ಲಹರಿ

ಎಲ್ಲಾನೂ ಬಲ್ಲೆನೆಂಬುವಿರಲ್ಲಾ!

Share Button

ಉದಾಹರಣೆ 1: ಗೀತಾ ಉದ್ಯೋಗಸ್ಥೆ. ಅವಳ ಮನೆಯ ರೆಫ್ರಿಜರೇಟರ್ (ಅರ್ಥಾತ್ ಕೆಲವರ ಬಾಯಲ್ಲಿ ತಂಗಳನ್ನದ ಪೆಟ್ಟಿಗೆ) ಹಾಳಾಗಿತ್ತು. ಹಾಗಾಗಿ ಕೈ ಕಟ್ಟಿದ ಹಾಗಾಗುತ್ತಿತ್ತು. ಅದೇ ಸಮಯದಲ್ಲಿ ಗೀತಾಳ ದೂರದ ಸಂಬಂಧಿ ಅನ್ನಪೂರ್ಣಮ್ಮ ಮನೆಗೆ ಅತಿಥಿಯಾಗಿ ಬಂದಿದ್ದರು. ಹೊಸ ರೆಫ್ರಿಜರೇಟರ್ ತರುವ ಮಾತುಕತೆಗಳು ಗೀತಾಳ ಮನೆಯಲ್ಲಿ ನಡೆಯುತ್ತಿದ್ದವು. “ಹೇ ಗೀತಾ, ದೊಡ್ದದೇ ತೆಗೆದುಕೊಳ್ಳಮ್ಮ. ಫೈವ್ ಸ್ಟಾರ್ ರೇಟಿಂಗ್ ಇದ್ದದ್ದೇ ಇರಲಿ. ಫ್ರಿಡ್ಜ್ ಎಷ್ಟು ದೊಡ್ದದಿದ್ದರೂ ಸಾಕಾಗುವುದಿಲ್ಲ. ಆ ಮತ್ತೆ ಡಬ್ಬಲ್ ಡೋರ್ ಇರುವುದೇ ತೆಗೆದುಕೋ” ಎಂದು ಹೇಳುತ್ತಾ ತಮಗೆ ಗೊತ್ತಿರುವ ಯಾವುದೋ ಕಂಪೆನಿಯ ರೆಫ್ರಿಜರೇಟರ್ ನ್ನು ಶಿಫಾರಸು ಮಾಡಿಯೇ ಬಿಟ್ಟರು ಅನ್ನಪೂರ್ಣಮ್ಮ. ಅಸಲಿಗೆ ಗೀತಾ ಅನ್ನಪೂರ್ಣಮ್ಮನ ಬಳಿ ಆ ವಿಷಯವನ್ನು ಮಾತಾಡಿರಲೇ ಇಲ್ಲ.

ಉದಾಹರಣೆ 2: ಆಕೆ ಮೆಟ್ಟಿಲಿನಿಂದ ಬಿದ್ದು ಎಡಕಾಲಿನ ಮೂಳೆ ಮುರಿತವಾಗಿತ್ತು. ಆಕೆಯ ಸಹೋದ್ಯೋಗಿಗಳು ಸಕಾಲದಲ್ಲಿ ಒಳ್ಳೆಯ ಆಸ್ಪತ್ರೆಗೆ ಸೇರಿಸಿ, ಖ್ಯಾತ ಮೂಳೆತಜ್ಞರ ನೇತೃತ್ವದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಯೂ ನಡೆದಿತ್ತು. ಆರು ವಾರಗಳ ಮಟ್ಟಿಗೆ ನೋವಿನ ಕಾಲನ್ನು ನೆಲದಲ್ಲಿ ಊರುವಂತಿರಲಿಲ್ಲವಾದುದರಿಂದ ರಜೆ ಹಾಕಿ ಮನೆಯಲ್ಲಿಯೇ ಇದ್ದಳು. ಅವಳ ಆರೋಗ್ಯ ವಿಚಾರಿಸಲು ಸಂಬಂಧಿಕರು, ಗೆಳತಿಯರು, ಸಹೋದ್ಯೋಗಿಗಳು ಬರುತ್ತಿದ್ದರು. ಹಣ್ಣು ಹಂಪಲು ಜೊತೆಗೆ ಪುಕ್ಕಟೆ ಸಲಹೆಗಳನ್ನು ಕೊಟ್ಟು ಹೋಗುತ್ತಿದ್ದರು. ಒಬ್ಬರಂತೂ “ಹೋಗಿ ಹೋಗಿ ನೀವು ಆ ಆಸ್ಪತ್ರೆಗೆ ಯಾಕೆ ಹೋದದ್ದು?ತುಂಬಾ ಹಣ ಸುಲಿಯುತ್ತಾರಂತೆ ಅಲ್ಲಿ? ನಿಮಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಕೂಡಾ ಪ್ರಸಿದ್ಧ ವೈದ್ಯರು ಅಲ್ಲವಂತೆ. ನೀವು ಇಂಥ ಆಸ್ಪತ್ರೆಗೆ, ಇಂಥಾ ವೈದ್ಯರ ಬಳಿ ಹೋಗಬೇಕಿತ್ತು” ಅನ್ನುವಾಗ ಕಾಲುನೋವಿನ ಜೊತೆಗೆ ತಲೆನೋವು ಬರುವುದೊಂದೇ ಬಾಕಿ! ಇನ್ನು ಕೆಲವರು ಸಲಹೆಗಳನ್ನು ನೀಡುವ ಜೊತೆಗೆ ನಮ್ಮ ಪರಿಚಿತರೊಬ್ಬರಿಗೆ ಇತ್ತೀಚೆಗೆ ಇದೇ ತರಹ ಆಯ್ತು ಅಂತ ಆ ಕಥೆಗಳ ವಿವರಣೆ ಬೇರೆ! ಕಾಲುನೋವಿನಿಂದ ಚೇತರಿಸಿಕೊಳ್ಳುತ್ತಿರುವಾಕೆಯ ಬಳಿ ಹೇಳುವಂತಹ ಮಾತೇ ಇದು? ಇದನ್ನು ಅವಗುಣ ಅನ್ನದಿರಲಾದೀತೇ? ನೋವಿನಲ್ಲಿರುವವರಿಗೆ ಧೈರ್ಯ ತುಂಬಬೇಕು. ಅದು ಬಿಟ್ಟು “ಅವರಿಗೆ ಹಾಗಾಯ್ತಂತೆ, ಇವರಿಗೆ ಹೀಗಾಯ್ತಂತೆ” ಅನ್ನುವ ಅಗತ್ಯವಿದೆಯೇ?

ಈ ಮೇಲಿನ ಎರಡು ಉದಾಹರಣೆಗಳಲ್ಲಿ ನಾನು ಹೇಳಹೊರಟಿರುವ ವಿಷಯವೇ “ಎಲ್ಲಾನೂ ಬಲ್ಲೆನೆಂಬುವಿರಲ್ಲಾ!”. ಪುರಂದರದಾಸರ ರಚನೆಯ ಹಾಡೊಂದರ ಪಲ್ಲವಿಯಲ್ಲಿ ಬರುವ ಸಾಲು “ಎಲ್ಲಾನೂ ಬಲ್ಲೆನೆಂಬುವಿರಲ್ಲಾ!”. ಈ ವಾಕ್ಯವನ್ನು “ಪ್ರತಿಯೊಂದು ವಿಷಯವೂ ಗೊತ್ತಿದೆಯೆಂದು ಹೇಳುತ್ತೀರಲ್ವಾ?” ಅಂತ ಅರ್ಥೈಸಿಕೊಳ್ಳಬಹುದು. ಯಾರೇ ಇರಲಿ, ಪ್ರಪಂಚದ ಎಲ್ಲಾ ವಿಷಯಗಳನ್ನು ತಿಳಿದಿರಲು ಸಾಧ್ಯವೇ ಇಲ್ಲ. ಹಾಗೆಯೇ ನನಗೆ ಎಲ್ಲವೂ ತಿಳಿದಿದೆಯೆಂದು ತೋರ್ಪಡಿಸಿಕೊಳ್ಳುವುದು ಹಾಗೂ ಹೇಳಿಕೊಳ್ಳುವುದು ಕೂಡಾ ಸರಿಯಲ್ಲ ಎಂಬುದನ್ನು ಪರೋಕ್ಷವಾಗಿ ಈ ಪ್ರಶ್ನೆ ಸೂಚಿಸುತ್ತದೆ.

ಇಲ್ಲಿ ಎರಡು ವಿಷಯ ಗಮನಿಸಬೇಕು- ನಮಗೆ ಗೊತ್ತಿದೆಯೆನ್ನುವುದನ್ನು ಉಳಿದವರೆದುರು ತೋರಿಸಿಕೊಳ್ಳುವ ಹಂಬಲ ಕೆಲವರಿಗಾದರೆ ತನ್ನ ಎದುರಿರುವವರಿಗೆ ಏನೂ ಗೊತ್ತಿಲ್ಲ ಅನ್ನುವ ತೀರ್ಮಾನಕ್ಕೆ ಬರುವವರು ಇನ್ನು ಕೆಲವರು. ಯಾರೂ ಅವರ ಬಳಿ ಏನನ್ನು ವಿಚಾರಿಸದಿದ್ದರೂ, ತನಗೆ ವಿಷಯದ ಬಗ್ಗೆ ಪೂರ್ತಿ ಗೊತ್ತಿದೆಯೆಂದುಕೊಂಡು ಬಿಟ್ಟಿ ಉಪದೇಶವನ್ನು ತಾನಾಗಿಯೇ ನೀಡುವುದು. ಒಂದನೇ ಉದಾಹರಣೆಯಲ್ಲಿ ವಿವರಿಸಿದ ಅನ್ನಪೂರ್ಣಮ್ಮನಂತಹವರು ನಮ್ಮ ನಡುವೆ ಇರುತ್ತಾರೆ. ತಾವು ಕೊಂಡುಕೊಳ್ಳುವ ವಸ್ತುಗಳೆಲ್ಲವೂ ಒಳ್ಳೆಯ ಗುಣಮಟ್ಟದ್ದೇ ಅನ್ನುವಂತಹ ಭಾವನೆ ಅವರೊಳಗೆ. ಹಾಗಾಗಿ ಅಗತ್ಯವಿರಲಿ, ಅಗತ್ಯವಿಲ್ಲದಿರಲಿ ತಮ್ಮ ಅನುಭವಾಮೃತದ ಧಾರೆಯನ್ನು ಹರಿಸುವುದೆಂದರೆ/ಹಂಚಿಕೊಳ್ಳುವುದೆಂದರೆ ಅದೇನೋ ಖುಷಿ.

ಕೆಲವರ ಸ್ವಭಾವವೇ ಹಾಗೆ- ಜಗತ್ತಿನ ಎಲ್ಲಾ ವಿಷಯವೂ ತಮಗೆ ತಿಳಿದಿದೆ ಎಂಬ ಅಹಮಿಕೆಯ ಭಾವ ಅವರೊಳಗೆ ಮನೆ ಮಾಡಿರುತ್ತದೆ. ಅರ್ಧಂಬರ್ಧ ಗೊತ್ತಿದ್ದರೂ ಮಾತನಾಡುವ ವಿಷಯಕ್ಕೆ ತಲೆ ಬಾಲ, ಕೈ ಕಾಲು ಸೇರಿಸಿ ಬಣ್ಣ ಹಚ್ಚಿ ಹೇಳುವ ಕಲೆ ಅವರಿಗೆ ಕರಗತ. ಅವರ ಮಾತುಗಳನ್ನು ಕೇಳಿದವರು ಮಂತ್ರಮುಗ್ಧರಾಗಿ ಅವರು ನೀಡಿದ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುವುದೂ ಉಂಟು.

ಇನ್ನೊಂದು ಉದಾಹರಣೆ ನೆನಪಾಗುತ್ತಿದೆ. ನನ್ನ ಪರಿಚಿತರೋರ್ವರು ಯಾವುದೇ ವಿಷಯ ಕೇಳಿದರೂ “ನೀವು ಒಂದು ಕೆಲಸ ಮಾಡಿ, ನೇರವಾಗಿ ನಾನು ಹೇಳಿದ ಜಾಗಕ್ಕೆ ಹೋಗಿ” ಅಂತ ಹೇಳುತ್ತಿದ್ದರು. ದೇಹದ ಯಾವುದೇ ಭಾಗದ ನೋವಿರಲಿ ಒಂದು ವೈದ್ಯರ ಹೆಸರನ್ನು ಹೇಳಿ “ನೀವು ಆ ವೈದ್ಯರ ಬಳಿಗೆ ಹೋಗಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ” ಎಂದು ಹೇಳುತ್ತಿದ್ದರು. ಅವರು ಹೇಳಿದ ಜಾಗಕ್ಕೆ ಹೋಗಬೇಕೆಂದು ಒತ್ತಾಯಿಸುತ್ತಿದ್ದರು ಸಹಾ. ಹಾಗೆಂದು ಅವರು ಹೇಳುವ ಮಾತುಗಳನ್ನು ಅಲ್ಲಗಳೆಯುವಂತಿರಲಿಲ್ಲ. ಯಾಕೆಂದರೆ ಕೆಲವೊಂದು ವಿಷಯಗಳಲ್ಲಿ ಅವರು ನೀಡುತ್ತಿದ್ದ ಮಾಹಿತಿಗಳು ಬಹಳ ಉಪಯುಕ್ತವಾಗಿರುತ್ತಿದ್ದವು. ಯಾವುದೇ ವಿಷಯವಾದರೂ ಅದು ಅವರವರ ವೈಯಕ್ತಿಕ ಭಾವನೆಗಳ ಮೇಲೂ ಅವಲಂಬಿತವಾಗಿರುತ್ತದೆಯಲ್ಲವೇ?. ನನಗೆ ಒಳ್ಳೆದು ಅನಿಸಿದ್ದು, ಇನ್ನೊಬ್ಬರ ಮನಸ್ಸಿಗೆ ಹಿಡಿಸದೆ ಇರಬಹುದು. ನಮ್ಮ ಅಭಿಪ್ರಾಯ ಹೇಳಬಹುದು ಆದರೆ ಹಾಗೆಯೇ ಮಾಡಿ, ಹೀಗೆಯೇ ಮಾಡಿ ಅಂತ ಒತ್ತಾಯ ಹೇರುವಂತಿಲ್ಲ ತಾನೇ?.

“ಲೋಕೋ ಭಿನ್ನರುಚಿಃ”. ಒಬ್ಬೊಬ್ಬರು ಒಂದೊಂದು ತರಹ. ಸ್ವಭಾವಗಳು ಬೇರೆ ಬೇರೆ ರೀತಿ- ಒಂದು ಕೈಯ ಐದು ಬೆರಳುಗಳ ಉದ್ದವು ಬೇರೆ ಬೇರೆ ಇರುವಂತೆ! ಯಾವುದೇ ವಿಷಯದ ಬಗ್ಗೆ ನಿಖರ ಮಾಹಿತಿ ನಮಗೆ ತಿಳಿದಿದ್ದರೆ ಅದನ್ನು ಹಂಚಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಆದರೆ ತನಗೇ ತಿಳಿದಿದೆ ಅನ್ನುವ ಹೆಚ್ಚುಗಾರಿಕೆ ಮಾತ್ರ ಬೇಡವೇ ಬೇಡ. ನಿಖರ ಮಾಹಿತಿಗಳು ತಿಳಿದಿದ್ದರೂ “ನನಗ್ಯಾಕೆ ಇಲ್ಲದ ಉಸಾಬರಿ?” ಅಂತ ಸುಮ್ಮನಿರುವುದೂ ಬೇಡ. ಇರುವುದನ್ನು ಇರುವಂತೆ ಹೇಳಿದಾಗ, ಇತರರೇನೆಂದುಕೊಳ್ಳುವರೋ ಏನೋ ಅನ್ನುವುದರ ಬಗ್ಗೆ ಯೋಚನೆಯೂ ಬೇಡ. ಆದರೆ ಸಾಮೂಹಿಕವಾಗಿ ಎಲ್ಲರ ಮನದಲ್ಲೂ “ಎಲ್ಲಾನೂ ಬಲ್ಲೆ ಎಂಬುವನ/ಳಲ್ಲ” ಅನ್ನುವ ಭಾವ ಮೂಡದಿರಲಿ ಅಷ್ಟೇ! ಹಾಗೆಯೇ ಅನಾರೋಗ್ಯದಿಂದ ಬಳಲುತ್ತಿರುವವರ ಬಳಿ ಅಥವಾ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿರುವವರ ಬಳಿ ಋಣಾತ್ಮಕವಾಗಿ ಮಾತನಾಡುವ ಅಲ್ಲದೇ ಅನಗತ್ಯ ಪುಕ್ಕಟೆ ಸಲಹೆ ನೀಡುವ ಗೋಜಿಗೆ ಹೋಗದಿರೋಣ.

ಡಾ.ಕೃಷ್ಣಪ್ರಭಾ. ಎಂ, ಮಂಗಳೂರು

7 Comments on “ಎಲ್ಲಾನೂ ಬಲ್ಲೆನೆಂಬುವಿರಲ್ಲಾ!

  1. ಸತ್ಯಸ್ತ ವಾದ ಅನುಭವ ದ ಲೇಖನ …ಚನ್ನಾಗಿ ಓದಿ ಸಿಕೊಂಡು ಹೋಯಿತು.. ಮೇಡಂ..

    1. ಉತ್ತಮ ಸಲಹೆ, ಕೆಲವೊಮ್ಮೆ ನಮಗೆ ಅರಿವಿಲ್ಲದೇ ಆಗುವ ಪ್ರಮಾದ ಗಳಿಂದ ಇತರರಿಗೆ ಆಗುವ ತೊಂದರೆಗಳ ಬಗ್ಗೆ ಎಚ್ಚರಿಕೆಯ ನುಡಿಗಳು, ಹಿತವಾಗಿ ತಿಳಿಸಿದಿರಿ

  2. ಎಲ್ಲವೂ ತಿಳಿದಿದ್ದೇವೆ ಎನ್ನುವ ಅಹಂ ಬೇಡ..ಗೊತ್ತಿದ್ದನ್ನು ಹೇಳುವ ಹಿಂಜರಿಕೆಯು ಬೇಡ..,

    1. ಪುಕ್ಕಟೆ ಸಲಹೆ ನೀಡುವುದು ಸಾಮಾನ್ಯವಾಗಿ ಎಲ್ಲರಲ್ಲೂ ಬೆಳೆದು ಬಂದ ಹವ್ಯಾಸ ಎನ್ನಬಹುದೇನೋ! ಸಾರ್ವಕಾಲಿಕ ಲೇಖನ ಸಖತ್ತಾಗಿದೆ ಮೇಡಂ.

  3. ಇದು ಪ್ರತಿಯೊಬ್ಬರ ಅನುಭವ. ನಾವು ಸಲಹೆ ಕೊಡಬೇಕು.ಆದರೆ ಆಯ್ಕೆ ಅವರದು ಎಂದು ಅರಿತಿರಬೇಕು.. ಒಳ್ಳೆಯ ಲೇಖನ

  4. ಎಲ್ಲಾನು ಬಲ್ಲೆನೆಂಬುವಿರಲ್ಲ
    ಅವಗುಣ ಬಿಡಲಿಲ್ಲ ||ಪ||

    ಸೊಲ್ಲಿಗೆ ಶರಣರ ಕಥೆಗಳ ಪೇಳುತ
    ಅಲ್ಲದ ನುಡಿಯನು ನುಡಿಯುವಿರಲ್ಲ ||ಅ||

    ಕಾವಿಯನುಟ್ಟು ತಿರುಗುವಿರಲ್ಲ, ಕಾಮವ ಬಿಡಲಿಲ್ಲ
    ನೇಮ ನಿಷ್ಠೆಗಳ ಮಾಡುವಿರಲ್ಲ, ತಾಮಸ ಬಿಡಲಿಲ್ಲ
    ತಾವೊಂದರಿಯದೆ ಪರರನು ತಿಳಿಯದೆ, ಶ್ವಾನನ ಕುಳಿಯಲಿ ಬೀಳುವಿರಲ್ಲ ||

    ಗುರುಗಳ ಸೇವೆ ಮಾಡಿದರಿಲ್ಲ , ಗುರುತಾಗಲಿಲ್ಲ
    ಪರಿಪರಿ ದೇಶವ ತಿರುಗಿದರಿಲ್ಲ, ಪೊರೆಯುವರಿನ್ನಿಲ್ಲ
    ಅರಿವೊಂದರಿಯದೆ ಆಗಮ ತಿಳಿಯದೆ, ನರಕಕೂಪದಲಿ ಬೀಳುವಿರಲ್ಲ ||

    ಬ್ರಹ್ಮಜ್ಞಾನಿಗಳು ಎನಿಸುವಿರಲ್ಲ, ಹಮ್ಮು ಬಿಡಲಿಲ್ಲ
    ಸುಮ್ಮನೆ ಯಾಗವ ಮಾಡುವಿರಲ್ಲ, ಸುಳ್ಳನು ಬಿಡಲಿಲ್ಲ
    ಗಮ್ಮನೆ ಪುರಂದರವಿಠಲನ ಪಾದಕೆ, ಹೆಮ್ಮೆ ಬಿಟ್ಟು ನೀವೆರಗಲೆ ಇಲ್ಲ ||

    ರಚನೆ : ಶ್ರೀ ಪುರಂದರದಾಸರು

    ( ಓದುಗರಿಗೆ ತಕ್ಷಣ ದೊರಕಲೆಂದು ಈ ಕೀರ್ತನವನು ಇಲ್ಲಿ ಉಣಿಸಿರುವೆ. ಅನ್ಯಥಾ ಭಾವಿಸದಿರಿ.
    ಬರೆಹ ಚೆನ್ನಾಗಿದೆ. ಹಿತಮಿತವಾಗಿದೆ. ಆಪ್ತೇಷ್ಟರ ಇಂಥ ಕಿರಿಕಿರಿಯನು ಕೆಲವೊಮ್ಮೆ
    ಸಹಿಸಿಕೊಳ್ಳಬೇಕು. ಇದುವೇ ಸಹಿಷ್ಣುತೆ. ಹಾಗೆಯೇ ಆಪ್ತೇಷ್ಟರಿಗೆ ಕಿರಿಕಿರಿಯಾಗದಂತೆ ಸಂವಾದವನು
    ರೂಪಿಸಿಕೊಳ್ಳಬೇಕು. ಇದುವೇ ಸ್ನೇಹಪರತೆ. ನಮ್ಮ ವರ್ತನೆಯ ಒಂದು ಲೋಪಕೋಪವನ್ನು
    ನೀವಿಲ್ಲಿ ಪರಿಚಯಿಸಿದ್ದೀರಿ. ಧನ್ಯವಾದಗಳು)

Leave a Reply to Rama Patgar Cancel reply

 Click this button or press Ctrl+G to toggle between Kannada and English

Your email address will not be published. Required fields are marked *