ಕಾದಂಬರಿ

ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 43

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ನೀವು ಇಷ್ಟೊಂದು ಕೇಳಬೇಕಾ? ನಾವು ಈ ದಿನಕ್ಕಾಗಿ ಕಾಯುತ್ತಿದ್ದೆವು” ಎಂದರು ಶಕುಂತಲಾ ಅವರ ಕೈ ಹಿಡಿದು.
ಆರ್.ಜಿ. ವಾರುಣಿ ಕಡೆ ನೋಡಿದ. ಅವಳು ಅಳುತ್ತಾ ಮೇಲುಗಡೆಯ ಮನೆಗೆ ಓಡಿದಳು.
“ಗೋಪಿ ನೀನು ಹೋಗಿ ಮಾತನಾಡು” ಎಂದರು ರಘುಪತಿ.
ವಾರುಣಿ ಓಡಿ ಹೋಗಿ ಬಾಲ್ಕನಿಯಲ್ಲಿ ನಿಂತು ಕಣ್ಣೊರೆಸಿಕೊಂಡಳು. ಆದರೆ ಅವಳ ಪ್ರಯತ್ನ ಮೀರಿ ಕಣ್ಣೀರು ಉಕ್ಕಿತು.
ಆರ್.ಜಿ. ಅವಳ ಮುಂದೆ ನಿಂತು ಹೇಳಿದ. “ಸಾರಿ ವಾರುಣಿಯವರೆ ನಿಮ್ಮ ಅಭಿಪ್ರಾಯ ಕೇಳದೆ ಅಮ್ಮ ಅಪ್ಪ ಮುಂದುವರೆದಿದ್ದು ತಪ್ಪು.”
ಅವಳು ಅವನ ಎದೆಗೆ ಎರಡೂ ಕೈಗಳಿಂದ ಗುದ್ದಿ ಅಳುತ್ತಾ ಅವನ ಎದೆಗೆ ಒರಗಿದಳು.

“ವಾರುಣಿ………”
“ಯಾಕೆ ನನ್ನನ್ನು ಇಷ್ಟು ಸತಾಯಿಸಿದ್ರಿ? ನೀವೇ ಪ್ರಪೋಸ್ ಮಾಡಕ್ಕೆ ಆಗ್ತಿರಲಿಲ್ವಾ? ಈ ದಿನಕ್ಕಾಗಿ ನಾನು ಹಂಬಲಿಸ್ತಿದ್ದೆ…..”
“ತುಂಬಾ ಸಲ ಪ್ರಪೋಸ್ ಮಾಡಬೇಕು ಅನ್ನಿಸ್ತಿತ್ತು ವರು. ಆದರೆ ಭಯ ಆಗ್ತಿತ್ತು.”
“ಭಯಾನಾ?”
“ಹುಂ. ವಾರುಣಿ ನನ್ನನ್ನು ಒಪ್ಪೇ ಒಪ್ತಾರೆ ಅನ್ನುವ ನಿರೀಕ್ಷೆ ನನಗೆ ತುಂಬಾ ಖುಷಿ ಕೊಡುತ್ತಿತ್ತು. ನಾನು ಕೇಳಿದಾಗ ನೀವು `ಇಲ್ಲ’ ಅಂದು ಬಿಟ್ಟರೆ ಅನ್ನುವ ಅಳುಕು ಕಾಡುತ್ತಿತ್ತು.”
“ಈ ದಿನ ಹೀಗಾಗುತ್ತದೆ ಅಪ್ಪ-ಅಮ್ಮ ಈ ಕೆಲಸಕ್ಕೇ ಬಂದಿದ್ದಾರೆ ಅನ್ನುವುದು ನಿಮಗೆ ಗೊತ್ತಿತ್ತಾ?”
“ಅಲ್ಪ ಸ್ವಲ್ಪ ಗೊತ್ತಿತ್ತು. ಆದರೆ ಇದಕ್ಕೆಲ್ಲಾ ಕಾರಣ ಚಂದ್ರಾ ಆಂಟಿ.”
ಅವಳು ನಸುನಕ್ಕಳು.
ಅವನು ಅವಳನ್ನು ಬಲಗೈಯಲ್ಲಿ ಬಳಸಿ, ಒಳಗೆ ಕರೆತಂದು ಸೋಫಾದ ಮೇಲೆ ಕೂಡಿಸಿ ಕೇಳಿದ. “ನನ್ನನ್ನು ಒಪ್ಪಿದ್ದೀಯಾ ವರು?”
“ಒಪ್ಪಿದ್ದೇನೆ. ಆದರೆ ಕಂಡಿಷನ್ಸ್ ಅಪ್ಲೈ.”
“ಏನು ಕಂಡಿಷನ್ಸ್?”
“ಆದಷ್ಟು ಬೇಗ ಎಂಗೇಜ್‌ಮೆಂಟ್ ಆಗಬೇಕು” ಅವನ ಭುಜಕ್ಕೆ ಒರಗಿ ಹೇಳಿದಳವಳು.
“ಓ.ಕೆ.”
“ಎಂಗೇಜ್‌ಮೆಂಟ್, ಮದುವೆ ಎಲ್ಲವೂ ಸರಳವಾಗಿ ಮೈಸೂರಿನಲ್ಲೇ ನಡೆಯಬೇಕು. ಎಂಗೇಜ್‌ಮೆಂಟ್ ಆದಮೇಲೆ ಮೂರು ತಿಂಗಳ ಒಳಗೆ ಮದುವೆ ಆಗೋಣ.”
“ಅಮ್ಮ ಅಪ್ಪನ್ನ ಒಪ್ಪಿಸ್ತೀನಿ. ಅವರು ಒಪ್ಪುತ್ತಾರೆ ಅನ್ನುವ ನಂಬಿಕೆ ನನಗಿದೆ” ಎಂದನು. ಅವಳು ಸಂತೋಷದಿಂದ ಕಣ್ಮುಚ್ಚಿದಳು.

“ವರು ಏಳು ಕೆಳಗೆ ಹೋಗೋಣ.”
“ಎಬ್ಬಿಸಬೇಡಿ. ನಾನು ಕನಸು ಕಾಣ್ತಿದ್ದೀನಿ.”
“ಆಮೇಲೆ ಕನಸು ಕಾಣಬಹುದು. ಬಾ ವರು ನಮ್ಮ ಅಮ್ಮ ಅಪ್ಪ ನಿಮ್ತಂದೆ ತಾಯಿ ಟೆನ್ಷನ್‌ನಲ್ಲಿ ಮುಳುಗರ‍್ತಾರೆ.”
“ಇನ್ನೂ ಒಂದು ಕಂಡಿಷನ್ ಇದೆ”
“ಏನದು?”
“ಶಂಕರನ ಓದು ಮುಗಿಯುವವರೆಗೂ ನಾನು ತವರು ಮನೆಗೆ ಸಹಾಯ ಮಾಡಬೇಕಾಗುತ್ತೆ.”
“ನನ್ನ ಅಭ್ಯಂತರವಿಲ್ಲ”
ನಗುನಗುತ್ತಾ ಕೈ ಹಿಡಿದು ಕೆಳಗೆ ಬಂದವರನ್ನು ನೋಡಿ ಎಲ್ಲರ ಮುಖದಲ್ಲಿ ಮುಗುಳ್ನಗೆ ಮೂಡಿತು.
ಚಂದ್ರಾ ಆಂಟಿ ಎಲ್ಲರ ಕೈಗೂ ಕೊಬ್ಬರಿ ಮಿಠಾಯಿಯ ಚೂರು ಇಟ್ಟರು.
“ಅಮ್ಮಾ ವಾರುಣಿಯದು ಕೆಲವು ಕಂಡಿಷನ್ಸ್ಗಳಿವೆ.”

“ಏನಮ್ಮಾ ನಿನ್ನ ಕಂಡಿಷನ್ಸ್?”
“ಅಮ್ಮ ಅದೂ……..”
“ನಾನೇ ಹೇಳ್ತೀನಮ್ಮ. ಆದಷ್ಟು ಬೇಗ ಎಂಗೇಜ್‌ಮೆಂಟ್ ಆಗಬೇಕಂತೆ.”
“ಮಾಡೋಣ ಬಿಡು.”
“ಅಮ್ಮ, ಶರು ಮದುವೆ ನಿಮ್ಮ ಊರಿನಲ್ಲಿ ನಡೆಯಿತು. ನಮ್ಮ ತಂದೆ-ತಾಯಿಗೆ ಒಬ್ಬ ಹೆಣ್ಣು ಮಗಳ ಮದುವೆಯನ್ನಾದರೂ ತಾವಿರುವ ಊರಿನಲ್ಲಿ ಮಾಡಬೇಕು ಅನ್ನುವ ಆಸೆ ಇತ್ತು. ಆದ್ದರಿಂದ ನನ್ನ ಮದುವೆ ಎಂಗೇಜ್‌ಮೆಂಟ್ ಎಲ್ಲವೂ ಮೈಸೂರಿನಲ್ಲೇ ನಡೆಯಲು ಅವಕಾಶ ಮಾಡಿಕೊಡಿ.”
“ಆಗಲಮ್ಮ ಹಾಗೇ ಆಗಲಿ.”
“ಅಮ್ಮ, ನಾನು ಚಿಕ್ಕವಳು. ದಯವಿಟ್ಟು ನಾನಾಡುವ ಮಾತುಗಳಿಂದ ಬೇಜಾರಾದರೆ ಕ್ಷಮಿಸಿ…..”
“ಹೇಳಮ್ಮ”
“ದಯವಿಟ್ಟು ಎಂಗೇಜ್‌ಮೆಂಟ್, ಮದುವೆ ಸರಳವಾಗಿ ನಡೆಯಬೇಕು. ಒಡವೆಗಳು, ಬೆಲೆಬಾಳುವ ಸೀರೆಗಳು ನನಗೆ ಬೇಡ. ಎಂಗೇಜ್‌ಮೆಂಟ್‌ಗೆ ಮನೆ ಮನೆಯವರು ಸಾಕು.”
“ವರು ಸುಮ್ಮನಿರು…..” ರಾವ್ ಹೇಳಿದರು.
“ಸರ್, ಅವಳನ್ನು ತಡೆಯಬೇಡಿ. ಮಾತಾಡಲು ಬಿಡಿ. ಅವಳು ಮಾತಾಡ್ತಿರುವುದರಲ್ಲಿ ಏನೂ ತಪ್ಪಿಲ್ಲ.”
“ಮದುವೆಗೆ ಮೂರು ದಿನ ಬೇಡ. ಒಂದು ದಿನ ಸಾಕು. ಮದುವೆಗೆ ಆತ್ಮೀಯರನ್ನು ಆಹ್ವಾನಿಸೋಣ. ನೀವು ಮದುವೆಗೆ ಖರ್ಚು ಮಾಡಲು ಇಟ್ಟಿರುವ ಹಣವನ್ನು ನಿಮ್ಮ ಮಗನಿಗೇ ಕೊಡಿ.”
“ನೀನೂ, ಧರ್ಮನ ಭಾವೀ ಪತ್ನಿ. ಹೋದ ಜನ್ಮದಲ್ಲಿ ಅಕ್ಕ-ತಂಗಿಯರಾಗಿರಬೇಕು.”

“ಯಾಕೆ ಹಾಗನ್ನುತ್ತಿದ್ದೀರಾ?”
“ದಿವ್ಯಾನ್ನ ನೋಡಲು ಹೋದಾಗ ಅವಳು ಇದೇ ಮಾತು ಹೇಳಿದಳು.”
“ನಮ್ಮ ತಂದೆ ಹಾಸನದಲ್ಲೇ ಮದುವೆ ಮಾಡಿಕೊಡ್ತಾರೆ. ಒಂದು ದಿನದ ಮದುವೆ ಸಾಕು. ದಯವಿಟ್ಟು ನನಗೆ ಒಡವೆಗಳು, ಬಾರೀ ಸೀರೆಗಳು ಬೇಡ. ಮದುವೆಯ ನಂತರ ಹಳ್ಳಿಯ ಜನರಿಗೆ ಊಟಕೊಡಿ. ಮದುವೆಗೆ ಇಟ್ಟಿರುವ ಹಣವನ್ನು ಧರ್ಮ ಅವರಿಗೆ ಕೊಡಿ. ಹಾಸನದಲ್ಲಿ ಅಂಗಡಿ ಇಡಲು ಬೇಕಾಗತ್ತೆ……..”
“ತುಂಬಾ ಸಂತೋಷವಾಯ್ತು.”
“ನಮಗೂ ವಾರುಣಿ ಕಂಡಿಷನ್ಸ್ ಒಪ್ಪಿಗೆಯಿದೆ. ರಾಯರೇ ನೀವೇ ಶಾಸ್ತ್ರಿಗಳಿಗೆ ತೋರಿಸಿ ಎಂಗೇಜ್‌ಮೆಂಟ್ ದಿನ ಫಿಕ್ಸ್ ಮಾಡಿ, ಭಾನುವಾರವಾದರೆ ಅನುಕೂಲ.”
“ಊಟಕ್ಕೆ ಹೊತ್ತಾಯಿತು. ಏಳಿ ಊಟ ಮಾಡಿ” ಚಂದ್ರಾವತಿ ಜ್ಞಾಪಿಸಿದರು.

ಅಂದು ರಾತ್ರಿ ವರು ಕಣ್ತುಂಬಾ ನಿದ್ರೆ ಮಾಡಿದಳು. ಮರುದಿನವೂ ರಜ ಇತ್ತು. ಶಕುಂತಲಾ ನಾಗರಾಜನಿಗೆ ಫೋನ್ ಮಾಡಿದರು.
“ರೇಖಾ ರಜ ಹಾಕಿದ್ದಾಳೆ. ಅವಳ ತಂದೇನ್ನ ಚೆಕಪ್‌ಗೆ ರ‍್ಕೊಂಡು ಹೋಗಬೇಕಿತ್ತು. ನಾನು ನಮ್ಮ ಕೆಟರಿಂಗ್ ಸೆಂಟರ್‌ಗೆ ಹೋಗಿ ರ‍್ತೀನಿ.”
“ಹಾಗೇ ಮಾಡಪ್ಪ….”
“ವರು ಇರುತ್ತಾಳಾ?”
“ಅವಳು ಇರದೆ ಎಲ್ಲಿಗೆ ಹೋಗಲು ಸಾಧ್ಯ? ಒಂದನೇ ತಾರೀಕಿನಿಂದ ಕೆಲಸಕ್ಕೆ ಹೋಗ್ತಾಳೆ.”
ಸುಮಾರು 12 ಗಂಟೆಯ ಹೊತ್ತಿಗೆ ಗಂಡ-ಹೆಂಡತಿ ಬಂದರು. ಚಿತ್ರಲೇಖಾ ತಮ್ಮನಿಗೆ ಊಟ ಕಳುಹಿಸಲು ಹೇಳಿದ್ದರು. ಊಟವಾಯಿತು. ವಾರುಣಿಯ ಮದುವೆ ಗೊತ್ತಾಗಿರುವ ವಿಚಾರ ಕೇಳಿ ಅವರು ತುಂಬಾ ಸಂತೋಷಪಟ್ಟರು.
“ನನ್ನಿಂದ ಏನಾಗಬೇಕು ಹೇಳಿ ಅತ್ತೆ?”
“ನಮಗೆ ಇಲ್ಲಿಗೆ ಹತ್ತಿರವಿರುವ ಹಾಲ್ ಬುಕ್ ಆಗಬೇಕು. ಎಂಗೇಜ್‌ಮೆಂಟ್‌ಗೆ ಬೇಕಾದ ಸಮಸ್ತ ಏರ್ಪಾಡು ನಿನ್ನದೇ……”
ಅವನು ತಕ್ಷಣ ತನ್ನ ಪರಿಚಯದವರಿಗೆ ಫೋನ್ ಮಾಡಿದ. ಹತ್ತು ನಿಮಿಷ ಮಾತಾಡಿದ. ನಂತರ ಒಳಗೆ ಬಂದು ಹೇಳಿದ.

“ಸರಸ್ವತಿಪುರಂ 7ನೇ ಕ್ರಾಸ್‌ನಲ್ಲಿ ನನ್ನ ಫ್ರೆಂಡ್ ಪರಿಚಿತರ ದೊಡ್ಡ ಮನೆ ಇದೆಯಂತೆ. ಅವರೆಲ್ಲಾ ಬೆಂಗಳೂರಿನಲ್ಲಿ ಸೆಟ್ಲ್ ಆಗಿರುವುದರಿಂದ ಸಣ್ಣ ಫಂಕ್ಷನ್‌ಗಳಿಗೆ ಬಾಡಿಗೆಗೆ ಕೊಡ್ತಾರಂತೆ. ನಾನು ಅಲ್ಲೇ ಇದ್ದೀನಿ. ನೀವು ಬಂದ್ರೆ ತೋರಿಸ್ತೀನಿ” ಅಂದ.
“ಹಾಗಾದರೆ ಹೋಗಿ ನೋಡೋಣ” ಎಂದರು ಶಕುಂತಲಾ.
“ನೀವು ಮಾವ-ಅತ್ತೆ ಜೊತೆ ಹೋಗಿ ಬನ್ನಿ. ನಾವು ಬೇರೆ ವಿಚಾರ ಡಿಸ್ಕಸ್ ಮಾಡ್ತೀವಿ” ಎಂದಳು ರೇಖಾ.
“ಚಂದ್ರಾ ಆಂಟಿ ಅಡಿಗೆ ನಿಮ್ಮ ತಮ್ಮ ಸಪ್ಲೈ ಮಾಡ್ತಾರಾ?”
“ಅವನಿಗೆ ಹೇಳೋದು ಬೇಡ. ಅವನು ಬೇರೆ ಕಡೆಗೆ ಒಪ್ಪಿಕೊಂಡಿದ್ದಾನೆ. ನಾಗರಾಜಾ ಸಪ್ಲೈ ಮಾಡಬಹುದಲ್ವಾ?”
“ಯಾಕೋ ಇತ್ತೀಚೆಗೆ ಕ್ಯಾಟರಿಂಗ್ ಸರ್ವೀಸ್ ಚೆನ್ನಾಗಿ ನಡೆಯುತ್ತಿಲ್ಲ. ನಾವು ಕ್ಲೋಸ್ ಮಾಡಿ ಮನೆ ಬಾಡಿಗೆಗೆ ಕೊಡಬೇಕೂಂತಿದ್ದೇವೆ. ನಟು ಅಂಗಂಡೀನ್ನ ದೊಡ್ಡದು ಮಾಡಿ, ದೊಡ್ಡದಾಗಿ ಅಂಗಡಿ ಇಡೋಣಾಂತಿದ್ದೇವೆ.”

“ಸಾಮಾನ್ಯವಾಗಿ ಛತ್ರದವರೇ ಅಡಿಗೆಯವರನ್ನು ಸಜೆಸ್ಟ್ ಮಾಡ್ತಾರಲ್ವಾ?” ಚಂದ್ರಾ ಕೇಳಿದರು.
“ಅವರು ಚೆನ್ನಾಗಿ ಮಾಡ್ತಾರೇಂತ ಏನು ನಂಬಿಕೆ? ನಮ್ಮ ಶಾಲಾ ಫಂಕ್ಷನ್‌ಗಳಿಗೆ ಶಿವರಾಮ ಪೇಟೆಯಲ್ಲಿ ಒಬ್ಬರು ಊಟ ಸಪ್ಲೈ ಮಾಡ್ತಿದ್ದರು. ಅವರನ್ನು ಕೇಳಿ ಹೇಳ್ತೀನಿ” ಎಂದಳು ರೇಖಾ.
“ಬೆಳಿಗ್ಗೆ ತಿಂಡಿ, ಕಾಫಿ, ಮಧ್ಯಾಹ್ನದ ಊಟ ಸಾಯಂಕಾಲ ಕಾಫಿ ಜೊತೆ ಏನಾದರೂ ಚಿಪ್ಸ್, ಬೋಂಡಾ ಅಂತಹದ್ದು ಕೊಡಬಹುದು.”
“ರಾತ್ರಿ ಹಳ್ಳಿಗೆ ವಾಪಸ್ಸಾಗುವವರಿಗೆ ಚಪಾತಿ, ಪಲ್ಯ, ಮೊಸರನ್ನದ ಬುತ್ತಿ ಕಳಿಸಬೇಕು” ವರು ಹೇಳಿದಳು.
“ಅದೆಲ್ಲಾ ಮಾಡೋಣ. ಏನಂತಾರೆ ನಿನ್ನ ರಾಜಕುಮಾರ?”
“ನನ್ನ ಹತ್ತಿರ ಏನೂ ಹೇಳ್ತಿಲ್ಲ……….”
“ನಿನಗಾಗಿ ಅವನು ಎಂತಹ ಒಳ್ಳೆಯ ಆಫರ್ ಬಿಟ್ಟ ಗೊತ್ತಾ? ಆದಿನ ತುಂಬಾ ಒದ್ದಾಡಿಬಿಟ್ಟ. “ವಾರುಣಿ ಇಲ್ಲದೆ ನಾನು ಬದುಕಲ್ಲ ಅಂದುಬಿಟ್ಟ.”

ಅವಳಿಗೆ ಆಶ್ಚರ್ಯವಾಯಿತು. ಆಗ ಚಂದ್ರಾವತಿ ಮಹೇಶ್ವರಿ ಕಾಲೇಜ್ ಬಗ್ಗೆ ಹೇಳಿದರು. “ಅವನು ಮನಸ್ಸು ಮಾಡಿದ್ದಿದ್ರೆ ಒಂದು ದೊಡ್ಡ ಎಜುಕೇಷನಲ್ ಟ್ರಸ್ಟ್ಗೆ ಒಡೆಯ ಆಗಬಹುದಿತ್ತು. ಆದರೆ ಅವನಿಗೆ ಹಣಕ್ಕಿಂತ ಪ್ರೀತಿ ಮುಖ್ಯ ಅನ್ನಿಸಿತು.”
ಭಾನುವಾರವೇ ಎಂಗೇಜ್‌ಮೆಂಟ್ ಎಂದು ಫಿಕ್ಸ್ ಆಯಿತು. ಆ ಕಡೆಯವರು ಈ ಕಡೆಯವರು ಸೇರಿ 200 ಜನ ಆಗಿದ್ದರು.
ಅನಿಕೇತ್ ಮೆಸೇಜ್ ಮಾಡಿದ್ದ. “ನಾವೆಲ್ಲಾ ನಂದಾನ್ನ ಕರೆದುಕೊಂಡು ದುಬೈಗೆ ಹೊರಟಿದ್ದೇವೆ. ಮದುವೆಗೆ ಖಂಡಿತಾ ರ‍್ತೇವೆ. ನಂದಾ ಮೆಸೇಜ್ ಮಾಡಿದ್ದಳು” ಂಟಟ ಣhe besಣ ನೀನು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೀಯ.”

ರಾತ್ರಿ ಆರ್.ಜಿ. ಫೋನ್ ಮಾಡಿದ. “ವರೂ ವಾರಕ್ಕೇ ನಮ್ಮ ಎಂಗೇಜ್‌ಮೆಂಟ್. ನನಗೆ ನಂಬಕ್ಕೇ ಆಗ್ತಿಲ್ಲ.”
“ನನಗೋಸ್ಕರ ನೀವು ಮಹೇಶ್ವರಿ ಮೇಡಂ ಆಫರ್ ಬಿಡಬಾರದಿತ್ತು.”
“ಒಂದು ಪ್ರಶ್ನೆ ಕೇಳಲಾ?”
“ಕೇಳಿ.”
“ನಿನಗೆ ಯಾರಾದ್ರೂ ನಿನ್ನ ತಮ್ಮ, ತಂದೆ-ತಾಯಿ ಜವಾಬ್ದಾರಿ ತೆಗೆದುಕೊಳ್ತೇವೆ. ನಿನಗೆ ಇಷ್ಟವಿದ್ರೆ ಕೆಲಸಮಾಡಬಹುದು ಇಲ್ಲದಿದ್ದರೆ ಬಿಡಬಹುದು” ಅಂದಿದ್ರೆ ಮದುವೆಗೆ ಒಪ್ತಿದ್ದೆಯಾ?”
ಅವಳು ಉತ್ತರಿಸಲಿಲ್ಲ.
“ನೀನು ಒಪ್ತಿರಲಿಲ್ಲ ಅಲ್ವಾ? ನಾನು ಹಣಕ್ಕಾಗಿ ಬಾಯಿ ಬಿಡುವವನಲ್ಲಾಂತ ನಿನಗೆ ಗೊತ್ತಿಲ್ವಾ?”
“ನಾನು ತುಂಬಾ ಲಕ್ಕಿ……….”
ಅವನು ಜೋರಾಗಿ ನಕ್ಕ.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45201
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *