“ಆಂಟಿ… ಎಲ್ಲಿಗೆ ಹೋಗಿದ್ರಿ? ಹೀಗೆ ನಿಧಾನವಾಗಿ ನಡ್ಕೊಂಡ್ ಬರ್ತಾ ಇದೀರಿ”?
“ಅಯ್ಯೋ… ನನ್ ಸೊಸೆ ಅವನಿ ವಾಕಿಂಗ್ ಹೋಗಿ… ವಾಕಿಂಗ್ ಹೋಗಿ ಅಂತ ಪ್ರಾಣ ತಿನ್ನೋ ವಿಷಯ ನಿಂಗೇ ಗೊತ್ತಲ್ಲಮ್ಮ ಸಿಂಧು, ಅದಕ್ಕೇ ಅಷ್ಟು ದೂರ ತಿರುಗಾಡಿಕೊಂಡು ಬರೋಣ ಅಂತ ಹೋಗಿದ್ದೆ.”
“ಸರಿ ಆಂಟಿ ನಾನು ಬರ‍್ತೀನಿ ನಮ್ಮತ್ತೆ ಕಾಯ್ತಾ ಇರ‍್ತಾರೆ. ನಾನು ಹೋದ್ಮೇಲೆ ಇಬ್ರೂ ಒಟ್ಟಿಗೇ ಕೂತು ಕಾಫಿ ಕುಡೀಬೇಕು.”
“ಸರಿ ಹೋಗಮ್ಮ…. ಏನೇ ಆದ್ರೂ ನಿಮ್ಮತ್ತೆ ತುಂಬಾ ಪುಣ್ಯವಂತೆ.”
ಅವನಿಯ ಅತ್ತೆ ಶಾಂತಕ್ಕ ಗೊಣಗಿಕೊಂಡು ಮನೆಯೊಳಕ್ಕೆ ನಡೆದರು.
ಅವನಿ ತುಂಬಾ ಒಳ್ಳೆಯ ಹುಡುಗಿಯೇ. ಆದ್ರೆ ಪ್ರತಿ ನಿತ್ಯ ಅತ್ತೆಯನ್ನು ವಾಕಿಂಗ್ ಕಳಿಸೋದು, ಸಿಹಿತಿಂಡಿ, ಕರಿದ ತಿಂಡಿ ಜಾಸ್ತಿ ತಿನ್ನಬೇಡಿ ಅಂತ ಹೇಳೋದು… ಇವೆಲ್ಲ ಶಾಂತಕ್ಕನಿಗೆ ಇಷ್ಟವಾಗುತ್ತಿರಲಿಲ್ಲ. ಮೊದಲಿನಿಂದಲೂ ಸ್ವಲ್ಪ ಬಾಯಿ ಚಪಲ ಜಾಸ್ತಿ. ಅಚ್ಚುಕಟ್ಟಾಗಿ ತಿಂದು ಉಂಡು ಆರಾಮವಾಗಿದ್ರು. ಆದ್ರೆ ಇತ್ತೀಚೆಗೆ ಡಾಕ್ಟ್ರು ಆಹಾರದ ಬಗ್ಗೆ ಎಚ್ಚರಿಕೆ ಕೊಟ್ಟು ತೂಕ ಕಡಿಮೆ ಮಾಡಿಕೊಳ್ಳದೇ ಇದ್ರೆ ಮುಂದೆ ತೊಂದ್ರೆ ಅನುಭವಿಸಬೇಕಾಗುತ್ತೆ ಅಂತ ಹೇಳಿ ಬಿಟ್ಟಿದ್ರಿಂದ ಅವನಿ ತನ್ನ ಅತ್ತೆ ಬಗ್ಗೆ ಕೊಂಚ ಕಟ್ಟುನಿಟ್ಟಾಗಿ ವರ್ತಿಸುತ್ತಿದ್ದಳು ಅಷ್ಟೇ.
ಆದರೆ ಅತ್ತೆ ಶಾಂತಕ್ಕನಿಗೆ ಮಾತ್ರ ಆಗಾಗ ಮನೆಗೆ ಬರುತ್ತಿದ್ದ ಸೊಸೆಯ ಗೆಳತಿ ಸಿಂಧು ಮೇಲೆ ಅದೇನೋ ವಾತ್ಸಲ್ಯ… ಎಂತಹುದೋ ಪ್ರೀತಿ… ಅವಳ ಮಾತುಗಳೇ ಅದಕ್ಕೆ ಕಾರಣ. ಅವಳು ಆಗಾಗ ಹೇಳ್ತಾ ಇದ್ದದ್ದು ಒಂದೇ ಮಾತು… ಒಂದೇ ರಾಗ… “ಏಯ್ ಅವನಿ… ನಿಮ್ಮತ್ತೇನ ಯಾಕೆ ಅಷ್ಟೊಂದು ಗೋಳು ಹುಯ್ಕೋತೀಯ ನಮ್ಮನೆಗೆ ಬಂದು ನೋಡು… ನಮ್ಮತ್ತೇನ ನಾನು ಹೇಗೆ ನೋಡ್ಕೊತೀನಿ ಅಂತ.”
“ಮುತ್ತಿನಂಥ ಹುಡುಗಿ ಕಣಮ್ಮ ನೀನು…” ಶಾಂತಕ್ಕ ಬಾಯಿ ತುಂಬಾ ಅವಳನ್ನು ಹೊಗಳುತ್ತಿದ್ದಳು.
ಅವನಿ ಮಾತ್ರ ಮಾತಾಡದೇ ಮೆಲುವಾಗಿ ನಕ್ಕುಬಿಡುತ್ತಿದ್ದಳು.
ಶಾಂತಕ್ಕ ಸೊಸೆಯ ಬಲವಂತಕ್ಕೆ ವಾಕಿಂಗ್ ಹೋಗೋಕೆ ಶುರು ಮಾಡಿದ್ದರೂ ಪಾರ್ಕಿಗೆ ಹೋಗಿ ಅಲ್ಲಿ ತಮ್ಮ ವಯಸ್ಸಿನವರ ಜೊತೆ ಹರಟೆ ಹೊಡೆಯುವುದು ಇತ್ತೀಚೆಗೆ ಒಂದು ಚಟವಾಗಿಬಿಟ್ಟಿತ್ತು. ಪಾರ್ಕಿನಲ್ಲಿ ಇತ್ತೀಚೆಗೆ ಪರಿಚಯವಾಗಿದ್ದ ಗೋದಾವರಿ ಶಾಂತಕ್ಕನಿಗೆ ತುಂಬಾ ಹತ್ತಿರವಾಗಿದ್ದರು. ಗೋದಾವರಿ ಆಗಾಗ ಹೇಳುತ್ತಿದ್ದರು ‘ವಯಸ್ಸಾದ ಮೇಲೆ ಬದುಕಿರಬಾರದು ಶಾಂತಕ್ಕ’ ಅನ್ನುವ ಮಾತಿನಿಂದ ಶಾಂತಕ್ಕನಿಗೆ ಅವರ ಮನದೊಳಗೆ ಏನೋ ನೋವು ತುಂಬಿದೆ ಅಂತ ಮಾತ್ರ ಅರ್ಥವಾಗಿತ್ತು.
ಯಾಕೋ ಮೂರು ದಿವಸದಿಂದ ಗೋದಾವರಿ ಪಾರ್ಕಿಗೆ ಬಂದಿಲ್ಲ ಹೇಗೂ ದೂರದಿಂದ ಅವರ ಮನೆ ತೋರಿಸಿದ್ದಾರಲ್ಲ ನೋಡಿ ಬರೋಣ ಅನ್ಕೊಂಡು ಅವರ ಮನೆ ಕಡೆಗೆ ಹೆಜ್ಜೆ ಹಾಕಿದರು ಶಾಂತಕ್ಕ. ಗೇಟಿನ ಪಕ್ಕದಲ್ಲಿ ‘ಗೋದಾ’ ಎಂಬ ಹೆಸರನ್ನು ನೋಡಿ ಮನೆಯ ಮುಂದಿನ ಮೆಟ್ಟಿಲೇರಿದರು.
ಬಾಗಿಲು ತೆರೆದಿತ್ತು ಒಳಗಿನಿಂದ ಗಟ್ಟಿಯಾದ ಮಾತು ಕೇಳಿ ಬಂತು. “ಮೂರು ದಿವಸ ಜ್ವರದ ನೆಪ ಹೇಳಿ ಮಲಗಿದ್ದು ಸಾಕು. ಮೇಲೆದ್ದು ಚಪಾತಿ, ಸಾಗು, ಅನ್ನ, ಸಾಂಬಾರ್ ಮಾಡಿ, ನಮ್ಮಕ್ಕ ರಾತ್ರಿ ಊಟಕ್ಕೆ ಬರ‍್ತಾರೆ. ದಿನಾ ಇದೇ ಗೋಳು.. ದಿನಕ್ಕೊಂದು ನೆಪ… ಅತ್ತೆ, ನೀವು ಹೇಳಿದ್ದನ್ನೆಲ್ಲಾ ಕೇಳೋಕೆ ನಾನು ರೆಡಿ ಇಲ್ಲ. ನಮ್ಮಮ್ಮನಿಗೆ ಸ್ವಲ್ಪ ಜ್ವರ ಅಂತೆ ನಾನು ಹೋಗಿ ನೋಡಿ ಬರ‍್ತೀನಿ…” ತೀರಾ ಗಟ್ಟಿಯಾದ ಧ್ವನಿಯ ಮಾತುಗಳನ್ನು ಕೇಳಿ ಕಸಿವಿಸಿಗೊಂಡ ಶಾಂತಕ್ಕ ಕಾಲಿಂಗ್ ಬೆಲ್ ಸ್ವಿಚ್ ಮೇಲೆ ಕೈಯಿಟ್ಟರು.
ಥಟ್ಟನೆ ಮಾತು ನಿಲ್ಲಿಸಿದ ಅವಳು ಹೊರಗೆ ಬಂದಳು.
ಆ ಕ್ಷಣ ಇಬ್ಬರೂ ಶಾಕ್ ಹೊಡೆಸಿಕೊಂಡವರಂತೆ ನಿಂತುಬಿಟ್ಟರು.
ಒಬ್ಬರು ಹೊರಗಿನಿಂದ ಒಳಗೆ ಬಂದಿದ್ದ ಶಾಂತಕ್ಕ.
ಇನ್ನೊಬ್ಬರು ಒಳಗಿನಿಂದ ಹೊರಗೆ ಬಂದಿದ್ದ ಅವನಿಯ ಗೆಳತಿ ಸಿಂಧು… ಅದೇ ಮುತ್ತಿನಂಥಾ ಹುಡುಗಿ! ಒಳಗಿನ ಮನಸ್ಸೇ ಬೇರೆ… ಹೊರಗಿನ ಮಾತೇ ಬೇರೆ… ಎಂದು ಆ ಕ್ಷಣದಲ್ಲಿ ಚೆನ್ನಾಗೇ ಅರ್ಥವಾಯಿತು ಶಾಂತಕ್ಕನಿಗೆ. ಒಂದು ಮಾತನ್ನೂ ಆಡದೇ ಸರ‍್ರನೆ ಹಿಂತಿರುಗಿ… ಮನೆಯ ಕಡೆಗೆ ಹೆಜ್ಜೆ ಹಾಕಿದ ಶಾಂತಕ್ಕನ ಮನದ ತುಂಬಾ ಭಾವನೆಗಳ ನರ್ತನ.

–ಸವಿತಾ ಪ್ರಭಾಕರ್, ಮೈಸೂರು
ವಾಸ್ತವಿಕದ ಅನಾವರಣ ಚಿಕ್ಕ ಕಥೆಯಾದರೂ ಚೊಕ್ಕ ವಾಗಿ ಬಂದಿ ದೆ ಗೆಳತಿ..
Beautiful story
ಅಂದರ್ ಬಾಹ ರ್
ಚಿಕ್ಕದಾದ ಚೊಕ್ಕದಾದ ಕಥೆ
ಗೋಸುಂಬೆಯ ಮುಖವಾಡವನ್ನು ಕಳಚಿದ ಚಿಕ್ಕ ಚೊಕ್ಕ ಕಥೆ ಚೆನ್ನಾಗಿದೆ.