ಪರಾಗ

ವಾಟ್ಸಾಪ್ ಕಥೆ 70 : ಒಂದು ಕಪ್ ಮೊಸರಿನ ಬೆಲೆ.

Share Button

ಒಂದೂರಿನಲ್ಲಿ ಸಣ್ಣದೊಂದು ಉದ್ಯಮ ನಡೆಸುತ್ತಿದ್ದ ಮನುಷ್ಯ ತನ್ನ ಪುಟ್ಟ ಸಂಸಾರದೊಂದಿಗೆ ಸರಳವಾಗಿ ಜೀವನ ನಡೆಸುತ್ತಿದ್ದನು. ಆತನಿಗೆ ಒಬ್ಬ ಮಗನಿದ್ದನು. ಅವನ ಹೆಂಡತಿ ಯಾವುದೋ ಖಾಯಿಲೆ ಬಂದು ನಿಧನಳಾದಳು. ಆಗ ಇನ್ನೂ ಅವನ ಮಗ ಚಿಕ್ಕವನು. ಉದ್ಯಮಿಗೂ ಅಂತಹ ವಯಸ್ಸಾಗಿರಲಿಲ್ಲ. ಆದರೆ ಆತ ಮರುಮದುವೆಯಾಗಲಿಲ್ಲ. ಮಗನಿಗೆ ತಾನೇ ತಂದೆ, ತಾಯಿ ಇಬ್ಬರೂ ಆಗಿ ಪ್ರೀತಿಯಿಂದ ಆರೈಕೆಮಾಡಿದ. ಅವನಿಗೆ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡ. ಕಷ್ಟಪಟ್ಟು ತನ್ನ ಉದ್ಯಮವನ್ನು ಅಭಿವೃದ್ಧಿಪಡಿಸಿದ. ಅವನೀಗ ಬೆಳೆದು ದೊಡ್ಡ ಉದ್ಯಮಪತಿಯೆಂದು ಹೆಸರುವಾಸಿಯಾದ. ಮಗನಿಗೆ ತನ್ನದೇ ರೀತಿಯಲ್ಲಿ ತರಬೇತಿ ನೀಡಿದ. ತಂದೆಯಂತೆಯೇ ಅವನೂ ಕಷ್ಟಪಟ್ಟು ಕೆಲಸ ಮಾಡುವಂತಾದ. ತಂದೆ ಅವನಿಗೊಬ್ಬ ಸುಂದರಳಾದ ಹೆಣ್ಣನ್ನು ಮದುವೆಮಾಡಿಸಿದ. ಮನೆಯ ಜವಾಬ್ದಾರಿಯನ್ನೆಲ್ಲ ಅವಳಿಗೆ ವಹಿಸಿ ಯಜಮಾನಿಯನ್ನಾಗಿಸಿದ. ಕಂಪನಿಯ ಕಾರುಬಾರನ್ನು ಮಗನಿಗೆ ಸಂಪೂರ್ಣವಾಗಿ ವಹಿಸಿ ತಾನು ಬರಿಯ ಸಲಹೆಗಾರನಾಗಿ ಮಾತ್ರ ಮುಂದುವರೆದ. ಸಕಲ ಅನುಕೂಲಗಳೂ ತನ್ನ ಕೈಗೆಟಕುವಂತಾಗಿ ಸೊಸೆಗೆ ಸ್ವಲ್ಪ ಮಟ್ಟಿಗೆ ಅಹಂ ತಲೆಗೇರಿತು. ಅದಕ್ಕಾಗಿ ತನ್ನ ಮಾವನವರು ಎಷ್ಟು ಕಷ್ಟಪಟ್ಟರು ಎನ್ನುವ ಅರಿವು ಮಾಯವಾಯಿತು.

ಒಂದು ದಿನ ಮಾವನವರು ಊಟಕ್ಕೆ ಕುಳಿತಿದ್ದರು. ಬಡಿಸುತ್ತಿರುವಾಗ ಅವಳನ್ನು ಮೊಸರು ಬೇಕೆಂದು ಕೇಳಿದರು. ಸೊಸೆ ಮೊಸರು ಇಲ್ಲವೆಂದು ಮಜ್ಜಿಗೆ ಬಡಿಸಿದಳು. ಅವರು ಮರು ಮಾತಾಡದೆ ತಮ್ಮ ಊಟ ಮುಗಿಸಿ ಹೊರನಡೆದರು. ಆದರೆ ಆಗ ತಾನೇ ಮನೆಗೆ ಹಿಂದಿರುಗಿದ್ದ ಮಗನಿಗೆ ಸೊಸೆಯ ಮಾತುಗಳು ಕೇಳಿಸಿದವು. ಅವನು ಏನೂ ಮಾತನಾಡಲಿಲ್ಲ. ಅವನು ಊಟಕ್ಕೆ ಕುಳಿತ. ಆಗ ಕೇಳದೆಯೇ ಬಟ್ಟಲಿನಲ್ಲಿದ್ದ ಗಟ್ಟಿಯಾದ ಕೆನೆಮೊಸರನ್ನು ತಂದು ಗಂಡನಿಗೆ ಬಡಿಸಿದಳು. ಆಗಲೂ ಅವನು ಏನೂ ಮಾತನಾಡದೆ ಊಟ ಮುಗಿಸಿ ಹೊರಟುಹೋದ.

ಮಾರನೆಯ ದಿನ ಅಪ್ಪನಿಗೊಂದು ಪತ್ರ ಬರೆದಿಟ್ಟು ತನ್ನ ಹೆಂಡತಿಯನ್ನು ಕರೆದುಕೊಂಡು ಮನೆಬಿಟ್ಟು ಬೇರೆ ಮನೆಗೆ ವಾಸಕ್ಕೆ ಹೋದ. ಪತ್ರದಲ್ಲಿ ಬರೆದ ಒಕ್ಕಣೆ ಈ ರೀತಿಯಿತ್ತು. “ಅಪ್ಪಾ, ನಾನು ಇಂದಿನಿಂದ ನಿನ್ನ ಕಂಪನಿಯಲ್ಲಿ ಒಬ್ಬ ಸಾಧಾರಣ ನೌಕರನಾಗಿ ಮಾತ್ರ ಮುಂದುವರೆದಿದ್ದೇನೆ. ಅದಕ್ಕೆ ತಕ್ಕಂತಹ ಸಂಬಳ ಭತ್ಯೆಗಳನ್ನು ಮಾತ್ರ ಪಡೆಯುತ್ತೇನೆ. ಅದರಲ್ಲಿ ಮಾತ್ರವೇ ನನ್ನ ಸಂಸಾರ ನಡೆಸಲು ನಿರ್ಧಾರ ಮಾಡಿದ್ದೇನೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ನೀವೇ ಆಗಿರುತ್ತೀರಿ. ನಾನು ನಿಮ್ಮ ಉತ್ತರಾಧಿಕಾರಿಯಾಗಿ ಯಾವ ಸವಲತ್ತನ್ನೂ ಪಡೆಯುವುದಿಲ್ಲ. ಒಂದು ಬಾಡಿಗೆ ಮನೆ ಮಾಡಿ ಅಲ್ಲಿಗೆ ಹೆಂಡತಿಯೊಡನೆ ವಾಸ್ತವ್ಯ ಹೂಡಿದ್ದೇನೆ. ನನ್ನ ಹೆಂಡತಿಗೆ ಗಟ್ಟಿ ಮೊಸರಿನ ಸಂಪಾದನೆಯ ಬೆಲೆ ನಿಜವಾಗಿಯೂ ಅರ್ಥವಾಗುವವರೆಗೆ ನಿಮ್ಮ ಮನೆಗೆ ಕಾಲಿಡಲಾರೆ. ನನ್ನಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಇಂತಿ ನಿಮ್ಮ ವಿಧೇಯ ಮಗ.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

8 Comments on “ವಾಟ್ಸಾಪ್ ಕಥೆ 70 : ಒಂದು ಕಪ್ ಮೊಸರಿನ ಬೆಲೆ.

  1. ಎಂದಿನಂತೆ ಒಳ್ಳೆಯ ಸಂದೇಶದಿಂದ ಕೂಡಿದ ಕಥೆ.. ಅದಕ್ಕೆ ಒಪ್ಪುವ ರೇಖಾಚಿತ್ರ ಕಥೆಯ ಸೊಬಗು ಹೆಚ್ಚಿಸಿದೆ.

  2. ಅರ್ಥಪೂರ್ಣ ಸಂದೇಶ ನೀಡುವ ಸುಂದರವಾದ ಕತೆ ಮನವನ್ನು ತಟ್ಟಿತು, ಮುಟ್ಟಿತು.

  3. ಬಹಳ ದಿನಗಳ ನಂತರ ನಿಮ್ಮ ಓದು ಹಾಗೇ ಅಭಿಪ್ರಾಯ ನೋಡಿ ಸಂತಸವಾಯಿತು…. ಧನ್ಯವಾದಗಳು ಪದ್ಮಾ ಮೇಡಂ

  4. ಪ್ರಕಟಣೆಗಾಗಿ ಸುರಹೊನ್ನೆಯ ಸಂಪಾದಕರಿಗೆ ಹೃತ್ಪೂರ್ವಕವಾದ ಧನ್ಯವಾದಗಳು.
    .

  5. ಜೀವನದ ಸೌಂದರ್ಯ ಮತ್ತು ಅಂಥ ಸೌಂದರ್ಯದ ನೆಲೆ ಬೆಲೆ ಏನೆಂದು ಈ ಕತೆಯು
    ಕಲಾತ್ಮಕವಾಗಿ ಅನಾವರಣ ಮಾಡಿದೆ.

    ಕೇಡಿಗತನಕ್ಕೆ ಭೇದಗಳಿಲ್ಲ. ಅದು ಯಾರಲ್ಲೇ ಇರಲಿ, ತಪ್ಪು ತಪ್ಪೇ.

    ಮೊಸರಿನ ಬೆಲೆ ಗೊತ್ತಾಗಬೇಕು.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *