ಬಾಗಿಲಿಗೆ ಬೀಗ ಹಾಕಿ ಕೀ ತೆಗೆದು ವ್ಯಾನಿಟೀ ಬ್ಯಾಗಿಗೆ ಹಾಕಿಕೊಂಡ ಭ್ರಮರಾಂಬ ಹೊರಗೆ ಬಂದು ಗೇಟು ಮುಚ್ಚಿ ಮೊಬೈಲ್ ಕೈಗೆತ್ತಿಕೊಂಡರು.
“ಹಲೋ…”
“ಹಲೋ…” ಆ ಕಡೆಯಿಂದ ಕೇಳಿಬಂತು.
“ಏ ವೀಣಾ… ನಾನು ಹೊರಟಾಯ್ತು ಕಣೆ. ಒಡವೆ ಅಂಗಡಿಗೆ ಫೋನ್ ಮಾಡಿದ್ದೆ. ಬಳೆ ಸರ ಎರಡೂ ರೆಡಿಯಾಗಿದೆಯಂತೆ. ನಾನು ರಿಪೇರಿಗೆ ಕೊಟ್ಟಿದ್ದ ನೆಕ್ಲೆಸೂ ರೆಡಿಯಾಗಿದೆ ಅಂತ ಹೇಳಿದ್ರು, ಹನ್ನೊಂದು ಗಂಟೆಗೆ ಬನ್ನಿ ಅಂತ ಹೇಳಿದ್ದಾರೆ. ‘ವೆಂಕಟೇಶ್ವರ ಜ್ಯೂಯಲರಿ ಮಾರ್ಟ್ ‘ ನಿಮ್ಮನೆಗೆ ಹೇಗೂ ಹತ್ರ ಅಲ್ವ? ಅಲ್ಲಿಗೇ ಬಂದುಬಿಡು, ಸರಿಕಣೆ, ನಾನು ಇಲ್ಲೇ ಅಡಿಗೆ ಮಾಡಿದೀನಿ. ನನ್ ಜೊತೆ ನೀನೂ ಬಂದು ಬಿಡು ಒಟ್ಟಿಗೇ ಊಟ ಮಾಡೋಣ ಎರಡು ಗಂಟೆಗೆ ಮುಂಚೆ ನಾವು ಇಲ್ಲಿರಬೇಕು…” ಹೇಳುತ್ತಲೇ ಬಸ್ ಸ್ಟಾಪ್ ಕಡೆಗೆ ಹೆಜ್ಜೆ ಹಾಕಿದರು.
ಮತ್ತೆ ಭ್ರಮರಾಂಬ ತಮ್ಮ ಮಗಳು ವೀಣಾ ಜೊತೇಲಿ ಆಟೋದಲ್ಲಿ ಬಂದು ಮನೆ ಮುಂದೆ ಇಳಿದಾಗ ಸರಿಯಾಗಿ ಒಂದೂವರೆ ಗಂಟೆ. ತಾಯಿ ಮಗಳು ಬಂದು ಮನೆ ಬೀಗ ತೆಗೀತಿದ್ದ ಹಾಗೇ ಇಬ್ಬರು ದಢೂತಿ ವ್ಯಕ್ತಿಗಳು ಅವರಿಬ್ಬರನ್ನು ಬಲವಾಗಿ ಒಳಕ್ಕೆ ದೂಡಿ ಇಬ್ಬರ ವ್ಯಾನಿಟಿ ಬ್ಯಾಗ್ ಕಿತ್ತುಕೊಂಡು ದಢಾರನೆ ಬಾಗಿಲು ಮುಚ್ಚಿಕೊಂಡು ಬೀಗ ಜಡಿದು ಬೀಗದ ಕೀ ಅಲ್ಲೇ ಬಿಸಾಕಿ ಮೋಟಾರ್‌ಬೈಕ್ ಹತ್ತಿ ಹೊರಟೇ ಹೋದರು.
ತಾನು ರಸ್ತೇಲಿ ನಿಂತು ಮೊಬೈಲ್ ನಲ್ಲಿ ಗಟ್ಟಿಯಾಗಿ ಮಾತಾಡಿದ್ದೇ ಈ ಎಲ್ಲಾ ರಾದ್ಧಾಂತಕ್ಕೆ ಕಾರಣ ಎಂದು ಭ್ರಮರಾಂಬನ ಅರಿವಿಗೆ ಬರುವಷ್ಟರಲ್ಲಿ ಕಾಲ ಮಿಂಚಿಹೋಗಿತ್ತು.

ಸವಿತಾ ಪ್ರಭಾಕರ್ , ಮೈಸೂರು
ಪುಟ್ಟ ಕಥೆ ದೊಡ್ಡ ಸಂದೇಶ
ಎಚ್ಚರಿಕೆ ಯ ಗಂಟೆ..ಕಥೆಯ ಸಂದೇಶ.. ಚೆನ್ನಾಗಿದೆ ಗೆಳತಿ
ಉತ್ತಮ ಸಂದೇಶವಿದೆ
ಪುಟ್ಟ ಕಥೆ ಚೆನ್ನಾಗಿದೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!!!…ದೊಡ್ಡ ಸಂದೇಶ ಹೊತ್ತ ಚಿಕ್ಕ ಕಥೆ ಅರ್ಥಪೂರ್ಣ!