ಪರಾಗ

ಯಾರಿಗೆ ಯಾರೋ?

Share Button

ಶಾಂತಲಾ ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಧು ಅಂಗಡಿಗೆ ಬಂದವರೊಡನೆ ವ್ಯಾಪಾರ ವಹಿವಾಟು ನೋಡಿಕೊಳ್ಳುತ್ತಿದ್ದರೂ ಗಳಿಗೆಗೊಮ್ಮೆ ಅವನ ದೃಷ್ಟಿ ರಸ್ತೆಯ ಕಡೆಗೆ ಹಾಯುತ್ತಿತ್ತು. ಹಾಗೆಯೇ ಅಂಗಡಿಯ ಮಾಲೀಕರಾದ ಸುಜಾತಕ್ಕನ ಮಾತನ್ನೂ ನೆನಪಿಸಿಕೊಳ್ಳುತ್ತಿದ್ದ. ಎಂದಿನಂತೆ ಕೆಲಸಕ್ಕೆ ಬಂದಿದ್ದ ಮಾಧುವಿಗೆ ಅವರು “ಲೋ..ಮಾಧು ಇವತ್ತು ಅಂಗಡಿಯಲ್ಲಿ ನೀನೇ ಮಧ್ಯಾನ್ಹದ ವರೆಗಿದ್ದು ನೋಡಿಕೊಂಡು ಊಟದ ಹೊತ್ತಿಗೆ ಬೀಗಹಾಕಿ ಮನೆಗೆ ಕೀ ಕೊಟ್ಟು ಹೋಗ್ತೀಯಾ ಪ್ಲೀಸ್. ಒಂದು ವಾರದಿಂದ ಯಾವ್ಯಾವುದೋ ಕೆಲಸಗಳಿಂದ ಓಡಾಡಿ ಓಡಾಡಿ ಸಾಕಾಗಿಬಿಟ್ಟಿದೆ ಕಣೋ, ಸ್ಚಲ್ಪ ರೆಸ್ಟ್ ಬೇಕು” ಎಂದಿದ್ದರು.

“ಅಕ್ಕಾ ನಾನು ಸಿದ್ಧಲಿಂಗಪುರಕ್ಕೆ ಹೋಗಬೇಕಾಗಿತ್ತು ಅಂತ ನಿಮಗೆ ನೆನ್ನೆಯೇ ಹೇಳಿದ್ದೆ.” ಎಂದ ಮೆಲುದನಿಯಲ್ಲಿ ಮಾಧು.

“ಓ ಹೌದಲ್ಲವಾ ನನ್ನ ಗಡಿಬಿಡಿಯಲ್ಲಿ ಮರೆತೇ ಹೋಯ್ತು. ಹಾಗಾದರೆ ಒಂದು ಕೆಲಸ ಮಾಡು. ನಾನು ಮನೆಗೆ ಹೋಗಿ ಈಗ ಸ್ವಲ್ಪ ರೆಸ್ಟ್ ತೆಗೆದುಕೊಂಡು ಫ್ರೆಶಪ್ ಆಗಿ ಬರುತ್ತೇನೆ. ಅಲ್ಲಿಯವರೆಗೆ ಅಂಗಡಿಯಲ್ಲಿರು” ಎಂದಿದ್ದರು ಸುಜಾತಕ್ಕ. ಆದರೆ ಇಷ್ಟೊತ್ತಾದರೂ ಬರಲೇ ಇಲ್ಲ. ನನಗೆ ತಡವಾಗ್ತಿದೆ. ಗಿರಾಕಿಗಳು ಬೇರೆ ಬರುತ್ತಲೇ ಇದ್ದಾರೆ. ಬಿಟ್ಟು ಹೋಗೋಕಾಗಲ್ಲ. ಫೋನ್ ಮಾಡಿದರೆ ಪಿಕ್ ಮಾಡುತ್ತಿಲ್ಲ. ಮಲಗಿಬಿಟ್ಟಿದ್ದಾರೋ ಏನೋ. ಹೇಗೂ ಅವರು ಹೇಳಿದ್ದ ಟೈಂ ಆಗಿಹೋಗಿದೆ. ಬೀಗ ಹಾಕಿಕೊಂಡು ಹೋದರಾಯಿತೆಂದು ಹೊರಗಿಟ್ಟಿದ್ದ ಸ್ಟೂಲನ್ನು ಎತ್ತಿ ಒಳಗಿಟ್ಟು ತನ್ನ ಬ್ಯಾಗನ್ನು ಹೊರಗಿಟ್ಟನು. ಅಂಗಡಿಗೆ ಬೀಗ ಹಾಕಿ ಕೀಯನ್ನು ಜೇಬಿನಲ್ಲಿಟ್ಟುಕೊಂಡನು.

ಮೆಡಿಕಲ್ ಅಂಗಡಿಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿದ್ದ ಸುಜಾತಾಳ ಮನೆಯ ಕಡೆ ಹೊರಟನು. ಅಷ್ಟರಲ್ಲಿ ಅಕ್ಕನ ಮನೆಯ ಕೆಲಸ ಮಾಡುವ ಗಂಗಮ್ಮ ತನ್ನ ಕಡೆಗೇ ಬರುತ್ತಿರುವುದು ಕಾಣಿಸಿತು. ಆಕೆ ಸುಜಾತಾಳ ಮನೆಯ ಹಿಂಭಾಗದಲ್ಲಿ ವಾಸಿಸುತ್ತಿದ್ದು ಅಕ್ಕ ನಡೆಸುತ್ತಿದ್ದ ಸ್ವಸಹಾಯಕ ಸಂಘದ ನೆರವಿನಿಂದ ತನ್ನ ಮನೆಯಲ್ಲೇ ಪಾನಿಪೂರಿಗೆ ಬೇಕಾಗುವ ಪೂರಿಗಳನ್ನು ತಯಾರಿಸುತ್ತಿದ್ದಳು. ಅವುಗಳನ್ನು ಪಾಕೆಟ್ಟು ಮಾಡಿ ಅಂಗಡಿಗಳಿಗೆ ಕೊಟ್ಟು ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿದ್ದಳು. ಜೊತೆಗೆ ಸುಜಾತಕ್ಕನ ಮನೆಯ ಮಕ್ಕಳ ನಿಗಾ ವಹಿಸುವುದಲ್ಲದೆ ಅವರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದಳು. ಬಹಳ ನಂಬಿಕೆಯ ಹೆಂಗಸು. ರಸ್ತೆ ಅಪಘಾತವೊಂದರಲ್ಲಿ ತಮ್ಮ ಗಂಡ ಮತ್ತು ಮಗನನ್ನು ಕಳೆದುಕೊಂಡು ಒಬ್ಬರೇ ವಾಸವಿದ್ದರು. ಮಾಧುವನ್ನು ಕಂಡರೆ ಆಕೆಗೂ ಇಷ್ಟ. ಅವರೇಕೆ ಈ ಕಡೆಗೇ ಬರುತ್ತಿದ್ದಾರೆ? ಬಹುಶಃ ಸುಜಾತಕ್ಕನೇ ಕಳುಹಿಸಿರಬೇಕು. ಒಳ್ಳೆಯದೇ ಆಯಿತು. ಅಂಗಡಿಯ ಕೀಯನ್ನು ಅವರ ಕೈಗೆ ಕೊಟ್ಟು ಇಲ್ಲಿಂದಲೇ ನಾನು ಬಸ್‌ ಸ್ಟ್ಯಾಂಡ್ ಗೆ ಹೋಗಿಬಿಡಬಹುದು ಎಂದುಕೊಂಡು ಅಲ್ಲೇ ನಿಂತು ಕಾಯತೊಡಗಿದ.

“ಮಾಧೂ..ಮಾಧಪ್ಪಾ ನಿನ್ನ ಸುಜಾತಕ್ಕಾ ಇನ್ನಿಲ್ಲಪ್ಪಾ. ನಮ್ಮನ್ನೆಲ್ಲ ಬಿಟ್ಟು ದೂರ ಹೊರಟೇ ಹೋದಳಪ್ಪಾ.. ಶಿವನೇ ಇನ್ನು ನಮಗ್ಯಾರು ದಿಕ್ಕು? ನಮ್ಮದು ಹೋಗಲಿ ಅವರ ಎರಡು ಮಕ್ಕಳ ಗತಿಯೇನು? ಅವು ಪರದೇಶಿಗಳಾದುವಲ್ಲೋ” ಎಂದು ದನಿತೆಗೆದು ಪ್ರಲಾಪಿಸುತ್ತ ಅಂಗಡಿಯ ಬಾಗಿಲ ಬಳಿಯೇ ಕುಸಿದು ರೋಧಿಸತೊಡಗಿದಳು.

ಗಂಗಮ್ಮನ ಮಾತುಗಳನ್ನು ಕೇಳಿದ ಮಾಧುವಿಗೆ ಸರಿಯಾಗಿ ಅರ್ಥವಾಗದೆ ಹೋದರೂ ಸುಜಾತಕ್ಕ ಇನ್ನಿಲ್ಲ ಎನ್ನುವ ಮಾತು ಸಾವಿರ ಭರ್ಜಿ ಚುಚ್ಚಿದಂತೆ ಅನುಭವವಾಯಿತು. ಇವರು ಏನು ಹೇಳುತ್ತಿದ್ದಾರೆ? ಬೆಳಗ್ಗೆಯಷ್ಟೇ ಸುಜಾತಕ್ಕ ನನ್ನೊಡನೆ ಮಾತನಾಡಿ ಹೋಗಿದ್ದರು. ನನಗೆ ಸುಸ್ತಾಗಿದೆ ಎಂದಿದ್ದರು. ಏನಾದರೂ ತೀವ್ರ ಹೃದಯಾಘಾತವಾಗಿರಬಹುದೇ? ಛೇ.. ಅವರು ಬಹಳ ಗಟ್ಟಿಮುಟ್ಟಾದ ಹೆಣ್ಣುಮಗಳು. ಯಾವ ಖಾಯಿಲೆ ಕಸಾಲೆಯೂ ಇರಲಿಲ್ಲ. ಏಕೋ ಏನೋ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ತನ್ನ ಸಂದೇಹ ಪರಿಹರಿಸಿಕೊಳ್ಳಲು ಗಂಗಮ್ಮನ ಪಕ್ಕ ಕುಳಿತು ಮಾಧು “ಗಂಗಮ್ಮನವರೇ ನೀವು ಹೇಳುತ್ತಿರುವುದು ಸತ್ಯವೇ? ಬಿಡಿಸಿ ಸರಿಯಾಗಿ ಹೇಳಿ ಪ್ಲೀಸ್” ಎಂದು ಕೇಳಿದನು.

ಸೊರಬರ ಮಾಡುತ್ತಿದ್ದ ಗಂಗಮ್ಮ ತಮ್ಮ ಸೀರೆಯ ಸೆರಗಿನಿಂದ ಕಣ್ಣುಮೂಗು ಒರೆಸಿಕೊಂಡು ಅತ್ತಿತ್ತ ನೋಡುತ್ತ “ಅದೇ ಮಾಧು ಅವಾ..ರಿಯಲ್ ಎಸ್ಟೇಟ್ ಹನುಮಂತಪ್ಪ ಸುಜಾತಕ್ಕನ ಜೊತೆ ವ್ಯವಹಾರ ಮಾಡಿಕೊಂಡು ಓಡಾಡುತ್ತಿದ್ದನಲ್ಲಾ ಆ ಮೂಳನೇ ಸುಜಾತಮ್ಮನನ್ನು ಚಾಕುವಿನಿಂದ ತಿವಿದು ಸಾಯಿಸಿಬಿಟ್ಟವನೆ. ನಾನು ಅವರ ಜೊತೆ ಇರುತ್ತಿದ್ದರೆ ಅದಕ್ಕೆ ಅವಕಾಶವಾಗುತ್ತಿರಲಿಲ್ಲ. ಸುಜಾತಮ್ಮ ನನ್ನನ್ನು ಕೆಲವು ಸಾಮಾನುಗಳನ್ನು ತರಲು ಹೇಳಿದ್ದರಿಂದ ಅಂಗಡಿಗೆ ಹೋಗಿದ್ದೆ. ನಾನು ಹಿಂದಕ್ಕೆ ಬರೋದರೊಳಗೆ ಅವರನ್ನು ತಿವಿದು ಬಿಟ್ಟವನೆ. ರಕ್ತದ ಮಡುವಿನಲ್ಲಿ ಆಯಮ್ಮ ಬಿದ್ದುಬಿಟ್ಟಿದ್ದಳು. ಅದ ನೋಡಿ ನನಗೆ ಕೈಕಾಲೇ ಬಿದ್ದುಹೋಯ್ತು. ಅವನು ನನ್ನ ಮೇಲೂ ಏರಿ ಬರೋವಷ್ಟರಲ್ಲಿ ನನ್ನ ಕೈಯಲ್ಲಿದ್ದ ಸಾಮಾನುಗಳ ಚೀಲದಿಂದಲೇ ಅವನ ಮರ್ಮಾಂಗಕ್ಕೆ ಜೋರಾಗಿ ಬಡಿದೆ. ಅವನು ಬಿದ್ದುಬಿಟ್ಟ. ಬಾಯಿಬಡಕೊಂಡು ಅಕ್ಕಪಕ್ಕದವರನ್ನು ಕೂಗಿಕರೆದೆ. ಅವರೆಲ್ಲ ಓಡಿಬಂದು ಅವನನ್ನು ಹಿಡಿದುಕೊಂಡು ಕಟ್ಟಿ ಹಾಕವ್ರೆ. ಒಂದಿಬ್ಬರು ಮುಂದಿನ ಬೀದೀಲಿ ಇದ್ದಾರಲ್ಲ ಅವರಣ್ಣ ದೇವಣ್ಣನವರನ್ನು ಕರೆದುಕೊಂಡು ಬಂದ್ರು. ಪೋಲೀಸರಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಪಾಪ ಸುಜಾತಮ್ಮನ ಹೈಕಳು ಅವರತ್ತೆ ಮನೆಯಲ್ಲಿ ಇದ್ದುವಂತೆ. ಅವೂ ಬಂದವ್ರೆ. ಗೋಳು ನೋಡಕಾಯ್ತಿಲ್ಲ. ಸುಜಾತಾಳ ಅತ್ತಿಗೆ ಅವುಗಳನ್ನು ಮಡಿಲಿನಲ್ಲಿ ಹಾಕಿಕೊಂಡು ಸುಧಾರಿಸುತ್ತಿದ್ದಾರೆ. ನೀನು ಅಂಗಡೀಲಿ ಇರೋ ವಿಷ್ಯ ನನಗೆ ಸುಜಾತಮ್ಮ ಹೇಳಿದ್ಲು. ನೀನು ಊರಿಗೆ ಹೊಂಟಿದ್ದೀಯ ಅನ್ನುವುದನ್ನೂ ಹೇಳಿದ್ಲು. ಅದ್ಯಾವ ಮಾಯದಲ್ಲಿ ಆ ಗೋವಿಂದಪ್ಪ ಮನೆಗೆ ಅಕ್ಕಪಕ್ಕದೋರಿಗೆ ಗೊತ್ತಾಗದಂತೆ ಬಂದನೋ ತನ್ನ ಕೆಲಸ ಮುಗಿಸಿಬಿಟ್ಟವ್ನೆ. ಈ ಯಮ್ಮ ಯಾಕೆ ಅವನಜೊತೆ ವ್ಯವಹಾರಕ್ಕೆ ಬಿದ್ದಳೋ ಏನೋ. ಅವಳು ಪುಣ್ಯಾತಗಿತ್ತಿ ನನ್ನಂತ ಎಷ್ಟೋ ಜನಕ್ಕೆ ಉಪಕಾರ ಮಾಡಿದ್ದಳು. ನಿನ್ನಂಥ ಓದೋ ಹುಡುಗರಿಗೆ ಸಹಾಯ ಮಾಡಿದ್ಲು. ಭಗವಂತನಿಗೆ ಕಣ್ಣಿಲ್ಲ ಬಿಡು, ಏನು ಹೇಳಿದ್ರೂ ಅಷ್ಟೇಯಾ. ಹೋದಪ್ರಾಣ ಹಿಂದಕ್ಕೆ ಬರ‍್ತದಾ. ಮುಗಿದುಹೋಯ್ತು. ಹೂಂ ನೀನು ಅಂಗಡಿ ಕೀ ನನ್ನ ಕೈಗೆ ಕೊಟ್ಟು ಇಲ್ಲಿಂದಿತ್ತಲೇ ಊರಿಗೆ ಹೋಗಿಬಿಡು. ಮನೆಕಡೆ ಬರಬೇಡ. ಆ ಪೋಲಿಸಪ್ಪರ ಕೈಗೆ ಸಿಕ್ಕಿದರೆ ಇಲ್ಲದ್ದು ಇರೋದು ಕೇಳಿ ತಲೇನೇ ಕೆಡಿಸುತ್ತಾರೆ. ನಮ್ಮದೆಂಗೋ ಆಗುತ್ತೆ, ನೀನ್ಯಾಕೆ ಅದರಲ್ಲಿ ಸಿಕ್ಕಿ ಹಾಕ್ಕೋಂತೀ.” ಗಂಗಮ್ಮ ಮಾತನಾಡುತ್ತಲೇ ಇದ್ದಳು. ಮಾಧುವಿಗೆ ತಾನು ಮೈಸೂರಿಗೆ ಕಾಲಿಟ್ಟಾಗಿನ ದಿನಗಳ ನೆನಪು ಮರುಕಳಿಸಿತು.

ಮೈಸೂರಿಗೆ ಸಮೀಪದ ಸಿದ್ಧಲಿಂಗಪುರದ ಒಂದೇ ಓಣಿಯಲ್ಲಿ ಹಿಂದೆ ವಾಸವಾಗಿದ್ದರು ಮಾಧುವಿನ ಹೆತ್ತವರು ಮತ್ತು ಸುಜಾತಳ ಮನೆಯವರು. ಮಾಧುವಿನ ತಂದೆತಾಯಿಗಳು ಅವರಿವರ ಹೊಲಗಳಲ್ಲಿ ಕೂಲಿಕೆಲಸ ಮಾಡುತ್ತ ತಮಗಿದ್ದ ಒಬ್ಬನೇ ಮಗ ಮಾಧುವನ್ನು ಶಾಲೆಗೆ ಕಳಿಸುತ್ತಿದ್ದರು. ಸುಜಾತಳ ಗಂಡ ರಾಮಣ್ಣ ಚಿಕ್ಕಪುಟ್ಟ ಕಾಂಟ್ರಾಕ್ಟ್ ಮಾಡುತ್ತಿದ್ದರು. ಅವರ ಉದ್ಯೋಗದಿಂದ ಕಾಂಟ್ರಾಕ್ಟರ್ ರಾಮಣ್ಣನೆಂದೇ ಹೆಸರುಗಳಿಸಿದ್ದರು. ಬಹಳ ನಂಬಿಕೆಯುಳ್ಳ ವ್ಯಕ್ತಿ. ಅವರು ನಿರ್ವಹಿಸಿದ ಯಾವುದೇ ಕಟ್ಟಡದ ಕೆಲಸದತ್ತ ಬೇರೊಬ್ಬರು ಬೆಟ್ಟು ಮಾಡಿ ತೋರಿಸುವಂತಿರಲಿಲ್ಲ. ಆತನು ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡದ್ದರಿಂದ ಅಜ್ಜಿ ತಾತನ ಆಸರೆಯಲ್ಲಿ ಬೆಳೆದು ಸ್ವಸಾಮರ್ಥ್ಯದಿಂದ ಬದುಕು ಕಟ್ಟಿಕೊಂಡಿದ್ದರು. ಅಂತದ್ದೇ ದೋಣಿಯಲ್ಲಿ ಸಾಗಿಬಂದಿದ್ದು ತನ್ನ ಅಣ್ಣಅತ್ತಿಗೆಯರ ಆಶ್ರಯದಲ್ಲಿದ್ದ ಸುಜಾತಾಳನ್ನು ವರಿಸಿ ಗೃಹಸ್ಥರಾಗಿದ್ದರು. ಗಂಡಹೆಂಡತಿ ಅನ್ಯೋನ್ಯವಾಗಿದ್ದರು. ಎರಡು ಮಕ್ಕಳೂ ಆದರು. ಮಕ್ಕಳ ವಿದ್ಯಾಭ್ಯಾಸದ ದೆಸೆಯಿಂದ ಮೈಸೂರಿನಲ್ಲಿ ಮನೆಮಾಡಿ ಅಲ್ಲಿಯೇ ಸಂಸಾರ ಹೂಡಬೇಕೆಂಬ ಆಲೋಚನೆಯಿಂದ ಇರಲು ಮನೆಯ ಜೊತೆಗೆ ಒಂದೆರಡು ಅಂಗಡಿಗಳನ್ನು ತೆಗೆದುಕೊಂಡರು. ಅಷ್ಟರಲ್ಲಿ ರಾಮಣ್ಣನವರ ಅಜ್ಜಿ ತಾತನವರು ದೈವಾಧೀನರಾಗಿದ್ದರಿಂದ ಅವರು ವಾಸವಾಗಿದ್ದ ಹಳೆಯ ಮನೆ ಮತ್ತು ಒಂದುಚೂರು ಭೂಮಿಯನ್ನೂ ಮಾರಿ ತಮ್ಮಲ್ಲಿನ ಉಳಿತಾಯವೆಲ್ಲವನ್ನೂ ಹಾಕಿ ಆಸ್ತಿ ಕೊಂಡರು. ಅಷ್ಟೊತ್ತಿಗೆ ಶಾಲೆಬಿಟ್ಟು ಅಪ್ಪ ಅಮ್ಮನ ಜೊತೆಗೆ ಕೂಲಿಗೆ ಹೋಗುತ್ತಿದ್ದ ಮಾಧುವನ್ನು ತಾವು ಮುಂದಕ್ಕೆ ಓದಿಸುತ್ತೇವೆಂದು ಸುಜಾತ ಮೈಸೂರಿಗೆ ತಮ್ಮೊಡನೆ ಕರೆತಂದಿದ್ದರು. ಮಾತುಕೊಟ್ಟಂತೆ ಅವನನ್ನು ಸರ್ಕಾರಿ ಪ್ರೌಢಶಾಲೆಗೆ ಸೇರಿಸಿದರು. ಮಾಧುವೂ ಅವರ ಮನೆಯ ಸದಸ್ಯನಂತೆ ಇದ್ದ. ಅವರು ಹೇಳಿದ ಕೆಲಸ ಮಾಡುತ್ತ ಸಣ್ಣಪುಟ್ಟ ಸಹಾಯಕನಾಗಿದ್ದ. ಓದನ್ನೂ ಮುಂದುವರಿಸಿದ್ದ.

ಕಾಂಟ್ರಾಕ್ಟ್ ರಾಮಣ್ಣ ತನ್ನ ಹೆಂಡತಿಯನ್ನೂ ಮುಂದಕ್ಕೆ ಓದಿಸಿ ಫಾರ್ಮೆಸಿಯಲ್ಲಿ ಡಿಪ್ಲೊಮಾ ಪಾಸಾಗುವಂತೆ ಮಾಡಿದ. ಅವಳ ಹೆಸರಿನಲ್ಲಿ ಲೈಸೆನ್ಸ್ ಪಡೆದು ಒಂದು ಮೆಡಿಕಲ್ ಸ್ಟೋರ್ ತೆರೆದರು. ಅದರಲ್ಲಿ ಆಕೆಯು ವಹಿವಾಟು ನಡೆಸುವಂತೆ ಏರ್ಪಾಡು ಮಾಡಿ ತಾವು ಸಿದ್ಧಲಿಂಗಪುರದಲ್ಲಿ ತಮ್ಮ ಕಾಂಟ್ರಾಕ್ಟ್ಗಿರಿಯನ್ನು ಮುಂದುವರಿಸಿದರು. ಅಲ್ಲಿಗೆ ಇಲ್ಲಿಗೆ ಓಡಾಡುತ್ತಲೇ ವ್ಯವಹಾರ ನಡೆಸುತ್ತಿದ್ದರು. ಇದರ ಜೊತೆಗೆ ಸ್ನೇಹಿತರ ಸಲಹೆಯ ಮೇರೆಗೆ ರಿಯಲ್ ಎಸ್ಟೇಟ್ ವ್ಯವಹಾರ ಕೂಡ ಪ್ರಾರಂಭಿಸಿದರು.

ಸುಜಾತ ದಾಷ್ಟಿಕ ಹೆಣ್ಣುಮಗಳು. ಮೆಡಿಕಲ್‌ಸ್ಟೋರ್ ಜೊತೆಗೆ ಮಹಿಳಾ ಸ್ವಸಹಾಯ ಸಂಘದ ನಿರ್ವಾಹಕಿಯಾಗಿ ಕೂಡ ತೊಡಗಿಕೊಂಡರು. ಇದರಿಂದ ಹಲವಾರು ಮಹಿಳೆಯರಿಗೆ ಸ್ವಾವಲಂಬನೆಗೆ ಅವಕಾಶ ದೊರಕಿಸಿಕೊಟ್ಟಿದ್ದಳು. ಅವರುಗಳಲ್ಲಿ ಗಂಗಮ್ಮನೂ ಒಬ್ಬಳು. ಎಲ್ಲವೂ ರಾಮಣ್ಣನವರು ಇರುವವರೆಗೆ ಸುಸೂತ್ರವಾಗಿ ನಡೆದುಕೊಂಡು ಹೋಗುತ್ತಿದ್ದವು. ಒಂದುದಿನ ಕೆಲಸಕ್ಕೆಂದು ಹೋದವರು ಹಿಂದಕ್ಕೆ ಹೆಣವಾಗಿ ಬಂದರು. ಹೃದಯಾಘಾತವಾಗಿತ್ತು. ಆದರೆ ಕೆಲವರು ಹಣಕಾಸಿನ ವ್ಯವಹಾರದಲ್ಲಿ ಅವರ ಜೊತೆಯವರೇ ಅವರನ್ನು ಮುಗಿಸಿದರು ಎಂದಾಡಿಕೊಂಡರು. ಅಂತೂ ಸುಖಸಂಸಾರಕ್ಕೆ ರಾಹು ಬಡಿಯಿತು.

ಆ ಸಮಯದಲ್ಲಿ ರಾಮಣ್ಣನವರ ಒಡನಾಡಿಯಾಗಿದ್ದು ಅವರ ಬಲಗೈಯೆಂದೇ ಹೇಳುತ್ತಿದ್ದ ಹನುಮಂತಪ್ಪ ಸುಜಾತಾಳಿಗೆ ಪರಿಚಯವಾದ. ವ್ಯವಹಾರದೆಲ್ಲ ವಿಷಯಗಳೂ ಅವನಿಗೆ ಗೊತ್ತಿದ್ದುದರಿಂದ ಅವರಿಬ್ಬರ ಪರಿಚಯ ಅನಿವಾರ್ಯವಾಗಿ ನಿಕಟವಾಯಿತು. ಅವನ ಮುಖಾಂತರ ರಾಮಣ್ಣನಿಗೆ ಬರಬೇಕಾಗಿದ್ದ ಅನೇಕ ಬಾಕಿಗಳನ್ನು ವಾಪಸ್ಸು ಪಡೆದರು ಸುಜಾತ. ಇದರಿಂದ ಅವರಿಬ್ಬರ ನಡುವಿನ ವ್ಯವಹಾರ ಮುಂದಕ್ಕೂ ಮುಂದುವರಿಯಿತು.

ಇದೆಲ್ಲ ವಿದ್ಯಮಾನಗಳನ್ನೂ ದೂರದಿಂದಲೇ ಗಮನಿಸುತ್ತಿದ್ದ ಸುಜಾತಾಳ ಅಣ್ಣ ದೇವಣ್ಣನವರು “ನೋಡಮ್ಮಾ ಸುಜಾತಾ, ಬರಬೇಕಾದ ಬಾಕಿಯನ್ನೆಲ್ಲ ಅವನ ಮುಖಾಂತರ ಹಿಂದಕ್ಕೆ ಪಡೆದುಕೊಂಡೆ. ಆದರೆ ಇನ್ನು ಮುಂದೆ ಅವನೊಡನೆ ವ್ಯವಹಾರದಲ್ಲಿ ಸ್ವಲ್ಪ ಅಂತರ ಕಾಪಾಡಿಕೋ. ಹಣಕಾಸಿನಲ್ಲಿ ಅವನನ್ನು ಸ್ವಲ್ಪ ದೂರವಿಡು. ಹುಷಾರು. ನಿನ್ನ ಗಂಡ ಕೈಹಾಕಿದ್ದ ರಿಯಲ್ ಎಸ್ಟೇಟ್ ಕೆಲಸಗಳನ್ನು ಇಲ್ಲಿಗೆ ನಿಲ್ಲಿಸಿಬಿಡು. ಅವನಾದರೋ ಗಂಡಸು, ಹೊರಗಿನ ವ್ಯವಹಾರವನ್ನು ತಿಳಿದಿದ್ದ. ಆದರೂ ಸೋತು ಸಮಾಧಿಯಾದ. ನೀನು ಯಾವ ಲೆಕ್ಕ. ಈಗ ನಿನಗೇನು ಕಮ್ಮಿಯಾಗಿದೆ. ನಿನ್ನ ಗಂಡ ಇರಲು ಮನೆ, ವ್ಯವಹಾರಕ್ಕೆ ಅಂಗಡಿ, ಜೊತೆಗೆ ಇನ್ನೆರಡು ಅಂಗಡಿಗಳ ಬಾಡಿಗೆ ಬರುವಂತೆ ಮಾಡಿದ್ದಾನೆ. ಬೇರೆ ಉಳಿತಾಯವೂ ಸಾಕಷ್ಟಿದೆ. ನೀನೇ ಅಪೇಕ್ಷೆಪಟ್ಟು ನಡೆಸುತ್ತಿರುವ ಸ್ವಸಹಾಯಕ ಸಂಘವೂ ಇದೆ. ಮಕ್ಕಳನ್ನು ನೋಡಿಕೊಂಡು ನೆಮ್ಮದಿಯಾಗಿದ್ದುಬಿಡು. ಹೊಸ ವ್ಯವಹಾರಕ್ಕೆ ಕೈಹಾಕಬೇಡ” ಎಂದು ಬುದ್ಧಿ ಹೇಳುತ್ತಲೇ ಇದ್ದರು.

‘ವಿನಾಶಕಾಲೇ ವಿಪರೀತಬುದ್ಧಿ’ ಎಂಬಂತೆ ತಮ್ಮ ಅಣ್ಣನ ಮಾತನ್ನು ಕೇಳಿದಂತೆ ಮಾಡಿ ತಮ್ಮ ರಿಯಲ್ ಎಸ್ಟೇಟ್ ದಂಧೆಯನ್ನು ಹನುಮಂತಪ್ಪನ ಜೊತೆಯಲ್ಲಿಯೇ ಮುಂದುವರಿಸಿದ್ದಳು ಸುಜಾತಾ. ಪ್ರಾರಂಭದಲ್ಲಿ ಚೆನ್ನಾಗಿಯೇ ಕೈಹಿಡಿಯಿತು. ವ್ಯವಹಾರ ಮುಂದುವರಿದಂತೆಲ್ಲ ಕಮೀಷನ್ ಹಂಚಿಕೆಯಲ್ಲಿ ಸಮಸ್ಯೆಗಳು ಪ್ರಾರಂಭವಾದವು. ಭಿನ್ನಾಭಿಪ್ರಾಯಗಳು ಹೆಚ್ಚಾದಂತೆಲ್ಲ ವಾದವಿವಾದಗಳೂ, ಮಾತುಗಳಲ್ಲಿ ಘರ್ಷಣೆಗಳು ನಡೆಯುತ್ತಿದ್ದವು. ಆಗೊಮ್ಮೆ ಈಗೊಮ್ಮೆ ಏರುದನಿಯಲ್ಲಿ ಕೂಗಾಡುತ್ತಿದ್ದುದೂ ಉಂಟು. ಆಗೆಲ್ಲ ಸುಜಾತಳ ಅಣ್ಣನವರೇ ಮಧ್ಯೆ ಪ್ರವೇಶಿಸಿ ರಾಜಿ ಮಾಡಿಸುತ್ತಿದ್ದರು. ಆಗಲೂ ದೇವಣ್ಣನವರು “ಸುಜಾತಾ, ಈಗಲೂ ಕಾಲ ಮಿಂಚಿಲ್ಲ, ಎಲ್ಲ ವ್ಯವಹಾರಗಳನ್ನು ನಿಲ್ಲಿಸಿಬಿಡು. ನಿನ್ನ ನೆಮ್ಮದಿ ಹಾಳಾಗುತ್ತೆ. ನಿನ್ನ ಅಂಗಡಿ, ಮನೆ, ಸಂಘಕ್ಕೆ ಚಟುವಟಿಕೆಗಳನ್ನು ಸೀಮಿತಗೊಳಿಸಿಕೋ” ಎಂದು ಬುದ್ಧಿ ಹೇಳಿದರು.

ಸುಜಾತಾಳೂ ರೋಸಿಹೋಗಿದ್ದರಿಂದ ಅಣ್ಣನ ಮಾತಿನಂತೆ ಹನುಮಂತಪ್ಪನೊಡನೆ ವ್ಯವಹಾರದಿಂದ ದೂರಾಗಲು ನಿಶ್ಚಯಿಸಿದಳು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಹೊಸಜಾಗ ತೆಗೆದುಕೊಂಡು ಲೇಔಟ್ ಮಾಡಲೋಸುಗ ಸುಜಾತಾಳಿಂದ ಸಾಕಷ್ಟು ಹಣವನ್ನು ಪಡೆದುಕೊಂಡಿದ್ದ. ಅದನ್ನು ಅವನು ಹಿಂತಿರುಗಿಸಲು ಸತಾಯಿಸತೊಡಗಿದ.

ಇಷ್ಟರಲ್ಲಿ ಮಾಧು ಎಸ್.ಎಸ್.ಎಲ್.ಸಿ, ಪಾಸಾಗಿ ಶಿಕ್ಷಕರ ತರಬೇತಿ ಕೋರ್ಸ್ ಮುಗಿಸಿ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಉಪಾಧ್ಯಾಯನಾಗಿದ್ದ. ಶಾಲೆಗೆ ದೂರವಾಗುತ್ತದೆಂಬ ಕಾರಣದಿಂದ ಅಲ್ಲಿಯೇ ಗ್ರಾಮದಲ್ಲೊಂದು ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದ. ಆದರೂ ತನಗೆ ಬಿಡುವು ದೊರಕಿದಾಗಲೆಲ್ಲ ಸುಜಾತಾಳ ನೆರವಿಗೆ ಧಾವಿಸುತ್ತಿದ್ದ. ಅವಳಿಗೆ ಹೆಚ್ಚು ಒತ್ತಡವಿದ್ದ ಕಾಲದಲ್ಲಿ ಶಾಲೆಗೆ ಒಂದುದಿನ ರಜೆಹಾಕಿಯೂ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ. ತನ್ನೂರಾದ ಸಿದ್ಧಲಿಂಗಪುರಕ್ಕೂ ಆಗಾಗ ಹೋಗಿಬರುತ್ತಿದ್ದ. ನೆನ್ನೆಯ ದಿನ ಅಂಗಡಿಗೆ ಬಂದಾಗ ಸುಜಾತಕ್ಕ ಹೇಳಿದಂತೆ ಮಧ್ಯಾನ್ಹದ ವರೆಗೆ ಕೆಲಸ ಮಾಡಿ ಅಂಗಡಿಗೆ ಅವರೇಕೆ ಇನ್ನೂ ಬರಲಿಲ್ಲ ಎಂದು ಯೋಚಿಸುತ್ತಾ ಹಿಂದಿರುಗುತ್ತಿದ್ದಾಗ ಗಂಗಮ್ಮನ ಭೇಟಿಯಾಗಿ ವಿಷಯ ತಿಳಿಯಿತು. ಎಲ್ಲ ವ್ಯವಹಾರಗಳೂ ಆತನಿಗೂ ತಿಳಿದಿದ್ದರೂ ಪ್ರಸಂಗ ಇಷ್ಟೊಂದು ವಿಕೋಪಕ್ಕೆ ಹೋಗಬಹುದೆಂಬ ಕಲ್ಪನೆಯೂ ಅವನಿಗಿರಲಿಲ್ಲ. ಈ ವಿಷಯಗಳನ್ನು ಯಾರಮುಂದೆಯೂ ಬಾಯಿಬಿಡದಂತೆ ಕಾಪಾಡಿಕೊಂಡಿದ್ದ. ಅವನಿಗೆ ಸುಜಾತಕ್ಕನ ಪುಟ್ಟ ಮಕ್ಕಳ ಬಗ್ಗೆ ಬಹಳ ದುಃಖವಾಯಿತು. ಚಿಕ್ಕ ವಯಸ್ಸಿನಲ್ಲಿಯೇ ತಂದೆತಾಯಿಗಳನ್ನು ಕಳೆದುಕೊಂಡು ಅವರೂ ಅನಾಥರಾಗಿ ಬೇರೊಬ್ಬರ ಆಶ್ರಯಕ್ಕೆ ಹೋಗಬೇಕಾಯಿತಲ್ಲಾ. ಈಗತಾನೇ ಹೈಸ್ಕೂಲು ಮೆಟ್ಟಿಲು ಹತ್ತಿರುವ ಹಿರಿಯವನು ನಂದೀಶ, ಮತ್ತು ಮಾಧ್ಯಮಿಕ ಶಾಲೆಯಲ್ಲಿರುವ ಗಣೇಶ ಮುದ್ದಾದ ಮಕ್ಕಳು. ಪರಮಾತ್ಮ ಹಣ ಗಳಿಸುವ ಸಾಧ್ಯತೆಗಳನ್ನು ನೀಡುತ್ತಾನೆ. ಕಷ್ಟಪಟ್ಟು ಗಳಿಸಿದ್ದರಲ್ಲಿ ಜೀವನ ನಡೆಸಿಕೊಂಡು ಹೋಗುವವರಿಗೆ ಸಮಸ್ಯೆಗಳು ಕಡಿಮೆ. ಅತಿಹೆಚ್ಚಾಗಿ ಗಳಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸುವ ಆತುರಗಾರರಿಗೆ ಒಳ್ಳೆಯದು ಕೆಟ್ಟದ್ದು ಎನ್ನುವ ಭೇದವೇ ಇಲ್ಲ. ಅದು ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ತಳ್ಳಬಹುದು. ಅದೇ ರಾಕ್ಷಸೀಯ ನಡವಳಿಕೆಗೆ ಕಾರಣವಾಗುತ್ತದೆ ಎಂದೆನ್ನಿಸಿತು.

“ಏ..ಮಾಧೂ, ಮಾದಪ್ಪಾ ಏಕೋ ಗಪ್ಪಾದೆ? ಅಂಗಡಿ ಕೀ ನನ್ನ ಕೈಗೆ ಕೊಡು. ಅಲ್ಲೇನಾಗೈತೊ ನಾನ್ನೋಡ್ಕೋತಿನಿ.” ಎಂದು ಗಂಗಮ್ಮ ಭುಜ ಹಿಡಿದು ಅಲುಗಾಡಿಸಿದಾಗ ವಾಸ್ತವಕ್ಕೆ ಹಿಂದಿರುಗಿದ ಮಾಧು “ಗಂಗಮ್ಮಾ ಹೀಗೇ ಹೋಗುವುದು ಯಾವ ನ್ಯಾಯ. ನಡೆಯಿರಿ ನನಗೇನಾದೀತು. ಪೋಲೀಸರು ಏನು ಮಾಡಿಯಾರು? ಒಂದೆರಡು ಪ್ರಶ್ನೆ ಕೇಳಬಹುದು. ಅದಕ್ಕೆ ಹೇಗೆ ಉತ್ತರಿಸಬೇಕೆಂದು ನನಗೆ ಗೊತ್ತು. ಪಾಪ ಸುಜಾತಕ್ಕನ ಮಕ್ಕಳು ಎಷ್ಟು ಗಾಭರಿಯಾಗಿದ್ದಾರೋ, ಸ್ವಲ್ಪ ಅವರಿಗೆ ಒತ್ತಾಸೆಯಾಗಿ ನಿಲ್ಲೋಣ. ಊರಿಗೆ ಫೋನ್ ಮಾಡಿ ಹೇಳುತ್ತೇನೆ ನನಗೆ ಬರಲಾಗುತ್ತಿಲ್ಲ ಎಂದು. ನಮಗೆ ನೆಲೆ ಕಲ್ಪಸಿದವರ ಮನೆಯೇ ನೆಲ ಕಚ್ಚಿರುವಾಗ ಅದನ್ನೆಲ್ಲ ನಿರ್ಲಕ್ಷಿಸಿ ನಮ್ಮ ಪಾಡಿಗೆ ನಾವು ಹೋಗುವುದು ಮನುಷ್ಯತ್ವವೇ? ನಡೆಯಿರಿ ನಾನೂ ಬರುತ್ತೇನೆ” ಎಂದು ಅವರೊಡನೆ ಮುನ್ನಡೆದ.

“ಅವ್ವಯ್ಯಾ ಈ ಚಿಕ್ಕ ವಯಸ್ಸಿಗೇ ಎಷ್ಟೊಂದು ತಿಳಿದಿದ್ದೀಯ ಮಾದಪ್ಪಾ. ನನಗೆ ಈ ವಿಚಾರ ತಲೆಗೇ ಬಂದಿರಲಿಲ್ಲ. ‘ಉಪ್ಪಿಟ್ಟವರನ್ನು ಮುಪ್ಪಿನವರೆಗೆ ನೆನೆಯಬೇಕು’ ಅಂತ ಹಿರೇರು ಹೇಳವ್ರೆ. ನನ್ನದು ತೆಪ್ಪಾಯಿತು.” ಎಂದರು ಗಂಗಮ್ಮ.

ಹಾಗೆ ನನ್ನ ಮೇಲಿನ ಕಾಳಜಿಯಿಂದ ನೀವು ಇಲ್ಲಿಯವರೆಗೆ ಬಂದಿದ್ದೀರಿ. ಅದಕ್ಕೊಂದು ಥ್ಯಾಂಕ್ಸ್. ಬನ್ನಿ ನಮ್ಮಂತಹವರಿಗೆ ದಾರಿ ತೋರಿಸುತ್ತಿದ್ದವರನ್ನು ಅಮಾನುಷವಾಗಿ ಕೊಂದ ಆ ಪಾಪಿಗೆ ಶಿಕ್ಷೆ ಕೊಡಿಸುವುದರ ಮೂಲಕ ಸುಜಾತಕ್ಕನ ಆತ್ಮಕ್ಕೆ ಶಾಂತಿ ದೊರಕಿಸಲು ಪ್ರಯತ್ನ ಮಾಡೋಣ. ದುಃಖತಪ್ತರಾದ ಅವರ ಒಡಹುಟ್ಟಿದವರಿಗೆ ಸಮಾಧಾನ ಹೇಳೋಣ. ತಬ್ಬಲಿಯಾದರೆಂದು ದಿಕ್ಕು ತೋಚದೆ ನಿಂತಿರುವ ಆ ಮಕ್ಕಳಿಗೆ ಆಸರೆಯಾಗಿ ನಿಂತು ಧೈರ್ಯ ತುಂಬೋಣ. ಇದರಿಂದ ಸುಜಾತಕ್ಕನ ಋಣವನ್ನು ಸ್ವಲ್ಪ ಮಟ್ಟಿಗಾದರೂ ತೀರಿಸೋಣವೆಂದು ಮನೆಯ ಕಡೆಗೆ ಇಬ್ಬರೂ ಹೆಜ್ಜೆ ಹಾಕಿದರು. ಮನಸ್ಸು ಹೇಳುತ್ತಿತ್ತು. “ಯಾರಿಗೆ ಯಾರೋ ನಿಮಗಿನ್ಯಾರೋ” ಎಂದು.

ಬಿ.ಆರ್.ನಾಗರತ್ನ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *