ಜಾತ್ರೆ ಎಂದರೆ ತಕ್ಷಣ ಹೊಳೆಯುವುದು ಜನಜಂಗುಳಿ. ಅಸಂಖ್ಯಾತ ಜನರು ಒಂದೆಡೆ ಸೇರಿ ಗುಂಪಾಗಿದ್ದರೆ ಅದನ್ನು ಏನು ಜನಜಾತ್ರೆಯಪ್ಪಾ ! ಎನ್ನುವುದುಂಟು ಜಾತ್ರೆ ಅಥವ ಪರಿಷೆ ಎಂದರೆ ಬಹುಶಃ ಯಾತ್ರೆ ಎಂಬ ಪದದ ಆಡುರೂಪ ಇರಬೇಕು. ಜಾತ್ರೆಯಲ್ಲಿ ಒಂದು ದೈವಿಕ ನೆಲೆಯಿರಲೇಬೇಕು. ಒಂದು ದೇವಾಲಯವೋ, ಭಕ್ತಿಯ ಶಕ್ತಿ ಕೇಂದ್ರವೋ, ಒಂದು ಜನರ ಆರಾಧ್ಯದೈವ ಇರಬೇಕು. ಗ್ರಾಮೀಣ ಜನರಿಗೆ ಸಾಮಾನ್ಯವಾಗಿ ಯುಗಾದಿ ಹಬ್ಬದ ಹಿಂಚುಮುಂಚು ಇಂತಹ ಜಾತ್ರೆಗಳನ್ನಾಚರಿಸುವುದು ರೂಢಿಯಾಗಿದೆ. ಆ ಸಮಯದಲ್ಲಿ ಸುಗ್ಗಿ ಮುಗಿದು ಜನರೂ ನೆಮ್ಮದಿಯಾಗಿದ್ದು ಅವರಿಗೆ ಒಂದು ಬದಲಾವಣೆ ಅಥವಾ ಮಾನಸಿಕ ಹಿಗ್ಗನ್ನು ಹೊತ್ತು ತರುವ ಈ ಆಚರಣೆ ಬಹು ಸಂಭ್ರಮದ ಒಗ್ಗೂಡುವಿಕೆ. ಊರೆಲ್ಲ, ಕೆಲವು ಬಾರಿ ಸುತ್ತೆಂಟು ಹಳ್ಳಿಯವರೂ ಕೂಡಿ ಇಂತಹ ಆಚರಣೆಯಲ್ಲಿ ಪಾಲ್ಗೊಳ್ಳುವುದು ಪರಿಪಾಠ. ಪ್ರಮುಖ ಊರಿನ ಗ್ರಾಮದೇವತೆಯೋ, ಅಥವಾ ಸುತ್ತಮುತ್ತಲಿನ ಪ್ರಸಿದ್ಧವಾದ ದೇವಾಲಯದ ಉತ್ಸವವೋ ಜಾತ್ರೆಯ ರೂಪ ಪಡೆಯುತ್ತದೆ.
ಜಾತ್ರೆಗಳಲ್ಲಿ ಹಲವಾರು ವಿಧಗಳುಂಟು. ಕೆಲವು ಗ್ರಾಮಗಳಲ್ಲಿ ಒಂದೇ ದಿನ ದೇವತೆಯ ಉತ್ಸವ, ಅನ್ನದಾಸೋಹ, ಎಲ್ಲ ಮನೆಗಳಲ್ಲಿ ನಂಬಿಕೆಯ ಆಚರಣೆಗಳು ಸಂಜೆಯ ಕಾಲಕ್ಕೆ ಹರಿಕಥೆಯೋ, ಪುರಾಣಕಥೆಯೋ, ನಾಟಕವೋ ನಡೆಯುತ್ತದೆ. ಅಲ್ಲಿಗೆ ಜಾತ್ರೆಯ ಸಡಗರ ಅಂತ್ಯವಾಗುತ್ತದೆ. ಆದರೆ ಇದಕ್ಕಾಗಿ ತಯಾರಿಗಳು ಒಂದು ವಾರದಿಂದಲೇ ನಡೆದಿರುತ್ತವೆ. ಇನ್ನು ಕೆಲವು ಜಾತ್ರೆಗಳು ಒಂದು ವಾರ, ಹತ್ತು ದಿನಗಳು ನಡೆಯುವುದುಂಟು. ಅಲ್ಲಿನ ಕಾರ್ಯಕ್ರಮಗಳಲ್ಲಿ ವೈವಿಧ್ಯತೆಯೂ ಇರುತ್ತದೆ.
ನಮ್ಮ ಬಾಲ್ಯದಲ್ಲಿ ನಾನು ಕಂಡ ನಮ್ಮ ಗ್ರಾಮದ ಸಮೀಪವೇ ಇರುವ ವೀರಭದ್ರೇಶ್ವರಸ್ವಾಮಿಯ ಜಾತ್ರೆಯ ಪ್ರತ್ಯಕ್ಷ ಅನುಭವಗಳು ನೆನಪಾಗುತ್ತವೆ. ಅದು ಒಂದೇ ದಿನದ ಜಾತ್ರೆ. ನಮ್ಮೂರಿನಿಂದ ಮಡಿಯುಟ್ಟು ಪೂಜಾ ಪರಿಕರಗಳನ್ನು ತೆಗೆದುಕೊಂಡು ಹೊರಟಿದ್ದ ಮನೆಯ ಹಿರಿಯರ ಜೊತೆ ನಾನು ಚಿಕ್ಕಹುಡುಗಿ ಹೆಜ್ಜೆಹಾಕಿದ್ದೆ. ಮನೆಯಿಂದ ಸುಮಾರು ಎರಡು ಮೈಲು ದೂರ ಕಾಲ್ನಡಿಗೆಯ ನಂತರ ಆರಾಧ್ಯದೈವ ವೀರಭದ್ರನ ಗುಡಿ. ದೇವಸ್ಥಾನವಿದ್ದ ಊರೂ ಪುಟ್ಟ ಗ್ರಾಮವೇ ಆದ್ದರಿಂದ ಅಲ್ಲಿನ ಜನರೆಲ್ಲರ ಒಡನಾಟ ಹಿರಿಯರಾದ ನಮ್ಮ ತಾತ, ಅಜ್ಜಿಯರಿಗೆ ಇತ್ತು. ಮೊದಲಿಗೆ ಯಾರದ್ದೋ ಪರಿಚಯಸ್ಥರ ಮನೆಗೆ ಹೋಗಿ ಕೈಕಾಲುಮುಖ ತೊಳೆದುಕೊಂಡು ದೇವಾಲಯಕ್ಕೆ ದರ್ಶನಕ್ಕೆಂದು ತೆರಳಿದೆವು. ಪೂಜೆಯ ನಂತರ ಪರೋಹಿತರಿಂದ ತೀರ್ಥಪ್ರಸಾದ, ಆಶೀರ್ವಾದಗಳನ್ನು ಪಡೆದು ಊರಿನ ಪ್ರಮುಖರೊಬ್ಬರ ಮನೆಯ ಮುಂದಿದ್ದ ಜಗುಲಿಯಲ್ಲಿ ಕುಳಿತೆವು. ಇನ್ನೂ ತೇರಿನ ಅಲಂಕಾರ ನಡೆದಿತ್ತು. ಸುಮಾರು ಮೂವತ್ತು ಅಡಿಯಷ್ಟು ಉದ್ದವಿದ್ದ ಭದ್ರವಾದ ಬೊಂಬಿಗೆ ಹಿತ್ತಾಳೆಯಿಂದ ಮಾಡಿದ ಅನೇಕ ಕೊಳಗಗಳಂಥ ಬಳೆಗಳನ್ನು ಶಾಸ್ತ್ರೀಯ ರೀತಿಯಲ್ಲಿ ಜೋಡಿಸಿ ಅಂತಿಮವಾಗಿ ತುದಿಯಲ್ಲಿ ಕಳಸದಂತಿದ್ದ ಬಳೆಯಿಂದ ತಂತಿಯಿಂದ ಕಟ್ಟಿ ಭದ್ರಪಡಿಸಿದರು. ಅದೇ ನಂದೀಧ್ವಜ. ಅದನ್ನು ನೇರವಾಗಿ ನಿಲ್ಲಿಸಿ ಬಲವಾದ ಇಬ್ಬರು ಮೂವರು ಅದಕ್ಕೆ ಮೂರೂಕಡೆಗಳಲ್ಲಿ ಕಟ್ಟಿದ್ದ ಹಗ್ಗಗಳಿಂದ ಅಲುಗಾಡದಂತೆ ಹಿಡಿದುಕೊಂಡಿದ್ದರು. ಆಗ ಪುರೋಹಿತರು ಮಂಗಳವಾದ್ಯ ಸಮೇತ ಬಂದು ಧ್ವಜಕ್ಕೆ ಪೂಜೆ ಸಲ್ಲಿಸಿದರು. ಧ್ವಜದಲ್ಲಿದ್ದ ಅನೇಕ ಹಿತ್ತಾಳೆಯ ಬಳೆಗಳ ಅಂಚಿಗೆ ಜೋಡಿಸಿದ್ದ ಗೆಜ್ಜೆಗಳ ಶಬ್ದವು ಮೊದಲು ಧ್ವಜವನ್ನು ಎತ್ತಿ ಕುಣಿಸಿದಾಗ ಝಲ್ಝಲ್ ಎಂದು ಕೇಳಿಸಿತು. ಧ್ವಜವನ್ನು ದೇವಾಲಯದ ಮುಂಬಾಗದಲ್ಲಿ ಸ್ವಲ್ಪ ಹೊತ್ತು ಉತ್ಸಾಹಿ, ಬಲಶಾಲಿಗಳಾದ ಅನುಭವಿಗಳು ಕರಡಿ ಮಜಲಿನ ತಾಳಕ್ಕೆ ತಕ್ಕಂತೆ ಡುಗ್ಗಚುಕ್ಕ ಡುಕ್ಕಚುಕ್ಕ ಎಂದು ಕುಣಿಸಿದರು. ಅದನ್ನು ನೋಡುವುದೇ ಚೆಂದ. ನಂತರ ತೇರಿನಲ್ಲಿ ಸ್ಥಾಪಿಸಿದ್ದ ಪೀಠದಮೇಲೆ ದೇವರ ಉತ್ಸವ ಮೂರ್ತಿಯನ್ನು ಹೊತ್ತು ತಂದು ಭದ್ರವಾಗಿ ಪ್ರತಿಷ್ಠಾಪಿಸಿದರು. ಅತ್ತಿತ್ತ ನಾಲ್ಕಾರು ಜನರ ಪುರೋಹಿತ ವರ್ಗದವರು ಅದನ್ನು ಅಲುಗಾಡದಂತೆ ಹಿಡಿದು ಕುಳಿತುಕೊಂಡರು.
ಮೊದಲೇ ನಿಗದಿಯಾಗಿದ್ದ ಶುಭಮುಹೂರ್ತದಲ್ಲಿ ಊರಿನ ಪ್ರಮುಖರಿಂದ ಸ್ವಾಮಿಗೆ ಮಂಗಳಾರತಿ ಬೆಳಗಿದ ನಂತರ ಅವರದ್ದೇ ಮುಂದಾಳತ್ವದಲ್ಲಿ ರಥಕ್ಕೆ ಕಟ್ಟಿದ್ದ ಬಲವಾದ ನಾರಿನ ಹಗ್ಗಗಳಿಂದ ಎಳೆಯುವ ಪ್ರಯತ್ನಕ್ಕೆ ಚಾಲನೆ ನೀಡಿದರು. ತೇರಿನ ಮುಂದೆ ಸುಮಾರು ಇಪ್ಪತ್ತು ಅಡಿಗಳಷ್ಟು ದೂರದಲ್ಲು ನಂದಿಧ್ವಜವನ್ನು ಹೊತ್ತಿದ್ದವರು ನಡೆದಿದ್ದರು. ಅದನ್ನು ಎತ್ತಿ ಕುಣಿಸುವವರು ತಮ್ಮ ಹಗಲಿನಿಂದ ಒಂದು ಪಾರ್ಶ್ವಕ್ಕೆ ಜೋತುಬಿದ್ದಂತಿದ್ದ ಜೋಳಿಗೆಯಲ್ಲಿ ಧ್ವಜದ ಬುಡವನ್ನು ಕೂರಿಸಿ ತಮ್ಮೆರಡೂ ಕೈಯಿಂದ ಮೇಲೇ ಹಿಡಿದುಕೊಂಡು ಹೆಜ್ಜೆಹಾಕುತ್ತಾ ತಾಳಕ್ಕೆ ತಕ್ಕಂತೆ ಧ್ಜಜವನ್ನು ಕುಣಿಸುವ ಕಲೆ ಬಹಳ ಶಕ್ತಿಯನ್ನು, ಚಾಕಚಕ್ಯತೆ ಮತ್ತು ಅಭ್ಯಾಸವನ್ನೂ ಬೇಡುವಂತಹುದು. ಅದನ್ನು ನೋಡುತ್ತ ಜನರು ಮೈಮರೆತು ತಾವೂ ಕಾಲುಗಳನ್ನು ಆಡಿಸಿ ಕುಣಿಯುತ್ತಿದ್ದರು. ಕರಡಿಮಜಲಿನ ಶಬ್ಧ, ಧ್ವಜದ ಗಿಲಿಕೆಗಳ ಶಬ್ಧ ಮತ್ತು ವೀರಭದ್ರನ ಹೆಸರಿನ ಜೈಜೈಕಾರ ಮೇಳವಿಸಿ ಮನಸ್ಸನ್ನು ಸೂರೆಗೊಂಡಿತ್ತು. ತೇರು ಮುಂದಕ್ಕೆ ಸರಿದು ಊರಿನ ಪ್ರಮುಖ ಬೀದಿಗಳಲ್ಲಿ ನಿಧಾನವಾಗಿ ನಡೆದಂತೆ ಆಯಾ ಮನೆಯವರು ಪೂಜೆಗಾಗಿ ವಸ್ತುಗಳನ್ನು ಕೊಟ್ಟು ಆಶೀರ್ವಾದವನ್ನು ಬೇಡುತ್ತಿದ್ದರು. ಸುತ್ತಾರು ಗ್ರಾಮಗಳ ಜನರ ಜಂಗುಳಿ ತಂಬಿತುಳುಕಿತ್ತು. ಭಕ್ತರು ಬಾಳೆಹಣ್ಣಿಗೊಂದು ಸುಗಂಧ ಬೀರುವ ಧವನದ ಕುಡಿಯನ್ನು ಸಿಕ್ಕಿಸಿ ನಿಂತಲ್ಲಿಂದಲೇ ತೇರಿನ ಮೇಲಕ್ಕೆ ಎಸೆಯುತ್ತಿದ್ದರು. ಕೈಮುಗಿಯುತ್ತಿದ್ದರು. ಎಲ್ಲರ ಚಿತ್ತ ಉತ್ಸವ ಮೂರ್ತಿಯತ್ತ, ಎಲ್ಲರ ಜೈಕಾರ ವೀರಭದ್ರನ ಸ್ಮರಣೆಯಲ್ಲಿ, ಮೈ ಪುಳಕಗೊಂಡಿತ್ತು.
ಜಾತ್ರೆಯೆಂದರೆ ಬರಿಯ ತೇರನ್ನೆಳೆಯುವದಷ್ಟೇ ಅಲ್ಲ. ರಸ್ತೆಯ ಬದಿಯಲ್ಲಿ ಸಣ್ಣಪುಟ್ಟ ವ್ಯಾಪಾರಿಗಳ ಅಂಗಡಿಗಳೂ ನೆರೆದಿದ್ದವು. ಅಲ್ಲಿ ಹೂವು, ಹಣ್ಣು, ತೆಂಗಿನಕಾಯಿ, ಅರಿಸಿನ, ಕುಂಕುಮ, ಇತರೆ ಪೂಜಾ ಸಾಮಗ್ರಿಗಳ ಜೊತೆಯಲ್ಲಿ ಕಡಲೆಪುರಿ, ಖಾರಾಸೇವು, ಬೆಂಡು, ಬತ್ತಾಸುಗಳಿದ್ದವು. ಹಲವು ರೀತಿಯ ಸುಹಿತಿಂಡಿಗಳು, ಪುಟ್ಟ ಮಕ್ಕಳಿಗಾಗಿ ಗಿಲಿಕೆ, ಆಟದ ಚೆಂಡು ಮುಂತಾದ ವಸ್ತುಗಳೂ ಕಣ್ಣು ಸೆಳೆದಿದ್ದವು. ಹುಡುಗಿಯರಿಗೆ ಅಲಂಕಾರಿಕ ವಸ್ತುಗಳಾದ ಗಾಜಿನ ಬಳೆಗಳು, ಪೌಡರ್, ಜಡೆಗೆ ಕಟ್ಟುವ ಟೇಪು, ಕಾಡಿಗೆ ಮುಂತಾದವಿದ್ದವು. ಆಗೆಲ್ಲ ಗ್ರಾವiಗಳಲ್ಲಿ ಈಗಿನಂತೆ ದೊಡ್ಡ ಅಂಗಡಿಗಳಾಗಲೀ, ಫ್ಯಾನಿಸ್ಟೋರ್‌ಗಳಾಗಲಿ ಇರಲಿಲ್ಲ, ಆದ್ದರಿಂದ ಹೆಣ್ಣುಮಕ್ಕಳು, ಬಂದಿದ್ದ ಜನರುಗಳು ಇಲ್ಲಿಗೆ ಬಂದಿದ್ದ ಅಂಗಡಿಗಳಿಗೆ ಗ್ರಾಹಕರಾಗಿದ್ದರು. ತಮ್ಮೂರಿಗೆ ಹಿಂತಿರುಗಿದಾಗ ಇದನ್ನು ಇಂತಹ ಜಾತ್ರೆಯಲ್ಲಿ ಕೊಂಡದ್ದು ಎಂದು ಹೇಳಿಕೊಳ್ಳುತ್ತಿದ್ದುದುಂಟು. ಜಾತ್ರೆಗೆ ಹೋಗಿ ಬಂದರೆಂದರೆ ಕಡಲೆಪುರಿ ಹಂಚುತ್ತಿದ್ದರು. ಅಷ್ಟರಿಂದಲೇ ಸಂತೃಪ್ತಿಯಿರುತ್ತಿತ್ತು. ಸರಳ ಜೀವನದ ಇಂತಹ ಚಿಕ್ಕಪುಟ್ಟ ಸಂಭ್ರಮಗಳ ಜೊತೆಗೆ ಭಕ್ತಿಯ ಸಿಂಚನ. ಈಗ ನೆನಪಾದರೆ ಈಗಿನ ನಮ್ಮ ಬದುಕು ಎಷ್ಟೊಂದು ಕೃತಕ ಮತ್ತು ಅತೃಪ್ತಿಯಿಂದ ಕೂಡಿದೆ ಎನ್ನಿಸುತ್ತದೆ.
ಜಾತ್ರೆಗಳಲ್ಲಿ ಬಹಳ ದಿನಗಳು ನಡೆಯುವ ಜಾತ್ರೆಗಳೆಂದರೆ ಉದಾಹರಣೆಗೆ, ಸಿದ್ಧಗಂಗಾಜಾತ್ರೆ, ಸುತ್ತೂರು ಜಾತ್ರೆ, ಘಾಟಿಸುಬ್ರಮಣ್ಯ ಜಾತ್ರೆ, ಇತ್ತೀಚೆಗೆ ಮುಕ್ತಾಯವಾದ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ ಇನ್ನೂ ಬಹಳಷ್ಟು ವಿಶೇಷಗಳನ್ನು ಹೊಂದಿವೆ. ಅಲ್ಲಿ ದೈನಂದಿನ ಕಾರ್ಯಕ್ರಮಗಳು ಮೊದಲೇ ನಿಗದಿಪಡಿಸಲ್ಪಟ್ಟು ಮುದ್ರಣವಾದ ಆಹ್ವಾನಪತ್ರಿಕೆಗಳಲ್ಲಿ ಜನರಿಗೆ ದೊರಕುತ್ತವೆ. ಎಲ್ಲ ಜಾತ್ರೆಗಳಲ್ಲಿ ಮುಖ್ಯವಾಗಿ ಇರುವುದು ಅನ್ನ ದಾಸೋಹ. ಸಾವಿರಾರು ಭಕ್ತಾದಿಗಳಿಗೆ ದಿನವೂ ಪ್ರಸಾದ ನೀಡುವ ಪದ್ಧತಿ ಎಲ್ಲ ಜಾತಿವಿಜಾತಿಗಳನ್ನೂ ಮೀರಿ ನಡೆಸುತ್ತಾರೆ. ಇದಕ್ಕಾಗಿ ನಂಬಿದ ಆಸ್ತಿಕ ಭಕ್ತರು ತಮ್ಮೂರಿನಿಂದ ಮೂಟೆಗಟ್ದಳೆ ದವಸಧಾನ್ಯ, ತರಕಾರಿ ಮುಂತಾದ ಪರಿಕರಗಳನ್ನು ತಂದು ವ್ಯವಸ್ಥಾಪಕರಿಗೆ ನೀಡುತ್ತಾರೆ. ಅಲ್ಲಿ ತಯಾರಾಗುವ ಬಹುದೊಡ್ಡ ಪ್ರಮಾಣದ ವ್ಯಂಜನಗಳಿಗೆ ಸ್ವಪ್ರೇರಿತರಾಗಿ ನೂರಾರು ಮಂದಿ ಸ್ವಯಂಸೇವಕರುಗಳು ನೆರವಿನ ಕೆಲಸ ಮಾಡುತ್ತ ಕೈಜೋಡಿಸುತ್ತಾರೆ. ಸುತ್ತೂರಿನ ಒಂದು ಜಾತ್ರೆಯಲ್ಲಿ ನಾನು ಕೇಳಿ ತಿಳಿದ ವಿಷಯ ಒಂದು ಹೊತ್ತಿಗೆ ಸುಮಾರು ಮೂರರಿಂದ ಐದು ಸಾವಿರ ಜನರು ದಾಸೋಹ ಸ್ವೀಕರಿಸುತ್ತಾರಂತೆ. ಹತ್ತು ದಿನಗಳಿಗೆ ಎರಡು ಹೊತ್ತಿಗೆ ಎಂದು ಲೆಕ್ಕಹಾಕಿದರೆ ಆಶ್ಚರ್ಯವಾಗುತ್ತದೆ. ಹೀಗೇ ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿರುವ ಜಾತ್ರೆಯನ್ನು ನೋಡಿದಾಗ ಜನರ ನಂಬುಗೆ, ದಾನಿಗಳ ಧಾರಾಳತೆ ಮತ್ತು ಆಯೋಜಕರ ಬದ್ಧತೆಯ ಅರಿವಾಗುತ್ತದೆ.
ಜಾತ್ರೆಯ ಅಷ್ಟೂ ದಿನಗಳು ಬೆಳಗಿನ ಕಾರ್ಯಕ್ರಮದಲ್ಲಿ ಬೇರೆಬೇರೆ ಕಡೆಗಳಿಂದ ಬಂದಿರುವ ವಿದ್ವಾಂಸರುಗಳು, ಸಂಶೋಧಕರು, ಅಧ್ಯಾತ್ಮಿಕ ಗುರುಗಳಿಂದ ಪ್ರವಚನಗಳಿರುತ್ತವೆ. ಮಧ್ಯಾನ್ಹ ಸಾಹಿತ್ಯ, ಸಾಂಸ್ಕೃತಿಕ ಗೋಷ್ಠಿಗಳಿರುತ್ತವೆ. ಇದರಲ್ಲಿ ಸಂಘಸಂಸ್ಥೆಗಳೂ ಪಾಲ್ಗೊಳ್ಳುತ್ತವೆ. ಜನರಿಗೆ ಸಾಕಷ್ಟು ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಸುವರ್ಣಾವಕಾಶ ಇರುತ್ತದೆ. ಸಂಜೆಗೆ ಸಾಮಾನ್ಯವಾಗಿ ಮೊದಲು ಭಜನಾ ಮಂಡಳಿಗಳಿಂದ ದೇವರನಾಮಗಳು. ಇದಕ್ಕಾಗಿಯೇ ಬಹಳಷ್ಟು ಸಂಘಗಳಿಂದ ತಯಾರಿ ಮಾಡಿಕೊಂಡಿರುವ ಭಜನಾ ಗುಂಪುಗಳು ಬರುತ್ತವೆ. ಇವುಗಳಲ್ಲಿ ಅತ್ಯಂತ ಉತ್ಕೃಷ್ಟ ಎನ್ನಿಸಿದ ಭಜನಾ ಗುಂಪುಗಳಿಗೆ ಬಹುಮಾನಗಳನ್ನು ಜಾತ್ರೆಯ ಕೊನೆಯಲ್ಲಿ ನೀಡಲಾಗುತ್ತದೆ. ರಾತ್ರಿ ಹರಿಕಥೆ, ಅಥವಾ ನಾಟಕಗಳು ಅಥವಾ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ.
ವರ್ಷಕ್ಕೊಮ್ಮೆ ಸುತ್ತೂರು ಜಾತ್ರೆಯ ಸಂದರ್ಭದಲ್ಲಿ ನಡೆಸಲಾಗುವ ಸಾಮೂಹಿಕ ವಿವಾಹಗಳು ಪ್ರಸಿದ್ಧ. ಇದಕ್ಕಾಗಿ ಮೊದಲೇ ಜೋಡಿಗಳು ತಮ್ಮ ಹೆಸರು, ವಿವರಗಳನ್ನು ನೀಡಿ ನೋಂದಣಿ ಮಾಡಿಸಿಕೊಂಡಿರುತ್ತಾರೆ. ವಧೂವರರು ಸರಳವಾಗಿ ನಡೆಸಲಾಗುವ ಇಂಥಹ ವಿವಾಹಗಳಲ್ಲಿ ಜಾತಿಭೇದವಿಲ್ಲದೆ ಪಾಲ್ಗೊಳ್ಳುವುದುಂಟು. ಈ ವರ್ಷವೂ ನೂರಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಈ ಮದುವೆಗಳನ್ನು ನೆರವೇರಿಸಲಾಯಿತು.
ಜಾತ್ರೆಯಲ್ಲಿ ಮುಖ್ಯವಾಗಿ ವ್ಯವಸಾಯ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ವಿಭಾಗವಿರುತ್ತದೆ. ಇಲ್ಲಿ ಕೃಷಿಕರಿಗೆ ಪರಿಣತರಿಂದ ತಮ್ಮ ಫಸಲನ್ನು ಯಾವರೀತಿಯಲ್ಲಿ ಹೆಚ್ಚಿಸಿಕೊಳ್ಳಬುದು, ಯಾವ ಹೊಸ ವಿಧಾನಗಳು ಲಾಭದಾಯಕವಾಗುತ್ತವೆ, ಕೃಷಿಯಲ್ಲಿ ಉಪಯೋಗಿಸಬಹುದಾದ ಉಪಕರಣಗಳನ್ನು ಪ್ರದರ್ಶಿಸುವುದರ ಜೊತೆಗೆ ಅವುಗಳನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ಕೂಡ ಪರಿಣತರು ತಿಳಿಸಿಕೊಡುತ್ತಾರೆ. ಸಾಮಾನ್ಯವಾಗಿ ಗೃಹಬಳಕೆಯಲ್ಲಿ ಉಪಯೋಗವಾಗುವ ಅನೇಕ ಉಪಕರಣಗಳನ್ನು ಸ್ಥಳೀಯ ತಯಾರಕರು ಪ್ರದರ್ಶಿಸಿರುತ್ತಾರೆ. ಇದರ ಉಪಯೋಗ ಕೂಡ ಮಾಡಿಕೊಳ್ಳಬಹುದು.
ಇನ್ನು ದನಗಳ ಜಾತ್ರೆ. ಇಲ್ಲಿ ರಾಸುಗಳ ಪ್ರದರ್ಶನ ಒಂದು ವಿಭಾಗವಾದರೆ, ಅವುಗಳ ಕೊಡು ಕೊಳ್ಳುವುದು ಇನ್ನೊಂದು ವಿಭಾಗ. ಅತಿ ಸುಂದರವಾದ ಎತ್ತುಗಳು, ಹಸುಗಳು, ಎಮ್ಮೆಗಳಿಗೆ ಕೂಡ ಬಹುಮಾನಗಳನ್ನು ನೀಡಲಾಗುತ್ತದೆ. ಖರೀದಿದಾರರು ತಮ್ಮ ಆಯ್ಕೆಯ ಎತ್ತುಗಳನ್ನೋ, ಆಕಳುಗಳನ್ನೋ, ಎಮ್ಮೆಗಳನ್ನೋ ಹುಡುಕಿಕೊಂಡು ಜಾತ್ರೆಗೆ ಬರುತ್ತಾರೆ. ಇಲ್ಲಿ ಇವುಗಳನ್ನು ಖರೀದಿಸುವವರು ಮತ್ತು ಮಾರುವವರ ಮಧ್ಯೆ ದಲ್ಲಾಳಿಗಳಿಗೂ ಲಾಭ ಮಾಡಿಕೊಳ್ಳಲು ಅವಕಾಶವಿದೆ. ನಮ್ಮ ಗುರುತಿನವರೊಬ್ಬರು ಎಲ್ಲಾ ಜಾತ್ರೆಗಳಿಗೂ ಭೇಟಿಕೊಟ್ಟು ಈ ಸಮಯದಲ್ಲಿ ದಲ್ಲಾಳಿಯಾಗಿಯೇ ಸಾಕಷ್ಟು ಹಣ ಗಳಿಸುವುದನ್ನು ಕಂಡಿದ್ದೇನೆ.
ಅಂದಿನ ಕಾಲಕ್ಕೆ ಮನರಂಜನೆ, ಉಪಯೋಗ, ದೈವಭಕ್ತಿಗೆ ಅವಕಾಶ, ಖರೀದಿಗಳಿಗೂ ಸದವಕಾಶ ಇದ್ದಂತಹ ಜಾತ್ರೆಗಳಿಗಾಗಿ ಸಾಮಾನ್ಯ ಜನರು ಕಾಯುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಊಟ, ತಿಂಡಿಗಳಿಂದ ಪ್ರಾರಂಭಿಸಿ ದವಸ ಧಾನ್ಯ, ಮನೆಬಳಕೆಯ ವಸ್ತುಗಳು, ಉಡುಪುಗಳು ಎಲ್ಲವನ್ನೂ ಆನ್‌ಲೈನಿನಲ್ಲೇ ಖರೀದಿಸುವವರಿಗೆ ಇಂತಹ ಜಾತ್ರೆಗಳ ಸುಖದ ಅರಿವಾಗುವುದೇ ಇಲ್ಲ. ಬದುಕು ಹೆಚ್ಚು ಸಂಕೀರ್ಣವಾಗಿ ಸಣ್ಣಪುಟ್ಟ ಸಂತೋಷದ ಕ್ಷಣಗಳು ಮಾಯವಾಗಿವೆ. ಸದಾ ಒತ್ತಡದಲ್ಲಿರುವ ಧಾವಂತ ಜನರಿಗೆ ಮಾಲ್‌ಗಳಲ್ಲಿಯೇ ಹೆಚ್ಚು ಆಸಕ್ತಿಯಿದ್ದು ಜಾತ್ರೆಯ ಸುಖದ ಬಗ್ಗೆ ಹೇಳಿದರೂ ಅರ್ಥವಾಗದು. ಇದು ಬಹಳ ವಿಷಾದನೀಯ ಪರಿಸ್ಥಿತಿ.
ಸಾಮಾನ್ಯವಾಗಿ ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಜನರೆಲ್ಲ ಒಗ್ಗೂಡಲು, ಪರಸ್ಪರ ಅರಿತುಕೊಳ್ಳಲು ಜಾತ್ರೆಗಳು ಸಹಾಯಕವಾಗಿದ್ದವು. ಇವು ಭಾರತೀಯ ಸಂಸ್ಕೃತಿಯ ಸಾಮಾಜಿಕ ಒಗ್ಗಟ್ಟು, ಮತ್ತು ಆರ್ಥಿಕ ಚಟುವಟಿಕೆಗಳ ಸಮ್ಮಿಲನವಾಗಿದ್ದವು. ದೇವರಿಗೆ ವಿಶೇಷ ಪೂಜೆಯ ನೆಪದಲ್ಲಿ, ಚೇತೋಹಾರಿ ರಥೋತ್ಸವ, ಕೆಲವು ಕಡೆ ತೆಪ್ಪೋತ್ಸವ, ಹರಕೆಗಳ ಪೂರೈಕೆ, ಭಕ್ತಿಯ ಸಮರ್ಪಣೆ ಜೊತೆಗೆ ಜಾತ್ರೆಯ ಭಾಗವಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನರಂಜನೆ ಮತ್ತು ಸ್ಥಳೀಯರ ವ್ಯಾಪಾರಕ್ಕೊಂದು ಸಣ್ಣ ವೇದಿಕೆ ಕಲ್ಪಿಸುವುದು ಮೂಲ ಉದ್ದೇಶವಾಗಿದೆ. ಪರಂಪರೆಯನ್ನು ಎತ್ತಿ ಹಿಡಿಯುವುದರೊಂದಿಗೆ ಸ್ವಾಮಿಕಾರ್ಯ, ಸ್ವಕಾರ್ಯಗಳನ್ನು ನೆರವೇರಿಸಿಕೊಳ್ಳುವ ಅವಕಾಶವಾಗಿದೆ.
ಜಾತ್ರೆಯ ಬಗ್ಗೆ ಆಲೋಚಿಸಿದಾಗ ನಾವೇಕೆ ಇಷ್ಟೊಂದು ಮುಂದುವರೆದು ಆಧುನಿಕರಾಗಿಬಿಟ್ಟೆವು. ಮೂಲ ಸ್ಥಿತಿಯೇ ಮುಂದುವರೆದಿದ್ದರೆ ಜೀವನವೆಷ್ಟು ಸರಳ ಮತ್ತು ಒತ್ತಡರಹಿತವಾಗಿ ಹಾಯಾಗಿರುತ್ತಿತ್ತು ಎಂದೆನ್ನುಸುವುದು ಸಹಜ. ಒಮ್ಮೊಮ್ಮೆ ನಮ್ಮ ಇಂದಿನ ಸ್ಥಿತಿಯ ಬಗ್ಗೆ ವಿಷಾದವಾಗುತ್ತದೆ. ಇರುವಷ್ಟು ದಿನ ನಮ್ಮ ಬದುಕನ್ನು ಆದಷ್ಟು ಸರಳೀಕರಿಸಿಕೊಳ್ಳುವ ಪ್ರಯತ್ನ ಮಾಡೋಣ. ಹಿಂದಿನ ತೃಪ್ತಿಯ ಜೀವನವನ್ನು ಮರಳಿ ಗಳಿಸುವ ಪ್ರಯತ್ನ ಮಾಡೋಣ.

ಬಿ .ಆರ್.ನಾಗರತ್ನ, ಮೈಸೂರು.
