ಲಹರಿ

ನನ್ನ ವೃತ್ತಿ ಬದುಕಿನ ಹೆಜ್ಜೆಗಳು

Share Button

ನನ್ನ ವೃತ್ತಿ ಬದುಕಿನ ಆರಂಭವೇ ಒಂದು ವಿಭಿನ್ನ ಅನುಭವವಾಗಿತ್ತು. ಇದೀಗ ನಲವತ್ತು ವರ್ಷಗಳ ಹಿಂದಿನ ಮಾತು. ಸರ್ಕಾರಿ ಕಾಲೇಜೊಂದರಲ್ಲಿ ಗ್ರಂಥಪಾಲಕಿಯಾಗಿ ನೌಕರಿ ಸಿಕ್ಕಿತ್ತು. ಬಾಲ್ಯದಿಂದಲೇ ಶಿಕ್ಷಕಿಯಾಗುವ ಕನಸು ಹೊತ್ತ ನಾನು ಪದವಿ ಮುಗಿಸಿದ ತಕ್ಷಣ ಅರ್ಥಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿಗೆ ಸೇರ್ಪಡೆಯಾಗಿ ತರಗತಿಗಳಿಗೆ ಹಾಜರಾಗಿದ್ದೆ. ಇದ್ದಕ್ಕಿದ್ದಂತೆ ನನಗೆ ತೊದಲುವಿಕೆ ಸಮಸ್ಯೆ ಉಂಟಾಗಿ ಮಾತನಾಡಲು ಕಷ್ಟವಾಗುತ್ತಿತ್ತು. ಕೂಡಲೇ ನಾನು ಅರ್ಥಶಾಸ್ತ್ರವನ್ನು ಕೈಬಿಟ್ಟು ಗ್ರಂಥಾಲಯ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡೆ. ವಿಷಯ ಬದಲಾವಣೆಗಾಗಿ ವಿಭಾಗ ಮುಖ್ಯಸ್ಥರ ಸಹಿ ಪಡೆಯಲು ಕ್ಯಾಬಿನ್‌ಗೆ ಹೋದಾಗ, ಅವರು ಹೇಳಿದ ಮಾತುಗಳು ಈಗಲೂ ನೆನೆಪಿದೆ. “ಯಾಕಮ್ಮಾ ಅರ್ಥಶಾಸ್ತ್ರ ಕೋರ್ಸನ್ನು ಅರ್ಧಕ್ಕೆ ನಿಲ್ಲಿಸುತ್ತೀಯಾ? ನಮ್ಮ ಮುಖ್ಯಮಂತ್ರಿಗಳು ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಗಳಿಸಿದವರು. ನಿನಗೆ ಮುಂದುವರಿಸಿದರೆ ಒಳ್ಳೆಯದು”. ಆವಾಗ ಶ್ರೀ ರಾಮಕೃಷ್ಣ ಹೆಗಡೆಯವರು ಮುಖ್ಯ ಮಂತ್ರಿಗಳಾಗಿದ್ದರು. ಅವರ ಸಲಹೆಯನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿ ನಾನಿರಲ್ಲಿಲ್ಲ.

ವೇಗವಾಗಿ ಮಾತಾನಾಡುವುದು, ಅತೀ ಮಾತನಾಡುವ ಸ್ವಭಾವ ನನ್ನ ಸ್ಪಷ್ಟ ಮಾತುಗಾರಿಕೆಯನ್ನು ಕಸಿದುಕೊಂಡಿತ್ತು. ನಂತರ ವೈದ್ಯರ ಸಲಹೆಯಂತೆ ನಿಧಾನವಾಗಿ ಮಾತಾನಾಡುವುದು, ಪದಗಳನ್ನು ಆಲೋಚಿಸಿ ಬಳಕೆ ಮಾಡುವುದು, ಆತ್ಮ ವಿಶ್ವಾಸ, ಮನೆಯವರ ಪ್ರೋತ್ಸಾಹದಿಂದ ಆರು ತಿಂಗಳೊಳಗಾಗಿ ತೊದಲುವಿಕೆಯಿಂದ ಮುಕ್ತಳಾದೆ. ಗ್ರಂಥಾಲಯ ವಿಜ್ಞಾನ ಮುಗಿಸಿದ ಮರು ವರ್ಷವೇ ನನಗೆ ಸರ್ಕಾರಿ ಉದ್ಯೋಗ ದೊರಕಿತ್ತು. ದ.ಕ. ಜಿಲ್ಲೆಯ, ಬೆಳ್ತಂಗಡಿಯಲ್ಲಿ ನನ್ನ ಮೊದಲ ನೇಮಕಾತಿಯ ಸ್ಥಳ ನಿಯುಕ್ತಿಯಾಗಿತ್ತು. ಆಗಿನ ಕಾಲದಲ್ಲಿ ಬೆಳ್ತಂಗಡಿ ಗ್ರಾಮದಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿತ್ತು. ಹೊಸ ಜಾಗ. ನಗರ ವಾಸಿಯಾಗಿದ್ದ ನನಗೆ ಹಳ್ಳಿಯ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದೇನೋ ಎಂಬ ಅಳುಕು ಬೇರೆ. ಪ್ರಥಮ ಬಾರಿ ಮನೆ ಬಿಟ್ಟು ಬೇರೆ ಊರಿಗೆ ಹೋಗುವ ಪರಿಸ್ಥಿತಿ. ನಾನು ಒಬ್ಬಳೇ ಇರಬೇಕೆನ್ನುವ ಚಿಂತೆ ನನ್ನನ್ನು ಕಾಡುತ್ತಿತ್ತು. ಸೋದರಮಾವನವರಿಗೆ ನನ್ನನ್ನು ಕಳುಹಿಸಲು ಇಷ್ಟವಿರಲಿಲ್ಲ. ಅಮ್ಮನ ಒತ್ತಾಯಕ್ಕೆ ಮಣಿದು ಕೆಲಸಕ್ಕೆ ಸೇರಿದ್ದೆ. ಸರ್ಕಾರಿ ಕೆಲಸ. ಬಿಡುವ ಹಾಗಿಲ್ಲ. ಅಂತೂ ಒಬ್ಬರ ಮನೆಯಲ್ಲಿ ಪಿ.ಜಿ.ಯಾಗಿ ಉಳಕೊಳ್ಳುವ ವ್ಯವಸ್ಥೆಯಾಯಿತು. ಮೊದಲನೇ ಬಾರಿಗೆ ಮನೆಯಿಂದ ದೂರವಾಗಿ ಇರುವ ಪರಿಸ್ಥಿತಿ. ಮನಸ್ಸಿನಲ್ಲಿ ಅಳು ಬರುತ್ತಿತ್ತು. ಬೇರೆ ವಿಧಿ ಇರಲ್ಲಿಲ್ಲ. ಎಲ್ಲಾ ದು:ಖ, ದುಮ್ಮಾನಗಳನ್ನು ಅದುಮಿಕೊಂಡು ಭಾರವಾದ ಹೃದಯದೊಂದಿಗೆ ನನ್ನ ಅಣ್ಣನೊಡನೆ ಹೊರಟು ಬೆಳ್ತಂಗಡಿ ಕಾಲೇಜಿನಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡೆ.

ಮೊದಲನೆಯ ದಿನ ಕರ್ತವ್ಯಕ್ಕೆ ಹೊರಟಾಗ, ಕಾಲೇಜು ಒಂದು ಸಮಾಜ ಭವನದಲ್ಲಿ ಪ್ರಾರಂಭವಾಗಿತ್ತು. ಸ್ವಂತ ಕಟ್ಟಡ ಇರಲಿಲ್ಲ. ಹೊಸ ಕಾಲೇಜು ಆದ ಕಾರಣ, ಅಲ್ಲಿ ಗ್ರಂಥಾಲಯವೇ ಇರಲಿಲ್ಲ. ಉಪನ್ಯಾಸಕರೊಬ್ಬರು ಬಂದು ನನ್ನನ್ನು ಅವರ ಕೊಠಡಿಗೆ ಕರೆದುಕೊಂಡು ಹೋದರು. ಅಲ್ಲಿ ಕೆಲವರು ಉಪನ್ಯಾಸಕರೊಡನೆ ನಾನೂ ಕುಳಿತುಕೊಂಡೆ. ಆಮೇಲೆ ಒಂದು ಕಪಾಟನ್ನು ತೋರಿಸಿ ಇಲ್ಲಿ ಕೆಲವು ಪುಸ್ತಕಗಳಿವೆ ಎಂದರು. ಅದುವೇ ನನ್ನ ಮೊದಲ ಗ್ರಂಥಾಲಯವಾಗಿತ್ತು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಏನೂ ಕೆಲಸವಿರಲ್ಲಿಲ್ಲ. ಸಾಯಂಕಾಲ ತುಂಬಾ ಬೇಸರವಾಗುತ್ತಿತ್ತು. ವಾರಕೊಮ್ಮೆ ಮನೆಗೆ ಹೋಗಿ ಬರುವುದು ಮಾಡುತ್ತಿದ್ದೆ. ಒಮ್ಮೊಮ್ಮೆ ನನ್ನ ಸಣ್ಣ ತಂಗಿ ಬಂದು ನನ್ನೊಡನೆ ಉಳಕೊಳ್ಳುವುದು ಇತ್ತು. ಕೆಲಸಕ್ಕೆ ಸೇರಿದ ಒಂದು ವರ್ಷದೊಳಗೆ ನನ್ನ ಮದುವೆಯೂ ಆಯಿತು. ನಂತರ ದಿನಾಲೂ ಮಂಗಳೂರಿನಿಂದ ಬೆಳ್ತಂಗಡಿಗೆ ಪ್ರಯಾಣಿಸುತ್ತಿದ್ದೆ.

ಮಗಳು ಹುಟ್ಟಿದ ಬಳಿಕ ಹಳೆಯಂಗಡಿಗೆ ವರ್ಗಾವಣೆಯಾಯಿತು. ಅಲ್ಲಿ ಹೊಸತಾಗಿ ಕಾಲೇಜು ಪ್ರಾರಂಭವಾದ್ದರಿಂದ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯೇ ಇತ್ತು. ಅಷ್ಟೊಂದು ಕೆಲಸವಿಲ್ಲದ ಕಾರಣ ನನಗೆ ತುಂಬಾ ಬಿಡುವಿನ ಸಮಯ ದೊರಕುತ್ತಿತ್ತು. ಆದ್ದರಿಂದ ನಾನು ಮೈಸೂರು ದೂರ ಶಿಕ್ಷಣದ ಮೂಲಕ ಎಂ.ಎ. ಆಂಗ್ಲ ಭಾಷೆಯಲ್ಲಿ ಸ್ನಾತ್ತಕೋತ್ತರ ಪದವಿಗಾಗಿ ದಾಖಲಾತಿ ಮಾಡಿಸಿದ್ದೆ. ಅಲ್ಪ ಸಮಯದಲ್ಲೇ ಮಂಗಳೂರಿಗೆ ವರ್ಗಾವಣೆಯಾಯಿತು. ಮಂಗಳೂರಿನ ಕಾಲೇಜಿನಲ್ಲಿ ಬಹು ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿಯಾಗಿತ್ತು. ಕೆಲಸದ ಒತ್ತಡವೂ ಅಧಿಕವಾಗಿತ್ತು. ಆದರೂ ಬಿಡುವಾದಾಗಲ್ಲೆಲ್ಲಾ ಓದಿ, ಉತ್ತಮ ಅಂಕಗಳೊಂದಿಗೆ ಎಂ.ಎ. (ಆಂಗ್ಲ) ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣಳಾಗಿದ್ದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ, ಮಂಗಳೂರಿನ ಅಧ್ಯಯನ ಕೇಂದ್ರದಲ್ಲಿ ಪ್ರತೀ ಭಾನುವಾರ ದೂರ ಶಿಕ್ಷಣದ ಡಿಗ್ರಿ ವಿದ್ಯಾರ್ಥಿಗಳಿಗಾಗಿ ಆಂಗ್ಲ ಭಾಷೆಯನ್ನು ಬೋಧಿಸಲು ನನ್ನನ್ನು ಕೇಳಿಕೊಂಡಾಗ ತಕ್ಷಣ ಸಮ್ಮತಿಸಿದೆ. ಇದು ನನ್ನ ಜೀವನದ ಮೊದಲನೇ ತಿರುವು ಆಗಿತ್ತು. ನನಗೆ ಅತೀ ಆಸಕ್ತಿ ಹಾಗೂ ಅಭಿರುಚಿ ಇರುವ ಬೋಧನಾ ಕಾರ್ಯವನ್ನು ಸಂತೋಷದಿಂದಲೇ ಒಪ್ಪಿಕೊಂಡು ಆರು ವರ್ಷಗಳ ಕಾಲ ನಿರಂತರ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸಿದೆ. ಕಾಲೇಜಿನಲ್ಲಿರುವಾಗ ಗ್ರಂಥಾಲಯದ ಕೆಲಸ ಕಾರ್ಯ ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವ್ಯಾಕರಣ ಕಲಿಸಿ ಕೊಡುತ್ತಿದ್ದೆ. ಅದಲ್ಲದೆ ಕೆಲವೊಮ್ಮೆ ಉಪನ್ಯಾಸಕರು ಗೈರು ಹಾಜರಾದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಮಾಡುವ ಅವಕಾಶ ಸಿಗುತ್ತಿತ್ತು. ಈ ಎಲ್ಲಾ ಕ್ಷಣಗಳನ್ನು ಅಪರಿಮಿತವಾಗಿ ಆನಂದಿಸುತ್ತಿದ್ದೆ. ಗೃಂಥಪಾಲಕಿಯಾಗಿ ಪುಸ್ತಕಗಳನ್ನು ನೀಡುವುದಕ್ಕಿಂತ, ಜ್ಞಾನವನ್ನು ಹಂಚುವ ಶಿಕ್ಷಕಿಯ ಪಾತ್ರವೇ ನನಗೆ ಹೆಚ್ಚು ತೃಪ್ತಿಯನ್ನು ನೀಡಿತು. ನನ್ನ ಆಸಕ್ತಿಯನ್ನು ಅರಿತು ನನಗೆ ಬೋಧಿಸಲು ಅವಕಾಶ ಮಾಡಿಕೊಟ್ಟ ಪ್ರಾಂಶುಪಾಲರು ಹಾಗೂ ವಿಭಾಗ ಮುಖ್ಯಸ್ಥರನ್ನು ಯಾವತ್ತೂ ನಾನು ನೆನಪಿಸಿಕೊಳ್ಳುತ್ತೇನೆ.

ಈ ನಡುವೆ ಸರ್ಕಾರದಿಂದ ಪಿ.ಎಚ್.ಡಿ. ಮಾಡಲು ಅನುಮತಿಯೂ ದೊರಕಿತ್ತು. ಉತ್ತಮ ಗೈಡ್ ಸಿಕ್ಕಿದ್ದು ನನ್ನ ಪುಣ್ಯವೇ ಸರಿ. ಶೈಕ್ಷಣಿಕ ನೆಲೆಯಲ್ಲಿ ಸಂಶೋಧನೆ ಎಂಬುದು ಮಹತ್ತರ ಘಟ್ಟ. ಸಂಶೋಧನಾ ಅಧ್ಯಯನದ ಸಮಯದಲ್ಲಿ ಅನೇಕ ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತು ಸೆಮಿನಾರ್‌ಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸುವ ಅವಕಾಶವೂ ಸಿಕ್ಕಿತ್ತು. ನುರಿತ ಗೈಡ್ ಹಾಗೂ ತಜ್ಞರ ಮಾರ್ಗದರ್ಶನದಲ್ಲಿ ಐದು ವರ್ಷಗಳ ಒಳಗಾಗಿ ಡಾಕ್ಟರೇಟ್ ಪದವಿಯೂ ಸಿಕ್ಕಿತ್ತು. ಇದು ನನ್ನ ವೃತ್ತಿ ಜೀವನದ ಅತ್ಯಂತ ಹೆಮ್ಮೆಯ ಕ್ಷಣವಾಗಿತ್ತು. ಈ ಸಾಧನೆಯು ನನ್ನ ವೃತ್ತಿಯ ಕಿರೀಟಕ್ಕೆ ದೊರೆತ ಇನ್ನೊಂದು ಗರಿಯಾಗಿತ್ತು.

ಸಾಹಿತ್ಯದ ಮೇಲೆ ಅಪರಿಮಿತ ಆಸಕ್ತಿಯಿದ್ದ ಕಾರಣ ನಿವೃತ್ತಿಗೆ ಹತ್ತಿರ ಇರುವಾಗ ಕನ್ನಡದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಕಲಿಯಲು ಮೈಸೂರು ವಿಶ್ವವಿದ್ಯಾಲಯದ ದೂರ ಶಿಕ್ಷಣದ ಮುಖಾಂತರ ಸೇರ್ಪಡೆಗೊಂಡಿದ್ದೆ. ಈ ಓದು ನನಗೆ ಕನ್ನಡ ಸಾಹಿತ್ಯ ಲೋಕವನ್ನು, ಮಹಾಕವಿಗಳನ್ನೂ, ಹಿರಿಯ ಸಾಹಿತಿಗಳನ್ನು ಅಗಾಧವಾಗಿ ಅಭ್ಯಸಿಸಲು ನೆರವಾಯಿತು. ಕಾವ್ಯ, ಕಥೆ, ನಾಟಕ, ಜನಪದ, ಪ್ರಬಂಧ, ಎಲ್ಲಾ ಕ್ಷೇತ್ರಗಳಲ್ಲಿಯೂ ವಿಶಾಲ ಪರಂಪರೆ ಹೊಂದಿರುವ ಸಾಹಿತ್ಯವನ್ನು ಕಲಿಯುವುದು ತುಂಬಾ ತಡವಾಯಿತು ಎಂದು ಪಶ್ಚಾತ್ತಾಪ ಪಟ್ಟರೂ, ನಿವೃತ್ತಿಗೆ ಮೊದಲೇ ಮುಗಿಸಿಬಿಟ್ಟೆನಲ್ಲಾ ಎಂಬ ಸಮಾಧಾನವಿತ್ತು.

ಗ್ರಂಥಾಲಯ ಶಿಕ್ಷಕಿಯಾಗಿಯೂ, ಭಾಷಾ ಬೋಧಕಿಯಾಗಿಯೂ, ವಿದ್ಯಾರ್ಥಿಗಳನ್ನು ರೂಪಿಸುವ, ಅವರಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವ ಭಾಗ್ಯ ನನ್ನ ವೃತ್ತಿ ಜೀವನದಲ್ಲಿ ದೊರಕಿತ್ತು. ವಿದ್ಯಾರ್ಥಿಗಳಿಗೆ, ಓದುಗರಿಗೆ, ಪುಸ್ತಕ ಪ್ರಿಯರಿಗೆ ಅವರವರ ಅಭಿರುಚಿಗೆ ತಕ್ಕಂತಹ ವಿಷಯಗಳಿಗೆ ಸಂಬಂಧಿಸಿದ ಸೂಕ್ತ ಪುಸ್ತಕವನ್ನು ಆಯ್ಕೆ ಮಾಡಿ, ನೀಡುತ್ತಿದ್ದಾಗ ಅವರ ಮುಖದಲ್ಲಿ ಮಿಂಚುವ ಮಂದಹಾಸ ನನ್ನಲ್ಲಿ ಸಂತೃಪ್ತಿಯನ್ನು ಉಂಟು ಮಾಡುತ್ತಿತ್ತು. ಗ್ರಂಥಾಲಯದ ಮುಖ್ಯಸ್ಥಳಾಗಿದ್ದು, ನನ್ನ ಬಿಡುವಿನ ವೇಳೆಯಲ್ಲಿ ಅನೇಕ ಉತ್ತಮ ಕೃತಿಗಳನ್ನು ಓದಿ ಅರಗಿಸುವ ಸೌಭಾಗ್ಯ ದೊರಕಿತ್ತು. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವುದು, ಸಹದ್ಯೋಗಿಗಳೊಡನೆ ಪುಸ್ತಕ ವಿಮರ್ಶೆ ಮಾಡುವುದು, ಓದುಗರಲ್ಲಿ ಹೊಸ ಪುಸ್ತಕದ ಬಗ್ಗೆ ಆಸಕ್ತಿ ಹುಟ್ಟಿಸುವುದು, ಸ್ವಯಂ ಜ್ಞಾನ ಸಂಪಾದನೆ ಇವೆಲ್ಲಾ ನನ್ನ ವೃತ್ತಿ ಜೀವನವನ್ನು ಶ್ರೀಮಂತಗೊಳಿಸಿತ್ತು.

ಪ್ರಾರಂಭದಲ್ಲಿ ಹಲವಾರು ತೊಡಕು, ಅಡಚಣೆಗಳಿದ್ದರೂ, ಕೊನೆಯಲ್ಲಿ ವೃತ್ತಿ ಜೀವನವು ಸಂಪೂರ್ಣವಾಗಿ ಸುಗಮವಾಗಿತ್ತು. ನಿವೃತ್ತಿಯ ಹೊತ್ತಿನಲ್ಲಿ ನಮ್ಮ ಗ್ರಂಥಾಲಯವು ಹೈಟೆಕ್ ಮಾದರಿಯಲ್ಲಿ ಡಿಜಿಟಲ್ ಲೈಬ್ರರಿ ಆಗಿ ಮಾರ್ಪಾಡಾಗಿತ್ತು. ಇದು ನಿಜಕ್ಕೂ ನನಗೆ ಅತೀವ ಸಂತೃಪ್ತಿಯನ್ನು ತಂದುಕೊಟ್ಟಿತ್ತು. ಕೆಲವು ಉತ್ತಮ ಪ್ರಾಂಶುಪಾಲರುಗಳ ಸಹಕಾರ, ಸಹೃದಯ ಸಹದ್ಯೋಗಿ ಮಿತ್ರರ ಬೆಂಬಲದಿಂದ ನನ್ನ ವೃತ್ತಿ ಜೀವನದಲ್ಲಿ ಉನ್ನತಿಯನ್ನು ಪಡೆಯಲು ಸಾಧ್ಯವಾಯಿತು. ಆರಂಭದಲ್ಲಿ ಸೋಲು, ನೋವು. ನಿರಾಶೆಯನ್ನು ಎದುರಿಸಿದರೂ, ಛಲದಿಂದ, ದಿಟ್ಟತನದಿಂದ, ದೈವಬಲ ಹಾಗೂ ಎಲ್ಲರ ಪ್ರೀತಿಯಿಂದ ಮುಖ್ಯವಾಗಿ ಆತ್ಮವಿಶ್ವಾಸದಿಂದ ಸಕಲವನ್ನೂ ಮೆಟ್ಟಿ ನಿಂತು ಕಠಿಣ ಪರಿಶ್ರಮದಿಂದ ನನ್ನ ವೃತ್ತಿ ಬದುಕನ್ನು ಅರ್ಥಪೂರ್ಣಗೊಳಿಸುವಲ್ಲಿ ಸಫಲಳಾದೆ. ಸಿಕ್ಕಿದ ಎಲ್ಲಾ ಅವಕಾಶಗಳನ್ನು ಸಮರ್ಥವಾಗಿ ಬಳಸಿ ವೃತ್ತಿ ಬದುಕಲ್ಲಿ ಪರಿಪೂರ್ಣತೆಯನ್ನು ಸಾಧಿಸಿದೆ.

ಶೈಲಾರಾಣಿ ಬಿ, ಮಂಗಳೂರು.

9 Comments on “ನನ್ನ ವೃತ್ತಿ ಬದುಕಿನ ಹೆಜ್ಜೆಗಳು

  1. Degree in Library Science brought Fortune to Dr Shylarani and I was thrilled to know her enthusiasm to teach grammer to deserving students. Very encouraging article to people to hint that there are so many things one can do to fulfill the dreams of oneself and do something good to society. Loved this article.

    1. Thanks Anjali. I’m happy you liked my article. Your words encouraged me. Thank you for taking the time to read it.

  2. ಚೇತನ ಹಾರಿ ಯಾದ… ಲೇಖನ.. ಮನಸ್ಸನ್ನು ಮುದಗೊಳಿಸಿತು…ಮೇಡಂ..

  3. ಸಾಧನೆ ಮಾಡುವ ಮನಸ್ಸಿದ್ದರೆ ಯಶಸ್ಸು ಖಂಡಿತಾ
    ಎಲ್ಲರಿಗೂ ಸ್ಪೂರ್ತಿ ನೀಡುವ ಲೇಖನ

  4. ಸ್ಪೂರ್ತಿದಾಯಕವಾದ ಅನುಭವ ಲೇಖನ ಓದುತ್ತಿರುವಾಗಲೇ ಮುದ ನೀಡಿತು.

Leave a Reply to Anjali Ganesh Cancel reply

 Click this button or press Ctrl+G to toggle between Kannada and English

Your email address will not be published. Required fields are marked *