ಪರಾಗ

ಮುತ್ತಿನ ಸರ

Share Button

ಅಡಿಗೆ ಮನೆಯಲ್ಲಿ ತಮ್ಮನ ಹೆಂಡತಿ ಆರತಿಗೆ ಒಂದಿಷ್ಟು ಕೆಲಸ ಮಾಡಿಕೊಟ್ಟು ಹೊರಗೆ ಬಂದು ತಮ್ಮನ ಪಕ್ಕ ಕುಳಿತಳು ಧಾರಿಣಿ.
ಪೇಪರ್ ಓದುತ್ತಿದ್ದ ಧನಂಜಯ ಅದನ್ನು ಮಡಚಿ ಟೀಪಾಯ್ ಮೇಲಿಟ್ಟು
“ಅಕ್ಕ…. ನೀನು ನಾಳೆ ಹೊರಡಬೇಕಾ?” ಅಂದ
“ಹೂಂ ಕಣೋ…. ಕ್ಯಾಬ್ ಬುಕ್ ಮಾಡಿಬಿಡು.”
“ನಾಳೆ ಎಷ್ಟು ಹೊತ್ತಿಗೆ ಹೊರಡ್ಬೇಕು?”
“ನಾಳೆ ಬೆಳಗ್ಗೆ ತಿಂಡಿ ತಿನ್ಕೊಂಡು ಹೊರಟುಬಿಡೋಣ ಅನ್ಕೊಂಡಿದೀನಿ.”
“ಸರಿ, ಕ್ಯಾಬ್ ಬೇಡ. ನನ್ನ ಕಾರಿನಲ್ಲೇ ಹೋಗೋಣ, ನಾನೇ ಬರ‍್ತೀನಿ ನಿಂಜೊತೆ.”
“ಸುಮ್ನೇ ನಿಂಗೆ ತೊಂದ್ರೆ ಧನಂಜಯ, ನಾನು ಕ್ಯಾಬ್‌ನಲ್ಲೇ ಹೋಗ್ತೀನಿ ಬಿಡು.”
“ತೊಂದ್ರೆ ಏನಿಲ್ಲ ಕಣೆ ನಾನೇ ಬರ‍್ತೀನಿ. ಆದ್ರೂ ಇನ್ನೊಂದೆರಡು ದಿವಸ ಇದ್ದಿದ್ರೆ ಚೆನ್ನಾಗಿತ್ತು.”
“ನಾನು ಬಂದು ಹದಿನೈದು ದಿವಸವಾಯ್ತು ಅಲ್ವ…. ಇನ್ನೂ ಎಷ್ಟು ದಿನ ಇರ‍್ಲಿ ಹೇಳು ನೀನೇ….”
ನಕ್ಕು ಹೇಳಿದ ಧಾರಿಣಿಯ ಮುಖವನ್ನೇ ನೋಡಿದ ಧನಂಜಯ.

“ಆದ್ರೂ….” ಅಂತ ಅವನು ರಾಗ ಎಳೆಯುತ್ತಿದ್ದ ಹಾಗೇ ಅವನ ಮೊಬೈಲ್ ರಿಂಗಾಯ್ತು. “ಒಂದು ನಿಮಿಷ ಕಣೆ ಬರ‍್ತೀನಿ…” ಅನ್ನುತ್ತಾ ಮೇಲೆದ್ದು ರೂಮಿಗೆ ಹೋದ.
ಅಲ್ಲೇ ಕುಳಿತಿದ್ದ ಧಾರಿಣಿ ಎದುರುಗಡೆ ಇದ್ದ ಶೋಕೇಸ್ ಕಡೆಗೆ ದೃಷ್ಟಿ ಹಾಯಿಸಿದಳು. ತಂದೆ, ತಾಯಿ, ತಮ್ಮನ ಜೊತೆಯಲ್ಲಿ ಮುತ್ತಿನ ಸರ ಹಾಕಿಕೊಂಡು ಗತ್ತಿನಲ್ಲಿ ಕೂತಿದ್ದ ತನ್ನ ಫೋಟೋ ನೋಡಿ ಅವಳ ತುಟಿ ಬಿರಿಯಿತು. ಜೊತೆಗೆ ಅಪ್ಪ ಅಮ್ಮನ ನೆನಪಾಗಿ ಕಣ್ಣಲ್ಲಿ ನೀರು ಜಿನುಗಿತು.
“ಅಕ್ಕ…. ಧನಂಜಯ ಎಲ್ಲಿ?” ಟೀ ಕಪ್ಪುಗಳನ್ನು ತಂದ ಆರತಿ ಕೇಳಿದಳು.
“ಇಲ್ಲೇ ಕೂತಿದ್ದ ಕಣೆ…. ಕಾಲ್ ಬಂತು ಅಂತ ಒಳಗೆ ಹೋದ.”
“ಸರಿ, ನನ್ನ ಗಂಡನ ಬುದ್ಧಿ ನಂಗೊತ್ತು ಸದ್ಯಕ್ಕೆ ಅವರು ಹೊರಗೆ ಬರೋಲ್ಲ. ನಾನು ಹೋಗಿ ಅವರಿಗೆ ಅಲ್ಲೇ ಟೀ ಕೊಟ್ಟು ಬರ‍್ತೀನಿ.”
“ಸರಿ.”
ರೂಮಿಗೆ ಹೋಗಿ ಗಂಡನಿಗೆ ಟೀ ಕೊಟ್ಟು ಬಂದ ಆರತಿ ಧಾರಣಿಗೊಂದು ಕಪ್ ಕೊಟ್ಟು ತಾನೂ ಕುಡಿಯತೊಡಗಿದಳು.

“ಅಕ್ಕ ಆ ಫೋಟೋದಲ್ಲಿ ನೀವು ಎಷ್ಟು ಮುದ್ದಾಗಿ ಕಾಣ್ತಾ ಇದೀರಿ ಅಲ್ವ?”
ಧಾರಿಣಿ ಗಟ್ಟಿಯಾಗಿ ನಕ್ಕಳು.
“ಅಕ್ಕ…. ಧನಂಜಯ ನಿಮ್ಮ ಮುತ್ತಿನ ಸರದ ಕತೆ ಆಗಾಗ ನೆನಪಿಸಿಕೊಂಡು ನಗ್ತಾ ಇರ‍್ತಾರೆ.”
“ಹೌದಾ?”
“ಹೂಂ ಅಕ್ಕ….”
ಧಾರಿಣಿ ಅರೆಕ್ಷಣ ಭಾವುಕತೆಗೆ ಜಾರಿಬಿಟ್ಟಳು. ಅವಳ ನೋಟ ಆ ಫೋಟೋ ಬಿಟ್ಟು ಮತ್ತೆ ಬೇರೆ ಕಡೆಗೆ ಹೊರಳಲೇ ಇಲ್ಲ.
ಆರತಿ ಅವಳ ಮನಸ್ಸನ್ನು ಅರ್ಥ ಮಾಡಿಕೊಂಡವಳಂತೆ ಖಾಲಿ ಕಪ್ಪುಗಳನ್ನು ಎತ್ತಿಕೊಂಡು ಅಡಿಗೆ ಮನೆಗೆ ಹೊರಟು ಹೋದಳು.

ಎಷ್ಟೋ ವರ್ಷಗಳ ಹಿಂದೆ ನಡೆದ ಘಟನೆಗಳು ಧಾರಿಣಿಯ ಎದುರು ಮೂರ್ತರೂಪ ಪಡೆದು ನಿಂತುಕೊಂಡಿತು….
ಹೌದು…. ಅಪ್ಪ ಪಾರ್ಥಸಾರಥಿ, ಅಮ್ಮ ಕಲ್ಯಾಣಿಗೆ ನನ್ನ ಹಾಗೂ ಧನಂಜಯನ ಮೇಲೆ ಅದೆಷ್ಟು ಅಕ್ಕರೆ…. ತಮ್ಮದು ಮಧ್ಯಮ ವರ್ಗದ ಕುಟುಂಬವಾಗಿದ್ದರೂ ಅವರುಗಳು ನಮ್ಮ ಆಸೆಗಳಿಗೆ ಎಂದೂ ತಣ್ಣೀರೆರಚುತ್ತಿರಲಿಲ್ಲ.
ಧನಂಜಯನದು ತುಂಬಾ ಮೃದು ಸ್ವಭಾವ ತಾನೇ ಕೊಂಚ ಜೋರು. ಸಣ್ಣ ಸಣ್ಣ ವಿಷಯಕ್ಕೂ ಹಠ ಮಾಡಿಬಿಡುತ್ತಿದ್ದೆ. ಮದುವೆಯಾದ ಮೇಲೆ ಆ ಹಠ, ಕೋಪ ಎಲ್ಲಿ ಹೋಯ್ತೋ ಏನೋ… ಕಾಲ ಎಲ್ಲವನ್ನು ಕಲಿಸುತ್ತದೆ ಅನ್ನೋದು ಅದಕ್ಕೇ.
ಮನೆಯಲ್ಲಿ ನಾವು ನಾಲ್ಕೇ ಜನ ಇದ್ದದ್ದು. ಪ್ರತಿಯೊಂದು ಹಬ್ಬವನ್ನೂ ವಿಜೃಂಭಣೆಯಿಂದ ಆಚರಿಸ್ತಾ ಇದ್ವಿ. ಧನಂಜಯನಿಗೆ ದೀಪಾವಳಿ ಇಷ್ಟವಾಗಿದ್ರೆ ನನಗೆ ಸಂಕ್ರಾಂತಿ ಹಬ್ಬದಲ್ಲಿ ಖುಷಿ ಹೆಚ್ಚು.
ಸಂಕ್ರಾಂತಿ ಹಬ್ಬದಲ್ಲಿ ಅಮ್ಮ ನನ್ನನ್ನು ಬೇಗ ಎಬ್ಬಿಸಿ ತಲೆಗೆ ಸ್ನಾನ ಮಾಡಿಸಿ ಅವರ ಕೆಲಸಕ್ಕೆ ಹೊರಟುಬಿಡುತ್ತಿದ್ದರು. ಬೆಳಗ್ಗೆ ಸಿಹಿ ಪೊಂಗಲ್, ಮಧ್ಯಾಹ್ನಕ್ಕೆ ಹೋಳಿಗೆ ಊಟ ಸಂಜೆಯಾಗುವುದನ್ನೇ ಕಾಯುತ್ತಿದ್ದ ನಂಗೆ ಅಮ್ಮ ಜರಿ ಲಂಗ ಹಾಕಿ ಅಲಂಕಾರ ಮಾಡಿ ಆಮೇಲೆ ಕತ್ತಿಗೆ ಮುತ್ತಿನ ಸರ ಹಾಕುತ್ತಿದ್ದರು. ಆ ಸರವನ್ನ ಅಪ್ಪನೇ ಮಾಡಿಸಿದ್ದೋ ಅಥವಾ ಅಮ್ಮನಿಗೆ ಅಜ್ಜಿ ಕೊಟ್ಟಿದ್ದೋ ನಂಗಂತೂ ಗೊತ್ತಿರಲಿಲ್ಲ. ನಾನು ಆ ಸರ ಹಾಕ್ಕೊಂಡು ಸಂಭ್ರಮದಿಂದ ಅಕ್ಕ ಪಕ್ಕದ ಮನೆಗಳಿಗೆ ಧನಂಜಯನ ಜೊತೆ ಎಳ್ಳು ಬೆಲ್ಲ ಕೊಟ್ಟು ಬರುತ್ತಿದ್ದೆ. ದೂರದ ಮನೆಗಳಿಗೆ ಅಪ್ಪ ಸ್ಕೂಟರ್‌ನಲ್ಲಿ ಕರ‍್ಕೊಂಡು ಹೋಗ್ತಾ ಇದ್ರು.

ಅಮ್ಮ ಹಬ್ಬ ಹರಿದಿನಗಳಲ್ಲಿ ಮಾತ್ರ ನನ್ನ ಕುತ್ತಿಗೆಗೆ ಆ ಸರ ಹಾಕ್ತಾ ಇದ್ರು. ಹೊರಗೆ ಹೋಗುವಾಗ ಅಥವಾ ಮದುವೆ ಮನೆಗಳಿಗೆ ಹೋಗುವಾಗ ಖಂಡಿತ ಹಾಕ್ತಾ ಇರ‍್ಲಿಲ್ಲ. ಈ ಫೋಟೋ ತೆಗೆಸುವ ದಿವಸ ನಾನು ತುಂಬಾ ಅತ್ತು ಗಲಾಟೆ ಮಾಡಿದ್ದೆ. ಆಗ ಅಮ್ಮ ವಿಧಿಯಿಲ್ಲದೇ ನಂಗೆ ಆ ಸರ ಹಾಕಿದಾಗ ನಾನು ಕುಣಿದಾಡಿದ್ದೆ.

ಒಂದು ಸಂಕ್ರಾಂತಿ ಹಬ್ಬದ ದಿವಸ ಅಮ್ಮ ನಂಗೆ ಹೊಸ ಲಂಗ ಹಾಕಿ ಇನ್ನೇನು ಸರ ಹಾಕ್ಬೇಕು ಅನ್ನುವಾಗ ಯಾರೋ ಮನೆಗೆ ಬಂದಿದ್ರು. ಅಮ್ಮ ತಮ್ಮ ಕೈಲಿದ್ದ ಸರವನ್ನು ಅಲ್ಲೇ ಟೇಬಲ್ ಮೇಲಿಟ್ಟು ಹೊರಗೆ ಬಂದಿದ್ದರು. ನಾನೂ ಅವರನ್ನ ಹಿಂಬಾಲಿಸಿದ್ದೆ. ಒಂದಿಷ್ಟು ಹೊತ್ತು ಅವರ ಜೊತೆ ಮಾತಾಡಿ ಅವರಿಗೆ ಕಾಫಿ ಕೊಟ್ಟು ಅಮ್ಮ ಅವರನ್ನು ಬೀಳ್ಕೊಟ್ಟಿದ್ದರು. ನಾನು, ಅಮ್ಮ ರೂಮಿಗೆ ಬಂದು ನೋಡಿದಾಗ ಟೇಬಲ್ ಮೇಲಿಟ್ಟಿದ್ದ ಸರ ಕಾಣಿಸಲಿಲ್ಲ. ಅರೆ….? ಇಲ್ಲೇ ಇಟ್ಟಿದ್ದ ಸರ ಇಷ್ಟು ಬೇಗ ಎಲ್ಲಿಗೆ ಕಾಣೆಯಾಯ್ತು…. ಅಂತ ಗಾಬರಿ ಮಾಡ್ಕೊಂಡು ಅಮ್ಮ ಎಲ್ಲಾ ಕಡೆ ಹುಡುಕಾಡಿದರು. ವಾರ್ಡ್ರೋಬು, ಅಡಿಗೆ ಮನೆ, ನಾವುಗಳು ಕೂತಿದ್ದ ಸೋಫಾ ಮೇಲೆ… ಎಲ್ಲಾ ಕಡೆ ಹುಡುಕಾಯ್ತು. ನಾನಂತೂ ಗೋಳೋ ಅಂತ ಅತ್ತುಕೊಂಡು ನೆಲದ ಮೇಲೆ ಬಿದ್ದು ಹೊರಳಾಡಿದ್ದೆ. ಅಮ್ಮ ಬೆನ್ನ ಮೇಲೆ ಗುದ್ದಿದ್ದರು. ಈ ಎಲ್ಲಾ ಗಲಾಟೆ ನೋಡ್ತಾ ಇದ್ದ ಧನಂಜಯ ಪೆಚ್ಚಾಗಿ ನಿಂತುಬಿಟ್ಟಿದ್ದ. ಅಷ್ಟರಲ್ಲಿ ಅಪ್ಪ ಹೊರಗಿನಿಂದ ಬಂದು “ಏನಾಯ್ತು?” ಅಂತ ಕೇಳುತ್ತಾ ನೆಲದ ಮೇಲೆ ಬಿದ್ದಿದ್ದ ನನ್ನ ಕೈ ಹಿಡಿದು ಎಬ್ಬಿಸಿದ್ದರು. ಅಮ್ಮ ಮುತ್ತಿನ ಸರ ಕಾಣೆಯಾದ ವಿಷಯ ಹೇಳಿದ್ದರು. ಅವರ ಕಣ್ಣು ತುಂಬಿತ್ತು. ಅಮ್ಮ ಹೇಳಿದ ವಿಷಯ ಕೇಳಿದ ಅಪ್ಪ ಗಟ್ಟಿಯಾಗಿ ನಗುತ್ತಾ ತಮ್ಮ ಪ್ಯಾಂಟ್ ಜೇಬಿನಿಂದ ಸರ ತೆಗೆದು ಅಮ್ಮನ ಕೈಗೆ ಕೊಟ್ಟಿದ್ದರು.

“ರೀ… ಈ ಸರ ನಿಮ್ಮ ಜೇಬಿನೊಳಕ್ಕೆ ಹೇಗ್ರಿ ಹೋಯ್ತು?”
ಅಮ್ಮ ತಬ್ಬಿಬ್ಬಾಗಿ ಕೇಳಿದಾಗ “ತಲೆ ಬಾಚಿಕೊಳ್ಳೋಕೆ ಅಂತ ರೂಮಿಗೆ ಬಂದಾಗ ಟೇಬಲ್ ಮೇಲೆ ಈ ಸರ ಇಟ್ಟಿದ್ದು ಕಾಣಿಸಿತು. ಟೇಬಲ್ ಡ್ರಾಯರ್ ಒಳಗೆ ಇಟ್ಟುಬಿಡೋಣ ಅಂತ ನೋಡಿದ್ರೆ ಅದಕ್ಕೆ ಬೀಗ ಹಾಕಿತ್ತು. ಸರಿ ನಾನು ಅದನ್ನ ನನ್ನ ಪ್ಯಾಂಟ್ ಜೇಬಿನೊಳಕ್ಕೆ ಹಾಕ್ಕೊಂಡು ಹೊರಗೆ ಬಂದೆ. ಆಮೇಲೆ ಗೆಸ್ಟ್ ಗಳನ್ನ ಕಳಿಸೋದಕ್ಕೆ ಅಂತ ಗೇಟ್ ಹತ್ರ ಹೋದಾಗ ಪಕ್ಕದ ಮನೆ ರಂಗರಾಜು ಸಿಕ್ಕಿದ್ರು. ಅವರ ಜೊತೆ ಮಾತಾಡ್ತಾ ನಿಂತ್ಕೊಂಡೆ. ಅಬ್ಬಬ್ಬಾ… ಬರೀ ಹತ್ತು ನಿಮಿಷದೊಳಗೆ ಇಲ್ಲಿ ಎಷ್ಟು ದೊಡ್ಡ ರಾದ್ಧಾಂತ ನಡೆದುಬಿಟ್ಟಿದೆ ನೋಡು.” ಅಪ್ಪ ಗಟ್ಟಿಯಾಗಿ ನಕ್ಕಿದ್ದರು.
“ಈ ಎಲ್ಲಾ ರಾದ್ಧಾಂತ ನಿಮ್ಮಿಂದ ತಾನೇ ನಡೆದದ್ದು?”
“ಹಾಗಂದ್ರೇನೆ? ನಾನೇನು ತಪ್ಪು ಮಾಡಿದೆ?”
“ನೀವ್ಯಾಕ್ರಿ ಆ ಸರ ತೆಗೆದು ಜೇಬಿನೊಳಕ್ಕೆ ಹಾಕೊಂಡ್ರಿ?”
“ಟೇಬಲ್ ಮೇಲಿತ್ತಲ್ಲ… ಸೇಫ್ ಆಗಿರಲಿ ಅಂತ ನನ್ನ ಜೇಬಿನೊಳಕ್ಕೆ ಹಾಕ್ಕೊಂಡೆ ಕಣೆ ಅಷ್ಟೇ.”
“ಸರಿ ಬಿಡಿ…”
ಮತ್ತೆ ಉತ್ಸಾಹದಿಂದ ನಾನು ಹೋಗಿ ಅಮ್ಮನ ಅಪ್ಪಿಕೊಂಡಿದ್ದೆ. ಅಮ್ಮ ಸಮಾಧಾನದಿಂದ ನನ್ನ ಕತ್ತಿಗೆ ಸರ ಹಾಕಿದ್ರು.

ದಿನಗಳು ಕಳೆದು ನಾನು ಕಾಲೇಜು ಹುಡುಗಿಯಾದ ಮೇಲೆ ಎಳ್ಳು ಬೀರೋಕೆ ಅಂತ ನಾನು ಯಾರ ಮನೆಗೂ ಹೋಗ್ತಿರಲಿಲ್ಲ. ಮನೆಗೆ ಬಂದವರಿಗೆ ಅಮ್ಮ ಎಳ್ಳು ಬೆಲ್ಲ ಕೊಟ್ಟು ಕಳುಹಿಸ್ತಾ ಇದ್ರು. ಆದ್ರೆ ನಾನು ಮಾತ್ರ ಸಂಕ್ರಾಂತಿ ಹಬ್ಬದ ದಿವಸ ಅಚ್ಚುಕಟ್ಟಾಗಿ ಅಲಂಕಾರ ಮಾಡ್ಕೊಂಡು ಮುತ್ತಿನ ಸರ ಹಾಕ್ಕೊಂಡು ಖುಷಿ ಪಡ್ತಾ ಇದ್ದದ್ದು ಮಾತ್ರ ತಪ್ಪಿರಲಿಲ್ಲ. ಆಗೆಲ್ಲಾ ಧನಂಜಯ “ಮುತ್ತಿನ ಸರ ಜೋಪಾನ ಕಣೆ, ಸರಿಯಾಗಿ ಇಟ್ಕೋ…. ಇಲ್ದಿದ್ರೆ ಅಪ್ಪ ತೆಗೆದು ಜೇಬಿನೊಳಕ್ಕೆ ಹಾಕ್ಕೊಂಡು ಬಿಡ್ತಾರೆ…. ಅಂತ ತಮಾಷೆ ಮಾಡ್ತಿದ್ದ.
ಡಿಗ್ರಿ ಮುಗಿಸಿ ಆಡಿಟರ್ ಆಫೀಸ್‌ನಲ್ಲಿ ಕೆಲಸ ಶುರು ಮಾಡಿ ಆರು ತಿಂಗಳು ಮುಗಿಯುವಷ್ಟರಲ್ಲಿ ವಸುಪಾಲ್ ಜೊತೆ ನನ್ನ ಮದುವೆ ನಿಶ್ಚಯವಾಗಿತ್ತು. ಮದುವೆಯಲ್ಲಿ ಅಮ್ಮ ಎರಡೆಳೆ ಚಿನ್ನದ ಸರ ಕೆಂಪು ಹರಳಿನ ನೆಕ್ಲೇಸ್ ಸೆಟ್ ಕೊಟ್ಟಿದ್ರು….
ಮಗಳು ಹುಟ್ಟಿದ ಮೇಲೆ ಅವಳಿಗೂ ಒಂದೆಳೆ ಸರ, ಬಳೆ ಕೊಟ್ಟಿದ್ರು. ಅಮ್ಮ ಆ ಸರವನ್ನ ನಂಗಲ್ಲದಿದ್ರೂ ನನ್ನ ಮಗಳಿಗಾದ್ರೂ ಕೊಡಬಹುದು ಅಂತ ಊಹಿಸಿದ್ದೆ ನಂಗೆ ನಿರಾಸೆಯಾಗಿತ್ತು.
ಅಮ್ಮನ್ನೇ ಕೇಳಿಬಿಡೋಣ ಅನ್ಕೊಂಡ್ರೆ ಸ್ವಾಭಿಮಾನ ಅಡ್ಡಿ ಬಂದಿತ್ತು. ನನ್ನ ಮುತ್ತಿನ ಸರದ ಹುಚ್ಚನ್ನು ಧನಂಜಯ ಒಮ್ಮೆ ವಸುಪಾಲ್ ಹತ್ರ ಹೇಳಿಕೊಂಡು ನಕ್ಕಿದ್ದ. ಆಮೇಲೆ ನಮ್ಮ ವೆಡ್ಡಿಂಗ್ ಆ್ಯನಿವರ್ಸರಿಗೆ ವಸುಪಾಲ್ ನಂಗೆ ಮುತ್ತಿನ ಸರ ಪ್ರೆಸೆಂಟ್ ಮಾಡಿದ್ರು. ಆ ಕ್ಷಣದಲ್ಲಿ ಅಮ್ಮನ ಸರ ನೆನಪಾದ್ರೂ ‘ಚೆನ್ನಾಗಿದೆ’ ಅಂತ ಚಿಕ್ಕದಾಗಿ ನುಡಿದಿದ್ದೆ. ಅಮ್ಮ ಮನೆಗೆ ಬಂದಾಗ ಆ ಸರ ತೋರಿಸಿದ್ದೆ ಅವರಿಗೆ ತುಂಬಾ ಸಂತೋಷವಾಗಿತ್ತು.

ಧನಂಜಯನ ಮದುವೆಯಲ್ಲಿ ಅವನ ಕೈ ಹಿಡಿದ ಆರತಿಗೂ ಅಮ್ಮ ಆ ಮುತ್ತಿನ ಸರ ಹಾಕಲಿಲ್ಲ. ಆಗಂತೂ ನಂಗೆ ತುಂಬಾ ಆಶ್ಚರ್ಯವಾಗಿತ್ತು. ಅಮ್ಮನ ಮನಸ್ಸಿನಲ್ಲಿ ಏನಿರಬಹುದು…? ಮಗಳಿಗೂ ಇಲ್ಲ…. ಸೊಸೆಗೂ ಇಲ್ಲ,… ಹಾಗಾದ್ರೆ ಆ ಸರ ಮತ್ಯಾರಿಗೆ…?
ಸಣ್ಣ ಅನಾರೋಗ್ಯದಿಂದ ಅಪ್ಪ ತೀರಿಕೊಂಡಾಗ ‘ನಾನು ಒಂಟಿಯಾಗಿ ಬಿಟ್ಟೆ….” ಅಂತ ಅಮ್ಮ ತುಂಬಾ ನೊಂದುಕೊಂಡಿದ್ದರು. ಆಮೇಲೆ ಎರಡೇ ವರ್ಷಕ್ಕೆ ಅಮ್ಮನೂ ಹಾರ್ಟ್ ಆಟ್ಯಾಕ್‌ನಿಂದಾಗಿ ನಮ್ಮಿಂದ ದೂರವಾದಾಗ ದೊಡ್ಡ ಆಘಾತವಾಗಿತ್ತು… ಅಪ್ಪ ಆದ್ರೂ ಒಂದೆರಡು ವಾರ ನರಳಿದ್ರು ಆದ್ರೆ ಅಮ್ಮನದು ಸುಖ ಮರಣ.
….ಅಮ್ಮ ಹೋಗಿ ಒಂದು ವರ್ಷ ಕಳೆದುಹೋಯ್ತು. ವೈಕುಂಠ ಸಮಾರಾಧನೆಯೂ ಮುಗಿದು ಒಂದು ವಾರವಾಯ್ತು…. ನಾಳೆ ಊರಿಗೆ ಹೊರಟಾಗಿದೆ… ತಮ್ಮ, ತಮ್ಮನ ಹೆಂಡತಿ ಒಳ್ಳೆಯವರೇ…. ಆದ್ರೂ ಇನ್ನು ಮುಂದೆ ತವರು ಮನೆಗೆ ಬರ‍್ಬೇಕು ಅನ್ನುವ ತುಡಿತ ಕ್ರಮೇಣ ಕಡಿಮೆಯಾಗಬಹುದು.
“ಅಕ್ಕ…. ಊಟ ಮಾಡೋಣವ?”
ಧನಂಜಯ ಮುಂದೆ ನಿಂತು ಕೇಳಿದಾಗ ಧಾರಿಣಿ ವಾಸ್ತವಕ್ಕೆ ಬಂದಳು.
“ಆಗಲೇ ಊಟದ ಸಮಯ ಆಗಿಬಿಡ್ತೇನೋ…”
“ಹೂಂ ಕಣೇ….”
“ಏನೋ ಜ್ಞಾಪಿಸಿಕೊಳ್ತಾ ಕೂತಿದ್ದೆ ಸಮಯ ಕಳೆದದ್ದೇ ತಿಳೀಲಿಲ್ಲ.”
ಧನಂಜಯ ನಕ್ಕ.

ಮಾರನೆಯ ದಿವಸ ಧಾರಿಣಿ ತಿಂಡಿ ತಿಂದು ಊರಿಗೆ ಹೊರಟು ನಿಂತಾಗ ಆರತಿ ಅರಿಶಿನ ಕುಂಕುಮ ಹಿಡಿದು ಬಂದಳು.
ತಟ್ಟೆಯಲ್ಲಿಟ್ಟಿದ್ದ ಸೀರೆ ಕವರ್ ಮೇಲೆ ಹಸಿರು ಬಣ್ಣದ ವೆಲ್ವೆಟ್ ಬಾಕ್ಸ್ ನೋಡಿ ಎದೆಯಲ್ಲಿ ನವಿರಾದ ಕಂಪನ….
“ಆರತಿ… ಏನಿದು?”
“ಸೀರೆ ಜೊತೇಲೆ ನೀವು ತುಂಬಾ ಇಷ್ಟ ಪಡ್ತಾ ಇದ್ದ ಮುತ್ತಿನ ಸರ ಕೊಡ್ತಾ ಇದ್ದೀನಿ ಅಕ್ಕ…?”
“ಅಮ್ಮ ಬದುಕಿದ್ದಾಗ ‘ನನ್ನ ಮಗಳಿಗೆ ಈ ಸರ ಕೊಡ್ಬೇಕು’ ಅಂತ ಹೇಳಿದ್ರಾ ಆರತಿ?”
“ಅಯ್ಯೋ ಇಲ್ಲಕ್ಕ…. ಅವರೇನೂ ಹೇಳರ‍್ಲಿಲ್ಲ?”
“ಮತ್ತೆ…?
“ನಿಮ್ಮ ತಮ್ಮ ಧನಂಜಯನೇ ಹೇಳಿದ್ದು… ಅಕ್ಕನಿಗೆ ಈ ಮುತ್ತಿನ ಸರ ತುಂಬಾ ಇಷ್ಟ, ಅವಳಿಗೇ ಇದು ಸೇರ್ಬೇಕು ಅಂತ.”
“ಹೌದಾ?”
“ಹೌದು ಅಕ್ಕ…”
“ಅಮ್ಮ ಖಂಡಿತ ಏನು ಹೇಳಿರ್ಲಿಲ್ಲ ತಾನೆ?”
“ಇಲ್ಲ ಅಕ್ಕ.”

ಅಷ್ಟರಲ್ಲಿ ಧನಂಜಯ ಮಗಳನ್ನು ಎತ್ತಿಕೊಂಡು ರೂಮಿನಿಂದ ಹೊರಗೆ ಬಂದ. ಪುಟ್ಟ ಆದ್ಯ ಸೋದರತ್ತೆಯನ್ನು ನೋಡಿ ಮುದ್ದಾಗಿ ನಕ್ಕಳು.
ಧಾರಿಣಿಯ ತಲೆಗೆ ಏನೋ ಹೊಳೆಯಿತು…
ಮುತ್ತಿನ ಸರದ ಬಾಕ್ಸನ್ನು ಮೆಲ್ಲನೆ ಓಪನ್ ಮಾಡಿದಳು, ಅಲ್ಲಿದ್ದ ಸರವನ್ನು ಕೈಗೆತ್ತಿಕೊಂಡು ಹೋಗಿ ಆದ್ಯಳ ಕುತ್ತಿಗೆಗೆ ಹಾಕಿದಾಗ ಮಗು ಚಪ್ಪಾಳೆ ತಟ್ಟುತ್ತಾ ಮುದ್ದಾಗಿ ನಕ್ಕಳು. ಧಾರಿಣಿ ಏನೂ ಮಾತಾಡದೇ ಅಮ್ಮನ ಫೋಟೋ ಕಡೆಗೆ ನೋಡುತ್ತಾ ‘ಅಮ್ಮ…. ನಿನ್ನ ಮನದಲ್ಲಿ ಏನಿತ್ತೋ ನಂಗೊತ್ತಿಲ್ಲ ಆದ್ರೆ ನಂಗೆ ಸರಿ ಅನಿಸಿದ್ದನ್ನ ನಾನು ಮಾಡಿದ್ದೀನಿ. ನಿನ್ನ ಆತ್ಮಕ್ಕೆ ಸಮಾಧಾನ ಆಗಿದೆ ಅಂತ ನಂಬ್ತೀನಿ….’ ಅಂತ ಮನಸ್ಸಿನಲ್ಲೇ ಹೇಳಿಕೊಂಡಳು. ತಾಯಿ ಕಲ್ಯಾಣಿ ಮೃದುವಾಗಿ ನಕ್ಕಂತೆ ಭಾಸವಾಯಿತು.
ಧಾರಿಣಿ ಹೊರಗೆ ಬಂದು ಕಾರಿನಲ್ಲಿ ಕೂತು ಡೋರ್ ಕ್ಲೋಸ್ ಮಾಡಿಕೊಂಡು ಗೇಟಿನ ಕಡೆಗೆ ನೋಡಿದಾಗ ಆರತಿ, ಆದ್ಯ ಇಬ್ಬರೂ ಕೈಬೀಸಿದರು. ಪುಟ್ಟ ಆದ್ಯಳ ಕೊರಳಲ್ಲಿದ್ದ ಮುತ್ತಿನ ಸರ ನೋಡುತ್ತಿದ್ದಂತೆ ಧಾರಿಣಿಯ ಹೃದಯ ಹಗುರವಾಯಿತು.

ಸವಿತಾ ಪ್ರಭಾಕರ, ಮೈಸೂರು
Featured image : PC Internet

7 Comments on “ಮುತ್ತಿನ ಸರ

  1. ಕತೆಯು ಚೆನ್ನಾಗಿದೆ, ಕತೆಯಂತೆ ಭಾಸವಾಗಲೇ ಇಲ್ಲ; ಜೀವದ ಮತ್ತು ಜೀವನದ ಸಂ-ಘಟನೆಯಂತಿದೆ
    ಅಷ್ಟು ಆಪ್ತವಾಗಿ ಹೃದಯಪೂರ್ವಕವಾಗಿ ಅಷ್ಟೇ ಅಲ್ಲ, ಸಹಜವಾಗಿ ಪಡಿಮೂಡಿದೆ.

    ನೀವು ಆಯ್ದುಕೊಂಡ ಅಭಿವ್ಯಕ್ತಿಯ ಮಾರ್ಗ ಸಹ ನವೀನವಾಗಿದೆ, ಸಂಭಾಷಣೆಯಲ್ಲೇ
    ಕತೆಯನ್ನು ಕಟ್ಟುವ ಹಾದಿ ಹೂ ಸುರಿವ ಬಳ್ಳಿಬದಿ, ಗುಡ್‌ ನರೇಷನ್.‌

    ಎಲ್ಲಿಯೂ ಅನಗತ್ಯವಾದ ಟ್ವಿಸ್ಟುಗಳಾಗಲೀ ಒತ್ತಾಯಪೂರ್ವಕ ಹೇರಿಕೆಯಾಗಲೀ ಬರದೇ
    ಸ್ವಾಭಾವಿಕವಾಗಿ, ನದಿಯ ನೀರು ಹರಿದಂತೆ, ಅದರ ಶುದ್ಧ ಸ್ವಚ್ಛ ಸಲಿಲದಂತೆ.

    ಹಿನ್ನೋಟತಂತ್ರ (ಫ್ಲ್ಯಾಷ್‌ ಬ್ಯಾಕ್) ಬಳಕೆಯಾಗಿದ್ದರೂ ಪ್ರಜ್ಞಾಪ್ರವಾಹದ ನಿರೂಪಣೆಯಿಂದಾಗಿ
    ಅದು ಸಹ ಕತೆಯೊಳಗೊಂದು ಕತೆಯಾಗಿ ಓದಿಸಿಕೊಂಡು ಹೋಗುತ್ತದೆ.

    ಜೀವನವನ್ನು ಕತೆ ಮಾಡುವ ಅಥವಾ ಕತೆ ಆಗಿಸುವ ನಿಮ್ಮ ಕೈಗುಣ ನನಗಿಷ್ಟವಾಯಿತು.
    ಇಂಥ ಮೃದು ಮಧುರವಾದ ಮತ್ತು ಸಾಹಜಿಕವಾದ ಪ್ರಸಂಗಗಳನ್ನು ಪರಿಪರಿಯಾಗಿ ಬರೆಯಿರಿ
    ಎಂಬುದು ನನ್ನ ಬಿನ್ನಹ. ಅಭಿನಂದನೆ ಮತ್ತು ಧನ್ಯವಾದ ಮೇಡಂ

  2. ಈ ಕಥೆಯಲ್ಲಿ villain ಇಲ್ಲದಿರುವುದೇ ವಿಶೇಷ. ಎಲ್ಲಾ ಪಾತ್ರಗಳು ನಾಯಕ ನಾಯಕಿಯರು. ಎಲ್ಲಾ ಒಳ್ಳೇ ಪಾತ್ರಗಳೇ. ತುಂಬ ಹೃದಯ ಸ್ಪರ್ಶಿ ಕಥೆ. ಕೊನೆಗೆ ಲೇಖಕಿ ಸಹ ನಮಗೆಲ್ಲಾ ಮೆಚ್ಚಿಗೆಯಾಗಿದ್ದಾರೆ.ಒಳ್ಳೆಕಥೆ ಕೊಟ್ಟ ಲೇಖಕಿಯವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.

  3. ಸರಳ ಸುಂದರ ಕಥೆ ಸೊಗಸಾದ ನಿರೂಪಣೆ.. ಗೆಳತಿ

  4. ಸುಂದರ ಕಥಾಹಂದರ…
    ಮೃದುಭಾವ ಹೊತ್ತ ಪಾತ್ರಗಳು ತುಂಬಾ ಇಷ್ಟವಾದವು
    ಕಥೆಯ ಅಂತ್ಯವಂತೂ ಸೂಪರ್!

  5. ಕಥೆ ತುಂಬಾ ಚನ್ನಾಗಿದೆ ನನಗೆ ತುಂಬಾ ಇಷ್ಟ ಆಯ್ತು

Leave a Reply to Gayathri Sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *