ಬೆಳಕು-ಬಳ್ಳಿ

ಕಾವ್ಯ ಭಾಗವತ 55 : ಶ್ರೀರಾಮ ಕಥಾ – 1

Share Button

ನವಮ ಸ್ಕಂದ – ಅಧ್ಯಾಯ – 3
ಶ್ರೀರಾಮ ಕಥಾ – 1

ಸೂರ್ಯವಂಶಿ ಭಗೀರಥ ಪುತ್ರ ಋತುಪರ್ಣ
ನಂತರದಿ ಸುದಾಸ
ವಶಿಷ್ಟರ ಶಾಪದಿಂ ರಾಕ್ಷಸ ರೂಪ ಪಡೆದು
ಕಾಡಿನಲಿ ಮೃಗಗಳ ಭಕ್ಷಿಸುತ
ಪ್ರಮಾದದಿಂ ಜಿಂಕೆಗಳ ರೂಪಾಂತರದಿ
ವಿಹರಿಸುತ್ತಿದ್ದ ಮುನಿದಂಪತಿಗಳಲಿ
ಪುರುಷ ಮುನಿಯ ಭಕ್ಷಿಸಿ
ಮುನಿಪತ್ನಿಯ ಶಾಪದಿಂ
ಸತಿಯ ಕೂಡಲಾರದೆ
ವಂಶಕ್ಷಯ ತಪ್ಪಿಸಲು
ಕುಲಗುರು ವಸಿಷ್ಠರ ಕೃಪೆಯಿಂ
ರಾಜಪತ್ನಿ ಗರ್ಭಣಿಯಾಗಿ
ಏಳುವರುಷಗಳು ಕಳೆದರೂ
ಗಜಗರ್ಭವೆಂಬಂತೆ ಪ್ರಸವವಾಗದಿರೆ
ಉದರವಂ ಶಿಲಾಘಾತಗೊಳಿಸಿ ಜನಿಸಿದ ಮಗ ಅಶ್ಮಕ

ಅಶ್ಮಕ ಪುತ್ರ ನಾರೀಕವಚ
ನಂತರದಿ ದೀರ್ಘಬಾಹು
ದೀರ್ಘಬಾಹು ಪುತ್ರ ರಘು ಮಹಾರಾಜ
ರಘು ಮಹಾರಾಜ ಪುತ್ರ ಅಜ ಮಹಾರಾಜ
ಅವನ ಪುತ್ರನೇ ಸೂರ್ಯವಂಶಕೇತು –
ದಶರಥ ಮಹಾರಾಜ
ಹರಿಯವತಾರಕೆ ಯೋಗ್ಯ ಕ್ಷೇತ್ರ
ನಿರ್ಮಿಸಿದ ಸೂರ್ಯವಂಶಿ

ಬಹುಕಾಲ ಸಂತಾನವಿಲ್ಲದೆ ಬಳಲಿನ ದಶರಥ
ಋಷ್ಯಶೃಂಗ ಮಹರ್ಷಿಯ ಸಾರಥ್ಯದಿ
ನಡೆಸಿದ ಪುತ್ರಕಾಮೇಷ್ಠಿ ಯಾಗಫಲದಿಂ
ದೊರೆತ ಪಾಯಸವಂ ಸೇವಿಸಿ
ದುಷ್ಟರಾಕ್ಷಸ ದಮನಕೆ ಶ್ರೀಹರಿ
ಪಟ್ಟದರಸಿ ಕೌಸಲ್ಯೆಯ ಗರ್ಭದಿ
ಶ್ರೀರಾಮನಾಗಿ ಜನಿಸೆ
ರಾಣಿ ಸುಮಿತ್ರೆಯಲಿ ಲಕ್ಷ್ಮಣ, ಶತೃಘ್ನ
ರಾಣಿ ಕೈಕೇಯಿಗೆ ಜನಿಸಿದ ಪುತ್ರ ಭರತ
ರಾಮಾಯಣದ ಭವ್ಯ ಕಥನಕೆ
ಈ ಜಗದ ಕೋಟ್ಯಾಂತರ ಜೀವಿಗಳಿಗೆ
ಪ್ರೇರಣೆಯಾಗಿ ದಾರಿದೀಪವಾಗಿ
ಬೆಳಗಲು ಉದ್ಭವಿಸಿದ ಚೇತನಗಳ ದಿವ್ಯ ಕಥೆ
ಶ್ರೀರಾಮ ಕಥೆ, ರಾಮಾಯಣ ಕಥೆ

ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : http://surahonne.com/?p=43177
(ಮುಂದುವರಿಯುವುದು)

-ಎಂ. ಆರ್.‌ ಆನಂದ, ಮೈಸೂರು

5 Comments on “ಕಾವ್ಯ ಭಾಗವತ 55 : ಶ್ರೀರಾಮ ಕಥಾ – 1

  1. ಚೆನ್ನಾಗಿದೆ ಎಂ. ಆರ್. ಆನಂದ್ ರವರೇ. ಕಾವ್ಯ ಭಾಗವತ ನಾನು ಓದಿಲ್ಲ. ಇಂತಹ ಕಥಾನಕಗಳು ಗಾಯನವಾಗಿ ಬೆಳೆಯಬೇಕು. ಓದಿಗೆ ನೀಡಿದ ನಿಮಗೆ ಧನ್ಯವಾದಗಳು.

  2. ಕಲ್ಮಾಷಪಾದನೆಂದೂ ಹೆಸರು ಪಡೆದಿದ್ದ ಸುದಾಸ ಮಹಾರಾಜನ ಮಗ ಅಶ್ಮಕನೇ, ಇಕ್ಷ್ವಾಕು ವಂಶದ ಮೂಲ ಕುಡಿಯಾಗಿದ್ದು, ಇದರಿಂದ ಆತನು ಮೂಲಕನೆಂದೂ ಹೆಸರು ಪಡೆದ ಕಥೆಯನ್ನು ನೆನಪಿಸಿದ ಕಾವ್ಯ ಭಾಗವತದ ರಾಮಾಯಣದ ಪೀಠಿಕೆ ಸನ್ನಿವೇಶವು ಚೆನ್ನಾಗಿ ಮೂಡಿಬಂದಿದೆ ಸರ್.

  3. ಕಾವ್ಯ ಭಾಗವತದಲ್ಲು ರಾಮಾಯಣದ ಕಥೆಯ ಶುಭಾರಂಭ ಮನಸ್ಸಿಗೆ ತಂಪೆರೆಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *