ಪ್ರವಾಸ

ಸಂತೇಬೆನ್ನೂರಿನ ಪುಷ್ಕರಿಣಿ

Share Button

ಸಿಹಿಮೊಗೆಯ ಶ್ರೀಕ್ಷೇತ್ರಗಳ ದರ್ಶನ -ಸಂತೇಬೆನ್ನೂರಿನ ಪುಷ್ಕರಿಣಿ

ನಾವು ಹಲವು ಬಾರಿ ಶಿವಮೊಗ್ಗೆಯಿಂದ ದಾವಣಗೆರೆಗೆ ಹೋಗಿದ್ದರೂ, ಸಂತೇಬೆನ್ನೂರಿನ ಪುಷ್ಕರಿಣಿಗೆ ಭೇಟಿಯಿತ್ತಿರಲಿಲ್ಲ. ಇತ್ತೀಚೆಗೆ ಶಿವಮೊಗ್ಗಾ-ಹೊನ್ನಾಳಿ-ದಾವಣಗೆರೆಯ ಮಾರ್ಗ ತುಂಬಾ ಹಾಳಾಗಿದ್ದುದರಿಂದ, ಸ್ನೇಹಿತರೊಬ್ಬರು ಚನ್ನಗಿರಿ-ಸಂತೇಬೆನ್ನೂರು ಮಾರ್ಗವಾಗಿ ದಾವಣಗೆರೆಗೆ ಹೋಗಿ, ರಸ್ತೆ ತುಂಬಾ ಚೆನ್ನಾಗಿದೆ ಎಂದು ಸಲಹೆ ನೀಡಿದರು, ಹಾಗೆಯೇ ಸಂತೇಬೆನ್ನೂರಿನ ಪುಷ್ಕರಣಿಯನ್ನು ನೋಡಲು ಮರೆಯದಿರಿ ಎಂದೂ ಹೇಳಿದರು. ನಾವು ಮುಂಜಾನೆ ಏಳು ಗಂಟೆಗೇ ಶಿವಮೊಗ್ಗಾದಿಂದ ಹೊರಟವರು 65 ಕಿ.ಮೀ. ದೂರದಲ್ಲಿರುವ ಸಂತೇಬೆನ್ನೂರು ತಲುಪಿದಾಗ ಎಂಟೂವರೆಯಾಗಿತ್ತು. ಹೆದ್ದಾರಿಗೇ ಅಂಟಿಕೊಂಡಂತೆ ಇರುವ ಈ ಸ್ಥಳ ಮೊದಲಿಗೆ ಅಷ್ಟೇನೂ ಉತ್ಸಾಹ ಮೂಡಿಸಲಿಲ್ಲ. ಗೇಟಿನ ಮುಂಭಾಗದಲ್ಲಿ ದೊಡ್ಡದಾದ ಮುಸಾಫಿರ್‌ಖಾನದ ಕಟ್ಟಡ ಪುಷ್ಕರಿಣಿಗೆ ಅಡ್ಡಲಾಗಿ ನಿಂತಿತ್ತು. ನಾವು ಒಳಹೊಕ್ಕಾಗ ಕಂಡದ್ದು, ಸಂತೇಬೆನ್ನೂರಿನ ಇತಿಹಾಸವನ್ನು ಹೊತ್ತ ಭಾರತದ ಪುರಾತತ್ವ ಇಲಾಖೆಯ ಫಲಕಗಳು, ನಾವು ಈ ಪುಷ್ಕರಣಿಯ ಇತಿಹಾಸ ಓದುತ್ತಾ ಹೋದ ಹಾಗೆ ನಮ್ಮಲ್ಲಿ ಈ ಸ್ಥಳದ ಬಗ್ಗೆ ಆಸಕ್ತಿ, ಕುತೂಹಲ ಮೂಡತೊಡಗಿತ್ತು. ಈ ರಮ್ಮಂವಾದ ಪುಷ್ಕರಣಿಯ ಸುತ್ತಲೂ ಗೋಪುರಗಳು ಇಂಡೋ ಅರೇಬಿಕ್ ಶೈಲಿಯಲ್ಲಿ ಕಂಗೊಳಿಸುತ್ತಿದ್ದವು.

ಸಂತೇಬೆನ್ನೂರಿನ ಪುಷ್ಕರಣಿಯ ಸುತ್ತಮುತ್ತ ಸುಂದರವಾದ ಹೂತೋಟವಿದ್ದು, ಆ ಕಲಾಕೃತಿಗಳಿಗೆ ಮೆರಗನ್ನು ನೀಡುತ್ತಿದ್ದವು. ಕೊಳದ ಸುತ್ತಲೂ ಗ್ರಾನೈಟಿನ ಮೆಟ್ಟಿಲುಗಳು, ಮುಖ್ಯ ದ್ವಾರದ ಬಳಿ 56 ಮೆಟ್ಟಿಲುಗಳಿದ್ದರೆ, ಉಳಿದ ಮೂರು ಕಡೆ 44 ಮೆಟ್ಟಿಲುಗಳು ಇದ್ದವು. ಕೊಳದ ಮೂಲೆ ಮೂಲೆಗಳಲ್ಲೂ ಆರು ಗೋಪುರಗಳು ಹಾಗೂ ಕೊಳದ ಮಧ್ಯೆ ರಾಜಗಾಂಭೀರ್ಯದಿಂದ ಎದ್ದು ನಿಂತಿತ್ತು ಎತ್ತರವಾದ ಚೆಲುವಾದ ವಸಂತ ಗೋಪುರ. ಕೊಳದಲ್ಲಿ ಗಂಗೆ ಮಂದಗಾಮಿನಿಯಾಗಿದ್ದಳು. ‘ಕೊಳದಲ್ಲಿ ನೀರು ತುಂಬಾ ಆಳವಾಗಿದೆ, ಎಚ್ಚರ’ ಎಂಬ ಫಲಕವನ್ನೂ ತೂಗು ಹಾಕಿದ್ದರು. ಹಲವಾರು ಶತಮಾನಗಳಿಂದ ರಾಜಕೀಯ ಪಲ್ಲಟಗಳ ಕೇಂದ್ರಬಿಂದುವಾಗಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯಾಗಿ ನಿಂತಿರುವ ಪುಷ್ಕರಣಿಯಲ್ಲಿ ಒಮ್ಮೆ ಇಣುಕಿದೆ, ಏನಾದರೂ ಕಂಡೀತೇನೋ ಎಂದು.

ಶಿವನ ಜಡೆಯಿಂದ ಇಳಿದು ಬಂದ ಗಂಗೆ ನಿಧಾನವಾಗಿ ತನ್ನ ಕಥೆಯನ್ನು ವ್ಯಥೆಯನ್ನು ಉಸುರಿದಳು, – ‘ಮಗೂ, ಇಂದಿನ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿರುವ ಪುಷ್ಕರಣಿ ನಾನು. ನನ್ನ ಇತಿಹಾಸ ಕೇಳುವೆಯಾ? ನಾನು ಸುತ್ತಮುತ್ತಲಿರುವ ಬೆಟ್ಟ ಗುಡ್ಡಗಳಲ್ಲಿ ಜನಿಸಿದೆ. ಬಾಯಾರಿದವರಿಗೆ ನೀರುಣಿಸುತ್ತಾ, ಭೂದೇವಿಗೆ ಹಸಿರುಡುಗೆ ಉಡಿಸುತ್ತಾ, ಪ್ರಾಣಿ ಪಕ್ಷಿಗಳ ಹಸಿವು ತಣಿಸುತ್ತಾ ಹಾಯಾಗಿದ್ದೆ. ಆದರೆ ನಾಡಿನ ದೊರೆಗಳ ಹಿಡಿತಕ್ಕೆ ಸಿಕ್ಕು ಶ್ರೀರಾಮನ ಮಂದಿರದ ಮುಂದೆ ರಾಮತೀರ್ಥವಾಗಿ ರೂಪುಗೊಂಡೆ. ವಿಷ್ಣುವಿನ ಅವತಾರವಾದ ಶ್ರೀರಾಮನ ಪಾದಗಳನ್ನು ತೊಳೆಯುತ್ತಾ ಪುನೀತಳಾದೆ. ಹದಿನಾರನೆಯ ಶತಮಾನದಲ್ಲಿ ಸಂತೇಬೆನ್ನೂರಿನ ಪಾಳೆಗಾರನಾಗಿದ್ದ ಕೆಂಗ ಹನುಮಂತಪ್ಪ ನಾಯಕನು ತನ್ನ ಕುಲದೇವತೆ ಶ್ರೀರಾಮನ ಮಂದಿರವನ್ನು ನಿರ್ಮಿಸಿದ, ಮಂದಿರದ ಮುಂದೆ ಒಂದು ಕಲ್ಯಾಣಿಯನ್ನೂ ಕಟ್ಟಿಸಿ, ಅಲ್ಲಿ ನನ್ನನ್ನು ಬಂಧಿಯಾಗಿಸಿದ. ವಿಜಯಪುರದ ಸುಲ್ತಾನರಾಗಿದ್ದ ಆದಿಲ್ ಶಾಹಿಯ ಮೇಲೆ ನಡೆದ ಯುದ್ಧದಲ್ಲಿ ವಿಜಯಶಾಲಿಯಾದ ಹನುಮಂತಪ್ಪ ನಾಯಕನು, ತನ್ನ ಗೆಲುವಿನ ಸಂಕೇತವಾಗಿ ಕಲ್ಯಾಣಿಯ ಮಧ್ಯೆ ಚಚ್ಚೌಕಾರದ ಅಡಿಪಾಯದ ಮೇಲೆ ವಿಜಯ ಗೋಪುರವನ್ನು ನಿರ್ಮಿಸಿದ. ಈ ಎರಡಂತಸ್ತಿನ ಗೋಪುರವು ಅತ್ಯಂತ ಕಲಾತ್ಮಕವಾಗಿದ್ದು ನನ್ನ ಒಡಲಲ್ಲಿ ತೇಲುತ್ತಿರುವಂತೆ ಭಾಸವಾಗುತ್ತದೆ ಅಲ್ವಾ? ಇಲ್ಲಿ ಒಂದು ದೊಡ್ಡದಾದ ಕಾರಂಜಿಯೂ ಇದ್ದು, ಇದನ್ನು ಕಾರಂಜಿ ಮಂಟಪವೆಂದೂ ಕರೆಯಲಾಗುತ್ತಿತ್ತು. ಈ ಗೋಪುರವು ಮೂವತ್ನಾಲ್ಕು ಚದರಡಿ ವಿಸ್ತೀರ್ಣ ಹೊಂದಿದ್ದು, ಹಲವಾರು ಕಂಬಗಳ ಮೇಲೆ ಗೋಪುರವು ನಿಂತಿದ್ದು, ಆ ಕಂಬಗಳ ಮೇಲೆಲ್ಲಾ ಅದ್ಭುತವಾದ ಶಿಲ್ಪಗಳನ್ನು ಕೆತ್ತಲಾಗಿವೆ, ‘ಆನೆಗಳು, ಹಂಸಗಳು, ಗಂಡುಭೇರುಂಡ ಪಕ್ಷಿ, ಕತ್ತಿ ಹಿಡಿದು ರಣರಂಗಕ್ಕೆ ಹೊರಟ ಸೇನಾನಿಗಳು ಇತ್ಯಾದಿ ಶಿಲ್ಪಗಳ ಜೊತೆ ಜೊತೆಗೇ ಅಲಂಕಾರಿಕ ಪುಷ್ಪಗಳ ಚಿತ್ರಗಳೂ ಇವೆ. ಭಾರತೀಯ ಶಿಲ್ಪಕಲೆಯ ಪ್ರತಿರೂಪವಾದ ಈ ಕಂಬಗಳ ಆಧಾರದ ಮೇಲೆ ನಿಂತಿರುವ ಗೋಪುರಗಳು ಅರೇಬಿಕ್ ವಾಸ್ತುಶಿಲ್ಪವನ್ನು ಹೋಲುತ್ತವೆ. ಕಾರಣ ಸ್ಪಷ್ಠ, ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾದಾಗ ನನ್ನ ಗೋಪುರಗಳ ಸ್ವರೂಪ ಬದಲಾಗಿತ್ತು.’ ಎಂದು ತನ್ನ ಕಥೆಯನ್ನು ಉಸುರುತ್ತಾ ಪುಷ್ಕರಣಿಯಲ್ಲಿ ಮರೆಯಾದಳು ಗಂಗೆ.

ಈ ಪುಷ್ಕರಣಿಯ ಸುತ್ತಲೂ ಎಂಟು ಕಲಾತ್ಮಕವಾದ ಗೋಪುರಗಳಿದ್ದು, ಎರಡು ಮಂಟಪಗಳು ನಿರ್ನಾಮವಾಗಿವೆ. ಉಳಿದ ಆರು ಗೋಪುರಗಳು ನಾಲ್ಕು ಕಂಬಗಳ ಆಧಾರದ ಮೇಲೆ ನಿಂತಿದ್ದು, ಆ ಕಂಬಗಳ ಮೇಲೆಲ್ಲಾ ಇಂಡೋ ವಾಸ್ತುಶಿಲ್ಪದ ಶೈಲಿಯಲ್ಲಿ ಶಿಲ್ಪಗಳನ್ನು ಬಿಡಿಸಲಾಗಿದೆ. ಏಳು ಹೆಡೆಯ ಸರ್ಪಗಳು, ವಿನಾಯಕ ಹಾಗೂ ಆಂಜನೇಯನ ಮೂರ್ತಿಗಳು, ವೀರಗತ್ತಿ ಹಿಡಿದು ನಿಂತ ಸೈನಿಕರು, ಕಂಬದ ಅಂಚಿನಲ್ಲಿ ಹೂ ಬಳ್ಳಿಗಳು, ಪಕ್ಷಿಗಳು ಮುಂತಾದ ಶಿಲ್ಪಗಳನ್ನು ನೋಡಬಹುದು, ಆದರೆ ಗೋಪುರ ಮಾತ್ರ ಅರೇಬಿಕ್ ಶೈಲಿಯಲ್ಲಿರುವುದು ಕೆಲವು ಇತಿಹಾಸಕಾರರಲ್ಲಿ ಗೊಂದಲವನ್ನುಂಟು ಮಾಡಿದೆ. ಇದನ್ನು ಇಂಡೋಅರೇಬಿಕ್ ಶೈಲಿಯ ವಾಸ್ತುಶಿಲ್ಪವೆಂದು ಕರೆಯಬಹುದೋ ಅಥವಾ ರಾಜಕೀಯ ಚದುರಂಗದಾಟದ ಫಲವೆನ್ನಬಹುದೋ ಎಂದು.

ಒಮ್ಮೆ ಈ ಪುಷ್ಕರಣಿಯ ಇತಿಹಾಸವನ್ನು ಅವಲೋಕನ ಮಾಡೋಣ ಬನ್ನಿ – ಇಲ್ಲಿನ ಪುರಾತತ್ವ ಇಲಾಖೆಯ ಫಲಕದಲ್ಲಿ ದಾಖಲಿಸಿರುವಂತೆ ಹದಿನಾರನೆಯ ಶತಮಾನದಲ್ಲಿ ವಿಜಯನಗರ ಅರಸರ ಸಾÀಮಂತನಾಗಿದ್ದ ಸಂತೆಬೆನ್ನೂರಿನ ಪಾಳೆಗಾರನಾಗಿದ್ದ ಕೆಂಗ ಹನುಮಂತಪ್ಪ ನಾಯಕನು ಈ ಪುಷ್ಕರಣಿಯನ್ನು ಕಟ್ಟಿಸಿದ. ನಂತರದಲ್ಲಿ ಸಂತೇಬೆನ್ನೂರು, ವಿಜಯಪುರವನ್ನಾಳುತ್ತಿದ್ದ ಬಹುಮನಿ ಸುಲ್ತಾನರ ಆಕ್ರಮಣಕ್ಕೆ ತುತ್ತಾಯಿತು. ಆಗ ಸುಲ್ತಾನನಾಗಿದ್ದ ರಾಣಾದುಲ್ಲಾಖಾನ್ ತನ್ನ ಸಹಚರರಾದ ಪಟ್ಟೆಖಾನ್ ಮತ್ತು ಫರೀದ್ ಖಾನ್ ಜೊತೆಗೂಡಿ ಈ ಪ್ರದೇಶದ ಮೇಲೆ ಆಕ್ರಮಣ ಮಾಡುತ್ತಾನೆ. ಸುಲ್ತಾನನು ಈ ಸುಂದರವಾದ ರಾಮತೀರ್ಥ ಪುಷ್ಕರಣಿಯ ಮುಂಭಾಗದಲ್ಲಿ ಮುಸಾಫಿರ್‌ಖಾನ ಅಂದರೆ ಅತಿಥಿಗೃಹವನ್ನು ಕಟ್ಟುತ್ತಾನೆ. ಇದು 156 ಅಡಿ ಉದ್ದವಿದ್ದು 40 ಅಡಿ ಅಗಲವಿದೆ. ಇದನ್ನು ಗ್ರಾನೈಟ್ ಶಿಲೆಗಳಿಂದಲೇ ನಿರ್ಮಿಸಲ್ಪಟ್ಟಿದ್ದು ಅರೇಬಿಕ್ ವಾಸ್ತುಶಿಲ್ಪದ ಶೈಲಿಯಲ್ಲಿ ಕಟ್ಟಲಾಗಿದೆ. ಈ ಕಟ್ಟಡದ ಒಳಗೆ ದೊಡ್ಡದಾದ ಪ್ರಾರ್ಥನಾ ಮಂದಿರವಿದ್ದು ಬಲಗಡೆ ಮೇಲಂತಸ್ತಿಗೆ ಹೋಗಲು ಮೆಟ್ಟಿಲುಗಳು ಇವೆ. ಎಲ್ಲೆಡೆ ಹೂಬಳ್ಳಿಗಳ ಕೆತ್ತನೆ ಮಾಡಲಾಗಿದ್ದು. ಕಾರಣಾಂತರಗಳಿಂದ ಮುಸ್ಲಿಮರು ಇಲ್ಲಿ ನಮಾಜು ಮಾಡುತ್ತಿಲ್ಲ. ನಂತರದಲ್ಲಿ ಈ ಪುಷ್ಕರಣಿಯು ಚಿತ್ರದುರ್ಗದ ಪಾಳೆಗಾರರ ವಶವಾಯಿತು. ಮುಂದೆ ಬಿದನೂರಿನ ಅರಸರ ಆಳ್ವಿಕೆಗೆ ಒಳಪಟ್ಟಿತು. 1761 ರಲ್ಲಿ ಮೈಸೂರಿನ ಅರಸನಾದ ಹೈದರಾಲಿಯ ವಶವಾಯಿತು.

ಐತಿಹಾಸಿಕ ಮಹತ್ವವುಳ್ಳ ಈ ಪುಷ್ಕರಣಿಯು ಧಾರ್ಮಿಕ ಕೇಂದ್ರವೂ ಆಗಿದ್ದು, ರಾಮ ಮಂದಿರದಲ್ಲಿ ಪೂಜೆ ನಡೆಯುತ್ತಿತ್ತು, ಗಂಟೆ ಜಾಗಟೆಗಳ ಸದ್ದು, ಶಂಖ ಊದುವ ಸದ್ದು ಕೇಳಿ ಬರುತ್ತಿತ್ತು. ಈ ಪುಷ್ಕರಣಿಯ ಸುತ್ತ ಇರುವ ಮಂಟಪಗಳಲ್ಲಿ ಯಜ್ಞ ಯಾಗಾದಿಗಳನ್ನು ಹಾಗೂ ಹೋಮ ಹವನಗಳನ್ನು ನಡೆಸುತ್ತಿದ್ದರು ಎಂಬ ದಾಖಲೆಯೂ ಲಭ್ಯ. ಈ ಪುಷ್ಕರಣಿಯಲ್ಲಿ ಪ್ರತಿ ವರ್ಷ ವಿಜಯದಶಮಿಯಂದು ರಾಮದೇವರ ತೆಪ್ಪೋತ್ಸವ ನಡೆಸಲಾಗುತ್ತಿತ್ತು ಎಂದೂ ಹೇಳಲಾಗುತ್ತದೆ. ಒಮ್ಮೆ ನಮ್ಮ ಕಲ್ಪನೆಯ ಕಣ್ಣುಗಳ ಮೂಲಕ ಈ ತೆಪ್ಪೋತ್ಸವವನ್ನು ನೋಡೋಣ ಬನ್ನಿ – ರಾಮಮಂದಿರದಲ್ಲಿ ವೈಭವದಿಂದ ಪೂಜೆ ನಡೆಯುತ್ತಿದೆ. ವಿಘ್ನನಿವಾರಕನಾದ ಗಣಪತಿಗೆ ಮೊದಲು ಪೂಜೆಯನ್ನು ಸಲ್ಲಿಸಿದ ನಂತರವೇ ಶ್ರೀ ರಾಮನ ಪೂಜೆ. ಮುಂಭಾಗದಲ್ಲಿ ರಾಮಭಕ್ತ ಆಂಜನೇಯನ ವಿಗ್ರಹ ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಲ್ಪಟ್ಟಿದೆ. ಪಾಳೆಗಾರರು ತಮ್ಮ ಕುಲದೇವರಾದ ಶ್ರೀ ರಾಮನಿಗೆ ಪೂಜೆ ಸಲ್ಲಿಸಿದ ನಂತರವೇ ಸಾಲಂಕೃತವಾದ ತೆಪ್ಪದಲ್ಲಿ ರಾಮದೇವರ ಉತ್ಸವ ಮೂರ್ತಿಯನ್ನು ಹೊತ್ತು ಹೊರಡುತ್ತಿತ್ತು ಮೆರವಣಿಗೆ. ಎಲ್ಲಾ ಮಂಟಪಗಳಲ್ಲೂ ಬೆಳಗುತ್ತಿದ್ದವು ನೂರಾರು ದೀಪಗಳು. ಸಾವಿರಾರು ಭಕ್ತರು ರಾಮಭಜನೆಯನ್ನು ಹಾಡುತ್ತಾ, ‘ಶ್ರೀ ರಾಮಚಂದ್ರನಿಗೆ ಜಯವಾಗಲಿ’ ಎಂಬ ಜಯಘೋಷವನ್ನು ಕೂಗುತ್ತಾ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ತೆಪ್ಪೋತ್ಸವವನ್ನು ನೋಡಿ ಪುನೀತರಾಗುತ್ತಿದ್ದರು ಭಕ್ತರು.

ಈ ಪ್ರಶಾಂತ ತಾಣದಲ್ಲಿ ಪಿಕ್ ನಿಕ್ ಬಂದ ಗುಂಪೊಂ ಸೆಲ್ಫಿಗಳನ್ನು ಕ್ಲಿಕ್ಕಿಸುತ್ತಾ ಸಂಭ್ರಮಿಸುತ್ತಿತ್ತು. ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವಾದ ಸಂತೆಬೆನ್ನೂರು ಪುಷ್ಕರಣಿ ಹಲವರನ್ನು ತನ್ನೆಡೆ ಸೆಳೆಯುತ್ತಿತ್ತು. ಒಂದು ಮಂಟಪ ಇದ್ದ ಹಾಗೆ ಮತ್ತೊಂದಿಲ್ಲ. ಒಂದೊಂದು ಮಂಟಪವೂ ತನ್ನದೇ ಆದ ವಿಶಿಷ್ಠಶೈಲಿಯಲ್ಲಿ ರೂಪುಗೊಂಡಿದೆ. ಹೀಗೆ ಅನೇಕ ರಾಜವಂಶಸ್ಥರ ಆಳ್ವಿಕೆಯಲ್ಲಿದ್ದ ಪುಷ್ಕರಣಿಯು, ಈಗ ಭಾರತದ ಪುರಾತತ್ವ ಇಲಾಖೆಗೆ ಸೇರಿದ್ದು, ಕರ್ನಾಟಕದ ಇತಿಹಾಸ ಹಾಗೂ ಸಂಸ್ಕೃತಿಯ ಕೈಗನ್ನಡಿಯಾಗಿ ನಿಂತಿದೆ.

ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

5 Comments on “ಸಂತೇಬೆನ್ನೂರಿನ ಪುಷ್ಕರಿಣಿ

  1. ಗಾಯತ್ರಿ ಮೇಡಂ ನೀವು ಶಿಕ್ಷಕಿ ಯಾಗಿದಕ್ಕೂ ಸಾರ್ಥಕ ಯಾವುದೇ ವಿಷಯ ತೆಗೆದುಕೊಂಡರೂ..ಸೊಗಸಾದ ನಿರೂಪಣೆ.. ಇಂದಿನ ವಿಷಯದ ಅನಾವರಣ ವೂ ಅಷ್ಟೇ.. ಶರಣು

  2. ಸಂತೆಬೆನ್ನೂರಿನ ಸುಂದರ ಪುಷ್ಕರಿಣಿಯ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ತಿಳಿದು ಖುಷಿಯಾಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *