ಪ್ರವಾಸ

ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ರಾಜಧಾನಿಯಿಂದ ರಾಣಿಯನಾಡಿಗೆ

ಅರೆ ಇದೆಂತಹ ಶೀರ್ಷಿಕೆ ಅಂತೀರಾ? ಹೌದಪ್ಪ, ಆಕ್‌ಲ್ಯಾಂಡ್ ನ್ಯೂಝೀಲ್ಯಾಂಡಿನ ರಾಜಧಾನಿ ಸರಿಯಷ್ಟೇ. ಅಲ್ಲಿಂದ ನಾವು ಹೊರಟಿದ್ದು ‘ಕ್ವೀನ್ಸ್ ಟೌನ್ ಗೆ. ಅಂದರೆ ನ್ಯೂಝೀಲ್ಯಾಂಡಿನ ರಾಜಧಾನಿಯಿಂದ ರಾಣಿಯನಾಡಿನೆಡೆಗೆ. ಈಗ ಗೊತ್ತಾಯಿತಲ್ವಾ ಶೀರ್ಷಿಕೆಯ ಅರ್ಥ. ಈ ನೆಲ. ಜಲ, ಪರ್ವತ ಶ್ರೇಣಿಗಳು ಒಂದಕ್ಕಿಂತ ಒಂದು ಸುಂದರವಾಗಿವೆ. ‘ಚೆಂದಕಿಂತ ಚೆಂದ’ ಎನ್ನುವ ಹಾಗೆ. ಈ ನಗರದ ಸುತ್ತಲೂ ಇರುವ ಎತ್ತರವಾದ ಅಲ್ಫ್ಸ್ ಪರ್ವತಶ್ರೇಣಿಗಳು, ಬೆಟ್ಟ ಗುಡ್ಡಗಳು, ಬೆಟ್ಟಗುಡ್ಡಗಳಿಂದ ಧುಮ್ಮಿಕ್ಕುವ ಜಲಪಾತಗಳು, ಆಳವಾದ ಕಣಿವೆಗಳಲ್ಲಿ ನೀಲಮಣಿಯಂತೆ ಕಂಗೊಳಿಸುವ ಸರೋವರಗಳು. ಗ್ಲೇಸಿಯರ್ ನಿಂದ ಇಳಿದು ಬಂದ ಗಂಗೆ ಇಲ್ಲಿ ಸುಂದರವಾದ ಸರೋವರಗಳನ್ನು ನಿರ್ಮಿಸಿರುವಳು. ಈ ಸರೋವರಗಳು ಸ್ಫಟಿಕದಷ್ಟೇ ಶುಭ್ರ. ಸರೋವರದ ಗಾಢವಾದ ಪಚ್ಚೆ, ನೀಲ ವರ್ಣಗಳು ನೋಡುವವರ ಕಣ್ಣುಗಳಿಗೆ ಹಬ್ಬ.

ಸುಮಾರು ಹದಿನೈದು ಸಾವಿರ ವರ್ಷಗಳ ಹಿಂದೆ ಅಂದರೆ ಹಿಮಯುಗದಲ್ಲಿ ಈ ನಾಡಿನಲ್ಲಿ ಎಲ್ಲೆಡೆ ಹಿಮದ ನದಿಗಳು ಮಲಗಿದ್ದವು. ಕಾಲಕ್ರಮೇಣ ಈ ಹಿಮದ ನದಿಗಳು ಕರಗುತ್ತಾ ಕರಗುತ್ತಾ ಚಲಿಸತೊಡಗಿದವು. ಒಂದು ಬೃಹತ್ತಾದ ಗ್ಲೇಸಿಯರ್ ಬೆಟ್ಟದಿಂದ ಕೆಳಗಿಳಿಯುವಾಗ ದೊಡ್ಡದಾದ ಕೊರಕಲನ್ನು ನಿರ್ಮಿಸಿತು, ಅಲ್ಲಿ ನೀರು ನಿಂತು ಒಂದು ಸರೋವರವೇ ಆಯಿತು. ಅದೇ ಇಡೀ ಪ್ರಪಂಚದಲ್ಲೇ ಮೂರನೆಯ ಸ್ಥಾನದಲ್ಲಿರುವ ವಾಕಾಟೀಪು ಸರೋವರ. ಹಿಮ ಕರಗಿ ನದಿಗಳೂ, ಸರೋವರಗಳೂ ಜನಿಸಿದಂತೆ ಮಾನವನ ವಸಾಹತುಗಳೂ ಅಲ್ಲಿ ನೆಲೆಯೂರಿದವು. ಸುಮಾರು ಎಂಟುನೂರು ವರ್ಷಗಳ ಹಿಂದೆ ಮಾವೋರಿಗಳು ಆಹಾರವನ್ನು ಹುಡುಕುತ್ತಾ ತಮ್ಮ ನಾಯಕನಾದ ‘ನಯ್ ತಾಹು’ (Ngai Tahu)ವಿನೊಂದಿಗೆ ಈ ಸ್ಥಳಕ್ಕೆ ಬಂದರು. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಕಂಡು ವಿಸ್ಮಿತರಾಗಿ ಇಲ್ಲಿಯೇ ತಂಗಿದರು. ಅಕಸ್ಮಾತಾಗಿ ಹತ್ತಿದ ಬೆಂಕಿಯಿಂದ ಸುತ್ತಮುತ್ತಲಿದ್ದ ಮರಗಿಡಗಳು ಸುಟ್ಟು ಭಸ್ಮವಾದವು. ಹೀಗೆ ತೆರವಾದ ಆ ಫಲವತ್ತಾದ ನೆಲದಲ್ಲಿ ವ್ಯವಸಾಯವನ್ನು ಆರಂಭಿಸಿದರು. ಈ ನಾಡಿಗೆ ತಮ್ಮ ನಾಯಕ ತಾಹು ಅವರ ಹೆಸರಿನಿಂದ ‘ತಾಹುನಾ’ ಎಂದು ಕರೆದರು. ಮಾವೋರಿ ಭಾಷೆಯಲ್ಲಿ ತಾಹುಮಾ ಎಂದರೆ ‘ಆಳವಾಗಿಲ್ಲದ ಕೊಲ್ಲಿ’ ಎಂಬ ಅರ್ಥವೂ ಇದೆ. ಮಾವೋರಿಗಳು ಬೇಟೆಯಾಡುತ್ತಾ ಕೇವಲ ತಮ್ಮ ಆಹಾರವನ್ನೂ ಅರಸುತ್ತಾ ಇಲ್ಲಿಗೆ ಬಂದವರಲ್ಲ, ಪೌನಾಮಾ ಎಂಬ ಬೆಲೆಬಾಳುವ ಕಲ್ಲುಗಳನ್ನೂ ಹುಡುಕುತ್ತಾ ಬಂದರು. ಪೌನಾಮ ಎಂದರೆ ಸುಂದರವಾದ ಗಟ್ಟಿಯಾದ ಹಸಿರು ವರ್ಣದ ಪಚ್ಚೆಕಲ್ಲು. ಈ ಕಲ್ಲನ್ನು ಅವರು ತಮ್ಮ ಆಯುಧಗಳನ್ನು ಮಾಡಲು ಬಳಸುತ್ತಿದ್ದರಲ್ಲದೆ, ಆಭರಣಗಳನ್ನು ತಯಾರಿಸಲೂ ಸಹ ಉಪಯೋಗಿಸುತ್ತಿದ್ದರು. ನಾವು ಅಲ್ಲಿನ ಮ್ಯೂಸಿಯಮ್ ಒಂದರ ಒಳಹೊಕ್ಕು ನೋಡಿದಾಗ ದೊಡ್ಡ ದೊಡ್ಡ ಚೌಕಾಕಾರದ ಪಚ್ಚೆ ಕಲ್ಲುಗಳನ್ನು ಕಂಡು ಬೆರಗಾದೆವು. ಜೇಡ್ ಅಥವಾ ಪಚ್ಚೆಯೆಂದು ಕರೆಯಲ್ಪಡುವ ಈ ಅಮೂಲ್ಯ ರತ್ನ ಭಂಡಾರದ ಬೆಲೆ ಎಷ್ಟಿರಬಹುದೆಂದು ಲೆಕ್ಕ ಹಾಕುತ್ತಾ ನಿಂತೆವು.

ಹತ್ತೊಂಭತ್ತನೆಯ ಶತಮಾನದ ಮಧ್ಯಭಾಗದಲ್ಲಿ ಯೂರೋಪಿಯನ್ನರು ಇಲ್ಲಿಗೆ ಬಂದರು, ‘ಅಲೆಕ್ಸಾಂಡರ್ ಗಾರ‍್ವೀ’ ಎಂಬಾತ ಈ ಪರ್ವತ ಶ್ರೇಣಿಗಳನ್ನು ಕಂಡವನು ಚಕಿತನಾಗಿ ‘ದ ರಿಮಾರ್ಕಬೆಲ್ಸ್’ ಅಂದರೆ ಅದ್ಭುತವಾದ ಗಿರಿಶಿಖರಗಳು ಎಂದು ಹೆಸರಿಸಿದನು. ಆದರೆ ಬ್ರಿಟಿಷರು ತಮ್ಮ ಇತಿಹಾಸದಲ್ಲಿ ದಾಖಲಿಸಿರುವಂತೆ 1850 ರಲ್ಲಿ ಈ ಸುಂದರವಾದ ದ್ವೀಪಕ್ಕೆ ಬಂದವನು ವಿಲಿಯಮ್ ರೀಸ್. ತಮ್ಮ ರಾಣಿ ವಿಕ್ಟೋರಿಯಾ ಅವರ ಗೌರವಾರ್ಥವಾಗಿ ಈ ದ್ವೀಪದ ಹೆಸರನ್ನು ‘ಕ್ವೀನ್ಸ್ ಟೌನ್’ ಎಂದು ಬದಲಾಯಿಸಿದನು. ಇಲ್ಲಿನ ಗಿರಿಶಿಖರಗಳಿಗೆ ‘ಸೆಸಿಲ್ ಪೀಕ್, ವಾಲ್ಟರ್ ಪೀಕ್, ಬೆನ್ ಲೊಮಾಂಡ್’ ಹೀಗೆ ತಾವು ಹತ್ತಿದ ಸ್ಥಳಗಳಿಗೆಲ್ಲಾ ತಮ್ಮ ತಮ್ಮ ಹೆಸರನ್ನಿರಿಸಿದರು.

ಒಟಾಗೋ ಪ್ರದೇಶದಲ್ಲಿರುವ ರಮ್ಯವಾದ ದ್ವೀಪ ಕ್ವೀನ್ಸ್ ಟೌನ್. ಇಲ್ಲಿ ಪ್ರಕೃತಿ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ತನ್ನ ಚೆಲುವಿನಿಂದ ಎಲ್ಲರನ್ನೂ ಸೆಳೆಯುತ್ತಿರುವಳು. ಸರೋವರಗಳ ನಾಡೆಂದೇ ಕರೆಯಲ್ಪಡುವ ಈ ನಾಡಿನಲ್ಲಿ ಹವಾಯಿ, ವನಾಕ, ವಾಕಟೀಪು ಮುಂತಾದ ಸರೋವರಗಳಿದ್ದು ಈ ನಗರಕ್ಕೆ ಕಳಶಪ್ರಾಯದಂತಿವೆ. ವಾಕಟೀಪು ಸರೋವರವು ಬಳುಕುವ ಬಾಲೆಯಂತೆ ನೀಳವಾದ ಎಸ್ ಆಕಾರದಲ್ಲಿದೆ. ಕ್ವೀನ್ಸ್ ಟೌನ್ ನಗರವು ಈ ಗಾಢ ನೀಲ ವರ್ಣದ ಸರೋವರದ ದಡದಲ್ಲಿದ್ದು, ಅನೇಕ ಕೌತುಕಗಳ ತಾಣವಾಗಿದೆ. ಇಂದು ಕ್ವೀನ್ಸ್ ಲ್ಯಾಂಡ್ ‘ವಿಶ್ವದ ಸಾಹಸಕ್ರೀಡೆಗಳ ಕೇಂದ್ರಬಿಂದು’ ಎಂದೇ ಪ್ರಖ್ಯಾತವಾಗಿದೆ. ಬೇಸಿಗೆಯಲ್ಲಿ ಬೆಚ್ಚಗಿನ ವಾತಾವರಣವಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ, ಚಳಿಗಾಲದಲ್ಲಿ ಹಿಮಪಾತವಾಗುತ್ತಿದ್ದು ಹಿಮಕ್ರೀಡೆಗಳಾಡಲು ಜನರು ಸಾಲುಗಟ್ಟಿ ನಿಲ್ಲುವರು. ಈ ಸಾಹಸ ಕ್ರೀಡೆಗಳ ದೊಡ್ಡ ಪಟ್ಟಿ ಪ್ರವಾಸಿಗಳನ್ನು ಆಯಸ್ಕಾಂತದಂತೆ ಆಕರ್ಷಿಸುತ್ತಿದೆ. ಸ್ಕೀಯಿಂಗ್, ಸ್ನೊ ಬೋರ್ಡಿಂಗ್, ಜೆಟ್ ಬೋಟಿಂಗ್, ವೈಟ್ ವಾಟರ್ ರ‍್ಯಾಫ್ಟಿಂಗ್, ಬಂಗಿ ಜಂಪಿಂಗ್, ಮೌಂಟೆನ್ ಹೈಕಿಂಗ್, ಸಕೇಟ್ ಬೋರ್ಡಿಂಗ್, ಪ್ಯಾರಾಗ್ಲೈಡಿಂಗ್, ಸ್ಕೈ ಡೈವಿಂಗ್ ಹಾಗೂ ಹಲವು ಬಗೆಯ ಸ್ನೋಸ್ಪೋರ್ಟ್ಸ್ ಗಳೂ ಸದಾ ನಡೆಯುತ್ತಿರುತ್ತವೆ.

ಕ್ವೀನ್ಸ್ ಟೌನ್ ನಲ್ಲಿ ಸುತ್ತಾಡುವುದೇ ಒಂದು ರೋಮಾಂಚನಕಾರಿ ಅನುಭವ. ಬೆಟ್ಟ ಗುಡ್ಡಗಳ ನಡುವೆ ಸಾಗುವ ಅಂಕುಡೊಂಕಾದ ಹಾದಿಗಳು, ಸುಂದರವಾದ ಹೂದೋಟಗಳು, ದ್ರಾಕ್ಷಿ ತೋಟಗಳು, ಸರೋವರಗಳಲ್ಲಿ ತೇಲಾಡುವ ಬಾತುಕೋಳಿಗಳು, ಹಂಸಗಳು, ಬೇಲಿ ಹಾಕಿರುವ ಮೈದಾನಗಳಲ್ಲಿ ಹುಲ್ಲು ಮೇಯುತ್ತಿರುವ ದನಕರುಗಳೂ, ಜಿಂಕೆಗಳು, ಕುರಿಗಳು, ಆಲ್ಪೆಕಾಗಳು-ಇತ್ಯಾದಿ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ಈ ಪ್ರಶಾಂತವಾದ ವಾತಾವರಣದಲ್ಲಿ ಸುತ್ತಾಡುವಾಗ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. ಸೂರ್ಯಾಸ್ತದ ಸಮಯದಲ್ಲಂತೂ ಪಶ್ಚಿಮದಿಂದ ಹೊಮ್ಮುವ ಹೊಂಬಣ್ಣ ಇಲ್ಲೊಂದು ಯಕ್ಷಲೋಕವನ್ನೇ ಸೃಷ್ಟಿಸಿ ಬಿಡುವುದು. ಇಲ್ಲಿ ಪ್ರವಾಸಿಗರು ಪ್ರವಾಸಿ ತಾಣಗಳನ್ನು ಹುಡುಕಿ ಹೋಗಬೇಕಿಲ್ಲ, ಇಡೀ ನಗರವೇ ಪ್ರವಾಸಿ ತಾಣದಂತಿದೆ. ಎಲ್ಲಿ ನಿಂತರೂ, ಕಣ್ಣಿಗೆ ಕಾಣುವಷ್ಟು ದೂರ ಸುಂದರವಾದ ಪ್ರಕೃತಿ ನಮಗೆ ಮೋಡಿ ಹಾಕುವಂತೆ ನಿಂತಿದ್ದಾಳೆ.

PC :Internet

ಕ್ವೀನ್ಸ್ ಟೌನ್ ನ ಮತ್ತೊಂದು ವಿಶೇಷವನ್ನು ಮರೆಯಲಾಗದು. 1862 ರಲ್ಲಿ ಆರೊ ನದೀಪಾತ್ರದಲ್ಲಿ ದೊರೆತ ಚಿನ್ನದ ತುಂಡುಗಳು, ಬ್ರಿಟಿಷರನ್ನು ಕೈಬೀಸಿ ಕರೆದವು. ಚೈನಾದವರು ತಂಡ ತಂಡವಾಗಿ ಬಂದರು, ಮಳೆ, ಚಳಿ, ಹಿಮಪಾತಗಳನ್ನು ಲೆಕ್ಕಿಸದೆ ನದೀ ತೀರದಲ್ಲಿ ಚಿನ್ನಕ್ಕಾಗಿ ಹುಡುಕಾಟ ನಡೆಸಿದರು. ಈ ನಗರದ ಹವಾಮಾನದ ವೈಪರೀತ್ಯಗಳನ್ನು ತಾಳಲಾರದೆ ಹಲವರು ಅಸು ನೀಗಿದರು. ಇಂದಿಗೂ ಅಂದು ಅವರು ವಾಸಿಸಲು ಕಟ್ಟಿಕೊಂಡಿದ್ದ ಪುಟ್ಟ ಪುಟ್ಟ ಶೆಡ್‌ಗಳನ್ನು ನೋಡಬಹುದು. ನಿಧಾನವಾಗಿ ಚಿನ್ನದ ನಿಕ್ಷೇಪ ಬರಿದಾಗುವ ಹಂತಕ್ಕೆ ಬಂದಾಗ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿದರು. ಈಗ ಈ ನದಿಯ ಹಿಂಭಾಗದಲ್ಲಿರುವ ಬೆಟ್ಟಕ್ಕೆ ಪ್ರವಾಸಿಗರಿಗಾಗಿ ಚಾರಣ ಪಥವನ್ನು ನಿರ್ಮಿಸಿದ್ದಾರೆ. ಹಲವರು ಎರಡೆರಡು ಕೋಲುಗಳನ್ನು ಹಿಡಿದು ಚಾರಣ ಮಾಡುತ್ತಿದ್ದುದನ್ನು ಕಂಡೆವು. ನಮ್ಮ ಗೈಡ್, ‘ನೀವು ಅದೃಷ್ಟವಂತರಾಗಿದ್ದರೆ ನದೀ ತೀರದಲ್ಲಿ ಚಿನ್ನದ ತುಂಡುಗಳು ಸಿಗಬಹುದು ಹುಡುಕಿ’ ಎಂದು ಹಾಸ್ಯ ಮಾಡುತ್ತಿದ್ದ.

ಪ್ರವಾಸಿಗರ ಮನರಂಜನೆಗಾಗಿ ಹತ್ತು ಹಲವು ಕ್ರೀಡೆಗಳಿವೆ. ಪ್ರಶಾಂತವಾದ ವಾತಾವರಣವನ್ನು ಬಯಸಿ ಬಂದವರು, ಈ ನಗರದ ಸುತ್ತ ಪ್ರದಕ್ಷಿಣೆ ಹಾಕಿದರೆ ಸಾಕು, ಸುತ್ತಲಿರುವ ಬೆಟ್ಟಗುಡ್ಡಗಳು, ಅಲ್ಲಲ್ಲಿ ಝುಳುಝುಳು ಹರಿಯುವ ಸರೋವರಗಳು, ಸೂರ್ಯೋದಯ, ಸೂರ್ಯಾಸ್ತವನ್ನು ನೋಡುತ್ತಲೇ ಸಂತಸ ಪಡಬಹುದು. ವನಸಿರಿಯ ಮಧ್ಯೆಯಿರುವ ರೆಸ್ಟೊರಾಂಟ್‌ಗಳು, ಪಬ್‌ಗಳು ಪ್ರವಾಸಿರಿಗೆ ಮತ್ತೊಮದು ಆಕರ್ಷಣೆ. ಅತೀ ವಿರಳವಾಗಿರುವ ಜನಸಂಖ್ಯೆ, ಪ್ರವಾಸಿತಾಣಗಳಲ್ಲಿ ಮಾತ್ರ ಕಂಡು ಬರುವ ಜನ ಜಂಗುಳಿ ಇಲ್ಲಿನ ವಿಶೇಷ. ನಾವು ಹಾಗೆಯೇ ನಗರದಲ್ಲಿ ಓಡಾಡುತ್ತಿರುವಾಗ ವಾಕಟೀಪು ಸರೋವರದಲ್ಲಿ ನಿಧಾನವಾಗಿ ಹೊಗೆಯುಗುಳುತ್ತಾ ಚಲಿಸುತ್ತಿರುವ ಉಗಿ ಹಡಗನ್ನು ಕಂಡು ಚಕಿತರಾದೆವು. ಕಲ್ಲಿದ್ದಲಿನಿಂದ ಚಲಿಸುವ ಈ ಉಗಿ ಹಡಗಿನಲ್ಲಿ ಪ್ರವಾಸಿಗರು ಕುಳಿತು ಸಂಭ್ರಮದಿಂದ ಸರೊವರದಲ್ಲಿ ಸುತ್ತು ಹಾಕುವುದನ್ನು ಕಂಡೆವು. ಈ ಉಗಿ ಹಡಗನ್ನು, ‘ಲೇಡಿ ಆಫ್ ದ ಲೇಕ್’ ಅಂದರೆ ಸರೋವರದ ಯಜಮಾನಿ ಎಂದು ಹೆಸರಿಸಿದ್ದಾರೆ. ನಮ್ಮ ಮುಂದಿದ್ದ ಕೌಂಟರ್‌ಗಳಲ್ಲಿ ಹಲವು ತರುಣರು, ತರುಣಿಯರು ಸಾಲುಗಟ್ಟಿ ನಿಂತು ತಮ್ಮ ತಮ್ಮ ಹೆಸರುಗಳನ್ನು ಅಡ್ರಿನಲಿನ್ ಸುರಿಸುವ ಸಾಹಸಕ್ರೀಡೆಗಳಿಗೆ ನೊಂದಾಯಿಸುತ್ತಿದ್ದರು. ನಮ್ಮ ತಂಡದಲ್ಲಿದ್ದ ಕೆಲವರು ಬೆಲೂನ್ ರೈಡ್ ಹಾಗೂ ಹೆಲಿಕಾಪ್ಟರ್ ರೈಡ್‌ಗೆ ಬುಕ್ ಮಾಡುತ್ತಿದ್ದರು. ಒಂದು ಕ್ಷಣ ಬೆಲೂನ್ ರೈಡ್ ಹೋಗಬೇಕೆಂದು ಆಸೆಯಾದರೂ ಆ ಕ್ರೀಡೆಗಳ ಶುಲ್ಕ ದುಬಾರಿಯಾಯಿತೆಂದು ಸುಮ್ಮನಾಗಬೇಕಾಯಿತು. ಎಪ್ಪತ್ತು ದಾಟಿದ ನಾವು ದೂರದಲ್ಲಿ ನಿಂತು ಅವರ ಉತ್ಸಾಹ, ಸಂಭ್ರಮ ಸಡಗರಗಳನ್ನು ನೋಡುತ್ತಾ ನಿಂತೆವು.

ಈ ಪ್ರವಾಸಕಥನದ ಹಿಂದಿನಪುಟ ಇಲ್ಲಿದೆ:  http://surahonne.com/?p=43188
(ಮುಂದುವರಿಯುವುದು)

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ.

6 Comments on “ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 7

  1. ಪ್ರವಾಸ ಕಥನ ಸೊಗಸಾದ ನಿರೂಪಣೆಯೊಂದಿಗೆ ಬರುತ್ತಿದೆ..
    ಧನ್ಯವಾದಗಳು ಮೇಡಂ ಚಿತ್ರ ಗಳನ್ನು ಪೂರಕವಾಗಿ ಹಾಕುತ್ತಿರುವ ಗೆಳತಿ ಹೇಮಾರವರಿಗೂ ಧನ್ಯವಾದಗಳು

  2. ನ್ಯೂಝಿಲ್ಯಾಂಡ್ ನ ಪ್ರಾಕೃತಿಕ ಸೌನ್ದರ್ಯ ವನ್ನು ಮನ ಸೂರೆಗೊಳ್ಳುವಂತೆ ಬಣ್ಣಿಸಿದ್ದೀರಿ. ಸೊಗಸಾಗಿದೆ.

  3. ರಾಣಿನಾಡಿನ ಚೆಲುವನ್ನು, ಅದರ ಐತಿಹಾಸಿಕ ಹಿನ್ನೆಲೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ, ನಮ್ಮನ್ನೂ ಆ ಸುಂದರ ನಾಡಿಗೊಯ್ದ ಗಾಯತ್ರಿ ಮೇಡಂಗೆ ಧನ್ಯವಾದಗಳು.

  4. ನಿಮ್ಮ ಪ್ರತಿಕ್ರಿಯೆಗಳಿಗೆ ವಂದನೆಗಳು
    ನಾಗರತ್ನ ಮೇಡಂ ನಯನ ಹಾಗೂ ಶಂಕರಿ ಶರ್ಮ ರವರಿಗೆ

  5. ರಾಣಿಯನಾಡಿನ ವಿಶೇಷತೆಗಳ, ಸುಂದರ ಸರೋವರಗಳ ಸುಂದರ ವರ್ಣನೆಗಳೊಂದಿಗೆ ಪ್ರವಾಸ ಕಥನದ ಈ ಕಂತೂ ಸಹ ಮುದ ನೀಡಿತು.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *