ಕಾದಂಬರಿ

ಕನಸೊಂದು ಶುರುವಾಗಿದೆ: ಪುಟ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ತಾಯಿ-ತಂದೆ ದುಬೈಗೆ ಮದುವೆಗೆ ಹೊರಟಮೇಲೆ ವರು “ಇನ್ನು ಹತ್ತು ದಿನ ಬೆಂಗಳೂರು ಕಡೆಗೆ ಸುಳಿಯುವುದಿಲ್ಲ” ಎಂದುಕೊಂಡಳು. ಒಂದು ದಿನ ಬೆಳಿಗ್ಗೆ ಅವಳು ತಿಂಡಿ ಮಾಡುತ್ತಿದ್ದಾಗ ಮಾನಸ ಓಡಿ ಬಂದು ಅವಳನ್ನು ತಬ್ಬಿಕೊಂಡು ಅಳತೊಡಗಿದಳು.
“ಮಾನಸ ಏನಾಯ್ತು? ಯಾಕೆ ಅಳ್ತಿದ್ದೀಯಾ?”
“ಅಪ್ಪ ಫೋನ್ ಮಾಡಿದ್ರು, ತಾತಂಗೆ ಹಾರ್ಟ್ ಅಟ್ಯಾಕ್ ಆಗಿ ನರ್ಸಿಂಗ್‌ಹೋಂನಲ್ಲಿದ್ದಾರಂತೆ. ನಾನು ಈಗಲೇ ಹೊರಡಬೇಕು.”

“ಒಬ್ಬಳೇ ಹೋಗ್ತೀಯಾ?”
“ನಮ್ಮ ಮ್ಯಾನೇಜರ್ ಅಶ್ವತ್ಥನಾರಾಯಣ್ ಕಾರು ತರ‍್ತಿದ್ದಾರಂತೆ. ನಾನು ಬಟ್ಟೆ ಪ್ಯಾಕ್ ಮಾಡಿಕೊಳ್ತೇನೆ.”
ಸಿಂಧು ಮಾನಸಾಗೆ ಸಹಾಯ ಮಾಡಿದಳು. ಅಷ್ಟರಲ್ಲಿ ಕಾರು ಬಂತು. ಮಾನಸ ಅಳುತ್ತಲೇ ಹೊರಟಳು.
ಆ ರಾತ್ರಿಯೇ ಮಾನಸಾಳಿಂದ ಫೋನ್ ಬಂತು. “ನಮ್ಮ ತಾತ ಹುಷಾರಾಗಿದ್ದಾರೆ. ನಾಳಿದ್ದು ಡಿಸ್ಚಾರ್ಜ್ ಮಾಡ್ತಾರಂತೆ. ನಾನು ವಾಪಸ್ಸು ಬರೋದು ಅನುಮಾನ.”
“ಯಾಕೆ?”
“ತಾತ ನನ್ನ ಮದುವೆ ನೋಡಬೇಕೂಂತ ಹಠ ಹಿಡಿದಿದ್ದಾರೆ. ಅಪ್ಪನ ಪರಿಚಯದವರ ಮಗ ಇಂಜಿನಿಯರ್‌ನ ನೋಡಿದ್ದಾರೆ. ಇನ್ನೆರಡು ತಿಂಗಳಲ್ಲಿ ಮದುವೆ ಆಗಬಹುದು. ಅದಕ್ಕೆ ಮನೆಯಲ್ಲಿ ಮುಂದೆ ಓದೋದು ಬೇಡ ಅಂತಿದ್ದಾರೆ.”
“ಹೌದಾ? ಸರಿ. ನಾನು ಸಾಯಂಕಾಲ ಕಾಲ್ ಮಾಡ್ತೀನಿ.”
“ಆಗಲಿ” ಎಂದಳು ಮಾನಸ.

ವರುಗೆ ತಲೆ ಕೆಟ್ಟಂತಾಯಿತು. ಮಾನಸ ಹೊರಟುಹೋದರೆ ತನ್ನ ಗತಿಯೇನು ಅನ್ನಿಸಿತು. ಸಿಂಧು, ಕೃತಿಕಾ ಬೇರೆಯಾರನ್ನಾದರೂ ಮಾನಸಾಳ ಜಾಗಕ್ಕೆ ಸೇರಿಸಬಹುದು. ಹೊಸಬಳು ಹೇಗಿರುತ್ತಾಳೋ ಏನೋ?” ಎಂಬ ಚಿಂತೆ ಕಾಡಿತು. ಸಿಂಧು, ಕೃತಿಕಾ ಕೇಳಿದರು.
“ಹೇಗಿದ್ದಾರಂತೆ ಮಾನಸಾಳ ತಾತ?”
“ಮಾನಸಾಳ ತಾತ ಹುಷಾರಾಗಿದ್ದಾರಂತೆ. 2-3 ದಿನ ಬಿಟ್ಟುಕೊಂಡು ಬರ‍್ತೀನಿ” ಅಂದಳು…….. ಎಂದಷ್ಟೇ ಹೇಳಿದಳು.
“ವರು, ನೀನು ಯಾರಿಗೂ ಪ್ರಾಮಿಸ್ ಮಾಡಬೇಡ. ಒಂದು ವೇಳೆ ಮಾನಸ ಬಿಟ್ಟು ಹೋದರೆ ಬಿಂದಿಯಾ ಅವಳ ಜಾಗಕ್ಕೆ ಬರ‍್ತಾಳೆ.”
“ಮಾನಸ ಯಾಕೆ ಬಿಟ್ಟು ಹೋಗ್ತಾಳೆ?”
“ಅವಳಿಗೆ ಓದಿನಲ್ಲಿ ಅಂತಹ ಆಸಕ್ತಿ ಕಾಣಿಸ್ತಿಲ್ಲ. ಇದುವರೆಗೂ ಒಂದು ಸೆಮಿನಾರೂ ಮಾಡಿಲ್ಲ. ಅಜ್ಜನ ಖಾಯಿಲೆ ನೆಪ ತೆಗೆದು ಬಿಟ್ಟು ಹೋಗಬಹುದಲ್ವಾ?”
“ಅವಳು ತುಂಬಾ ಮೂಡಿ. ಏನು ಮಾಡುತ್ತಾಳೋ ನೋಡೋಣ” ಎಂದಳು ವರು.

ಅಂದು ಸಾಯಂಕಾಲ ಬಿಂದಿಯಾ ಸಿಂಧು ಜೊತೆ ಬಂದೇ ಬಿಟ್ಟಳು. ಸಿಂಧು ಚಪಾತಿ ಹಿಟ್ಟು ಕಲಿಸಿದಳು. ಕೃತಿಕಾ ಕಾಫಿ ಮಾಡಿದಳು. ವರು ಟೊಮ್ಯಾಟೋ, ಈರುಳ್ಳಿಯ ಗೊಜ್ಜು ಮಾಡಿದಳು.
ಬಿಂದಿಯಾ ತಿಂಡಿ ತಟ್ಟೆ ತೊಳೆಯಲು ಹಾಕಿದ್ದಳು. ಮಲ್ಲಿ ಮಾತನಾಡದೆ ತೊಳೆದು ಹೇಳಿದಳು. “ನೀವು ನಾಳೆಯಿಂದ ತಿಂಡಿ ತಟ್ಟೆ ಹಾಕಬೇಡಿ. ನಾನು ತೊಳೆಯಲ್ಲ.”
“ನಮ್ಮ ಊರಿನಲ್ಲಿ ಕೆಲಸದವರು ತೊಳೆಯುತ್ತಾರೆ.”
“ಇದು ನಿಮ್ಮೂರಲ್ಲ. ನಾನು ಕೆಲಸಕ್ಕೆ ಬರಬೇಕಾದರೆ ತಿಂಡಿ ತಟ್ಟೆ, ಊಟದ ತಟ್ಟೆ ತೊಳೆಯಕ್ಕೆ ಹಾಕಬಾರದು.”

ಎರಡು ದಿನ ಕಳೆಯುವಷ್ಟರಲ್ಲಿ ಬಿಂದಿಯಾಳಿಗೆ ವರೂನೇ ಅಡಿಗೆ-ತಿಂಡಿ ಮಾಡುವುದು ತಿಳಿಯಿತು. ಅವಳು ಕೆಲಸ ಮಾಡುವುದುರಿಂದ ಮನೆಯ ಖರ್ಚಿಗೆ ಹಣಕೊಡುವುದಿಲ್ಲವೆಂದು ಸಿಂಧು ಹೇಳಿದಳು.
ಮರುದಿನ ಬೇಕೆಂದೇ ಬಿಂದಿಯಾ ಊಟದ ತಟ್ಟೆ, ತಿಂಡಿ ತಟ್ಟೆ ತೊಳೆಯಲು ಹಾಕಿದಳು.
“ಮಲ್ಲಿ ನೋಡಿದರೆ ಗಲಾಟೆ ಮಾಡ್ತಾಳೆ ಬಿಂದಿಯಾ. ಪ್ಲೀಸ್ ತಟ್ಟೆ ತೊಳೆಯಕ್ಕೆ ಹಾಕಬೇಡ” ಕೃತಿಕಾ ಹೇಳಿದಳು.
“ಹೇಗೋ ವರು ಬಿಟ್ಟಿ ಇದಾಳಲ್ವಾ? ಅವಳು ತೊಳೆಯುತ್ತಾಳೆ ಬಿಡು.”
ಸಿಂಧುವಾಗಲಿ, ಕೃತಿಕಾಳಾಗಲಿ ಏನೂ ಹೇಳಲಿಲ್ಲ. ವರು ಮಾತನಾಡದೆ ತಟ್ಟೆಗಳನ್ನು ತೊಳೆದಳು.

ಅಂದು ಸಾಯಂಕಾಲ ಅವಳು ಮಾನಸಾಗೆ ಫೋನ್ ಮಾಡಿ ಹೇಳಿದಳು.
“ನಿನ್ನಿಂದ ಒಂದು ಸಹಾಯವಾಗಬೇಕು ಮಾಡ್ತೀಯಾ?”
“ಏನು ಸಹಾಯ?”
“ನಿನ್ನ ಜಾಗಕ್ಕೆ ಬಿಂದಿಯಾ ಅನ್ನುವವಳನ್ನು ಕರೆದುಕೊಂಡು ಬಂದಿದ್ದಾರೆ. ಅವಳು ಎಕನಾಮಿಕ್ಸ್ ಎಂ.ಎ. ಮಾಡ್ತಿದ್ದಾಳೆ. ‘ನೀನು ಬಿಟ್ಟಿ ಇದ್ದೀಯಲ್ಲಾ ನನ್ನ ತಟ್ಟೆಗಳನ್ನು ತೊಳಿ’ ಅಂತ ತೊಳೆಸಿದಳು. ನಾಳೆ ಸಿಂಧು, ಕೃತಿಕಾ ಅವಳನ್ನು ಅನುಸರಿಸಿದರೆ ಆಶ್ಚರ್ಯವೇನಿಲ್ಲ.”
“ಛೆ ಛೆ ಛೆ”
“ನೀನು ಬರ‍್ತೀಯೋ ಇಲ್ಲವೋ ನನಗೆ ತಿಳಿಯದು. ಆದರೆ ನನಗೋಸ್ಕರ ‘ವಾಪಸ್ಸು ಬರ‍್ತೀನಿ’ ಅಂತ ಸುಳ್ಳು ಹೇಳು. ಈ ತಿಂಗಳು ಮುಗಿಯುವುದರಲ್ಲಿ ನಾನು ಬೇರೆ ಜಾಗ ನೋಡಿಕೊಳ್ಳುವುದಕ್ಕೆ ಅನುಕೂಲವಾಗತ್ತೆ. ಇಲ್ಲದಿದ್ರೆ ನಾನು ಅತ್ತೆ ಮನೆಗೆ ಹೋಗಬೇಕಾಗತ್ತೆ………”
“ಹಾಗೆ ಆಗುವುದಕ್ಕೆ ನಾನು ಬಿಡಲ್ಲ. ನಾನೇ ಸಿಂಧುಗೆ ಫೋನ್ ಮಾಡಿ ಹೇಳ್ತೀನಿ ಬಿಡು.”

ಅಂದು ರಾತ್ರಿ ಎಲ್ಲರೂ ಊಟಕ್ಕೆ ಕುಳಿತಿರುವಾಗ ಮಾನಸಾ ವರೂಗೆ ಫೋನ್ ಮಾಡಿದಳು.
“ವರು, ಮಾನಸಾ ಫೋನ್…”
“ನೀವೇ ಯಾರಾದ್ರೂ ರಿಸೀವ್ ಮಾಡಿ. ಕೈ ಬಿಡುವಿಲ್ಲ.”
“ಮಾನಸಾ ನಾನು ಸಿಂಧು. ವರು ಚಪಾತಿ ಮಾಡ್ತಿದ್ದಾಳೆ. ಆಮೇಲೆ ಮಾತಾಡು……..”
“ಏನಿಲ್ಲ ಸಿಂಧು. ತಾತ ಮನೆಗೆ ಬಂದ್ರು. ನಾನು ಮುಂದಿನವಾರ ಬರ‍್ತೀನಿ. ವರೂಗೆ, ಕೃತಿಕಾಗೆ ತಿಳಿಸಿಬಿಡು……..”
“ಆಗಲಿ ಕಣೆ ಹೇಳ್ತೀನಿ.”
ಮಾನಸಾ ವಾಪಸ್ಸು ಬರುತ್ತಾಳೆಂದು ಕೇಳಿ ಬಿಂದಿಯಾಗೆ ಕಸಿವಿಸಿಯಾಯ್ತು.
“ಅವಳು ಬಂದರೇನಂತೆ? ನೀನು ನನ್ನ ರೂಮು ಶೇರ್ ಮಾಡಿಕೋ” ಸಿಂಧು ಹೇಳಿದಳು.
“ನೋಡೋಣ” ಎಂದಳು ಬಿಂದಿಯಾ.

“ವರು ನಿನಗೆ 5 ಜನರಿಗೆ ಅಡಿಗೆ ಮಾಡಕ್ಕೆ ಕಷ್ಟವಾಗಲ್ವಾ?” ಸಿಂಧು ಕೇಳಿದಳು.
“ಬಹುಶಃ ನಾನು ನಮ್ಮತ್ತೆ ಮನೆಗೆ ಹೋಗಬೇಕಾಗತ್ತೇಂತ ಕಾಣತ್ತೆ. ಇಲ್ಲಿ ಮಾಡುವ ಕೆಲಸ ಅಲ್ಲೂ ಮಾಡಬಹುದಲ್ವಾ?”
“ಅಲ್ಲಿಂದ ಓಡಾಡಕ್ಕೆ ಕಷ್ಟವಾಗಲ್ವಾ?”
“ನಾನು ಅಡಿಗೆ ಮಾಡಕ್ಕೆ ಒಪ್ಪಿದ್ದೆ ನಿಜ. ನೀವು ನನ್ನನ್ನು ಮನೆ ಕೆಲಸದವಳ ತರಹ ಟ್ರೀಟ್ ಮಾಡಿದರೆ ನಾನು ಸುಮ್ಮನಿರಬೇಕಾ?”
“ನಾವೆಲ್ಲಿ ಹಾಗೆಂದೆವು ವರು? ಬಿಂದಿಯಾ………”
“ಬಿಂದಿಯಾ ಅಂದಳು ನಿಜ. ನೀವು ಸುಮ್ಮನಿದ್ರಿ ತಾನೆ? ನನ್ನ ಬಗ್ಗೆ ಮಾತಾಡಿದ್ರಾ? ನಾಳೆ ನೀವೂ ನನ್ನ ಕೈಯಲ್ಲಿ ತಟ್ಟೆ ತೊಳೆಸಿದರೆ ಆಶ್ಚರ್ಯವೇನಿಲ್ಲ. ನಂಗೆ ತುಂಬಾ ಹರ್ಟ್ ಆಯ್ತು. ದಯವಿಟ್ಟು ಮಾನಸಾ ಬರುವವರೆಗೂ ಈ ವಿಷಯ ಚರ್ಚೆ ಮಾಡೋದು ಬೇಡ.”
ಅವಳಿಗೆ ಬೇಜಾರಾಗಿರುವುದು ಎಲ್ಲರಿಗೂ ಸ್ಪಷ್ಟವಾಯಿತು. ಯಾರೊಬ್ಬರೂ ಮಾತನಾಡಲಿಲ್ಲ.

ಎರಡು ದಿನ ಕಳೆಯಿತು. ಒಂದು ರಾತ್ರಿ ಓನರ್ ಮಗಳು ಬಂದು ಬಾಗಿಲು ತಟ್ಟಿದಳು. ಗಂಟೆ 12 ದಾಟಿತ್ತು.
“ಏನಾಯ್ತು? ಯಾಕೆ………”
ಅವಳು ಮಾತನಾಡದೆ ವರು ಕೈ ಹಿಡಿದು ದರದರ ಕರೆದೊಯ್ದಳು. ಸಿಂಧು ಹಿಂದೇ ಹೋದಳು. ಓನರ್ ಚಂದ್ರಾವತಿ ಮಂಚದ ಮೇಲೆ ಜ್ಞಾನತಪ್ಪಿ ಬಿದ್ದಿದ್ದರು. ಮೈ ಬೆವರುತ್ತಿತ್ತು.”
“ಸಿಂಧು, ಸೀರಿಯಸ್ ಅನ್ನಿಸ್ತಿದೆ ಏನ್ಮಾಡೋಣ?”
“ಈ ಹೊತ್ತಿನಲ್ಲಿ ಯಾರೇ ಸಹಾಯ ಮಾಡ್ತಾರೆ?”
ಹಿಂದೆ ಮುಂದೆ ಯೋಚಿಸದೆ ವರು ರಾಗಿಣೀಗೆ ಫೋನ್ ಮಾಡಿದಳು. ಅವಳು ಮನೆಯ ಲೊಕೇಶನ್ ತಿಳಿದುಕೊಂಡು ರಾಮ್‌ಗೋಪಾಲ್ ಕಾರ್‌ನಲ್ಲಿ ಬಂದಳು. ತಕ್ಷಣ ಚಂದ್ರಾವತಿಯನ್ನು ಹತ್ತಿರದಲ್ಲೇ ಇದ್ದ ಕಿರಣ್ ನರ್ಸಿಂಗ್‌ಹೋಂಗೆ ಸೇರಿಸಲಾಯಿತು. ರಾಗಿಣಿ ಎಲ್ಲಾದಕ್ಕೂ ಆನ್‌ಲೈನ್‌ನಲ್ಲಿ ಪೇ ಮಾಡಿದಳು.
“ಹಾರ್ಟ್ ಅಟ್ಯಾಕ್ ಆಗಿದೆ. ನೀವು ಕರೆದುಕೊಂಡು ಬರುವುದು ತಡವಾಗಿದ್ದಿದ್ರೆ ತೊಂದರೆಯಾಗ್ತಿತ್ತು. ಟ್ರೀಟ್‌ಮೆಂಟ್ ಶುರುಮಾಡಿದ್ದೇವೆ. ನಾಲ್ಕು ದಿನ ಇರಲಿ” ಎಂದರು.
ಚಂದ್ರಾವತಿ ಮಗಳು ಶಾರದಾ ಅಳು ನಿಲ್ಲಿಸುವುದೇ ಸಮಸ್ಯೆಯಾಯಿತು.
“ವರು ನೀನು ಇವರನ್ನು ಮನೆಗೆ ಕರೆದುಕೊಂಡು ಹೋಗು. ನಾವಿಬ್ರೂ ಆಂಟೀನ್ನ ನೋಡಿಕೊಳ್ತೇವೆ.”
“ನಿನಗ್ಯಾಕೆ ತೊಂದರೆ?”
“ಇದರಲ್ಲಿ ತೊಂದರೆ ಏನು ಬಂತು? ಸಮಯಕ್ಕೆ ನಾವು ಕೈಲಾದ ಸಹಾಯ ಮಾಡಬೇಕಲ್ವಾ? ನೀನು ಬೆಳಿಗ್ಗೆ 8-30ಗೆ ಬಾ. ನಾನು ಅದುವರೆಗೂ ಇರ‍್ತೀನಿ.”

ರಾಮಗೋಪಾಲ್ ಅವರನ್ನು ಮನೆಗೆ ಬಿಟ್ಟ. ಮನೆ ತಲುಪಿದೊಡನೆ ಶಾರದಾ ಹೋಗಿ ಮಲಗಿಬಿಟ್ಟಳು. ಆದರೆ ವರೂಗೆ ನಿದ್ರೆ ಬರಲಿಲ್ಲ. ಶಾರದಾ ಯಾಕೋ ತುಂಬಾ…. ಪೆದ್ದು ಅನ್ನಿಸಿತು. ಚಂದ್ರಾವತಿ ವಾಪಸ್ಸಾಗುವವರೆಗೂ ತಾನೇ ಜವಾಬ್ದಾರಿ ತೆಗೆದುಕೊಳ್ಳಬೇಕಾಗಬಹುದು ಅನ್ನಿಸಿತು.
ಬೆಳಗಾಗುತ್ತಿದ್ದಂತೆ ಅವಳು ಮಲ್ಲಿಗೆ ಫೋನ್ ಮಾಡಿದಳು. ಸಿಂಧು ಕೆಳಗೆ ಬಂದವಳು ಹೇಳಿದಳು. “ನಾವು ಹೇಗೋ ಮ್ಯಾನೇಜ್ ಮಾಡ್ತೇವೆ. ನೀನು ತಿಂಡಿ, ಅಡಿಗೇಂತ ಹಚ್ಚಿಕೊಳ್ಳಬೇಡ.”
“ನೀವು ಅಡಿಗೆ, ತಿಂಡಿ ಮಾಡೂಂತ ಹೇಳಿದರೂ ನಾನು ಮಾಡುವ ಮೂಡ್‌ನಲ್ಲಿಲ್ಲ……….”
“ಓನರ್ ಮಗಳು ಅವರಮ್ಮನ ಜೊತೆ ಇದ್ದಾಳಾ?”
“ಇಲ್ಲ ರೂಮ್‌ನಲ್ಲಿ ಮಲಗಿದ್ದಾಳೆ. ನರ್ಸಿಂಗ್‌ಹೋಂನಲ್ಲಿ ರಾಗಿಣಿ ಇದ್ದಾಳೆ.”

ಅಷ್ಟರಲ್ಲಿ ಮಲ್ಲಿ ಬಂದಳು.
“ಶಾರದವ್ವ ಎಲ್ಲಿ?”
“ಮಲಗಿದ್ದಾರೆ….”
“ನೀವು ಕಾಫಿಕೊಡೋವರೆಗೂ ಅದು ಏಳಲ್ಲ. ಅಮ್ಮವ್ರಿಗೆ ಈಯಮ್ಮನೇ ದೊಡ್ಡ ತಲೆನೋವು.”

“ಯಾಕೆ ಹಾಗಂತೀಯಾ?”
“ಶಾರದವ್ವಂಗೆ ತಿಳಿವಳಿಕೆ ಸಾಲದು. ನೋಡಕ್ಕೆ ಚಿಕ್ಕದಾಗವ್ರೆ. ಅವರಿಗೆ ಎಷ್ಟು ವಯಸ್ಸು ಗೊತ್ತಾ? 22 ವರ್ಷ.”
“ಹೌದಾ? ರಾಯರಿದ್ದಾಗ ಮಗಳಿಗೆ ಬೇಗ ಮದುವೆ ಮಾಡಬೇಕೂಂತ ಬೇಗ ಮದುವೆ ಮಾಡಿದ್ರಂತೆ. ಗಂಡನ ಮನೆಯವರು ಒಂದು ತಿಂಗಳಿಗೇ ಕರ‍್ಕೊಂಡು ಬಂದು ಬಿಟ್ಟರಂತೆ” ನಿಜಾನೋ ಸುಳ್ಳೋ ಗೊತ್ತಿಲ್ಲ”
“ನಿಮ್ಮ ಮಗಳು ಮೆಚೂರೇ ಆಗಿಲ್ಲ. ಮೋಸ ಮಾಡಿದ್ರಿ.”
“ಹೌದಾ? ನೀನು ಶಾರದಾ ತಂದೇನ್ನ ನೋಡಿದ್ದೆಯಾ?”
“ಇಲ್ಲ ಕಣ್ರವ್ವ. ಅಮ್ಮಾವ್ರು ಈ ಮನೆಗೆ ಬರೋ ಟೇಮ್‌ಗೆ ಅವರು ಓಗಿಬಿಟ್ಟಿದ್ರು. ಶಾರದವ್ವನ್ನ ಇಟ್ಕೊಂಡು ಈಯಮ್ಮ ಬಾಳಾ ಕಷ್ಟಪಡ್ತಿದ್ದಾರೆ.”
“ಶಾರದಾ ಗಲಾಟೆ ಮಾಡುವವರ ತರಹ ಕಾಣಿಸಲ್ಲ.”
“ಗಲಾಟೆ ಮಾಡಲ್ಲ. ತಮ್ಮ ಕೆಲಸ ತಾವೇ ನೋಡ್ಕೋತಾರೆ. ಅವರನ್ನು ಒಲೆ ಮುಂದೆ ಬಿಡಲ್ಲ. ಆದ್ರೆ ಬೆಳಿಗ್ಗೆ ಕಾಫಿ ಕುಡಿಯದೆ ಏಳಲ್ಲ.”
ವರು ಮೂವರಿಗೂ ಕಾಫಿ ಮಾಡಿ, ಶಾರದಾಳನ್ನು ಎಬ್ಬಿಸಿದಳು. ಮಲ್ಲಿ ಕೆಲಸ ಮುಗಿಸುವ ವೇಳೆಗೆ ರಾಗಿಣಿ ಫೋನ್ ಮಾಡಿದಳು.
ಆಂಟಿ ಹುಷಾರಾಗಿದ್ದಾರೆ. ಅವರು ಮಲ್ಲಿ ಜೊತೆ ಮಾತನಾಡಬೇಕಂತೆ.”

ಮಲ್ಲಿ ಫೋನ್ ತೆಗೆದುಕೊಂಡು ಮಾತಾಡಿದಳು. ನಾಲ್ಕಾರು ಸಲ “ಆಯ್ತು ಕಣವ್ವ ಆಯ್ತು ಕಣವ್ವ” ಎಂದಳು. ನಂತರ ವರು ಕಡೆ ತಿರುಗಿ ಹೇಳಿದಳು. “ನನ್ನನ್ನು ಆಸ್ಪತ್ರೆಗೆ ಬರಕ್ಕೆ ಹೇಳವ್ರೆ. ರೂಮ್ನಾಗೆ ಅವರ ಚೆಕ್‌ಬುಕ್ ಇದೆಯಂತೆ. ಅದನ್ನು ಕೊಡಬೇಕಂತೆ. ನಿಮ್ಮ ಫ್ರೆಂಡ್ ತಿಂಡಿ ತಂದುಕೊಟ್ಟಿದ್ದಾರೆ. ಈಗ ತಿಂಡಿ ಬರತ್ತೆ. ನಂಗೂ ಕೊಟ್ಟು ನೀವೂ ತಿನ್ನಿ.”
“ತಿಂಡಿ ಎಲ್ಲಿಂದ ಬರತ್ತೆ?”
“ಅಮ್ಮಾವ್ರ ತಮ್ಮ ತಮ್ಮನ ಎಂಡ್ತಿ ಮೆಸ್ ನಡೆಸ್ತಾರೆ. ದಿನಾ ಅಲ್ಲಿಂದಾನೇ ಊಟ, ತಿಂಡಿ ಬರೋದು. ನೀವು ಒಲೆ ಅಚ್ಬೇಡಿ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಚಪಾತಿ ಕಳಿಸ್ತಾರೆ.”
“ಹೌದಾ?”
“ನೀವೂ ಶಾರದನ್ನ ರ‍್ಕೊಂಡು ಬನ್ನಿ. ಒಟ್ಟಿಗೆ ಓಗೋಣ.”
ಅಷ್ಟರಲ್ಲಿ ತಿಂಡಿ ಬಂತು. ಅವರೆಕಾಳು ಉಪ್ಪಿಟ್ಟು. ರುಚಿಯಾಗಿತ್ತು. ತಿಂಡಿ ತಿಂದು ಮೂವರೂ ಹೊರಟರು. ಚಂದ್ರಾವತಿ ತುಂಬಾ ಗೆಲುವಾಗಿದ್ದರು. ಅಳುತ್ತಿದ್ದ ಮಗಳನ್ನು ಅಪ್ಪಿಕೊಂಡು ಸಂತೈಸಿದರು.

“ಆಂಟಿ ಹೇಗಿದ್ದೀರಾ?”
“ಹುಷಾರಾಗಿದ್ದೇನೆ. ನಾಳೆ ಬೆಳಿಗ್ಗೆ ಡಿಸ್ಚಾರ್ಜ್ ಮಾಡ್ತಾರೆ.”
“ವೆರಿಗುಡ್.”
“ನೀವಿಬ್ರೂ ಕಾಲೇಜ್‌ಗೆ ಹೋಗಿ. ಮಲ್ಲಿ, ಶಾರದಾ ಇರ‍್ತಾರೆ. ಮಧ್ಯಾಹ್ನ ಮನೆಗೆ ಊಟ ಬಂದಿರತ್ತೆ. ಬಂದು ಊಟ ಮಾಡಿ.”
“ಬೇಡ ಆಂಟಿ.”
“ಸಂಕೋಚ ಬೇಡ. ಮಲ್ಲಿ ನಿನ್ನ ಹತ್ತಿರ ಇರುವ ಕೀ ವಾರುಣಿಗೆ ಕೊಟ್ಟು ಬಿಡು.”
ವಾರುಣಿ, ರಾಗಿಣಿ ಒಟ್ಟಿಗೆ ಕಾಲೇಜ್‌ಗೆ ಹೋಗಿ ಬಂದರು. ರಾತ್ರಿ ರಾಗಿಣಿ ವರು, ಶಾರದಾ ಜೊತೆ ಉಳಿದಳು. ಮಲ್ಲಿ ನರ್ಸಿಂಗ್‌ಹೋಂನಲ್ಲಿ ಮಲಗಿದಳು.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : ಕನಸೊಂದು ಶುರುವಾಗಿದೆ: ಪುಟ 5
(ಮುಂದುವರಿಯುವುದು)

ಸಿ.ಎನ್. ಮುಕ್ತಾ, ಮೈಸೂರು

4 Comments on “ಕನಸೊಂದು ಶುರುವಾಗಿದೆ: ಪುಟ 7

  1. ಕನಸೊಂದು ಶುರುವಾಗಿದೆ ಧಾರಾವಾಹಿ ಓದಿಸಿಕೊಂಡು ಹೋಗುತ್ತಿದೆ…

  2. ಧನ್ಯವಾದಗಳು ನಾಗರತ್ನ ಮತ್ತು ನಯನಾ . ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಸಂಪಾದಕರಿಗೆ ನಮನಗಳು

  3. ರೋಚಕ ತಿರುವುಗಳೊಂದಿಗೆ ಕುತೂಹಲಭರಿತವಾಗಿ ಮುದನೀಡುತ್ತಾ ಸಾಗಿದೆ ಕಾದಂಬರಿ

Leave a Reply to C.N.Muktha Cancel reply

 Click this button or press Ctrl+G to toggle between Kannada and English

Your email address will not be published. Required fields are marked *