ಪೌರಾಣಿಕ ಕತೆ

ಕಾವ್ಯ ಭಾಗವತ 60 : ಯಯಾತಿ – 1

Share Button

ನವಮ ಸ್ಕಂದ – ಅಧ್ಯಾಯ – 4
ಯಯಾತಿ – 1

ಪುರೂರವ ಪುತ್ರ ನಹುಷ
ಇಂದ್ರಪದವಿಯ ಪಡೆದರೂ
ಇಂದ್ರಪತ್ನಿ ಶಚಿದೇವಿಯ ಬಯಸಿ
ಸಪ್ತರ್ಷಿಗಳ ಶಾಪಕ್ಕೆ ತುತ್ತಾಗಿ
ಇಂದ್ರಪದವಿ ಮುಕ್ತನಾದ
ಈ ನಹುಷನ ಪುತ್ರ ಯಯಾತಿ

ಕ್ಷತ್ರಿಯ ರಾಜ ಯಯಾತಿ
ದೈತ್ಯಗುರು ಶುಕ್ರಾಚಾರ್ಯ ಪುತ್ರಿ,
ಬ್ರಾಹ್ಮಣ ಪುತ್ರಿ ದೇವಯಾನಿ
ದೈತ್ಯರಾಜ ವೃಷಪರ್ವನ ಮಗಳು ಶರ್ಮಿಷ್ಠೆ
ಈರ್ವರನ್ನೂ ವಿವಾಹವಾದುದೊಂದು ಕೌತುಕ

ಈ ಕೌತುಕಕ್ಕೊಂದು ಕಥೆಯುಂಟು
ದೇವಗುರು ಬೃಹಸ್ಪತಿಯ ಪುತ್ರ ಕಚ
ದಾನವಗುರು ಶುಕ್ರಾಚಾರ್ಯರ ಬಳಿಗೈದು
ಅವರಲ್ಲಿದ್ದ ಮೃತಸಂಜೀವಿನಿ ವಿದ್ಯೆಯ
ಸಂಗ್ರಹಿಪ ಗುರಿಹೊಂದಿ
ಗುರುಪುತ್ರಿ, ಸಮವಯಸ್ಕ ದೇವಯಾನಿನಲಿ
ಪ್ರೇಮ ವಿಶ್ವಾಸ ವೃದ್ಧಿಸೆ
ಗುರುಪುತ್ರಿ ದೇವಯಾನಿ, ಕಚನ
ರಮಣನಾಗಿ ಹೊಂದಲಿಚ್ಛಿಸಿದರೂ
ಕಚ ಮಾತ್ರ ಗುರುಪುತ್ರಿಯನು
ಸೋದರಿ ಭಾವದಿಂ ಗೌರವಿಸಿ ಪ್ರೀತಿಸುತ್ತಿರೆ,
ಕಚನ ಮೃತಸಂಜೀವಿನೀ ಸಂಗ್ರಹುದ್ಧೇಶದರಿವಾದ
ದೈತ್ಯರು ಕಚನ ವಧಿಸೆ, ದೇವಯಾನಿ
ಕಚನಗಲಿ ಇರಲಾರದೆ
ಪಿತ ಶುಕ್ರಾಚಾರ್ಯರ
ಮೃತ ಸಂಜೀವಿನಿ ವಿದ್ಯೆಯಿಂ
ಕಚನ ಬದುಕಿಸಿಕೊಂಡರೂ
ದೈತ್ಯರು ಮರಳಿ ಅವನ ವಧಿಸಿ
ದೇಹವ ಧಹಿಸಿ ಬೂದಿಯ
ಶುಕ್ರಾಚಾರ್ಯ ಸೇವಿಪ ಮದ್ಯದಲಿ ಬೆರೆಸಿ
ಅದ ಕುಡಿದ ಶುಕ್ರಾಚಾರ್ಯ ತನ್ನುದರದಲ್ಲಿದ ಕಚಗೆ
ದೇವಯಾನಿಚ್ಛೆಯಂತೆ ಮೃತ ಸಂಜೀವಿನಿ
ವಿದ್ಯೆಯ ಬೋಧಿಸೆ,
ಕಚ ಅವರ ಉದರವ ಛೇಧಿಸಿ ಹೊರಬಂದು
ಗುರು ಉಪದೇಶಿದ ಪರಿಯಲಿ
ಅವರ ಬದುಕಿಸಿದ

ಕೇವಲ ಗುರುಪುತ್ರಿಯಲ್ಲದೆ
ಶುಕ್ರಾಚಾರ್ಯರ ಉದರದಿಂ ಮರಳಿಬಂದ ಕಚ
ದೇವಯಾನಿಯ ಸೋದರನಾಗಿ ಭಾವಿಸಿ
ಅವಳ ವರಿಸದೆ ದೇವಲೋಕಕೆ ತೆರಳಲನುವಾದಾಗ
ದೇವಯಾನಿ ಕ್ಷುದ್ರಳಾಗಿ
ಕಚ ಕಲಿತ ಮೃತಸಂಜೀವಿನಿ ಮಂತ್ರ
ಫಲಿಸದಂತೆ ಶಾಪ ನೀಡಲು
ಕಚನೂ ದೇವಯಾನಿಗೆ ಬ್ರಾಹ್ಮಣ ವಿವಾಹವಾಗದೆ
ಕ್ಷತ್ರಿಯನ ವರಿಸುವಂತಾಗಲೀ
ಎಂದು ಶಪಿಸಿದ

ಬ್ರಾಹ್ಮಣಪುತ್ರಿ ದೇವಯಾನಿ
ಕ್ಷತ್ರಿಯರಾಜ ಯಯಾತಿಯ
ವರಿಸಿದ ಕಾರಣವೊಂದು ವಿಚಿತ್ರ

ದೇವಯಾನಿ, ಶರ್ಮಿಷ್ಠೆಯರು
ಜಲಕ್ರೀಡೆಯಲ್ಲಿರೆ
ಕೊಳದ ಮಾರ್ಗದಿ
ಪಾರ್ವತಿ ಪರಮೇಶ್ವರರಾಗಮನವ
ಕಂಡು ನಾಚಿ ಕೊಳದಿಂದೆದ್ದ ಅವಸರದಲಿ
ವಸ್ತ್ರಗಳು ಬದಲಾಗೆ
ದೇವಯಾನಿ ಶರ್ಮಿಷ್ಠೆಯರಲಿ
ಮನಸ್ತಾಪ ಉಂಟಾಗಿ
ದೇವಯಾನಿಯ, ಶರ್ಮಿಷ್ಠೆ
ಹಾಳುಬಾವಿಗೆ ನೂಕಿಸಿದ ನಂತರದಿ
ಯಯಾತಿ ಅವಳ ಕೈಹಿಡಿದು ರಕ್ಷಿಸಿ
ಅವಳಿಚ್ಛೆಯಂತೆ ವಿವಾಹವಾದನು

ನಂತರದಿ ಶುಕ್ರಾಚಾರ್ಯರು
ಮಗಳ ಹಟಕ್ಕೆ ತಲೆಬಾಗಿ
ರಾಜ ವೃಷಪರ್ವನು, ಮಗಳು
ಶರ್ಮಿಷ್ಠೆಯನು ಯಯಾತಿಯೊಡನೆ
ಲಗ್ನವಾಗುವಂತೆ ಮಾಡಿ
ಶರ್ಮಿಷ್ಠೆ ರಾಜಪತ್ನಿಯಾದರೂ
ದೇವಯಾನಿಯ ದಾಸಿಯ ತೆರದಿ
ಇರುವಂತಾದಳು

ದೇವಯಾನಿ, ಶರ್ಮಿಷ್ಠೆಯರು
ಸವತಿ ಮಾತ್ಸರ್ಯದಿಂ ಒಬ್ಬರನ್ನೊಬ್ಬರು
ಸಂಧಿಸದಿದ್ದರೂ, ಇಬ್ಬರಿಗೂ ಯಯಾತಿ
ಸಂತಾನವನತ್ತಿದುದ
ಸಹಿಸದ ದೇವಯಾನಿ
ಮತ್ತೆ ಶುಕ್ರಾಚಾರ್ಯ ಶಾಪದಿಂ ಯಯಾತಿಗೆ
ಅಕಾಲ ವೃದ್ಧಾಪ್ಯ ಪ್ರಾಪ್ತಿಯ ಶಿಕ್ಷೆ ನೀಡಿದಳು

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43540

-ಎಂ. ಆರ್.‌ ಆನಂದ, ಮೈಸೂರು

4 Comments on “ಕಾವ್ಯ ಭಾಗವತ 60 : ಯಯಾತಿ – 1

  1. ಕಾವ್ಯಭಾಗವತದಲ್ಲಿ ಯಯಾತಿ ಪಾತ್ರ ಬಹಳ ಚೆನ್ನಾಗಿ ಮೂಡಿಬಂದಿದೆ ಸಾರ್…

  2. ಮರೆತ ಕಥೆಗಳು, ಹೊಸ ಹೆಸರುಗಳ ಪರಿಚಯ ಮಾಡಿಕೊಡುತ್ತದೆ ಈ ಕಾವ್ಯ ಭಾಗವತ.

  3. ಮನುಷ್ಯ ಸಹಜ ರಾಗದ್ವೆಷಾದಿಗಳು ಯಾವಕಾಲಕ್ಕೂ ಉಂಟುಮಾಡುವ ಅವಾಂತರಗಳು ಹಲವಾರು. ಸುಂದರವಾಗಿದೆ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *