(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ರಾಗಿಣಿಯ ಮದುವೆ ತುಂಬಾ ಚೆನ್ನಾಗಿ ನಡೆಯಿತು. ಶೋಭಾಳ ನೆರವಿನಿಂದ ಸತ್ಯಮ್ಮನ ಇಚ್ಛೆಯಂತೆ ರಾಗಿಣಿ ಗೌರಿಪೂಜೆ ಮಾಡಿದಳು. ಶ್ರೀಮಂತರಾದರೂ ಪ್ರತಾಪರೆಡ್ಡಿ ಕುಟುಂಬದವರು, ಅಯ್ಯಪ್ಪನ ಕುಟುಂಬದವರು ತುಂಬಾ ಸರಳವಾಗಿದ್ದರು. ಸಂಧ್ಯಾ ಮಗಳು ನಮ್ರತಾ ಅಮೇರಿಕಾದಲ್ಲಿದ್ದರೂ, ತುಂಬಾ ಸರಳವಾಗಿ ಅಲಂಕರಿಸಿಕೊಂಡು ಮದುವೆಯ ಎಲ್ಲಾ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಾ, ಎಲ್ಲರ ಮನಸ್ಸು ಗೆದ್ದಳು. ರಾಗಿಣಿಯಂತೂ ಮದುವೆ ಹೆಣ್ಣಿನ ಅಲಂಕಾರದಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಳು.
“ಬಾಲಾಜಿ ತುಂಬಾ ಮುದ್ದಾದ ಹುಡುಗಿಯನ್ನು ಆರಿಸಿಕೊಂಡಿದ್ದೀಯ. ನಾವೇ ಹುಡುಕಿದ್ದರೂ ಇಂತಹ ಹುಡುಗಿ ಸಿಕ್ತಿರಲಿಲ್ಲ” ಎಂದಳು ನಮ್ರತಾ. ಬಾಲಾಜಿ ಹೆಮ್ಮೆಯಿಂದ ಬೀಗಿದ.
ಪ್ರತಾಪ್‌ರೆಡ್ಡಿ ತಿರುಪತಿಯಿಂದಲೇ ಹೈದರಾಬಾದ್‌ಗೆ ಹೋಗುವ ನಿರ್ಧಾರ ಕೈಗೊಂಡಿದ್ದರಿಂದ ಅವರ ಕುಟುಂಬ ಹೈದರಾಬಾದ್ ಫ್ಲೈಟ್ ಹತ್ತಿತು. ಉಳಿದವರು ಮೈಸೂರಿಗೆ ವಾಪಸ್ಸಾದರು. ಶೋಭಾ ಅತ್ತಿಗೆಯ ಮನೆಯಲ್ಲಿ ಒಂದು ದಿನವಿದ್ದು ನಂತರ ಬೆಂಗಳೂರಿಗೆ ಹೊರಟರು. ಅವರಿಂದ ತಿರುಪತಿಯ ಮದುವೆಯ ವೈಭವ ಚಂದ್ರಾವತಿಯ ಬಗ್ಗೆ ಹಾಡಿಹೊಗಳಿದ್ದನ್ನು ಕೇಳಿದ ನಾಗರಾಜ್ ಬಂದು ಚಂದ್ರಾವತಿಯನ್ನು ಮದುವೆಗೆ ಆಹ್ವಾನಿಸಿದ. ಅವನು ಬಂದಾಗ ಆರ್.ಜಿ. ಅಲ್ಲೇ ಇದ್ದುದ್ದರಿಂದ ಅವನಿಗೂ ಇನ್ವಿಟೇಷನ್ ಕೊಟ್ಟು ಬಾಯ್ತುಂಬಾ ಕರೆದ.
ಮದುವೆಯ ಹಿಂದಿನ ದಿನ ಶ್ರೀನಿವಾಸ್‌ರಾವ್, ತಮ್ಮಂದಿರು, ತಂಗಿ, ಕುಟುಂಬ ಸಮೇತ ಬಂದು ಪಾರ್ವತಿ ಮನೆಗೆ ಬಂದರು. ಸಾಯಂಕಾಲ ವರು ಎಲ್ಲರನ್ನೂ ಭೇಟಿಮಾಡಲು ಹೋದವಳು ತಮ್ಮ, ಶರಣ್ಯ, ಅಲೋಕ್‌ನ ತನ್ನ ಜೊತೆ ಕರೆತಂದಳು. ಶರು ಬರಲು ನಿರಾಕರಿಸಿದಳು. ಮಕ್ಕಳು ಖುಷಿಯಿಂದ ಹೊರಟರು.
“ಆಟೋದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗು. ನಿನ್ನ ಗಾಡಿ ಇಲ್ಲೇ ಬಿಡು. ಬೆಳಿಗ್ಗೆ ಬೇಗ ಬಾ” ನಾಗರಾಜ ಹೇಳಿದ.
“ಹೇಗೆ ಬರಲಿ? ಮಕ್ಕಳನ್ನೆಲ್ಲಾ ರೆಡಿಮಾಡಿ ರ‍್ಕೊಂಡು ಬರಬೇಕಲ್ವಾ?”
“ಸರಿ ಕಣಮ್ಮ. ಮುಹೂರ್ತ8-30 ಕ್ಕೆ ಛತ್ರ ಗೊತ್ತು ತಾನೆ?”
“ಗೊತ್ತು. ಆದಷ್ಟು ಬೇಗ ಬರ‍್ತೀನಿ.”
ಅವಳು ಮನೆಗೆ ಬಂದಾಗ ಚಂದ್ರಾವತಿ ಕೇಳಿದರು.
“ನಾಳೆ ಎಷ್ಟು ಹೊತ್ತಿಗೆ ಹೋಗ್ತೀಯಾ ವರು?”
“ಒಂಭತ್ತು ಗಂಟೆಯ ಒಳಗೆ ಅಲ್ಲಿರಬೇಕು. ಇವರನ್ನೆಲ್ಲಾ ರೆಡಿ ಮಾಡಿ ರ‍್ಕೊಂಡು ಹೋಗಬೇಕಲ್ಲಾ?”
“ನಾನು ಲೇಟಾಗಿ ಬರ‍್ತೀನಿ. ಆರ್.ಜಿ. ಕಾರು ತರ‍್ತಾನೆ. ನಾನು ಶಾರದ ಅದರಲ್ಲಿ ಬರ‍್ತೀವಿ.”
ಅವಳಿಗೆ ಆರ್.ಜಿ. ಬರುವ ವಿಚಾರ ಗೊತ್ತಿರಲಿಲ್ಲ.
ಅವಳು “ಆಗಲಿ ಆಂಟಿ” ಎಂದಳು.
“ನಾಳೆ ಯಾವ ಸೀರೆ ಉಡ್ತಿದ್ದೀಯಾ?”
“ಅಮ್ಮ 2 ಸೀರೆ ಕೊಟ್ಟಿದ್ದಾರೆ. ಅದಕ್ಕೆ ಮ್ಯಾಚಿಂಗ್ ಬ್ಲೌಸ್‌ಗಳಿವೆ. ಅದನ್ನೇ ಉಡ್ತೀನಿ.”
“ನಾನು ಮಂಚದ ಮೇಲೆ 2 ಸೀರೆ ಇಟ್ಟಿದ್ದೀನಿ. ಒಂದು ನಿನಗಿಷ್ಟವಾದ ರಾಮಾಕಲರ್ ಸೀರೆ. ಅದಕ್ಕೆ ನಿನ್ನ ಹತ್ತಿರ ಬ್ಲೌಸ್ ಇದೆ.”
“ನಿಮ್ಮ ಸೀರೆ ಒಂದು ಉಡ್ತೀನಿ. ಅಮ್ಮನ ಸೀರೆ ಒಂದು ಉಡ್ತೀನಿ.”
“ಸಂಧ್ಯಾ ಕೊಟ್ಟ ಡ್ರೆಸ್?”
“ಆಂಟಿ ಕೊಟ್ಟಿದ್ದ ಡ್ರೆಸ್, ನಾಗರಾಜನ ಅತ್ತೆಮನೆಯವರು ಕೊಟ್ಟಿದ್ದ ಡ್ರೆಸ್ ಶರು ಹಾಕ್ಕೋತಾಳಂತೆ….”
“ಹೋಗಲಿ ಬಿಡು. ನೀನು ದಿನಾ ಡ್ರೆಸ್ ಹಾಕಿಕೊಳ್ತೀಯ. ನಿನ್ನ ಪ್ರೆಸೆಂಟೇಶನ್ ಇರುವಾಗ ಸಿಂಪಲ್ ಸೀರೆ ಉಡ್ತೀಯ. ನಿನ್ನನ್ನು ಗ್ರಾಂಡ್ ಸೀರೆಯಲ್ಲಿ ನೋಡೇ ಇಲ್ಲ……..”
ಮರುದಿನ ಮಕ್ಕಳನ್ನು ರೆಡಿ ಮಾಡಿ ಶಂಕರನಿಗೆ ಹೇಳಿ ತಾನು ರೆಡಿಯಾದಳು. ರಾಮಾಕಲರ್ ಸೀರೆ ಅದಕ್ಕೆ ಒಪ್ಪುವ ಬ್ಲೌಸ್ ಧರಿಸಿ, ತನ್ನ ಗುಂಗುರು ಕೂದಲು ಸೇರಿಸಿ ಕ್ಲಿಪ್ ಹಾಕಿದಳು. ಅದಕ್ಕೆ ಒಪ್ಪುವಂತಹ ಕೃತಕ ಆಭರಣಗಳನ್ನು ಧರಿಸಿದಳು. ಹೈದರಾಬಾದ್‌ಗೆ ಹೋದಾಗ ಅವಳು ಬೆಳ್ಳಿಯ ಆಭರಣಗಳನ್ನು ಖರೀದಿಸಿದ್ದಳು. ನವಿರಾಗಿ ಮಾಡಿಕೊಂಡಿದ್ದ ಮೇಕಪ್, ಕೆಂಪು ಬಿಂದಿಯಲ್ಲಿ ಅವಳು ತುಂಬಾ ಮುದ್ದಾಗಿ ಕಾಣುತ್ತಿದ್ದಳು.
“ಈ ಸೀರೆ ನಿನಗೆ ತುಂಬಾ ಚೆನ್ನಾಗಿ ಒಪ್ಪತ್ತೆ. ಬಾ ಇಲ್ಲಿ ದೃಷ್ಟಿ ತೆಗೀತೀನಿ.”
“ಆಂಟಿ ಪ್ಲೀಸ್ ಅವೆಲ್ಲಾ ಬೇಡಿ……..”
“ಅಮ್ಮ ಇವ್ರು ಮದುವೆಯಿಂದ ಬಂದಮೇಲೆ ನಾನೇ ದೃಷ್ಟಿತೆಗೀತೀನಿ ಬಿಡಿ” ಎಂದಳು ಮಲ್ಲಿ.
“ವರು ಮಕ್ಕಳ ಜೊತೆ ಆಟೋ ಹತ್ತಿದಳು.”
ಮಕ್ಕಳಿಗೆ ಚಂದ್ರಾ ಆಂಟಿ ತಿಂಡಿ ಕೊಟ್ಟಿದ್ದರು. ಶಕುಂತಲಾ ಮಗಳಿಗೆ ಬಲವಂತವಾಗಿ ತಿಂಡಿ ಕೊಟ್ಟರು.
ಸುಮಿ, ಶರು ಬಹಳ ಉತ್ಸಾಹದಿಂದ ಓಡಾಡುತ್ತಿದ್ದರು.
“ಸುಮಿ ಚೆನ್ನಾಗಿ ಕಾಣ್ತಿದ್ದಾಳಲ್ವಾ?”
“ಹೌದು ಕಣೆ. ಸಾಕಷ್ಟು ಸಣ್ಣ ಆಗಿದ್ದಾಳೆ. ಚಟಪಟ ಕೆಲಸ ಮಾಡ್ತಾಳೆ.”
ಶುಭ ಮುಹೂರ್ತದಲ್ಲಿ ರೇಖಾ-ನಾಗರಾಜನ ಧರ್ಮಪತ್ನಿಯಾದಳು. ಎಲ್ಲರಿಗೂ ತಣ್ಣನೆಯ ಬಾದಾಮಿ ಹಾಲು ಬಂತು. ಆ ವೇಳೆಗೆ ಆರ್.ಜಿ. ಚಂದ್ರಾ ಆಂಟಿ, ಶಾರದಾ ಜೊತೆ ಒಳಗೆ ಬಂದ. ವರು ಹೋಗಿ ಅವರನ್ನು ಸ್ವಾಗತಿಸಿದಳು.
ವಾರುಣಿಯನ್ನು ಮೊದಲಬಾರಿಗೆ ಕಾಂಜಿವರಂ ಸೀರೆ ಒಡವೆಗಳಲ್ಲಿ ನೋಡಿದ ಆರ್.ಜಿ. ಅವಳಿಂದ ಕಣ್ಣು ಕೇಳದಾದ.
“ನಿಮ್ಮದು ತಿಂಡಿ ಆಗಿದೆಯಾ?”
“ಆಗಿದೆ. ಆದರೆ ನೀವು ತಿಂಡಿಕೊಡಿಸುವುದಾದರೆ ನಾನು ಇನ್ನೊಂದು ಸಲ ತಿನ್ನುತ್ತೇನೆ.”
ಅಷ್ಟರಲ್ಲಿ ಶಕುಂತಲಾ ಬಂದು ಚಂದ್ರಾವತಿ ಹತ್ತಿರ ಮಾತನಾಡಲು ಕುಳಿತರು.
ವಾರುಣಿ ಆರ್.ಜಿ.ಯ ಜೊತೆ ಡೈನಿಂಗ್ ಹಾಲ್ ಪ್ರವೇಶಿಸಿ ಹಬೆಯಾಡುವ ಇಡ್ಲಿ, ಚಟ್ನಿ, ಸಾಂಬಾರ್, ಬೆಣ್ಣೆ ತಂದಿಟ್ಟಳು.
“ವಾರುಣಿ ನೀವು ಈ ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣ್ತಿದ್ದೀರ. ಹುಷಾರಾಗಿರಿ………”
“ಥ್ಯಾಂಕ್ ಯು. ಯಾಕೆ ಹುಷಾರಾಗಿರಬೇಕು?”
“ಹುಡುಗಿ ಮನೆಯವರು ಶ್ರೀಮಂತರಂತೆ. ಮುದ್ದಾದ ಹುಡುಗಿ ಸಿಕ್ಕಿದಾಗ ಗಾಳ ಹಾಕಬಹುದಲ್ವಾ?”
“ಹಾಗಾದರೆ ಶ್ರೀಮಂತರಿಗೆಲ್ಲಾ ಗಾಳ ಹಾಕುವ ಬುದ್ಧಿ ಇರುತ್ತದಾ? ನೀವು ಯಾವ ಹುಡುಗಿಗೆ ಗಾಳ ಹಾಕ್ತಿದ್ದೀರಾ?”
ಅವನಿಗೆ ಒಂದು ತರಹವಾಯಿತು. “ಈ ಹುಡುಗಿಗೆ ನನ್ನ ಮನಸ್ಥಿತಿ ಅರ್ಥವಾಗ್ತಿಲ್ವಾ? ಬೇಕೆಂದೇ ಪ್ರಶ್ನಿಸ್ತಿದ್ದಾಳಾ?” ಎಂದುಕೊಂಡ.”
“ಅದನ್ನು ನಿಮಗೆ ಹೇಳುವ ಅವಶ್ಯಕತೆಯಿಲ್ಲ.”
“ಹೇಳಬೇಡಿ ನಷ್ಟವೇನಿಲ್ಲ………..”
ಅಷ್ಟರಲ್ಲಿ ಸುಮಿ ಶರು ಅಲ್ಲಿಗೆ ಬಂದರು. ವರು ಅವರಿಬ್ಬರನ್ನೂ ಆರ್.ಜಿ.ಗೆ ಪರಿಚಯಿಸಿದಳು.
“ವರು ನಿನ್ನ ಅತ್ತೆ ಕೂಗ್ತಾ ಇದ್ದಾರೆ.”
“ಈಗ ಬಂದೆ” ಎನ್ನುತ್ತಾ ವರು ಹೊರಟಳು.
ಆರ್.ಜಿ. ವಾಪಸ್ಸು ಬಂದು ತನ್ನ ಜಾಗದಲ್ಲಿ ಕುಳಿತ. ಅಷ್ಟರಲ್ಲಿ ವರು ದೇವಕಿಯ ಜೊತೆ ತಮ್ಮ ಕಡೆಯವರಿಗೆ ಉಡುಗೊರೆ ಕೊಡಲು ಬಂದಳು.
“ಈಗ ರಿಸೆಪ್ಷನ್ ಇದೆ. ಹುಡುಗ ಹುಡುಗಿ ಕುಳಿತ ಅರ್ಧಗಂಟೆಯ ಮೇಲೆ ಊಟ ಹಾಕ್ತಾರಂತೆ. ನೀನು ನಮ್ಮ ಕಡೆಯವರನ್ನು ಮೊದಲನೇ ಪಂಕ್ತಿಯಲ್ಲಿ ಕೂಡಿಸು. ಆಮೇಲೆ ನಾಗರಾಜನ ಫ್ಯಾಕ್ಟರಿಯವರು ಬಂದರೆ ಜಾಗ ಸಿಗುವುದು ಕಷ್ಟವಾಗುತ್ತೆ” ದೇವಕಿ ಹೇಳಿದರು.
“ಆಗಲಿ ಆಂಟಿ” ಎಂದಳು ವರು.
ಹುಡುಗ-ಹುಡುಗಿ ರಿಸೆಪ್ಷನ್ ಗೆ ಕುಳಿತೊಡನೆ ಕೆಲವರು ಪ್ರೆಸೆಂಟೇಷನ್ ಕೊಡಲು ಕ್ಯೂ ನಿಂತರು. ಕೆಲವರು ಊಟದ ಮನೆಯ ಕಡೆ ಹೆಜ್ಜೆ ಹಾಕಿದರು. ಹವಳದ ಬಣ್ಣದ ಒಡಲಿಗೆ ದಟ್ಟ ನೀಲಿಬಣ್ಣದ ಜರಿಬಾರ್ಡರ್ ಇದ್ದ ಮೈಸೂರು ಸಿಲ್ಕ್ ಉಟ್ಟು, ಹವಳದ ಕೃತಕ ಆಭರಣಗಳನ್ನು ತೊಟ್ಟಿದ್ದ ವಾರುಣಿ ಚಂದ್ರಾವತಿ, ಶಾರದಾರನ್ನು ಊಟಕ್ಕೆ ಕರೆದೊಯ್ಯಲು ಬಂದಳು. ಕೂದಲು ಹಾರಾಡಲು ಬಿಟ್ಟು ನವಿರಾಗಿ ಮೇಕಪ್‌ನಲ್ಲಿ ಮಿಂಚುತ್ತಿದ್ದ ವಾರುಣಿಯನ್ನು ನೋಡಿ ಆರ್.ಜಿ. ಜೋರಾಗಿ ಉಸಿರೆಳೆದುಕೊಂಡ.
“ಆಂಟಿ ಊಟಕ್ಕೆ ಬನ್ನಿ. ಆಮೇಲೆ ತುಂಬಾ ರಷ್ ಆಗಿಬಿಡತ್ತೆ.”
“ಆಗಲಿ ಆರ್.ಜಿ. ನೀನು?”
“ನಾನು ವಾರುಣಿಯವರ ಜೊತೆ ಊಟ ಮಾಡ್ತೀನಿ.”
ಅವನ ಮಾತು ಕೇಳಿ ಅವಳು ಆಶ್ಚರ್ಯದಿಂದ ಹುಬ್ಬೇರಿಸಿದಳು.
“ಇಡ್ಲಿ ಕರಗಿಲ್ಲಾರಿ. ಅದಕ್ಕೆ ಹೇಳಿದೆ.”
“ಓ.ಕೆ. ಹಾಗಾದ್ರೆ ಏನಾದ್ರೂ ಕೆಲಸ ಮಾಡಿ ಬನ್ನಿ.”
“ನನ್ನ ತಂಗಿ, ನಮ್ಮ ನಟ್ಟು ಸುಮಿ ಕೆಲಸ ಹೇಳ್ತಾರೆ. ನೀವೂ ಮಾಡಿ.”
“ಈ ನಟ್ಟು ಬೋಲ್ಟ್ ಯಾರು?”
“ನಮ್ಮ ಅತ್ತೆ ಮಗ……?”
“ಆವರು ಏನು ಮಾಡ್ತಿದ್ದಾರೆ?”
ಅವಳು ಅತ್ತಿತ್ತ ನೋಡಿ ಹೇಳಿದಳು. “ಸದ್ಯಕ್ಕೆ ಬಿಸಿ ಬೋಂಡಾ ರುಚಿ ನೋಡ್ತಿದ್ದಾನೆ. ಬನ್ನಿ ಪರಿಚಯ ಮಾಡಿಸ್ತೀನಿ.”
“ನಾನೇ ಮಾಡಿಸ್ತೀನಿ. ನೀನು ಬೇರೆ ಕೆಲಸ ನೋಡು” ಎಂದರು ಚಂದ್ರಾವತಿ.
ವರು ಅಲ್ಲಿಂದ ರಿಸೆಪ್ಷನ್ ನಡೆಯುತ್ತಿದ್ದ ಜಾಗಕ್ಕೆ ಹೊರಟಳು. ಚಂದ್ರಾವತಿ ಜೋರಾಗಿ “ಶರೂ” ಎಂದು ಕೂಗಿದರು. ಶರೂ, ಸುಮಿ ನಟ್ಟು ಬಂದರು.
“ಇವನು ನನ್ನ ತಮ್ಮನ ಮಗ ರಾಮ್‌ಗೋಪಾಲ್, ಏನಾದರೂ ಕೆಲಸವಿದ್ದರೆ ಇವನಿಗೂ ಹೇಳಿ.”
“ನಾವು ಏನು ಕೆಲಸ ಹೇಳಲು ಸಾಧ್ಯ?”
“ಈಗ ನೀವು ಮಾಡ್ತಿದ್ದಿರಲ್ಲಾ ಆ ಕೆಲಸ ನನಗೂ ಹೇಳಬಹುದಿತ್ತು.”
“ಯಾವ ಕೆಲಸ?”
“ಬೋಂಡಾ ರುಚಿ ನೋಡ್ತಿದ್ರಲ್ಲಾ, ಆ ಕೆಲಸ……..”
ಎಲ್ಲರೂ ಬಿದ್ದೂ ಬಿದ್ದೂ ನಕ್ಕರು.
“ಧಾರಾಳವಾಗಿ ಹೇಳ್ತೀನಿ ಬನ್ನಿ………”
“ರುಚಿ ನೋಡ್ತಾ ಹೊಟ್ಟೆ ತುಂಬಿಸಿಕೊಂಡರೆ ಊಟ ಹೇಗೆ ಮಾಡುವುದು? ಮಾತನಾಡುತ್ತಲೇ ಅವನು ನಟ್ಟುವನ್ನು ಅವಲೋಕಿಸಿದ. ಕುಳ್ಳಗೆ ಬೆಳ್ಳಗೆ ಗುಂಡುಗುಡಾಗಿದ್ದ ನಟ್ಟುವನ್ನು ವರು ಪಕ್ಕ ಕಲ್ಪಿಸಿಕೊಂಡ. ಅವನಿಗೆ ನಗು ಬಂತು. ಅವನು ಖಾಲಿ ಕುರ್ಚಿಯಲ್ಲಿ ಕುಳಿತು ಪಾದರಸದಂತೆ ಓಡಾಡುತ್ತಿದ್ದ ವಾರುಣಿಯನ್ನು ನೋಡಿ ಕಣ್ತುಂಬಿಕೊಂಡ. ಚಂದ್ರಾ ಆಂಟಿ ತನ್ನನ್ನು ಆ ರೀತಿ ಯಾಕೆ ಪರಿಚಯಿಸಿದರೆಂಬ ಪ್ರಶ್ನೆಯೂ ಕಾಡಿತು.
ಚಂದ್ರಾ ಆಂಟಿ ಹೊರಟಾಗ ಪಾರ್ವತಮ್ಮ ಬಂದು ಹೇಳಿದರು. “ನಾಳೆ ಬೆಳಿಗ್ಗೆ ಸತ್ಯನಾರಾಯಣ ಪೂಜೆ ಇದೆ. ನೀವು ನಿಮ್ಮ ಮಗಳು ಬರಲೇಬೇಕು. ಕೇವಲ ಹತ್ತಿರದವರನ್ನು ಮಾತ್ರ ಕರೆದಿದ್ದೇನೆ.”
“ಆಗಲಿ ಬರ‍್ತೀನಿ.”
“ಮಾತಿಗೆ ತಪ್ಪಬೇಡಿ. ನೀವು ಬರಲೇಬೇಕು. ವರು ಇವರನ್ನು ಕರೆದುಕೊಂಡು ಬರುವ ಜವಾಬ್ದಾರಿ ನಿಂದು” ಎಂದರು.
“ಯಾಕಿಷ್ಟು ಉಪಚಾರ?” ಎಂದುಕೊಂಡಳು ವರು.
ಶಕುಂತಲಾ ಮಾತ್ರ “ಚಂದ್ರಾವತಿ ಪಾರ್ವತಮ್ಮನಿಗೆ ಕೊಟ್ಟ ಸೀರೆ, ಅವರ ಮಗನಿಗೆ ಕೊಟ್ಟ ಕ್ಯಾಷ್ ಕಾರಣವಿರಬಹುದು” ಎಂದುಕೊಂಡರು.
ಚಂದ್ರಾವತಿ ಆರ್.ಜಿ. ಕಾರ್‌ನಲ್ಲಿ ಹಿಂದಿರುಗಿದರು. ವಾರುಣಿ ರಾತ್ರಿ ಎಂಟುಗಂಟೆಗೆ ವಾಪಸ್ಸಾದಳು. ಅವಳು ಬಂದಕೂಡಲೇ ಮಲ್ಲಿ ದೃಷ್ಟಿ ತೆಗೆದಳು.
“ಇದೆಲ್ಲಾ ಯಾಕೆ?”
“ಯಾಕೇಂತ ಅಮ್ಮಾವರನ್ನು ಕೇಳಿ” ಎಂದಳು ಮಲ್ಲಿ.
ರಾತ್ರಿ ಯಾರಿಗೂ ಊಟ ಬೇಡವಾಗಿತ್ತು. ಎಲ್ಲರೂ ಹಾರ್ಲಿಕ್ಸ್ ಕುಡಿದು ಮಲಗಿದರು.
ಮರುದಿನ ಬೆಳಿಗ್ಗೆ ವಾರುಣಿ ಪ್ರಿಂಟೆಡ್ ಸಿಲ್ಕ್ ಸೀರೆ ಉಟ್ಟು ಕೆಳಗೆ ಬಂದಾಗ ಚಂದ್ರಾವತಿ ಕೇಳಿದರು. “ಇವತ್ತು ರಜೆ ಹಾಕಿದ್ದೀಯಾ?”
“ಇಲ್ಲ ಆಂಟಿ. ಮಧ್ಯಾಹ್ನ ಊಟದ ಹೊತ್ತಿಗೆ ಬರ‍್ತೀನಿ” ನೀವು ಬೆಳಿಗ್ಗೆ ಹೋಗಿರಿ.”
“ಆರ್.ಜಿ.ನ್ನೂ ಕರಿ.”
“ಬೇಡಾಂಟಿ. ಆಮೇಲೆ ನಮ್ಮ ಚಿಕ್ಕಮ್ಮ ಅತ್ತೆ ಏನಾದರೂ ಕಥೆ ಕಟ್ಟುತ್ತಾರೆ. ಮದುವೆಮನೆಯಲ್ಲಿ ಅವೆಲ್ಲಾ ಏಕೆ ಬೇಕು? ನನಗೆ ದಬಾಯಿಸಿ ಮಾತಾಡಕ್ಕಾಗಲ್ಲ.”
“ನೀನು ಹೇಳುವುದೂ ಸರಿ. ನಾನು ನಾಗರಾಜ-ರೇಖಾನ್ನ ಒಂದು ದಿನ ತಿಂಡಿಗೆ ಕರೆಯೋಣಾಂತಿದ್ದೇವೆ.”
“ಅವರು ಕೇರಳ ಕಡೆ ‘ಹನಿಮೂನ್’ ಹೊರಟಿದ್ದಾರೆ. ಅವರು ಬಂದಮೇಲೆ ಕರೆಯಬಹುದು.”
“ಸರಿ. ಹಾಗೇ ಮಾಡ್ತೀನಿ” ಎಂದರು ಚಂದ್ರಾವತಿ.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44281
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು
