ಲಹರಿ

ಉಡುಗೊರೆಯೆಂಬ ಭಾವನಾತ್ಮಕ ಬೆಸುಗೆ

Share Button

ಗಿಫ್ಟ್ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಏನೋ ಖುಷಿ, ಉತ್ಸಾಹ, ಆನಂದಭಾವವನ್ನು ಕಾಣುತ್ತೇವೆ. ಯಾಕೆ ನಾವು ಉಡುಗೊರೆಯನ್ನು ನಿರೀಕ್ಷಿಸುತ್ತೇವೆ? ಹೌದು. ಉಡುಗೊರೆಯನ್ನು ಪಡೆಯುವುದೆಂದರೆ ಒಂಥರಾ ಉತ್ಸಾಹ, ಪುಳಕ ಹಾಗೂ ಸಂತೋಷ. ಉಡುಗೊರೆ ಅಥವ ಪ್ರೀತಿಯ ಕಾಣಿಕೆ ನೀಡುವ ಪದ್ಧತಿಯು ಪುರಾತನ ಇತಿಹಾಸವನ್ನು ಹೊಂದಿದೆ. ಪ್ರಾಚೀನ ಪರಂಪರೆಯಲ್ಲಿ ಕಾಣಿಕೆಗಳಿಗೆ ವಿಶೇಷ ಮಹತ್ವವಿದೆ. ಪುರಾಣಗಳಲ್ಲಿಯೂ ಉಲ್ಲೇಖವಿದೆ. ರಾಜಾಧಿರಾಜರ ಕಾಲದಲ್ಲಿಯೂ ಉಡುಗೊರೆಗಳಿಗೆ ಅತ್ಯಂತ ಪ್ರಾಮುಖ್ಯವಿತ್ತು. ಉಡುಗೊರೆಯ ಇತಿಹಾಸವು ಅಗಾಧವಾದದ್ದು.

ಪರಸ್ಪರ ಸ್ನೇಹ, ಪ್ರೀತಿ, ನಂಬುಗೆ, ಗೌರವ, ಆದರ, ಸಮ್ಮಾನ, ಕೃತಜ್ಞತೆ ಇವುಗಳನ್ನು ವ್ಯಕ್ತ ಪಡಿಸುವ ಸಲುವಾಗಿ ಉಡುಗೊರೆಯನ್ನು ನೀಡುವ ಸಂಪ್ರದಾಯವು ತಲೆ ತಲಾಂತರಗಳಿದ ಸಾಗುತ್ತಲೇ ಬಂದಿದೆ. ಉತ್ತರ ಭಾರತದಲ್ಲಿ ರೂಢಿಯಲ್ಲಿದ್ದ ರಾಖಿ ಹಬ್ಬದಲ್ಲಂತೂ ಜನರು ಗಿಫ್ಟ್ ಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಈ ಹಬ್ಬವು ಈಗ ಎಲ್ಲೆಡೆ ಬಹು ದೊಡ್ಡ ಉತ್ಸವವಾಗಿದೆ. ಉಡುಗೊರೆ ನೀಡುವ ಪರಿಪಾಠವು ನಮ್ಮಲ್ಲಿರುವ ಭಾವನೆಗಳನ್ನು ಹೊರಹೊಮ್ಮಿಸಲು, ಅಭಿವ್ಯಕ್ತಿಗೊಳಿಸಲು ಇರುವ ಸುಲಭ ಸಾಧನವಾಗಿದೆ. ಯಾವುದೇ ಹಬ್ಬ, ಹರಿದಿನಗಳು, ಸಮಾರಂಭಗಳಲ್ಲಿ ಉಡುಗೊರೆ ನೀಡುವ ಸಂಪ್ರದಾಯವು ಸರ್ವೇ ಸಾಮಾನ್ಯವಾಗಿದೆ. ಇವುಗಳು ಸಂಬಂಧವನ್ನು ವೃದ್ಧಿಸಿ, ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ಉಡುಗೊರೆ ಪಡೆಯುವಾಗ ಅಥವಾ ನೀಡುವಾಗ ಉಂಟಾಗುವ ಸಂತೋಷವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ವಸ್ತುಗಳ ವಿನಿಮಯ ಅಥವಾ ಉಡುಗೊರೆ ಮನುಷ್ಯರ ನಡುವಿನ ಭಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

ನಾವು ಉಡುಗೊರೆ ನೀಡುವಾಗ ಅತೀ ಮುತುವರ್ಜಿಯಿಂದ ವಸ್ತುಗಳ ಆಯ್ಕೆ ಮಾಡುತ್ತೇವೆ. ಯಾವ ವಸ್ತು ಯಾರಿಗೆ ಹೆಚ್ಚು ಸೂಕ್ತ, ಅದರಿಂದ ಅವರಿಗಾಗುವ ಪ್ರಯೋಜನವೇನು? ಎಂಬೆಲ್ಲಾ ಅಂಶಗಳನ್ನು ಗಮನದಲ್ಲಿರಿಸಿ, ಕಾಳಜಿ ವಹಿಸಿ ಉತ್ತಮ ಆಯ್ಕೆ ಮಾಡುತ್ತೇವೆ. ಹೀಗೆ ಅವರವರ ಅಭಿರುಚಿಯನ್ನು ಅರಿತು ಜಾಗರೂಕತೆಯಿಂದ ಗಿಫ್ಟ್ ಖರೀದಿಸಿದಾಗ ಅದನ್ನು ಕೊಡುವವರು, ಸ್ವೀಕರಿಸುವವರು ಇಬ್ಬರಿಗೂ ಆಗುವ ಸಂತೋಷ ಅನನ್ಯ. ಶಬ್ದಗಳಲ್ಲಿ ವಿವರಿಸಲಾಗದ ಈ ಕ್ಷಣಗಳು ಬದುಕಿನುದ್ದಕ್ಕೂ ಅವಿಸ್ಮರಣೀಯ ನೆನಪುಗಳಾಗಿ ಉಳಿದುಬಿಡುತ್ತವೆ. ನಾವು ನೀಡಿದ ಉಡುಗೊರೆಯು ಬೆಲೆಬಾಳುವ ವಸ್ತುವೇ ಆಗಿರಲಿ ಅಥವಾ ಸಾಮಾನ್ಯವೇ ಇರಲಿ ಅದು ಕೊಟ್ಟು ಪಡೆಯುವವರ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಅವಲಂಬಿಸಿ ಅದರ ಮೌಲ್ಯವನ್ನು ವೃದ್ಧಿಸುತ್ತದೆ. ಇಲ್ಲಿ ಉಡುಗೊರೆಯ ಮೌಲ್ಯವನ್ನು ಬೆಲೆಯ ಮೂಲಕ ಅಳೆಯದೆ ಅದನ್ನು ನೀಡಿದವರ ಭಾವನೆಗಳಲ್ಲಿ ನಿಜವಾದ ಮೌಲ್ಯ ಅಡಗಿದೆ ಎಂಬ ಸತ್ಯವನ್ನು ಮನಗಾಣಬೇಕು. ಸಣ್ಣದಾಗಿರಲಿ, ದೊಡ್ಡದಾಗಿರಲೀ ಪ್ರತೀಯೊಂದು ಗಿಫ್ಟ್ ತನ್ನದೇ ಆದ ಪ್ರಾಮುಖ್ಯತೆಯನ್ನು ಹಾಗೂ ಭಾವನಾತ್ಮಕ ಸಂಬಂಧವನ್ನು ಹೊಂದಿದೆ.

ಚಿಕ್ಕವರಿದ್ದಾಗ ಗಿಫ್ಟ್ ಗೋಸ್ಕರ ನಮ್ಮ ಜನ್ಮದಿನವನ್ನು ಎದಿರು ನೋಡುತ್ತಿದ್ದೆವು. ಹುಟ್ಟುಹಬ್ಬದಂದು ಏನಾದರೂ ಸಿಕ್ಕಾಗ ಹಿರಿಹಿರಿ ಹಿಗ್ಗುತ್ತಿದ್ದೆವು. ಆದರೆ ಇಂದು ಹಾಗಲ್ಲ. ಪ್ರತೀ ವಿಶೇಷ ಸಂದರ್ಭಗಳಲ್ಲಿ ಚಿಕ್ಕ, ದೊಡ್ಡ ಗಾತ್ರದಾಗಲೀ, ಏನಾದರೂ ವಸ್ತು ಗಿಫ್ಟ್ ರೂಪದಲ್ಲಿ ದೊರೆಯುತ್ತದೆ. ಜನ್ಮ ದಿನವೇ ಆಗಬೇಕೆಂದಿಲ್ಲ. ನಾನು ಸೇವೆಯಲ್ಲಿರುವಾಗ ಪ್ರತೀ ವರ್ಷ ಶಿಕ್ಷಕರ ದಿನಾಚರಣೆಯಂದು ವಿದ್ಯಾರ್ಥಿಗಳಿಂದ ಹೂವು, ಪೆನ್ ಅಥವಾ ಶೋ ಪೀಸ್ ದೊರೆಯುತ್ತಿತ್ತು. ಅವರೆಲ್ಲರೂ ತಮ್ಮ ಪಾಕೇಟ್ ಮನಿಯನ್ನು ಉಳಿಸಿ ಪ್ರೀತಿಯಿಂದ ಕೇಕ್ ಕತ್ತರಿಸಿ ನಮ್ಮ ದಿನಾಚರಣೆಯನ್ನು ಆಚರಿಸುವಾಗ ಮನ ಮಿಡಿಯುತ್ತಿತ್ತು. ಇಂಥಹಾ ಸ್ನೇಹ ಪೂರ್ವಕ ಉಡುಗೊರೆಗಳು ಬೆಲೆ ಕಟ್ಟಲಾಗದ ರತ್ನಗಳಾಗಿದ್ದವು. ಈಗ ಬರೀ ನೆನಪು ಮಾತ್ರ. ಆದರೆ ಹಚ್ಚ ಹಸಿರಾಗಿರುವ ಈ ನೆನಪುಗಳು ನನ್ನ ಹೃದಯದಲ್ಲಿ ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ನನ್ನ ಕುಟುಂಬಸ್ಥರು ಹಾಗೂ ಸ್ನೇಹಿತರೂ ನನಗೆ ಪ್ರಿಯವಾದ ವಸ್ತುಗಳನ್ನು ಆಗಾಗ್ಗೆ ನೀಡುತ್ತಿರುತ್ತಾರೆ. ಅದಕ್ಕಾಗಿ ನನ್ನ ಹುಟ್ಟುಹಬ್ಬವನ್ನೇ ಕಾದವರಲ್ಲ. ಎಲ್ಲಾದರೂ ಪ್ರವಾಸ ಹೋದಾಗ ಅಥವಾ ವಿಶೇಷ ಸಂದರ್ಭದಂದು ಏನಾದರೂ ಉಡುಗೊರೆಯನ್ನು ಕೊಡುತ್ತಿರುತ್ತಾರೆ. ನನಗೆ ಗಿಫ್ಟ್ ನೀಡುವುದೂ, ಪಡಕೊಳ್ಳುವುದು ತುಂಬಾ ಇಷ್ಟ. ಉಡುಗೊರೆಯೆಂಬುದು ಹಣ ಕೊಟ್ಟು ಪಡೆದ ವಸ್ತುವೇ ಆಗಬೇಕೆಂದಿಲ್ಲ. ನನ್ನ ಒಬ್ಬಳು ಆಪ್ತ ಸ್ನೇಹಿತೆ ಪ್ರತೀ ಸಲ ನನ್ನನ್ನು ಭೇಟಿಯಾಗಲು ಬರುವಾಗ ಬರೀ ಕೈಯಲ್ಲಿ ಬರುವುದೇ ಇಲ್ಲ. ಏನಾದರೂ ನನ್ನ ಪ್ರಿಯವಾದ ಖಾದ್ಯಗಳನ್ನು ತಯಾರಿಸಿ ನನಗೆ ತಿನ್ನಿಸಿದರೆ ಅವಳಿಗೆ ಸಮಾಧಾನ. ಇಂಥಾ ಸರಳ, ಮುಗ್ದ ಉಡುಗೊರೆಯಲ್ಲಿ ಪ್ರೀತಿಯ, ಸ್ನೇಹದ ಕಂಪು ಇರುತ್ತದೆ.

ಉಡುಗೊರೆ ಎಂಬುದು ಪ್ರತಿಷ್ಠೆ ಅಥವಾ ಪೈಪೋಟಿಯ ವಸ್ತುವಾಗಬಾರದು. ಒತ್ತಡದಿಂದಲೂ ಕಾಣಿಕೆ ಕೊಡುವ ಪರಿಸ್ಥಿತಿ ಉಂಟಾಗಬಾರದು. ಕೆಲವೊಮ್ಮೆ ಈ ಗಿಫ್ಟ್ ನಿಂದಾಗಿ ಮುಜುಗರವಾದದ್ದೂ ಇದೆ. ಒಮ್ಮೆ ಸಂಬಂಧಿಕರೊಬ್ಬರ ಮದುವೆಗೆ ಹೋಗಿದ್ದೆ. ಆಹ್ವಾನ ಪತ್ರಿಕೆಯಲ್ಲಿ, “ಆಶೀರ್ವಾದವೇ ಉಡುಗೊರೆ” ಎಂಬುದಾಗಿ ಮುದ್ರಿತವಾಗಿದ್ದ ಕಾರಣ ಬರೀ ಕೈಯಲ್ಲಿ ಹೋಗಿದ್ದೆ. ಬಂದವರೆಲ್ಲರೂ ದೊಡ್ಡ ಗಾತ್ರದ ಗಿಫ್ಟ್ ಪ್ಯಾಕ್ ತಂದಿದ್ದನ್ನು ನೋಡಿ ಅತ್ಯಂತ ಮುಜುಗರ ಪಟ್ಟಿದ್ದೆ. ನಂತರ ಅರಿವಾಯಿತು ಅದು ಬರೀ ಶಾಸ್ತ್ರಕ್ಕೆ ಮಾತ್ರ ಅಂತ. ಈಗಂತೂ ಬರೀ ಕೈಯಲ್ಲಿ ಹೋಗದೆ ಸಣ್ಣ ಹೂ ಗುಚ್ಚವನ್ನು ಕೊಂಡೊಯ್ಯುವ ಪರಿಪಾಠವನ್ನು ಇಟ್ಟುಕೊಂಡಿದ್ದೇನೆ. ಹೃದಯದಿಂದ ಮನಸಾರೆ ಬಯಸಿ ಕೊಡುವ ಸಣ್ಣ ವಸ್ತು ಕೂಡ ಅತ್ಯಂತ ಬೆಲೆಬಾಳುವ ಕಾಣಿಕೆಯಾಗಬಹುದು. ಇಲ್ಲಿ ಹಣ ಮುಖ್ಯ ಅಲ್ಲ. ಕೊಡುವ ಮನಸ್ಸಿರಬೇಕಷ್ಟೆ. ಒಟ್ಟಿನಲ್ಲಿ ಉಡುಗೊರೆಯು ಕೊಡುವವರಿಗೂ, ಪಡೆಯುವವರಿಗೂ ಸ್ಮರಣಾರ್ಹವಾದರೆ ಮಾತ್ರ ಅದೊಂದು ಬೆಲೆಕಟ್ಟಲಾಗದ ಮಾಣಿಕ್ಯವಾಗುವುದರಲ್ಲಿ ಸಂದೇಹವೇ ಇಲ್ಲ. ಉಡುಗೊರೆಯೆಂಬುದು ಕೊಂಡುಕೊಳ್ಳುವ ಲಾಭದ ವ್ಯಾಪಾರವಾಗದೆ, ನಿಷ್ಕಳಂಕ ಮನಸ್ಸಿನ ಪ್ರೀತಿಯ ಸಂಕೇತವಾಗಬೇಕು. ನಿಸ್ವಾರ್ಥ ಭಾವನೆಯಿಂದ ಇನ್ನೊಬ್ಬರಿಗೆ ಗಿಫ್ಟ್ ನೀಡಿದಾಗ, ಅವರ ಮುಖದಲ್ಲಿ ಕಾಣುವ ಆ ನಗು, ಸಂತೋಷ ಅದುವೇ ಶಾಶ್ವತ. ಮಾನವೀಯ ಸಂಬಂಧಗಳ ಕೊಂಡಿಯಾಗಿರುವ ಉಡುಗೊರೆಯನ್ನು ಸ್ವೀಕರಿಸಿದಾಗ ಯಾರೋ ನಮ್ಮನ್ನು ನೆನಪಿಸಿಕೊಂಡಿದ್ದಾರೆ ಎಂಬ ಹೃದಯಪೂರ್ವಕ ಭಾವನೆಯು ನಮ್ಮನ್ನು ವಿಶೇಷ ವ್ಯಕ್ತಿಯನ್ನಾಗಿಸುವುದಲ್ಲದೆ, ಸಂಬಂಧಗಳ ಮಧುರ ಕ್ಷಣಗಳನ್ನು ನೆನಪಿಸಲು ಸ್ಪೂರ್ತಿಯಾಗುತ್ತದೆ.

-ಶೈಲಾರಾಣಿ ಬಿ, ಮಂಗಳೂರು

3 Comments on “ಉಡುಗೊರೆಯೆಂಬ ಭಾವನಾತ್ಮಕ ಬೆಸುಗೆ

  1. ಉಡುಗೊರೆ ಲೇಖನ ಲವಲವಿಕೆಯಿಂದ ಕೂಡಿದೆ ಮೇಡಂ ಇನ್ನೂ ಸ್ವಲ್ಪ ವಿಸ್ತಾರ ಮಾಡಿದ್ದರೆ ಚಂದಿತ್ತೇನೋ ಎನ್ನಿಸಿತು ನನ್ನ ಅನಿಸಿಕೆ ಅಷ್ಟೇ..

  2. ಇಂದು, ಉಡುಗೊರೆ ಎಂಬುದು ಅದರ
    ಪಾವಿತ್ರ್ಯತೆಯನ್ನು ಉಳಿಸಿಕೊಂಡಿದೆಯೆಂದು ಹೇಳುವುದು ಕಷ್ಟ. ಚಂದದ ಲೇಖನ ಖುಷಿಕೊಟ್ಟಿತು.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *