ಪೌರಾಣಿಕ ಕತೆ

ಕಾವ್ಯ ಭಾಗವತ 62 : ರಂತಿದೇವ ಚರಿತೆ

Share Button

ನವಮಸ್ಕಂದ – ಅಧ್ಯಾಯ – 5
ರಂತಿದೇವ ಚರಿತೆ

ದುಷ್ಯಂತ ಪುತ್ರ ಭರತರಾಜನ
ವಂಶದ ಕುಡಿ ರಂತಿದೇವ
ತನ್ನಲ್ಲಿದ್ದ ಅಪಾರ ಐಶ್ವರ್ಯವನ್ನೆಲ್ಲ
ದಾನವಾಗಿ ಕೊಟ್ಟು ದರಿದ್ರನಾದರೂ
ದೈವಲಭ್ಯದಿ ದೊರೆತ
ಅಲ್ಪಾಹಾರವನ್ನೂ ಯಾಚಕರಿಗೆ ಕೊಡಮಾಡಿ
ಆಹಾರ ವಿಹೀನನಾಗಿ ಕೃಶನಾದರೂ
ರಂತಿದೇವ ನಲವತ್ತೆಂಟು ದಿನಗಳ
ನಿರಶನ ವ್ರತ ಸ್ವೀಕಾರ ಮಾಡಿ
ಜಲಪಾನವೂ ಇಲ್ಲದೆ ದೇಹ ನಡುಗುತ್ತಿರಲು
ಉಪವಾಸಾದಿ ಮುಗಿದ ಮಾರನೆಯ ದಿನ
ದೈವಬಲದಿಂ ಘೃತಮಿಶ್ರ ಪಾಯಸ, ಶುದ್ಧಜಲ
ಪ್ರಾಪ್ತಿಯಾಗೆ ಸಂತಸದಿ ಸ್ನಾನಾದಿಗಳ ನಂತರ
ಸ್ವೀಕರಿಸಲಣಿಯಾಗೆ ಅತಿಥಿ ಬ್ರಾಹ್ಮಣನಾಗಮನ

ಪಾಯಸದ ಸ್ವಲ್ಪಭಾಗವ ಅವನಿಗೊಪ್ಪಿಸಿ
ಸಂಸಾರದೊಡಗೂಡಿ ಮಿಕ್ಕ ಪಾಯಸವ ಸೇವಿಸುವಷ್ಟರಲಿ
ಕ್ಷುದ್ದಾತ್ರನಾದ ಶೂದ್ರನಾಗಮನ
ಅವನ ತೃಪ್ತಿಗೊಳಿಸದೆ ಸ್ವತಃ ಭುಜಿಸಲಿಚ್ಛಿಸದೆ ಇನ್ನಷ್ಟು
ಪಾಯಸವ ದಾನಮಾಡಿದರೂ
ಪುನಃ ಪ್ರತ್ಯಕ್ಷನಾದ ಹಸಿದ ಬ್ರಾಹ್ಮಣ
ಮತ್ತವನೊಡನಿದ್ದ ಕೆಲ ಶ್ವಾನಗಳಿಗೆ
ಮಿಕ್ಕೆಲ್ಲ ಪಾಯಸವ ನೀಡಿ
ಸಕಲ ಭೂತಗಳಲಿ ಭಗವಂತ ಅಂತರ್ಯಾಮಿ
ಎಂದರಿತು ಎಲ್ಲರನು ತೃಪ್ತಿಪಡಿಸುವುದೇ
ಭಗವತ್‌ ಆರಾಧನೆ ಎಂಬುದನ್ನರಿತು
ಮಿಕ್ಕ ಕೊಂಚ ಜಲದಿಂ ಉಪವಾಸದಂತ್ಯಗೊಳಿಸಲು
ನಿಶ್ಚಯಿಸಿ ಜಲಪಾತ್ರೆಯ ಬಾಯಿಯ ಬಳಿ ತಂದಾಗ
ಮತ್ತೆ ಮತ್ತೊಬ್ಬ ಹೊಲೆಯನಾಗಮನ
ಬಳಲಿದ ದೀನ ದನಿಯಲಿ ನೀರಿಗಾಗಿ ಯಾಚಿಸೆ
ಜಲಪಾತ್ರೆಯ ಕೈಯಲ್ಲಿ ಹಿಡಿದು ಹೊರಗೆ ಬಂದು
ಕ್ಷಣಮಾತ್ರವೂ ಚಿಂತಿಸದೆ ಮಿಕ್ಕೆಲ್ಲ ಜಲದಿಂ
ಆ ಅಂತ್ಯಜನ ಸಂಕಟವ ನಿವಾರಿಸಿ
ಆರ್ತರಾದವರ ವ್ಯಥೆ ನೀಗಿಸುವುದಕಿಂತ
ಮಿಗಿಲಾದ ಕರ್ತವ್ಯವಿಲ್ಲ
ಪುನಃಜನ್ಮರಹಿತ ಮೋಕ್ಷ
ಬ್ರಹ್ಮೇಂದ್ರಾದಿ ಪದವಿಗಳಿಗಿಂತ
ಹಸಿವು ಬಾಯಾರಿಕೆ ಪೀಡಿತರ
ದುಃಖ ಶಮನ ಮಾಡಿದ ಸಂತಸ ಹಿರಿದು ಎನ್ನುತ್ತಿರಲು
ಇವನ ಉದಾರ ಬುದ್ಧಿ ದೈರ್ಯ ಸಾಹಸವ ಮೆಚ್ಚಿ
ಪ್ರತ್ಯಕ್ಷರಾದ ಬ್ರಹ್ಮಾದಿ ದೇವತೆಗಳು ಅವನ ಹರಸಿದರು

ರಂತಿದೇವನ ವಂಶಸ್ಥ ಹಸ್ತಿ ನಿರ್ಮಿಸಿದ ರಾಜಧಾನಿ ಹಸ್ತಿನಾಪುರ
ಮುಂದೆ ನಡೆದೆಲ್ಲ ಮಹಾಭರತ ಕಥೆಗೊಂದು ಮೂಲತಾಣ

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43615

-ಎಂ. ಆರ್.‌ ಆನಂದ, ಮೈಸೂರು

3 Comments on “ಕಾವ್ಯ ಭಾಗವತ 62 : ರಂತಿದೇವ ಚರಿತೆ

  1. ಕಾವ್ಯ ಭಾಗವತ ಎಂದಿನಂತೆ ಓದಿಸಿಕೊಂಡುಹೋಯಿತು ಸಾರ್..

  2. ಕಾವ್ಯ ಭಾಗವತದಲ್ಲಿ ರಂತಿದೇವನ ಕಥೆ ಸೊಗಸಾಗಿ ಮೂಡಿಬಂದಿದೆ

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *