಂದ, ಕಾಳಜಿಯಿಂದಲೂ ತಯಾರಿಸಿದ ಚಾ ನನ್ನ ಅಭಿಪ್ರಾಯವನ್ನೇ ಬದಲಿಸಿತ್ತು. ಇವತ್ತಿಗೂ ಆ ಚಹಾದ ರುಚಿ, ಸ್ವಾದ, ಮಧುರ ನೆನಪಂತೂ ಹೋಗಿಲ್ಲ.

ದುಬೈಯಲ್ಲಿ ಬಹಳ ಜನಪ್ರಿಯವಾಗಿರುವ ‘ಕರಕ್ ಚಾ’ ದ ಸ್ವಾದವನ್ನು ಅನುಭವಿಸಿದ್ದೆ. ಇದೊಂದು ದಟ್ಟವಾದ, ಮಸಾಲೆಯ ಸುವಾಸನೆ ಭರಿತ ಚಹಾ ಆಗಿದೆ. ದೀರ್ಘಕಾಲ ನಿಧಾನವಾಗಿ ಕುದಿಸುವುದರಿಂದ, ಗಾಢ ಬಣ್ಣಕ್ಕೆ ತಿರುಗಿ ರುಚಿಕರವಾಗಿಯೂ ಇರುತ್ತದೆ. ಇನ್ನು ಕೆಲವು ಹೋಟೆಲ್‌ಗಳಲ್ಲಿ, ಕೆಫೆಗಳಲ್ಲಿ ಅತೀ ಸಿಹಿಯಾದ ಚಹಾ ಕೊಡುತ್ತಾರೆ ಎಂಬ ಕಾರಣಕ್ಕೆ, ಟೀ ಕುಡಿಯುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಇತ್ತೀಚಿಗಂತೂ ಪ್ರೀ ಡಯಾಬಿಟಿಕ್ ಆದ ಕಾರಣ ಶುಗರ್‌ಲೆಸ್ ಟೀ ಅಭ್ಯಾಸವಾಗಿ ಬಿಟ್ಟಿದೆ.


ಚಹಾ ಎಂಬ ಅದ್ಭುತ ಪೇಯವು ಅನೇಕ ಜನರ ಪ್ರಿಯವಾದ ಪಾನೀಯವಾದರೂ, ಕೆಲವರು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಎಂದು ಈ ಪೇಯದಿಂದ ದೂರವಿರುತ್ತಾರೆ. ಚಹಾದಲ್ಲಿ ಟ್ಯಾನಿನ್ ಎಂಬ ಅಂಶವಿದ್ದು, ಅತಿಯಾಗಿ ಸೇವಿಸಿದರೆ ಕೆಲವೊಮ್ಮೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದೆಂದು ರೂಢಿ ಮಾಡಿಕೊಳ್ಳಲು ಹಿಂಜರಿಯುತ್ತಾರೆ. ಒಮ್ಮೊಮ್ಮೆ ಬರೀ ಹೊಟ್ಟೆಯಲ್ಲಿ ಚಹಾ ಸೇವಿಸಿದಾಗ ಅಜೀರ್ಣ, ಆಸಿಡ್ ಸಮಸ್ಯೆ ಹಾಗೂ ನಿದ್ರಾ ಹೀನತೆಯೂ ಉಂಟಾಗಬಹುದು. ನಿಯಮಿತವಾಗಿ ಟೀ ಕುಡಿದರೆ ಹೃದಯದ ಆರೋಗ್ಯ, ಜೀರ್ಣಕ್ರಿಯೆ ಮತ್ತು ರಕ್ತ ಸಕ್ಕರೆ ಮಟ್ಟ ನಿಯಂತ್ರಣ ಸೇರಿದಂತೆ ಕೆಲವೊಂದು ಲಾಭಗಳಿವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಸ್ವಲ್ಪ ಸಿಹಿ ಕಡಿಮೆಯಿದ್ದರೂ ಪರವಾಗಿಲ್ಲ, ಮಿತಿಯಲ್ಲಿ ಸೇವಿಸಿದಾಗ ದಣಿದ ಮನಸ್ಸಿಗೆ, ದೇಹಕ್ಕೆ ಉತ್ಸಾಹ ತುಂಬುವ ಶಕ್ತಿ ಚಹಾಕ್ಕೆ ಇದೆ. ಹೊಸ ಚೈತನ್ಯದಿಂದ ಪುನ: ಕೆಲಸ ಮಾಡಲು ಉತ್ತೇಜಿಸುವ ಈ ಚಹಾವನ್ನು ಹಿತವಾಗಿ, ಮಿತವಾಗಿ ಸವಿದು, ಅದರ ಅನುಭವವನ್ನು ಆನಂದಿಸಬೇಕು. ಈಗಂತೂ ಎಲ್ಲಾ ಕಡೆಗಳಲ್ಲೂ ನವನವೀನತೆಯಿಂದ ಕೂಡಿದ ಹಲವಾರು ಟೀ ಸೆಂಟರ್ ಗಳಿವೆ. ಉದಾಹರಣೆಗೆ, ಚಾಯೋಸ್, ಚಾಯ್ ಪಾಯಿಂಟ್, ಚಾಯ್ ಸ್ಟೇಶನ್, ಚಾಯ್ ಡೇಸ್, ಅಮೃತ ಚಾಯ್ ಇತ್ಯಾದಿ. ಗ್ರೀನ್ ಟೀ, ಹರ್ಬಲ್ ಟೀ, ಲೈಮ್ ಟೀ, ಕಪ್ಪು ಚಹಾ, ಮುಂತಾದ ವಿಧ ವಿಧದ ಚಹಾವೂ ಬಳಕೆಯಲ್ಲಿದೆ. ಚಿಕ್ಕವರಿರುವಾಗ ಗೂಡಂಗಡಿಯಲ್ಲಿ ದೊರುತ್ತಿದ್ದ ಚಹಾ ಇಂದು ಬೃಹತ್ ಮಾರುಕಟ್ಟೆಯಾಗಿ ಅಚ್ಚರಿಯ ಮಟ್ಟಕ್ಕೆ ಬೆಳೆದಿದೆ. ಒಟ್ಟಿನಲ್ಲಿ ಚಹಾ ಕೇವಲ ಒಂದು ಪಾನೀಯವಲ್ಲ. ಅದು ಒಂದು ಭಾವನೆ, ಮನಸ್ಸಿಗೆ ನೆಮ್ಮದಿ ನೀಡುವ, ಸಂಬಂಧಗಳನ್ನು ಹತ್ತಿರ ಮಾಡುವ ಒಂದು ಮಾಯಾ ಪಾನೀಯ. ಚಹಾ ಎಂದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಡಗಿರುವ ಒಂದು ಸಿಹಿ ಸುಂದರ ಅನುಭವ.

ಶೈಲಾರಾಣಿ ಬಿ. , ಮಂಗಳೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *