ಸಾಗುವ ಪಯಣದ ದಾರಿಯಲಿ
ಅಪರಿಚಿತರು ಜೊತೆಯಾಗುವರು
ಮಾತಿಗೆ ಮಾತು ಹಿತವಾಗಿ ಬೆಸೆಯಲು
ಅಪರಿಚಿತರು ಪರಿಚಿತರಾಗುವರು
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಇನ್ನೆಲ್ಲೋ ಬದುಕನು ಕಂಡುಕೊಳ್ಳುವರು
ಪ್ರೀತಿ ಆತ್ಮೀಯತೆಯ ಹಂಚಿಕೊಂಡು
ಭಾವನೆಗಳ ಅಭಿವ್ಯಕ್ತಿಯ ಪಡಿಸುವರು
ಸಮಯದ ಜೊತೆ ಜೊತೆಗೆ ಸಾಗುತ
ಒಂದೇ ಗೂಡಿನ ಹಕ್ಕಿಯಂತೆ ಬೆರೆಯುವರು
ನೋವು ನಲಿವುಗಳನ್ನು ಹಂಚಿಕೊಂಡು
ಬದುಕನು ಸುಂದರಗೊಳಿಸಿಕೊಳ್ಳುವರು
ನಂಬಿಕೆಯ ಜೊತೆಗೆ ಬದುಕು ಅರಳುವುದು
ಕಷ್ಟಗಳ ಮರೆತು ನೆಮ್ಮದಿಯ ಹೊಂದುವುದು
ಹೊಸ ಹೊಸ ಯೋಚನೆಗಳು ಜೊತೆಯಾಗುವುದು
ಬದುಕು ನವ ಚೈತನ್ಯದಿ ಮುಂದೆ ಸಾಗುವುದು
ಅನುದಿನವೂ ಇರದು ನಮಗೆ ಹಿತವಾಗಿ
ಚಿಕ್ಕ ಪುಟ್ಟ ತಪ್ಪುಗಳು ಹೆಚ್ಚುತ್ತಾ ಹೋಗಿ
ಕೊನೆಗೊಮ್ಮೆ ನಂಬಿಕೆಯ ದ್ರೋಹ ಆಗುವುದು
ಅರಳಬೇಕಾದ ಬದುಕು ಮುದುಡಿಹೋಗುವುದು
ಸುತ್ತಲೂ ನಡೆಯುವುದು ಒಳಿತು ಕೆಡುಕು
ನೋಡಿಯೂ ನೊಡದಂತಿರಬೇಕು ಹುಳುಕು
ಕೆಟ್ಟದ್ದನ್ನು ನಿರ್ಲಕ್ಷಿಸಿ ಒಳ್ಳೆಯದ ಅಪ್ಪೋಣ
ಸ್ವಾರ್ಥ ಸಾಧನೆಯ ಬಿಟ್ಟು ಒಳಿತ ಬಯಸೋಣ
ಹೊಂದಿಕೊಂಡು ಹೋದರಷ್ಟೇ ಇಲ್ಲಿ ಸುಖವು
ಮನದಿಚ್ಛೆಯಂತೆ ನಡೆದರೆ ಉಳಿಯದು ನಲಿವು
ಒಮ್ಮೊಮ್ಮೆ ಮೂಕ ಹಕ್ಕಿಯಂತೆ ಮೌನದಲ್ಲೇ
ಪರಿಪೂರ್ಣತೆಯ ಭಾವವನ್ನು ಹೊಂದೋಣ
ಈ ಜೀವನದಿ ಸಾರ್ಥಕತೆಯನ್ನು ಪಡೆಯೋಣ

–ನಾಗರಾಜ ಜಿ. ಎನ್. ಬಾಡ, ಕುಮಟ

