ಸಂಪಾದಕೀಯ

ಬಾಲಕಿ ಬರೆದ ವಿನಂತಿ

Share Button

ʼಗಾಂಧಿ ತಾತನ ಸನ್ನಿದಿಯಲ್ಲಿ ಬಾಲಕಿ ಬರೆದ ವಿನಂತಿʼ ಎಂಬ ಚಿತ್ರಗೀತೆಯ ಸಾಲೊಂದು ನನಗಿಲ್ಲಿ ಜ್ಞಾಪಕಕ್ಕೆ ಬರುತ್ತಿದೆ.  ಹೌದು, ʼಮಂಗಳಾ ಮೇಡಂ ಸನ್ನಿಧಿಯಲ್ಲಿ ಪದ್ಮಾ ಬರೆಯುತ್ತಿರುವ ವಿನಂತಿʼ ಎಂದೇ ಈ ಲೇಖನವನ್ನು ಬಣ್ಣಿಸಬಹುದೇನೋ! ಅವರ ವಿದ್ಯಾರ್ಥಿನಿಯಾಗಿ ಅವರಿಂದ ಪ್ರೇರಣೆಗೊಂಡು, ವ್ಯಕ್ತಿತ್ವವನ್ನು ರೂಪಿಸಿಕೊಂಡ ಹಲವಾರು, ಸಾವಿರಾರು ವಿದ್ಯಾರ್ಥಿನಿಯರ ಪ್ರತಿನಿಧಿಯಾಗಿ ನಾನಿಲ್ಲಿ ನಾಲ್ಕಾರು ತೊದಲು ನುಡಿಗಳನ್ನಾಡಬಯಸುತ್ತೇನೆ.

ಮೇರು ವ್ಯಕ್ತಿತ್ವದ ಹೆಚ್‌ ನರಸಿಂಹಯ್ಯನವರೊಡನೆ ಕೆಲವಾರು ವರುಷಗಳು ಕೆಲಸ ಮಾಡಿದ ನಂತರ ಹೆಣ್ಣುಮಕ್ಕಳೆಡೆಗಿನ ತಮ್ಮ ಕಾಳಜಿ, ಪ್ರೀತಿ ಹಾಗೂ ತರಲು ಬಯಸುವ ಸುಧಾರಣೆಗಳನ್ನು ಕಾರ್ಯರೂಪಕ್ಕಿಳಿಸಲು ನಮ್ಮ ಕಾಲೇಜು, ಎನ್‌ ಎಂ ಕೆ ಆರ್‌ ವಿ (ನಾಗರತ್ನಮ್ಮ ಮೇಡಾ ಕಸ್ತೂರಿರಂಗ ಶೆಟ್ಟಿ ರಾರ್ಷ್ಟ್ರೀಯ ವಿದ್ಯಾಲಯ ಮಹಿಳಾ ಕಾಲೇಜು) ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಸಮಯದಲ್ಲಿ ನಾನು ವಿದ್ಯಾರ್ಥಿನಿಯಾಗಿ ಅವರ ಮಡಿಲು ಸೇರಿದ್ದು.

ಒಂದು ವರುಷದ ಪಿ ಯು ಸಿ  ಕೋರ್ಸ್‌ ಇದದ್ದು ಎರಡು ವರ್ಷಗಳಾದ ಮೊದಲ ವರ್ಷದ ವಿದ್ಯಾರ್ಥಿನಿ ನಾನು.  ಕನ್ನಡ ಮೀಡಿಯಂನಿಂದ ಇಂಗ್ಲೀಷ್‌ ಮೀಡಿಯಂಗೆ ಹೋದದ್ದರಿಂದಲೋ, ಎರಡು ವರ್ಷದ ಕೋರ್ಸಿನಲ್ಲ್ಲಿ ಏನೇನು ಬದಲಾವಣೆಗಳು ಇರಬಹುದೆಂಬ ಕುತೂಹಲದಿಂದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ ಹೆಚ್‌ ಓ ಡಿಗಳ ಹೈಸ್ಟ್ಯಾಂಡರ್ಡ್‌ ಗಳಿಂದಲೋ, ಭಾಷೆಯ ತೊಂದರೆಯಿಂದಲೋ ಎರಡು ಮೂರು ಸಲ ಪಿಯುಸಿಯಲ್ಲಿ ಫೇಲಾಗಿಬಿಟ್ಟಿದ್ದೆ.  ಬೆಂಗಳೂರಿನಲ್ಲಿದ್ದ ಅಣ್ಣ ನಮ್ಮೂರಿನಲ್ಲೇ ಇರುವುದು ಬೇಡ, ಬದಲಾವಣೆಯಾಗಲಿ ಎಂಬ ಉದ್ದೇಶದಿಂದ ಬೆಂಗಳೂರಿಗೆ ಕರೆತರಲು ಯೋಚಿಸಿದಾಗ ಎದುರಾದ ಪ್ರಶ್ನೆ – ಈ ಫೇಲ್‌ ಗುಡ್ಡುವಿಗೆ ಯಾರು ಸೀಟು ಕೊಡುತ್ತಾರೆ? ಎಂಬುದು.  ಅಣ್ಣನ ಸ್ನೇಹಿತರೊಬ್ಬರು ತಂದುಕೊಟ್ಟ ಕಾಲೇಜಿನ ಬ್ರೋಷರಿನಲ್ಲಿದ್ದ, ಊಹಿಸಲಾರದ ಸುಧಾರಣೆಯ ಸಾಲುಗಳು – ಆರ್‌ ಯು ಎ ಥರ್ಡ್‌ ಕ್ಲಾಸ್‌ ಸ್ಟೂಡೆಂಟ್?‌ ಕಮಾನ್‌, ನೋ ಪ್ರಾಬ್ಲಮ್‌, ಡೋಂಟ್‌ ವರಿ, ಚಿಯರ್‌ ಅಪ್, ಯು ಕ್ಯಾನ್‌  ಬಿಕಂಮ್‌ ಅ ಫಸ್ಟ್‌ ಕ್ಲಾಸ್‌ ಸಿಟಿಜ಼ನ್!‌ ಎಂತಹ ಉದಾತ್ತ ಧ್ಯೇಯ! ಬರಿಯ ಬ್ರೋಷರ್‌ ಪದಗಳಲ್ಲ ಅವು, ಚಿ ನ ಮಂಗಳಾ ಅವರ ನೇತೃತ್ವದಲ್ಲಿ, ಅರ್ಜಿ ಬಂದ ರಾಶಿಯಲ್ಲಿ ಹೆಚ್ಚು ಬಾರಿ ಫೇಲ್‌ ಆದವರಿಗೆ ಮೊದಲ ಆದ್ಯತೆ!

ಅವರನ್ನು ನಾವೆಲ್ಲರೂ ಕರೆಯುತ್ತಿದುದೇ ʼಪ್ರಿನ್ಸಿʼ ಎಂದು.  ಒಮ್ಮೆ ಕೇಳಿಸಿಕೊಂಡ ಅವರು ನಕ್ಕು ಸುಮ್ಮನಾಗಿ ಅದರ ಕುರಿತೇ ಎರಡು ಸಾಲುಗಳನ್ನು ಕಾಲೇಜಿನಿಂದ ಪ್ರತಿವರುಷ ಹೊರತರುತ್ತಿದ್ದ  ಮ್ಯಾಗಜ಼ಿನ್ನಲ್ಲಿ ಬರೆದಿದ್ದ ನೆನಪು ನನಗೆ ಈಗಲೂ ಇದೆ.

ಒಮ್ಮೆಯಂತೂ ಬಸ್‌ ಪಾಸಿಗೆ ಸಹಿ ತೆಗೆದುಕೊಳ್ಳಬೇಕಿತ್ತು, ಅವರ ಕೋಣೆಯೊಳಗೆ ಹೋಗಲು ಭಯ, ಆತಂಕ, ಬಾಗಿಲ್ಲಿ ನಿಂತು ಧೈರ್ಯವನ್ನು ಒಟ್ಟುಗೂಡಿಸಿಕೊಳ್ಳಬೇಕಿದ್ದರೆ ದುತ್ತೆಂದು ಅವರೇ ಆಚೆ ಬಂದು ಬಿಡಬೇಕೇ?

ಏನು? ಎಂದು ಕೇಳಿದ ಅವರು ಮುಖದಲ್ಲಿ ಅವರ ಎಂದಿನ ಆತ್ಮವಿಶ್ವಾಸ ತುಂಬುವ ನಗೆಯೊಂದಿಗೆ ಕೈಯಲ್ಲಿದ್ದ ಪೆನ್ನಿನಿಂದ ಸಹಿ ಹಾಕಿ, ಆಫಿಸಿನಲ್ಲಿ ಸೀಲ್‌ ಹಾಕಿಸಿಕೊಳ್ಳಲು ಹೇಳಿದ್ದು, ನನಗೆ ನಂಬಲಾರದ ಆಶ್ಚರ್ಯ! ಏನೇನು ಪ್ರಶ್ನೆಗಳನ್ನು ಕೇಳುತ್ತಾರೋ ಎಂದು ಹೆದರಿದ್ದೆ ನಾನು.

ಹಾಗೆಂದು ಎಲ್ಲಕ್ಕೂ ಹಾಗಲ್ಲ, ಫ್ರೀಶಿಪ್‌, ಆಫ್‌ ಫ್ರೀ ಶಿಪ್ಗಳ ಅರ್ಜಿ  ಗುಜರಾಯಿಸಬೇಕಿದ್ದರೂ, ಒಮ್ಮೆ ಅವರನ್ನು ಕಾಣಬೇಕಿತ್ತು.  ಅವರೊಮ್ಮೆ ಅಡಿಯಿಂದ ಮುಡಿಯವರೆಗೆ ನೋಡುವ ನೋಟದಲ್ಲೇ ನಮ್ಮ ಇಡೀ ವ್ಯಕ್ತಿತ್ವ ಸ್ಕ್ಯಾನ್‌ ಆಗಿ ಬಿಡುತಿತ್ತು.  ಒಂದಿಬ್ಬರು ವಿದ್ಯಾರ್ಥಿನಿಯರು ಫೀಸ್‌ ಕಟ್ಟುವ ಶಕ್ತಿಯಿದ್ದರೂ ಅರ್ಜಿಹಾಕಲು ಹೋದವರು ಅವರ ಸ್ಕ್ಯಾನಿಂಗ್‌ ಕಣ್ಣುಗಳಿಗೇ ಸಿಕ್ಕಿ ಬಿದ್ದುಬಿಟ್ಟಿದ್ದರು.

ಇರಲಿ, ಅವರು ತಂದ ಸುಧಾರಣೆಗಳತ್ತ ನೋಟ ಹರಿಸೋಣ. ಅವರು ಹಲವಾರು ವಿಭಾಗಗಳನ್ನು ಸ್ಥಾಪಿಸಿದರು.  ಅಂದಿನ ದಿನಗಳಲ್ಲೇ ಹೂ ಜೋಡಣೆಯಾದ ʼಇಕಬೆನಾʼ, ವರ್ಣ ಚಿತ್ರಕಲೆ, ಶ್ರಮದಾನ, ಸಂಗೀತ, ನಾಟಕ, ಅಟೋಟಗಳು . .  ಹೀಗೆ ಪಾಠ ಪ್ರವಚನಗಳೊಂದಿಗೇ ಕ್ರಿಯಾಶೀಲವಾಗಿಯೂ ವಿದ್ಯಾರ್ಥಿನಿಯರಲ್ಲಿ ಹುದುಗಿದ್ದ ಆಸಕ್ತಿ, ಅಭಿರುಚಿಗಳನ್ನು ಹೊರತರುವಲ್ಲಿ ಯಶಸ್ವಿಯಾದರು.  ವರದಕ್ಷಿಣೆಯ ಕಡುವಿರೋಧಿಯಾಗಿದ್ದರವರು.  ಯಾವುದೇ ಅನಿಸಿಕೆ, ಅಭಿಪ್ರಾಯಗಳನ್ನು ಉಪದೇಶದ ರೂಪದಲ್ಲಿ ಹೇರುತ್ತಿರಲಿಲ್ಲ.  ಆದರೆ ಅವುಗಳ ಪ್ರಭಾವ ನಮ್ಮ ಮೇಲೆ ಗಾಢವಾಗಿ ಆಗುತ್ತಿದ್ದವು.  ಅಂತಹ ಮಾಂತ್ರಿಕ ವ್ಯಕ್ತಿತ್ವ ನಮ್ಮ ಪ್ರೀತಿಯ ಮಂಗಳಾ ಮೇಡಂ ಅವರದು. ನನ್ನ ಪದವಿ ಮುಗಿಯುವಷ್ಟರಲ್ಲೇ ಮನೆಯಲ್ಲಿ ಗಂಡು ನೋಡುತ್ತಿದ್ದರು.  ಒಂದು ಹುಡುಗನ ಮನೆಯವರು ಸ್ವಲ್ಪವೇ ವರದಕ್ಷಿಣೆ ಕೇಳಿದರೆಂದು ನಾನು ವಿರೋಧಿಸಿಯೇ ಬಿಟ್ಟೆ.   – ಮಂಗಳಾ ಮೇಡಂ ಸ್ಟೂಡೆಂಟ್‌ ಆಗಿ ನನ್ನ ಮದುವೆ, ವರದಕ್ಷಿಣೆಯೊಂದಿಗೇ. .  ಇಂಪಾಸಿ಼ಬಲ್‌ – ಎಂದುಬಿಟ್ಟೆ.  ಯಾರ ಎದುರೂ ನಿಂತು ಮಾತನಾಡಲೂ ಹೆದರುತ್ತಿದ್ದ  ನನ್ನಲ್ಲಿ, ಮನಸ್ಸಿನಲ್ಲಿ ಹುದುಗಿದ್ದ ಅನಿಸಿಕೆ, ಅಭಿಪ್ರಾಯಗಳು ಪರಿಪಕ್ವಗೊಂಡು ಆತ್ಮಸ್ಥೈರ್ಯವಾಗಿ ರೂಪುಗೊಳ್ಳುವಲ್ಲಿ ಮಂಗಳಾ ಮೇಡಂ, ಅವರ ಟೀಂನ ಉಪಾಧ್ಯಾಯರುಗಳು ವಹಿಸಿದ ಪಾತ್ರ ಅಷ್ಟಿಷ್ಟಲ್ಲ.  ಹಾಗೆಂದು ನಾನೇನೂ ಕಾಲೇಜಿನ ಬ್ರೈಟ್‌ ವಿದ್ಯಾರ್ಥಿನಿಯಾಗಿರಲಿಲ್ಲ, ಸಾಮಾನ್ಯರಲ್ಲಿ ಅತೀ ಸಾಮಾನ್ಯಾಳಾದರೂ ಜೀವನವನ್ನು ಎದುರಿಸುವ ಶಕ್ತಿ ಪಡೆದದ್ದು ಅಲ್ಲಿಂದಲೇ ಎಂದರೆ ತಪ್ಪಾಗಲಾರದು.  ಇಂದೂ ನನ್ನ ಸ್ವ-ವಿವರಗಳಲ್ಲಿ, ಚಿ ನಾ ಮಂಗಳಾ ಅವರಿಂದ ಪ್ರಭಾವಗೊಂಡ .. ಎಂದೇ ಬರೆದುಕೊಳ್ಳುತ್ತೇನೆ.

ಹಲವಾರು ವಿಭಾಗಗಳಿದ್ದೆವು ಎಂದೆನಲ್ಲಾ, ಅವುಗಳಲ್ಲಿ ಭಾಷಾ ವಿಭಾಗಗಳೂ ಇದ್ದವು.  ಕನ್ನಡ ವಿಭಾಗ, ಇಂಗ್ಲೀಷ್‌ ವಿಭಾಗ ಎಂದು. ಹೊಸದಾಗಿ ಸಂಸ್ಕೃತ ವಿಭಾಗವನ್ನೂ ಪ್ರಾರಂಭಿಸಿದರು.  ಆಗೆಲ್ಲಾ ಸಂಸ್ಕೃತ ಅಧ್ಯಯನಶೀಲ ಭಾಷೆಯಾಗಿತ್ತೇ ಹೊರತು ಆಡುಭಾಷೆಯಾಗಿರಲಿಲ್ಲ. ಸಂಸ್ಕೃತದ ಪ್ರಖ್ಯಾತ ಪಂಡಿತರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.  ಇಂದು ಸಂಸ್ಕೃತವಲಯದಲ್ಲಿ ಪ್ರೊ ಆರ್‌ ಲೀಲಾ ಅವರನ್ನು ಅರಿಯದವರಾರಿದ್ದಾರೆ? ಅವರು ಆಗಷ್ಟೇ ನಮ್ಮ ಕಾಲೇಜಿನ ಸಂಸ್ಕೃತ ವಿಭಾಗಕ್ಕೆ ಉಪನ್ಯಾಸಕಿಯಾಗಿ ಸೇರ್ಪಡೆಗೊಂಡಿದ್ದರು.  ಸಭೆಯನ್ನು ಸ್ವಾಗತಿಸುವ ಹೊಣೆ ಅವರ ಮೇಲಿತ್ತು.  ಕಾರ್ಯಕ್ರಮ ಪ್ರಾರಂಭವಾಯಿತು.  ಸ್ವಾಗತ ಕೋರಲು ಲೀಲಾ ಮೇಡಂ ವೇದಿಕೆಗೆ ಬಂದರು.  ಅವರಲ್ಲಿದ್ದ ಪ್ರತಿಭೆಯನ್ನವರಿತವರೇನೋ ಎನ್ನುವಂತೆ ಅಲ್ಲೇ ವೇದಿಕೆಯ ಮೇಲಿದ್ದ ಚಿ ನಾ ಮಂಗಳಾ ಅವರು – ಸಂಸ್ಕೃತದಲ್ಲೇ ಸ್ವಾಗತ ಭಾಷಣ ಮಾಡಿರಿ – ಎಂದುಬಿಡಬೇಕೇ? ಒಂದೇ ಒಂದು ಕ್ಷಣ ದಂಗಾದವರಂತೆ ಕಂಡ ಪ್ರೊ ಲೀಲಾ ಅವರು, ಅದನ್ನು ಚಾಲೆಂಜಾಗಿ ಸ್ವೀಕರಿಸಿ, ಸಾವರಿಸಿಕೊಂಡು ನಿರರ್ಗಳವಾಗಿ ಸಂಸ್ಕೃತದಲ್ಲೇ ಸ್ವಾಗತವನ್ನು ಕೋರಿದರು.  ನಮಗೆಲ್ಲಾ ಆಗಷ್ಟೇ ದೆಹಲಿಯ ಆಕಾಶವಾಣಿಯಿಂದ ಮೂಡಿಬರುತ್ತಿದ್ದ ಸಂಸ್ಕೃತ ವಾರ್ತೆಗಳಂತೆ ಕೇಳಿಬಂದವು. ಇಂದು ಪ್ರೊ ಲೀಲಾ ಅವರನ್ನು ಟಿವಿಯಲ್ಲಿ, ಯು ಟ್ಯೂಬಿನಲ್ಲಿ ಟಿ ಎನ್‌ ಸೀತಾರಾಂ ಅವರ ಮಾಯಾಮೃಗ ಸೀರಿಯಲ್ಲಿನಲ್ಲಿ ನೋಡಿದಾಗ, ಪತ್ರಿಕೆಗಳಲ್ಲಿ ಅವರ ಪ್ರಭುದ್ಧ  ಲೇಖನಗಳು ಪ್ರಕಟಗೊಂಡಾಗಲೆಲ್ಲಾ ಈ ಘಟನೆ ನೆನಪಿಗೆ ಬರುತ್ತದೆ.    

ಆಗಾಗ್ಗೆ ಯುವಮನಸ್ಸುಗಳಿಗೆ ಉಪಯುಕ್ತವಾಗುವಂತಹ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದರು.  ಕೊನೆಯಲ್ಲಿ ವಿಧ್ಯಾರ್ಥಿನಿಯರಲ್ಲಿ ಹುಟ್ಟುವ ಸಂದೇಹಗಳಿಗಾಗಿ, ಪ್ರಶ್ನೆಗಳಿಗಾಗಿ ಸಂವಾದವೂ ಇರುತಿತ್ತು.  ನನಗೆ ನೆನಪಿರುವುದು ಡಾ ಅನುಪಮಾ ನಿರಂಜನ ಅವರು ಬಂದದ್ದು. ಇನ್ನೂ ಹಲವರು ಬಂದಿದ್ದರು. 

ಆಗ ನಮ್ಮ ಎನ್‌ ಎಂ ಕೆ ಆರ್‌ ವಿ ಜೂನಿಯರ್‌ ಕಾಲೇಜಿನಲ್ಲಿ ಜೆ ಜಯಲಕ್ಷ್ಮಿ ಎಂಬುವರು ಪ್ರಾಂಶುಪಾಲರಾಗಿದ್ದರು.  ಬೇರೇ ಕಾಲೇಜಿನ ನಮ್ಮ ಗೆಳತಿಯರು – ನಿಮ್ಮ ಕಾಲೇಜಿನಲ್ಲಿ ಬಿಡ್ರಮ್ಮಾ, ಜಪಾನ್‌ ಜಯಲಕ್ಷ್ಮಿ, ಚೀನಾ ಮಂಗಳಾ ಇದ್ದಾರೆ – ಎಂದು ಲಘುವಾಗಿ ಮಾತನಾಡಿದಾಗ, ನಾವುಗಳು – ಹೂಂ ಹೌದು, ನಮ್ಮ ಭಾರತದ ಸುಗುಣಗಳೊಂದಿಗೆ ಜಪಾನಿಯರ ಕಾರ್ಯತತ್ಪರತೆಯನ್ನೂ ಚೀನಿಯರ ಕಷ್ಟಸಹಿಷ್ಣತೆಯನ್ನೂ ಇನ್ನೂ ಮುಂತಾದ ಹಲವಾರು ಒಳ್ಳೆಯ ಗುಣಗಳನ್ನು ಕಲಿಯುತ್ತೇವೆ – ಎನ್ನುತ್ತಿದ್ದೆವು.

ಹಾಂ, ಅವರ ಟೀಂ ಎಂದಾಗ ಇಲ್ಲಿ ಒಂದೆರಡು ವಿಷಯಗಳನ್ನು ಹಂಚಿಕೊಳ್ಳಲೇ ಬೇಕು.  ನಾನಾಗ ಮೊದಲ ವರ್ಷದ ಬಿ.ಎಸ್ಸಿ., ವಿದ್ಯಾರ್ಥಿನಿ.  ತಾತ್ಕಾಲಿಕ ಹುದ್ದೆಯಲ್ಲಿದ್ದ ಒಬ್ಬರು ಟೀಚರ್‌ ಮ್ಯಾಥಮೆಟಿಕ್ಸ್‌ ತೆಗೆದುಕೊಳ್ಳುತ್ತಿದ್ದರು.  ಅದೇನೋ ವ್ಯಾತ್ಯಾಸವಾಗಿ ಆ ಸರ್ತಿ ಫಲಿತಾಂಶ ಸಮಾಧಾನಕರವಾಗಿರಲಿಲ್ಲ.

ಒಂದು ಭಾನುವಾರ ನಮಗೆಲ್ಲಾ ಸ್ಪೆಷಲ್‌ ಕ್ಲಾಸುಗಳು.  ಇಪತ್ತು ನಿಮಿಷಗಳ ಬ್ರೇಕ್‌ ನೀಡಿ ಮೂವರು ಟೀಚರುಗಳು ಮ್ಯಾಥಮೆಟಿಕ್ಸಿನ ಬೇರೆ ಬೇರೆ ವಿಭಾಗಗಳಲ್ಲಿ ಪಾಠ ಮಾಡಿದರು.  ನಂತರ ತರಗತಿಗೆ ಬಂದ ಮಂಗಳಾ ಮೇಡಂ – ಈ ವರ್ಷ ನನಗೆ ಉತ್ತಮ ಫಲಿತಾಂಶ ಬೇಕೇ ಬೇಕು.  ಇಂದು ಪಾಠ ಮಾಡಿದ ಮೂವರಲ್ಲಿ ಯಾರನ್ನು ತೆಗೆದುಕೊಳ್ಳೋಣ, ಆಯ್ಕೆ ನಿಮ್ಮದೇ, ಫಲಿತಾಂಶ ನನಗೆ!

ಪ್ರಾಥಮಿಕ ಸಂದರ್ಶನವನವನ್ನು ಮುಗಿಸಿ ಶಾರ್ಟ್‌ ಲಿಸ್ಟ್‌ ಆದ ಮೂವರಲ್ಲಿ ಉಪಾಧ್ಯಾಯರನ್ನು ಆರಿಸುವ ಕೆಲಸವನ್ನು ಓಟ್‌ ಮಾಡುವ ಮೂಲಕ ನಮಗೇ ಬಿಟ್ಟು, ಉತ್ತಮ ಫಲಿತಾಂಶಕ್ಕಾಗಿ ನಾವೂ ಕಮಿಟ್‌ ಆಗುವಂತೆ ಮಾಡಿದ ಆ ವಿಶನ್ನಿಗೆ ಏನ್ನನ್ನೋಣ?

ಡಿಗ್ರಿ ಕಾಲೇಜಿನಲ್ಲಿ ಪ್ರಾರ್ಥನೆಯನ್ನು ಪನಃರಾರಂಭಿಸಿದರು.  ದೈನಂದಿನ ಶ್ಲೋಕಗಳೂ, ಭಗವದ್ಗೀತೆಯ ಎರಡನೇ ಅಧ್ಯಾಯವೂ ಇರುತಿತ್ತು.  ʼಇದೇನು ಸ್ಕೂಲ್‌ ಕೆಟ್ಟು ಹೋಯಿತಾ?ʼ ಎಂದು ಮೂಗುಮುರಿದವರೆಲ್ಲಾ ದಿನಗಳದಂತೆ ಮೋಡಿಗೊಳಗಾದವರಂತೆ ಪ್ರಾರ್ಥನೆಯ ವೇಳೆಗೆ ಹಾಜರಿರತೊಡಗಿದೆವು.  ಅದರ ಪ್ರಾಮುಖ್ಯತೆ, ಅಂದಲ್ಲ, ಇಂದಲ್ಲ, ಎಂದೆಂದಿಗೂ ನಮ್ಮ ಜೀವನದಲ್ಲಿ ಶಾಂತಿ ಸಮಾಧಾನಗಳನ್ನು ಹೊಂದುವಲ್ಲಿ ತಿಳಿಯುತ್ತಿದೆ.  ಇಂದಿಗೂ ಪ್ರತೀದಿನ ನಾನು ಅವುಗಳನ್ನು ಪಠಿಸುತ್ತೇನೆ.  ಬಾಯಿಪಾಠವಾಗಿರುವುದರಿಂದ ಹೆಚ್ಚುವರಿ ಸಮಯವನ್ನೂ ಅದು ಬೇಡುವುದಿಲ್ಲ.

ಮೊನ್ನೆ ಅಚಾನಕ್ಕಾಗಿ ನಮ್ಮ ಪದವಿಯ ಐವರು ಗಳಸ್ಯ ಕಂಠಸ್ಯ ಗೆಳತಿಯರು ಭೇಟಿಯಾದಾಗ ತಿಳಿದು ಬಂದ ವಿಷಯ, ನನ್ನಂತೆಯೇ ಅವರುಗಳಿಗೂ ಅದು ದೈನಂದಿನ ಶಾಂತಿ ಸಮಾಧಾನ ಹೊಂದುವ ಕ್ರಿಯೆಯಾಗಿದೆ ಎಂಬುದು.

ಹಾಗೆಯೇ ಸಂಬಂಧಗಳನ್ನು ನಿಭಾಯಿಸುವ ಪರಿ, ಬಾಂದವ್ಯಗಳ ಬೆಸುಗೆ ಮುಂತಾದ ಮಾನವೀಯತೆಯ ನೆಲೆಕಟ್ಟಿನ   ವಿದ್ಯಾಮಾನಗಳು ನಮಗೆ ಇಲ್ಲಿಂದಲೇ ದೊರೆತವು.  ಇದಕ್ಕೆ ಸಾಕ್ಷಿ ಎಪತ್ತರ ಹರೆಯದಲ್ಲೂ ಇಪತ್ತರ ಹರೆಯದಲ್ಲಿದ್ದ ಜೊತೆಗಾತಿಯರೊಂದಿಗಿನ ಅನುಬಂಧ, ಅಭಿಮಾನವನ್ನು ಜತನದಿಂದ ಕಾಪಿಟ್ಟುಕೊಂಡಿರುವುದು.

ಹೀಗೆ      ದೂರದೃಷ್ಟಿಯನ್ನಿರಿಸಿಕೊಂಡು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಹಲವಾರು ಸುವಿಚಾರಗಳು, ಕಾರ್ಯವಿಧಾನಗಳ ಬೀಜಗಳನ್ನು ನಮಗರಿಯದಂತೆ ನಮ್ಮಲ್ಲಿ ಬಿತ್ತಿದವರು ನಮ್ಮ ಪ್ರೀತಿಯ ಮೇಡಂ, ಚಿ ನಾ ಮಂಗಳಾ ಅವರು.

ಇತ್ತೀಚೆಗೆ ಯೋಗ ವಿಶ್ವ ಮಾನ್ಯತೆಯನ್ನು ಪಡೆದರೂ ಅದರ ಮಹತ್ವವನ್ನು ಅಂದೇ ಮನಗಂಡು ಕನ್ಯಾಕುಮಾರಿಯ ವಿವೇಕಾನಂದ ಯೋಗ ಕೇಂದ್ರದ ಡಾ ನಾಗರತ್ನ ಅವರಿಂದ ನಮ್ಮೆಲ್ಲಾ ಆಸಕ್ತರಿಗೆ ಇಪ್ಪತ್ತೊಂದು ದಿನಗಳ ಯೋಗತರಗತಿಯನ್ನು ಏರ್ಪಡಿಸಿದ್ದರು.  ನಾವೆಲ್ಲರೂ ಹತ್ತನೇ ತರಗತಿಯಿಂದಲೇ ಸೀರೆ ಉಡುತ್ತಿದ್ದೆವು. ಆಗಿನ್ನೂ ಚೂಡಿದಾರ್‌, ಸೆಲ್ವಾರ್‌ ಕಮೀಜ಼್ ಇಷ್ಟೊಂದು ಜನಪ್ರಿಯವಾಗಿರಲಿಲ್ಲ.  ಪ್ಯಾಂಟ್‌ ಶರ್ಟಾದರೂ ಸರಿ ಎಂದಿದ್ದರು.  ಸರಿ ಮನೆಯಿಂದ ಅಣ್ಣಂದಿರ, ತಮ್ಮಂದಿರ ಬಟ್ಟೆಗಳನ್ನು ಬ್ಯಾಗಿನಲ್ಲಿಟ್ಟುಕೊಂಡು ಹೋಗಿದ್ದೆವು.  ಅವುಗಳನ್ನು ಧರಿಸಲು ಸಂಕೋಚಿಸುತ್ತಾ, ಧರಿಸಿದವರನ್ನು ಒಬ್ಬರನ್ನು ಕಂಡು ಇನ್ನೊಬ್ಬರು ನಗುತ್ತಿದ್ದಾಗ, ಏಕೆಂದರೆ ಯಾವು ಯಾವುದೋ ಅಳತೆಯಬಟ್ಟೆಗಳಾದ್ದರಿಂದ ಬಿದ್ದು ಬಿದ್ದು ನಗುತ್ತಿದ್ದರೆ, ನಮ್ಮ ಮಂಗಳಾ ಮೇಡಂ ಸೆಲ್ವಾರ್‌ ಕಮೀಜ಼್ ಧರಿಸಿ ಆತ್ಮವಿಶ್ವಾಸವೇ ಮೂರ್ತಿವೆತ್ತಂತೆ ನಡೆದು ಬಂದು ನಮ್ಮೊಂದಿಗೆ ಯೋಗ ಮಾಡಲು ನಿಂತುಕೊಂಡಾಗ ನಮ್ಮ ಹಿಂಜರಿಕೆ, ಸಂಕೋಚಗಳು ಹಾರಿ ಹೋಗಿ ಶಿಬಿರದ ಪೂರ್ಣ ಪ್ರಯೋಜನ ಪಡೆದ ನಾವುಗಳು ಇಂದೂ ಅವುಗಳ ಫಲವನ್ನುಣ್ಣುತ್ತಿದ್ದೇವೆಂದರೆ ಮಂಗಳಾ ಮೇಡಂ ಅವರ ವಿಚಾರಧಾರೆಗಳ ಪ್ರಭಾವವನ್ನೂ, ಅವರು ಮಾತುಗಳಿಂದಲ್ಲ, ಕೃತಿಗಳಿಂದ ಹುರಿದುಂಬಿಸುತ್ತಿದ್ದ ರೀತಿಯನ್ನೂ ಅರಿಯಬಹುದು.  ಈ ಶಿಬಿರದ ಅನುಭವಗಳನ್ನೂ ಒಳಗೊಂಡ ಒಂದು ಲೇಖನವೂ ನನ್ನ ಲೇಖನಿಯಿಂದ ಹೊರ ಬಂದಿದೆ.  ಅದು ಅಂತರಜಾಲ ಪತ್ರಿಕೆಯಲ್ಲೂ, ನನ್ನ ಸಂಕಲನದಲ್ಲೂ ಸ್ಥಾನ ಪಡೆದಿದೆ.

ಚಿಕ್ಕ ಚಿಕ್ಕ ವಿಷಯಗಳಿಗೂ ಗಮನ ಹರಿಸುವ ಅಗತ್ಯ ಮತ್ತು ಅದರಿಂದಾಗುವ, ಪಡೆಯುವ ಉಪಯೋಗಕ್ಕೊಂದು ಉದಾಹರಣೆ.  ಯೋಗ ಶಿಬಿರ ನಡೆಸಲು ಬಂದ ಡಾ ನಾಗರತ್ನ ಅವರು ಕಡೆಯ ಪಕ್ಷ ಎರಡು ಗಂಟೆಗಳ ಎಮ್ಟೀ ಸ್ಟಮಕ್‌ ಇರಬೇಕೆಂದಿದ್ದರು.  ನಮಗೆ ಯೋಗ ತರಗತಿಗಳು ಮಧ್ಯಾನ್ಹ ಮೂರುವರೆ ಗಂಟೆಗೂ, ಭೋಜನ ವಿರಾಮ ಒಂದೂವರೆ ಗಂಟೆಗೂ ಇತ್ತು.  ಮಂಗಳಾ ಮೇಡಂ ಪೂರ್ವಭಾವೀ ಮೀಟಿಂಗಿನಲ್ಲಿ ಘೋಷಿಸಿಬಿಟ್ಟರು.  – ಶಿಬಿರ ನಡೆಯುವ ಇಪ್ಪತ್ತೊಂದು ದಿನಗಳು ಒಂದು ಗಂಟೆ ಇಪ್ಪತ್ತು ನಿಮಿಷಗಳಿಗೇ ಭೋಜನ ವಿರಾಮದ ಬೆಲ್‌ ಹೊಡೆಯಲು ಹೇಳುತ್ತೇನೆ, ಹತ್ತು ನಿಮಿಷಗಳಲ್ಲಿ ನಿಮ್ಮ ಊಟವನ್ನು ಪೂರೈಸಿಕೊಳ್ಳಿರಿ – ಎಂದರು. ಉಪಾಧ್ಯಾಯರುಗಳೊಡನೆ ಅಗತ್ಯತೆಯನ್ನು ವಿವರಿಸಿ ಹಾಗೆಯೇ ಮಾಡಿಬಿಟ್ಟರೂ ಕೂಡ.

ನಾವು ಎರಡನೇ ವರ್ಷದ ಬಿ.ಎಸ್ಸಿ., ಯಲ್ಲಿದ್ದಾಗ ಇಂಗ್ಲೀಷ್‌ ಭಾಷೆಯ ನಾನ್‌ – ಡೀಟೈಲ್‌ ಆಗಿ ಶೇಕ್ಸಪಿಯರ್‌ ರಚಿಸಿದ ಜೂಲಿಯಸ ಸೀಜ಼ರ್‌ ನಾಟಕ ಇತ್ತು.  ಪ್ರಾಂಶುಪಾಲರಾಗಿದ್ದ ಚಿ ನ ಮಂಗಳಾ ಅವರ ಅಗಾಧ ಕಾರ್ಯ ಬಾಹುಳದ ನಡುವೆಯೂ ವಿಜ್ಞಾನದ ವಿದ್ಯಾರ್ಥಿಗಳಾದ ನಮಗೂ ಅವರ ಬೋಧನಾ ವೈಖರಿಯ ಪರಿಚಯವಾಗುವ ಅವಕಾಶವಾಯಿತು.  ಅಂದರೆ ಅವರೇ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು.  ಆದರೆ ಎಷ್ಟೋ ವೇಳೆ ಅವರಿಗೆ ತರಗತಿಗೆ ಬರಲೇ ಆಗುತ್ತಿರಲಿಲ್ಲ.  ಅವರು ತೆಗೆದುಕೊಂಡ ತರಗತಿಗಳು ಮಾತ್ರ ಇಂಗ್ಲೀಷ್‌ ಸಾಹಿತ್ಯದ ರಸದೌತಣವನ್ನೇ ನೀಡಿದವು.  ನಾಟಕದ ಕೊನೆಯನ್ನು ತಾರ್ಕಿಕವಾಗಿ ಮುಗಿಸಲಾಗಿರಲಿಲ್ಲ.  ನಮಗೆಲ್ಲಾ ತರಗತಿಗಳು ಮುಗಿದು ಅಭ್ಯಾಸದ ರಜೆ ಆರಂಭವಾಗಿಬಿಟ್ಟಿತ್ತು.  ಎಲ್ಲರಿಗೂ ತಿಳಿದಂತೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಭಾಷೆಗಳಲ್ಲಿ ಪಾಸಾದರೆ ಸಾಕೆಂಬ ಧೋರಣೆಯಿರುತ್ತದೆ.  ಹಾಗಾಗಿ ಎಲ್ಲರೂ ನಮ್ಮ ಐಚ್ಛಿಕ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೆವು.

ಒಂದು ದಿನ ಅಂಚೆಯಲ್ಲಿ ಪೋಸ್ಟ್‌ ಕಾರ್ಡ್‌ ಬಂತು.  ಭಾನುವಾರ ಹನ್ನೊಂದು ಗಂಟೆಗೆ ಕಾಲೇಜಿಗೆ ಬರಬೇಕೆಂದೂ, ವಿಶೇಷ ತರಗತಿ ಇರುವುದೆಂದೂ ತಿಳಿಸಲಾಗಿತ್ತು.  ಹೋಗಿ ನೋಡಿದರೆ ನಮ್ಮ ತರಗತಿಯ ಪ್ರತೀ ವಿದ್ಯಾರ್ಥಿನಿಯೂ ಹಾಜರಿದ್ದಳು.  ಎಲ್ಲರ   ಮನೆಗೂ ಪೋಸ್ಟ್‌ ಹೋಗಿತ್ತು.  ಅದನ್ನು ಮಂಗಳಾ ಮೇಡಂ ಕಳುಹಿಸಿದ್ದರು.  ಅವರ ಮನಸ್ಸಿಗೆ ಸಮಾಧಾನವಾಗುವಂತೆ ತರಗತಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲದ್ದರಿಂದ ಅಂಚೆ ಮುಖಾಂತರ ಎಲ್ಲರನ್ನೂ ಕರೆಸಿಕೊಂಡು ತರಗತಿಗಳನ್ನು ಪ್ರಾರಂಭಿಸಿದರು.  ಅಮೋಘ ಒಂದೂವರೆ ಗಂಟೆಯಷ್ಟು ಕಾಲ ಅವರು ವಿವರಿಸಿದ ರೀತಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತ್ತು, ಅದಿನ್ನೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.  ಸೀಜ಼ರ್‌ ಪ್ರಾಣ ಬಿಡುವಾಗ – ಯೂ ಟೂ ಬ್ರೂಟ್‌ – ಪದಪುಂಜವನ್ನೂ ಸನ್ನಿವೇಶವನ್ನೂ ಅವರು ವಿವರಿಸಿದ ರೀತಿ, ಅವರು ನಿಲ್ಲಿಸಿದ ಪರಿ ಅನನ್ಯ.  ಇಡೀ ತರಗತಿ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶಬ್ಧವಾಗಿತ್ತು.  ಎಲ್ಲರೂ ಮೂರ್ತಿಗಳಂತೆ ಕುಳಿತಿದ್ದೆವು.  ಕೆನ್ನೆಗಳ ಮೇಲೆ ಕಣ್ಣೀರು ಧಾರೆ ಧಾರೆಯಾಗಿ ಹರಿಯುತಿತ್ತು – ರಿಯಲೀ ಯೂ ಆರ್‌ ಗ್ರೇಟ್‌ ಮೇಡಂ.

ಹೀಗಿತ್ತು ಮಂಗಳಾ ಮೇಡಂ ಅವರ ಬದ್ಧತೆ ಮತ್ತು ವಿವರಿಸುವ ಪರಿ.

ಹಾಗೆಯೇ ಮೈಸೂರಿನ ಕೆ ಆರ್‌ ಎಸ್ಸಿನಲ್ಲಿ ಮಗುವೊಂದರ ಕೈ ಮೊಸಳೆ ಬಾಯಿಗೆ ಈಡಾದಾಗ ತಾಯಿ ತೆಗೆದುಕೊಂಡ ಹೃದಯ ವಿದ್ರಾವಕ ನಿರ್ಧಾರದ ಸನ್ನಿವೇಶವನ್ನು ಮಂಗಳಾ ಮೇಡಂ ಅವರು ವಿವರಿಸಿದ ಪರಿಗೂ ಸಹ ಮನಸ್ಸು ಮೂಕವಾಗಿ ರೋಧಿಸುತಿತ್ತು.  ಅದೂ ಸಹ ನನ್ನ ಲೇಖನಿಯಿಂದ ಕಥೆಯಾಗಿ ಹೊರಹೊಮ್ಮಿ ಸಂಕಲನದಲ್ಲಿ ಕುಳಿತಿದೆ.

ಹೀಗೆ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗೆ, ವ್ಯಕ್ತಿತ್ವ ವಿಕಸನಕ್ಕೆ, ಸಾಮಾಜಿಕ, ಆರ್ಥಿಕ ಸ್ವಾವಲಂಬನೆಗೆ, ಸಂಬಂಧಗಳ ಮಹತ್ವ ಅರಿಯುವಿಕೆಗೆ, ಹುದುಗಿರುವ ಆಸಕ್ತಿ, ಪ್ರತಿಭೆಗಳನ್ನು ಹೊರತರುವುದಕ್ಕೆ ತಮ್ಮದೇ ಆದ ರೀತಿ ನೀತಿಗಳನ್ನು ಅಳವಡಿಸಿಕೊಂಡಿದ್ದರು ನಮ್ಮ ಮಂಗಳಾ ಮೇಡಂ.

ನಂತರದಲ್ಲಿ ತಿಳಿದದ್ದು, ಅವರು ನಮ್ಮ ಕಾಲೇಜಿನ ಪ್ರಿನ್ಸಿಪಾಲರಾಗಿ ಹುದ್ದೆಯನ್ನು ಅಲಂಕರಿಸುಚ ಮೊದಲು ದೆಹಲಿಯ ಅಮೆರಿಕಾ ಶಿಕ್ಷಣ ಪ್ರತಿಷ್ಠಾನ, ವಾಷಿಂಗಟನ್‌ ವಿದವಾಂಸರ ಅಂತರಾಷ್ಟ್ರೀಯ ವಿನಿಮಯ ಪರಿಷತ್ತು, ಬ್ರಿಟಿಷ್‌ ಕೌನ್ಸಿಲ್ಲುಗಳ ಸಹಯೋಗದಿಂದ ವಿದೇಶದಲ್ಲಿನ ವಿದ್ಯಾಭ್ಯಾಸ ಪದ್ಧತಿ ಅಧ್ಯಯನ ಮಾಡಲು ಅಮೆರಿಕಾ, ಇಂಗ್ಲೆಂಡ್‌, ಪ್ರಾನ್ಸ್‌ ಪ್ರವಾಸ ಮಾಡಿ ತಾವು ತರಬೇಕೆಂದುಕೊಂಡಿದ್ದ ಸುಧಾರಣೆಗಳನ್ನು ಒರೆಗೆ ಹಚ್ಚಿ ಪರಿಪಕ್ವವಾದ ಪದ್ಧತಿಯನ್ನು ನಮಗೆ ಉಣಬಡಿಸಿದರು ಎಂಬುದು.  ಮತ್ತೆ ೧೯೮೪ರಲ್ಲಿ ಅಮೆರಿಕಾ, ಇಂಗ್ಲೆಂಡ್‌, ಆಸ್ಟ್ರಿಯಾ, ಬೆಲ್ಜಿಯಂ, ಲಕ್ಸನ್ಬರ್ಗ, ಫ್ರಾನ್ಸ್‌, ಇಟಲಿ,, ಸ್ವಿಡ್ಜರಲೆಂಡ್‌ ದೇಶಗಳಿಗೂ ಭೇಟಿ ನೀಡಿ ತಮ್ಮ ಅನುಭವದ ಬಂಡಾರವನ್ನು ಹಿಗ್ಗಿಸಿಕೊಂಡರು ಎಂಬ ವಿಷಯವೂ ತಿಳಿದು ಬಂತು.

 ನನ್ನಂತಹ ಸಾವಿರಾರು ವಿದ್ಯಾರ್ಥಿನಿಯರಿಗೆ, ಯುವಜನತೆಗೆ ಆದರ್ಶಪ್ರಾಯರಾದ, ಮಾದರಿಯಾದ ಚಿ ನಾ ಮಂಗಳಾ ಅವರನ್ನು ಅಭಿವಂದಿಸುತ್ತಾ, ಅವರ ವಿದ್ಯಾರ್ಥಿನಿಯಾಗಿ ನನ್ನ ಮನದಾಳದಲ್ಲಿ ಹುದುಗಿದ್ದ ಭಾವನೆಗಳಿಗೆ ಅಕ್ಷರರೂಪ ನೀಡುವಂತಾದುದು ನನ್ನ ಸೌಭಾಗ್ಯವೆಂದೇ ಪರಿಗಣಿಸುತ್ತೇನೆ. 

 –  ಪದ್ಮಾ ಆನಂದ್‌, ಮೈಸೂರು                                 

9 Comments on “ಬಾಲಕಿ ಬರೆದ ವಿನಂತಿ

  1. ಚಿ ನಾ ಮಂಗಳಾ ಮೇಡಂ ಅವರನ್ನು ನೆನಪಿಸಿದ್ದಕ್ಕೆ ಮತ್ತು ಅವರ ವ್ಯಕ್ತಿತ್ವ, ಸಾಧನೆ, ಬೋಧನೆ ಮತ್ತು
    ವಿದ್ಯಾರ್ಥಿ ಸಹಸ್ಪಂದನೆಗಳತ್ತ ಬೊಟ್ಟು ಮಾಡಿ ಬರೆದಿದ್ದಕ್ಕೆ ಧನ್ಯವಾದಗಳು ಮೇಡಂ.

    ವ್ಯಕ್ತಿಚಿತ್ರವು ವ್ಯಕ್ತಿತ್ವಚಿತ್ರವಾಗಲು ಏನು ಬೇಕೆಂಬುದಕ್ಕೆ ನಿಮ್ಮೀ ಬರೆಹವು ಉತ್ತಮ ನಿದರ್ಶನ. ನಿಮ್ಮ
    ಬರೆಹ ಕೃಷಿ ಹೀಗೆಯೇ ಸಾಗಲಿ…………

    “ಹೊನ್ನಗಿಂಡಿಯ ಹಿಡಿದು ಕೈಯೊಳು
    ಹೇಮವಾರಿಯ ಚಿಮುಕಿಸಿ,
    ಮೇಘಮಾಲೆಗೆ ಬಣ್ಣವೀಯುತ
    ಯಕ್ಷಲೋಕವ ವಿರಚಿಸಿ………………..” (ಕುವೆಂಪು)

    1. ನಿಮ್ಮಭಿಮಾನದ ನುಡಿಗಳಿಗೆ ತುಂಬು ಮನದ ಧನ್ಯವಾದಗಳು ಸರ್.

  2. ಪ್ರಕಟಿಸಿದ “ಸುರಹೊನ್ನೆ” ಗೆ ಧನ್ಯವಾದಗಳು.

  3. ಚಿ.ನ.ಮಂಗಳಾ ಅವರ ಬಗ್ಗೆ ಲೇಖನ ಓದಿ ತುಂಬಾ ಖುಷಿಯಾಯಿತು ಮೇಡಂ. ಅವರು. ಅಚ್ಚರಿಯ ವ್ಯಕ್ತಿ.. ಅಂತಹವರ ವಿದ್ಯಾರ್ಥಿನಿಯಾಗಿ, ಅವರು ಮಾರ್ಗದರ್ಶನ ಪಡೆದ ನೀವೇ ಧನ್ಯರು.

  4. ಚಿ.ನ.ಮಂಗಳಾ ಮೇಡಂ..ಅವರ ಪರಿಚಯಾತ್ಮಕ ಲೇಖನ ಸೊಗಸಾದ ನಿರೂಪಣೆಯೊಂದಿಗೆ ಬರೆದಿರುವ ನಿಮಗೆ ನನ್ನ ನಮನಗಳು ಪದ್ಮಾ ಮೇಡಂ..

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *