ಪ್ರವಾಸ

ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-19

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ವಾಪಾಸಾತಿ
ದಿನ 16

ಇದು ನಮ್ಮ ಕಡೆಯ ದಿನ. ಅಂದರೆ ಈ ದಿನ ಎಲ್ಲೂ ಭೇಟಿಯ ಕಾರ್ಯಕ್ರಮ ಇರಲಿಲ್ಲ. ಆದರೆ ಸುಮಾರು 6-8 ಗಂಟೆಗಳ ಕಾಲ ಬಸ್ ಪ್ರಯಾಣ ಮಾಡಿ ಮಿಲನ್ ನಗರ ಸೇರಬೇಕಾಗಿತ್ತು. ಏಕೆಂದರೆ ನಮ್ಮ ವಾಪಸಾತಿ ಮಿಲನ್ ನಗರದಿಂದ ಮಸ್ಕಟ್ ಮೂಲಕ ಬೆಂಗಳೂರಿಗೆ ಬರುವುದಾಗಿತ್ತು. ಮೊದಲಿಗೆ ಈ ಅನಾವಶ್ಯಕ ಪ್ರಯಾಣದ ಬಗ್ಗೆ ಬೇಸರ ಆಯಿತು. ರೋಮ್ ನಿ೦ದಲೇ ಬೆ೦ಗಳೂರಿಗೆ ಟಿಕೆಟ್ ಮಾಡಿಸಿದ್ದರೆ ಈ ಪ್ರಯಾಣದ ಅವಶ್ಯಕತೆ ಇರುತ್ತಿರಲಿಲ್ಲ. ಆಮೇಲೆ ಗೊತ್ತಾದ ವಿಷಯವೆ೦ದರೆ ರೋಮ್ ನಿ೦ದ ಟಿಕೆಟ್ ಬೆಲೆ ತು೦ಬಾ ಜಾಸ್ತಿ. ಆದ್ದರಿ೦ದ ಆಯೋಜಕ ಸ೦ಸ್ಥೆಗಳು ಹಣ ಉಳಿಸಲು ಈ ಮಾರ್ಗ ಅನುಸರಿಸುತ್ತಾರೆ. ಆದರೆ ರೋಮ್ ನಿ೦ದ ಮಿಲನ್ ವರೆಗಿನ ಪ್ರಯಾಣ ಕೂಡ ತು೦ಬಾ ಚೆನ್ನಾಗಿತ್ತು. ಮಾರ್ಗ ಮಧ್ಯೆ ಮೆಡಿಟರೇನಿಯನ್ ಸಮುದ್ರ ನೋಡುವ ಅವಕಾಶ, ಇಟಲಿಯ ಅನೇಕ ಸ್ಥಳಗಳನ್ನು ನೋಡುವ ಅವಕಾಶ ಸಿಕ್ಕಿತು. ಲ೦ಡನ್ ನ ಬೈಸಿಸ್ಟರ್ ವಿಲೇಜ್ ತರಹದ ಶಾಪಿ೦ಗ್ ಸೆ೦ಟರ್ ಬಳಿ 2-3 ಘ೦ಟೆ ವಿರಮಿಸಿದೆವು. ಆಗ ಈ ಪ್ರವಾಸದ ನೆನಪಿನಾರ್ಥ ವಾಗಿ ಕೊಲ೦ಬಿಯಾ ಬ್ರ್ಯಾ೦ಡ್ ನ ಒ೦ದು ಜರ್ಕಿನ್ ಖರೀದಿಸಿದೆ. ಮಧ್ಯದಲ್ಲಿ ಗ್ಯಾಸ್ ಸ್ಟೇಷನ್ ನಲ್ಲಿ ನಮಗೆ ಬೇಕಾದ ತಿಂಡಿ ತಿನಿಸುಗಳನ್ನು ತಿಂದೆವು. (ಬೆಳಗಿನ ಉಪಹಾರದ ನಂತರ ನಮ್ಮ ಪ್ರವಾಸ ಆಯೋಜಕರ ಪ್ರಾಯೋಜಕತ್ವ ಮುಗಿದಿತ್ತು)
ಮಧ್ಯಾಹ್ನದ ನಂತರ ಊಟ, ರಾತ್ರಿಯ ಊಟ, ಮರುದಿನದ ಊಟ ಎಲ್ಲಾ ನಮ್ಮ ನಮ್ಮ ಖರ್ಚಿನಲ್ಲೇ ಮುಗಿಸಬೇಕಾಗಿತ್ತು. ರಾತ್ರಿ ಊಟ ಮತ್ತೆ ಬೆಳಗಿನ ಉಪಹಾರ ವಿಮಾನದಲ್ಲಿ ಆಯಿತು. ನಮ್ಮ ವಿಮಾನ ಮಿಲನ್ ನಿಂದ ಹೊರಟು ಬೆಳಗ್ಗೆ ಸುಮಾರು ಆರು ಗಂಟೆಗೆ ಮಸ್ಕಟ್ ತಲುಪಿತ್ತು ರಾತ್ರಿ ಎಲ್ಲ ಪ್ರಯಾಣ ಸರಿಯಾದ ಆಸನಗಳಿಲ್ಲದೆ ಕುಳಿತುಕೊಳ್ಳಲು ಸರಿಯಾದ ಸ್ಥಳವಿಲ್ಲದೆ ಪ್ರಯಾಣ ಬಹಳ ತ್ರಾಸದಾಯಕವಾಗಿತ್ತು. ಬೆಳಗ್ಗೆ ಮಸ್ಕಟ್ ವಿಮಾನ ನಿಲ್ದಾಣ ಮಾಮೂಲಿ ನಂತೆ ಬಸ್ ಸ್ಟ್ಯಾಂಡ್ ತರಹ ಇತ್ತು.

ಅಲ್ಲಿಂದ ನಮ್ಮ ವಿಮಾನ 9 ಗಂಟೆಗೆ ಸರಿಯಾದ ಸಮಯಕ್ಕೆ ಹೊರಟು ಬೆಂಗಳೂರನ್ನು ನಿಗದಿತ ಸಮಯಕ್ಕೆ ಅಂದರೆ ಮಧ್ಯಾಹ್ನ 2 ಗಂಟೆಗೆ ತಲುಪಿತು.

ಬೆಂಗಳೂರಿನಲ್ಲಿ ವಿಮಾನದಿಂದ ಇಳಿದು ನಮ್ಮ ಅರುಣನ ಟ್ಯಾಕ್ಸಿಯಲ್ಲಿ ಮನೆಗೆ ಹೋಗುತ್ತಿದ್ದಾಗ ನಮ್ಮ ಯೂರೋಪ್ ಪ್ರವಾಸದ ಬಗ್ಗೆ ಅವನು ವಿಚಾರಿಸಿದನು. ಅಲ್ಲೆಲ್ಲ ಹೇಗೆ ಸಾರ್ ಟ್ರಾಫಿಕ್ಕು, ಎಂದು ಕೇಳಿದ. (ಅವರವರ ಚಿಂತೆ ಅವರವರಿಗೆ. ಅವನು ಡ್ರೈವರ್ ಆಗಿದ್ದರಿಂದ ರಸ್ತೆ, ವಾಹನದಟ್ಟಣೆ ಇತ್ಯಾದಿ ವಿಚಾರಿಸಿದ. ರೈತನಾಗಿದ್ದರೆ, ಮಳೆ, ಬೆಳೆ, ಬೇಸಾಯದ ಬಗ್ಗೆ ವಿಚಾರಿಸುತ್ತಿದ್ದರು. ನಮ್ಮ ಜೊತೆಯಲ್ಲಿದ್ದ ಮಿತ್ರರು ತೋಟಗಾರಿಕೆ ವಿಜ್ಞಾನದ ವಿಜ್ಞಾನಿಗಳಾದ್ದರಿ೦ದ ಅವರು ಅಲ್ಲಿಯ ಕ್ಯುಕೆನಾಫ್‌ ಗಾರ್ಡನ್‌ ನಲ್ಲಿ ಹೂವಿನ ಗಿಡಗಳ ತಳಿ ಅವುಗಳ ಸಾಗುವಳಿ ಬಗ್ಗೆ ಚರ್ಚಿಸುತ್ತಿದ್ದರು. ನನ್ನ ತ೦ಗಿ ಭೌತ ವಿಜ್ಞಾನದ ನಿವೃತ್ತ ಪ್ರೊಫೆಸರ್ ಆಗಿದ್ದರಿ೦ದ, ಆಕ್ಸಫರ್ಡ್‌ ವಿಶ್ವವಿದ್ಯಾನಿಲಯ, ಗೆಲಿಲಿಯೊ, ಇವರುಗಳ ಬಗ್ಗೆ ವಿಚಾರಿಸುತ್ತಿದ್ದರು. ನಾವು ಬ್ಯಾ೦ಕ್‌ ನವರು ಅಲ್ಲಿಯ ಏಟಿಎ೦ ಗಳನ್ನು ಗಮನಿಸುತ್ತಿದ್ದೆವು. ) ನಾವು ಮೊದಲನೇ ದಿನದಿಂದ ಕೊನೆಯ ದಿನದವರೆಗೆ ನಮ್ಮ ಪ್ರವಾಸದ ಅನುಭವಗಳನ್ನು ಮೆಲುಕು ಹಾಕುತ್ತಾ, ಕೆಲವೊಂದು ಜಾಗಗಳು ನಿಜಕ್ಕೂ ಸುಂದರವಾಗಿದ್ದವು, ಆದರೆ ಕೆಲವೊಂದು ಜಾಗಗಳು ಐತಿಹಾಸಿಕ ಹಿನ್ನೆಲೆ ಬಿಟ್ಟರೆ ನಮ್ಮ ದೇಶಕ್ಕಿಂತ ಏನೂ ವಿಶೇಷವಾಗಿಲ್ಲ ಎಂದೆ. ಬೆಂಗಳೂರು ತರಹದ ಟ್ರಾಫಿಕ್ಕು ಇತ್ಯಾದಿ ಎಲ್ಲೂ ಇರಲಿಲ್ಲ. ಆದರೆ ಕೇಂದ್ರ ಲಂಡನ್ ನಗರದಲ್ಲಿ ಸ್ವಲ್ಪ ಇತ್ತು ಎಂದೆ. ನಮ್ಮ 16 ದಿನಗಳ ಪ್ರವಾಸದಲ್ಲಿ ಎಲ್ಲೂ ಭೇಟಿಯಾಗದಿದ್ದ ಮಳೆರಾಯ ನಮ್ಮನ್ನು ವಿಮಾನ ನಿಲ್ದಾಣದಲ್ಲೇ ಕಾದಿದ್ದು ಹೀರೋಗಳನ್ನು ಸ್ವಾಗತಿಸುವ೦ತೆ ಸ್ವಾಗತಿಸಿದನು.

ಈಸ್ಟ್ ಆರ್ ವೆಸ್ಟ್ ಇಂಡಿಯಾ ಇಸ್ ದಿ ಬೆಸ್ಟ್ ಎನ್ನುವ ನಾಣ್ನುಡಿ ನೆನಪಾಯಿತು.

1997ರಲ್ಲಿ “ಪರದೇಸ್” ಚಿತ್ರದಲ್ಲಿ ಅಮರೀಶ್ ಪುರಿ ಮತ್ತು ಅಪೂರ್ವ ಅಗ್ನಿ ಹೋತ್ರಿ ಅವರು
ಲಂಡನ್ ದೇಖಾ, ಪ್ಯಾರಿಸ್ ದೆಖಾ,ಔರ್ ದೇಖ ಜಪಾನ್,
ಸಾರೆ ಜಗಮೇ ಕಹಿ ನಹಿ ಹೈ ದೂಸ್ರಾ ಹಿಂದೂಸ್ತಾನ್,
ಐ ಲವ್ ಮೈ ಇಂಡಿಯಾ, ಐ ಲವ್ ಯು ಇಂಡಿಯಾ

ಹಾಡು ಗುನುಗುಣಿಸುತ್ತಾ ಸ೦ಜೆ ಐದು ಗ೦ಟೆಗೆ ಮನೆ ಸೇರಿಕೊಂಡೆವು.

ಪ್ರವಾಸ ಮುಗಿದಿದ್ದರಿ೦ದ, ನಮ್ಮ ಕೆಲವು ಅನುಭವ, ಅನಿಸಿಕೆಗಳು ನೆನಪಿನಾಳದಿ೦ದ ತಲೆಯಲ್ಲಿ ಸುಳಿದಾಡುತ್ತಿದ್ದವು..

ಹಿನ್ನುಡಿ:
 ಯೂರೋಪ್‌ ನ ಕೆಲವು ಕಡೆ ಸ್ವಚ್ಚತೆ ಇಲ್ಲದೇ ಬೇಸರ ಹುಟ್ಟಿಸಿತ್ತು. ಎಲ್ಲ೦ದರಲ್ಲಿ ಸಿಗರೇಟಿನ ತು೦ಡುಗಳ ರಾಶಿ ನೋಡಿ ನಮ್ಮೂರೇ ಮೇಲು ಅನಿಸಿತ್ತು.

 ಅಷ್ಟೊ೦ದು ಹಣ ಖರ್ಚು ಮಾಡಿಕೊ೦ಡು ಪ್ರವಾಸಕ್ಕೆ ಬ೦ದು ಅರ್ಧದಷ್ಟು ಜನ ಬಸ್ಸಿನಲ್ಲಿ ಹೊರಗಿನ ಪ್ರಕೃತಿ ಸೌ೦ದರ್ಯ ನೋಡುವುದು ಬಿಟ್ಟು ನಿದ್ದೆ ಮಾಡುತ್ತಿದ್ದುದನ್ನು ನೋಡಿ, ಮನೆಯಲ್ಲಿದ್ದು ಉಚಿತವಾಗಿ ನಿದ್ದೆ ಮಾಡುವುದು ಬಿಟ್ಟು ದುಡ್ಡು ಕೊಟ್ಟು ನಿದ್ದೆ ಮಾಡುತ್ತಿದ್ದಾರಲ್ಲಾ ಎ೦ದು ನಗು ಬರುತ್ತಿತ್ತು.

 ವಿದೇಶೀ ಕರೆನ್ಸಿಯ ನಾಣ್ಯಗಳು ನಮ್ಮ ದೇಶದಲ್ಲಿ ವಿನಿಮಯ ಮಾಡಲು ಆಗುವುದಿಲ್ಲ, ಆದ್ದರಿ೦ದ ಅಲ್ಲೇ ಖರ್ಚು ಮಾಡಿಬಿಡಿ ಎ೦ದು ಯಾರೋ ಹೇಳಿದ್ದರಿ೦ದ, ನಮ್ಮ ಭಾವನವರು 1 ಯೂರೋ ನಾಣ್ಯ ಹಿಡಿದು, ಏಟಿಎ೦ ತರಹದ ಮೆಶಿನ್ನಲ್ಲಿ ಕಾಫಿ ಪಡೆಯಲು ಪ್ರಯತ್ನಿಸಿ ನನ್ನ ನೆರವು ಕೇಳಿದರು. ನಾನು ಅಲ್ಲಿ ಚಿತ್ರದಲ್ಲಿ ಕಾಣುವ ಯಾವುದಾದರೂ ಒ೦ದನ್ನು ಮುಟ್ಟಿ ನಾಣ್ಯವನ್ನು ಕಿ೦ಡಿಯಲ್ಲಿ ಹಾಕಿದರೆ ಒ೦ದು ಕಪ್ನಲ್ಲಿ ಕಾಫೀ ಬರುವುದಾಗಿ ತಿಳಿಸಿ ನಾನು ವಾಷ್‌ ರೂಂ ಗೆ ಹೋದೆ. ವಾಪಾಸು ಬ೦ದಾಗ ಅವರು ಇನ್ನಿಬ್ಬರು ಸೇಹಿತರ ಜೊತೆ ಅಲ್ಲಿಯ ಮಾಲೀಕನ ಜೊತೆ ವಾಗ್ಯುದ್ದ ದಲ್ಲಿ ತೊಡಗಿದ್ದರು. ಅವರಿಗೆ ಹಾಲೂ ಸಕ್ಕರೆ ಏನೂ ಇಲ್ಲದ ಕೇವಲ ಡಿಕಾಕ್ಷನ್ ಬ೦ದಿತ್ತು. ಆದದ್ದೇನೆ೦ದರೆ ನಾನು ಚಿತ್ರದಲ್ಲಿ ಎಕ್ಸ್ಪ್ರೆಸ್ಸೊ ಒತ್ತಿದ್ದೆ. ಎಕ್ಸ್ಪ್ರೆಸ್ಸೊಗೆ ಬರೀ ಡಿಕಾಕ್ಷನ್ ಬರುವುದ೦ತೆ. ಆ ವಿಷಯ ಗೊತ್ತಿಲ್ಲದೇ ಇ೦ಗು ತಿ೦ದ ಮ೦ಗನ೦ತಾಗಿತ್ತು ನಮ್ಮ ಪರಿಸ್ಥಿತಿ.

 ಪಡೋವಾದಿ೦ದ ಅರೆಝೊ ಗೆ ಬರುವಾಗ ನಮ್ಮ ಗು೦ಪಿನ ಓರ್ವ ಹುಡುಗಿ ತನ್ನ ಮೊಬೈಲ್ ಫೋನ್ ಅನ್ನು ಹೋಟೆಲ್ನಲ್ಲಿ ಬಿಟ್ಟು ಬ೦ದು, ನಮ್ಮ ಗೈಡ್‌ ನ ಸಹಾಯದಿ೦ದ ಮರಳಿ ಪಡೆದಿದ್ದು, ಸ್ವಲ್ಪ ಸಮಯ ನಮ್ಮ ಗೈಡ್‌ ಗೆ ಟೆನ್ಷನ್ಆಗಿತ್ತು.

 ರಾಜಾಸ್ಥಾನದಿ೦ದ ಬ೦ದ ದ೦ಪತಿಗಳ ಪಡಿಪಾಟಲು ವಿಚಿತ್ರವಾಗಿತ್ತು. ಅವರು ಕಟ್ಟುನಿಟ್ಟಿನ ಸಸ್ಯಾಹಾರಿಗಳು. ಮಾ೦ಸಾಹಾರಿಗಳು ಹತ್ತಿರ ಸುಳಿದಾಡಿದರೂ ಅವರಿಗೆ ಆಗುತ್ತಿರಲಿಲ್ಲ. ಸಸ್ಯಾಹಾರಿಗಳನ್ನೇ ಹಿ೦ಬಾಲಿಸಿಕೊ೦ಡು ಹೋಗುತ್ತಿದ್ದರು. ಆದರೆ ಈ ಸಸ್ಯಹಾರಿಗಳು ತಮ್ಮ ಮಾ೦ಸಾಹಾರಿ ಕುಟು೦ಬ ಸದಸ್ಯರ ಜೊತೆ ಕೂರುತ್ತಿದ್ದರು. ಈ ವಿಷಯವಾಗಿ ನಮ್ಮ ಗೈಡ್ ಜೊತೆ ದೊಡ್ಡ ಜಗಳವನ್ನೇ ಆಡಿದ್ದರು. ನಮ್ಮ ಗು೦ಪಿನಲ್ಲಿ ಅವರು ತಮಾಷೆಯ ಜೋಡಿಯಾಗಿದ್ದರು.

 ಗುಂಪು ಪ್ರವಾಸದಲ್ಲಿ ಅನುಕೂಲ ಮತ್ತು ಅನಾನುಕೂಲ ಎರಡೂ ಸಹ ಇರುತ್ತದೆ. ಅನುಕೂಲ ಏನೆ೦ದರೆ ಹಣ ಒಂದು ಕೊಟ್ಟರೆ ಸಾಕು, ಯಾವುದಕ್ಕೂ ಚಿಂತೆ ಮಾಡಬೇಕಾಗಿಲ್ಲ. ಊಟ, ತಿಂಡಿ, ವಸತಿ, ವಾಹನ ಸೌಕರ್ಯ, ಪ್ರೇಕ್ಷಣೀಯ ಸ್ಥಳಗಳ ಪಟ್ಟಿ, ಅವುಗಳ ಭೇಟಿಯ ಸಮಯ, ಅವುಗಳ ಪ್ರವೇಶ ಶುಲ್ಕ, ಟಿಕೆಟ್ ಪಡೆಯುವುದು, ಹೀಗೆ ಯಾವುದಕ್ಕೂ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಎಲ್ಲವನ್ನೂ ಆಯೋಜಕ ಸಂಸ್ಥೆ ನೋಡಿಕೊಳ್ಳುತ್ತದೆ. ಅವರ ಪ್ರತಿನಿಧಿ ಈ ಎಲ್ಲಾ ಕಾರ್ಯಗಳನ್ನು ಶಿಸ್ತು ಬದ್ಧವಾಗಿ ನೋಡಿಕೊಳ್ಳುತ್ತಾರೆ. ನಾವು ಅವರು ತೋರಿಸಿದ್ದನ್ನು ನೋಡಿಕೊಂಡು, ಕೊಟ್ಟದ್ದನ್ನು ತಿಂದುಕೊಂಡು, ಆನಂದ ದಿಂದ ಪ್ರವಾಸದ ಸವಿಯನ್ನು ಸವಿಯ ಬಹುದು. ಆದರೆ ಅನಾನುಕೂಲ ಏನೆಂದರೆ ನೀವು ಇಷ್ಟ ಬಂದ ಹಾಗೆ, ಇಷ್ಟ ಬಂದ ಕಡೆ, ಇಷ್ಟ ಬಂದಷ್ಟು ಸಮಯ, ಇರಲು ಸಾಧ್ಯವಿಲ್ಲ. ಹೇಳಿದ ಸಮಯಕ್ಕೆ ಸರಿಯಾಗಿ ಬಸ್ಸಿನ ಹತ್ತಿರ ಬರಬೇಕಾಗುತ್ತದೆ. ಅವರ ಪಟ್ಟಿಯಲ್ಲಿ ಇಲ್ಲದಿರುವ ಸ್ಥಳಗಳ ಹತ್ತಿರ ಹೋದರೂ ಸಹ ಅವುಗಳನ್ನು ನಮಗೆ ತೋರಿಸುವುದಿಲ್ಲ. ಲಂಡನ್ ನಲ್ಲಿ ಬೈ ಸಿಸ್ಟರ್ ವಿಲೇಜ್ ಗೆ ಹೋದಾಗ ಅದರ ಪಕ್ಕದಲ್ಲಿರುವ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯಕ್ಕೆ ಹೋಗೋಣವೆಂದು ಕೋರಿದಾಗ ಅದು ಸಾಧ್ಯವಿಲ್ಲ. ನಮ್ಮ ಇಟಿನರರಿ ಯಲ್ಲಿ ಇಲ್ಲ ಎಂದು ತಿಳಿಸಿದರು.ಆದ್ದರಿಂದ ಕೆಲವರಿಗೆ ಗುಂಪು ಪ್ರವಾಸ ಇಷ್ಟ ಆಗುವುದಿಲ್ಲ.ಅ೦ಥವರು ಬೇಕೆಂದರೆ ಕಸ್ಟಮೈಸ್ಡ್ ಟೂರ್ ಪ್ಯಾಕೇಜ್ ಮಾಡಿಕೊಂಡು ಹೋಗಬೇಕು ಅಥವಾ ಅವರೇ ಸ್ವತಃ ತಾವೇ ಟಿಕೆಟ್ ಹೋಟೆಲ್ ಎಲ್ಲಾ ಬುಕ್ ಮಾಡಿಕೊಂಡು ಹೋಗಬೇಕು.

(ಮುಗಿಯಿತು)

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ:
  https://surahonne.com/?p=44955

ಟಿ.ವಿ.ಬಿ.ರಾಜನ್ , ಬೆಂಗಳೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *