ಸೂರ್ಯನ ಬೆಳಕು ಧರಣಿಗೆ ಚೇತನ
ಜೀವಕೋಟಿಗೆ ಅವಶ್ಯವು
ಅವನ ನೇರಳೆಯ ನೇರ ಕಿರಣವು
ಬೀಳಲು ಪ್ರಥ್ವಿಗೆ ಮಾರಕವು//
ನೇರ ಕಿರಣವು ಬೀಳದೆ ಇರಲು
ಹಬ್ಬಿದೆ ತೆಳವಾದ ಪರದೆಯು
ಅದುವೆ ಓಝೋನ್ ಪದರವೆ ಆಗುತ
ಪ್ರಕೃತಿ ಗಾಗಿದೆ ರಕ್ಷಣೆಯು//
ಪರಿಸರ ಮಲಿನತೆ ಹೊಗೆಯನು ಉಗುಳಿ
ರಂದ್ರ ಬೀಳುತಿದೆ ಪರದೆಯಲಿ
ತೂತಿನ ಮೂಲಕ ಭೂಮಿಗೆ ಬರುತಿದೆ
ನೇರ ಕಿರಣವು ವೇಗದಲಿ//
ಕಾಡನು ಕಡಿದಿಹ ಫಲವಿದು ಎಂದು
ಮರುಗಲು ಬೇಕಿದೆ ಎಲೆಮನುಜ
ಸಾವು ನೋವುಗಳ ಹೊತ್ತು ತರುತಲಿ
ಪ್ರಕೃತಿಗೆ ಆಗಿದೆ ನಷ್ಟಸಹಜ//
ಕಾಣುತಲಿರುವವು ಸಾವಿರ ಸಾವಿರ
ಭಯವನು ಹುಟ್ಟಿಸೋ ರೋಗಗಳು
ನೇರಳೆ ಕಿರಣದ ಭೀಕರ ಪರಿಣಾಮ
ಕಾಡುತಲಿಹವು ಸಾವುಗಳು//
ಹೊಗೆಯನು ಉಗುಳುವ ಕಾರ್ಖಾನೆ
ಮೋಟಾರು ವಾಹನದ ತಲೆಬಿಸಿಯು
ಎಣೆಯೇ ಇಲ್ಲದ ಮಾಲಿನ್ಯದಿಂದ
ಬದುಕಿನ ಗೆಲುವಿನ ಚಿಂತೆಯು//
ಬಿಸಿಲಿನ ತಾಪವು ಒಂದೆಡೆಯಾದರೆ
ಮಾರಕ ರೋಗಗಳು ಜನರಲ್ಲಿ
ರಕ್ಷಣೆ ಮಾಡುವ ಓಝೋನ್ ಹೋದರೆ
ಆಪತ್ತು ನಮ್ಮಯ ಬಾಳಲ್ಲಿ//
ಕಾಡನು ಬೆಳೆಸುತ ಹಸಿರನು ಉಳಿಸಲು
ಜನತೆಯ ಬದುಕು ಬಂಗಾರ
ಪರದೆಯ ರಕ್ಷಿಸಿ ಚಂದದಿ ಬದುಕಲು
ಮಾಲಿನ್ಯ ತಡೆಯೇ ಆಧಾರ//
ಉಳಿಸೋಣ ಬನ್ನಿ ಓಝೋನ್ ಪದರವ
ವಾಯುವ ಶುದ್ಧಗೊಳಿಸುತಲಿ
ಹರಿದೇ ಹೋದರೆ ಪರದೆಯು ನಮಗೆ
ನಾಶವು ಬದುಕೆಂದು ಅರಿಯುತಲಿ//
(16/09/25: ಓಝೋನ್ ದಿನದ ಅಂಗವಾಗಿ)

ಶುಭಲಕ್ಷ್ಮಿ ಆರ್ ನಾಯಕ್
ಎಚ್ಚರಿಕೆ ಯ ಸಂದೇಶ ಹೊತ್ತ ಕವನ ಚೆನ್ನಾಗಿ ದೆ..
ವಾಸ್ತವವನ್ನು ಬಿಂಬಿಸುವ ಕವನ.
ಓಝೋನ್ ಪದರಕ್ಕಾಗುತ್ತಿರುವ ಹಾನಿಯಿಂದ ಭೂಮಿ ಎದುರಿಸಬೇಕಾಗಿರುವ ದುರಂತದ ಬಗ್ಗೆ ಕಠೋರ ಸತ್ಯವನ್ನು ಬಿಚ್ಚಿಟ್ಟ ಕವನ!