ವಿಶೇಷ ದಿನ

ವಾಲ್ಮೀಕಿ ಜಯಂತಿ

Share Button


ಭಾರತದ ಮೊದಲ ಮಹಾಕಾವ್ಯ ಎಂದು ಗುರುತಿಸಲ್ಪಟ್ಟಿರುವ ವಾಲ್ಮೀಕಿ ರಾಮಾಯಣವು 24,000 ಶ್ಲೋಕಗಳು, ಮತ್ತು 7 ಖಂಡಗಳನ್ನು ಒಳಗೊಂಡಿದೆ. ರಾಮಾಯಣದಲ್ಲಿ ಸುಮಾರು 4,80,000 ಪದಗಳಿಂದ ಕೂಡಿದ್ದು, ಇದು ಮಹಾಭಾರತದ ಪೂರ್ಣಪಠ್ಯದ ಕಾಲುಭಾಗದಷ್ಟು ಹಾಗೂ ಇಲಿಯೇಡ್ ಕಾಲದ ಸುಮಾರು 4 ಪಟ್ಟು ಉದ್ದವಾಗಿದೆ. ಈ ರಾಮಾಯಣ ಆದಿಕಾವ್ಯವನ್ನು ಬರೆದ ವಾಲ್ಮೀಕಿ ಮಹರ್ಷಿ ಆದಿಕವಿ ಎಂದು ವರ್ಣಿಸಲ್ಪಟ್ಟಿದ್ದಾರೆ. ವಾಲ್ಮೀಕಿಯನ್ನು ರಾಮನ ಸಮಕಾಲೀನ ಎಂದು ಉಲ್ಲೇಖಿಸಿದ್ದಾರೆ.

ಕೆಲವು ಶಾಸ್ತ್ರಗಳ ಪ್ರಕಾರ ಈತ ವರುಣನ 10ನೇ ಮಗನಂತೆ. ವರುಣನ ಅಂಶ ಗೆದ್ದಲು ಬೆಟ್ಟಕ್ಕೆ ಬಿದ್ದ ನಂತರ ಜನಿಸಿದ ಈತನಿಗೆ ವಾಲ್ಮೀಕಿ ಎಂಬ ಹೆಸರು ಬಂತಂತೆ. ಕೆಲವು ಉಲ್ಲೇಖಗಳ ಪ್ರಕಾರ ದಂತಕಥೆಗಳ ಪ್ರಕಾರ ವಾಲ್ಮೀಕಿಮೊದಲು ಕಾಡಿನಲ್ಲಿ ಬರುವ ಪ್ರಯಾಣಿಕರನ್ನು ದೋಚುವ ಕಳ್ಳನಾಗಿದ್ದನಂತೆ. ಒಮ್ಮೆ ನಾರದ ಋಷಿಗಳು ಕಾಡಿನಲ್ಲಿ ಹೋಗುತ್ತಿದ್ದಾಗ ಈ ಕಳ್ಳ ಬೇಡ ನಾರದರ ಬಳಿ ಇದ್ದುದನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದನಂತೆ. ಆಗ ನಾರದರು ‘ಅಯ್ಯಾ ಬೇಡನೆ ನೀನು ನಿನ್ನ ಕೃತ್ಯದಿಂದ ಪಾಪ ಮಾಡುತ್ತಿದ್ದೀಯಾ ಈ ಪಾಪದಲ್ಲಿ ನಿನ್ನ ಕುಟುಂಬದ ಹೆಂಡತಿ ಮಕ್ಕಳೂ ಸಹ ಪಾಲು ತೆಗೆದುಕೊಳ್ಳಲು ಬಯಸುವುದಿಲ್ಲ.’ ‘ಏನು ಹೇಳುತ್ತಿದ್ದಿ ನೀನು? ಬೇಡ ಅಬ್ಬರಿಸಿದ ‘ನನ್ನ ಹೆಂಡತಿ ಮಕ್ಕಳು ನಾನು ಕಳ್ಳತನದಿಂದ ಸಂಪಾಸಿದುದರಿಂದಲೇ ಜೀವನ ನಡೆಸುತ್ತಿದ್ದು, ಅದು ಹೇಗೆ ನನ್ನ ಪಾಪದಲ್ಲಿ ಪಾಲು ತೆಗೆದುಕೊಳ್ಳುವುದಿಲ್ಲ?’. ಆಗ ನಾರದರು ನುಡಿದರು. ‘ಅಯ್ಯಾ ನಿನ್ನ ಸಂಪಾದನೆಯಿಂದ ಸುಖವಾಗಿರುವ ನಿನ್ನ ಹೆಂಡತಿ ಮಕ್ಕಳು ನಿನಗೆ ಕಳ್ಳತನದಿಂದ ಬರುವ ಪಾಪವನ್ನು ಎಂದಿಗೂ ಸ್ವೀಕರಿಸಲಾರರು. ನೀನು ಮನೆಗೆ ಹೋಗಿ ವಿಚಾರಿಸಿ ಬಾ, ಅದುವರೆಗೆ ನಾನು ಇಲ್ಲಿಯೇ ಇರುತ್ತೇನೆ. ಆಗ ಆ ಬೇಡ ಕಾಡಿನಲ್ಲಿದ್ದ ತನ್ನ ಗುಡಿಸಲಿಗೆ ಹೋಗಿ ಹೆಂಡತಿ ಮಕ್ಕಳನ್ನು ವಿಚಾರಿಸಿದ. ಅವರು ಹೇಳಿದರಂತೆ. ‘ಕುಟುಂಬದ ಯಜಮಾನನಾದ ನೀನು ಕುಟುಂಬದ ನಿರ್ವಹಣೆ ಮಾಡುವ ಜವಾಬ್ದಾರಿ ಹೊಂದಿದ್ದೀಯಾ ಆದರೆ ನೀನು ಪಾಪದಿಂದ ಕಳ್ಳತನದಿಂದ ಸಂಪಾದಿಸಿದ ಪಾಪದಲ್ಲಿ ನಾವೆಂದಿಗೂ ಭಾಗಸ್ಥರಾಗುವುದಿಲ್ಲ’ ಆಗ ಪಶ್ಚಾತ್ತಾಪದಿಂದ ಆ ಬೇಡ ನಾರದರಲ್ಲಿಗೆ ಮರಳಿ ಬಂದ ‘ ನಾನು ಇದುವರೆಗೆ ಮಾಡಿದ ಪಾಪದಿಂದ ಮುಕ್ತನಾಗುವುದು ಹೇಗೆ?’ ‘ ನೀನು ಬಹುಕಾಲ ರಾಮ ಎಂಬ ಎರಡಕ್ಷರದ ಮಂತ್ರವನ್ನು ಜಪಿಸುತ್ತಿರು. ಅದರಿಂದ ನಿನ್ನ ಪಾಪ ಪರಿಹಾರವಾಗುತ್ತದೆ.’ ಎಂದರು ನಾರದರು. ಆ ಬೇಡ ಬಹಳ ಭಕ್ತಿಯಿಂದ ತಪಸ್ಸಿಗೆ ಕುಳಿತಾಗ ಆತನಿಗೆ ರಾಮ ಎಂಬ ಶಬ್ದ ಮರೆತುಹೋಗಿ ಮರ ಎಂಬ ಶಬ್ದ ನೆನಪಿನಲ್ಲಿ ಉಳಿಯಿತು. ಎಷ್ಟೋ ವರ್ಷಗಳ ಕಾಲ ಆತ ಮರ ಮರ ಎಂದು ಜಪಿಸಿದ. ಮರ ಮರ ಎಂಬುದು ಸೇರಿ ಒಟ್ಟಿಗೆ ಅದು ರಾಮ ರಾಮ ಎಂಬ ಶಬ್ದವಾಯಿತು. ಆತನ ಸುತ್ತಲೂ ಹುತ್ತ ಬೆಳೆಯಿತು. ಆತನ ಗಡ್ಡ ಬೆಳೆಯಿತು. ಜಟೆ ಬೆಳೆಯಿತು . ಕೊನೆಗೆ ಆತನಿಗೆ ದೈವ ಸಾಕ್ಷಾತ್ಕಾರವಾಯಿತು. ಇದರಿಂದ ಆತ ತನ್ನ ಆಶ್ರಮದಲ್ಲಿ ರಾಮಾಯಣವನ್ನು ಬರೆದ. ಕೆಲವು ತಜ್ಞರು ಹೇಳುವಂತೆ. ರಾಮ ಇದ್ದ ಕಾಲದಲ್ಲಿ ವಾಲ್ಮೀಕಿ ರಾಮಾಯಣ ಬರೆದು ಹಾಡಿದ್ದರಿಂದ, ರಾಮ ಸೀತೆಯರ ಮಕ್ಕಳಾದ ಲವ, ಕುಶರಿಗೆ ರಾಮಾಯಣ ಕಲಿಸಿದನಂತೆ. ವಾಲ್ಮೀಕಿಯ ನಂತರ ಎಷ್ಟೇ ಜನ ರಾಮಾಯಣದ ವಿವಿಧ ರೂಪಗಳನ್ನು ಬರೆದರೂ, ಮೂಲಕವಿಯಾದ ವಾಲ್ಮೀಕಿ ಆದಿಕವಿ ಎಂದು ಗುರುತಿಸಿಕೊಂಡಿದ್ದಾರೆ.

ಸ್ಕಂದ ಪುರಾಣದ ನಾಗರ ಖಂಡವು ಮುಖರ ತೀರ್ಥದ ಸೃಷ್ಟಿಯ ಕುರಿತಾದ ತನ್ನ ವಿಭಾಗದಲ್ಲಿ ವಾಲ್ಮೀಕಿ ಲೋಹಜಂಘ ಎಂಬ ಹೆಸರಿನ ಬ್ರಾಹ್ಮಣನಾಗಿ ಜನಿಸಿದನೆಂದು ಮತ್ತು ಅವನ ಹೆತ್ತವರಿಗೆ ನಿಷ್ಠಾವಂತ ಮಗನಾಗಿದ್ದನೆಂದು ಉಲ್ಲೇಖಿಸುತ್ತದೆ. ಅವನಿಗೆ ಸುಂದರ ಹೆಂಡತಿಯಿದ್ದಳು ಮತ್ತು ಇಬ್ಬರೂ ಪರಸ್ಪರ ನಿಷ್ಠರಾಗಿದ್ದರು. ಒಮ್ಮೆ, ಅನಾರ್ತ ಪ್ರದೇಶದಲ್ಲಿ ಹನ್ನೆರಡು ವರ್ಷಗಳ ಕಾಲ ಮಳೆ ಬಾರದಿದ್ದಾಗ, ಲೋಹಜಂಘನು ತನ್ನ ಹಸಿದ ಕುಟುಂಬಕ್ಕಾಗಿ, ಕಾಡಿನಲ್ಲಿ ಸಿಕ್ಕ ಜನರನ್ನು ದೋಚಲು ಪ್ರಾರಂಭಿಸಿದನು. ಈ ಜೀವನದ ಹಾದಿಯಲ್ಲಿ ಅವನು ಏಳು ಋಷಿಗಳನ್ನು ಅಥವಾ ಸಪ್ತಋಷಿಗಳನ್ನು ಭೇಟಿಯಾಗಿ ಅವರನ್ನೂ ದೋಚಲು ಪ್ರಯತ್ನಿಸಿದನು. ಆದರೆ ವಿದ್ವಾಂಸರಾದ ಋಷಿಗಳು ಅವನ ಮೇಲೆ ಕರುಣೆ ತೋರಿ ಅವನ ಮಾರ್ಗಗಳ ಮೂರ್ಖತನವನ್ನು ಅವನಿಗೆ ತೋರಿಸಿದರು. ಅವರಲ್ಲಿ ಒಬ್ಬನಾದ ಪುಲಹನು ಅವನಿಗೆ ಧ್ಯಾನ ಮಾಡಲು ಒಂದು ಮಂತ್ರವನ್ನು ಕೊಟ್ಟನು ಮತ್ತು ಬ್ರಾಹ್ಮಣನು ಕಳ್ಳನಾಗಿ ಬದಲಾದನು, ಅದರ ಪಠಣದಲ್ಲಿ ಮಗ್ನನಾಗಿ ಅವನ ದೇಹದ ಸುತ್ತಲೂ ಇರುವೆಗಳ ಗುಡ್ಡಗಳು ಬಂದವು. ಋಷಿಗಳು ಹಿಂತಿರುಗಿ ಬಂದು ಇರುವೆ ಗೂಡಿನಿಂದ ಬರುತ್ತಿದ್ದ ಮಂತ್ರದ ಶಬ್ದವನ್ನು ಕೇಳಿದಾಗ, ಅವರು ಅವನನ್ನು ಆಶೀರ್ವದಿಸಿ , “ನೀನು ವಾಲ್ಮೀಕ (ಇರುವೆ ಗೂಡಿನೊಳಗೆ) ಕುಳಿತು ಮಹಾನ್ ಸಿದ್ಧಿಯನ್ನು ಸಾಧಿಸಿದ್ದರಿಂದ, ನೀನು ಲೋಕದಲ್ಲಿ ವಾಲ್ಮೀಕಿ ಎಂದು ಪ್ರಸಿದ್ಧನಾಗುತ್ತೀಯ” ಎಂದು ಹೇಳಿದರು .ಮಹಾಭಾರತದ ಸಮಯದಲ್ಲಿ ವಾಲ್ಮೀಕಿ ಜೀವಂತವಾಗಿದ್ದನು , ಮತ್ತು ಯುದ್ಧದ ನಂತರ ಯುಧಿಷ್ಠಿರನನ್ನು ಭೇಟಿ ಮಾಡಿದ ಅನೇಕ ಋಷಿಗಳಲ್ಲಿ ಅವನು ಒಬ್ಬನಾಗಿದ್ದನು . ಅವನು ಯುಧಿಷ್ಠಿರನಿಗೆ ಶಿವನನ್ನು ಪೂಜಿಸುವುದರಿಂದಾಗುವ ಪ್ರಯೋಜನಗಳನ್ನು ಹೇಳಿದನು . ಒಂದು ಕಾಲದಲ್ಲಿ, ಹೋಮ ಅಗ್ನಿಯ ಕೆಲವು ತಪಸ್ವಿಗಳು ವಾಲ್ಮೀಕಿಯನ್ನು ಬ್ರಾಹ್ಮಣಹತ್ಯೆಯ ಅಪರಾಧಿ ಎಂದು ಶಪಿಸಿದರು . ಅವನು ಶಾಪಗ್ರಸ್ತನಾದ ತಕ್ಷಣ ಪಾಪವು ಅವನನ್ನು ಆವರಿಸಿತು. ಆದ್ದರಿಂದ ಅವನು ಶಿವನನ್ನು ಪ್ರರ‍್ಥಿಸಿದನು ಮತ್ತು ಅವನು ತನ್ನ ಎಲ್ಲಾ ಪಾಪಗಳಿಂದ ಶುದ್ಧನಾದನು. ವಾಲ್ಮೀಕಿ ಯುಧಿಷ್ಠಿರನಿಗೆ ಅವನಂತೆಯೇ ಶಿವನನ್ನು ಪ್ರಾರ್ಥಿಸಬೇಕೆಂದು ಹೇಳಿದನು.

ರಾಮಾಯಣವು ಭಾರತೀಯರ ಜೀವನಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ. ಮಹರ್ಷಿ ವಾಲ್ಮೀಕಿಯು ರಾಮಾಯಣದಲ್ಲಿ ಭರತಖಂಡದಲ್ಲಿನ ಅರಣ್ಯಗಳು, ಪರ್ವತಗಳು, ನದಿಗಳು, ಸರೋವರಗಳು, ಸಮುದ್ರಗಳು ಮತ್ತು ಜಲಪಾತಗಳ ಪ್ರಕೃತಿ ಸೌಂದರ‍್ಯವನ್ನು ವರ್ಣಿಸಿದ್ದಾರೆ. ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ.

ಎನ್.ವ್ಹಿ.ರಮೇಶ್

3 Comments on “ವಾಲ್ಮೀಕಿ ಜಯಂತಿ

  1. ವಾಲ್ಮೀಕಿಯನ್ನು ಕುರಿತಾದ ಪರಚಯಾತ್ಮಕ ಲೇಖನ ಚೆನ್ನಾಗಿದೆ… ಸಾರ್

  2. ವಾಲ್ಮೀಕಿ ಜಯಂತಿಯಂದು ಮೂಡಿಬಂದ ಆದಿಕವಿ ವಾಲ್ಮೀಕಿಯ ಕುರಿತಾದ ಪುಟ್ಟ ಲೇಖನ ಆಸಕ್ತಿಕರವಾಗಿದೆ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *