ಲಹರಿ

ಜಳಕದ ಪುಳಕ !

Share Button

ನೀರ ಕಂಡಲ್ಲಿ ಮುಳುಗುವರಯ್ಯ’ ಎನ್ನುವ ಮಾತು ನಮ್ಮ ಬದುಕಿನ ಆಕರ್ಷಕತೆಯಲ್ಲಿ ಒಂದು. ಅದರಲ್ಲೂ ಹರಿವ ಶುದ್ಧ ಸಲಿಲ ಕಂಡಾಗಲಂತೂ ಎಂಥವರಿಗೂ ಒಮ್ಮೆ ಮುಳುಗು ಹಾಕೋಣವೆನಿಸುವುದು ಸುಳ್ಳಲ್ಲ. ಕೊನೆಯ ಪಕ್ಷ ಕಾಲುಗಳನಿಳಿಬಿಟ್ಟು ಸ್ವಲ್ಪ ಹೊತ್ತು ಕುಂತುಕೊಳ್ಳುವ ಮನಸು ಮಾಡದೇ ಇರರು. ಪ್ರಾಣಿ ಪಕ್ಷಿಗಳು ಕೂಡ ಇದಕ್ಕೆ ಹೊರತಲ್ಲ. ಪುಟ್ಟ ಪುಟ್ಟ ಹಕ್ಕಿಗಳು ತಮ್ಮ ತಲೆಯನ್ನು ಪೂರ್ತ ಮುಳುಗು ಹಾಕಿ, ಕತ್ತನೆತ್ತಿ ಒಮ್ಮೆ ಜಾಡಿಸುವಾಗ ಸಿಡಿಯುವ ಸೀರ್ಪನಿಗಳನ್ನು ನೋಡುವುದೇ ಚೆಂದ! ಇನ್ನು ಆನೆಯಂಥ ದೊಡ್ಡ ಪ್ರಾಣಿಯು ಸ್ನಾನ ಮಾಡುವುದನ್ನು ನೋಡಲು ಎರಡು ಕಣ್ಣು ಸಾಲದೆನಿಸುವುದು. ಮೀಯುವುದು, ಮೈ ಶುದ್ಧ ಮಾಡಿಕೊಳ್ಳುವುದು ಮೊದಲಾದ ಅಭ್ಯಂಜನ ಸ್ನಾನವು ಮನುಷ್ಯ ನಾಗರಿಕತೆಯ ಪ್ರಮುಖ ಘಟ್ಟ. ನೀರು ಜೀವಜಲವೇನೋ ಸರಿ; ಆದರೆ ತನುಮನಗಳ ಆರೋಗ್ಯಕ್ಕೆ ಉಲ್ಲಾಸಕ್ಕೆ ಮತ್ತು ತಾಜಾತನಕ್ಕೆ ಸ್ನಾನವು ಸಮರ್ಥವಾದ ಕ್ರಿಯೆ. ಸ್ನಾನ ಮಾಡಿ ಬಂದ ಮೇಲಿನ ಸುಖನೆಮ್ಮದಿಯು ಇನ್ನಾವುದರಿಂದಲೂ ದೊರಕದು; ಅದರಲ್ಲೂ ದಣಿದ ದೇಹಕ್ಕೆ, ಶ್ರಮಪೂರ್ಣ ಕೆಲಸ ಮಾಡಿ ಬಂದವರಿಗೆ, ಬೆವರು ಹರಿಸಿ ಬಳಲಿದವರಿಗೆ ಸ್ನಾನವು ಅಮೃತಪ್ರಾಯ. ಬಿಸಿನೀರೋ, ತಣ್ಣೀರೋ ಒಟ್ಟಿನಲ್ಲಿ ಅವರವರಿಗೆ ಯಾವುದು ಅನುಕೂಲವೋ ಅದು. ವಾಸ್ತವವಾಗಿ ತಣ್ಣೀರು ಆರೋಗ್ಯಕ್ಕೆ ಪೂರಕ ಎಂಬುದಾಗಿ ಆಯುರ್ವೇದ ಹೇಳಿದರೂ ಬಿಸಿನೀರು ಸಹ ದಣಿದ ದೇಹದ ಆಯಾಸವನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಚಿಕ್ಕಂದಿನಿಂದ ಹೇಗೆ ಅಭ್ಯಾಸ ಮಾಡಿಕೊಂಡಿರುತ್ತಾರೆಯೋ ಹಾಗೆ. ಈ ವಿಚಾರದಲ್ಲಿ ಇದೇ ಸರಿಯೆಂದು ಹೇಳಲು ಬಾರದು. ವಾತಾವರಣ ಮತ್ತು ಹವಾಮಾನಕ್ಕೆ ಅನುಗುಣವಾಗಿಯೂ ಇದು ನಿರ್ಧಾರಿತವಾಗಬಲ್ಲದು. ಬಿಸಿನೀರಿಗಿಂತ ತಣ್ಣೀರು ದೇವರಕಾರ್ಯಕ್ಕೆ ಮತ್ತು ಮಡಿ ಮಾಡುವವರಿಗೆ ಸೂಕ್ತವಂತೆ. ಹಿಂದೆಲ್ಲಾ ಪ್ರತಿ ಮನೆಯಲ್ಲೂ ಬಾವಿ ಇರುತ್ತಿತ್ತು. ದೇಹಶುದ್ಧಿಗಾಗಿ ಒಂದು ಕೊಡ ನೀರನ್ನು ಸೇದಿ, ದಡದಡನೆ ಮೈಮೇಲೆ ಹುಯ್ದುಕೊಂಡು, ಮಡಿಯಾಗುತ್ತಿದ್ದರು. ಇಷ್ಟಕ್ಕೂ ಮಡಿ ಎಂದರೆ ಶುಚಿತ್ವ ಎಂದಷ್ಟೇ. ಇದು ಅಂತರಂಗದ ಶುದ್ಧತೆಗೆ ಸಂಕೇತವಾಗಬೇಕು. ಚರುಮವ ತೊಳೆದರೆ ಕರುಮವು ಹೋದೀತೇ? ಎಂದು ದಾಸರು ಪ್ರಶ್ನಿಸುತ್ತಾರೆ. ಏನೋ ಒಟ್ಟಿನಲ್ಲಿ ಒಂದು ವರ್ಗದ, ಕೋಮಿನ ಜನರು ಹೀಗೆ ದಡದಡನೆ ನೀರು ಹುಯ್ದುಕೊಂಡು, ಮಡಿಯಾದೆವೆಂದು ಭಾವಿಸುತ್ತಿದ್ದರು. ಹಿಂದೆಲ್ಲಾ ಈಗಿರುವಂತೆ, ಪ್ರತ್ಯೇಕವಾದ ಬಾತುರೂಮು ಎಲ್ಲಿತ್ತು? ನೀರುಮನೆ ಎಂದು ಕರೆಯುವ ಬಚ್ಚಲುಮನೆಯಲ್ಲಿ ನೀರೊಲೆ ಇರುತ್ತಿತ್ತು. ಹಂಡೆ ಹೂಳಲಾಗಿರುತ್ತಿತ್ತು. ಒಣಗಿದ ಸೌದೆಯನ್ನೊಟ್ಟಿ ನೀರು ಕಾಯಿಸಿ, ಬಿಸಿನೀರ ಸ್ನಾನಕ್ಕೆ ಅಣಿ ಮಾಡುತ್ತಿದ್ದರು. ಊಟಕ್ಕೆ ಮುಂಚೆ; ಸ್ನಾನಕ್ಕೆ ಹಿಂಚೆ ಎಂಬ ಗಾದೆಯೇ ಇತ್ತು. ಅಂದರೆ ಪ್ರಾರಂಭದಲ್ಲೇ ಊಟಕ್ಕೆ ಕುಳಿತೆ ಹೋಳೂ ಕಾಳೂ ದಂಡಿಯಾಗಿ ಲಭಿಸುತ್ತಿತ್ತು. ಸ್ನಾನಕ್ಕೆ ಕೊನೆಗೆ ಹೋದರೆ ಸಾಕಷ್ಟು ಬಿಸಿನೀರು ಸಿಗುತ್ತಿತ್ತು. ಇನ್ನೂ ಸ್ನಾನ ಮಾಡುವವರು ಇದ್ದಾರೆಂದು ಮುಂಚೆ ಸ್ನಾನಕ್ಕೆ ಹೋದವರು ಕಡಮೆ ನೀರು ಬಳಸುತ್ತಿದ್ದರು. ನಾನು ಚಿಕ್ಕವನಿರುವಾಗ ವಠಾರದ ಮನೆಗಳಲ್ಲಿ ವಾಸ. ಮೈಸೂರಿನ ಹಳ್ಳದ ಕೇರಿ (ಈಗ ಅದು ಮಹಾವೀರನಗರ ಎನಿಸಿಕೊಂಡಿದೆ) ಏರಿಯಾದಲ್ಲೊಂದು ಮನೆಯಲ್ಲಿ ಬಾಡಿಗೆಗೆ ಇದ್ದೆವು. ಸುಮಾರು ಇಪ್ಪತ್ತು ಮನೆಗಳಿದ್ದ ವಠಾರವದು. ಇದ್ದುದು ಒಂದೇ ಬಾತುರೂಮು; ಒಂದೇ ಲೆಟ್ರೀನು. ನಮ್ಮ ಮನೆಯವರಂತೂ ದಿನವೂ ಸ್ನಾನ ಮಾಡುವ ಪದ್ಧತಿಯವರು. ಒಮ್ಮೊಮ್ಮೆ ಎರಡೆರಡು ಸಾರಿ ಸ್ನಾನ ಮಾಡುವಂಥವರು. ಏನೋ ಮೈಲಿಗೆಯಾಯಿತೆಂದು ದಿಢೀರನೆ ಸ್ನಾನಕ್ಕೆ ಹೊರಟು ನಿಲ್ಲುತ್ತಿದ್ದರು. ಹುಟ್ಟು, ಸಾವುಗಳಲ್ಲಿ ಸ್ನಾನ, ಮುಟ್ಟುಚಿಟ್ಟು ಎಂದಾಗಲೂ ಸ್ನಾನ. ಬಸ್ಸು, ರೈಲುಗಳಲ್ಲಿ ಪ್ರಯಾಣ ಮಾಡಿ ಬಂದ ಮೇಲೆ ಮೈಲಿಗೆಯಾಯಿತೆಂದು ಸ್ನಾನ. ಬೆಳಗಾಗೆದ್ದರೆ ಸ್ನಾನ! ಹೀಗೆ ಸ್ನಾನವು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಮೈಯನ್ನು ತೊಳೆದೂ ತೊಳೆದು ಚರುಮವು ಬಿಳಿಚಿಕೊಂಡಿತೇ ವಿನಾ ಬುದ್ಧಿ ಚಿಗುರಲಿಲ್ಲ!

ಇನ್ನು ನಮ್ಮಜ್ಜಿ ಮನೆಯವರಂತೂ ಹೆಚ್ಚೂ ಕಡಮೆ ಸ್ನಾನದ ಮನೆಯಲ್ಲೇ ಇರುತ್ತಿದ್ದರು. ಮನೆ ತುಂಬ ಜನ; ಇದ್ದುದು ಒಂದೇ ಸ್ನಾನದ ಮನೆ. ಗಂಡಸರೆಲ್ಲಾ ಬಾವಿಯಿಂದ ನೀರು ಸೇದಿ ಅಲ್ಲೇ ಹುಯ್ದುಕೊಳ್ಳುತ್ತಿದ್ದರು. ಮಡಿಪಂಚೆಯುಟ್ಟುಕೊಂಡು (ಪುಟ್ಟ ಮಕ್ಕಳಿಗೆ ಕೇವಲ ಲಂಗೋಟಿ) ಅಲ್ಲೇ ನಿಂತು ಸೋಪು, ಸೀಗೇಪುಡಿ ಬಳಸಿ, ತಿಕ್ಕಿಕೊಂಡು ಸ್ನಾನ ಮಾಡುತ್ತಿದ್ದರು. ಜೊತೆಗೆ ‘ಗಂಗೇಚ ಯಮುನೇಚೈವ ಗೋದಾವರೀ ಸರಸ್ವತಿ; ನರ್ಮದಾ ಸಿಂಧು ಕಾವೇರಿ ಜಲೋಸ್ಮಿನ್ ಸನ್ನಿಧಿಂ ಕುರುಃ’ ಎಂಬ ಮಂತ್ರೋಚ್ಚಾರಣೆ. ಸ್ನಾನ ಮಾಡುವಾಗ ಇನ್ನೊಬ್ಬರೊಂದಿಗೆ ಮಾತಾಡಬಾರದು. ಮಾತಾಡಿದರೆ ಮೈಲಿಗೆ ಎಂದು ಭಾವಿಸುತ್ತಿದ್ದರು. ಪ್ರತಿಯೊಂದಕ್ಕೂ ಮಡಿ, ಮೈಲಿಗೆ, ಎಂಜಲು, ಮುಸುರೆ ಎಂದುಕೊಂಡು, ಅದು ಮುಟ್ಟಬಾರದು; ಅದನ್ನು ಅಲ್ಲಿ ಇಡಬಾರದು, ಇದನ್ನು ಹೀಗೆ ಬೋರಲು ಹಾಕಬಾರದು, ಇದನ್ನು ತೋರಿಸಬಾರದು ಎಂಬಂಥ ಕಟ್ಟುಕಟ್ಟಳೆಗಳ ನಡುವೆ ನಾನು ಬೆಳೆದದ್ದು. ಆದರೆ ಪುಣ್ಯಕ್ಕೆ ನಮ್ಮ ತಾಯ್ತಂದೆಯರು ಮೈಸೂರಿನ ಕನ್ನೇಗೌಡನ ಕೊಪ್ಪಲಿನಲ್ಲಿ ಬಾಡಿಗೆ ಮನೆ ಹಿಡಿದಾಗ ನನಗೆ ಉಸಿರುಗಟ್ಟಿದ ವಾತಾವರಣದಿಂದ ಬಿಡುಗಡೆಯಾದಂಥ ಅನುಭವ. ಏಕೆಂದರೆ ಅಲ್ಲಿದ್ದವರೆಲ್ಲಾ ಒಕ್ಕಲುತನ ಮಾಡುವ ಮನೆಗಳವರು. ನಾವೊಬ್ಬರೇ ಮಡಿಯೆಂದಾಡುವ ಜನ; ಜೊತೆಗೆ ಪ್ರೀತಿ ಮತ್ತು ಭಯಮಿಶ್ರಿತ ಗೌರವ ತೋರುತ್ತಿದ್ದುದರಿಂದ ನಾನು ಇಂಥ ಮಡಿ-ಮೈಲಿಗೆಯ ಕೃತಕ ವರ್ಗೀಕರಣವನ್ನು ದಾಟಿಯೋ ಮೀರಿಯೋ ಬೆಳೆಯಲು ಶುರುವಿಟ್ಟೆ. ಒಂದು ಕಾಲದಲ್ಲಿ ಇವಕ್ಕೆ ಅರ್ಥವಿತ್ತು. ಇದೀಗ ಆಧುನಿಕ ಜಗತ್ತಿನಲ್ಲಿ ಹೀಗೆ ಮಾತೆತ್ತಿದರೆ ಮಡಿಯೆಂದಾಡುವ ನಮ್ಮ ಸಂಬಂಧಿಕರ ಚರ್ಯೆಗೆ ಅರ್ಥವೇ ಇರುತ್ತಿರಲಿಲ್ಲ. ಅಷ್ಟಲ್ಲದೇ ಕೆಲವೊಮ್ಮೆ ಅಮಾನವೀಯವೂ ಆಗುತ್ತಿತ್ತು. ನಾವೇ ನಮ್ಮಜ್ಜಿ ಮನೆಯವರಿಗೇ ಮುಟ್ಟಿಸಿಕೊಳ್ಳಬಾರದವರಾಗಿದ್ದೆವು. ನಾವು ಅಲ್ಲೆಲ್ಲೋ ದೂರದ ಏರಿಯಾದಲ್ಲಿ ಮನೆ ಮಾಡಿದ್ದೇವೆಂಬ ಕಾರಣಕ್ಕೆ ನಮ್ಮನ್ನು ನಮ್ಮ ನೆಂಟರು ವಿಚಿತ್ರವಾಗಿ ಕಾಣುತ್ತಿದ್ದರು. ನಮ್ಮ ಏರಿಯಾದಲ್ಲಿ ನಿಮಗೆ ಮನೆ ಸಿಗಲಿಲ್ಲವೇ? ಎಂದು ಕೊಂಕು ಮಾತನಾಡುತ್ತಿದ್ದರು. ನಮ್ಮ ತಂದೆಯವರು ವೃತ್ತಿಯಿಂದ ಟೈಲರ್ ಆಗಿದ್ದು, ಅವರ ಕಸುಬು ಎಲ್ಲಿ ಚೆನ್ನಾಗಿ ನಡೆಯುತ್ತಿತ್ತೋ ಆ ಏರಿಯಾದಲ್ಲಿ ಮನೆ ಮಾಡಿ, ಮನೆಯಲ್ಲೇ ಅಂಗಡಿ ಮಾಡಿಕೊಂಡು ದುಡಿಯುತ್ತಿದ್ದರು. ಅವರವರಿಷ್ಟ ಎಂಬ ಈ ಕಾಲದ ಧೋರಣೆಯು ಆಗ ಇರಲಿಲ್ಲ. ಎಲ್ಲಕ್ಕೂ ಮೂಗು ತೂರಿಸುವ ನೆಂಟರಿಷ್ಟರು ಹಲವೊಮ್ಮೆ ನುಂಗಲಾರದ ತುಪ್ಪದಂತಾಗುತ್ತಿದ್ದರು. ಒಟ್ಟಿನಲ್ಲಿ ಬಡವರು ವಾಸ ಮಾಡಲು ವಠಾರದ ಮನೆಗಳೇ ಚೆನ್ನಿದ್ದವು. ಕಡಮೆ ಬಾಡಿಗೆ, ಸುತ್ತುಮತ್ತ ನಮ್ಮನ್ನು ಆದರಿಸುವ ಜನವರ್ಗ; ನಮ್ಮ ತಂದೆಯವರಿಂದ ಬಟ್ಟೆ ಹೊಲಿಸಿಕೊಳ್ಳುವ ಗಿರಾಕಿಗಳು ಸಮೃದ್ಧ. ಆದರೆ ನೀರುಮನೆ ಮಾತ್ರ ಅಷ್ಟೂ ಮನೆಯವರಿಗೆ ಒಂದೇ! ಹಾಗಾಗಿ ನಾವು ಬೆಳಗಿನ ಜಾವ ನಾಲ್ಕುಗಂಟೆಗೇ ಅಲಾರಂ ಕೊಟ್ಟುಕೊಂಡು ಮೇಲಕೆದ್ದು, ಒಲೆಯುರಿ ಹಾಕಿ ಬಿಸಿನೀರು ಸಿದ್ಧ ಮಾಡಿ, ಸ್ನಾನ ಮುಗಿಸಿ, ಐದುಗಂಟೆಗೆಲ್ಲಾ ಬೇರೆಯವರಿಗೆ ಸ್ನಾನದ ಮನೆಯನ್ನು ತೆರವು ಮಾಡಿ ಕೊಡಬೇಕಾಗುತ್ತಿತ್ತು. ಹೀಗಾಗಿ ಒಮ್ಮೊಮ್ಮೆ ಚಳಿಗಾಲದಲ್ಲಿ ನಾನು ಬಹುತೇಕ ಸ್ನಾನದಿಂದ ವಿನಾಯಿತಿ ಪಡೆಯುತ್ತಿದ್ದೆ. ಬೆವರಿದರೆ, ಕೊಳೆಯಾದರೆ ಮಾತ್ರ ಸ್ನಾನ; ಇಲ್ಲದಿದ್ದರೆ ಸುಮ್ಮನೇತಕೆ ವ್ಯರ್ಥ ಕಸರತ್ತು ಎಂಬುದು ನನ್ನ ಆಗಿನ ತತ್ತ್ವಜ್ಞಾನವಾಗಿತ್ತು. (ಈಗಲೂ ಅದೇನು ಬದಲಾಗಿಲ್ಲ!)

ಹಾಗೆ ನೋಡಿದರೆ, ನಮ್ಮ ದೇಶವಾಸಿಗಳದು ರಾತ್ರಿ ಸ್ನಾನವಾಗಿತ್ತು. ಭಾರತೀಯರು ಬಹುತೇಕ ಕೃಷಿಕ ಹಿನ್ನೆಲೆಯವರು. ಬೆಳಗಿನ ಹೊತ್ತು ಸೂರ್ಯ ಪರಮಾತ್ಮನು ನಿಚ್ಚಳವಾಗಿ ಕಾಣಿಸಿಕೊಳ್ಳುವುದರೊಳಗೆ ಅಂದರೆ ಹೊತ್ತು ಮೂಡುವುದರೊಳಗೆ ಹೊಲ, ಗದ್ದೆ, ತೋಟಗಳ ಕಡೆಗೆ ಮನೆಯ ಗಂಡಸರು ಹೊರಟು ಬಿಡುತ್ತಿದ್ದರು. ಹಿಂದಿನ ದಿನದ ತಂಗಳು ಮುದ್ದೆ, ಸೊಪ್ಸಾರು ಉಂಡು, ಟವೆಲು ಜಾಡಿಸಿ, ದನಕರುಗಳೊಂದಿಗೆ ತಮ್ಮ ಆಡುಂಬೊಲಕ್ಕೆ ಪಯಣಿಸುತ್ತಿದ್ದರು. ಮಧ್ಯಾಹ್ನದ ವೇಳೆಗೆ ಮನೆಯ ಹೆಂಗಸರು ಊಟ ಹೊತ್ತುಕೊಂಡು ಬರುತ್ತಿದ್ದರು. ಜೊತೆಗೆ ಕೂಲಿಕುಂಬಳದವರಿಗೂ. ಸೂರ್ಯ ಕಂತಿದ ಮೇಲೆ ಮನೆಗೆ ವಾಪಸು ಬಂದು, ದನಕರುಗಳನ್ನು ಕಟ್ಟಿ ಹಾಕಿ, ಅವಕ್ಕೆ ಮೇವನ್ನಿತ್ತು, ಸ್ನಾನಕ್ಕೆ ಹೊರಡುತ್ತಿದ್ದರು. ಶ್ರಮಪಟ್ಟು ಕೆಲಸ ಮಾಡಿದ ಮೇಲಿನ ಬೆವರು, ಧೂಳು, ದುಮ್ಮಾನಗಳನು ನೀಟಾಗಿ ಹೋಗಿಸಿಕೊಳ್ಳುವ ಮಜ್ಜನವಿದು. ಹೀಗೆ ಸಂಜೆ ಅಥವಾ ರಾತ್ರಿಸ್ನಾನ ಮುಗಿಸಿ, ದೇವರಿಗೆ ಕೈ ಮುಗಿದು, ಹೊಟ್ಟೆ ತುಂಬ ಊಟ ಮಾಡಿ, ಜಗುಲಿಯಲ್ಲಿ ಸೇರುತ್ತಿದ್ದರು. ಅವರವರ ಅಭಿರುಚಿ ಮತ್ತು ಹವ್ಯಾಸಗಳಿಗೆ ತಕ್ಕಂತೆ, ತಡರಾತ್ರಿಯವರೆಗೂ ವಿರಾಮವನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಕೆಲವರು ಊರದೇಗುಲದ ಮುಂದೆ, ಕೆಲವರು ಪಂಚಾಯತಿ ಕಟ್ಟೆಯ ಬಳಿ, ಇನ್ನು ಕೆಲವರು ನಾಟಕದ ತಾಲೀಮು ಅಥವಾ ಮನೆಯ ಜಗುಲಿಯ ಮೇಲೆಯೇ ಕುಳಿತು ಮನೆಮಂದಿಯ ಬಳಿ ಮಾತುಕತೆ. ಅಕ್ಕರ ಬಲ್ಲವರು ಗದುಗಿನ ಭಾರತ, ಜೈಮಿನಿ ಭಾರತಗಳ ಪಠಣ ಒಟ್ಟಿನಲ್ಲಿ ಊರ ಉಸಾಬರಿಗೆ ಇದು ಸಕಾಲ. ಹಾಗಾಗಿ ನಮ್ಮದೇನಿದ್ದರೂ ಇರುಳಮಜ್ಜನ. ಇದು ಅರ್ಥಪೂರ್ಣವಾಗಿಯೂ ವೈಜ್ಞಾನಿಕವಾಗಿಯೂ ಇತ್ತು. ಯುರೋಪಿಯನ್ನರು ಬಂದ ಮೇಲೆ ವ್ಹೈಟ್ ಕಾಲರ್ ಜಾಬ್ ಶುರುವಾದ ಮೇಲೆ ಈ ಬೆಳಗಿನ ಸ್ನಾನ, ಬ್ರೇಕ್‌ಫಾಸ್ಟು ಇತ್ಯಾದಿಗಳು ಪರಿಚಿತವಾದವು. ಎಷ್ಟೋ ಸಲ ಅನಿಸಿದ್ದಿದೆ. ಮೈಕೈ ಕೊಳೆ ಮಾಡಿಕೊಳ್ಳದೇ ದುಡಿಯುವ ಹಲವು ಮಂದಿ, ಕನಿಷ್ಠ ವ್ಯಾಯಾಮವನ್ನೂ ಮಾಡದೇ ಕಿಂಚಿತ್ತೂ ಬೆವರದೇ ಬೆಳಗ್ಗೆಯೇ ಎದ್ದು, ಸ್ನಾನಕ್ಕೆ ಹೋಗುವುದಿದೆಯಲ್ಲಾ ಅದು ನ್ಯಾಷನಲ್ ವೇಸ್ಟು ಅಂತ! ನೀರು, ಸಮಯ ಎರಡೂ ದಂಡ. ಬೆವರು ಬಂದಿದೆಯೋ ಬಂದಿಲ್ಲವೋ ಇದನ್ನೆಲ್ಲ ಕೇಳಿಕೊಳ್ಳದೇ ಸುಮ್ಮನೆ ಸ್ನಾನದ ಮನೆಗೆ ನಡೆದು, ನಿತ್ಯಕರ್ಮ ಮುಗಿಸಿಕೊಳ್ಳುವುದು ರೊಟೀನಾಗಿಬಿಟ್ಟಿದೆ. ಇದೇನೇ ಇರಲಿ, ರಾತ್ರಿ ಮಲಗಿದ್ದರಿಂದಲೇ ಆಗಿರಬಹುದಾದ ಆಯಾಸ ಪರಿಹಾರ(?)ವಂತೂ ಈ ಬೆಳಗಿನ ಸ್ನಾನದಿಂದ ಮಾಯವಾಗುತ್ತದೆಂದು ಸಮಾಧಾನ ಪಟ್ಟುಕೊಳ್ಳಬೇಕು. ಒಂಥರಾ ಫ್ರೆಶ್‌ನೆಸ್ ಬೇಕೆಂದರೆ ಸ್ನಾನ ಮಾಡಬೇಕೆಂಬ ಅಲಿಖಿತ ನೀತಿಯನ್ನು ನಮಗೆ ನಾವೇ ಮಾಡಿಕೊಂಡು ಬಿಟ್ಟಿದ್ದೇವೆ. ಏನೇ ಆಗಲಿ, ಚೆನ್ನಾಗಿ ಬೆವರಿದ ಮೇಲೆ ಮಾಡುವ ಸ್ನಾನವಿದೆಯಲ್ಲಾ ಅದು ನಿಜವಾದ ಜಳಕ. ಹದಗೊಂಡ ಬಿಸಿನೀರಿನ ಸ್ನಾನವು ಮೈಯ ಮಾಂಸಖಂಡಗಳಿಗೆ ಒಳ್ಳೆಯ ಮಾಲೀಶು. ಆಯುರ್ವೇದದಲ್ಲಿ ಸ್ನಾನವೂ ಒಂದು ಬಗೆಯ ಔಷಧೋಪಚಾರ. ‘ಉಂಡದ್ದೇ ಉಗಾದಿ; ಮಿಂದದ್ದೇ ದೀವಳಿಗೆ’ ಎಂಬ ಗಾದೆಮಾತಿನಂತೆ ದೀಪಾವಳಿಯಲ್ಲಿ ಅಭ್ಯಂಜನವೇ ಪ್ರಮುಖ.

ರಸಋಷಿ ಕುವೆಂಪು ಅವರು ಬರೆದಿರುವ ಒಂದೇ ಒಂದು ಲಲಿತ ಪ್ರಬಂಧಗಳ ಸಂಕಲನ ‘ಮಲೆನಾಡಿನ ಚಿತ್ರಗಳು’ ಕೃತಿಯಲ್ಲಿರುವ ಅಜ್ಜಯ್ಯನ ಅಭ್ಯಂಜನ’ ಎಂಬ ಬರೆಹವನ್ನು ಓದಿದರೆ ಗೊತ್ತಾಗುತ್ತದೆ: ಅಭ್ಯಂಜನವೆಂಬುದು ಮಲೆನಾಡಿನಲ್ಲಿ ಎಷ್ಟೊಂದು ಭಯೋತ್ಪಾದಕವಾಗಿತ್ತೆಂಬುದು! ಮಲೆನಾಡಿನ ಜೀವನವನ್ನು ಮೊದಲಿಗೆ ವಿವರಿಸುತ್ತಲೇ ನಿಧಾನವಾಗಿ ಲೇಖಕರು ಸ್ನಾನದ ವಿಚಾರಕ್ಕೆ ಧುಮುಕುತ್ತಾರೆ. ‘ಮಲೆನಾಡಿನಲ್ಲಿ ಅಭ್ಯಂಜನವೆಂದರೆ ಮಹಾಕಾರ್ಯ. ಅಭ್ಯಂಜನದ ದಿನ ಯಾರು ಸಾಯುತ್ತಾರೆ? ಯಾರು ಉಳಿಯುತ್ತಾರೆ? ಯಾರು ಮೂರ್ಛೆ ಬೀಳುತ್ತಾರೆ? ಹೇಳುವುದೇ ಕಷ್ಟ. ಆ ದಿನ ಮನೆಯಲ್ಲಿ ಗಲಭೆಯೋ ಗಲಭೆ’ ಎಂದು ಬರೆಯುವಾಗ ಎಂಥವರಿಗೂ ಕುತೂಹಲಭರಿತ ದಿಗಿಲು ಉಂಟಾಗುತ್ತದೆ. ಕುವೆಂಪು ಅವರು ಚಿಕ್ಕವರಾಗಿದ್ದಾಗಿನ ಸ್ನಾನದ ವಿಭಿನ್ನ ಆಚರಣೆಯನ್ನು ಸಾಂಗೋಪಾಂಗವಾಗಿ ವಿಶ್ಲೇಷಿಸುತ್ತಾರೆ. ಪುಟ್ಟ ಮಕ್ಕಳ ಜಳಕದ ನಂತರ ಬರುವ ಮನೆಯ ಹಿರಿಯರಾದ ಅಜ್ಜಯ್ಯನ ಅಭ್ಯಂಗಕ್ಕೆ ಬರುತ್ತಾರೆ. ದೊಡ್ಡ ದೊಡ್ಡ ಹಂಡೆಗಳಲ್ಲಿ ಕಾದು ಮರಳುತ್ತಿರುವ ಸುಡುನೀರನ್ನು ನೆತ್ತಿಗೆ ಹುಯ್ಯುವಾಗ ಮಕ್ಕಳು ಬಾಯಿ ಬಡಿದುಕೊಂಡರೆ, ಅಜ್ಜಯ್ಯನಿಗೆ ಅದರ ಬಿಸಿ ಇನ್ನೂ ಸಾಲದು ಎನಿಸುತ್ತಿತ್ತಂತೆ. ಮಕ್ಕಳಿಗೆ ಬೆಳಗ್ಗೆಯೇ ಮೈಗೆಲ್ಲಾ ಎಣ್ಣೆ ತಿಕ್ಕಿ ಮಾಲೀಶು ಮಾಡಿದ ಮೇಲೆ, ಸಂಜೆಯ ತನಕ ಹಾಗೆಯೇ ಇದ್ದು, ಸ್ನಾನ ಮಾಡಿಸುತ್ತಿದ್ದರಂತೆ. ದೊಡ್ಡದಾದ ಹಂಡೆಗಳನ್ನು ಬಣ್ಣಿಸುತ್ತಾ, ‘ತಕಪಕ ತಕಪಕ ಕುದಿಯುವವರೆಗೆ ನೀರು ಹಾಕಿ ಕಾಯಿಸುತ್ತಾರೆ. ಅಕ್ಕಿ ಹಾಕಿದರೆ ತಕ್ಷಣ ಅನ್ನ ಆಗಿ ಹೋಗುತ್ತೆ. ಆ ಒಲೆಯ ಬೆಂಕಿಯೇ ಮೂರು ನಾಲ್ಕು ಹೆಣಗಳನ್ನು ಆರೇಳು ನಿಮಿಷಗಳಲ್ಲಿ ಸುಟ್ಟು ಬೂದಿ ಮಾಡಿ ಬಿಡಬಹುದು……’ ಎಂದು ಬರೆಯುವಾಗ ನಾವು ನಿಬ್ಬೆರಗಾಗುತ್ತೇವೆ. ಪ್ರತಿ ಭಾನುವಾರ ಇಂಥ ಅಭ್ಯಂಜನದಾಚರಣೆ ಸಾಂಗವಾಗಿ ನಡೆಯುತ್ತಿತ್ತಂತೆ. ಅಜ್ಜಯ್ಯನಿಗೆ ಎಣ್ಣೆ ತಿಕ್ಕಿದ ಆಳು ತಲೆಗೆ ಎಣ್ಣೆ ಹಾಕಿ ಪಟ್ ಪಟ್ ಎಂದು ಮದ್ದಲೆ ಬಡಿಯುವಂತೆ ಬಡಿಯುತ್ತಾನೆ. ಆ ಏಟಿಗೆ ಅಭ್ಯಾಸವಿಲ್ಲದವರ ಮೆದುಳು ಕದಡಿ ಹೋಗುವುದು ಖಂಡಿತ. ಆದರೆ ಅಜ್ಜಯ್ಯ ಮಾತ್ರ ಅಚಲವಾಗಿ ಧೀರತೆಯಿಂದ ಕುಳಿತಿರುತ್ತಿದ್ದರು. ಬಿಸಿನೀರು ಹಾಕುವವರು ಅದರ ಧಗೆ ತಾಳಲಾರದೇ ಆಗಾಗ ತಣ್ಣೀರನ್ನು ಮುಟ್ಟಿಕೊಂಡು ಕೈಯನ್ನು ತಂಪು ಮಾಡಿಕೊಳ್ಳಲು ಹರಸಾಹಸ ಪಡುತ್ತಿದ್ದರಂತೆ. ಇಂಥ ಜಳಕ ಮಾಡಿಸಿಕೊಂಡು, ಸುಸ್ತಾದವರಿಗೂ ಮೂರ್ಛೆ ತಪ್ಪಿದವರಿಗೂ ಶಕ್ತಿ ಬರಲೆಂದು ಪಾನಕ ಕುಡಿಸಿ, ಸುಧಾರಿಸುತ್ತಿದ್ದರಂತೆ. ಜಿಡ್ಡು ಹೋಗಲೆಂದು ಸೀಗೆಪುಡಿಯಿಂದ ಗಸಗಸ ಎಂದು ತಿಕ್ಕುತ್ತಿದ್ದರಂತೆ. ಸ್ನಾನ ಮುಗಿಸಿದ ಮೇಲೆ ಅವರ ಮೈಯಿಂದ ಹೊಗೆಯಾಡುತ್ತಿತ್ತಂತೆ. ಇದು ಅಲ್ಲಿಗೇ ನಿಲ್ಲದೇ, ನೇರವಾಗಿ ಅವರನ್ನು ಹಾಸುಗೆಯ ಮೇಲೆ ಮಲಗಿಸಿ, ನಾಲ್ಕಾರು ಕಂಬಳಿಗಳನ್ನು ಹೊದೆಸಿ, ಮೈಯೀಗ ಪೂರ್ತ ಬೆವರುಮಯ ಆಗುವತನಕ ಮೇಲೇಳಲು ಬಿಡುತ್ತಿರಲಿಲ್ಲವಂತೆ. ಇದು ಮಲೆನಾಡಿನ ಅಭ್ಯಂಜನದ ಭಯಾಗ್ರಫಿ! ಕೊನೆಗೆ ಬರೆಯುತ್ತಾರೆ: ‘ಅವರ ಕಾಲ ಮುಗಿದು ಹೋಯಿತು; ಅವರೊಡನೆ ಆ ಅಭ್ಯಂಜನದ ಮಹೋತ್ಸವವೂ ಮರೆತು ಹೋಯಿತು’ ಈ ಪ್ರಬಂಧವನ್ನು ಓದಿಯೇ ಸವಿಯಬೇಕು, ಅಲ್ಲಲ್ಲ, ಬೆವರಬೇಕು!

ಹೀಗೆ ಸ್ನಾನದಲ್ಲಿ ಹಲವು ವಿಧಗಳಿವೆ. ತಕ್ಷಣದ ಸ್ನಾನ, ದೀರ್ಘ ಸ್ನಾನ. ಪುಟ್ಟ ಮಕ್ಕಳಿಗೆ ಮಾಡಿಸುವ ಬುಕುಷಿ ಸ್ನಾನ. ವಯಸಾದವರಿಗೆ, ಅನಾರೋಗ್ಯಪೀಡಿತರಿಗೆ ಮಾಡಿಸುವ ಸ್ನಾನ, ಬಕೆಟ್ ನೀರಿನ ಸ್ನಾನ, ಷವರಿನ ಮೂಲಕ ಮಾಡುವ ಸ್ನಾನ, ಹೊಳೆ-ಕಾಲುವೆಗಳ ಸ್ನಾನ, ಸಮುದ್ರಸ್ನಾನ, ಸೂರ್ಯ ಸ್ನಾನ, ಮರಳ ಸ್ನಾನ, ಮಡ್ ಬಾತ್ ಎಂಬ ಮೃಣ್ಮಯ ಸ್ನಾನ, ತೀರ್ಥಕ್ಷೇತ್ರಗಳಲ್ಲಿ ಮಿಂದೇಳುವ ಪುಣ್ಯಸ್ನಾನ, ಬಾತ್‌ಟಬ್ಬಿನಲ್ಲಿ ಮಲಗಿಕೊಂಡೇ ಮಾಡುವ ಸ್ನಾನ, ಕೊನೆಯದು ಸತ್ತ ಮೇಲೆ ಹೆಣಕ್ಕೆ ಮಾಡಿಸುವ ಅಂತಿಮ ಸ್ನಾನ! ಸರಿಯಾಗಿ ಹೇಳುವುದಾದರೆ ಒಬ್ಬೊಬ್ಬರದೂ ಒಂದೊಂದು ರೀತಿಯ ಮೀಯುವ ವಿಧಾನ. ನಾವು ಪುಟ್ಟವರಿದ್ದಾಗ ನೀರು ಮತ್ತು ಸಮಯಾಭಾವ ಇದ್ದ ಕಾರಣವಾಗಿ, ಪ್ರತಿದಿನವೂ ತಲೆ ಮೇಲೆ ಸ್ನಾನ ಮಾಡುತ್ತಿರಲಿಲ್ಲ. ವಾರಕ್ಕೊಮ್ಮೆ ಅಥವಾ ಇಮ್ಮೆ ಮಾತ್ರ ತಲೆ ತೊಳೆವ ಸಂಪೂರ್ಣ ಸ್ನಾನ ದಕ್ಕುತ್ತಿದ್ದುದು. ತಲೆಗೂದಲು ಬೇಗ ಬೆಳೆದು ಪದೇ ಪದೇ ಸೆಲೂನಿಗೆ ಹೋಗಬೇಕಾದ ದರ್ದು ಎದುರಾಗುತ್ತದೆಂದು ತೀರಾ ಚಿಕ್ಕದಾಗಿ ಕಟಿಂಗ್ ಮಾಡಿಸಿ ಬಿಡುತ್ತಿದ್ದರು. ತಲೆ ತುಂಬ ಕೂದಲು ಬೆಳೆದು ಕರಡಿಯಂತಾಗಿ, ಶಾಲೆಯಲ್ಲಿ ಶಿಕ್ಷಕರು ತಾಕೀತು ಮಾಡಲು ಶುರು ಮಾಡಿದ ಮೇಲೆ ಕಟಿಂಗ್ ಶಾಪಿಗೆ ಹೋಗಲು ಅನುಮತಿ ದೊರಕುತ್ತಿದ್ದುದು. ಹಾಗಾಗಿ ಕಟ್ಟಾಭಿಷೇಕವು ನಿಧಾನವಾಗುತ್ತಿದ್ದುದರಿಂದ ಕೂದಲು ಹೆಚ್ಚಾಗಿ, ಬೆವೆತು ಸ್ಮೆಲ್ಲು ಶುರುವಾಗುತ್ತದೆಂದಾಗ ಎರಡು ದಿನಕ್ಕೊಮ್ಮೆ ತಲೆ ಮೇಲೆಯೂ ಸ್ನಾನ ಮಾಡಲು ಅನುಮತಿ ದೊರಕುತ್ತಿತ್ತು. ಈಗಿನಂತೆ ವಿಧವಿಧವಾದ ಸೋಪುಗಳಾಗಲೀ ಶಾಂಪುಗಳಾಗಲೀ, ಹೇರ್ ಕಂಡೀಷನ್ಡ್‌ಗಳಾಗಲೀ ಗೊತ್ತಿಲ್ಲದ ಮತ್ತು ಕೊಂಡುಕೊಳ್ಳಲು ದುಡ್ಡಿಲ್ಲದ ಬಡತನದ ಜಮಾನವದು. ಮೈಗೆ ತಿಕ್ಕಿಕೊಳ್ಳುವ ಸಾಬೂನೇ ಒಮ್ಮೊಮ್ಮೆ ತಲೆಗೂ. ಅದು ಬಿಟ್ಟರೆ ಜಿಡ್ಡು ಹೋಗಬೇಕೆಂಬುದಕ್ಕಾಗಿ ಸೀಗೇಕಾಯಿಪುಡಿ. ಶೀಕಾಯ್ ಎಂಬ ಮತ್ತು ಕಾರ್ತೀಕ ಎಂಬ ಹೆಸರಿನ ಸೀಗೆಕಾಯಿಯುಕ್ತ ಸಾಬೂನುಗಳು ಮಾರುಕಟ್ಟೆಗೆ ಬಂದಾಗ ನಮ್ಮಗಳ ತಲೆಮೇಲಿನ ಸಂಪೂರ್ಣ ಸ್ನಾನವು ಸುಲಭವಾಯಿತು. ಮನೆಮಂದಿಯೆಲ್ಲಾ ಒಂದೇ ಸಾಬೂನು ಬಳಸುತ್ತಿದ್ದುದು. ಗ್ರಾಮೀಣ ಭಾಗಗಳಲ್ಲಿ ಇಟ್ಟಿಗೆ ಸೋಪು ಎಂದೇ ಸುಪ್ರಸಿದ್ಧವಾಗಿದ್ದ ಲೈಫ್‌ಬಾಯ್ ಕೆಂಪು ಸೋಪೇ ನಮ್ಮ ಮನೆಯಲ್ಲೂ ಬಳಕೆ. ಎಲ್ಲರೂ ಅದೇ ಸೋಪನ್ನು ಬಳಸಬೇಕಾದ ಕಾರಣವಾಗಿ ಸೋಪನ್ನು ಡೈರೆಕ್ಟಾಗಿ ಮೈಗೆ ಉಜ್ಜಿಕೊಳ್ಳಬಾರದೆಂದೂ ಕೈಗೆ ಉಜ್ಜಿಕೊಂಡು, ಸೋಪನ್ನಿಟ್ಟು, ಆನಂತರ ಕೈಯನ್ನು ಮೈಗೆ ಉಜ್ಜಬೇಕೆಂದು ತಾಕೀತು ಮಾಡುತ್ತಿದ್ದರು ಮತ್ತು ಒಮ್ಮೊಮ್ಮೆ ನಮ್ಮಮ್ಮ ಬಚ್ಚಲು ಮನೆಗೆ (ಅಂದರೆ ಬಾತುರೂಮಿಗೆ) ಬಂದು ಪರೀಕ್ಷೆಯನ್ನು ಸಹ ಮಾಡುತ್ತಿದ್ದರು. ಹೀಗಿತ್ತು ನಮ್ಮ ಗುಬ್ಬಚ್ಚಿ ಸ್ನಾನ.

ಸ್ವಲ್ಪ ನೀರು ಕಂಡರೂ ಹಕ್ಕಿಪಕ್ಷಿಗಳು ಅದರಲ್ಲಿ ಮುಳುಗಿ ಚಿಲಿಪಿಲಿಗುಟ್ಟುತ್ತಾ ಗದ್ದಲವೆಬ್ಬಿಸುತ್ತಾ ಪರ‍್ರನೆ ಹಾರಿ ಹೋಗುವ ವೈಖರಿಯನ್ನು ಕಂಡಾಗಲೆಲ್ಲಾ ನನಗೆ ಅಸೂಯೆಯಾಗುತ್ತಿತ್ತು. ನಮ್ಮಯ ಸ್ನಾನವು ಅದೆಷ್ಟು ನಿಧಾನವಾಗುತ್ತದೆ; ಇವಕ್ಕೆ ಸೋಪು ಬೇಡ, ಸೀಗೇಕಾಯಿ ಬೇಡ, ಟವೆಲಂತೂ ಮೊದಲೇ ಬೇಡ. ಸುಮ್ಮನೆ ಮುಳುಗು ಹಾಕಿ ಹೋಗುತ್ತವಲ್ಲ ಎಂದುಕೊಳ್ಳುತ್ತಿದ್ದೆ. ಈಗಲೂ ತೀರ್ಥ ಕ್ಷೇತ್ರಗಳಲ್ಲಿ ಸ್ನಾನ ಮಾಡುವವರನ್ನು ಕಂಡರೆ ನನಗೆ ಹಾಗೇ ಅನಿಸುತ್ತದೆ. ಎಲ್ಲರೂ ನೆರೆದಿರುವಾಗ ನದಿಯಲ್ಲಿ ನಮ್ಮ ಪಾಡಿಗೆ ನಾವು ಮುಳುಗು ಹಾಕಿ, ಒದ್ದೆಬಟ್ಟೆ ಕಳಚಿ, ಬೇರೆ ಬಟ್ಟೆ ಉಟ್ಟುಕೊಳ್ಳಲು ಭಾರೀ ಪ್ರಮಾಣದ ಧೈರ್ಯ ಬೇಕು. ‘ನಿನಗೆ ನಾಚಿಕೆ ಆಗುವುದಿಲ್ಲವೇ’ ಎಂದು ನಾನು ನಮ್ಮಜ್ಜಿಯನ್ನು ಕೇಳಿದರೆ, ‘ಎಂಥಾ ನಾಚಿಕೆಯೋ? ಪುಣ್ಯಕ್ಷೇತ್ರ ಕಣೋ ಅದು. ಎಲ್ಲರೂ ಭಕ್ತಿಭಾವದಿಂದ ಗಂಗೇಚ ಯಮುನೇಚ ಎಂದು ಹೇಳಿಕೊಂಡು ಪರಮಾತ್ಮನಿಗೆ ನಮಸ್ಕರಿಸುತ್ತಾ ಮಾಡುವ ಶ್ರದ್ಧಾಕೈಂಕರ್ಯ, ನಿಮ್ಮಂಥ ಹುಡುಗುಮುಂಡೇವಕ್ಕೆ ಇವೆಲ್ಲಾ ಎಲ್ಲಿ ಗೊತ್ತಾಗಬೇಕು? ಎಂದು ಸಿಟ್ಟೇ ಆಗುತ್ತಿದ್ದರು. ‘ಬಟ್ಟೆಯುಟ್ಟರೂ ಬತ್ತಲೆ’ ಎಂಬಂತೆ ಜನಸ್ತೋಮವೇ ಗುಂಪು ಗುಂಪಾಗಿ ಹಾಗೆ ನದಿಯ ಸ್ನಾನಘಟ್ಟದಲ್ಲಿ ಮೀಯುವಾಗ ಅದನ್ನು ನೋಡಿಯೇ ನಮಗೆ ಒಂಥರಾ ಆಗುತ್ತಿತ್ತು. ಒಟ್ಟಿನಲ್ಲಿ ಮನದಲ್ಲಿ ಭಕ್ತಿ ಇದ್ದರೆ ನಾವು ಮಾಡುವ ಕೈಂಕರ್ಯವೆಲ್ಲಾ ಪೂಜನೀಯವೇ ಆಗಿಬಿಡುತ್ತದೆ; ನಂಬಿಕೆಗೆ ಅಂಥ ಶಕ್ತಿ ಇರುತ್ತದೆ ಎಂದೀಗ ಅರ್ಥವಾಗಿದೆ. ಇತ್ತೀಚೆಗಷ್ಟೇ ಅಭೂತಪೂರ್ವವಾಗಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಐತಿಹಾಸಿಕ ಕುಂಭಮೇಳ ‘ಮಹಾಕುಂಭ್’ ನಲ್ಲಿ ಕೋಟ್ಯಂತರ ಜನರು ಮಿಂದೇಳುವ ಸಲುವಾಗಿಯೇ ಹೋಗಿ ಬಂದದ್ದು ಇಲ್ಲಿ ಸ್ಮರಣೀಯ.

ಸಿನಿಮಾ ತೆಗೆಯುವ ಮಂದಿಗೆ ಈ ಸ್ನಾನವೂ ಸ್ನಾನದೃಶ್ಯವೂ ಒಂದು ಕಾಲದಲ್ಲಿ ಹಾಕಿದ ಬಂಡವಾಳವು ಮರಳಿ ಬರುವ ಸಂಚು ಹೊಂಚೇ ಆಗಿತ್ತು. ನಗ್ನತೆಯು ಅನಾಕರ್ಷಕ; ಅರೆನಗ್ನತೆಯು ಆಕರ್ಷಕ ಎಂಬುದನ್ನು ಇಂಥವರು ತುಂಬಾ ಚೆನ್ನಾಗಿಯೇ ಕಂಡುಕೊಂಡು, ಒಂದು ವರ್ಗದ ಪ್ರೇಕ್ಷಕರು ಥಿಯೇಟರಿಗೆ ಬರುವಂತೆ ಮಾಡುವಲ್ಲಿ ಸಫಲರಾಗುತ್ತಿದ್ದರು. ಅದರಲ್ಲೂ ನಮ್ಮ ಕಾಲದಲ್ಲಿ ಮಲಯಾಳಂ ಮೂವಿ ಎಂದರೆ ಅದು ಎ ಸರ್ಟಿಫಿಕೇಟು ಮತ್ತು ಅದರಲ್ಲಿ ಒಂದಾದರೂ ಸ್ನಾನದ ದೃಶ್ಯ ಇರುತ್ತದೆಂಬುದು ಜಗಜ್ಜಾಹೀರು. ಆದರೆ ಅತ್ಯುತ್ತಮವಾದ ಶ್ರೇಷ್ಠ ಕಲಾತ್ಮಕ ಚಿತ್ರಗಳೂ ಮಲಯಾಳಂ ಭಾಷೆಯಲ್ಲಿವೆ ಎಂಬುದು ನನಗೆ ತಡವಾಗಿ ಗೊತ್ತಾದ ನಗ್ನಸತ್ಯ!

ಒಟ್ಟಿನಲ್ಲಿ ಜಳಕದ ಪುಳಕವನ್ನು ಎಲ್ಲರೂ ಅನುಭವಿಸಿರುವವರೇ. ಬೆಳಗಿನ ವೇಳೆ ನಿತ್ಯಕರ್ಮಗಳನ್ನು ಮುಗಿಸಿ, ಸ್ನಾನ ಮಾಡಿ, ಶುಚಿರ್ಭೂತಗೊಂಡು, ಒಗೆದ ಬಟ್ಟೆಗಳನ್ನು ಧರಿಸಿದರೆ ಎಂಥದೋ ಮಹದಾನಂದ; ಜೀವನೋಲ್ಲಾಸ. ಇಡೀ ದಿನ ಇದೇ ಹಸನ್ಮುಖತೆಯಲ್ಲಿ ಕಾರ್ಯ ನಿರ್ವಹಿಸಬಹುದೆಂಬ ಮಂದಹಾಸ. ಆದರೆ ಈ ಫೀಲಿಂಗು ಹೆಚ್ಚು ಹೊತ್ತು ಇರುವುದಿಲ್ಲ; ಬಿಸಿಲಿಗೆ ಮೈಯೊಡ್ಡಿ, ಬೆವರಿದರೆ ಆ ಫ್ರೆಶ್‌ನೆಸ್ ಎಲ್ಲಾ ಮಾಯವಾಗಿಬಿಡುತ್ತದೆ. ಇತ್ತೀಚೆಗಷ್ಟೇ ದಿವಂಗತರಾದ ಮಹಾನ್ ಕಾದಂಬರಿಕಾರರೂ ತತ್ತ್ವಶಾಸ್ತ್ರ ಕೋವಿದರೂ ಆದ ಡಾ. ಎಸ್ ಎಲ್ ಭೈರಪ್ಪನವರು ಒಂದೆಡೆ ಹೇಳಿದ್ದುಂಟು: ನಮ್ಮ ದೇಶದ ಸನಾತನ ಮಂದಿಯು ಬಾವಿಯ ನೀರನ್ನು ಸೇದಿ ಸ್ನಾನ ಮಾಡುತ್ತಿದ್ದರೂ ಬಾಯಲ್ಲಿ ಮಾತ್ರ ಗಂಗೇಚ ಯಮುನೇಚೈವ ಗೋದಾವರೀ ಸರಸ್ವತಿ ಎಂಬ ಶ್ಲೋಕ ಹೇಳುತ್ತಿದ್ದರು. ಅಂದರೆ ಮಾನಸಿಕವಾಗಿ ಆ ಎಲ್ಲ ಪವಿತ್ರ ನದಿನೀರನ್ನು ನೆನಪಿಸಿಕೊಳ್ಳುತ್ತಾ ಜಳಕ ಮಾಡುವ ಭಾರತೀಯ ಮನೋಧರ್ಮವನ್ನು ಹೊಂದಿದ್ದರು ಎಂಬುದಾಗಿ. ಹರಿವ ನೀರಿಗೆ ದೋಷವಿಲ್ಲ ಎಂದು ಹೊಳೆಯನ್ನೂ ಭೂಮಿಯೊಳಗಿನ ನೀರಿಗೂ ದೋಷವಿಲ್ಲ ಎಂದು ಬಾವಿಯನ್ನೂ ಏಕಕಾಲಕ್ಕೆ ಆರಾಧಿಸುತ್ತಿದ್ದ ನಮ್ಮವರಿಂದ ಕಲಿಯುವುದು ಬೇಕಾದಷ್ಟಿತ್ತು. ನಾವು ಕಲಿಯಲಿಲ್ಲ ಅಥವಾ ಕಲಿಸಿ ಕೊಟ್ಟಿದ್ದನ್ನು ಮರೆತು ಬದುಕುತ್ತಿದ್ದೇವೆ. ‘ಗಂಗಾಸ್ನಾನ; ತುಂಗಾಪಾನ’ ಎಂಬ ಗಾದೆಯೇ ನಮ್ಮಲ್ಲಿ ಬಳಕೆಯಲ್ಲಿತ್ತು. ದೈಹಿಕ ಮತ್ತು ಮಾನಸಿಕ ಕ್ಲೇಶಗಳೇನಾದರೂ ಸ್ನಾನವೇ ಅದಕ್ಕೆ ಮದ್ದು. ಅದರಲ್ಲೂ ಪವಿತ್ರಗಂಗೆಯಲ್ಲಿ ಒಮ್ಮೆ ಮೀಯಬೇಕು ಎಂಬುದು ನಮ್ಮ ಹಿಂದಿನವರ ಅದಮ್ಯ ಹಂಬಲವೇ ಆಗಿತ್ತು. ಈಗಲೂ ಗಂಗೆಯ ಮಹತ್ವವೇನೂ ಕಡಮೆಯಾಗಿಲ್ಲ. ಸಾಯುತ್ತಿರುವ ಜೀವಕ್ಕೆ ಗಂಗಾತಾಲಿ ಒಡೆದು ಅದರ ಒಂದೆರಡು ಹನಿಯನ್ನಾದರೂ ಬಾಯಿಗೆ ಬಿಟ್ಟರೆ ಸದ್ಗತಿ ಎಂಬುದು ನಮ್ಮ ಧಾರ್ಮಿಕ ನಂಬಿಕೆ. ಕಾವೇರಿಯನ್ನು ದಕ್ಷಿಣಗಂಗೆ ಎಂದೇ ಕರೆಯುವುದು ರೂಢಿ. ಈಗಲೂ ತೀರ್ಥೋದ್ಭವ ಆಗುವಾಗ ಸಾವಿರಾರು ಜನರು ಮೀಯಲು ಸಾಕ್ಷೀಭೂತರಾಗಿ ಕಾಯುತ್ತಿರುತ್ತಾರೆ. ಹೀಗೆ ಹರಿವ ನದಿ, ಕಾಲುವೆಗಳನ್ನೂ ನಿಂತ ನೀರಾದ ಬಾವಿ, ಕೆರೆಕಟ್ಟೆಗಳನ್ನೂ ನಾವು ಪೂಜಿಸುವುದರಲ್ಲೂ ಸೈ; ಹಾಗೆಯೇ ಮಲಿನ ಮಾಡುವುದರಲ್ಲೂ ಸೈ! ಈ ವಿಚಾರದಲ್ಲಿ ನಮ್ಮ ನಡೆವಳಿಕೆ ಬದಲಾಗಬೇಕು. ಜಲಮಾಲಿನ್ಯ ಆಗುವ ಎಲ್ಲ ವಿಧಿ ವಿಧಾನಗಳನ್ನೂ ಕೈ ಬಿಡಬೇಕು. ದೈವ ಮತ್ತು ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ನೀರಿನ ಮೂಲವನ್ನು ಹಾಳುಗೆಡಹುವ ಎಲ್ಲವನ್ನೂ ನಿಷೇಧಿಸಬೇಕು. ಹರಿವ ನೀರು ಪಾಪ ತೊಳೆಯುತ್ತದೆಂದು ನಮ್ಮ ದಿನಿನಿತ್ಯದ ಕಸವನ್ನೂ ಎಸೆದು ಮೂರ್ಖತನ ಪ್ರದರ್ಶಿಸಬಾರದು. ಇದೊಂದೇ ನಮ್ಮಲ್ಲಿರುವ ದುಷ್ಟ ನಡೆವಳಿಕೆ. ಏಕೆಂದರೆ ನೀರು ನಮ್ಮ ಜೀವ; ನಮ್ಮ ಭಾವ. ಅದಿಲ್ಲದೇ ನಮ್ಮ ದಿನನಿತ್ಯದ ಬದುಕು ಸಾಗದು. ಪಂಚಭೂತಗಳಲ್ಲಿ ನೀರಿಗೆ ಅಗ್ರಸ್ಥಾನ. ಹಾಗಾಗಿಯೇ ಎಲ್ಲ ನಾಗರಿಕತೆಗಳು ಉಗಮಿಸಿದ್ದು ನದೀ ತೀರದಲ್ಲಿ. ನಮ್ಮೆಲ್ಲ ಪ್ರಾಚೀನ ದೇವಾಲಯಗಳು ನಿರ್ಮಾಣವಾದದ್ದು ನದಿಯ ದಡದಲ್ಲಿ. ನಮ್ಮ ಪ್ರಜ್ಞಾವಂತಿಕೆ ವ್ಯಕ್ತವಾಗಬೇಕಾದುದು ಇಲ್ಲಿಯೇ. ನಮ್ಮ ಭೂಮಿಯಲ್ಲಿ ಸಿಹಿನೀರಿನ ಪ್ರಮಾಣ ತುಂಬಾನೇ ಕಡಮೆ. ಅಂತಹುದರಲ್ಲಿ ಅದನ್ನು ಶುಚಿಯಾಗಿ ಇಟ್ಟುಕೊಳ್ಳದೇ ಇರುವುದು ನಮ್ಮ ಹೆಡ್ಡತನ. ಹಾಗೆಯೇ ನೀರನ್ನು ಪೋಲು ಮಾಡುವುದರಲ್ಲೂ ನಾವು ಎತ್ತಿದಕೈ. ಈ ಸಂದರ್ಭದಲ್ಲಿ ಹೆಸರಿಸಲೇಬೇಕಾದುದೆಂದರೆ ಬಕೆಟಿನ ಸ್ನಾನಕ್ಕಿಂತ ಷವರಿನ ಸ್ನಾನದಲ್ಲಿ ನೀರಿನ ಬಳಕೆ ಕಡಮೆ. ಹಿಂದೆಲ್ಲಾ ಹಂಡೆಯಿಂದ ಬಿಸಿನೀರನ್ನು ಬಕೆಟಿಗೆ ತೋಡಿಕೊಂಡು ತಣ್ಣೀರನ್ನು ಬೆರೆಸಿ ಸ್ನಾನ ಮಾಡುತ್ತಿದ್ದೆವು. ಈಗ ನಿಧಾನವಾಗಿ ಎಲ್ಲರೂ ತಂತಮ್ಮ ಬಾತುರೂಮಿನಲ್ಲಿ ಷವರನ್ನು ಅಳವಡಿಸಿಕೊಂಡಿಯೇ ಇರುತ್ತಾರೆ. ಬಾತ್‌ಟಬ್ಬಿನ ಸ್ನಾನಕ್ಕಿಂತ ಷವರನ್ನು ಬಳಸಿ ಸ್ನಾನ ಮಾಡಿದರೆ ಕಡಮೆ ನೀರು ಬಳಕೆ ಮತ್ತು ಕಡಮೆ ಸಮಯದಲ್ಲಿ ಅಚ್ಚುಕಟ್ಟಾಗಿ ಸ್ನಾನ ಮುಗಿಸಬಹುದು.

ಕವಿಗಳು ಸ್ನಾನವನ್ನು ಕೇವಲ ನೀರಿಗಷ್ಟೇ ನಿಲ್ಲಿಸುವುದಿಲ್ಲ; ಅದರಾಚೆಗೂ ವಿಸ್ತರಿಸಬಲ್ಲರು! ಪುಟ್ಟಮಕ್ಕಳು ತಲೆ ಮೇಲೆ ಮಣ್ಣು ಹುಯ್ದುಕೊಂಡರೇ ಅದೂ ಸ್ನಾನವೇ. ಕಣ್ಣಿಗೆ ಚೆಲುವಿನ ಸ್ನಾನ, ಮೂಗಿಗೇ ಗಂಧವೇ ಸ್ನಾನ, ನಾಲಗೆಗೆ ಸವಿರುಚಿಯೇ ಸ್ನಾನ, ಭಕ್ತರಿಗೆ ದೇವರ ಮಹಿಮೆಗಳನು ಸ್ತುತಿಸುವುದೇ ಸ್ನಾನ. ಪಾರ್ವತೀ ಸಮೇತ ಪರಮೇಶ್ವರನಿಗೆ ಗೌರೀಶಂಕರದಲ್ಲಿ ಹಿಮ ಸುರಿವುದೇ ಸ್ನಾನ! ಸಹೃದಯರಿಗೆ ಓದುವುದು ಮನಸಿನ ಸ್ನಾನವಾದರೆ, ಬರೆಯುವವರಿಗೆ ಅಕ್ಷರದ ಸ್ನಾನ ಮತ್ತು ಧ್ಯಾನ!!

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ

5 Comments on “ಜಳಕದ ಪುಳಕ !

  1. ಅಬ್ಭಾ… ಎಷ್ಟು ಅದ್ಭುತವಾಗಿ ಬರೀತೀರಿ ಸರ್. ಸುಪರ್ಬ್

  2. ಲೇಖನ ಓದುವಾಗ ಉಂಟಾದ ನಗು, ಭಯ, ಸಂತಸ, ಆಶ್ಚರ್ಯ, ಪೂಜ್ಯ ಭಾವ, ಜ್ಞಾನ, ಅಜ್ಞಾನ, ತಿಳುವಳಿಕೆ, ಬುದ್ದಿಮಾತು ಎಲ್ಲಾ ಭಾವಗಳೂ ಮೇಳೈಸಿ ಫುಲ್ ಮೀಲ್ಸ್ ಸವಿದಂತ ಭಾವ ಉಂಟಾಯಿತು. ಅತೀ ಚಂದದ ಲೇಖನ.

  3. ಅತ್ಯಂತ ಸೊಗಸಾದ… ರಸಾನುಭೂತಿಯ ಲೇಖನ.. ಶರಣು..ಶರಣು..ಶರಣು..ಸರ್ ಪೂರಕ ಚಿತ್ರ ಗಳು …ಸೂಪರ್..

  4. ಎಂದಿನಂತೆ ಚೆಂದದ ಸಮಗ್ರ ಮಾಹಿತಿಯುಕ್ತ ಲೇಖನ. ಪ್ರಾಚೀನ ಸಾಮ್ರಾಜ್ಯಗಳ ‘ ‘ಹಮಾಮ್’ ‘ಟರ್ಕಿ ಸ್ನಾನ’ದ ಬಗ್ಗೆ ಬಹುಶ: ಇನ್ನೊಂದು ಲೇಖನ ಬರೆಯಬಹುದೇನೋ?

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *