ಲಹರಿ

ಮಾನವನ ಚತುರ್ಮುಖಗಳು

Share Button

ಮನೋವಿಜ್ಞಾನಿಗಳ ಪ್ರಕಾರ ಮಾನವರಲ್ಲಿ ನಾಲ್ಕು ಬಗೆಯ ಮನಸ್ಥಿತಿಯುಳ್ಳವರಿದ್ದಾರೆ. ಮೊದಲನೆಯ ವರ್ಗಕ್ಕೆ ಸೇರಿದವರು –‘ನಾನು ಸರಿ ಇದ್ದೇನೆ, ಈ ಪ್ರಪಂಚಾನೇ ಸರಿ ಇಲ್ಲ ಎಂದು ಅಹಂಕಾರದಿಂದ ಬೀಗುವವರು. ಎರಡನೆಯ ವರ್ಗದವರಿಗೆ ವಿಪರೀತವಾದ ಕೀಳರಿಮೆ, ‘ಅವರ ಭಾವ ಏನೆಂದರೆ – ನಾನು ಸರಿ ಇಲ್ಲ, ಪ್ರಪಂಚ ಸರಿ ಇದೆ. ಇನ್ನು ಮೂರನೆಯ ವರ್ಗಕ್ಕೆ ಸೇರಿದವರು ನಿರಾಶಾವಾದಿಗಳು – ಅವರಿಗೆ ಎಲ್ಲೆಲ್ಲಿಯೂ ಕತ್ತಲೆಯೇ ಕಾಣುವುದು – ಅವರ ಭಾವ ನಾನೂ ಸರಿ ಇಲ್ಲ, ಈ ಪ್ರಪಂಚವೂ ಸರಿ ಇಲ್ಲ. ನಾಲ್ಕನೆಯ ವರ್ಗಕ್ಕೆ ಸೇರಿದವರು ಆಶಾವಾದಿಗಳು – ನಾನೂ ಸರಿ ಇದ್ದೇನೆ, ನನ್ನ ಸುತ್ತಮುತ್ತಲಿನ ಪ್ರಪಂಚವೂ ಸರಿ ಇದೆ ಎಂಬ ಧನಾತ್ಮಕ ಚಿಂತನೆಯುಳ್ಳವರು.

ಮೊದಲನೆಯ ಪಂಗಡಕ್ಕೆ ಸೇರಿದ ಜನರಿಗೆ ‘ಮಮ’ ಮತ್ತು ‘ಅಹಂ’ ಎಂಬ ಪದಗಳ ಗೀಳು ವಿಪರೀತ. ಎಲ್ಲವೂ ನನ್ನಿಂದಲೇ, ನಾನೇ ಸರ್ವಶ್ರೇಷ್ಠ. ನನ್ನನ್ನು ಮೀರಿಸುವಂತಹವರು ಯಾರೂ ಇಲ್ಲ. ನನಗೆ ಎಲ್ಲವೂ ತಿಳಿದಿದೆ ಎಂಬ ಅಹಂಕಾರವುಳ್ಳವರು. ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಇಂತಹ ಹಲವು ಸರ್ವಾಧಿಕಾರಿಗಳ ಪರಿಚಯವಾಗುತ್ತದೆ. ಇಂತಹ ಮನೋಭಾವವುಳ್ಳವರು ತನ್ನ ನೆರೆಹೊರೆಯವರನ್ನು, ಸ್ನೇಹಿತರನ್ನು, ಬಂಧುಬಾಂಧವರನ್ನು ಒಂದಲ್ಲ ಒಂದು ಕಾರಣಕ್ಕೆ ತನ್ನ ಮಾತುಗಳಿಂದ ಮೊದಲಿಸುತ್ತಾರೆ. ಬೆಳಗಾಗೆದ್ದು ಹಾಲು, ಹಣ್ಣು, ತರಕಾರಿ ಕೊಳ್ಳಲು ಹೋದವನು, ‘ತರಕಾರಿಗೆ ಔಷಧಿ ಹೊಡೀತಾರೆ, ಹಣ್ಣುಗಳನ್ನು ರಾಸಾಯನಿಕ ಕ್ರಿಯೆಗಳಿಂದ ಮಾಗಿಸುತ್ತಾರೆ, ಹಾಲನ್ನು ಸರಿಯಾಗಿ ಪಾಸ್ಚರೈಸ್ ಮಾಡುವುದಿಲ್ಲ’ ಇತ್ಯಾದಿ ಕಂಪ್ಲೇಂಟ್ಸ್ ಗಳನ್ನು ಪುಂಖಾನುಪುಂಖವಾಗಿ ಹೊರ ಹಾಕುತ್ತಾನೆ. ತರಕಾರಿ ಚೆನ್ನಾಗಿದ್ದರೆ ರಾಸಾಯನಿಕ ಗೊಬ್ಬರ ಹಾಕುತ್ತಾರೆ ಎನ್ನುತ್ತಾನೆ, ಇಲ್ಲವಾದರೆ ತರಕಾರಿಯಲ್ಲಿ ಜಾಸ್ತಿ ಹುಳ ಬಿದ್ದಿದೆ ಎನ್ನುತ್ತಾ ಗೊಣಗುತ್ತಾನೆ. ಎಲ್ಲಾ ತರಕಾರಿಯ ದರ ಗಗನಕ್ಕೇರಿದೆ ಅಂತಾ ಹಲುಬುತ್ತಾನೆ.

ಮಕ್ಕಳು ಶಾಲೆಗೆ ಹೊರಟಾಗ ಅವರ ಬ್ಯಾಗಿನ ತೂಕ ಗಾತ್ರ ನೋಡಿ – ಶಿಕ್ಷಣ ಪದ್ಧತಿಯನ್ನೇ ಹಂಗಿಸುವನು. ಮಕ್ಕಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆ – ಟೀಚರ‍್ಸ್ ಸರಿಯಿಲ್ಲ, ಶಾಲೆ ಸರಿಯಿಲ್ಲ, ಫೀಸ್ ಜಾಸ್ತಿ, ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದೆಲ್ಲಾ ಸರ್ಕಾರವನ್ನು ಕೆಣಕುವನು. ರಸ್ತೆಯಲ್ಲಿ ಚಲಿಸುವಾಗ ಅಪಘಾತಗಳೇನಾದರೂ ಸಂಭವಿಸಿದರೆ ಮತ್ತೆ ರಸ್ತೆ ಸರಿಯಿಲ್ಲ, ವಾಹನ ಚಾಲಕರು ಸಾರಿಗೆ ನಿಯಮಗಳನ್ನು ಪಾಲಿಸುವುದಿಲ್ಲ ಇತ್ಯಾದಿ ದೂರುಗಳು. ಇಂತಹ ಮನೋಭಾವ ಹೊಂದಿದ ಜನರನ್ನು ಸರಿಮಾಡಲು ಅಸಾಧ್ಯ. ಇವನ ಮನೋಧರ್ಮವನ್ನು ಬಿಂಬಿಸುವ ಜಾನಪದ ಕಥೆಯನ್ನು ಕೇಳೋಣ ಬನ್ನಿ – ಊರ ಹೊರಬದಿಯಲ್ಲಿ ಒಂದು ದೊಡ್ಡದಾದ ಮರ ಇತ್ತು. ಅದಕ್ಕೋ ಅಸಾಧ್ಯ ಜಂಭ. ತನ್ನ ಅಂದ ಚೆಂದ, ತನ್ನ ರೆಂಬೆ ಕೊಂಬೆಗಳಲ್ಲಿ ಅರಳುವ ಪರಿಮಳ ಬೀರುವ ಸುಂದರವಾದ ಹೂಗಳು, ರುಚಿ ರುಚಿಯಾದ ಹಣ್ಣು ಹಂಪಲು ಇತ್ಯಾದಿಗಳ ಬಗ್ಗೆ ಸದಾ ಜಂಭ ಕೊಚ್ಚಿಕೊಳ್ಳುತ್ತಿತ್ತು. ಮರದ ಬದಿಯಲ್ಲಿ ಬೆಳೆದಿದ್ದ ಹುಲ್ಲನ್ನು ಆಗಾಗ್ಗೆ ಕೆಣಕುತ್ತಿತ್ತು – ನೀನು ಎಷ್ಟೊಂದು ಸಣ್ಣವನಿದ್ದೀ, ನಿನ್ನಲ್ಲಿ ಹೂವಿಲ್ಲ, ಹಣ್ಣಿಲ್ಲ ಎಂದೆಲ್ಲಾ ಹಂಗಿಸುತ್ತಿತ್ತು. ಹುಲ್ಲು ಮಾತ್ರ ತನ್ನ ಪಾಡಿಗೆ ತಾನಿದ್ದು, ಮರದ ಮಾತಿಗೆ ಏನೂ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗುತ್ತಿತ್ತು. ಒಂದು ದಿನ ಜೋರಾದ ಮಳೆ ಗಾಳಿ ಬಂತು. ಗಾಳಿಯ ರಭಸ ಎಷ್ಟಿತ್ತೆಂದರೆ ಹಲವು ಮರಗಳು ಬುಡ ಸಮೇತ ಉರುಳಿ ನೆಲಕ್ಕೆ ಬಿದ್ದವು. ಈ ಮರವೂ ಗಾಳಿಯೊಂದಿಗೆ ಸ್ವಲ್ಪ ಹೊತ್ತು ಸೆಣಸಾಡಿತು, ಆದರೆ ಆ ರಭಸವಾದ ಗಾಳಿಯ ಮುಂದೆ ನಿಲ್ಲಲಾಗದೆ ಬುಡಸಮೇತ ನೆಲಕ್ಕೆ ಉರುಳಿ ಬಿತ್ತು. ಆದರೆ ಹುಲ್ಲು ಮಾತ್ರ ಗಾಳಿ ಬಂದಾಗ ಆಚೆ ಈಚೆ ತೂಗಾಡಿ ನಂತರ ಮೊದಲಿನ ಹಾಗೆಯೇ ನಿಂತಿತು. ಅಹಂಕಾರದಿಂದ ಮೆರೆದ ಮರ ಬಿರುಗಾಳಿಗೆ ಸಿಕ್ಕು ನೆಲಕ್ಕೆ ಉರುಳಿತ್ತ್ತು. ಸಮಚಿತ್ತದಿಂದ ಇದ್ದ ಹುಲ್ಲು ನೆಟ್ಟಗೆ ನಿಂತಿತ್ತು.

ಎರಡನೆಯ ವರ್ಗಕ್ಕೆ ಸೇರಿದವರ ಮನಃಸ್ಥಿತಿಯನ್ನು ವಿಶ್ಲೇಷಿಸೋಣ ಬನ್ನಿ – ಇವರಿಗೆ ವಿಪರೀತ ಕೀಳರಿಮೆ. ತಮಗೆ ಬುದ್ಧಿಯಿಲ್ಲ, ವಿದ್ಯೆಯಿಲ್ಲ, ಅನುಭವ ಮೊದಲೇಯಿಲ್ಲ. ತನ್ನ ಸುತ್ತಮುತ್ತಲಿನ ಪ್ರಪಂಚದಲ್ಲಿರುವ ಜನರು ತನಗಿಂತ ಬಹಳ ಎತ್ತರದಲ್ಲಿರುವರು ಎಂದು ನಂಬುವರು. ಇವರು ಸದಾ ಒತ್ತಡ, ಆತಂಕದಲ್ಲಿ ನರಳುವರು, ಶಾಲೆಯಲ್ಲಿ ಕಲಿಯುವಾಗ ತಾನು ದಡ್ಡ, ತನ್ನ ಜೊತೆಯವರು ಎಷ್ಟೆಲ್ಲಾ ಅಂಕಗಳನ್ನು ಗಳಿಸುತ್ತಾರೆ ಎಂಬ ಭಾವ. ಪರೀಕ್ಷೆಯಲ್ಲಿ ಬರೆಯುವಾಗ ತಾನು ಕಲಿತದ್ದನ್ನೂ ಮರೆತು ಒದ್ದಾಡುವನು. ತಂದೆ ತಾಯಿಗಳು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಿದಾಗ ಇವರು ಮತಷ್ಟೂ ಕುಗ್ಗುವರು. ಕೆಲವು ಬಾರಿ ತನ್ನ ಚರ್ಮದ ಬಣ್ಣ ಕಪ್ಪಾಗಿದೆ, ತಾನು ಕುರೂಪಿ ಎಂಬ ಕೀಳರಿಮೆಯಿಂದ ಯಾರೊಂದಿಗೂ ಬೆರೆಯದೆ, ಮಾತಾಡದೆ ಇರುವ ಮಕ್ಕಳೂ ಇದ್ದಾರೆ. ಇವರಿಗೆ ಒಂದಿನಿತೂ ಆತ್ಮವಿಶ್ವಾಸವಾಗಲೀ, ಮುನ್ನುಗ್ಗುವ ಧೈರ್ಯವಾಗಲೀ ಇಲ್ಲದೆ ಚಡಪಡಿಸುವರು. ಗೆಳೆಯರ ಕೀಟಲೆ, ಅಪಹಾಸ್ಯಗಳು ಇವರನ್ನು ಖಿನ್ನತೆಗೆ ದೂಡುವುವು.

ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಓದಲು ಬರುವ ಮಕ್ಕಳು ಹಲವು ಬಗೆಯ ತೊಂದರೆಗಳಿಗೆ ಸಿಲುಕುವುದು ಸಾಮಾನ್ಯ. ಇಂಗ್ಲಿಷ್ ಭಾಷೆ ಮಾತಾಡಲು ಬರದವನಿಗೆ ದಡ್ಡ ಎಂಬ ಹಣೆಪಟ್ಟಿ ಹಚ್ಚಿಬಿಡುತ್ತಾರೆ. ಒಮ್ಮೆ ಪಟ್ಟಣದ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಆಗ ತಾನೆ ಶಾಲೆಗೆ ಸೇರಿದ್ದ ಹಳ್ಳಿಯಿಂದ ಬಂದಿದ್ದ ಹುಡುಗನಿಗೆ ಸಂಗೀತದಲ್ಲಿ ಅಪಾರವಾದ ಆಸಕ್ತಿ, ವಿದ್ಯಾರ್ಥಿಗಳು ಹಾಡುತ್ತಿದ್ದ ಹಾಡುಗಳನ್ನು ಕೇಳುತ್ತಾ ಅಲ್ಲಿಯೇ ಮೈಮರೆತು ನಿಂತುಬಿಟ್ಟಿದ್ದ. ಅವನು ಬಾಲ್ಯದಿಂದಲೇ ತನ್ನ ತಾಯಿಯಿಂದ ಭಜನೆಗಳನ್ನು ಸುಶ್ರಾವ್ಯವಾಗಿ ಹಾಡಲು ಕಲಿತಿದ್ದ. ಅವನಿಗೂ ಆ ವೇದಿಕೆಯ ಮೇಲೆ ನಿಂತು ಹಾಡುವ ಆಸೆ, ಅದರೆ ವಿಪರೀತ ಹಿಂಜರಿಕೆ, ಅವನ ಮುಖಚರ್ಯೆ ಗಮನಿಸಿದ ಶಿಕ್ಷಕಿಯೊಬ್ಬರು ಅವನ ಕೈ ಹಿಡಿದು ಬಲವಂತವಾಗಿ ವೇದಿಕೆಗೆ ಕರೆತರುತ್ತಾರೆ. ಮೈಕ್ ಮುಂದೆ ನಿಂತ ಹುಡುಗನಿಗೆ ಅಲ್ಲಿ ನೆರೆದಿದ್ದ ಜನರನ್ನು ಕಂಡು ಹೃದಯವೇ ಬಾಯಿಗೆ ಬಂದಂತಾಗುತ್ತದೆ. ನಡುಗುತ್ತಾ ನಿಂತ ಬಾಲಕನನ್ನು ಕಂಡ ಶಿಕ್ಷಕಿ ಕಣ್ಣು ಮುಚ್ಚಿ ಹಾಡಲು ಸನ್ನೆ ಮಾಡುತ್ತಾಳೆ. ಒಂದೇ ಕ್ಷಣ, ಹುಡುಗನಿಗೆ ತನ್ನ ತಾಯಿಯ ಬಳಿ ನಿಂತ ಹಾಗೆ, ತನ್ನ ಹಳ್ಳಿಯ ಶಾಲೆಯಲ್ಲಿ ಗುರುಗಳ ಮುಂದೆ ನಿಂತ ಭಾವ – ಹಾಡಲು ಶುರುಮಾಡುತ್ತಾನೆ. ಅವನ ಮಧುರವಾದ ಧ್ವನಿ, ಆ ತನ್ಮಯತೆ, ಇಂಪಾದ ಹಾಡುಗಾರಿಕೆ ಕಂಡು ಬೆರಗಾದ ಸಭಿಕರು ಜೋರಾಗಿ ಚಪ್ಪಾಳೆ ತಟ್ಟುತ್ತಾರೆ. ಇಂತಹ ಕೀಳರಿಮೆಯಿಂದ ನರಳುವ ಮಕ್ಕಳಿಗೆ ಹೀಗೆ ಭರವಸೆ ತುಂಬುವ ಹಿತೈಷಿಗಳು ಬೇಕು. ಅವರಲ್ಲಿ ಇರುವ ಪ್ರತಿಭೇಯನ್ನು ಗುರುತಿಸಿ ನೀರೆರೆದು ಪೋಷಿಸುವ ಶಿಕ್ಷಕರು ಬೇಕು. ಇಲ್ಲವಾದರೆ ತಾನು ನಿಷ್ಪ್ರಯೋಜಕ ಎಂಬ ಭಾವದಿಂದ ಹತಾಶೆಗೆ ಒಳಗಾಗುತ್ತಾರೆ.

ಇನ್ನು ಮೂರನೆ ವರ್ಗಕ್ಕೆ ಸೇರಿದವರ ಮನಃಸ್ಥಿತಿಯನ್ನು ವಿಶ್ಲೇಷಿಸೋಣ ಬನ್ನಿ. ಇವರು ಸದಾ ಸುತ್ತಮುತ್ತಲಿನ ಸಮಾಜವನ್ನೂ ದೂಷಿಸುತ್ತಲೇ ಇರುವರು – ಸಮಾಜವೇ ಸರಿ ಇಲ್ಲದಿರುವಾಗ ತಾನು ಹೇಗೆ ಸರಿ ಇರಲು ಸಾಧ್ಯ ಎಂಬುದೇ ಇವರ ಪ್ರಶ್ನೆ. ‘ನೀ ಯಾಕೆ ಪರೀಕ್ಷೆಯಲ್ಲಿ ಫೇಲಾದೆ’ ಎಂದು ಕೇಳಿದರೆ – ಆ ಶಾಲೆ ಸರಿ ಇಲ್ಲ, ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ, ಸಿಲಬಸ್ ಸರಿ ಇಲ್ಲ, ಪ್ರಶ್ನಪತ್ರಿಕೆ ಸೋರಿಕೆಯಾಗಿದೆ, ಮೌಲ್ಯಮಾಪನ ಮಾಡುವ ಶಿಕ್ಷಕರು, ಹಣ ತೊಗೊಂಡು ಮಾರ್ಕ್ಸ ಹಾಕ್ತಾರೆ. ಒಟ್ಟಾರೆ ಈ ಶಿಕ್ಷಣ ವ್ಯವಸ್ಥೆಯೇ ಸರಿ ಇಲ್ಲ ಎಂದು ಸಾರಾಸಗಟಾಗಿ ಹೇಳಿಬಿಡುತ್ತಾರೆ. ಇನ್ನು ಅವರ ಆರೋಗ್ಯ ಹದಗೆಟ್ಟಾಗ – ಅವರು ದೂಷಿಸುವುದು ಯಾರನ್ನು ಅಂತೀರಾ, ಕಲಬೆರಕೆ ಆಹಾರ, ಕಲುಷಿತ ನೀರು, ಉಸಿರಾಡುವ ಗಾಳಿಯೂ ಮಲಿನ ಇತ್ಯಾದಿ. ಆಸ್ಪತ್ರೆಗೆ ಹೋದವರು ಮತ್ತೊಂದು ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ವೈದ್ಯರು ಸರಿಯಾದ ಟ್ರೀಟ್‌ಮೆಂಟ್ ಕೊಡಲಿಲ್ಲ, ಆ ಆಸ್ಪತ್ರೆಯಲ್ಲಿ ಸುಮ್ಮ ಸುಮ್ಮನೇ ಬೇಡವಾದ ಪರೀಕ್ಷೆಗಳನ್ನು ಮಾಡುತ್ತಾರೆ, ಕೊನೆಗೆ ಸಿಕ್ಕಾಪಟ್ಟೆ ಹಣ ವಸೂಲಿ ಮಾಡುತ್ತಾರೆ.

ಅಕಸ್ಮಾತ್ ಇವನು ಆಫೀಸಿನಲ್ಲಿ ಕೆಲಸ ಮಾಡುವಾಗ ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದರೆ ಇವನ ಪ್ರವರವೇನು ಗೊತ್ತೆ – ಯಾರು ತಾನೆ ಲಂಚ ತಗೊಳಲ್ಲ? ನಾನ್ಯಾವ ತಪ್ಪುಮಾಡಿದೆ ಅಂತ ಬಂಧಿಸಿದ್ದಾರೆ? ಎಲ್ಲರೂ ಕಳ್ಳರೇ, ಭೂತಗನ್ನಡಿಯಲ್ಲಿ ಹುಡುಕಿದರೂ ಸತ್ಯ ಹರಿಶ್ಚಂದ್ರನಂತವರು ಕಾಣುವುದಿಲ್ಲ. ಸಿಕ್ಕಿ ಬಿದ್ದವನು ಮಾತ್ರ ಕಳ್ಳ, ಲಂಚಕೋರ ಉಳಿದವರೆಲ್ಲಾ ಪ್ರಾಮಾಣಿಕರೇ, ಸಭ್ಯರೇ ಎಂದು ವಾದ ಮಾಡುತ್ತಾನೆ. ಒಂದು ಪ್ರಸಂಗವನ್ನು ಕೇಳೋಣ ಬನ್ನಿ –ಒಂದೂರಿನಲ್ಲಿ ಒಬ್ಬ ಕಳ್ಳನಿದ್ದ, ಅವನು ಬಹಳ ಚಾಕಚಕ್ಯತೆಯಿಂದ ಕಳುವು ಮಾಡುತ್ತಿದ್ದ, ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಅವನನ್ನು ಹಿಡಿಯಲಾಗಿರಲಿಲ್ಲ. ಆ ಊರಿನವರಿಗೆಲ್ಲಾ ಅವನೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದ. ಅದರೆ ಒಮ್ಮೆ ಅವನ ಅದೃಷ್ಟ ಕೈ ಕೊಟ್ಟಿತ್ತು, ಪೊಲೀಸರು ಅವನನ್ನು ಹಿಡಿದೇ ಬಿಟ್ಟರು. ಅವನನ್ನು ಆ ಊರಿನ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಕರೆದೊಯ್ದರು, ದಾರಿಯಲ್ಲಿ ನಿಂತವರೆಲ್ಲಾ ಅವನಿಗೆ ಛೀ, ಥೂ ಎಂದು ಉಗಿಯುತ್ತಿದ್ದರು. ಈ ಮೆರವಣಿಗೆ ಒಂದು ಓಣಿಗೆ ಬಂದಾಗ ಕಳ್ಳನು ಪೊಲೀಸರ ಬಳಿ ಒಂದು ಬೇಡಿಕೆ ಇಡುತ್ತಾನೆ. ಅಲ್ಲಿ ನಿಂತಿದ್ದ ತನ್ನ ತಾಯಿಯ ಬಳಿ ಒಂದೆರೆಡು ಮಾತಾಡಬೇಕು ಎಂದು. ಪೊಲೀಸರ ಒಪ್ಪಿಗೆ ಪಡೆದು ತನ್ನ ತಾಯಿಯ ಬಳಿ ಬಂದವನೇ ಅವಳ ಕಪಾಳಕ್ಕೆ ನಾಲ್ಕಾರು ಬಾರಿ ಬಾರಿಸುತ್ತಾನೆ. ಚಕಿತಗೊಂಡ ಪೊಲೀಸರು, ನೀನು ಜೈಲಿಗೆ ಹೋಗುವಾಗಲೂ ನಿನ್ನ ನೀಚ ಬುದ್ಧಿಯನ್ನು ಬಿಡಲಿಲ್ಲವಲ್ಲ ಎಂದು ಅವನನ್ನು ಎಳೆತರುತ್ತಾರೆ. ಆಗ ಕಳ್ಳನು, ತಾನು ಚಿಕ್ಕವನಿದ್ದಾಗ ಮೊದಲಬಾರಿಗೆ ಕಳ್ಳತನ ಮಾಡಿದಾಗ ತನ್ನ ತಾಯಿ ಹೀಗೆ ನನಗೆ ಬೈದು ಕಪಾಳಕ್ಕೆ ಬಾರಿಸಿದ್ದಿದ್ದರೆ, ಇಂದು ನಾನು ಕಳ್ಳನಾಗುತ್ತಿರಲಿಲ್ಲ. ಬದಲಿಗೆ ನನ್ನ ತಾಯಿ ನಾನು ಕಳ್ಳತನ ಮಾಡಿ ತಂದ ವಸ್ತುಗಳನ್ನೆಲ್ಲಾ ಸಂತೋಷದಿಂದ ತೆಗೆದುಕೊಂಡು ಶಬ್ಬಾಷ್ ಎನ್ನುತ್ತಿದ್ದಳು. ಇವಳಿಂದಲೇ ನಾನು ಇಂದು ಕಳ್ಳನೆಂಬ ಪಟ್ಟ ಹೊತ್ತು ಜೈಲು ಸೇರುತ್ತಿರುವೆ. ಹೀಗೆ ತನ್ನ ಸುತ್ತಮುತ್ತಲೂ ಅನೀತಿ, ಅನಾಚಾರ, ಮೋಸ, ವಂಚನೆ ಮಾಡುವ ಜನರಿರುವುದರಿಂದಲೇ ತಾನೂ ಅನ್ಯಾಯದ ಮಾರ್ಗ ಹಿಡಿದಿರುವೆ ಎಂದು ನಂಬುತ್ತಾನೆ.

ಇನ್ನು ನಾಲ್ಕನೆಯ ವರ್ಗದ ಜನರು ಸಂತರು, ಮಹಾಪುರುಷರು. ಇವರು ಸನ್ಮಾರ್ಗದಲ್ಲಿ ನಡೆಯುತ್ತಾ ತಮ್ಮ ಸುತ್ತಮುತ್ತಲಿನ ಸಮಾಜದ ಏಳಿಗೆಗಾಗಿ ಶ್ರಮಿಸುವರು. ಇವರು ಸಜ್ಜನರು, ನಿಷ್ಕಾಮ ಕರ್ಮ ಮಾಡುತ್ತಾ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಪಣತೊಟ್ಟವರು. ತಾವು ನಡೆಯುವ ಮಾರ್ಗ ಸರಿ ಇದೆ, ಬೇರೆಯವರನ್ನೂ ಅದೇ ಮಾರ್ಗದಲ್ಲಿ ಮುನ್ನೆಡೆಸಲು ಛಲ ತೊಟ್ಟವರು. ಸರಳವಾದ ಸಪ್ತ ಸೂತ್ರಗಳನ್ನು ಬೋಧಿಸಿದ ಬಸವಣ್ಣನವರ ವಚನವೊಂದನ್ನು ನೆನಪಿಸಿಕೊಳ್ಳೋಣ ಬನ್ನಿ – ಕಳಬೇಡ, ಕೊಲಬೇಡ / ಹುಸಿಯ ನುಡಿಯಲು ಬೇಡ / ಮುನಿಯಬೇಡ / ಅನ್ಯರಿಗೆ ಅಸಹ್ಯ ಪಡಬೇಡ / ತನ್ನ ಬಣ್ಣಿಸಬೇಡ / ಇದಿರ ಹಳಿಯಲು ಬೇಡ / ಇದೇ ಅಂತರಂಗ ಶುದ್ಧಿ / ಇದೇ ಬಹಿರಂಗ ಶುದ್ಧಿ /ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ. ನಮ್ಮೆಲ್ಲರಿಗೂ ಆದರ್ಶ ಮಾರ್ಗವನ್ನು ರೂಪಿಸಿಕೊಟ್ಟಿರುವ ಈ ಶರಣರೇ ನಾಲ್ಕನೆಯ ವರ್ಗಕ್ಕೆ ಸೇರಿದವರು. ಇಂತಹ ನೈತಿಕ ಮೌಲ್ಯಗಳನ್ನು ತಮ್ಮ ನಡೆ ನುಡಿಗಳಲ್ಲಿ ಅಳವಡಿಸಿಕೊಂಡಾಗ ಮಾತ್ರ ಮಾನವನ ಬದುಕು ಹಸನಾಗುವುದು.

ಅಂಗುಲಿಮಾಲಾ ಮತ್ತು ಬುದ್ಧನ ನಡುವೆ ನಡೆದ ಪ್ರಸಂಗವೊಂದನ್ನು ನೆನಪಿಸಿಕೊಳ್ಳೋಣ ಬನ್ನಿ. ಒಂದು ದಟ್ಟವಾದ ಅರಣ್ಯದಲ್ಲಿ ಅಂಗುಲಿಮಾಲಾನೆಂಬ ಕುಖ್ಯಾತ ದರೋಡೆಕಾರನು ದಾರಿಯಲ್ಲಿ ಹೋಗುತ್ತಿದ್ದ ಜನರನ್ನು ದೋಚಿ ಅವರನ್ನು ಹತ್ಯೆ ಮಾಡಿ, ಅವರ ಒಂದು ಬೆರಳನ್ನು ತನ್ನ ಕೊರಳಲ್ಲಿದ್ದ ಹಾರದಲ್ಲಿ ಸೇರಿಸಿಕೊಳ್ಳುತ್ತಿದ್ದ. ಇವನನ್ನು ಕಂಡರೆ ಸುತ್ತಮುತ್ತ ಗ್ರಾಮದವರೆಲ್ಲಾ ತುಂಬಾ ಭಯ ಪಡುತ್ತಿದ್ದರು. ಒಮ್ಮೆ ಭಗವಾನ್ ಬುದ್ಧನು ಆ ದಾರಿಯಲ್ಲಿ ಹೋಗುತ್ತಿರುವಾಗ, ಸನ್ಯಾಸಿಯ ತೇಜಸ್ಸು, ಮುಖದ ಮೇಲಿದ್ದ ಕಾಂತಿಯನ್ನು ಕಂಡು ಅಂಗುಲಿಮಾಲಾ ಬೆರಗಾಗುವನು. ‘ಎಲ್ಲರೂ ನನ್ನನ್ನು ನೋಡಿ ಭಯಭೀತರಾಗುವಾಗ ಇವನು ಮಾತ್ರ ಎಷ್ಟೊಂದು ಶಾಂತಿಯಿಂದ ಈ ಅರಣ್ಯದಲ್ಲಿ ನಡೆದು ಹೋಗುತ್ತಿದ್ದಾನೆ’. ಆಗ ಅವನು ಆ ಸನ್ಯಾಸಿಯನ್ನು ಕೊಲ್ಲಲು ಮನಸ್ಸಾಗದೇ, ‘ಎಲೈ ಸನ್ಯಾಸಿಯೇ ನಿಲ್ಲು ಮುಂದೆ ಹೋಗಬೇಡ’ ಎಂದು ಕೂಗುವನು. ಆಗ ಬುದ್ಧನು ಮುಗುಳ್ನಗುತ್ತಾ, ‘ನಾನು ಸ್ಥಿರವಾಗಿ ನಿಂತಿರುವೆ, ಚಲಿಸುತ್ತಿರುವನು ನೀನು’ ಎಂದು ನುಡಿಯುವನು. ಅವನ ಮಾತುಗಳನ್ನು ಕೇಳಿ ಅಚ್ಚರಿಗೊಂಡ ದರೋಡೆಕಾರನು, ‘ಮುಂದೆ ಸಾಗುತ್ತಿರುವನು ನೀನು, ಬೆಟ್ಟದ ನೆತ್ತಿಯ ಮೇಲೆ ನಿಂತಿರುವನು ನಾನು, ನಿನ್ನ ಮಾತಿನ ಅರ್ಥವೇನು ಹೇಳು’ ಎಂದು ಕೇಳುವನು. ಆಗ ಬುದ್ಧನು, ‘ನಾನು ಅರಿಷಡ್ವರ್ಗಗಳನ್ನು ಗೆದ್ದು ಸ್ಥಿರವಾಗಿ ನಿಂತಿರುವೆ ಆದರೆ ನೀನು ಮೋಹ, ಮದ ಮಾತ್ಸರ್ಯಗಳ ಬಲೆಯಲ್ಲಿ ಸಿಕ್ಕು ಚಡಪಡಿಸುತ್ತಿರುವೆ’ ಎಂದು ಉತ್ತರಿಸುವನು. ಬುದ್ಧನ ಮಾತುಗಳಿಂದ ಪ್ರಭಾವಿತನಾದ ದರೋಡೆಕಾರನು ಬುದ್ಧನ ಅನುಯಾಯಿಯಾಗುವನು.

ನಮ್ಮ ಅಂತರಂಗದಲ್ಲಿದ್ದ ಆಸೆಯ ಕಸ ಗುಡಿಸಲೆಂದು ಬುದ್ಧ ಬಂದ / ಅಜ್ಞಾನದ ಅಂಧಕಾರ ಕಳೆಯಲೆಂದು ಶಂಕರ ಬಂದ / ಅಸ್ಪೃಶ್ಯತೆಯ ಮೈಲಿಗೆಯನ್ನು ತೊಳೆಯಲೆಂದು ಬಸವ ಬಂದ / ಮೋಹದ ರಾಡಿಯನ್ನು ಕಳೆಯಲೆಂದು ಮಹಾವೀರ ಬಂದ / ಒಬ್ಬರೇ ಇಬ್ಬರೇ ನೂರಾರು ಜನ ಶರಣರು, ಸಂತರು ಈ ಭೂಮಿಯಲ್ಲಿ ಅವತರಿಸಿ ಬಂದರು / ಆದರೂ ನಮ್ಮ ಅಂತರಂಗ ಹಸನಾಗಲಿಲ್ಲ ಎಂದು ನುಡಿಯುತ್ತಾರೆ ಈ ಯುಗದ ಸಂತ ಸಿದ್ಧೇಶ್ವರ ಸ್ವಾಮಿಗಳು.

ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

8 Comments on “ಮಾನವನ ಚತುರ್ಮುಖಗಳು

  1. ಮನ ಮುಟ್ಟುವಂತಿದೆ ಲೇಖನ ಗೊತ್ತಿರುವ ಸಂಗತಿಯಾದರೂ ಹೇಳಿ ರುವ ರೀತಿ ಸೊಗಸಾಗಿ ದೆ ಮೇಡಂ..

  2. ಮನುಷ್ಯನ ಮನಸ್ಥಿತಿ ಯ ಕುರಿತು ಚೆನ್ನಾಗಿ, ವಿಶ್ಲೇಷತ್ಮಕವಾಗಿ ಹೇಳಿದ್ದೀರಿ.

  3. ಕಳೆಗಟ್ಟುವ ಕಥೆಗಳ ಮೂಲಕ ಮಾನವನ ಚತುರ್ಮುಖಗಳ ದರ್ಶನ ಮಾಡಿಸಿದ ಲೇಖನವು ಚೆನ್ನಾಗಿದೆ ಗಾಯತ್ರಿ ಮೇಡಂ.

  4. Iam ok you are ok By thoms harries ಎಂಬ ಪುಸ್ತಕ ಈ ಅಂಶಗಳನ್ನೇ ಹೇಳಿದೆ ಕನ್ನಡದಲ್ಲಿ ಸರಳವಾಗಿ ಜಾನಪದ ಕತೆ ಗಳ ಉದಾ ಹರಣೆ ಮೂಲಕ ಮಸ್ತಕದಲ್ಲಿ ಇಳಿಯುವಂತೆ ಮಾಡಿದೆ ನನ್ನ ಓದು ಮತ್ತೊಮ್ಮೆ ಮರುಕಳಿಸಿತು ಧನ್ಯವಾದಗಳು

Leave a Reply to Gayathri Sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *