ನಾನು ಯಾರು ಎಂಬ ಸತ್ಯವನ್ನು ಅರಿಯುವುದೇ ಜ್ಞಾನಯೋಗ,
ಫಲಾಪೇಕ್ಷೆಯಿಲ್ಲದೆ ಶ್ರದ್ಧೆಯಿಂದ ಕೆಲಸ ಮಾಡುವುದೇ ಕರ್ಮಯೋಗ,
ಪ್ರಕೃತಿಯಲ್ಲಿ ದೈವತ್ವ ಕಾಣುತ್ತಾ ಸಮರ್ಪಣಾ ಭಾವದಿಂದ ಬದುಕುವುದೇ ಭಕ್ತಿಯೋಗ.
ಯೋಗ ಕೇವಲ ಒಂದು ದೈಹಿಕ ವ್ಯಾಯಾಮವಲ್ಲ, ಅದು ಒಂದು ‘ಜೀವನ ವಿಜ್ಞಾನ ಮತ್ತು ಮನಸ್ಸಿನ ಶಿಸ್ತು’.
ಮನಸ್ಸಿನ ನಿಗ್ರಹವೇ ಯೋಗ, ಮನಸ್ಸು ಶಾಂತವಾದರೆ ಮಾತ್ರ ಅಂತರಂಗದ ದರ್ಶನ ಸಾಧ್ಯ’
ಈ ಅಮೃತವಾಣಿಗಳನ್ನು ನುಡಿದವರು ಯಾರು ಗೊತ್ತೆ? ಅವರೇ ತಮ್ಮ ಪ್ರವಚನಗಳ ಮೂಲಕ ಜನಸಾಮಾನ್ಯರಿಗೆ ಮೂಲಕ ಮೋಡಿ ಹಾಕಿದ ಕಿಸೆಯಿಲ್ಲದ ಅಂಗಿ ತೊಟ್ಟ ಸಂತ. ಸರಳತೆಯ ಸಾಕಾರಮೂರ್ತಿಯಾದ ಸಿದ್ದೇಶ್ವರ ಸ್ವಾಮಿಗಳು, ತಮ್ಮ ಅನುಯಾಯಿಗಳಿಗೆ ಹೇಳ್ತಿದ್ದ ಮಾತುಗಳು, ‘ಆಸೆ ನಿಮ್ಮನ್ನು ಮುಗಿಸ್ತದ, ನೋಡೋದು ಅತಿಯಾಗಬಾರದು, ಕೇಳೋದು ಅತಿಯಾಗಬಾರದು, ಉಣ್ಣೋದು ಅತಿಯಾಗಬಾರದು. ಇದರಿಂದ ದೇಶ ನಾಶವಾಗ್ತದೆ, ಜಗತ್ತೇ ನಾಶ ಆಗ್ತದೆ.’
ನಾಲ್ಕಾರು ವರ್ಷಗಳ ಹಿಂದೆ ಸ್ವಾಮೀಜಿಯವರು ಶಿವಮೊಗ್ಗಾಕ್ಕೆ ಪ್ರವಚನ ನೀಡಲು ಬಂದಾಗ ಕಾರಣಾಂತರಗಳಿಂದ ಅವರ ದರ್ಶನಭಾಗ್ಯ ಲಭಿಸಿರಲಿಲ್ಲ. ಅವರ ಪ್ರವಚನಗಳನ್ನು ಕೇಳುವ ಸೌಭಾಗ್ಯವೂ ಸಿಗಲಿಲ್ಲ. ಮೊಬೈಲಿನ ಯೂಟ್ಯೂಬಿನಲ್ಲಿಯೇ ಅವರ ಅಮೃತವಾಣಿಗಳನ್ನು ಕೇಳುತ್ತಿದ್ದೆ. ಅವರ ಮಾತುಗಳನ್ನು ಕೇಳುವುದೇ ಹಬ್ಬ ಬಂದಂತೆ. ನಮ್ಮ ಯೋಗಕೇಂದ್ರಕ್ಕೆ ಬರುವ ದೇವೇಂದ್ರಪ್ಪನವರು ನೆನಪು ಮಾಡಿಕೊಂಡ ಕ್ಷಣಗಳು, ‘ಶ್ರೀಗಳು ಶಿವಮೊಗ್ಗಾಕ್ಕೆ ಬಂದಾಗ ಕಾರಿನಲ್ಲಿ ಸ್ವಾಮೀಜಿಯವರನ್ನು ನಮ್ಮ ತೋಟಕ್ಕೆ ಕರೆದೊಯ್ಯುವ ಹಂಬಲ ನನಗೆ. ಅಲ್ಲಿದ್ದವರು ಹೇಳಿದ್ರು, ‘ಸ್ವಾಮೀಜಿಯವರು ಎ.ಸಿ.ಕಾರಿನಲ್ಲಿ ಮಾತ್ರ ಕೂರುತ್ತಾರೆ. ನನ್ನದೋ ಮಾರುತಿ ವ್ಯಾನ್. ಅದಕ್ಕೆ ಎ.ಸಿ.ಇರಲಿಲ್ಲ. ನಾನು ಮಂಕಾಗಿ ನಿಂತಿದ್ದೆ. ಸ್ವಾಮೀಜಿಯವರು ನೇರವಾಗಿ ನನ್ನ ಬಳಿ ಬಂದು, ‘ಬಾರಪ್ಪಾ ಹೋಗೋಣ’ ಎಂದು ನನ್ನ ಕಾರಿನಲ್ಲಿ ಕುಳಿತಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ತೋಟದಲ್ಲಿ ಬಂಧು ಬಾಂಧವರಿಗೆಲ್ಲಾ ಊಟ ರೆಡಿ ಮಾಡಿದ್ದೆ. ಸ್ವಾಮೀಜಿಯವರು. ‘ನಾ ಮೊದಲು ಊಟ ಬಡಿಸ್ತೇನೆ, ನಂತರದಲ್ಲಿ ಊಟ ಮಾಡ್ತೇನೆ ಎಂದಾಗ ನನಗೆ ಇವರಲ್ಲಿ ಸಾಕ್ಷಾತ್ ಶಿವನನ್ನು ಕಂಡ ಹಾಗಾಗಿತ್ತು.’ ಹೀಗಿದ್ದರು ಸಿದ್ದೇಶ್ವರ ಸ್ವಾಮಿಗಳು.
ಸ್ವಾಮೀಜಿಯವರು ನಡೆಸುತ್ತಿದ್ದ ವಿಜಯಪುರದ ಜ್ಞಾನಯೋಗಾಶ್ರಮವನ್ನು ನೋಡಲು ಮನಸ್ಸು ಹಾತೊರೆಯುತ್ತಿತ್ತು. ನನ್ನ ಹಲವು ವರ್ಷಗಳ ಕನಸು 2026 ರ ಯುಗಾದಿಯ ಆದಿಯಲ್ಲಿ ನನಸಾಗಿತ್ತು. ಸಹ್ಯಾದ್ರಿ ಗೆಳತಿಯರ ಬಳಗದ ಮುಕುಟದಂತಿರುವ ಗೆಳತಿ ‘ಲತಾ’ ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವಳಾಗಿ ನೇಮಕಗೊಂಡಾಗ, ನೆಚ್ಚಿನ ಗೆಳತಿಯನ್ನು ಅಭಿನಂದಿಸಲು ನಾವೆಲ್ಲಾ ಮಾರ್ಚ್ 15,2026 ರಂದು ಜಮಖಂಡಿಗೆ ಹೊರಟೆವು. ಮುಂಜಾನೆ ಐದು ಗಂಟೆಗೇ ಶಿವಮೊಗ್ಗಾದಿಂದ ಲತಾಳ ಎರ್ಟಿಗಾ ಕಾರಿನಲ್ಲಿ ನಾನು, ಪುಷ್ಪ ಮೇಡಂ, ಮಂಜುಳಾ, ಶೋಭಾ ಹೊರಟೆವು. ಚಿತ್ರದುರ್ಗದಲ್ಲಿ ಸರಳಾ ಮೇಡಂ ಮನೆಯಲ್ಲಿ ಉಪಹಾರ ಮುಗಿಸಿದ ನಂತರ ಅವರನ್ನೂ ಕರೆದುಕೊಂಡು ವಿಜಯಪುರದತ್ತ ಸಾಗಿತ್ತು ನಮ್ಮ ಸವಾರಿ. ಮಾತೆಯರು ಸೇರಿದ ಮೇಲೆ ಮಾತಿಗೆ ಬರವೇ. ಎಲ್ಲರೂ ನಿವೃತ್ತಿ ಹೊಂದಿದವರೇ. ನಮ್ಮ ಕಾಲದ ಕಾಲೇಜಿನ ಸುದ್ದಿಗಳನ್ನು ಮಾತಾಡುತ್ತಾ ಹೊರಟವರಿಗೆ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ವಿಜಯಪುರ ತಲುಪಿದಾಗ ಮದ್ಯಾಹ್ನ ಒಂದು ಗಂಟೆ. ಬೆಂಗಳೂರಿನಿಂದ ಸಹ್ಯಾದ್ರಿ ಬಳಗದ ಸದಸ್ಯರಾದ ವೀಣಾ ಮತ್ತು ವಾಗ್ದೇವಿ ರೈಲಿನಲ್ಲಿ ನೇರವಾಗಿ ವಿಜಯಪುರಕ್ಕೆ ಬಂದಿದ್ದರು. ಎಲ್ಲರೂ ಒಟ್ಟಾಗಿ ನಮ್ಮ ಸ್ನೇಹಿತರ ಮಗಳಾದ ಡಾ. ಸ್ಫೂರ್ತಿಯ ಮನೆಗೆ ಊಟಕ್ಕೆ ಹೊರಟೆವು. ಮಲೆನಾಡಿನ ಹುಡುಗಿ ಬಯಲುಸೀಮೆಯ ಸೊಸೆಯಾಗಿ ಅಲ್ಲಿಯೇ ನರ್ಸಿಂಗ್ ಹೋಂ ಕಟ್ಟಿಸಿ, ತನ್ನ ಪತಿಯೊಂದಿಗೆ ಬದುಕು ಕಟ್ಟಿಕೊಂಡಿದ್ದಳು. ಸಂಭ್ರಮದಿಂದ ಉತ್ತರ ಕರ್ನಾಟಕದ ರೊಟ್ಟಿ ಊಟ, ಗೋಧಿ ಹುಗ್ಗಿ ಬಡಿಸಿದಳು. ಎಲ್ಲರೂ ಭಿಡೆ ಇಲ್ಲದೆ ಎರೆಡೆರೆಡು ಬಾರಿ ಹಾಕಿಸಿಕೊಂಡು ತಿಂದೆವು.
ಸಂಜೆ ನಾಲ್ಕು ಗಂಟೆಗೆ ಉತ್ತರ ಕರ್ನಾಟಕದ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾದ ಜ್ಞಾನಯೋಗಾಶ್ರಮವನ್ನು ನೋಡಲು ಹೊರಟೆವು. ಈ ಆಶ್ರಮವನ್ನು ಸ್ಥಾಪಿಸಿದವರು ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು. ಅವರ ನಂತರ ಈ ಆಶ್ರಮವನ್ನು ಮುನ್ನೆಡಿಸಿದವರು ಸಿದ್ದೇಶ್ವರ ಶ್ರೀಗಳು. ಈ ಆಶ್ರಮದ ಸುತ್ತಲೂ ಹಚ್ಚ ಹಸಿರು ಹೊದ್ದ ಗಿಡಮರಗಳು ನಮ್ಮನ್ನು ಸ್ವಾಗತಿಸಿದ್ದವು. ದೊಡ್ಡದಾದ ಬಯಲಿನ ಮಧ್ಯೆ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆ. ಅಲ್ಲಿಗೆ ಬಂದ ಹೆಣ್ಣು ಮಗಳೊಬ್ಬಳು ಊದಿನ ಕಡ್ಡಿ ಹಚ್ಚಲು ನೋಡಿದಳು. ಆಗ ಅಲ್ಲಿ ಕಸಗುಡಿಸುತ್ತಿದ್ದ ಸ್ವಯಂ ಸೇವಕಿಯೊಬ್ಬಳು, ‘ತಾಯಿ, ಊದಿನಕಡ್ಡಿ ಹಚ್ಚಬೇಡಿ. ಅಲ್ಲಿಯೇ ಬರೆದಿರುವ ಸೂಚನೆಗಳನ್ನು ನೋಡಿ’ ಎಂದಳು. ಅಲ್ಲಿದ್ದ ಫಲಕದ ಮೇಲೆ, ‘ಕರ್ಪೂರ, ಊದಿನಕಡ್ಡಿ ಬೆಳಗಬೇಡಿ, ತೆಂಗಿನ ಕಾಯಿ ಒಡೆಯಬೇಡಿ’ ಎಂದು ಬರೆಯಲಾಗಿತ್ತು. ಆಗ ಆ ಭಕ್ತೆ, ‘ನಾನು ನನ್ನ ಅಪ್ಪಾಜಿಗೆ ಊದಿನಕಡ್ಡಿ ಬೆಳಗಿದರೆ ನೀನು ಯಾರು ನನ್ನ ತಡೆಯಲು?’ ಎಂದು ಕೂಗಾಡಿದಳು. ನಾವು ಅಚ್ಚರಿಯಿಂದ ಇವರ ಸಂವಾದವನ್ನು ಕೇಳಿದೆವು. ಒಂದೆಡೆ ಶ್ರೀಗಳ ಮಾತುಗಳನ್ನು ಪಾಲಿಸಬೇಕೆಂಬ ಶಿಸ್ತು ಹೊತ್ತ ಸ್ವಯಂ ಸೇವಕಿ, ಮತ್ತೊಂದೆಡೆ ಶ್ರೀಗಳನ್ನು ತನ್ನ ಅಪ್ಪಾಜಿಯೆಂದು ಭಾವನಾತ್ಮಕವಾಗಿ ಎದೆಗೆ ಅಪ್ಪಿಕೊಂಡಿದ್ದ ಭಕ್ತಳು. ನಾವು ಯಾರು ಸರಿ? ಯಾರು ತಪ್ಪು? ಎಂಬ ಗೊಂದಲದಲ್ಲಿ ಸಿಲುಕಿದ್ದಾಗ, ಶ್ರೀಗಳ ಮಾತುಗಳು ನಮ್ಮ ಅಂತರಂಗದಲ್ಲಿ ಪ್ರತಿಧ್ವನಿಸುತ್ತಿದ್ದವು –
‘ಸತ್ಯವನ್ನು ಹುಡುಕುವುದು ಅಲ್ಲ, ಅದನ್ನು ಅರಿಯುವುದು ಮುಖ್ಯ’.
‘ಆಸೆಗಳು ಕಡಿಮೆಯಾದರೆ ದುಃಖವೂ ಕಡಿಮೆಯಾಗುತ್ತದೆ.’
‘ಮನಸ್ಸು ಶಾಂತವಾಗಿದ್ದರೆ ಜೀವನ ಸುಂದರವಾಗುತ್ತದೆ.’
‘ನೀನು ಹುಡುಕುತ್ತಿರುವ ದೇವರು ನಿನ್ನೊಳಗೆ ಇದ್ದಾನೆ’.
‘ನಿನ್ನ ಸ್ವರೂಪವೇ ಶಾಂತಿ ಮತ್ತು ಆನಂದ. ಅಹಂಕಾರವೇ ಎಲ್ಲಾ ಸಮಸ್ಯೆಗಳ ಮೂಲ.’
‘ಜ್ಞಾನವೇ ಮೋಕ್ಷಕ್ಕೆ ನೇರ ಮಾರ್ಗ’.
ಸಿದ್ದೇಶ್ವರ ಶ್ರೀಗಳು ತಮ್ಮ ಸರಳತೆ ಹಾಗೂ ಜ್ಞಾನಕ್ಕೆ ಹೆಸರಾದವರು. ಸದಾ ಬಿಳಿ ಪಂಚೆ ಮತ್ತು ಕಿಸೆಯಿಲ್ಲದ ಶರ್ಟ್ ಧರಿಸುತ್ತಿದ್ದ ಶ್ರೀಗಳು ಅತ್ಯಂತ ಸಾಮನ್ಯ ಜೀವನ ನಡೆಸುತ್ತಿದ್ದರು. ಅತ್ಯಂತ ಗಹನವಾದ ವೇದಾಂತ ಮತ್ತು ಆಧ್ಯಾತ್ಮದ ವಿಷಯಗಳನ್ನು ಸಾಮಾನ್ಯರಿಗೂ ತಿಳಿಯುವಂತೆ ಸರಳವಾದ ಭಾಷೆಯಲ್ಲಿ ಉದಾಹರಣೆಗಳೊಂದಿಗೆ ವಿವರಿಸುತ್ತಿದ್ದರು. ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿದ್ದ ಅಪ್ಪಾಜಿಯವರು ಪ್ರಶಸ್ತಿ ಪುರಸ್ಕಾರಗಳಿಂದ ದೂರವೇ ಉಳಿದಿದ್ದರು. ಭಾರತ ಸರ್ಕಾರ ನೀಡಿದ್ದ ‘ಪದ್ಮಶ್ರೀ’ ಪ್ರಶಸ್ತಿಯನ್ನು ಕೂಡ ನಯವಾಗಿ ತಿರಸ್ಕರಿಸಿದ್ದರು. ಜನವರಿ 2, 2023 ರಂದು ಅವರು ಲಿಂಗೈಕ್ಯರಾದರು. ಅಪ್ಪಾಜಿಯವರಿಗೆ ಅಂತಿಮ ನಮನ ಸಲ್ಲಿಸಲು ಜನಸಾಗರವೇ ನೆರೆದಿತ್ತು. ಶ್ರೀಗಳವರ ಇಚ್ಛೆಯಂತೆ ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ಕೇವಲ ಅಗ್ನಿಸ್ಪರ್ಶದ ಮೂಲಕ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ನಾವು ಆ ಬಯಲಿನಲ್ಲಿ ಬಯಲಾದ ಶ್ರೀಗಳ ಭೌತಿಕ ಶರೀರವನ್ನು ಅಗ್ನಿಸ್ಪರ್ಶ ಮಾಡಿದ ಸ್ಥಳದಲ್ಲಿ ನಿಂತು ನಮಸ್ಕರಿಸಿದೆವು. ಅಲ್ಲಿಯೇ ಇದ್ದ ಧ್ಯಾನ ಮಂದಿರದಲ್ಲಿ ಮುಂದೆ ಕುಳಿತು ಧ್ಯಾನ ಮಾಡಿದೆವು. ಅಲ್ಲಿದ್ದ ಗ್ರಂಥಾಲಯದ ಒಳಹೊಕ್ಕು ಅತ್ಯಮೂಲ್ಯವಾದ ಜ್ಞಾನಬಂಢಾರವನ್ನು ವೀಕ್ಷಿಸಿದೆವು. ಈ ಆಶ್ರಮದ ಉದ್ದೇಶಗಳನ್ನು ಅಲ್ಲಿದ್ದ ಫಲಕದ ಮೇಲೆ ಹೀಗೆ ಬರೆಯಲಾಗಿತ್ತು,
1) ಆಧ್ಯಾತ್ಮ ಪ್ರಸಾರ: ಜಾತಿಮತದ ಬೇಧವಿಲ್ಲದೆ ಎಲ್ಲರಿಗೂ ಜ್ಞಾನವನ್ನು ಹಂಚುವುದು
2) ಸರಳತೆ: ಜೀವನದಲ್ಲಿ ಶಿಸ್ತು ಮತ್ತು ಸರಳತೆಯನ್ನು ಅಳವಡಿಸಿಕೊಳ್ಳುವುದು
3) ಸಮಾಜ ಸೇವೆ: ಜನರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವುದು.’
ಶ್ರೀಗಳ ಪ್ರವಚನಗಳ ಸಾರವನ್ನು ಹೀಗೆ ವಿಂಗಡಿಸ ಬಹುದಾಗಿದೆ –
1) ಬದುಕು ಒಂದು ಹಬ್ಬ : ಬದುಕು ದೇವರಿತ್ತ ವರ. ಇದನ್ನು ಸಂಕಟಪಡುತ್ತಾ ಕಳೆಯಬಾರದು. ಜೀವನದ ಪ್ರತಿಯೊಂದು ಕ್ಷಣವನ್ನೂ ಪ್ರೀತಿಯಿಂದ ಸವಿಯಬೇಕು.
2) ಅಂತರಂಗದ ಅರಿವು: ನಮ್ಮ ಹೊರಗಿನ ಪ್ರಪಂಚಕ್ಕಿಂತ ಒಳಗಿನ ಪ್ರಪಂಚ ದೊಡ್ಡದಿದೆ. ಕಣ್ಣು ಹೊರಗಿದನ್ನು ಗಮನಿಸುತ್ತದೆ ಮನಸ್ಸು ಒಳಗಿದನ್ನು ಗಮನಿಸಬೇಕು. ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಿ ಮನಸ್ಸನ್ನು ಶಾಂತವಾಗಿರಿಸಿಕೊಂಡರೆ ಮನುಷ್ಯ ದೈವತ್ವಕ್ಕೇರಬಲ್ಲ.
3) ಸರಳತೆ ಮತ್ತು ಅಪರಿಗ್ರಹ : ನಮಗೆ ಎಷ್ಟು ಬೇಕೋ ಅಷ್ಟನ್ನೇ ಬಳಸಬೇಕು. ವಸ್ತುಗಳ ಮೇಲಿನ ವ್ಯಾಮೋಹ ಬಿಟ್ಟರೆ ಮನುಷ್ಯ ಮುಕ್ತನಾಗುತ್ತಾನೆ.
4) ಕಾಯಕವೇ ಕೈಲಾಸ: ಬಸವಣ್ಣನವರ ತತ್ವದಂತೆ ಕೆಲಸದಲ್ಲಿ ದೇವರನ್ನು ಕಾಣಬೇಕೆಂದು ಅವರು ಬೋಧಿಸುತ್ತಿದ್ದರು. ಯಾವುದೇ ಕೆಲಸ ಕೀಳಲ್ಲ, ನಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ಮಾಡುವುದೇ ಅತಿದೊಡ್ಡ ಪೂಜೆ. ಫಲಾಫಲಗಳ ನಿರೀಕ್ಷೆಯಿಲ್ಲದೇ ಕರ್ತವ್ಯ ನಿರ್ವಹಿಸುವುದೇ ನಿಜವಾದ ಯೋಗ.
5) ಸಮಚಿತ್ತ: ಸಾಗರದ ಅಲೆಗಳು ಬಂದು ಹೋಗುವಂತೆ ಸುಖದುಃಖಗಳು ಬಂದು ಹೋಗುತ್ತವೆ. ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಹೊಂದಬೇಕು.
ಶ್ರೀಗಳವರ ಪ್ರಮುಖ ಕೃತಿಗಳು – ಅಮೃತ ಬಿಂದುಗಳು, ಸಿದ್ದಾಂತ ಶಿಖಾಮಣಿ, ಅಲ್ಲಮ ಪ್ರಭುದೇವರ ವಚನ ನಿರ್ವಚನ, ಜ್ಞಾನದೀವಿಗೆ ಪ್ರವಚನ ಮಾಲೆ ಇತ್ಯಾದಿ
ಜ್ಞಾನಯೋಗಾಶ್ರಮ ನಮ್ಮೆಲ್ಲರ ಅಂತರಂಗದಲ್ಲಿ ಜ್ಞಾನದ ಬೆಳಕಿನ ಹೊಂಗಿರಣಗಳನ್ನು ಬೆಳಗಿತ್ತು. ಇದೇ ನಮ್ಮ ಬದುಕಿನ ಸಾರ್ಥಕ ಕ್ಷಣ ಎಂಬ ಭಾವ ಮೂಡಿತ್ತು. ಸಹ್ಯಾದ್ರಿ ಗೆಳತಿಯರೆಲ್ಲಾ ಮೌನಕ್ಕೆ ಶರಣಾಗಿದ್ದರು. ಎಲ್ಲರ ಮನದಲ್ಲಿ ಅಪ್ಪಾಜಿಯವರ ಸಂದೇಶ ರಿಂಗಣಿಸುತ್ತಿತ್ತು, ‘ಬದುಕು ಅತಿ ಸರಳವಾಗಿರಲಿ. ಆದರೆ ಆಲೋಚನೆಗಳು ಉನ್ನತವಾಗಿರಲಿ. ಜೀವನದ ಪ್ರತಿಯೊಂದು ಕ್ಷಣವನ್ನೂ ಪ್ರೀತಿಯಿಂದ ಸವಿಯಬೇಕು.’

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ


