ಪೌರಾಣಿಕ ಕತೆ

ಕಾವ್ಯ ಭಾಗವತ 71 : ಪೂತನಾ ವಧಾ

Share Button

ದಶಮ ಸ್ಕಂದ – ಅಧ್ಯಾಯ – 2
ಪೂತನಾ ವಧಾ

ಕಂಸನ ಭೃತ್ಯವರ್ಗದಲಿ ಪೂತನಿ ರಕ್ಕಸಿ
ನಾರಾಯಣನ ರಾಮಾವತಾರದಿ
ತಾಟಕಿಯಾಗಿ ರಾಮನಿಂದ ಸಂಹೃತಳಾಗಿ
ಈಗ ಪೂತನಿಯಾಗಿ ಕಂಸ ಪ್ರೇರಿತಳಾಗಿ
ನಂದಗೋಕುಲದಿ ಚಿಕ್ಕಮಕ್ಳಳನ್ನೆಲ್ಲ ವಧಿಸುತ್ತ
ಗೋಕುಲಕ್ಕಾಗಮಿಸಿ ತನ್ನ ಘೋರರೂಪವ ಮರೆಸಿ
ದಿವ್ಯ ಸುಂದರ ರೂಪಿನಿಂದೊಪ್ಪುವ ಸ್ತ್ರೀಯಾಗಿ
ಸಕಲರನೂ ಆಕರ್ಷಿಸಿ ತೊಟ್ಟಲಲಿ ಮಲಗಿದ್ದ
ಶಿಶುವನ್ನೆತ್ತಿಕೊಂಡು ಕಂಚುಕವ ಸಡಿಲಿಸಿ
ಸ್ತನವ ಬಾಯಿಗಿಟ್ಟು ಶಿಶುವ ಸಂಹರಿಸಲಿಚ್ಛಿಸಿದ
ಪೂತನಿಯ ಮರ್ಮವನರಿತ ಕೃಷ್ಣ
ಸ್ತನವ ಎರಡೂ ಹಸ್ತಗಳಿಂ ಪಿಡಿದು ಮರ್ದಿಸುತ
ಸ್ತನಪಾನ ಮಾಡಲು ರಕ್ಕಸಿಯ ಮರ್ಮಸ್ಥಾನಗಳೆಲ್ಲ
ಕದಲಿ ಉತ್ಕ್ರಮಣಾವಸ್ಥೆಯಲಿ ಬಿದ್ದ ಪೂತನಿ
ತನ್ನ ನಿಜ ಭಯಂಕರ ರೂಪದಿ ಮರಣಿಸೆ
ಅವಳೆದೆಯ ಮೇಲೆ ಮಲಗಿದ್ದ ಮಗು
ಸಂತಸದಿ ನಲಿಯುತಿರೆ ಪರಮಾಘಾತಗೊಂಡ
ಯಶೋದೆ ರೋಹಿಣಿಯರು
ವಿಕೃತವಾದ ಭಯಂಕರ ಮುಖ ಹರಿತ ಕೋರೆ ದಾಡೆಗಳ
ದೊಡ್ಡ ಬಂಡೆಗಲ್ಲಂತಿರ್ಪ ಎರಡು ಸ್ತನಗಳ ಮೇಲಿದ್ದ
ಶಿಶುವನ್ನೆತ್ತಿಕೊಂಡರೆ ಮಗುವು ಮಂದಸ್ಮಿತವಾಗಿರೆ
ಅಚ್ಛರಿಯಲಿ ರಕ್ಷೆಯನಿಟ್ಟು ಗೋಮೂತ್ರವ ಚುಮುಕಿಸಿ
ವಿಷ್ಣುನಾಮೋಚ್ಛಾರ ಶಾಂತಿ ಮಂತ್ರವ ಜಪಿಸಿ
ಶಿಶುವನ್ನೆತ್ತಿ ಮಾತೆ ಮೊಲೆಯೂಡಿಸಿದಳು

ಪರ್ವತಾಕಾರದಿ ಬಿದ್ಧ ಪೂತನಿಯ ದೇಹವ ಎತ್ತಿ
ಸಾಗಿಪುದಸಾಧ್ಯವೆಂದೆನಿಸಿ ಅದ ಕೊಡಲಿ ಮಚ್ಛುಗಳಿಂ
ತುಂಡು ತುಂಡಾಗಿ ಕತ್ತರಿಸಿ ಅಗ್ನಿ ಸಂಸ್ಕಾರ ಒದಗಿಸೆ
ಸುಗಂಧವಾತಾವರಣ ಪಸರಿಸಲು
ಕೃಷ್ಣನ ಕೊಲ್ಲುವಿಚ್ಛೆಯಿಂ ಬಂದರೂ
ಮಾತೃಭಾವದಿಂ ಮೊಲೆಯೂಡಿಸಿದಳೆಂಬ
ಭಾವಕ್ಕೆ ವಶನಾಗಿ ಅವಳೆಲ್ಲ ಪ್ರಾರಬ್ಧ ಕರ್ಮಗಳ ನೀಗಿಸಿ
ಮುಕ್ತಿ ನೀಡಿದ ನಾರಾಯಣ

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44142

-ಎಂ. ಆರ್.‌ ಆನಂದ, ಮೈಸೂರು

4 Comments on “ಕಾವ್ಯ ಭಾಗವತ 71 : ಪೂತನಾ ವಧಾ

  1. ಪೂತನಿ ಸಂಹಾರದೊಂದಿಗೆ ಮಾತೃತ್ವದ ಮಹತ್ವವನ್ನೂ ಹೇಳುವ ಭಾಗ ಭಾವಪೂರ್ಣವಾಗಿ ಮೂಡಿ ಬಂದಿದೆ.

  2. ಕಾವ್ಯ ಭಾಗವತದಲ್ಲಿ ಕೃಷ್ಣ ನ ಬಾಲಲೀಲೆಯ ಅವತರಣಿಕೆ ಚೆನ್ನಾಗಿದೆ.. ಸಾರ್ ವಂದನೆಗಳು…

  3. ನಿರಂತರವಾಗಿ ಪ್ರಕಟಿಸುತ್ತರುವ ‘ಸುರಹೊನ್ನೆ’ ಪತ್ರಿಕೆಗೆ ಧನ್ಯವಾದಗಳು.

Leave a Reply to ಎಂ ಆರ್ ಆನಂದ Cancel reply

 Click this button or press Ctrl+G to toggle between Kannada and English

Your email address will not be published. Required fields are marked *