(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮರುದಿನ ಬೆಳಗ್ಗೆ ಎಂಟುಗಂಟೆಯ ಹೊತ್ತಿಗೆ ಅವರು ಮೈಸೂರಿನಲ್ಲಿದ್ದರು. ಪ್ರಯಾಣದ ಆಯಾಸದಿಂದ ಎಲ್ಲರಿಗೂ ಬಳಲಿಕೆ. ಆ ದಿನವೂ ರಾಗಿಣಿ, ವಾರುಣಿ ಕಾಲೇಜ್‌ಗೆ ಹೋಗಲಿಲ್ಲ. ಮಲ್ಲಿ ಮನೆಯನ್ನೆಲ್ಲಾ ಗುಡಿಸಿ, ಸಾರಿಸಿದ್ದಳು. ಚಂದ್ರಾವತಿ ತಮ್ಮ ಹೊತ್ತು ಹೊತ್ತಿಗೆ ತಿಂಡಿ, ಊಟ ಸಪ್ಲೈ ಮಾಡಿದರು. ಆದಿನ ರಾಗಿಣಿ ಅಲ್ಲೇ ಉಳಿದಳು. ಕೃಷ್ಣ ರಾತ್ರಿ ತಾವೇ ಚಪಾತಿ, ಸಾಗು, ಮೊಸರನ್ನ ತಂದರು.
“ಸಂಧ್ಯಕ್ಕ ಹೇಗಿದ್ದಾರೆ ಅಕ್ಕ?”
“ತುಂಬಾ ಚೆನ್ನಾಗಿದ್ದಾಳೆ. ತುಂಬಾ ಸುಖವಾಗಿದ್ದಾಳೆ. ಗಂಡ, ಮಗ ಅವಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ತಿದ್ದಾರೆ. ನಿನ್ನನ್ನು ಕರೆದುಕೊಂಡು ಹೋಗದಿರುವುದಕ್ಕೆ ಬೈದಳು.”
“ನಾವಿಬ್ಬರೂ ಮನೆ ಬಿಡುವ ಪರಿಸ್ಥಿತಿಯಲ್ಲಿದ್ದೀವಾ ಅಕ್ಕ? ಸಂಧ್ಯಕ್ಕಂಗೆ ಹೇಳಬೇಕಾಗಿತ್ತು.”
“ಹೇಳಿದೆ ಕಣಪ್ಪ. ಅವಳೇ ಒಂದು ಸಲ ನಮ್ಮನ್ನೆಲ್ಲಾ ನೋಡಕ್ಕೆ ಬರ‍್ತಾಳಂತೆ. ರಾಮನಾಥಪುರಕ್ಕೂ ಹೋಗಬೇಕು” ಅಂತಿದ್ದಳು.
“ವೆರಿಗುಡ್. ಸಂಧ್ಯಕ್ಕ ಬಂದರೆ ನಾನು ಒಂದು ದಿನ ಹೇಗಾದರೂ ಬಿಡುವು ಮಾಡಿಕೊಂಡು ರಾಮನಾಥಪುರಕ್ಕೆ ಕರ‍್ಕೊಂಡು ಹೋಗ್ತೀನಿ. ಬಾಲಾಜಿ ಹೇಗಿದ್ದಾನೆ?”
“ಅವನಿಗೇನು ಕಡಿಮೆ? ರಾಜಕುಮಾರನ ತರಹ ಇದ್ದಾನೆ.”
“ಅವನಿಗೆ ಇನ್ನೂ ರಾಜಕುಮಾರಿ ಸಿಕ್ಕಿಲ್ಲವಾ?”
“ಸಿಗಬಹುದು. ಅಕ್ಕ-ಭಾವ ಅವನಿಗೆ ಹುಡುಗಿಯ ಆಯ್ಕೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ.”
“ಅವರ ಮನೆ ಸೇರುವುದಕ್ಕೆ ಪುಣ್ಯ ಮಾಡಿರಬೇಕು.”
“ಶ್ರೀಮಂತಿಕೆ ಮುಖ್ಯವಲ್ಲ ಅವನಿಗೆ. ತನ್ನನ್ನು ಪ್ರೀತಿಸುವ ಹುಡುಗಿ ಬೇಕು.”
“ಅವನದು ನಿಜವಾದ ಪ್ರೀತಿಯಾದ್ರೆ ಖಂಡಿತ ಅಂತಹ ಹುಡುಗಿ ಸಿಗುತ್ತಾಳೆ ಅಕ್ಕ. ಏನೂ ಗತಿಯಿಲ್ಲದ ನನ್ನ ಹಿಂದೆ ವಿಮಲಾ ಬರಲಿಲ್ಲವಾ? ಅವಳಿಂದ ನನ್ನ ಜೀವನದಲ್ಲಿ ಬೆಳಕು ಮೂಡಲಿಲ್ಲವಾ?”
“ಹೌದು ಕಣೋ ವಿಮಲಾ ನಿನ್ನ ಪಾಲಿಗೆ ದೇವತೆಯಾದಳು. ನಿನ್ನ ಕೆಲಸಗಳಲ್ಲಿ ಕೈ ಜೋಡಿಸಿದಳು.”
“ಅದಕ್ಕೆಲ್ಲಾ ನೀನೇ ಕಾರಣ ಅಕ್ಕ. ಭಾವ ನಿನಗೆ ಪ್ರಪೋಸ್ ಮಾಡಿದಾಗ ನಮಗೆಲ್ಲಾ ಒಂದು ದಾರಿ ತೋರಿಸಿ ನೀನು ಅವರ ಕೈ ಹಿಡಿದೆ. ನಮ್ಮನ್ನೂ ನೋಯಿಸಲಿಲ್ಲ. ಅವರನ್ನೂ ನೋಯಿಸಲಿಲ್ಲ.”
“ನನ್ನ ಅದೃಷ್ಟ ಚೆನ್ನಾಗಿತ್ತು ಕೃಷ್ಣ. ರಾಮ್ ನನ್ನ ಕೈ ಹಿಡಿದರು” ಅವರ ಕಣ್ಣುಗಳು ಗಂಡನ ನೆನಪಿನಿಂದ ಕೊಳಗಳಾದವು.
ಆ ರಾತ್ರಿ ರಾಗಿಣಿಗೆ ಬೇಗ ನಿದ್ರೆ ಬರಲಿಲ್ಲ. ಮಲಗಲು ಪ್ರಯತ್ನಿಸಿದರೂ ಬಾಲಾಜಿಯ ನೆನಪು ಅವಳನ್ನು ಕಾಡಿತು. ತಾನವನನ್ನು ಬಯಸುತ್ತಿರುವುದು ನಿಜ. ಆದರೂ ಏನೋ ಒಂದು ಆತಂಕ. ಅವಳಿಗೆ ತಂದೆ-ತಾಯಿಯ ನೆನಪಾಯಿತು. ತಂದೆ ರಾಜಾರಾಂ ಡ್ರೈವರ್ ದುಶ್ಚಟಗಳ ದಾಸ. ಆತ ಎಂದೂ ಮಕ್ಕಳ ಬಗ್ಗೆ ಕಾಳಜಿ ತೋರಿಸಿರಲಿಲ್ಲ. ತಂದೆಯ ಪ್ರೀತಿ ಅವಳಿಗೆ ಗೊತ್ತೇ ಇರಲಿಲ್ಲ. ತಂದೆ ಮನೆ ಬಿಟ್ಟುಹೋದ ಮೇಲೆ ಅಮ್ಮ ಕೆಲಸಕ್ಕೆ ಸೇರುವುದು ಅನಿವಾರ್ಯವಾಗಿತ್ತು. ಕಾವೇರಮ್ಮ ಅವರನ್ನು ತಂಗಿಯ ತರಹ ನೋಡಿಕೊಳ್ಳುತ್ತಿದ್ದರು.
“ಸತ್ಯಮ್ಮ ನನ್ನ ಪ್ರಾಣ ಉಳಿಸಿ, ಈ ವಂಶದ ಕುಡಿಯನ್ನು ಉಳಿಸಿದ ನೀನು ನನ್ನ ಒಡಹುಟ್ಟಿದವಳು. ಸ್ವಂತದವರೇ ಹತ್ತಿರವಿದ್ದರೂ ನಿನ್ನ ರೀತಿ ಧೈರ್ಯತೆಗೆದುಕೊಂಡು ರಿಸ್ಕ್ ತೆಗೆದುಕೊಳ್ಳುತ್ತಿದ್ದರೋ ಇಲ್ಲವೋ ನನಗೆ ತಿಳಿಯದು. ಧೈರ್ಯವಾಗಿ ಸಮಯಕ್ಕೆ ಸರಿಯಾಗಿ ಡಾಕ್ಟರ್ ಬಳಿ ಕರೆದೊಯ್ದು ನೀನು ನನಗೆ ಎಲ್ಲರಿಗಿಂತ ಆತ್ಮೀಯಳು. ಇಂದಿನಿಂದ ನಿನ್ನ ಸಂಸಾರದ ಹೊಣೆ ನನ್ನದು” ಎಂದಿದ್ದರು. ಅದೇ ರೀತಿ ನೆರವಾಗಿದ್ದರು ಕೂಡ. ತನ್ನ ಹಾಗೂ ತಮ್ಮನ ವಿದ್ಯಾಭ್ಯಾಸ, ಊಟ, ತಿಂಡಿ, ಬಟ್ಟೆ ಎಲ್ಲಾ ಜವಾಬ್ದಾರಿ ಅವರೇ ವಹಿಸಿಕೊಂಡಿದ್ದರು. ಆದರೂ ಅವಳಿಗೆ ಆಗಾಗ್ಗೆ ತಾಯಿಯನ್ನು ಕಾವೇರಿಯಮ್ಮ ಮಕ್ಕಳಿಂದ ದೂರಮಾಡಿಬಿಟ್ಟರು ಅನ್ನಿಸಿ ಕೋಪ ಬರುತ್ತಿತ್ತು. ಅವಳಿಗೆ ಶಾಲೆಯಿಂದ ಬಂದೊಡನೆ ತಾಯಿಯ ಹತ್ತಿರ ಸ್ಕೂಲಿನ ವಿಚಾರ ಹೇಳಬೇಕು ಎನ್ನಿಸುತ್ತಿತ್ತು. ಆದರೆ ಅವರು ಮನೆಯಲ್ಲಿರುತ್ತಿರಲಿಲ್ಲ. ಎಷ್ಟೋ ಸಲ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಮಲಗಬೇಕು ಅನ್ನಿಸುತ್ತಿತ್ತು. ಆದರೆ ಅಮ್ಮ ಮನೆಗೆ ಬರುತ್ತಿದ್ದುದೇ ರಾತ್ರಿ ಹತ್ತು-ಹತ್ತೂವರೆಗೆ. ಯಜಮಾನರು ಊರಿಗೆ ಹೋದಾಗ ಕಾವೇರಿಯಮ್ಮ ‘ಸತ್ಯಮ್ಮ, ನೀನು ನನ್ನ ರೂಮ್‌ನಲ್ಲಿ ಮಲಗು. ರಾಗಿಣೀ ತಮ್ಮನನ್ನು ನೋಡಿಕೊಳ್ಳುತ್ತಾಳೆ’ ಎನ್ನುತ್ತಿದ್ದರು. ರಾಗಿಣಿಗೆ ಅಳು ಬರುತ್ತಿತ್ತು. ಅಕ್ಕ, ತಮ್ಮ ಒಟ್ಟಿಗೆ ಮಲಗುತ್ತಿದ್ದರು. ಆದ್ದರಿಂದಲೇ ಏನೋ ಅವಳ ತಮ್ಮ ರಾಜೇಶ್ ಅವಳನ್ನು ತುಂಬಾ ಹಚ್ಚಿಕೊಂಡಿದ್ದ.
ರಾಗಿಣಿ ಮೈಸೂರಿಗೆ ಬಂದ ಮೇಲೆ ಕಾವೇರಿಯಮ್ಮ 2 ಸಲ ಬಂದಿದ್ದರು. ಅವರ ಹೆಣ್ಣು ಮಕ್ಕಳು ಬಂದಾಗ ಹಾಗೂ ದಸರಾ ವೇಳೆಯಲ್ಲಿ ಅಯ್ಯಪ್ಪ ಬರುತ್ತಿರಲಿಲ್ಲ. ಕಾವೇರಮ್ಮ ತಮ್ಮ ರೂಮ್‌ನಲ್ಲಿ ಸತ್ಯಮ್ಮನನ್ನು ಮಲಗಿಸಿಕೊಳ್ಳುತ್ತಿದ್ದರು. ಅಪರೂಪಕ್ಕೆ ಸೇರಿದ್ದ ಅಕ್ಕ-ತಂಗಿಯರು ಒಂದು ರೂಮ್‌ನಲ್ಲಿ ಸೇರಿ ಹರಟುತ್ತಿದ್ದರು. ಮಕ್ಕಳು ಮಹಡಿ ಸೇರಿ ಇದ್ದ 2 ರೂಮ್‌ಗಳಲ್ಲಿ ಭರ್ತಿಯಾಗುತ್ತಿದ್ದರು. ರಾಗಿಣಿ ಹಾಲ್‌ನಲ್ಲಿ ತಮ್ಮನನ್ನು ಮಡಿಲಲ್ಲಿ ಮಲಗಿಸಿಕೊಂಡು ಅವನ ಕಷ್ಟ ಸುಖ ವಿಚಾರಿಸುತ್ತಿದ್ದಳು. ಆಗೆಲ್ಲಾ ಅವಳಿಗೆ ತಂದೆಯ ಮೇಲೆ ಸಿಟ್ಟು ಬಂದರೆ, ತಾಯಿಯ ಅಸಹಾಯಕತೆ ನೆನೆದು ದುಃಖವಾಗುತ್ತಿತ್ತು.
ಅವಳಿಗೆ ಬಾಲಾಜಿ ನೆನಪಾದ. ಅವನಿಂದ ದೂರ ಸರಿಯಲು ಅವಳ ಮನಸ್ಸು ಒಪ್ಪಿರಲಿಲ್ಲ. ಅವಳ ಮುಂದೆ ಎರಡು ದಾರಿಗಳಿದ್ದವು. ತಾಯಿ ಒಪ್ಪಲಿ ಬಿಡಲಿ ಬಾಲಾಜಿಯನ್ನು ಮದುವೆಯಾಗುವುದು. ಎರಡನೆಯದು ತಾಯಿಗೆ ಮನದಟ್ಟಾಗುವಂತೆ ಹೇಳಿ ಅವಳ ಒಪ್ಪಿಗೆ ಸಿಗುವವರೆಗೂ ಕಾಯುವುದು. ಬಾಲಾಜಿ ಅವರ ಜವಾಬ್ಧಾರಿ ಹೊರಲು ಸಿದ್ಧನಿದ್ದಾನೆ. ಆದರೆ ಕಾವೇರಿಯಮ್ಮ ಕಳಿಸುವುದಿಲ್ಲವೆಂದರೆ ಏನು ಮಾಡುವುದು? ತಾಯಿಗೆ ಶಾಶ್ವತ ನೆಲೆ ಒದಗಿಸಬೇಕು. ರಾಜು ವಿದ್ಯಾಭ್ಯಾಸಕ್ಕಾಗಿ ವ್ಯವಸ್ಥೆ ಮಾಡಬೇಕು. ಆಮೇಲೆ ಮದುವೆ.
ಅವಳ ಮನಸ್ಸು ಬಹಳ ಯೋಚಿಸಿದ ನಂತರ ನಿರಾಳವಾಯಿತು.
ಮರುದಿನ ಬೆಳಿಗ್ಗೆ ತಿಂಡಿ ತಿನ್ನುವಾಗ ಅವಳು ಚಂದ್ರಾವತಿಯವರನ್ನು ಕೇಳಿದಳು. “ಆಂಟಿ ನಾನು ಇನ್ನೊಂದೆರಡು ದಿನ ಇಲ್ಲಿರಬಹುದಾ?”
“ಧಾರಾಳವಾಗಿ ಇರಮ್ಮ. ಯಾರು ಬೇಡ ಅಂತಾರೆ?”
“ಮನೆ ಕ್ಲೀನ್ ಮಾಡಿಸಬೇಕು. ನಮ್ಮನೆ ಕೆಲಸದವಳು ಧರ್ಮಸ್ಥಳಕ್ಕೆ ಹೋಗಿದ್ದಾಳಂತೆ. ಮಲ್ಲೀನ್ನ ರ‍್ಕೊಂಡು ಹೋಗಲಾ?”
“ಕರೆದುಕೊಂಡು ಹೋಗಿ ಕ್ಲೀನ್ ಮಾಡಿಸು. ಇವತ್ತು ಕಾಲೇಜ್‌ಗೆ ಹೋಗಲ್ವಾ?
“ಒಂದು ರೌಂಡ್ ಹೋಗಿ ರ‍್ತೇನೆ. ಕ್ಲಾಸ್‌ಗಳಿರುವುದು ಡೌಟು. ಎಲ್ಲರೂ ಸೋಮವಾರದ ಹೊತ್ತಿಗೆ ರ‍್ತಾರೆ.”
ಅವಳು ಹೇಳಿದಂತೆ ಆಯಿತು. 32 ಜನರ ತರಗತಿಯಲ್ಲಿ ಕೇವಲ 6 ಜನರಿದ್ದರು.
ರಾಗಿಣಿ, ವಾರುಣಿ ಬೇಗಲೇ ವಾಪಸ್ಸಾದರು. ಮಲ್ಲಿ ಬಟ್ಟೆ ವಾಷಿಂಗ್ ಮಿಷನ್‌ಗೆ ಹಾಕುತ್ತಿದ್ದಳು.
“ರಾಗಿಣಮ್ಮ ಅಮ್ಮಾವ್ರು ಹೇಳಿದ್ದಾರೆ. ನಾನು ನಾಲ್ಕು ಗಂಟೆಗೆ ಬರ‍್ತೀನಿ ಹೋಗಿ ಬರೋಣ. ಒಂದೆರಡು ಗಂಟೇಲಿ ಮನೆ ಕ್ಲೀನ್ ಮಾಡ್ತೀನಿ.”
“ಸಾಕಾಗಲ್ಲ ಮಲ್ಲಿ. ನಮ್ಮದು ದೊಡ್ಡ ಮನೆ. ಕೆಳಗಡೆ ಎರಡು ರೂಮು, ಹಾಲ್, ವರಾಂಡ, ಅಡಿಗೆ ಮನೆ, ಪೂಜಾರೂಮು, ಸ್ಟೋರ್‌ರೂಂ, ಮೇಲ್ಗಡೆ ಹಾಲ್, ಎರಡು ರೂಮುಗಳು ಬಾಲ್ಕನಿ ಇದೆ. ನೀನು ಕ್ಲೀನ್ ಮಾಡಲು 2 ದಿನ ಬೇಕು. ನಿನ್ನ ಜೊತೆಯಾರಾದ್ರೂ ಗಂಡಸರನ್ನು ಕರ‍್ಕೊಂಡು ಬಾ ಧೂಳು ತೆಗೆಯಕ್ಕೆ, ಫ್ಯಾನ್‌ಗಳು ಒರೆಸಲು ಬೇಕಾಗತ್ತೆ.”
“ನನ್ನ ಗಂಡಾನೇ ಬರ‍್ತಾನೆ ಬುಡಿ” ಎಂದಳು ಮಲ್ಲಿ.
ಗೆಳತಿಯರು ತಮ್ಮ ರಥ ಏರಿದರು. ಮಲ್ಲಿ ಅವಳ ಗಂಡ ಆಟೋದಲ್ಲಿ ಫಾಲೋ ಮಾಡಿದರು.
ಮಲ್ಲಿ ಹೊರಗಿನಿಂದ ಮನೆ ನೋಡಿ ಕೇಳಿದಳು. “ಇಷ್ಟು ದೊಡ್ಡ ಮನೇಲಿ ನೀವೊಬ್ಬರೇ ಇದ್ದೀರಾ?
“ನಾನು ಪೇಯಿಂಗ್ ಗೆಸ್ಟ್ ಆಗಿ ಇಲ್ಲಿದ್ದೀನಿ. ನಮ್ಮ ಓನರ್ ಮನೆಯವರೆಲ್ಲಾ ಕೆಲಸದ ಮಾದೇವೀನ್ನ ಕರ‍್ಕೊಂಡು ಟೂರ್ ಹೋಗಿದ್ದಾರೆ.” ರಾಗಿಣಿ ಧಾರಾಳವಾಗಿ ಸುಳ್ಳು ಹೇಳಿದಳು.
“ನೀವೂ ನನ್ನ ಹೈದರಾಬಾದ್‌ಗೆ ಕರೆದುಕೊಂಡು ಹೋಗಬಹುದಿತ್ತು” ಗೆಳತಿಯರು ಜೋರಾಗಿ ನಕ್ಕರು.
ಮಲ್ಲಿ, ಅವಳ ಗಂಡ ಪಾದರಸದಂತೆ ಕೆಲಸ ಮಾಡಿ ಎರಡು ದಿನಗಳಲ್ಲಿ ಮನೆ ಲಕಲಕ ಹೊಳೆಯುವಂತೆ ಮಾಡಿದರು. ಫುಟ್ ರಗ್‌ಗಳು, ಕರ್ಟನ್‌ಗಳು, ಬೆಡ್‌ಶೀಟ್‌ಗಳನ್ನು ಒಗೆದು ಹಾಕಿದರು. ಐರನ್ ಅಂಗಡಿ ಇಟ್ಟುಕೊಂಡಿದ್ದ ಮಲ್ಲಿಯ ಗಂಡ ಎಲ್ಲವನ್ನೂ ಕ್ಲೀನಾಗಿ ಐರನ್ ಮಾಡಿಟ್ಟನು. ಅವರ ಕೆಲಸ ನೋಡಿ ರಾಗಿಣಿಗೆ ತುಂಬಾ ಖುಷಿಯಾಯಿತು.
“ಎಷ್ಟು ದುಡ್ಡು ಕೊಡಬೇಕು ಮಲ್ಲಿ?”
“ನಿಮಗಿಷ್ಟ ಬಂದಷ್ಟು ಕೊಡರವ್ವ. ನಾನು ಖುಷಿಯಿಂದ ತೆಗೆದುಕೊಳ್ತೀನಿ.”
“ನೀನು ಇಷ್ಟೂಂತ ಹೇಳು………”
ರಾಗಿಣಿ 3,000ರೂ. ಕೊಟ್ಟಳು. ಅವರಿಗೆ ತುಂಬಾ ಖುಷಿಯಾಯಿತು.
ಸೋಮವಾರದಿಂದ ಮಾಮೂಲು ಕಾಲೇಜ್ ಆರಂಭವಾಯಿತು. ಒಂದು ವಾರ ಕಳೆಯಿತು. ಶನಿವಾರ ರಾಗಿಣಿ ಊಟಕ್ಕೆ ಚಂದ್ರಾ ಆಂಟಿ ಮನೆಗೇ ಬಂದಳು. ಊಟ ಮಾಡುತ್ತಾ ಕೇಳಿದರು “ರಾಗಿಣಿ ನಿನ್ನನ್ನು ಒಂದು ಪ್ರಶ್ನೆ ಕೇಳಬಹುದಾ?”
“ಕೇಳಿ ಆಂಟಿ.”
“ನೀನು ನಿನ್ನ ಅಭಿಪ್ರಾಯ ಹೇಳಲು ಒಂದು ತಿಂಗಳ ಟೈಂ ಕೇಳಿದ್ದೀಯ ಅಲ್ವಾ?”
“ಹೌದು ಆಂಟಿ……..”
“ಒಂದು ತಿಂಗಳಾದ ನಂತರ ನಿಮ್ಮ ತಾಯಿಗೆ ಹೇಳ್ತೀಯೋ, ಸಧ್ಯದಲ್ಲೇ ಹೇಳ್ತೀಯೋ……”
“ಮುಂದಿನವಾರ ಊರಿಗೆ ಹೋಗಿ ಅಮ್ಮನಿಗೆ ತಿಳಿಸ್ತೀನಿ….”
“ವೆರಿಗುಡ್. ನಮ್ಮ ಹುಡುಗನ್ನ ತುಂಬಾ ಕಾಯಿಸಬೇಡ.”
“ಆಂಟಿ, ನನಗೂ ಬಾಲಾಜಿ ಇಷ್ಟವಾಗಿದ್ದಾರೆ. ಆದರೆ ನನಗೆ ನನ್ನ ತಮ್ಮ. ತಾಯಿಯ ಬಗ್ಗೆ ಚಿಂತೆಯಿದೆ. ಅವರು ಜಾತಿ ನೋಡಲ್ಲಾಂತ ನನಗೆ ಗೊತ್ತು. ಆದರೆ ಅವರಿಗೊಂದು ವ್ಯವಸ್ಥೆ ಮಾಡಬೇಕಲ್ಲವಾ?”
“ಕಾವೇರಿಯಮ್ಮ ಏನೂ ಮಾಡದೆ ಇರ‍್ತಾರಾ?”
“ಮಾಡಬಹುದು. ಮಾಡದೆಯೂ ಇರಬಹುದು.”
“ನೀನೂ ದುಡುಕಿ ಮಾತನಾಡಬೇಡ. ಅವರಿಗೆ ಅಕ್ಕನ ಕುಟುಂಬದ ಬಗ್ಗೆ ಎಲ್ಲಾ ತಿಳಿಸು.”
“ಆಗಲಿ ಆಂಟಿ.”
ಸಾಯಂಕಾಲ ಕಾಫಿ ಕುಡಿದು ರಾಗಿಣಿ ಮಾತನಾಡುತ್ತಾ ಕುಳಿತಿದ್ದಾಗ ಪಾರ್ವತಿ ಅತ್ತೆಯ ಫೋನ್ ಬಂತು.
“ಹಲೋ ವರು, ನಾನು ಪಾರು ಅತ್ತೆ.”
“ಹೇಳಿ ಅತ್ತೆ.”
“ನಾಳೆ ಬೆಳಿಗ್ಗೆ 10 ಗಂಟೆಗೆ ನಮ್ಮ ಮನೆಗೆ ಬರ‍್ತೀಯಾ?”
“ಏನು ವಿಶೇಷ ಅತ್ತೆ?”
“ನಾಗರಾಜಂಗೆ ಒಂದು ಹುಡುಗೀನ್ನ ನೋಡಿದ್ದೀನಿ. ಅವಳು ಸರ್ಕಾರಿ ಸ್ಕೂಲಲ್ಲಿ ಟೀಚರ್. ಮೈಸೂರಿಂದ ಕೋಟೆ ಕಡೆಯ ಹಳ್ಳಿಗೆ ಓಡಾಡ್ತಾಳೆ. ಲಕ್ಷಣವಾಗಿದ್ದಾಳೆ. ಇವನು ಏನೂ ಹೇಳ್ತಿಲ್ಲ.”
“ಹುಡುಗೀನ್ನ ನೋಡಿದ ಮೇಲೆ ಹೇಳ್ತಾನೆ ಬಿಡಿ.”
“ಫೋಟೋ ನೋಡಿದ್ದಾನೆ ಕಣೆ. ನಾಳೆ ಹುಡುಗಿ ಮನೆಯವರು ಬರುವ ಹೊತ್ತಿಗೆ ಇವನು ಎಲ್ಲಿಗಾದರೂ ಹೊರಟುಹೋದರೇಂತ ನನಗೆ ಭಯ.”
“ಹಾಗೇನಾಗಲ್ಲ ಅತ್ತೆ. ನಾನು ಬೇಗ ಬರ‍್ತೀನಿ.”
“ಇಲ್ಲಿಗೇ ತಿಂಡಿಗೆ ಬಾಮ್ಮ.”
“ಆಗಲಿ ಅತ್ತೆ.”
“ನಂತರ ಅವಳು ಚಂದ್ರಾವತಿಯವರಿಗೆ ವಿಷಯ ತಿಳಿಸಿದಳು.”
“ಹೋಗಿ ಬಾಮ್ಮ. ನಿನ್ನಿಂದ ಅವರಿಗೆ ಸಹಾಯವಾದರೆ ಒಳ್ಳೆಯದಲ್ವಾ?”
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44033
(ಮುಂದುವರಿಯುವುದು)
–ಸಿ.ಎನ್. ಮುಕ್ತಾ, ಮೈಸೂರು


ಧಾರಾವಾಹಿ ಕನಸೊಂದು ಶುರವಾಗಿದೆ..ಓದಿಸಿಕೊಂಡುಹೋಗುತ್ತಿದೆ..ಕುತೂಹಲ ಕಾರಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.. ಮೇಡಂ
Beautiful
ಎಂದಿನಂತೆ ಚಂದದ ಪುಟ….ಸುಂದರ ಕಥಾಹಂದರ.