ಆಸ್ಪತ್ರೆಯಲ್ಲಿ ನಾವು ಅಂದರೆ ನಾನು ಮತ್ತು ನನ್ನ ಯಜಮಾನರು ನಮ್ಮ ಸರತಿಗಾಗಿ ಕಾಯುತ್ತಾ ಕುಳಿತಿದ್ದೆವು. ಆಗ ಅಲ್ಲಿಗೆ ಬಂದ ನರ್ಸ್, ‘ಕ್ಷಮೆ ಇರಲಿ, ನಿಮಗೆ ಕೊಡಲು ಇಲ್ಲಿ ಯಾವುದೇ ವೃತ್ತ ಪತ್ರಿಕೆ ಇಲ್ಲ’ ಎಂದಾಗ, ನಾನು, ‘ತೊಂದರೆಯಿಲ್ಲ, ನಾವಿಬ್ಬರು ಮಾತಾಡುತ್ತಾ ಕೂರುತ್ತೇವೆ.’ ಎಂದು ಉತ್ತರಿಸಿದೆ. ಆಗ ಅವಳು, ‘ಮದುವೆಯಾಗಿ ಐವತ್ತು ವರ್ಷ ಕಳೆದರೂ ಇನ್ನೂ ಪರಸ್ಪರ ಮಾತಾಡುವ ಸ್ಥಿತಿಯಲ್ಲಿದ್ದೀರಾ!’ ಎಂದು ಲೇವಡಿ ಮಾಡಿದಳು. ನನ್ನ ಪತಿ, ‘ಕೇವಲ ಮಾತಾಡುವ ಸ್ಥಿತಿಯಲ್ಲ, ಒಬ್ಬರೊನ್ನಬ್ಬರು ಮೊದಲಿನ ಹಾಗೆಯೇ ಪ್ರೀತಿಸುತ್ತೇವೆ.’ ಎಂದಾಗ ಅವಳು ಅಚ್ಚರಿಯಿಂದ ನಮ್ಮನ್ನು ನೋಡುತ್ತಾ ತನ್ನ ಕೊಠಡಿಗೆ ಹೋದಳು.
ಈ ಘಟನೆ ನಡೆದದ್ದು ಸ್ಕಾಟ್‌ಲ್ಯಾಂಡಿನ ಆಸ್ಪತ್ರೆಯಲ್ಲಿ. ನಾವು ಮಗನ ಮನೆಗೆ ಹೋಗಿದ್ದಾಗ, ನಮ್ಮ ಆರೋಗ್ಯ ತಪಾಸಣೆ ಮಾಡಿಸಲು ಮಗ ಆಸ್ಪತ್ರೆಗೆ ಕರೆದೊಯ್ದಿದಿದ್ದ. ಯಜಮಾನರ ಮಾತುಗಳನ್ನು ಕೇಳಿದಾಗ, ನನ್ನ ಮನದಾಳದಿಂದ ನೂರೊಂದು ನೆನಪುಗಳು ಹೊಮ್ಮಿದ್ದವು. ಪ್ರೀತಿ ಎಂದಾಕ್ಷಣ ಹೃದಯದಲ್ಲಿ ಮೂಡಿದ ಪ್ರೀತಿಯ ಹಾಡಿನ ಚಿತ್ರ, ‘ರಾಧಾ ಕೃಷ್ಣ’ರದ್ದು. ಹಚ್ಚ ಹಸಿರಿನಿಂದ ಕಂಗೊಳಿಸುವ ವನ, ಅಲ್ಲೊಂದು ಫಲ ಪುಷ್ಪಭರಿತ ವೃಕ್ಷ, ಮರದ ಕೆಳಗೆ ನಿಂತು ಕೊಳಲನ್ನೂದುತ್ತಿರುವ ಶ್ಯಾಮ. ಅವನ ಮುಡಿಯಲ್ಲಿ ಸಪ್ತವರ್ಣದ ನವಿಲುಗರಿ. ಅವನ ಕೊಳಲಿನ ಇಂಪಾದ ಧ್ವನಿಯನ್ನು ಆಲಿಸುತ್ತಾ ನರ್ತಿಸುತ್ತಿರುವಳು ರಾಧೆ. ಇವರ ನಡುವಿನ ಪ್ರೀತಿ ಎಂದೆಂದಿಗೂ ಮಾಸದ ಮಧುರ ಭಾವ. ರಾಧೆಗೆ ತನ್ನ ಒಲವಿನ ಪ್ರಿಯತಮನಿಂದ ಯಾವುದೇ ನಿರೀಕ್ಷೆಯಿಲ್ಲ, ಪ್ರತಿಫಲಾಪೇಕ್ಷೆಯಿಲ್ಲ. ಇವರದು ದೈವೀಕವಾದ ಪ್ರೀತಿ.
ಮನಸ್ಸು ಸಾಹಿತ್ಯ ಲೋಕದಲ್ಲಿ ಅಮರರಾದ ಪ್ರೇಮಿಗಳ ಜೋಡಿಗಳನ್ನು ನೆನೆದಿತ್ತು, ‘ರೋಮಿಯೋ ಅಂಡ್ ಜೂಲಿಯೆಟ್’, ‘ಲೈಲಾ ಮಜ್ನೂ’ ಮುಂತಾದ ಪ್ರೀತಿಯ ಹಾಡುಗಳು. ಶೇಕ್ಸ್ ಪಿಯರ್ ವಿರಚಿತ ದುರಂತ ನಾಟಕ, ‘ರೋಮಿಯೋ ಅಂಡ್ ಜೂಲಿಯೆಟ್’. ಇವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಆದರೆ ಅವರ ಕುಟುಂಬದವರು ಬದ್ಧ ವೈರಿಗಳು. ಹೀಗಾಗಿ ಹಿರಿಯರ ಒಪ್ಪಿಗೆಯಿಲ್ಲದೆ ಪಾದ್ರಿಯೊಬ್ಬನ ನೆರವಿನಿಂದ ಮದುವೆಯಾಗುತ್ತಾರೆ. ಒಮ್ಮೆ ಈ ಎರಡೂ ಕುಟುಂಬದವರು ದ್ವೇಷದಿಂದ ಹೊಡೆದಾಡುವಾಗ ಎರಡೂ ಕಡೆ ಸಾವು ಸಂಭವಿಸುವುದು. ಆಗ ರೋಮಿಯೋನನ್ನು ಗಡೀಪಾರು ಮಾಡಲಾಗುವನು. ದುಃಖಿತಳಾದ ಜೂಲಿಯೆಟ್ ತನ್ನ ಇನಿಯನನ್ನು ಸೇರಲು, ಸಾವಿನ ನಾಟಕವನ್ನಾಡುವಳು. ಅವಳ ಸಾವನ್ನು ನಿಜವೆಂದು ನಂಬಿದ ರೋಮಿಯೋ ವಿಷವನ್ನು ಸೇವಿಸಿ ಮೃತನಾಗುವನು. ಎರಡು ದಿನಗಳ ನಂತರ ಎಚ್ಚೆತ್ತ ಜೂಲಿಯೆಟ್, ತನ್ನ ಪಕ್ಕದಲ್ಲಿ ಸತ್ತು ಬಿದ್ದಿದ್ದ ರೋಮಿಯೋನನ್ನು ಕಂಡು ತಾನೂ ಅವನ ಬಳಿಯಿದ್ದ ಚಾಕುವಿನಿಂದ ಇರಿದುಕೊಂಡು ಜೀವ ಬಿಡುತ್ತಾಳೆ. ಹೀಗೆ ಪ್ರೇಮಿಗಳು ಸಾವಿನ ನಂತರ ಒಂದಾಗುತ್ತಾರೆ.
ಮತ್ತೊಂದು ಪ್ರೀತಿಯ ದುರಂತ ನಾಟಕ ಕಣ್ಣ ಮುಂದೆ ತೇಲಿ ಬಂತು, ಶೇಕ್ಸ್ ಪಿಯರ್ ರಚಿಸಿರುವ ಮತ್ತೊಂದು ನಾಟಕ, ‘ಒಥೆಲೋ’. ಪ್ರೀತಿಸಿ ಮದುವೆಯಾದವರು ಒಥೆಲೋ ಹಾಗೂ ಡೆಸ್ಡಿಮೋನ. ಕೆಲವೇ ದಿನಗಳಲ್ಲಿ, ಒಥೆಲೋ ಇಯಾಗೋನ ಮಾತುಗಳನ್ನು ಕೇಳಿ, ಡೆಸ್ಡಿಮೋನಾಳ ಚಾರಿತ್ರ್ಯವನ್ನೇ ಶಂಕಿಸಿ, ಅವಳ ಕತ್ತು ಹಿಸುಕಿ ಕೊಲ್ಲುವನು. ನಂತರದಲ್ಲಿ ತಾನು ಕೇಳಿದ್ದ ಕಥೆಯನ್ನು ಕಟ್ಟಿ ಹೇಳಿದವನು ನಯವಂಚಕನಾದ ಇಯಾಗೋ ಎಂದು ತಿಳಿದಾಗ, ಒಥೆಲೋ ಕಂಗೆಟ್ಟು ಸಾವಿಗೆ ಶರಣಾಗುವನು. ಒಥೆಲೋನ ಪ್ರೀತಿಯನ್ನು ಏನೆಂದು ಕರೆಯಲಿ? ತಾನು ಪ್ರೀತಿಸಿದ ಹುಡುಗಿಯ ನಡತೆಯನ್ನು ಶಂಕಿಸಿ ಅವಳ ಕತ್ತನ್ನು ಹಿಸುಕಿ ಕೊಲ್ಲುವ ಹುಚ್ಚು ಪ್ರೇಮಿಯನ್ನು! ಇದನ್ನು ‘ಪೊಸೆಸಿವ್ ಲವ್’ ಎನ್ನಬಹುದೇ? ಬಾಳಸಂಗಾತಿಯ ಮೇಲೆ ಅತಿಯಾದ ಮೋಹ, ತಾನು ಪ್ರೀತಿಸುವ ಹುಡುಗಿ ಸಂಪೂರ್ಣವಾಗಿ ತನ್ನದೇ ಹಿಡಿತದಲ್ಲಿರಬೇಕೆಂಬ ಭಾವ ಹಾಗೂ ಇತರರೊಂದಿಗೆ ಅವಳು ಮಾತನಾಡಿದರೂ ದ್ರೋಹ ಬಗೆದಾಳು ಎಂಬ ಅಪನಂಬಿಕೆ.
ಈ ಪ್ರೀತಿಯ ಹಾಡುಗಳನ್ನು ಕೇಳುತ್ತಾ ವಾಸ್ತವ ಜಗತ್ತಿಗೆ ಮರಳಿದೆ. ಮದುವೆಯ ಸಮಯದಲ್ಲಿ ಸತಿ ಪತಿಗಳಿಬ್ಬರೂ ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ ನಾತಿ ಚರಾಮಿ ಎಂಬ ಪ್ರತಿಜ್ಞೆಯನ್ನು ಮಾಡುವರು. ಆದರೆ ಬಹಳಷ್ಟು ಬಾರಿ ಗಂಡು ಈ ವಚನವನ್ನು ಪಾಲಿಸುವುದೇ ಇಲ್ಲ. ಎಲ್ಲಾ ಕಟ್ಟುಪಾಡುಗಳೂ ಹೆಣ್ಣಿಗಷ್ಟೇ ಸೀಮಿತ. ಈ ಪುರುಷಪ್ರಧಾನ ಸಮಾಜದಲ್ಲಿ ಸದಾ ಗುಯ್ ಗುಡುವ ಹಾಡು, ‘ದೇವರು ನೀನು, ದಾಸಿಯು ನಾನು’. ಮದುವೆಯಾದ ನಂತರ ತವರನ್ನು ಬಿಟ್ಟು ಹೊರಡುವ ವೇಳೆಯಲ್ಲಿ ನೆನಪಾಗುವ ಹಾಡು, ‘ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು’ ಎಂಬ ಕನ್ನಡದ ಕವಿತೆ. ಹೀಗೆ ಕೊಡು ಕೊಳ್ಳುವ ಸಂಸ್ಕೃತಿಯಲ್ಲಿ ಬೆಳೆದು ನಿಲ್ಲುವ ಹೆಣ್ಣು, ಮದುವೆಯಾದ ನಂತರ ತನ್ನ ಅಸ್ಮಿತೆಯನ್ನೇ ಕಳೆದುಕೊಂಡು, ಹೊಸ ಹೆಸರಿನೊಂದಿಗೆ, ಹೊಸ ಮನೆ, ಭಿನ್ನವಾದ ಆಚಾರ, ವಿಚಾರಗಳಲ್ಲಿ ಕರಗಿಹೋಗುವಳು. ತಂದೆ ತಾಯಿಯರ ಪ್ರೀತಿಯ ಮಡಿಲಲ್ಲಿ ಬೆಳೆದ ಹುಡುಗಿಗೆ, ಹೊಸ ಲೋಕದ ಸವಾಲುಗಳು ಎದುರಾಗುವುವು.
ನಮ್ಮ ಸುತ್ತಮುತ್ತಲೂ ನಡೆಯುವ ಕೆಲವು ಪ್ರಸಂಗಗಳನ್ನು ನೆನಪಿಸಿಕೊಳ್ಳೋಣ ಬನ್ನಿ – ನನ್ನ ಗೆಳತಿಯೊಬ್ಬಳು ತನಗೆ ಇಂಗ್ಲಿಷ್ ಬೋಧಿಸುತ್ತಿದ್ದ ಅಧ್ಯಾಪಕರನ್ನು ಪ್ರೀತಿಸಿ ಅಂತರ್ಜಾತಿ ಮದುವೆಯಾದಳು. ಆಗಿನ್ನೂ ಹದಿನೆಂಟರ ಹರೆಯ, ಬೆಳ್ಳಗಿದ್ದದ್ದೆಲ್ಲಾ ಹಾಲೆಂದು ನಂಬಿದವಳು. ತಂದೆ ತಾಯಿಯ ಮಮತೆಯ ಮಡಿಲಲ್ಲಿ ಬೆಳೆದ ಹುಡುಗಿಗೆ ಹೊರ ಜಗತ್ತಿನ ಪರಿಚಯವೇ ಇರಲಿಲ್ಲ. ಹಲವು ವರ್ಷಗಳ ಬಳಿಕ ನಾನು ಅವಳನ್ನು ಭೇಟಿಯಾದಾಗ, ಗುರುತಿಸಲಾಗದಷ್ಟು ಬದಲಾಗಿದ್ದಳು. ಮೊದಮೊದಲು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಗಂಡ, ಒಂದು ಹೆಣ್ಣು ಮಗುವಾದ ಮೇಲೆ ಅವಳಿಂದ ಮಾನಸಿಕವಾಗಿ ದೂರವಾಗ ಹತ್ತಿದ. ಕುಡಿತ, ಇಸ್ಪೇಟಿನ ದಾಸನಾದ, ರಾತ್ರಿ ಲೇಟಾಗಿ ಬಂದಾಗ, ಇವಳು ಪ್ರಶ್ನಿಸಿದರೆ, ನನ್ನ ದುಡ್ಡು, ನಾನು ಕುಡೀತೀನಿ, ನೀನ್ಯಾರು ಕೇಳಲಿಕ್ಕೆ ಎಂದು ಹೊಡೆಯುತ್ತಿದ್ದ. ಅವಳು ತನ್ನ ಸಂಸಾರದ ಖರ್ಚುವೆಚ್ಚವನ್ನು ತೂಗಿಸಲು ಒಂದು ಆಫೀಸಿನಲ್ಲಿ ಕೆಲಸ ಹಿಡಿದ ಮೇಲೆಯೇ, ಸಂಸಾರ ಸುಸೂತ್ರವಾಗಿ ನಡೆದದ್ದು. ಮಧ್ಯಮ ವರ್ಗದ ಜನರಿಗೆ ಸಮಾಜದ ಭೀತಿ ಹೆಚ್ಚು, ಮಕ್ಕಳ ಭವಿಷ್ಯದ ಚಿಂತೆ, ಲವ್ ಮ್ಯಾರೇಜ್ ಆದರಂತೂ ಯಾರ ಬೆಂಬಲವೂ ಇರಲ್ಲ. ಅಂತರ್ಜಾತಿ ವಿವಾಹವಾದರಂತೂ ಬೀದಿಗೆ ಬಿದ್ದಂತೆಯೇ.
ಹೆಣ್ಣು ಉದ್ಯೋಗಸ್ಥೆಯಾದರೆ ಅವಳಿಗೆ ಆರ್ಥಿಕ ಭದ್ರತೆ ಇರುವುದು ಖಾತ್ರಿಯಾದರೂ, ಅವಳ ದಿನಚರಿಯನ್ನು ಗಮನಿಸುವರಾರು? ಮನೆ, ಮಕ್ಕಳು, ಆಫೀಸು ಎಂದು ಚಕ್ರದಂತೆ ಸುತ್ತುವವಳಿಗೆ ವಿಶ್ರಾಂತಿ ಎಲ್ಲಿಯದು?. ಮನೆಯ ಜವಾಬ್ದಾರಿಗಳನ್ನು ಮುಗಿಸಿ ಆಫೀಸಿಗೆ ಧಾವಿಸುವ ಅವಳು ಬಿಡುವಿಲ್ಲದೆ ದುಡಿಯುವಾಕಿ. ಇವಳಿಗೆ ಆರ್ಥಿಕ ಸ್ವಾತಂತ್ರ್ಯ ಇದೆಯೇ ಎಂದು ಕೇಳಿ ನೋಡಿ, ಬಹಳಷ್ಟು ಮಂದಿ ಪತಿದೇವನನ್ನು ಕೇಳಿಯೇ ಖರ್ಚು ಮಾಡುವುದು. ನನ್ನ ಸಹೋದ್ಯೋಗಿಯೊಬ್ಬಳು ನಿತ್ಯ ಕಾಲೇಜಿಗೆ ಆಟೋದಲ್ಲಿ ಬರುತ್ತಿದ್ದಳು. ಮದುವೆಗೆ ಮೊದಲು ಸ್ಕೂಟಿಯಲ್ಲಿ ಬರುತ್ತಿದ್ದ ಹುಡುಗಿ, ಈಗ ಗಂಡನ ಅಣತಿಯಂತೆ ಆಟೋದಲ್ಲೇ ಅವಳ ಸಂಚಾರ. ಸ್ಕೂಟಿಯಲ್ಲಿ ಓಡಾಡಲು ಬಿಟ್ಟರೆ, ಅವಳು ಎಲ್ಲಿಯಾದರೂ ಹೋದಾಳು ಎಂಬ ಅನುಮಾನ ಅವಳ ಗಂಡನಿಗೆ. ಆಟೋದವನಿಗೂ ಹಣ ಕೊಡುತ್ತಿದ್ದವ ಗಂಡನೇ. ಇವಳ ಬಳಿ ಕ್ಯಾಂಟೀನ್‌ಗೆ ಹೋಗಲೂ ಮೂರು ಕಾಸೂ ಇರುತ್ತಿರಲಿಲ್ಲ. ಬ್ಯಾಂಕಿನ ಚೆಕ್‌ಬುಕ್‌ಗೆ ಅವಳಿಂದ ಸಹಿ ಹಾಕಿಸಿಕೊಂಡು, ಅದನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಪತಿರಾಯ. ಅವಳಿಗೆ ಇಷ್ಟವಾದ ಬಟ್ಟೆ ಬರೆಯನ್ನೂ ಅವಳು ಕೊಳ್ಳುವಂತಿರಲಿಲ್ಲ. ಗಂಡನ ಮಾತುಗಳನ್ನು ಶಿರಸಾವಹಿಸಿ ಪಾಲಿಸುತ್ತಾ, ಮನೆ ಮಕ್ಕಳು ಎಂದು ಸದಾ ದುಡಿಯುವವಳೇ ಸದ್ಗೃಹಿಣಿ. ನನ್ನ ವಿದ್ಯಾರ್ಥಿನಿಯೊಬ್ಬಳು ನೃತ್ಯದಲ್ಲಿ ಪ್ರವೀಣೆ. ಮದುವೆಯಾದ ಮೇಲೆ ವಿದೇಶಕ್ಕೆ ಹಾರಿದಳು. ತನ್ನ ಸಂಸಾರ ನಿಭಾಯಿಸುವುದರಲ್ಲಿ ಅವಳ ಗೆಜ್ಜೆ ಮೂಲೆ ಸೇರಿದವು. ತನ್ನ ಮಗಳಿಗೆ ನೃತ್ಯ ಕಲಿಸುವುದಿಲ್ಲ ಎಂದು ಹೇಳುವಾಗ ಅವಳ ಕಣ್ಣಂಚಿನಲ್ಲಿ ನೀರು. ಹೆಣ್ಣಿನಲ್ಲಿ ಹುದುಗಿರುವ ಪ್ರತಿಭೆಗೆ ನೀರೆರೆಯುವರು ಯಾರು?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಮನೆಯ ಮುಂದಿದ್ದ ಕೈತೋಟ ನೋಡುತ್ತಾ ಕುಳಿತೆ. ಆಗಸದಿಂದ ಸುರಿವ ಮೊದಲ ಮಳೆಗೆ, ಆನಂದದಿಂದ ತನ್ನೊಡಲನ್ನು ಒಡ್ಡುವ ಭೂಮಿಯ ಮಣ್ಣಿನ ಸುಗಂಧವನ್ನು ಹೀರಿದಾಗ ಅರಿವಾಗುವುದು ಪ್ರೀತಿಯ ಸವಿ. ರವಿ ಕಿರಣಗಳು ಸೋಂಕಿದೊಡನೆಯೇ, ಕಂಪನ್ನು ಸೂಸುತ್ತಾ ಅರಳುವ ಹೂಗಳು, ಈ ರವಿ ಕಿರಣಗಳು ಮತ್ತು ಹೂಗಳ ನಡುವೆ ಗೋಚರಿಸಿತ್ತು ಪ್ರೀತಿಯ ಬಾಂಧವ್ಯ. ಈ ಬಣ್ಣ ಬಣ್ಣದ ಹೂಗಳಿಂದ ಮಧುವನ್ನು ಹೀರಲು ಧಾವಿಸುವ ದುಂಬಿಗಳು, ಹೂಗಳು ಮತ್ತು ದುಂಬಿಗಳ ನಡುವೆ ನಡೆದಿತ್ತು ಪ್ರೀತಿಯ ಸಲ್ಲಾಪ. ಈ ನಿಸರ್ಗ ಸಿರಿಯ ಮಧ್ಯೆ ಅರಳುವ ಪ್ರೀತಿಯ ಹಾಡನ್ನು ನಾವೂ ಹಾಡೋಣವೇ? ಪ್ರೀತಿಯ ಹಾಡುಗಳು ಅರಳಿಸಬೇಕು ಬಾಳ ಸಂಗಾತಿಗಳ ವ್ಯಕ್ತಿತ್ವವನ್ನು, ಪ್ರೀತಿಯ ಹಾಡುಗಳು ಬೆಳೆಸಬೇಕು ಸ್ನೇಹ, ವಿಶ್ವಾಸಗಳನ್ನು, ಪ್ರೀತಿಯ ಹಾಡುಗಳು ಗಟ್ಟಿಗೊಳಿಸಬೇಕು ನಂಬಿಕೆ ಹಾಗೂ ಗೌರವವನ್ನು. ಅಂದೇ ಈ ಪ್ರೀತಿಯ ಹಾಡುಗಳು ಇಂಪಾಗಿ ಮಧುರವಾಗಿ ಕೇಳಿಸುತ್ತವೆ.

-ಡಾ.ಗಾಯತ್ರಿದೇವಿ ಸಜ್ಜನ್ .
ಪ್ರೀತಿಯ ನೆನಪಿನಂಗಳದ ಲೇಖನ ಚೆನ್ನಾಗಿ ದೆ ಮೇಡಂ
ಪ್ರೀತಿಯ ಹಾಡನ್ನು ಸೊಗಸಾಗಿ ಹಾಡಿದ್ದೀರಿ ಮೇಡಂ. ಪ್ರೀತಿಯ ವಿವಿಧ ಮಜಲುಗಳ ಕುರಿತಾಗಿ ನೆನಪಿನಾಳದಿಂದ ಮೇಲೆಬಂದ ಘಟನೆಗಳ ಅನಾವರಣ ಲೇಖನದಲ್ಲಾಗಿದೆ.
Nice
ಪ್ರೀತಿ ಬಾಂಧವ್ಯದ ಮಧುರತೆಯ ಮಜಲುಗಳನ್ನು ಎಳೆ ಎಳೆಯಾಗಿ ಬಿಡಿಸಿ ತೋರಿಸಿದ ಸೊಗಸಾದ ಬರೆಹ, ಗಾಯತ್ರಿ ಮೇಡಂ.