ಲಹರಿ

ನನ್ನ ಬರವಣಿಗೆಯ ಪಯಣ

Share Button

ಬರಹವು ನಮ್ಮಲ್ಲಿರುವ ಭಾವನೆಗಳನ್ನು ಕಲ್ಪನೆಯ ಪದಗಳೊಂದಿಗೆ ವ್ಯಕ್ತ ಪಡಿಸುವ ಒಂದು ಅತ್ಯುತ್ತಮ ಕಲೆ ಎಂದೇ ಹೇಳಬಹುದು. ಮನಸ್ಸಿನಲ್ಲಿ ಮೂಡುವ ವಿಚಾರಗಳನ್ನು ಅಕ್ಷರದ ಮೂಲಕ ಅಭಿವ್ಯಕ್ತ ಪಡಿಸುವ ಸಾಮರ್ಥ್ಯವೇ ಬರವಣಿಗೆ. ಬಾಲ್ಯದಲ್ಲಿ ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದಾದ ಈ ಬರವಣಿಗೆ, ಮುಂದೊಂದು ದಿನ ಜನಪ್ರಿಯ ದಿನಪತ್ರಿಕೆ ‘ಉದಯವಾಣಿ’ಯಲ್ಲಿ ನನ್ನ ಕಿರು ಲೇಖನ ಪ್ರಕಟವಾಗಬಹುದೆಂಬ ಕಿಂಚಿತ್ ಯೋಚನೆಯೂ ನನಗಿರಲ್ಲಿಲ್ಲ.

ಬಾಲ್ಯಾವಸ್ಥೆಯಲ್ಲಿಯೇ ನನಗೆ ಪುಸ್ತಕಗಳನ್ನು ಓದುವುದೆಂದರೆ ಪಂಚಪ್ರಾಣ. ಹೆತ್ತವರಿಂದ ಬಳುವಳಿಯಾಗಿ ಬಂದಿದ್ದ ಓದುವ ಅಭ್ಯಾಸ ನನ್ನ ಬರವಣಿಗೆಗೆ ಕಳಶ ಪ್ರಾಯವಾಗಿತ್ತು. ತಂದೆ, ತಾಯಿ ಇಬ್ಬರೂ ಪುಸ್ತಕಪ್ರೇಮಿಗಳಾಗಿದ್ದರು. ನಮ್ಮ ಮನೆಗೆ ತರುತ್ತಿದ್ದ ಕಸ್ತೂರಿ, ಕರ್ಮವೀರ, ಸುಧಾ, ಮಯೂರ, ಪ್ರಜಾಮತ, ಚಂದಮಾಮ, ಬೊಂಬೆಮನೆ, ಅಮರ ಚಿತ್ರ ಕಥೆ, ಬಾಲಮಿತ್ರ ಪುಸ್ತಕಗಳನ್ನು ಜಾತಕ ಪಕ್ಷಿಗಳಂತೆ ಕಾದು, ಓದಿ ಸಂಭ್ರಮಿಸಿದ ದಿನಗಳೆಷ್ಟೋ! ಶಾಲಾ ದಿನಗಳಲ್ಲಿ ಚುಟುಕು ಕವನ, ಹಿಂದಿ ಶಾಯರಿಗಳನ್ನು ಬರೆಯುತ್ತಿದೆ. ಹೈಸ್ಕೂಲಿನಲ್ಲಿರುವಾಗ ಎನ್. ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿ ಓದುವ ಗೀಳೇ ಆಗಿಬಿಟ್ಟಿತ್ತು. ತಾಯಿಯವರು ನಗರ ಕೇಂದ್ರ ಗ್ರಂಥಾಲಯದಿಂದ ಎರವಲು ತಂದಿರುವ ಕಥೆ, ಕಾದಂಬರಿಗಳನ್ನು ಓದುತ್ತಿದ್ದೆ. ಬೈರಪ್ಪನವರ ‘ನಾಯಿ ನೆರಳು’ ಕಾದಂಬರಿಯಲ್ಲಿಯ ಕರ್ಮ, ಪುನರ್ಜನ್ಮ ಮುಂತಾದ ಸಂಗತಿಗಳು ಭಯ, ಕೌತುಕವನ್ನು ಹುಟ್ಟಿಸಿದರೂ, ಅರ್ಥವಾಗಲು ಅಮ್ಮನ ಮೊರೆ ಹೋಗತ್ತಿದ್ದೆ. ಕಾಲೇಜಿನಲ್ಲಿದ್ದಾಗ ಸಾಹಿತ್ಯ ಸಂಘಕ್ಕೆ ಸೇರಿದ್ದೆ. ಪ್ರತೀ ಶನಿವಾರ ಕೊನೆ ಪಿರಿಯೇಡ್‌ನಲ್ಲಿ ನಮಗೆಲ್ಲಾ ಕವನ ಓದುವ ಪರಿಪಾಠವಿತ್ತು. ದಿನದಿನದ ದಿನಚರಿಯನ್ನು ಬರೆದಿಡುವ ಕ್ರಮವೂ ನನ್ನ ಬರವಣಿಗೆಗೆ ಇಂಬು ಕೊಟ್ಟಿತ್ತು. ಓದಿನ ಹುಚ್ಚು ನನ್ನನ್ನು ಸಾಹಿತ್ಯಲೋಕದೆಡೆ ಕೊಂಡೊಯ್ಯಿತು. ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನಲ್ಲಿರುವ ಉತ್ಸಾಹ, ತುಡಿತ, ಮಿಡಿತಗಳು, ಆಕಾಂಕ್ಷೆಗಳು ಮತ್ತು ನನ್ನ ಅಂತರ್ ಭಾವನೆಗಳು ಬರೆಯಲು ಪ್ರಚೋದಿಸಿದವು. ನನ್ನ ವೈಚಾರಿಕ ಪ್ರಜ್ಞೆಗೆ ಹೆತ್ತವರು ದಿಕ್ಕನ್ನು ತೋರಿದರು. ನನ್ನ ಓದು, ಬರೆಯುವ ಪ್ರಕ್ರಿಯೆಗೆ ನೀರೆರೆದು ಪೋಷಿಸಿದರು. ಮುಂದೆ ಓದಿನ ಹವ್ಯಾಸವು ಹೆಮ್ಮರವಾಗಿ ಬೆಳೆದು ನನ್ನ ವೃತ್ತಿ ಬದುಕನ್ನು ಈ ದಿಕ್ಕಿನಲ್ಲಿಯೇ ಆಯ್ದುಕೊಳ್ಳುವ ಅವಕಾಶ ಪ್ರಾಪ್ತಿಯಾಯಿತು. ಗೃಂಥಾಲಯದ ಮುಖ್ಯಸ್ಥರಾಗಿದ್ದು, ನನ್ನ ಬಿಡುವಿನ ವೇಳೆಯಲ್ಲಿ ಅನೇಕಾನೇಕ ಉತ್ತಮ ಕೃತಿಗಳನ್ನು ಓದಿ ಅರಗಿಸುವ ಸೌಭಾಗ್ಯ ದೊರಕಿತ್ತು. ಕಾರಂತ, ಕುವೆಂಪು, ಬೈರಪ್ಪ, ಚಿತ್ತಾಲ, ಲಂಕೇಶ್, ವ್ಯಾಸರಾಯ ಬಲ್ಲಾಳ, ಕೆ.ಟಿ. ಗಟ್ಟಿ, ತ.ರಾ.ಸು. ಮುಂತಾದ ಘಟಾನುಘಟಿಗಳ ಸಾಹಿತ್ಯವನ್ನು ೧೯೯೦ರಲ್ಲೇ ಒದಿ ಮುಗಿಸುವ ಅವಕಾಶ ಮತ್ತು ಅದೃಷ್ಟ ಒದಗಿ ಬಂದಿತ್ತು. ಮಹಿಳಾ ಬರಹಗಾರ್ತಿಯರಲ್ಲಿ ಎಂ.ಕೆ.ಇಂದಿರಾ, ತ್ರೀವೇಣಿಯವರಂಥಾ ಗಂಭೀರ ಸಾಹಿತಿಯವರ ಕೃತಿಗಳನ್ನು ಇಷ್ಟಪಟ್ಟರೂ, ನಾನು ಬಹುವಾಗಿ ಮೆಚ್ಚಿ ಕೊಂಡದ್ದು, ಸುಧಾಮೂರ್ತಿ ಹಾಗೂ ಸಾರಾ ಅಬೂಬಕ್ಕರ್. ಅವರ ಬರವಣಿಗೆಯ ಶೈಲಿ, ಸರಳ ನಿರೂಪಣೆಯಿಂದ ಪ್ರಭಾವಿತಳಾಗಿ, ನಾನೂ ಬರಹಗಾರ್ತಿಯಾಗಬೇಕೆಂಬ ಅದಮ್ಯ ಹಂಬಲ ಅಂದಿನಿಂದಲೇ ಉಂಟಾಯಿತು.

1991 ರಲ್ಲಿ ಮೊದಲನೇ ಬಾರಿಗೆ ನಾನು ಬರೆದ ಸಣ್ಣ ಕಥೆಯೊಂದು ‘ಮೊಗವೀರ’ ಎನ್ನುವ ಮುಂಬಯಿಯಿಂದ ಪ್ರಕಟಗೊಳ್ಳುತ್ತಿದ್ದ ಕನ್ನಡ ಮಾಸ ಪತ್ರಿಕೆಯಲ್ಲಿ ಬಿಡುಗಡೆಗೊಂಡಾಗ ಬಹಳಷ್ಟು ಖುಷಿ ಪಟ್ಟಿದ್ದೆ. ನಂತರ ವಿಜಯ ಕರ್ನಾಟಕ ದಿನಪತ್ರಿಕೆಯ ‘ನೆನೆಪಿನ ಬುತ್ತಿ’ ಎಂಬ ಅಂಕಣಕ್ಕೆ ನಾನು ಕಳುಹಿಸಿದ ಲೇಖನವು ಪ್ರಕಟವಾದಾಗ ನನ್ನ ಆನಂದಕ್ಕೆ ಪಾರವೇ ಇಲ್ಲವಾಗಿತ್ತು. ಆಮೇಲೆ ಮಂಗಳಾ ವಾರ ಪತ್ರಿಕೆಯಲ್ಲಿ ಸಣ್ಣ ಕಥೆಯೊಂದು ಸ್ವೀಕೃತವಾಗಿತ್ತು. ಬಳಿಕ ೨೦೧೮ರಲ್ಲಿ ಉದಯವಾಣಿ ದಿನಪತ್ರಿಕೆಯ ಶುಕ್ರವಾರದ ಪುರವಣಿಯಲ್ಲಿ, ನಾನು ‘ಗೃಂಥಾಲಯಕ್ಕೆ ಬನ್ನಿರಿ’ ಎಂದು ಬರೆದ ಲೇಖನ ಪ್ರಕಟಗೊಂಡು, ಪ್ರಥಮ ಸಂಭಾವನೆ ದೊರೆತಾಗ ಸಂತೋಷಕ್ಕಿಂತಲೂ ಮಿಗಿಲಾಗಿ ಆಶ್ಚರ್ಯಪಟ್ಟಿದ್ದೆ. ಇವುಗಳನ್ನೆಲ್ಲಾ ಇಂದಿಗೂ ಜತನದಿಂದ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಇವೆಲ್ಲಾ ನನ್ನ ಬದುಕಿನಲ್ಲಿ ಮರೆಯಲಾರದ ಸಂಗತಿಗಳು. ವೃತ್ತಿ ಜೀವನದ ಸಮಯದಲ್ಲಿ ಕಾಲೇಜ್ ಮ್ಯಾಗಝೀನ್‌ನಲ್ಲಿ ಲೇಖನಗಳನ್ನು ಬರೆಯುತ್ತಿದ್ದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್. ವರದಿ ಬರೆಯಲು ನೆರವಾಗುತ್ತಿದ್ದೆ. ವಾರ್ಷಿಕ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಪತ್ರಿಕಾ ವರದಿಯನ್ನು ಕಳುಹಿಸುವ ಮಹತ್ತರ ಜವಾಬ್ದಾರಿಯೂ ನನ್ನ ಮೇಲಿತ್ತು. ಒಮ್ಮೆ ಕನ್ನಡ ಪ್ರಭ ದಿನಪತ್ರಿಕೆಯ ‘ಸಖಿ’ ಅಂಕಣಕ್ಕೆ ಲೇಖನವೊಂದು ಕಳುಹಿಸಿದಾಗ, ಸ್ವೀಕೃತಿ ಪತ್ರದ ಬದಲು ವಿಷಾದ ಪತ್ರ ಬಂದಾಗ ಬೇಸರವಾಗಿ ಸ್ವಲ್ಪ ಸಮಯ ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ.

ಒಟ್ಟಿನಲ್ಲಿ ಈ ಬರವಣಿಗೆಯ ಪಯಣದಲ್ಲಿ ಮುಖ್ಯವಾಗಿ ನನ್ನ ಮನೆಯವರು, ಒಡ ಹುಟ್ಟಿದವರು ಪ್ರೇರಕ ಶಕ್ತಿಯಾಗಿದ್ದುಕೊಂಡು, ಎಲ್ಲಾ ಬರಹಗಳನ್ನು ಪ್ರಶಂಸಿಸುತ್ತಿದ್ದರು. ನನ್ನ ಆತ್ಮೀಯ ಗೆಳತಿಯರು, ಸಹದ್ಯೋಗಿಗಳು, ಪ್ರಾಂಶುಪಾಲರು, ವಿದ್ಯಾರ್ಥಿಗಳೂ ಬರೆಯುವಂತೆ ಪ್ರೇರೇಪಿಸುತ್ತಿದ್ದರು. ಎಲ್ಲರಿಗಿಂತಲೂ ಹೆಚ್ಚಾಗಿ, ನನ್ನ ಇಬ್ಬರು ಸಹದ್ಯೋಗಿ ಮಿತ್ರರೂ, ಪ್ರವೃತ್ತಿಯಲ್ಲಿ ಲೇಖಕರೂ ಆಗಿದ್ದ ಜಯಶ್ರೀ ಹಾಗೂ ಕೃಷ್ಣಪ್ರಭರವರು, “ಬರೆಯಿರಿ ಮೇಡಂ, ನಿಮ್ಮ ಬರೆಯುವ ಶೈಲಿ ಚೆನ್ನಾಗಿದೆ” ಎಂದು ಹುರಿದುಂಬಿಸುತ್ತಿದ್ದರಲ್ಲದೇ, ಕರಡು ಪ್ರತಿಯನ್ನು ತಿದ್ದಿ, ತೀಡಿ ಸೂಕ್ತ ಶೀರ್ಷಿಕೆಯನ್ನು ಕೊಟ್ಟು ಸಹಕರಿಸಿದ ಸಹೃದಯಿಗಳು. ‘ಬರೆಯುವುದನ್ನು ಮುಂದುವರಿಸಿ’ ಎಂದು ಅಕ್ಕರೆಯಿಂದ ಬೆನ್ನು ತಟ್ಟುತ್ತಾ ಹೆಚ್ಚೆಚ್ಚು ಬರೆಯಲು ಸ್ಪೂರ್ತಿಯಾಗಿರುವ ಹೇಮಲತಾ ಮೇಡಂ ನನ್ನ ಬರವಣಿಗೆಯ ಪಯಣದಲ್ಲಿ ದಾರಿ ತೋರಿದವರು. ಅನುಭವಿ ಬರಹಗಾರರಿಂದ ಉತ್ಕೃಷ್ಟ ಮಟ್ಟದ ಲೇಖನಗಳು ಬರುತ್ತಿದ್ದ ಈ ಕಾಲಘಟ್ಟದಲ್ಲಿ, ಉದಯೋನ್ಮುಖ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಕೊಡುವ ಸಂಪಾದಕರಿಂದಲೂ ಬರೆಯುವುದನ್ನು ಮುಂದುವರಿಸಲು ಸಾಧ್ಯವಾಯಿತು.

ಬರವಣಿಗೆಯು ಮನುಷ್ಯನ ಸೃಜನಶೀಲತೆಗೊಂದು ಕೈಗನ್ನಡಿ ಎಂದು ನನ್ನ ಅನಿಸಿಕೆ. ಬೇರೆಲ್ಲಾ ವಿದ್ಯೆಗಳನ್ನು ಕಲಿತಂತೆ, ಕಥೆ, ಲೇಖನ ಬರೆಯುವ ಕಲೆಯನ್ನು ಕಲಿಯಲು ಸಾಧ್ಯವಿಲ್ಲ. ಆದರೆ ಒಂದು ಉತ್ತಮ ಕೃತಿಯ ಓದುವಿಕೆಯು ಬರೆಯುವ ಹುಮ್ಮಸ್ಸನ್ನು ಬೆಳೆಸಲು ಸಾಧ್ಯ. ನಮ್ಮ ಯಾವುದೇ ಹಂಬಲ, ಇಚ್ಛೆ ಮುಂದುವರಿಸಬೇಕಾದರೆ ಆಸಕ್ತಿ ಎನ್ನುವುದು ಬಹಳ ಮುಖ್ಯ. ಬರೆಯುವುದು ಒಂದು ರೀತಿಯಲ್ಲಿ ತಪಸ್ಸು ಇದ್ದ ಹಾಗೆ. ಕಠಿಣ ಪರಿಶ್ರಮ, ಶ್ರದ್ದೆ, ನಿರಂತರ ಅಧ್ಯಯನದಿಂದಲೇ ಬರವಣಿಗೆಯ ಕಲೆಯನ್ನು ಕರಗತ ಮಾಡಿಕೊಳ್ಳಬಹುದು. ಉತ್ತಮ ಬರಹಗಾರರು ತಮ್ಮ ಅನುಭವಕ್ಕೆ ದಕ್ಕಿದ ವಿಚಾರಗಳನ್ನು ಅಕ್ಷರದ ಮೂಲಕ ವ್ಯಕ್ತ ಪಡಿಸುತ್ತಾರೆ. ಯಾವುದೇ ವಿಧದ ಬರಹವಾಗಲೀ ಅಥವಾ ಲೇಖನವೇ ಆಗಲೀ, ಪೂರ್ವ ತಯಾರಿ ಅತ್ಯಗತ್ಯ. ತಮ್ಮ ಜೀವನಾನುಭವ, ಸಾಹಿತ್ಯದ ಆಳ ಅಧ್ಯಯನ, ಏಕಾಗ್ರತೆ, ಚಿಂತನಾಶೀಲತೆ, ದೃಡ ಸಂಕಲ್ಪ ಪ್ರತಿಯೊಬ್ಬ ಲೇಖನಕಾರರಲ್ಲಿ ಸಹಜವಾಗಿಯೇ ಸೇರಿಕೊಂಡಿರುತ್ತವೆ. ಬರೆಯುವಿಕೆಯು ನಮ್ಮ ಪದ ಸಂಪದವನ್ನು ಹೆಚ್ಚಿಸುತ್ತದೆ. ಈಗ ಕೆಲವೊಂದು ಕ್ರಿಯೇಟಿವ್ ರೈಟಿಂಗ್ ಕೋರ್ಸ್ ಗಳು ಲಭ್ಯವಿದೆ. ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ವ್ಯಕ್ತ ಪಡಿಸಲು ಹಾಗೂ ಸ್ಪಷ್ಟ ನಿಖರತೆಯೊಂದಿಗೆ ಬರೆಯಲು ಇಂಥಾ ಕೋರ್ಸ್ ಗಳು ಸಹಕಾರಿ.

ಬರಹ ನಮ್ಮನ್ನು ವಾಸ್ತವಕ್ಕೆ ಹತ್ತಿರವಾಗಿಸುತ್ತದೆ. ನಮ್ಮ ಮನದಾಳದ ಮಾತುಗಳನ್ನು ಬರಹದ ಮೂಲಕ ಹಂಚಿಕೊಳ್ಳಲು ಬರವಣಿಗೆಯು ಉತ್ತಮ ವೇದಿಕೆಯಾಗಿದೆ ಎನ್ನಬಹುದು. ಕಳೆದೆರಡು ವರ್ಷಗಳಿಂದ ಬರೆಯುವುದನ್ನು ನಿಲ್ಲಿಸಿ ಬಿಟ್ಟಿದ್ದೆನಾದರೂ, ನಿವೃತ್ತಿಯ ಬಳಿಕ ಪುನರಾರಂಬಿಸಿದೆ ಎಂಬ ಆತ್ಮ ತೃಪ್ತಿಯು ನನಗಿದೆ. ಬರೆಯುವ ಅದಮ್ಯ ಹಂಬಲ, ಭಾವನೆಗಳನ್ನು ವ್ಯಕ್ತ ಪಡಿಸಲು ನನಗಿರುವ ತವಕ ನನಗೆ ಇನ್ನೂ ಬರೆಯಲು ಪ್ರೇರಕ ಶಕ್ತಿಯಾಗಿದೆ. ಬದುಕಿನ ಸವಾಲುಗಳು, ಕ್ಷೋಭೆಗೊಂಡ ಮನಸ್ಸು, ನನ್ನ ವೇದನೆ, ಸಂವೇದನೆ, ಸ್ವಂತದ ಅನುಭವ, ತೀವ್ರ ಮಾನಸಿಕ ತಲ್ಲಣಗಳಿಗೆ ಕಾರಣವಾದ ಸಂಗತಿಗಳು ನನ್ನಿಂದ ಅಕ್ಷರ ರೂಪ ಪಡಕೊಂಡಿತು. ನಾನೂ ಬರೆಯಬಲ್ಲೆ ಎಂದು ಯಾವತ್ತೂ ಊಹಿಸಿರಲ್ಲಿಲ್ಲ. ಪ್ರಾರಂಭದ ದಿನಗಳಲ್ಲಿ ನಾನು ಬರೆದ ಲೇಖನವನ್ನು ಪಕ್ಕದ ಜೋಬ್ ಟೈಪಿಂಗ್ ಅಂಗಡಿಯಲ್ಲಿ ಕೊಟ್ಟು ಮರುದಿನ ಪಡಕೊಳ್ಳುವ ಪಾಡು ಇನ್ನೂ ನೆನಪಿದೆ. ಆದರೆ ಈಗ ನಾನೇ ಸ್ವತ: ಕರಡು ಪ್ರತಿಯನ್ನು ಟೈಪ್ ಮಾಡಬಲ್ಲೆ. ಕನ್ನಡ ಕಂಪ್ಯೂಟರ್ ಕಲಿಕೆಯು ಈ ನಿಟ್ಟಿನಲ್ಲಿ ನನಗೊಂದು ವರದಾನವೇ ಎನ್ನಬಹುದು. ಒಂದು ಲೇಖನ ಬರೆದು ಮುಗಿಸಿದ ಮೇಲೆ ಏನೋ ಧನ್ಯತಾ ಭಾವ. ಬರೆಯುವ ನನ್ನ ಪ್ರವೃತ್ತಿಯನ್ನು ಬಹುವಾಗಿ ಮೆಚ್ಚಿಕೊಂಡಿರುತ್ತೇನೆ. ಇದು ನನ್ನನ್ನು ಜೀವನ ಪ್ರೀತಿಯಿಂದ ಬದುಕಲು ಅನುವು ಮಾಡಿದೆ. ಮುಂದೊಂದು ದಿನ ಉತ್ತಮ ಕೃತಿಯೊಂದನ್ನು ರಚಿಸಿ ಪ್ರಕಟಿಸಬೇಕೆಂಬ ನನ್ನ ಹೆಬ್ಬಯಕೆಯು ನನ್ನನ್ನು ಸದಾಕಾಲ ಓದು, ಚಿಂತನೆಗಳಲ್ಲಿ ತೊಡಗಿಸಿ ಕ್ರಿಯಾಶೀಲಳನ್ನಾಗಿ ಮಾಡಿದೆ. ಬರೆಯುವ ನಿಟ್ಟಿನಲ್ಲಿ ಇನ್ನೂ ಪರಿಪಕ್ವವಾಗಬೇಕಿದೆ ಹಾಗೂ ನನ್ನಿಂದ ಇನ್ನೂ ಪ್ರಬುದ್ಧ ಲೇಖನಗಳು ಮೂಡಿ ಬರುವಂತಾಗಲೀ ಎಂದೇ ನನ್ನ ಆಶಯ.

-ಶೈಲಾರಾಣಿ ಬಿ. ಮಂಗಳೂರು.

7 Comments on “ನನ್ನ ಬರವಣಿಗೆಯ ಪಯಣ

  1. ಮೇಡಂ, ಲೇಖನ ಚೆನ್ನಾಗಿದೆ..ನನ್ನನ್ನು ನೆನಪಿಸಿಕೊಂಡಿರುವುದು ನಿಮ್ಮ ದೊಡ್ಡ ಗುಣ. ನಿಮ್ಮಿಂದ ಇನ್ನಷ್ಟು ಲೇಖನಗಳು ಬರಲೆಂಬ ಹಾರೈಕೆ

  2. ಮನಸ್ಸು ಮಾಡಿದರಷ್ಟೇ ಏನಾದರೂ ಸಾದಿಸಲು ಸಾದ್ಯ.. ಅದಕ್ಕಾಗಿ ಸಹನೆ ನಮ್ಮ ಲ್ಲಿರಬೇಕು.. ಕಲಿಯುವಿಕೆಗೆ ಕೊನೆಯಿಲ್ಲ…ನಿಮ್ಮ ಆಶಯ ಈಡೇರಲಿ ಮೇಡಂ

  3. ಬಹಳ ಸೊಗಸಾಗಿದೆ ಬರಹ. ನಿಮ್ಮ ಓದಿನ ಹಪಾಹಪಿ ನನ್ನ ಕಾಲೇಜಿನ ದಿನಗಳಲ್ಲಿ ನಾನು ಕಥೆ ಕಾದಂಬರಿಗಳನ್ನು ಓದಲು ಹಾತೊರೆಯುತಿದ್ದ ದಿನಗಳನ್ನು ನೆನಪಿಸಿತು. ಓದಿನ ಹಂಬಲ ಬಿಟ್ಟು ಬೇರೆ ಆಸೆಗಳು ಇರಲಿಲ್ಲ.

  4. ಬರಹ ಪ್ರಾರಂಭಿಸುವಾಗ ಆಗುವ ಆತಂಕ, ಪ್ರಕಟವಾಗಿ ಪಡೆದ ಮೊದಲ ಸಂಭಾವನೆಯ ಖುಷಿ…ಎಲ್ಲವೂ ಎಲ್ಲಾ ಬರಹಗಾರರ ಸ್ವಾನುಭವ!! ಮನಬಿಚ್ಚಿ ಮಾತಾಡಿದಂತಹ ಬರಹ ಇಷ್ಟವಾಯ್ತು.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *