ನೆನಪುಗಳು ಅದೆಷ್ಟು ಮಧುರ. ನೆನೆದಷ್ಟೂ ಪುಳಕ, ಸವಿದಷ್ಟೂ ಖಾಲಿಯಾಗದ ಅಕ್ಷಯ ಪಾತ್ರೆ. ನಾವು ಬಾಲ್ಯದಲ್ಲಿ ಅನುಭವಿಸಿದ ಸುಂದರ ಕ್ಷಣಗಳು, ನಮ್ಮಲ್ಲಿದ್ದ ಮುಗ್ದತೆ, ಸರಳತೆ, ಕುತೂಹಲಭರಿತ ನಿರಾಂತಕ ಮನಸ್ಸು, ಇವೆಲ್ಲಾವನ್ನು ನೆನೆಪಿಸುವಾಗ ಈಗಲೂ ಮೈಮನ ಪುಳಕಗೊಳ್ಳುತ್ತದೆ. ನೆನಪುಗಳೇ ಹಾಗೆ. ನೆನಪಿಸಿದಷ್ಟೂ ಮನಸ್ಸಿಗೆ ಮುದ ಕೊಡುವುದಲ್ಲದೇ, ಅನೇಕ ಬಾರಿ ಭಾವುಕಳಾಗಿಸಿದ್ದೂ ಇದೆ. ಅಳಿಸಲಾರದ ಒಂದಿಷ್ಟು ನೆನಪುಗಳು, ಈಗಿನ ಬದುಕಿಗೆ ಪ್ರಸ್ತುತವಲ್ಲದ ಕೆಲವೊಂದು ನೆನೆಪುಗಳು ನಮ್ಮ ಅರಿವಿಲ್ಲದೆಯೇ ಮಾಸಿ ಹೋಗುವುದುಂಟು. ನನ್ನ ಅನುಭವದ ಜೋಳಿಗೆಯಲ್ಲಿ ಹಲವಾರು ನೆನಪುಗಳ ಬುತ್ತಿಯೇ ಇದ್ದರೂ, ದೀಪಾವಳಿಯ ಸಮಯದಲ್ಲಿ ನಡೆದ ಈ ಒಂದು ಪ್ರಸಂಗ ನನ್ನಲ್ಲಿ ಆಗಾಗ್ಗೆ ನಗು ತರಿಸುತ್ತದೆ.
ನಾವು ಚಿಕ್ಕಂದಿನಲ್ಲಿ ಯಾವುದೇ ಹಬ್ಬ, ಹರಿದಿನಗಳಾಗಲೀ, ಅದನ್ನು ಅನುಭವಿಸಿದ ರೀತಿ, ಪಟ್ಟ ಸಂತೋಷಕ್ಕೆ ಪಾರವೇ ಇರುತ್ತಿರಲ್ಲಿಲ್ಲ. ಅವುಗಳಲ್ಲಿ ಅಷ್ಟಮಿ, ಚೌತಿ, ದಸರಾ ಮತ್ತು ದೀಪಾವಳಿ ಹಬ್ಬಗಳು ಪ್ರಮುಖವಾಗಿದ್ದವು. ಈ ಎಲ್ಲಾ ಹಬ್ಬಗಳನ್ನು ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸುತ್ತಿದ್ದೆವು. ಅದರಲ್ಲೂ ದೀಪದ ಹಬ್ಬವಂತೂ ನಮ್ಮ ಅಚ್ಚುಮೆಚ್ಚಿನದಾಗಿತ್ತು. ಶಾಲೆಯಿಂದ ಬರುವಾಗಲೇ ದಾರಿಯಲ್ಲಿ ಸಿಕ್ಕ ಗುಲಾಬಿ ಬಣ್ಣದ ಕಡಲೆ ಹೂವು, ಸ್ನೇಹಿತರೊಡನೆ ಸೇರಿ ಇನ್ಯಾವುದೋ ಗೆಲ್ಲು, ಬಳ್ಳಿಯನ್ನು ಮನೆಗೆ ತರುತ್ತಿದ್ದೆವು. ಸಾಯಂಕಾಲ ಹಂಡೆಯನ್ನು ತಿಕ್ಕಿ ತೊಳೆದ ಬಳಿಕ, ನೀರು ತುಂಬಿಸಿ, ಹೂವಿನ ಅಲಂಕಾರ ಮಾಡಿ, ಹಂಡೆಯ ಸುತ್ತಲೂ ಚಿತ್ರ ಬರೆಯುತ್ತಿದ್ದೆವು. ಚಿತ್ರ ಬಿಡಿಸುವಾಗ ಒಮ್ಮೊಮ್ಮೆ ನಮ್ಮ ನಮ್ಮಲ್ಲಿ ಚಾಕಿಗೆ (ಸೀಮೆ ಸುಣ್ಣ) ಜಗಳವಾದಾಗ ಅಮ್ಮನೇ ಬಂದು ಬಿಡಿಸಿದ ನೆನಪು. ಆಮೇಲೆ ಬಚ್ಚಲಿನ ಬಾಗಿಲಿಗೆ ರಂಗೋಲಿ ಬಿಡಿಸುತ್ತಿದ್ದೆವು. ಹಂಡೆಗೆ ನೀರು ತುಂಬಿದ ಬಳಿಕ ರಾತ್ರಿ ಘಂಟೆ ಬಡಿಯುವ ಕಾರ್ಯಕ್ರಮವಿರುತ್ತಿತ್ತು. ಘಂಟೆಯ ನಿನಾದ ನಮ್ಮ ಮನೆಯಲ್ಲೇ ಮೊದಲು ಕೇಳಬೇಕು ಎಂದು ನೆರೆಹೊರೆಯವರೊಡನೆ ಪೈಪೋಟಿ ಮಾಡಿದ್ದೂ ಉಂಟು. ಮರುದಿನ ಬೆಳಿಗ್ಗೆ ಕೋಳಿ ಕೂಗುವ ಮೊದಲೇ ಎದ್ದು, ತಲೆ, ಮೈ, ಕಿವಿಯೊಳಗೆ ಎಣ್ಣೆ ಹಚ್ಚಿ, ಕಾದು, ಬಳಿಕ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ಸ್ವಲ್ಪ ಪಟಾಕಿ ಸಿಡಿಸಿದ ಬಳಿಕ ಅವಲಕ್ಕಿ, ಲಾಡು ಮತ್ತು ಬಾಳೆಹಣ್ಣು ತಿಂದು ಚಾ ಕುಡಿಯುತ್ತಿದ್ದೆವು. ದಿನವಿಡೀ ಸಂಜೆಯಾಗುವುದನ್ನು ಎದುರು ನೋಡುತ್ತಾ, ಕತ್ತಲೆಯಾಗುವಷ್ಟರಲ್ಲಿ ಹಣತೆ ಉರಿಸಿ, ಪಟಾಕಿ ಸಿಡಿಸಲು ತವಕದಿಂದ ಕಾಯುತ್ತಿದ್ದೆವು. ನಮ್ಮ ಅಚ್ಚುಮೆಚ್ಚಿನ ಸುರುಸುರು ಬತ್ತಿ, ಚಾಟಿ, ಓಲೆ ಪಟಾಕಿ, ಮಾಲೆ ಪಟಾಕಿ, ನೆಲ ಚಕ್ರ, ವಿಷ್ಣು ಚಕ್ರ, ಬೆಡಿ, ಬರ್ಸ, ಹಾವಿನ ಸುರುಳಿ, ಇತ್ಯಾದಿಗಳನ್ನು ನೆರೆಕೆರೆಯ ಮಕ್ಕಳೊಡನೆ ಸಿಡಿಸಿ ಆನಂದಿಸುತ್ತಿದ್ದೆವು. ನಮ್ಮ ಸವಾರಿ ರಸ್ತೆಯವರೆಗೊ ಸಾಗುತ್ತಿತ್ತು. ಅಂದಿನ ಪಟಾಕಿಯ ಬಾಕ್ಸಿನ ಮುಚ್ಚಳದಲ್ಲಿ ಸಿನೆಮಾ ನಟಿಯರ ಚಂದದ ಫೋಟೋಗಳು ಇರುತ್ತಿತ್ತು. ಸರಿಯಾಗಿ ಉರಿಯದ ಪಟಾಕಿಗಳನ್ನು ಹುಡುಕಿ ಪುನ: ಉರಿಸುವುದೂ ನಮ್ಮ ಪ್ರಿಯವಾದ ಕಸುಬಾಗಿತ್ತು.
ದೀಪಾವಳಿಯ ಮರುದಿನ ಅಂಗಡಿ ಪೂಜೆ ಇರುತ್ತಿತ್ತು. ಸಾಮಾನ್ಯವಾಗಿ ಅಂದು ಎಲ್ಲಾ ಅಂಗಡಿಗಳಲ್ಲಿ ಸಿಹಿತಿಂಡಿ ಕೊಡುವ ಪರಿಪಾಟವಿತ್ತು. ನಮಗೆಲ್ಲಾ ಖುಷಿಯೋ ಖುಷಿ. ಏನಾದರೂ ನೆಪವೊಡ್ಡಿ ಅಂಗಡಿಗೆ ಓಡುತ್ತಿದ್ದೆವು. ಆವಾಗಲೆಲ್ಲಾ ಹಿರಿಯರು ನಮಗೆ ಹತ್ತು ಪೈಸೆಯೋ, 25 ಪೈಸೆಯೋ ನೀಡುತ್ತಿದ್ದರು. ನಾವು ಬೇಕಾದ ತಿಂಡಿ ಕೊಂಡು ತಿನ್ನುತ್ತಿದ್ದೆವು. ಆವತ್ತು ನನ್ನ ತಂಗಿ ಪಕ್ಕದ ಗೂಡಂಗಡಿಯಿಂದ ಏನನ್ನೋ ಖರೀದಿಸಲು ಹೋದಾಗ ಅವಳಿಗೆ ಅಂಗಡಿ ಪೂಜೆಯ ಅವಲಕ್ಕಿ, ಲಾಡು ಪೊಟ್ಟಣ ಸಿಕ್ಕಿತ್ತು. ನನಗೂ ಆಸೆಯಾಯಿತು. ಕೂಡಲೇ ನಾನೂ ಗೂಡಂಗಡಿಗೆ ಓಡಿ ಹೋಗಿ, ‘ಹತ್ತು ಪೈಸೆಯ ಬಜಿಲ್ (ಅವಲಕ್ಕಿ) ಕೊಡಿ’ ಎಂದೆ. ಅಂಗಡಿಯಲ್ಲಿದ್ದವರೆಲ್ಲಾ ಮುಸಿಮುಸಿ ನಗುತ್ತಿದ್ದರು. ಹತ್ತು ಪೈಸೆಯ ನೆಲಗಡಲೆ ಕೊಡಿ ಎನ್ನುವ ಬದಲು ಅವಸರದಲ್ಲಿಅವಲಕ್ಕಿ ಎಂದಾಗಿತ್ತು. ನನಗೆ ನಾಚಿಕೆಯಿಂದ ತಲೆ ಎತ್ತಲಾಗಲ್ಲಿಲ್ಲ. ಆದರೆ ಅಂಗಡಿಯವರು ನೆಲಗಡಲೆಯ ಜೊತೆಗೆ ಅವಲಕ್ಕಿ, ಲಾಡು ಪೊಟ್ಟಣ ಕೊಟ್ಟು ಕಳುಹಿಸಿದರು. ದೀಪಾವಳಿ ಬರುವಾಗಲ್ಲೆಲ್ಲಾ ಈಗಲೂ ತವರು ಮನೆಯಲ್ಲಿ ಅವಲಕ್ಕಿ ಪ್ರಸಂಗವನ್ನು ನೆನಪಿಸಿ ನನ್ನನ್ನು ರೇಗಿಸುತ್ತಾರೆ. ದೀಪಾವಳಿ ಮುಗಿದ ಬಳಿಕ ತುಳಸಿ ಪೂಜೆಗಾಗಿ ದಿನ ಎಣಿಸುತ್ತಿದ್ದೆವು.
ಪ್ರತೀ ಬಾರಿಯೂ ದೀಪಾವಳಿಯ ಸಂದರ್ಭದಲ್ಲಿ ಬಾಲ್ಯದ ನೆನಪುಗಳು ನನ್ನನ್ನು ಬಹುವಾಗಿ ಕಾಡುತ್ತವೆ. ಈಗ ಎಲ್ಲವೂ ಬದಲಾಗಿವೆ. ಅಂದಿನ ಬೆಲ್ಲದ ಅವಲಕ್ಕಿಯ ರುಚಿಯನ್ನು ಮೆಲ್ಲುವ ಆ ಕ್ಷಣಗಳು ಇಂದು ಇಲ್ಲ. ಶಾಸ್ತ್ರಕ್ಕೆ ತಲೆಗಿಷ್ಟು ಎಣ್ಣೆ ಹಾಕಿ, ಸ್ನಾನ ಮಾಡಿ ಟಿ.ವಿ.ಯ ಮುಂದೆ ಕೂತು ವಾರ್ತೆ ನೋಡುವುದು, ನೆರೆಕರೆಯ ಮಕ್ಕಳು ಪಟಾಕಿ ಸಿಡಿಸುವುದನ್ನು ಬಾಲ್ಕನಿಯಲ್ಲಿ ಕುಳಿತು ನೋಡುವುದಷ್ಟೇ. ಹಬ್ಬ, ಹರಿದಿನಗಳನ್ನು ಆಚರಿಸುವ ಜೀವನ ಪ್ರೀತಿ ಇದೆಯಾದರೂ, ಹಿಂದಿನ ಸಂಭ್ರಮ ಉಳಿದಿಲ್ಲ. ನಾವು ಅನುಭವಿಸಿದ ಬಾಲ್ಯದ ಸುಂದರ, ಅವಿಸ್ಮರಣೀಯ ಕ್ಷಣಗಳನ್ನು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಅನುಭವಿಸಲಾಗಲಿಲ್ಲವೆಂಬ ಕೊರಗು ಯಾವತ್ತೂ ಇದೆಯಾದರೂ, ಆ ಮಕ್ಕಳು ನಮಗಿಂತ ಎಷ್ಟೋ ಪಾಲು ಅದೃಷ್ಟವಂತರು ಎಂಬ ಸಮಾಧಾನವೂ ಇದೆ. ಇಂದಿನ ಏಕಾಂಗಿ ಬದುಕಿನಲ್ಲಿ, ನನ್ನ ಬಾಲ್ಯದ ಸುವರ್ಣ ಕಾಲವನ್ನು ಮೆಲುಕು ಹಾಕುತ್ತಾ, ಆ ದಿನಗಳನ್ನು ನೆನೆಯುತ್ತಾ ಖುಷಿ ಪಡುತ್ತೇನೆ. ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿರುವ ಈ ಸವಿ ನೆನಪುಗಳು ಬಾಲ್ಯದ ಮುಗ್ದತೆಯನ್ನು, ಸಂತೋಷದ ದಿನಗಳನ್ನು ಸದಾ ಕಾಲ ನೆನೆಪಿಸುತ್ತಲೇ ಇರುತ್ತವೆ. ಬಾಲ್ಯವೆಂದೂ ಮರಳಿ ಬಾರದು. ಆದರೆ ನೆನೆಪು ಶಾಶ್ವತ.

-ಶೈಲಾರಾಣಿ. ಬಿ. ಮಂಗಳೂರು
Beautiful article
Thanks Madam
ಬಾಲ್ಯದ ನೆನಪೇ ಖುಷಿ ತರುವ ಸಂಗತಿ…ನಿಮ್ಮ ನಿನಪಿನ ಬುತ್ತಿ ಓದುತ್ತಾ ನಮ್ಮ ನೆನಪಿನ ಬುತ್ತಿ ಯೂ ಕಣ್ಮುಂದೆ ಬಂತು ಅದಕ್ಕಾಗಿ ಧನ್ಯವಾದಗಳು… ಮೇಡಂ
Thanks Madam
Thanks Madam
ಚಿಕ್ಕಂದಿನ ಸವಿನೆನಪಿನ ಬುತ್ತಿ ಬಿಚ್ಚಿ, ದೀಪಾವಳಿ ಹಬ್ಬದ ಗಮ್ಮತ್ತನ್ನು ನಮಗೆ ಉಣಬಡಿಸಿದಿರಿ. ನಮ್ಮನ್ನೂ ಬಾಲ್ಯದೆಡೆಗೆ ಒಯ್ದ ಲೇಖನ ಆಪ್ತವೆನಿಸಿತು.