ಪರಾಗ

ವಾಟ್ಸಾಪ್ ಕಥೆ 69 : ಕೊಡು ಕೊಳ್ಳುವಿಕೆ.

Share Button

ಒಂದೂರಿನಲ್ಲಿ ಹಣ್ಣುಮಾರುತ್ತಾ ವಯಸ್ಸಾದ ಒಬ್ಬ ಹೆಣ್ಣುಮಗಳು ಮರದ ಬಳಿಯಲ್ಲಿ ಕೂಡುತ್ತಿದ್ದಳು. ಅಲ್ಲಿಗೆ ದಂಪತಿಗಳಿಬ್ಬರು ಸಾಮಾನ್ಯವಾಗಿ ಹಣ್ಣುಗಳನ್ನು ಕೊಳ್ಳಲು ಬರುತ್ತಿದ್ದರು. ಅವರು ಬಹಳ ಸಾರಿ ಆ ಮುದುಕಿಯಿಂದ ಹಣ್ಣು ಕೊಳ್ಳುತ್ತಿದ್ದುದರಿಂದ ಪರಸ್ಪರರ ಮುಖ ಪರಿಚಯವಾಗಿತ್ತು. ಋತುಮಾನಕ್ಕೆ ತಕ್ಕಂತೆ ಆಕೆ ಬೇರೆಬೇರೆ ಹಣ್ಣುಗಳನ್ನಿಟ್ಟುಕೊಂಡು ಮಾರುತ್ತಿದ್ದಳು. ಒಮ್ಮೆ ಕಿತ್ತಳೆ, ಒಮ್ಮೆ ಸೇಬು, ಮತ್ತೊಮ್ಮೆ ಸೀಬೆಹಣ್ಣು, ಹೀಗೆ ಆಯಾ ಕಾಲದಲ್ಲಿ ಸಿಗುವ ಹಣ್ಣುಗಳಿರುತ್ತಿದ್ದವು. ಸಾಮಾನ್ಯವಾಗಿ ದಂಪತಿಗಳು ಹಣ್ಣುಗಳನ್ನು ಕೊಂಡಾಗ ಒಂದು ಹಣ್ಣನ್ನು ಅಲ್ಲಿಯೇ ಕತ್ತರಿಸಿ ಒಂದು ಚೂರನ್ನು ಗಂಡನು ಬಾಯಲ್ಲಿಟ್ಟು ತಿಂದು “ಏನಮ್ಮಾ ಅಷ್ಟು ರುಚಿಯಾಗಿಲ್ಲ, ಹುಳಿಯಾಗಿದೆ, ಇನ್ನೂ ಮಾಗಬೇಕಾಗಿತ್ತು” ಎಂಬೆಲ್ಲಾ ಮಾತುಗಳನ್ನಾಡುತ್ತಿದ್ದ. ನಂತರ ಕತ್ತರಿಸಿದ ಹಣ್ಣಿನ ಉಳಿದ ಭಾಗವನ್ನು ಮುದುಕಿಗೆ ರುಚಿನೋಡುವಂತೆ ಕೊಡುತ್ತಿದ್ದ. ಆಕೆ ಅದನ್ನು ತಿಂದು “ಚೆನ್ನಾಗಿಯೇ ಇದೆಯೆಲ್ಲ ಸ್ವಾಮಿ” ಎನ್ನುತ್ತಿದ್ದಳು. ಆದರೆ ಕೊಂಡ ಹಣ್ಣುಗಳನ್ನು ದಂಪತಿಗಳು ಯಾವಾಗಲೂ ಹಿಂದಿರುಗಿಸುತ್ತಿರಲಿಲ್ಲ. ಮುದುಕಿ ತೂಕ ಮಾಡುವಾಗ ಅವರಿಗೆ ಒಂದು ಹಣ್ಣು ಹೆಚ್ಚಿಗೆ ಇರುವಂತೆ ಮಾರುತ್ತಿದ್ದಳು. ಇದು ಬಹಳ ಕಾಲ ನಡೆಯುತ್ತಿತ್ತು.

ದಂಪತಿಗಳಲ್ಲಿ ಹೆಂಡತಿ “ಅಲ್ಲಾರೀ, ಆಕೆಯಿಂದ ತಂದ ಹಣ್ಣುಗಳೆಲ್ಲ ಯಾವಾಗಲೂ ಚೆನ್ನಾಗಿಯೇ ಇರುತ್ತವೆ. ಆದರೂ ನೀವು ಅಲ್ಲಿಯೇ ಒಂದನ್ನು ಕತ್ತರಿಸಿ ಒಂದು ಭಾಗವನ್ನು ತಿಂದು ಸುಮ್ಮಸುಮ್ಮನೆ ಮುದುಕಿಗೆ ಏನಾದರೂ ಹೇಳಿ ಉಳಿದ ಹಣ್ಣಿನ ಭಾಗವನ್ನು ಅವಳಿಗೆ ತಿನ್ನಲು ಕೊಡುತ್ತೀರಲ್ಲಾ ಏಕೆ?” ಎಂದು ಪ್ರಶ್ನಿಸಿದಳು. ಗಂಡ ಹೇಳಿದ “ ಮುದುಕಿಯು ಯಾವಾಗಲೂ ಒಳ್ಳೆಯ ಹಣ್ಣುಗಳನ್ನೇ ಮಾರುತ್ತಾಳೆ ಅನುಮಾನವಿಲ್ಲ. ಅವಳು ಎಂದಾದರೂ ತನಗೆಂದು ಒಂದಾದರೂ ಹಣ್ಣನ್ನು ತಿನ್ನುತ್ತಾಳೆಯೇ? ಅದಕ್ಕೆ ನಾನು ಅರ್ಧ ಕತ್ತರಿಸಿದ ಹಣ್ಣನ್ನು ಉಪಾಯವಾಗಿ ಏನಾದರೂ ಹೇಳಿ ಅವಳಿಗೇ ತಿನ್ನಲು ಕೊಡುತ್ತೇನೆ. ಹಾಗಾದರೂ ಅವಳೂ ತಿನ್ನಲಿ ಎಂದು” ಇದರಿಂದ ಹೆಂಡತಿಗೆ ತನ್ನ ಗಂಡನ ಅಂತಃಕರಣದ ಬಗ್ಗೆ ಹೆಮ್ಮೆಯೆನಿಸಿತು.

ಹಣ್ಣು ಮಾರುವ ಮುದುಕಿಯ ಪಕ್ಕದಲ್ಲಿ ಒಂದು ಹುಡುಗಿಯೂ ಹಣ್ಣುಗಳನ್ನು ಮಾರುತ್ತಿದ್ದಳು. ಅವಳು ಪ್ರತಿದಿನ ದಂಪತಿಗಳು ಮತ್ತು ಮುದುಕಿಯ ನಡುವೆ ನಡೆಯುವ ವ್ಯವಹಾರವನ್ನು ನೋಡುತ್ತಿದ್ದಳು. ಒಂದುದಿನ ಆಕೆ “ ಅಜ್ಜೀ ಅವರು ಹಣ್ಣುಗಳು ಚೆನ್ನಾಗಿದ್ದರೂ ಒಂದನ್ನು ಕತ್ತರಿಸಿ ಸ್ವಲ್ಪ ತಿಂದು ಉಳಿದದ್ದನ್ನು ನಿನಗೆ ಕೊಟ್ಟು ಹಣ್ಣುಗಳಲ್ಲಿ ಏನೋ ದೋಷವನ್ನು ತೋರುತ್ತಾರಲ್ಲಾ. ನಿನಗೆ ಬೇಸರವಾಗುವುದಿಲ್ಲವೇ? ಆದರೂ ನಾನು ನೋಡಿದಂತೆ ನೀನು ತೂಕಮಾಡುವಾಗ ಅವರಿಗೆ ಒಂದು ಹಣ್ಣನ್ನು ಹೆಚ್ಚಿಗೆ ಇರುವಂತೆ ಕೊಡುತ್ತೀಯಲ್ಲಾ ಏಕೆ?” ಎಂದು ಕೇಳಿದಳು.

ಮುದುಕಿ ನಸುನಗುತ್ತಾ “ಆತನಿಗೆ ನನ್ನನ್ನು ಕಂಡರೆ ತುಂಬ ಪ್ರೀತಿ. ಸುಮ್ಮಸುಮ್ಮನೆ ಅರ್ಧ ಹಣ್ಣನ್ನು ನನಗೆ ಕೊಡುವುದು ನಾನೂ ತಿನ್ನಲಿ ಎಂದು. ನನಗೆ ಅದು ಅರ್ಥವಾಗಿದೆ. ಅದಕ್ಕೆ ನಾನು ತೂಕಮಾಡಿದಾಗ ಒಂದು ಹಣ್ಣು ಹೆಚ್ಚಿಗೆ ಕೊಡುತ್ತೇನೆ. ನನಗೇಕೆ ಬೇಕು ಅವರ ಋಣ ಎಂದು” ಉತ್ತರಿಸಿದಳು.

ಜೀವನದಲ್ಲಿ ನಾವು ಸ್ನೇಹ, ಪ್ರೀತಿಯನ್ನು ಇನ್ನೊಬ್ಬ ಸಹಜೀವಿಗೆ ಕೊಟ್ಟರೆ ಅದು ಆ ಕಡೆಯಿಂದ ನಮಗೂ ಮತ್ತೆ ಸಿಗುತ್ತದೆ. ಇದನ್ನೇ ಸಂತೋಷದ ಕೊಡು ಕೊಳ್ಳುವಿಕೆಯೆನ್ನುತ್ತಾರೆ.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

5 Comments on “ವಾಟ್ಸಾಪ್ ಕಥೆ 69 : ಕೊಡು ಕೊಳ್ಳುವಿಕೆ.

  1. ಪ್ರಕಟಿಸಿದ ಸುರಹೊನ್ನೆ ಪತ್ರಿಕೆ ಯ ಸಂಪಾದಕರಿಗೆ ಹೃತ್ಪೂರ್ವಕವಾದ ಧನ್ಯವಾದಗಳು…

  2. ಬಹಳ ಸುಂದರವಾದ, ಉತ್ತಮ ಸಂದೇಶವುಳ್ಳ ಕಥೆ

    1. ಸಮಾರಂಭದ ಸಡಗರ ಸಂಬ್ರಮ ಮುಗಿಸಿ ಬಂದು ನನ್ನ ಕತೆಯನ್ನು ಓದಿ ಪ್ರತಿಕ್ರಿಯೆ ನೀಡಿರುವ ನಯನ ಮೇಡಂಗೆ…ಹೃತ್ಪೂರ್ವಕವಾದ ಧನ್ಯವಾದಗಳು.

  3. ಆಹಾ…ಅದ್ಭುತ!!!
    ಕೊಡು ಕೊಳ್ಳುವಿಕೆಯಲ್ಲಿರುವ ನಿಷ್ಠೆ, ಪ್ರೀತಿ, ಸ್ವಾಭಿಮಾನ ಅನನ್ಯ!!!
    ಸುಂದರ ಸಂದೇಶಯುಕ್ತ ಕಥೆಯೊಂದಿಗೆ, ನಾಗರತ್ನ ಮೇಡಂ…ನಿಮ್ಮ ರೇಖಾಚಿತ್ರ ಹೃದಯಂಗಮ!

    1. ನಿಮ್ಮ ಸಹೃದಯ ಸ್ಪಂದನೆಗೆ ಹೃತ್ಪೂರ್ವಕವಾದ ಧನ್ಯವಾದಗಳು ಶಂಕರಿ ಮೇಡಂ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *