ಪರಾಗ

ಕಂಸ.

Share Button

ಬೆಳಗ್ಗೆಬೆಳಗ್ಗೇನೇ ಅತ್ತೆ ಮಾವನವರು ಯಾವುದೋ ಜರೂರು ಕೆಲಸದ ಮೇಲೆ ಮನೆಯಿಂದ ಹೊರಟುಹೋಗಿದ್ದರು. ಎಂದಿನಂತೆ ಭಾವಂದಿರಿಬ್ಬರೂ ಅವರ ಹೆಂಡಂದಿರ ಜೊತೆಯಲ್ಲಿ ಬುತ್ತಿ ತೆಗೆದುಕೊಂಡು ಹೊಲದ ಕೆಲಸಗಳಿಗೆ ತೆರಳಿದ್ದರು. ಇನ್ನು ಅವರ ಮಕ್ಕಳು ಶಾಲೆಗೆ ಹೋಗಿದ್ದರು. ಗಂಡ ಪರಮಣ್ಣ ಅವನ ನೆಚ್ಚಿನ ಸಾಹುಕಾರ ಮುನಿಯಪ್ಪನವರ ತೋಟಕ್ಕೆ ದೌಡಾಯಿಸಿದ್ದ. ಇನ್ನು ಮನೆಯಲ್ಲಿ ಉಳಿದವಳೆಂದರೆ ಪರಮನ ಹೆಂಡತಿ ಗೌರಿ ಮಾತ್ರ. ಆಕೆ ತುಂಬು ಗರ್ಭಿಣಿಯಾದ್ದರಿಂದ ಎಲ್ಲಿಗೂ ಹೋಗಲಾರದೆ ಮನೆಯಲ್ಲೇ ಇದ್ದಳು.

ಮಿಕ್ಕ ಕೆಲಸಗಳನ್ನೆಲ್ಲ ಮುಗಿಸಿ ಊಟ ಮಾಡಿದಳು. ಅಲ್ಲಿಯೇ ಒಳಗಿನಿಂದ ತೆರೆಯಬಹುದಾಗಿದ್ದ ಅಂಗಡಿಯ ಬಾಗಿಲನ್ನು ತೆರೆದಳು. ಟೀಪುಡಿ ಪ್ಯಾಕೆಟ್, ಶಾಂಪೂ, ಚಿಕ್ಕಚಿಕ್ಕ ಮಸಾಲೆ ಪ್ಯಾಕೆಟ್, ಕುರುಕುರೆ, ಎಣ್ಣೆ ಪ್ಯಾಕೆಟ್ಟುಗಳು ಇತ್ಯಾದಿಗಳನ್ನು ತಗಲು ಹಾಕುವಂತದ್ದನ್ನೆಲ್ಲ ತೆಗೆದು ಹೊರಗಡೆ ಕೊಕ್ಕೆಗಳಿಗೆ ತೂಗು ಹಾಕಿದಳು. ಎರಡು ಚಿಕ್ಕ ಬೆಂಚುಗಳನ್ನು ತೆಗೆದು ಅಂಗಡಿಯ ಮುಂದೆ ಇರಿಸಿದಳು. ಅವುಗಳ ಮೇಲೆ ಒಂದೆರಡು ತರಕಾರಿ. ಮೆಣಸಿನಕಾಯಿ, ವಿಳ್ಳೇದೆಲೆ, ತುಂಬಿದ್ದ ಬುಟ್ಟಿಗಳನ್ನು ಸಾಲಾಗಿ ಜೋಡಿಸಿದಳು. ಬೆಳಗ್ಗೇನೆ ಮನೆಗುಡಿಸಿ ಒರೆಸಿದ ಮೇಲೆ ಎರಡು ದೀಪಗಳಿಗೆ ಎಣ್ಣೆಬತ್ತಿ ಹಾಕಿ ಸಿದ್ಧಪಡಿಸಿದ್ದಳು ದೊಡ್ಡ ಓರಗಿತ್ತಿ ಮಂಜಮ್ಮ. ಅದನ್ನು ಹೊತ್ತಿಸಿ ಅಲ್ಲೇ ಮರದ ಸ್ಟ್ಯಾಂಡ್ ನ ಮೇಲೆ ಇಟ್ಟು ಅಲ್ಲಿದ್ದ ಶಿವಪಾರ್ವತಿ, ಗಣೇಶ, ಸುಬ್ರಮಣ್ಯ, ಫೋಟೋಕ್ಕೆ ಅರಿಸಿನ ಕುಂಕುಮವಿಟ್ಟು ಒಂದು ತುಂಡು ಹೂಮುಡಿಸಿ, ಊದುಬತ್ತಿ ಹಚ್ಚಿ ಬೆಳಗಿ ಕೈಮುಗಿದಳು. ಅಲ್ಲಿಯೇ ಇದ್ದ ಕುರ್ಚಿಯನ್ನೆಳೆದು ಗಲ್ಲಾಪೆಟ್ಟಿಯ ಸಮೀಪವಿರಿಸಿ ಅದರ ಮೇಲೊಂದು ಅಗಲವಾದ ದಿಂಬಿಟ್ಟು ಕುಳಿತುಕೊಂಡಳು. ಹಿಂದಿನ ರಾತ್ರಿ ಅರ್ಧ ಓದಿಬಿಟ್ಟಿದ್ದ ತೆನಾಲಿ ರಾಮಕೃಷ್ಣನ ಕಥೆಗಳ ಪುಸ್ತಕವನ್ನು ಕೈಗೆತ್ತಿಕೊಂಡಳು.

ಮದುವೆಯಾಗಿ ಆ ಮನೆಗೆ ಬಂದ ಹೊಸದರಲ್ಲಿ ಇವಳ ಓದಾಟದ ಗೀಳು ಮನೆಯವರಿಗೆಲ್ಲ ನಗೆಚಾಟಿಕೆಯ ವಸ್ತುವಾಗಿತ್ತು. ಹಾಗಂತ ಅಲ್ಲಿದ್ದ ಮನೆಯ ಯಜಮಾನಿ ಕಮಲಮ್ಮನಾಗಲೀ, ಯಜಮಾನ ಭದ್ರಪ್ಪನಾಗಲೀ, ಅವರ ಮೂರು ಗಂಡು ಮಕ್ಕಳು ನಿರಕ್ಷರ ಕುಕ್ಷಿಗಳೇನು ಆಗಿರಲಿಲ್ಲ. ತಕ್ಕಮಟ್ಟಿಗೆ ವ್ಯವಹಾರಕ್ಕೆ ಬೇಕಾಗುವಷ್ಟು ಕಲಿತಿದ್ದರು. ಅದರೆ ಗೌರಿ ಯಾವುದೇ ಪುಸ್ತಕ, ಪೇಪರ್ ಸಿಕ್ಕರೂ ಆಸಕ್ತಿಯಿಂದ ಓದುತ್ತಿದ್ದ ರೀತಿ ಕಂಡು ಅಣಕಿಸುತ್ತಿದ್ದರು.

ಕ್ರಮೇಣ ಅಭ್ಯಾಸವಾಗಿ ಅವರು “ಪಾಪ ಅದೇನು ಕೆಟ್ಟದ್ದಲ್ಲವಲ್ಲಾ, ಅಂದುಕೊಂಡು ಎಲ್ಲಿಯಾದರೂ ಕಥೆಪುಸ್ತಕಗಳನ್ನು ಕಂಡರೆ ತಾವೇ ತಂದುಕೊಡುವುದನ್ನು ಮಾಡುತ್ತಿದ್ದರು. ಗಂಡ ಪರಮಣ್ಣನಂತೂ ಮುನಿಯಪ್ಪನವರ ತೋಟದ ಮನೆಯಿಂದ ಅವರ ಮಗ ತರಿಸುತ್ತಿದ್ದ ದಿನಪತ್ರಿಕೆಯನ್ನು ಸಂಜೆ ತಾನು ಬರುವಾಗ ಮರೆಯದೆ ಅವರಿಂದ ಕೇಳಿ ತಂದುಕೊಡುತ್ತಿದ್ದ. ಮನೆಯಲ್ಲಿ ಶಾಲೆಗೆ ಹೋಗುತ್ತಿದ್ದ ಭಾವನ ಮಕ್ಕಳಿಗೆ ಪಾಠ ಪ್ರವಚನ ಹೇಳಿಕೊಡುತ್ತಿದ್ದವಳೇ ಗೌರಿ. ಚುರುಕಿನ ಸ್ವಭಾವದ ಶಾಂತ ಸ್ವರೂಪಿ ಗೌರಿ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು. ಅವಳು ಹೊರಗೆ ಹೊಲದ ಕೆಲಸಕ್ಕೆ ಹೋಗುವುದನ್ನು ಇಷ್ಪಪಡದ ಪರಮ ಮನೆಯಲ್ಲೇ ಸಣ್ಣದಾಗಿ ನಡೆಸುತ್ತಿದ್ದ ಅಂಗಡಿಯನ್ನು ತಂದೆ, ತಾಯಿಗಳು ಎಲ್ಲಿಗಾದರೂ ಹೋದಾಗ ನೋಡಿಕೊಳ್ಳುವ ಜವಾಬ್ದಾರಿಯನ್ನು ಗೌರಿಗೆ ಹೊರಿಸಿದ್ದ. ಅತ್ತಿಗೆಯರ ಜೊತೆಗೆ ಮನೆಗೆಲಸ, ಕೊಟ್ಟಿಗೆಯ ಕೆಲಸ, ದನಗಳ ಮೇಲ್ವಿಚಾರಣೆ ಮುಂತಾದುವಕ್ಕೆ ಜೊತೆಗೂಡುತ್ತಿದ್ದಳು. ಒಟ್ಟಿನಲ್ಲಿ ಗೌರಿಯ ಚಟುವಟಿಕೆಗಳು ಮನೆಯೊಳಗೇ ಇದ್ದವು.

ಅಂಗಡಿ ಬಾಗಿಲು ತೆರೆದು ಕುರ್ಚಿಯಮೇಲೆ ಕುಳಿತ ಗೌರಿಗೆ ಒಂದು ಪುಟದಷ್ಟೂ ನೆಟ್ಟಗೆ ಓದಲಾಗಲಿಲ್ಲ. ಗ್ರಾಹಕರ ಆಗಮನ ಪ್ರಾರಂಭವಾಯಿತು. “ಏನು ಗೌರಮ್ಮಾ, ಇವತ್ತು ಅಂಗಡಿಯ ಮೇಲೆ ನೀನು ಕುಂತಿದ್ದೀ, ಭದ್ರಣ್ಣ ಎಲ್ಲಿ?” ಎಂದು ಕೇಳುತ್ತಾ ಬಂದ ಇಸ್ತ್ರಿ ಅಂಗಡಿ ಚೆನ್ನಿಗಪ್ಪನನ್ನು “ ನಿಮಗೇನು ಬೇಕಣ್ಣಾ?” ಎಂದು ಮಾತನಾಡಿಸಿದಳು.

“ಅದೇ ಒಂದು ಕಟ್ಟು ಗಣೇಶಬೀಡಿ, ಒಂದು ಕಡ್ಡಿಪೆಟ್ಟಿಗೆ ಕೊಡಮ್ಮಾ. ದುಡ್ಡು ಸಂಜೆ ಕೊಡ್ತೀನಿ” ಎಂದು ಹೇಳಿದ ಚೆನ್ನಿಗಪ್ಪ.

“ಕೊಡುವಿರಂತೆ ಅದಕ್ಕೇನು, ನಿಮ್ಮದೇ ಬೋಣಿಯಾದ್ದರಿಂದ ಶಾಸ್ತ್ರಕ್ಕೆ ಅಂತ ಒಂದು ರೂಪಾಯಿ ಕೊಡಿ” ಎಂದು ಕೇಳಿದಳು ಗೌರಿ.

“ಹಂಗಾ ಒಂದು ರೂಪಾಯಿಲ್ಲ, ತಗೋ ಐವತ್ತು ಪೈಸೆ ಇದೆ. ಮಿಕ್ಕದ್ದು ಲೆಕ್ಕದ ಪುಸ್ತಕದಲ್ಲಿ ಬರಿ. ಸಂಜೆಗೆ ಕೊಟ್ಟೇ ಮನೆಗೆ ಹೋಗ್ತೀನಿ” ಎಂದು ಹೇಳಿ ಐವತ್ತು ಪೈಸೆ ನಾಣ್ಯ ಕೊಟ್ಟು ಬೀಡಿ, ಬೆಂಕಿಪೊಟ್ಟಣ ತೆಗೆದುಕೊಂಡ. ಬೀಡಿಯೊಂದನ್ನು ಕಡ್ಡಿಗೀರಿ ಹಚ್ಚಿಕೊಂಡು ಬೆರಳಮಧ್ಯೆ ಇಟ್ಟು ಬಾಯಿಗಿಟ್ಟು ಒಂದು ದಮ್ಮು ಎಳೆದು ಹೊಗೆ ಬಿಡುತ್ತಾ ಅದರ ಆನಂದವನ್ನು ಅನುಭವಿಸುತ್ತ ನಡೆದ. ಅದನ್ನು ಗಮನಿಸುತ್ತಿದ್ದ ಗೌರಿ “ಹುಂ ಇದರಿಂದ ಅದೇನು ಆನಂದ ಸಿಗುತ್ತೋ ಪರಮಾತ್ಮನಿಗೇ ಪ್ರೀತಿ. ಸದ್ಯಕ್ಕೆ ನಮ್ಮ ಮನೆಯಲ್ಲಿ ಯಾರಿಗೂ ಈ ಚಟ ಹತ್ತಿಕೊಂಡಿಲ್ಲ ನನ್ನ ಪುಣ್ಯ. ಅತ್ತೆ ಮಾವನವರಿಗೆ ಎಲೆಅಡಿಕೆ ಅಭ್ಯಾಸವಿದ್ದರೂ ಅತಿಯಾಗಿಲ್ಲ ಎಂದು ಸಮಾಧಾನ ಪಟ್ಟಳು. ಪಕ್ಕದಲ್ಲಿ ಇಟ್ಟದ್ದ ಮೊಬೈಲ್ ತೆಗೆದು ಚಾರ್ಜಿಗೆ ಹಾಕಿದಳು. ಮತ್ತೆ ಪುಸ್ತಕ ತೆರೆದಳು. ಅಷ್ಟರಲ್ಲಿ ಮತ್ಯಾರದೋ ಕರೆ, ತತ್ತೇರಿಕೆ ಇದು ಆಗದ ಕೆಲಸೆಂದು ಪುಸ್ತಕ ಮುಚ್ಚಿಟ್ಟು ಅಂಗಡಿಯ ಕಡೆಗೆ ಪೂರ್ಣ ಗಮನಕೊಟ್ಟಳು.

ಹೀಗೇ ಅಂಗಡಿ, ಮನೆಯೊಳಕ್ಕೆ ಓಡಾಡುತ್ತಲೇ ಗಂಡ ಪರಮನಿಗೆ ಮಧ್ಯಾಹ್ನದ ಊಟಕ್ಕೆ ಬಿಸಿ ಮುದ್ದೆ, ಅನ್ನ ಮಾಡಿಟ್ಟಳು. ಇನ್ನೇನು ಅಂಗಡಿ ಬಾಗಿಲನ್ನು ಮಧ್ಯಾಹ್ನದ ಮಟ್ಟಿಗೆ ಮುಚ್ಚಬೇಕೆಂದು ಅಂದುಕೊಳ್ಳುವಷ್ಟರಲ್ಲಿ ಗೂಳೂರಿನ ಶಾಲೆಯ ಮಾಸ್ತರು ರಾಮಯ್ಯನವರು ಬರುತ್ತಿರುವುದು ಕಾಣಿಸಿತು. ಅವರು ಸಾಮಾನ್ಯವಾಗಿ ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋಗುವಾಗ ತಪ್ಪದೆ ತಮ್ಮ ತಾಯಿಗೆ ವೀಳ್ಯದೆಲೆ, ಬಾಳೆಹಣ್ಣನ್ನು ತೆಗೆದುಕೊಂಡು ಹೋಗುವುದು ರೂಢಿ. ಮುಂದಿನ ಬೀದಿಯಲ್ಲೇ ಅವರ ಮನೆ. ಅವಳ ಊಹೆಯಂತೆ ಮಾಸ್ತರರು ಅಂಗಡಿಗೆ ಬಂದರು. “ಓ.. ಗೌರಮ್ಮಾ, ಚೆನ್ನಗಿದ್ದೀಯಾಮ್ಮ ಎಂದು ವಿಚಾರಿಸಿ ಎಂದಿನಂತೆ ವೀಳ್ಯದೆಲೆ, ಹಣ್ಣು ತೆಗೆದುಕೊಂಡು ತಮ್ಮ ಕೈಚೀಲದಲ್ಲಿ ಹಾಕಿ ಹಣಕೊಟ್ಟು ಹೊರಡಲು ಅನುವಾದರು. ಅವರ ಕಂಕುಳಲ್ಲಿ ಸುರುಳಿ ಸುತ್ತಿಟ್ಟುಕೊಂಡಿದ್ದ ಪೇಪರ್ ನೋಡಿದ ಗೌರಿ “ಮೇಷ್ಟ್ರೇ,  ಅದೇನು ಕಂಕುಳಲ್ಲಿ ಇಟ್ಟುಕೊಂಡಿರುವುದು?” ಎಂದು ಕೇಳಿದಳು.

“ಪೇಪರ್ ಕಣಮ್ಮಾ. ಇವತ್ತಿನದ್ದಲ್ಲಾ ನೆನ್ನೆಯದು, ಓದ್ತೀಯೇನು?” ಎಂದರು.

“ಹೂಂ ಮೇಷ್ಟ್ರೇ, ನನ್ನವರು ದಿನಾಲೂ ತೋಟದ ಮನೆಯಿಂದ ಸಂಜೆಗೆ ಪೇಪರ್ ತಂದುಕೊಡುತ್ತಿದ್ದರು. ಯಾಕೋ ಏನೋ ನೆನ್ನೆ ತಂದಿರಲಿಲ್ಲ. ನೀವು ಕೊಟ್ಟರೆ ಓದಿ ಹುಡುಗರ ಕೈಯಲ್ಲಿ ಶಾಲೆಗೇ ಕಳಿಸಿಕೊಡುತ್ತೇನೆ.” ಎಂದಳು ಗೌರಿ.

“ಏನೂ ಬೇಡಮ್ಮಾ, ನಾನು ಓದಿದ್ದಾಗಿದೆ. ಕೊಡುವುದೇನು ಬೇಡ ತಗೋ” ಎಂದು ಸುರಳೀಸುತ್ತಿದ್ದ ಪೇಪರನ್ನು ಗೌರಮ್ಮನ ಕೈಗಿತ್ತು ಮನೆಯ ದಾರಿ ಹಿಡಿದರು.

ಅದನ್ನು ತೆಗೆದು ನೋಡಬೇಕೆನ್ನುವಷ್ಟರಲ್ಲಿ ಗೌರಿಯ ಗಂಡ ಪರಮ ದೂರದಲ್ಲಿ ಬರುತ್ತಿರುವುದು ಕಾಣಿಸಿತು. ಇನ್ನು ಇವರು ನನ್ನನ್ನು ಅಣಕಿಸುವುದು ಗ್ಯಾರಂಟಿ ಎಂದು ಪೇಪರನ್ನು ಅಲ್ಲಿಯೇ ಮೂಟೆಸಂದಿಗೆ ಸಿಕ್ಕಿಸಿ ಅಂಗಡಿಯ ಬಾಗಿಲನ್ನು ಹಾಕಿ ಮನೆಯ ಮುಂಬಾಗಿಲನ್ನು ತೆರೆದು ಕಾಯ್ದಳು. “ಇವತ್ತು ಅಂಗಡಿ ಡ್ಯೂಟಿ ನಿನ್ನದೋ?” ಎನ್ನುತ್ತಲೇ ಒಳಗೆ ಬಂದ ಪರಮ. “ಬೆಳಗ್ಗೆ ಬೆಳಗ್ಗೇನೇ ಅತ್ತೆ ಮಾವ ನಾನೇಳುವುದಕ್ಕೆ ಮುಂಚೆಯೇ ಎಲ್ಲಿಗೋ ಹೋದರು. ಸಾಮಾನ್ಯವಾಗಿ ಹೇಳುತ್ತಿದ್ದರು. ಅಕ್ಕಂದಿರು, ಭಾವಂದಿರನ್ನು ಕೇಳಿದೆ. ನಮಗ್ಗೊತ್ತಿಲ್ಲ ಅಂದರು. ನಿಮಗೇನಾದರೂ ಗೊತ್ತೇ?” ಎಂದು ತನ್ನ ಗಂಡನನ್ನು ಪ್ರಶ್ನಿಸಿದಳು ಗೌರಿ.

“ನನಗೂ ಗೊತ್ತಲ್ಲ ಗೌರಾ, ಬರುತ್ತಾರೆ ಬಿಡು. ಊಟಕ್ಕೆ ಬಡಿಸು ಬಾ. ಮತ್ತೆ ಕೆಲಸಕ್ಕೆ ಹೋಗಬೇಕು. ಮಂಡಿಗೆ ತೆಂಗಿನಕಾಯಿ ತುಂಬಿ ಕಳಿಸಬೇಕು. ಇನ್ನೊಬ್ಬ ಆಳುಮಗ ನಾಗಪ್ಪ ಬಂದಿಲ್ಲ, ನಾನೊಬ್ಬನೇ” ಎಂದು ಒಳಗೆ ಹೋಗಿ ಕೈಕಾಲು ಮುಖ ತೊಳೆದುಕೊಂಡು ಊಟಕ್ಕೆ ಕುಳಿತ. ಎಲ್ಲ ತರಕಾರಿಗಳನ್ನು ಹಾಕಿ ಮಾಡಿದ್ದ ಸಾರು ಮುದ್ದೆ ಬಡಿಸಿದಳು. ಮುದ್ದೆ ಬಿಸಿಯಾಗಿದ್ದುದನ್ನು ಕಂಡು “ಇದೇನು ಗೌರಾ ಮನೆಯಲ್ಲಿ ಯಾರೂ ಬುತ್ತಿ ತೆಗೆದುಕೊಂಡು ಹೋಗಿಲ್ಲವೇನು? ಈಗ ಅಡುಗೆ ಮಾಡಿದ್ದೀ” ಎಂದು ಕೇಳಿದ ಪರಮ.

“ಇಲ್ಲಾ ಎಲ್ಲರೂ ತೆಗೆದುಕೊಂಡೇ ಹೋಗಿದ್ದಾರೆ. ನಾನೂ ಇದ್ದುದನ್ನು ಊಟಮಾಡಿದೆ. ದಿನಾ ಆರಿ ಅತ್ತೀಕಾಯಾಗಿರೊ ಮುದ್ದೇನೇ ಉಣ್ಣುತ್ತೀರಲ್ಲಾ ಅಂತ ನಿಮಗೋಸ್ಕರ ಸ್ವಲ್ಪ ಮುದ್ದೆ, ಅನ್ನ ಬಿಸಿಯಾಗಿ ಮಾಡಿದ್ದೆ ಅಷ್ಟೇ” ಎಂದಳು ಗೌರಿ.

ಅಡುಗೆ ಮನೆಯಿಂದ ಒಂದು ಚಿಕ್ಕ ಕುಡಿಕೆಯಲ್ಲಿ ಹೆಪ್ಪಾಕಿದ್ದ ಮೊಸರನ್ನು ತಂದು ಮುಂದಿರಿಸಿದಳು. ಅದನ್ನು ನೊಡಿ ಪರಮನಿಗೆ ಮನದಲ್ಲಿ ಹಿಗ್ಗುಂಟಾಯಿತು. ಮದುವೆಯಾಗಿ ಗೌರಿ ನಮ್ಮ ಮನೆಗೆ ಬಂದಾಗ ನಮ್ಮಮ್ಮ ನನಗೆ ಮೊಸರೆಂದರೆ ಇಷ್ಟವೆಂದು ಹೇಳಿದ್ದ ಮಾತನ್ನು ಇನ್ನೂ ಪಾಲಿಸಿಕೊಂಡು ಬರುತ್ತಿದ್ದಾಳಲ್ಲ ನನ್ನ ಹೆಂಡತಿ, ಅದೂ ತುಂಬಿದ ಮನೆಯಲ್ಲಿ. ಕರೆಯುವ ಹಸುಗಳಿರುವುದರಿಂದ ಹಾಲು, ಮೊಸರು, ಬೆಣ್ಣೆ, ತುಪ್ಪಕ್ಕೆ ಬರವಿಲ್ಲ. ಆದರೂ.. ಅಂದುಕೊಂಡು ಮತ್ತಷ್ಟು ಅನ್ನ ಬಡಿಸಿಸಿಕೊಂಡು ಮೊಸರು ಹಾಕಿಸಿಕೊಂಡು ಉಪ್ಪಿನಕಾಯನ್ನು ನೆಂಚಿಕೊಂಡು ಬಾಯಿ ಚಪ್ಪರಿಸುತ್ತಾ ಉಂಡೆದ್ದು ಬಂದ ಪರಮ.

ಸ್ವಲ್ಪ ಹೊತ್ತು ಅಡ್ಡಾಡಿದಂತೆ ಮಾಡಿ ಮತ್ತೆ ಎದ್ದು ಶಿಸ್ತಾಗಿ “ಗೌರಾ..ನಾನು ಹೊರಟೆ, ಬಾಗಿಲು ಹಾಕ್ಕೋ. ಸಂಜೆಗೆ ಅಂಗಡಿ ಬಾಗಿಲು ತೆಗೆ. ಈ ಮಟಮಟ ಮಧ್ಯಾಹ್ನದಲ್ಲಿ ಯಾರು ಬಂದಾರು. ನೀನು ಬೆಳಗಿನಿಂದ ಕೂತಲ್ಲೇ ಕೂತು ಸಾಕಾಗಿದೆ. ಈ ಸಮಯದಲ್ಲಿ ರೆಸ್ಟ್ ಬೇಕು” ಎಂದು ಹೇಳಿ ತನ್ನ ಕೆಲಸಕ್ಕೆ ಸಾಹುಕಾರರ ತೋಟದ ಕಡೆ ನಡೆದ.

ಗಂಡ ಅತ್ತ ಹೋಗುತ್ತಿದ್ದಂತೆ ಗೌರಿ ಬಾಗಿಲನ್ನು ಭದ್ರಪಡಿಸಿದಳು. ಮೇಷ್ಟ್ರು  ಕೊಟ್ಟಿದ್ದ ಪೇಪರನ್ನು ಬಿಡಿಸಿ ನಡುಮನೆಯಲ್ಲಿ ಹಾಸಿದ್ದ ಚಾಪೆಯ ಮೇಲೆ ಮಲಗಿಕೊಂಡೇ ಓದಲು ಪ್ರಯತ್ನಿಸಿದಳು. ಮೊದಲನೆಯ ಪುಟದಲ್ಲಿಯೇ ದಪ್ಪ ಅಕ್ಷರದಲ್ಲಿ ಕಾಣಿಸಿದ ಸುದ್ಧಿ “ಐದುವರ್ಷಗಳ ಹಿಂದೆ ಸೋದರಿಯ ಪುಟ್ಟ ಮಗುವನ್ನು ಅಮಾನುಷವಾಗಿ ಹತ್ಯೆ ಮಾಡಿದ್ದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದ್ದರಿಂದ ಅಪರಾಧಿ ಗೋಪಾಲ ಎಂಬ ವ್ಯಕ್ತಿಗೆ ಉಚ್ಛನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಜೊತೆಗೆ ಹತ್ತು ಸಾವಿರ ರೂಪಾಯಿಯ ಜುಲ್ಮಾನೆಯನ್ನು ವಿಧಿಸಿದೆ. ಒಂದುವೇಳೆ ಜುಲ್ಮಾನೆಯನ್ನು ಸಲ್ಲಿಸಲು ವಿಫಲನಾದರೆ ಇನ್ನೂ ಆರುತಿಂಗಳ ಹೆಚ್ಚುವರಿ ಕಾರಾಗೃಹವಾಸವನ್ನು ವಿಧಿಸಲಾಗಿದೆ. ಪಕ್ಕದಲ್ಲಿ ಅಪರಾಧಿಯ ಭಾವಚಿತ್ರವೂ ಇತ್ತು. ತನ್ನ ಗಂಡ ನೆನ್ನೆಯ ಪೇಪರ್ ಯಾಕೆ ತಂದುಕೊಡಲಿಲ್ಲ ಎಂಬ ಕಾರಣ ಈಗ ಗೊತ್ತಾಯಿತು. ಆದರೂ ಗತಿಸಿಹೋದ ತನ್ನ ಕರುಳ ಕುಡಿಯ ನೆನಪಾಗಿ ದುಃಖ ಒತ್ತರಿಸಿ ಬಂತು. ತಡೆಯಲಾರದೆ ಬಿಕ್ಕಿಬಿಕ್ಕಿ ಅತ್ತ ಗೌರಿ ಮತ್ತೆಮತ್ತೆ ಪೇಪರಿನ ಸುದ್ಧಿಯ ಕಡೆಗೇ ದೃಷ್ಟಿ ಹಾಯಿಸಿದಳು. ಹಾಗೆಯೇ ಆಕೆಯ ನೆನಪೂ ತನ್ನ ತೌರಿನ ಕಡೆಗೆ ಜಾರಿತು.

ತುಮಕೂರು ಸಮೀಪದ ಊರ್ಡುಗೆರೆ ಎಂಬ ಗ್ರಾಮದಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ರಾಚಪ್ಪ, ಶಂಕರಿ ದಂಪತಿಗಳಿಗೆ ಗೌರಿ, ಗೋಪಾಲ ಎಂಬ ಇಬ್ಬರು ಮಕ್ಕಳು. ವೃತ್ತಿ ಏನೇ ಆದರೂ ವ್ಯವಹಾರಕ್ಕೆ ಅಗತ್ಯವಾದ ಅಕ್ಷರಾಭ್ಯಾಸ, ಲೆಕ್ಕಾಚಾರ ತಿಳಿದಿದ್ದರು. ನೆರೆಹೊರೆಯವರಿಗೆಲ್ಲ ಅಚ್ಚುಮೆಚ್ಚಿನವರಾಗಿದ್ದರು. ತಮ್ಮಿಬ್ಬರು ಮಕ್ಕಳನ್ನು ಅದೇ ಊರಿನ ಸರ್ಕಾರೀ ಶಾಲೆಗೆ ಸೇರಿಸಿದ್ದರು. ಮಕ್ಕಳಿಬ್ಬರೂ ನೋಡಲು ಅಂದವಾಗಿ ಮತ್ತು ಕಲಿಕೆಯಲ್ಲಿ ಚುರುಕಾಗಿದ್ದರು. ಚಿಕ್ಕದಾದ ಚೊಕ್ಕ ಕುಟುಂಬ. ಏಳನೆಯ ತರಗತಿಯವರೆಗೆ ಕಲಿತ ಗೋಪಾಲ ವಿದ್ಯೆಗೆ ಶರಣು ಹೊಡೆದು ಮೊಟಾರ್ ಗ್ಯಾರೇಜು ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಈ ನಿರ್ಧಾರ ಶಂಕರಿ, ರಾಚಪ್ಪನವರಿಗೆ ಇಷ್ಟವಾಗದಿದ್ದರೂ ಹೇಗೋ ದುಡಿಯುತ್ತಿದ್ದಾನೆಂದು ಸುಮ್ಮನಾದರು. ಗೌರಿ ಏಳನೆಯ ತರಗತಿ ಪಾಸಾಗಿ ಮುಂದಕ್ಕೆ ಓದಬೇಕೆಂಬ ಆಸೆಯಿದ್ದರೂ ದೊಡ್ಡವಳಾದಳೆಂಬ ಕಾರಣದಿಂದ ಹೆತ್ತವರು ಅವಳ ಓದನ್ನು ಮುಂದುವರೆಸಲು ಬಿಡಲಿಲ್ಲ. ಅವಳಿಗೆ ಮದುವೆ ಮಾಡಲು ವರಾನ್ವೇಷಣೆಗೆ ತೊಡಗಿದರು.

ನಾಲ್ಕಾರು ವರ್ಷ ಗ್ಯಾರೇಜಿನಲ್ಲಿ ಕೆಲಸ ಮಾಡಿದ ಗೊಪಾಲ ಕೈಗೆ ಕಾಸು ದೊರಕುತ್ತಿದ್ದಂತೆ ದುಷ್ಟರ ಸಹವಾಸದಿಂದ ಕೆಟ್ಟಚಟಗಳ ದಾಸನಾಗಿಬಿಟ್ಟ. ಹೆತ್ತವರಿಗೊಂದು ತಲೆನೋವಾದ. ಇವರೂ ಸಾಮ, ದಾನ, ಭೇದ, ದಂಡ, ಎಲ್ಲ ಉಪಾಯಗಳನ್ನೂ ಮಾಡಿ ಅವನನ್ನು ಸರಿದಾರಿಗೆ ತರಲು ಪ್ರಯತ್ನಿಸಿದರು. ಊಹುಂ, ಏನೂ ಪ್ರಯೋಜನವಾಗಲಿಲ್ಲ. ತಾನು ಕೆಲಸ ಮಾಡುತ್ತಿದ್ದ ಗ್ಯಾರೇಜಿನಲ್ಲಿಯೇ ಕಳವು ಮಾಡಲು ಪ್ರಯತ್ನಿಸಿದ್ದಕ್ಕಾಗಿ ಅವನನ್ನು ಕೆಲಸದಿಂದ ಕಿತ್ತು ಹಾಕಿದರು. ಸರಿ ಕಣ್ಣಿಕಿತ್ತ ಗೂಳಿಯ ಹಾಗೆ ತಿರುಗುತ್ತಿದ್ದ. ಮನಸ್ಸಿಗೆ ಬಂದಾಗ ಮನೆಗೆ ಬರುವುದು ಕೈಯಿಗೆ ಸಿಕ್ಕಿದ ಸಾಮಾನುಗಳನ್ನು ಎತ್ತಿಕೊಂಡು ಹೋಗಿ ಮಾರಿ ಉಡಾಯಿಸುವುದು ಅಭ್ಯಾಸವಾಗಿತ್ತು. ಹಣ ದೊರಕದಿದ್ದಾಗ ತಂದೆತಾಯಿಗಳನ್ನು ಹೇಗಾದರೂ ಕಾಸು ಕೊಡಿರೆಂದು ಪೀಡಿಸುತ್ತಿದ್ದ. ಈಗ ಮಗ ಮನೆಗೆ ಬರುತ್ತಾನೆಂದರೆ ದಂಪತಿಗಳಿಗೆ ಹೆದರಿಕೆ ಶುರುವಾಗುತ್ತಿತ್ತು.

ಇದೇ ಸಮಯದಲ್ಲಿ ತುಮಕೂರಿನ ಸಮೀಪವೇ ಇರುವ ಗೂಳೂರಿನಲ್ಲಿ ಇವರಂತೆಯೇ ಹಣ್ಣು, ಹೂಗಳ ಜೊತೆಗೆ ಬೇರೆ ತರಕಾರಿಗಳು ಅಗತ್ಯ ವಸ್ತುಗಳನ್ನು ಮಾರಾಟಮಾಡುವ ಚಿಕ್ಕದೊಂದು ಅಂಗಡಿ ಇಟ್ಟುಕೊಂಡು ಜೀವಿಸುತ್ತಿದ್ದ ಕಮಲಮ್ಮ, ಭದ್ರಪ್ಪ ಎಂಬ ದಂಪತಿಗಳಿಗೆ ಮೂವರು ಗಂಡು ಮಕ್ಕಳಿದ್ದರು. ದೊಡ್ಡವರಿಬ್ಬರಿಗೆ ಮದುವೆಯಾಗಿ ಮೂರನೆಯ ಮಗ ಪರಮಣ್ಣನಿಗೆ ಗೌರಿಯನ್ನು ಕೊಡಿರೆಂದು ಪ್ರಸ್ತಾವ ತಂದರು. ಮೂರೂ ಮಕ್ಕಳೂ ತಕ್ಕಮಟ್ಟಿಗೆ ಓದುಬರಹ ಕಲಿತವರೇ. ದೊಡ್ಡವರಿಬ್ಬರೂ ತಮ್ಮ ಪತ್ನಿಯರೊಡನೆ ಬೇರೆ ಬೇರೆ ಹೊಲಗಳಲ್ಲಿ ಖಾಯಂ ಕೆಲಸಗಾರರಾಗಿ ದುಡಿಯುತ್ತಿದ್ದರು. ಮೂರನೆಯ ಪರಮಣ್ಣ ಊರಿನ ಸಾಹುಕಾರರೊಬ್ಬರ ತೋಟದ ಉಸ್ತುವಾರಿ ಕೆಲಸ ಮಾಡುತ್ತಿದ್ದ. ಅವರ ನಂಬಿಕೆಯ ಶಿಷ್ಯನಾಗಿದ್ದ, ಆಗಿನ್ನು ಗೋಪಾಲನ ನಡವಳಿಕೆ ಬಗ್ಗೆ ಅಷ್ಟಾಗಿ ಹೊರಗಡೆಯವರಿಗೆ ತಿಳಿದಿರಲಿಲ್ಲ. ಹಾಗಾಗಿ ಹುಡುಗಿಯನ್ನು ಗಂಡಿನವರು ಒಪ್ಪಿದರು. ಎರಡೂ ಕಡೆಯವರ ಸಮ್ಮತಿಯಿಂದ ಮದುವೆ ನೆರವೇರಿತು. ಗೌರಿಗೆ ತನ್ನ ತವರಿನವರಿಗಿಂತ ಸ್ವಲ್ಪಮಟ್ಟಿಗೆ ಅನುಕೂಲವಾಗಿದ್ದ ಮನೆ ದೊರಕಿದ್ದು, ಅಲ್ಲಿ ತಂದೆತಾಯಿಗಳೊಡನೆ ಮಕ್ಕಳು ಸೊಸೆಯಂದಿರು ಒಟ್ಟಿಗೆ ಇದ್ದದ್ದು ಕಂಡು ತನ್ನ ಪುಣ್ಯವೆಂದೇ ತಿಳಿದಳು ಅವರೆಲ್ಲರ ನಡುವೆ ಪ್ರೀತಿ, ವಿಶ್ವಾಸ ಇದ್ದುದರಿಂದ ತಾನೂ ಅವರೊಡನೆ ಹೊಂದಿಕೊಂಡು ಬದುಕು ನಡೆಸುತ್ತಿದ್ದಳು.

ಮದುವೆಯಾದ ಎರಡು ವರ್ಷಕ್ಕೆ ಗೌರಿ ತಾಯಿಯಾಗುವ ಸೂಚನೆ ಕಂಡುಬಂದಿತು. ದಿನಗಳು ಹತ್ತಿರವಾದಾಗ ಆಕೆಯ ತಂದೆತಾಯಿಗಳು ಮಗಳನ್ನು ತವರಿಗೆ ಕರೆತಂದರು. ಒಂದು ತಿಂಗಳ ನಂತರ ಗೌರಿ ಗಂಡುಮಗುವಿಗೆ ಜನ್ಮ ಕೊಟ್ಟಳು. ಗುಂಡುಗುಂಡಾಗಿದ್ದ ಮಗು ಅರೋಗ್ಯಪೂರ್ಣವಾಗಿತ್ತು. ಎಲ್ಲರಿಗೂ ಸಂತೋಷವಾಯಿತು.

ಮನೆಯಲ್ಲಿ ತನಗಿಂತ ಒಂದೆರಡೇ ವರ್ಷ ದೊಡ್ಡವನಾಗಿದ್ದ ಅಣ್ಣ ಗೋಪಾಲನ ಅವಸ್ಥೆ ಕಂಡು ಗೌರಿಗೆ ಬೇಸರವಾಗಿತ್ತು. ಅವನಿಂದಾಗಿ ಮನೆಯಲ್ಲಿ ಯಾವಾಗಲೂ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿತ್ತು. ತಂದೆಯಾಯಿಗಳಂತೂ ಅವನಿಗೆ ಹೆದರಿ ನಡೆಯುತ್ತಿದ್ದುದು ಇನ್ನೂ ಶೋಚನೀಯ ಸಂಗತಿಯಾಗಿತ್ತು. ಬಾಲ್ಯದಲ್ಲಿ ತಾವು ಒಟ್ಟಿಗೆ ಶಾಲೆಗೆ ಹೋಗುತ್ತಿದ್ದುದು, ಸಂಜೆ ಗೆಳೆಯರೊಟ್ಟಿಗೆ ಒಟ್ಟಿಗೆ ಆಟವಾಡುತ್ತಿದ್ದುದು ಎಲ್ಲವನ್ನೂ ನೆನಪಿಸಿಕೊಂಡಾಗ ಇವನ್ಯಾಕೆ ಹೀಗಾದ ಎಂದು ಮರುಕವುಂಟಾಗುತ್ತಿತ್ತು. ಆಗಾಗ್ಗೆ ಸಮಯ ಸಾಧಿಸಿ ಗೌರಿಯೂ ಗೋಪಾಲನಿಗೆ ಸೂಕ್ತ ರೀತಿಯಲ್ಲಿ ಬುದ್ಧಿ ಹೇಳಿ ಅವನನ್ನು ತಿದ್ದಲು ಪ್ರಯತ್ನಿಸುತ್ತಿದ್ದಳು. ಆದರೆ ‘ಮೂರ್ಖಂಗೆ ನೂರ್ಕಾಲ ಬುದ್ಧಿ ಹೇಳಿದರೂ, ಗೋರ್ಕಲ್ಲ ಮೇಲೆ ಮಳೆಗರೆದಂತೆ’ ಎಂಬಂತೆ ಅವಳ ಮಾತುಗಳು ಯಾವ ಪರಿಣಾಮವನ್ನೂ ಉಂಟು ಮಾಡಲಿಲ್ಲ. ಅವನು ಮನೆಗೆ ಬಂದು ಹಣಕ್ಕೆ ಬೇಡಿಕೆಯಿಟ್ಟಾಗ ಹೆತ್ತವರು ಹೆದರಿಕೊಂಡು ತಮ್ಮಲ್ಲಿದ್ದ ಕಾಸುಗಳನ್ನು ಅವನಿಗಿತ್ತು ಕಳುಹಿಸುತ್ತಿದ್ದರು. ಇಲ್ಲವಾದರೆ ಮನೆ ಸೂರು ಕಿತ್ತುಹೋಗುವಂತೆ ವಾಚಾಮಗೋಚರವಾಗಿ ಬೈಗುಳುಗಳ ಮಳೆಯನ್ನೇ ಸುರಿಸುತ್ತಿದ್ದ. ಅವನು ಮನೆಗೇಕೆ ಬರುತ್ತಾನಪ್ಪಾ ಎಂದುಕೊಳ್ಳುತ್ತಿದ್ದರು. ಗೌರಿ ತಾನು ಬಾಣಂತನ ಪೂರೈಸಿಕೊಂಡು ಹಿಂದಿರುಗುವುದರೊಳಗೆ ಅಣ್ಣನನ್ನು ಒಂದು ಹದ್ದಬಸ್ತಿಗೆ ತರಲೆಂದು ಮತ್ತೆ ಮತ್ತೆ ಪ್ರಯತ್ನ ಮಾಡುತ್ತಲೇ ಇದ್ದಳು.

ಮಗುವಿಗೆ ಮೂರು ತಿಂಗಳು ತುಂಬಿದಾಗ ಒಂದು ದಿನ ರಾಚಪ್ಪ, ಶಂಕರಿ ಕೆಲವು ಸಾಮಾನುಗಳನ್ನು ತರಲೆಂದು ಪೇಟೆಗೆ ಹೋಗಿದ್ದರು. ಅದೇ ಸಮಯದಲ್ಲಿ ಗೋಪಾಲನ ಸವಾರಿ ಬಂದಿತು. ಗೌರಿ ಅಣ್ಣನಿಗೆ ಊಟಕ್ಕೆ ಬಡಿಸಿದಳು. ತಾನು ಮಾತನಾಡುತ್ತಿದ್ದರೂ ಅವನು ಏನೂ ಉತ್ತರ ಕೊಡದಂತೆ ಊಟ ಮುಂದುವರಿಸಿದ್ದ. ಮುಗಿಯುವಷ್ಟರಲ್ಲಿ ಅಪ್ಪ, ಅಮ್ಮ ಹಿಂದಿರುಗಿದರು. ಅವರನ್ನು ಕಂಡಕೂಡಲೇ ಗೊಪಾಲ ಹಳೇವರಸೆಯಂತೆ ಅವರಿಂದ ದುಡ್ಡು ಬೇಕೆಂದು ಕೇಳಿದ. ಅವರು “ಈಗತಾನೇ ಸಾಮಾನುಗಳನ್ನು ಕೊಂಡು ಬಂದೆವು, ಇದ್ದದ್ದೆಲ್ಲ ಖರ್ಚಾಗಿದೆಯಪ್ಪಾ, ಎಲ್ಲಿಂದ ಕೊಡಲಿ”. ಎಂದರು. “ಅದೆಲ್ಲ ನಂಗೊತ್ತಿಲ್ಲ, ಈಗ ನನಗೆ ದುಡ್ಡು ಬೇಕೇಬೇಕು, ಕೊಡುತ್ತೀರೋ ಇಲ್ಲವೋ? ಕೊಡದಿದ್ದರೆ ಒಬ್ಬೊಬ್ಬರನ್ನು ಇಲ್ಲಾ ಅನ್ನಿಸಿಬಿಡ್ತೀನಿ” ಎಂದು ಅಡುಗೆ ಮನೆಯಲ್ಲಿದ್ದ ಹಿಟ್ಟಿನ ದೊಣ್ಣೆಯನ್ನು ಕೈಯಲ್ಲಿ ಹಿಡಿದು ಬೆದರಿಸಿದ. ಆ ಹಿರಿಯರು ಉತ್ತರಕೊಡದೆ ತಾವು ಪೇಟೆಯಿಂದ ತಂದ ಸಾಮಾನುಗಳನ್ನು ಎತ್ತಿ ಜೋಡಿಸುವುದರಲ್ಲಿ ಮಗ್ನರಾದರು. ಗೌರಿ ಅನುನಯದಿಂದ ಅಣ್ಣನನ್ನು ಸಮಧಾನಗೊಳಿಸಲು ಪ್ರಯತ್ನಿಸಿದಳು. ಯಾವ ಮಾತಿಗೂ ಅವನು ಜಗ್ಗಲಿಲ್ಲ. ಕೈಯಲ್ಲಿದ್ದ ಕೋಲಿನಿಂದ ಎಲ್ಲರಿಗೂ ಥಳಿಸಲು ತೊಡಗಿದ. ಪೆಟ್ಟುಗಳನ್ನು ತಡೆಯಲಾರದೆ ಅಕ್ಕಪಕ್ಕದವರನ್ನು ಸಹಾಯಕ್ಕಾಗಿ ಕರೆಯಲು ಮನೆಯಿಂದ ಹೊರಗೋಡಿದರು. ಮೂರೂ ಜನ ಮನೆಯಿಂದ ಹೊರಗೆ ಹೋದಕೂಡಲೆ ಒಳಗಿನಿಂದ ಗೋಪಾಲ ಬಾಗಿಲಿನ ಚಿಲಕ ಹಾಕಿಕೊಂಡುಬಿಟ್ಟ. ಅಡುಗೆ ಮನೆಯಿಂದ ಪಾತ್ರೆಗಳು ಕೆಳಗೆ ಸದ್ದುಮಾಡುತ್ತ ಬಿದ್ದದ್ದು ಕೇಳಿಸಿತು. ಕೆಲವೇ ಕ್ಷಣದಲ್ಲಿ ಮಗುವಿನ ಆಕ್ರಂದನ ಕೇಳಿಬಂತು. ಗೌರಿ, ರಾಚಪ್ಪ, ಶಂಕರಿ, ಮೂವರಿಗೂ ತಾವು ಮಗುವನ್ನು ಒಳಗೇ ಬಿಟ್ಟುಬಂದದ್ದು ತಪ್ಪೆಂಬುದು ಅರಿವಾಯಿತು. ಅಷ್ಟರಲ್ಲಿ ಅಕ್ಕಪಕ್ಕದವರೂ ಸೇರಿ ಮುಂದಿನ ಬಾಗಿಲನ್ನು ಒಡೆದು ಒಳಕ್ಕೆ ನುಗ್ಗಿದರು.

ಅಲ್ಲಿ ಕಂಡ ದೃಶ್ಯ ಎಲ್ಲರೆದೆಯನ್ನೂ ನಡುಗಿಸುವಂತಿತ್ತು. ತೊಟ್ಟಿಲಲ್ಲಿ ಮಲಗಿಸಿದ್ದ ಪುಟ್ಟ ಮಗುವಿನ ಮುಖ ಗುರುತಿಸಲಾಗದಂತೆ ಜಜ್ಜಿಹೋಗಿತ್ತು. ದೇಹವೂ ರಕ್ತಸಿಕ್ತವಾಗಿತ್ತು. ಅದರ ಉಸಿರು ನಿಂತುಹೋಗಿತ್ತು. ಗೋಪಾಲ ಅಲ್ಲಿಯೇ ಇದ್ದ ತೂಕದ ಬೊಟ್ಟಿನಿಂದ ಸಿಕ್ಕಿದಂತೆ ಹೊಡೆದು ಅದನ್ನು ಕೊಂದಿದ್ದ. ಕಬ್ಬಿಣದ ತೂಕದ ಬೊಟ್ಟಿನಲ್ಲಿ ರಕ್ತದ ಕಲೆ ಕಾಣಿಸುತ್ತಿತ್ತು. ಅವನ ಪೈಶಾಚಿಕ ಕೃತ್ಯಕ್ಕೆ ಅದು ಸಾಕ್ಷಿಯಾಗಿತ್ತು. ಹಲವಾರು ಜನಗಳು ಒಳಕ್ಕೆ ನುಗ್ಗಿದ್ದರಿಂದ ಗೊಪಾಲನ ತಪ್ಪಿಸಿಕೊಳ್ಳುವ ಪ್ರಯತ್ನ ವಿಫಲವಾಗಿ ಕೈಗೆ ಸಿಕ್ಕಿಬಿದ್ದ. ಯಾರೋ ಪೋಲೀಸಿಗೆ ಫೋನ್ ಮಾಡಿ ಕರೆಸಿದರು. ಗೋಪಾಲನನ್ನು ಅವರ ಸುಪರ್ದಿಗೆ ವಹಿಸಿದರು. ಮುಂದಿನ ಕಾರ್ಯಗಳು ನಿಯಮಾನುಸಾರ ನಡೆಸಿದ ಪೋಲೀಸರು ಅವನ ವಿರುದ್ಧ ಮೊಕದ್ದಮೆ ಹೂಡಿದರು.

ಸುದ್ಧಿ ಗೌರಿಯ ಅತ್ತೆಮನೆಯವರಿಗೂ ತಿಳಿದು ಅವರು ಬಂದರು. ಆದರೆ ದುರಂತ ನಡೆದುಹೋಗಿತ್ತು. ಮತ್ತೆ ಬಾರದ ಊರಿಗೆ ಮುದ್ದುಮಗು ಹೊರಟುಹೋಗಿತ್ತು. ಎಲ್ಲರೂ ಅತ್ತು ಸಮಧಾನಗೊಂಡರು. ಪರಸ್ಪರ ಸಮಧಾನ ಹೇಳಿಕೊಂಡರು. ರಾಚಪ್ಪ, ಶಂಕರಿ ಮೂಕಪ್ರೇಕ್ಷಕರಾಗಿ ಮೌನಕ್ಕೆ ಶರಣಾಗಿದ್ದರು. ಆಳಿಗೊಂದು ಮಾತುಗಳು ಕೇಳಿಬರುತ್ತಿದ್ದವು. ಅಂತಹ ವಾತಾವರಣದಲ್ಲಿ ಇರಲು ಸಾಧ್ಯವಾಗದೆ ಗೌರಿ ತನ್ನ ಗಂಡನ ಪರಿವಾರದವರೊಡನೆ ಹೊರಟುಹೋದಳು. ಅವಳನ್ನು ನಿಲ್ಲಿಸಿಕೊಳ್ಳುವ ಧೈರ್ಯ ತಂದೆತಾಯಿಗಳಿಗಿರಲಿಲ್ಲ.

ಕಳೆದ ಐದು ವರ್ಷಗಳಿಂದ ತೌರು ಮನೆಯ ಕಡೆ ತಲೆ ಹಾಕಿರಲಿಲ್ಲ ಗೌರಿ. ವಿಚಾರಣೆಗೆಂದು ಕರೆದಾಗಲೆಲ್ಲ ಗಂಡನೊಡನೆ ತಮ್ಮೂರಿನಿಂದಲೇ ಹೋಗಿ ಬರುತ್ತಿದ್ದಳು. ಒಂದು ಸಾರಿಯೂ ಹೆತ್ತವರನ್ನು ನೋಡಲು ಹೋಗುತ್ತಿರಲಿಲ್ಲ. ಅವರಾಗಿಯೇ ಮಾತನಾಡಿಸಿದರೂ ಮೌನವಾಗಿರುತ್ತಿದ್ದಳು. ಈ ಅಂತರದಲ್ಲಿ ಆಕೆ ಎರಡು ಬಾರಿ ಗರ್ಭಧರಿಸಿ ಗರ್ಭಪಾತವಾಗಿದ್ದವು. ಇದರಿಂದ ಆಕೆ ನಿತ್ರಾಣಳಾಗಿ ವೈದ್ಯಕೀಯ ಸರ್ಟಿಫಿಕೇಟ್ ಸಲ್ಲಿಸಿ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆದುಕೊಂಡಿದ್ದಳು.

ಅವಳ ಒಳಮನಸ್ಸು “ನಾವು ಬಡತನದಲ್ಲಿದ್ದರೂ ಎಷ್ಟು ಚೆನ್ನಾಗಿದ್ದೆವು. ಕುಟುಂಬದಲ್ಲಿ ಪ್ರೀತಿ ವಿಶ್ವಾಸಗಳಿದ್ದವು. ಇಂತಹ ವಾತಾವರಣದಲ್ಲಿ ಬೆಳೆದು ದೊಡ್ಡವನಾದ ಅಣ್ಣ ಹೇಗೆ ಹಸುಮಗುವನ್ನು ಕೊಲ್ಲುವಷ್ಟು ನೀಚತನಕ್ಕಿಳಿದ” ಎಂಬ ಆಲೋಚನೆಯಿಂದ ತುಂಬಿತ್ತು. “ತಾಯಿ, ತಂದೆ ಪಾಪ ಏನು ಮಾಡಿದ್ದರು. ನಾನೇಕೆ ಅವರನ್ನು ದೂರಮಾಡಿಕೊಂಡೆ. ಮೊದಲೇ ನೊಂದುಹೋಗಿರುವ ಆ ಹಿರಿಯ ಜೀವಿಗಳಿಗೆ ನನ್ನ ಈ ನಡವಳಿಕೆಯಿಂದ ಇನ್ನಷ್ಟು ದುಃಖ ಕೊಟ್ಟೆ” ಎಂಬ ಪಶ್ಚಾತ್ತಾಪ ಉಂಟಾಗುತ್ತಿತ್ತು. ಅದರಿಂದಲೇ ಎರಡು ಬಾರಿ ಒಡಲಿಗೆ ಬಂದದ್ದು ಮಡಿಲಿಗೆ ಬಾರದಂತಾಯಿತೇನೊ ಅಂದುಕೊಂಡಳು. ಒಮ್ಮೆ ಅಪ್ಪ ಅಮ್ಮನನ್ನು ನೋಡಿ ಅವರಲ್ಲಿ ಕ್ಷಮೆ ಕೇಳಬೇಕು ಎಂದುಕೊಂಡಳು.

ಇತ್ತಕಡೆ ನ್ಯಾಯಾಲಯದಿಂದ ಅಂತಿಮ ತೀರ್ಪು ಬಂದ ಮಾರನೆಯ ದಿನದಿಂದ ಮನೆಯಿಂದ ಹೊರಗೆ ತಲೆಹಾಕದ ರಾಚಪ್ಪ, ಶಂಕರಿ ಒಬ್ಬರಿಗೊಬ್ಬರು ಸಮಧಾನ ಮಾಡಿಕೊಳ್ಳುತ್ತ ಬೆಳಗಿನ ಸ್ನಾನ, ಪದ್ಧತಿಯಂತೆ ಪೂಜೆ ಮಾಡಿಕೊಂಡು ಹಿಂದಿನ ರಾತ್ರಿಯ ತಂಗಳನ್ನು ತಿಂದು ತಮ್ಮ ದೈನಂದಿನ ಕೆಲಸ ಪ್ರಾರಂಭ ಮಾಡಿದರು. ಇಬ್ಬರ ಮನಸ್ಸಿನಲ್ಲಿ ಇದ್ದೊಬ್ಬ ಮಗ ಕೊಲೆಮಾಡಿ ಜೈಲುಪಾಲಾದ, ಮಗಳು ಅವತ್ತು ಮನೆಯಿಂದ ಕಾಲ್ತೆಗೆದು ಹೋದವಳು ಇತ್ತಕಡೆ ತಿರುಗಿಯೂ ನೋಡಿಲ್ಲ. ನಮ್ಮ ಕರ್ಮ ಮಕ್ಕಳಿದ್ದೂ ಇಲ್ಲದಂತಹ ಪರಿಸ್ಥಿತಿ. ನಾವು ಪಡೆದು ಬಂದದ್ದೇ ಇಷ್ಟು ಎಂದುಕೊಂಡರು. ಗಂಡನನ್ನು ನೋಡಿ ಶಂಕರಿ ತಮ್ಮ ದುಃಸ್ಥಿತಿಯನ್ನು ನೆನೆದು ಬಿಕ್ಕಿಬಿಕ್ಕಿ ಅತ್ತಳು.

“ಅಳಬೇಡವೇ ಎಷ್ಟು ದಿನಾಂತ ಬಾಗಿಲು ಹಾಕಿಕೊಂಡು ಕೂಡೋಕೆ ಸಾಧ್ಯ. ಹೊಟ್ಟೆ ಕೇಳಬೇಕಲ್ಲ. ಇವತ್ತಾದರೂ ವ್ಯಾಪಾರ ಶುರೂ ಮಾಡೋಣ” ಎಂದರು ರಾಚಪ್ಪ.

“ಹೂ..ರಾತ್ರಿಯೇ ವರ್ತನೆ ಮನೆಗೆ ಹೂ ಕೊಟ್ಟು ಬಂದಿವ್ನಿ, ತರಕಾರಿ ಎಲ್ಲಾ ಬತ್ತೋಗವೆ. ಬಾಳೇಹಣ್ಣು ಪೂರಾ ಕರ‍್ರಗಾಗೋಗವೆ, ಇವು ಹಸುವಿಗಷ್ಟೇ ಕೊಡೋಕೆ ಲಾಯಿಕು. ಎಲ್ಲವನ್ನು ಹೊಸದಾಗಿ ತರೋಣ” ಎಂದಳು ಶಂಕರಿ.

ಅದೇ ವೇಳೆಗೆ ಮುಂಬಾಗಿಲು ಬಡಿದಂತೆ ಶಬ್ಧ ಕೇಳಿಸಿತು. “ಅಯ್ಯಾ ಇನ್ನು ಒಂಭತ್ತು ಗಂಟೇನೂ ಆಗಿಲ್ಲ, ಇಷ್ಟೊತ್ತಿಗೆ ಯಾರು ಬಂದವ್ರೆ? ಈ ಕೆಟ್ಟ ನನ್ನಮಗ ಏನಾರಾ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಜೈಲಿನಿಂದ ತಪ್ಪಿಸಿಕೊಂಡು ಬಂದುಬಿಟ್ನಾ? ನಾನಂತೂ ಜಾಮೀನಿನ ಸುದ್ಧಿಗೆ ಹೋಗಲಿಲ್ಲ. ಅವನಿಗೆ ಜುಲ್ಮಾನೆ ಹಾಕಿದ ಹಣ ನಾನು ಕಟ್ಟಕಾಗಲ್ಲಾ ಅಂದಾಗ ಕಣ್ಣು ಕೆಕ್ಕರಿಸಿಕೊಂಡು ನೋಡಿದ್ದ. ಅವನು ಮಾಡಿದ್ದ ಪಾಪದ ಕೆಲಸಕ್ಕೆ ರವಷ್ಟಾದರೂ ದುಃಖವಿಲ್ಲ ಮುಂಡೇದಕ್ಕೆ.” ಅಂದುಕೊಂಡು ಹೆದರುತ್ತಲೇ ಬಾಗಿಲ ಕಿಂಡಿಯಿಂದ ನೋಡಿದರು. ಅಷ್ಟರಲ್ಲಿ ಮತ್ತೊಮ್ಮೆ ಬಾಗಿಲು ಬಡಿದ ಶಬ್ಧ ಜೊತೆಗೆ “ಇದ್ದೀರಾ ರಾಚಪ್ಪನೋರೆ, ನಾವು ಗೌರಿಯ ಅತ್ತೆ ಮಾವ ಬಂದಿದ್ದೀವಿ, ಬಾಗಿಲು ತೆಗೀರಿ” ಎಂದದ್ದು ಕೇಳಿಸಿತು. ಹೋದ ಜೀವ ಬಂದಂಗಾಯ್ತು. ತಡಮಾಡದೆ ಬಾಗಿಲು ತೆರೆದರು. ಇದೇನು ಕನಸೋ, ನನಸೋ ಎಂಬಂತೆ ಮತ್ತೆ ಮತ್ತೆ ಬಂದವರನ್ನೇ ದಿಟ್ಟಿಸಿದರು. ಅವರ ಜೊತೆಯಲ್ಲಿ ತಮ್ಮ ಮಗಳು ಕಾಣಿಸದೆ “ಗೌರಿ” ಎಂದರು.

“ಹಾ..ಆಕೆಗೇನೂ ಆಗಿಲ್ಲ ಚಂದಾಗವ್ಳೆ ಹೆದರಬೇಡಿ, ಒಳಗೆ ಬರಬಹುದೇ?” ಎಂದು ತಾವೇ ಒಳಗೆ ಬಂದರು ಕಮಲಮ್ಮ ಭದ್ರಪ್ಪ. ಅಲ್ಲೇ ಹಾಸಿದ್ದ ಚಾಪೆಯಮೇಲೆ ಕುಳಿತುಕೊಂಡರು. ಇದ್ದುದರಲ್ಲೇ ಸಾವರಿಸಿಕೊಂಡು ಶಂಕರಿ ಬಂದವರಿಗೆ ಕುಡಿಯಲು ಚೊಂಬಿನಲ್ಲಿ ನೀರು ಒಂದು ಲೋಟ ತಂದು ಮುಂದಿರಿಸಿದಳು.

“ಮಗನ ಸಂಗತಿ ಪೇಪರಿನಾಗೆ ಓದಿ ಶಾನೇ ದುಃಖವಾಯ್ತು. ಅವನು ಮಾಡಿದ್ದು ಅವನು ಉಣ್ಣಂಗಾಯ್ತು. ಸಿಟ್ಟಿನ ಕೆಲಸ ಅನ್ನುವುದಕ್ಕಿಂತ ತನ್ನೊಡಲ ಕೂಸು ಸ್ವಂತ ಮಾವನಿಂದಲೇ ಅಸು ನೀಗಿದ್ದು ಗೌರಮ್ಮನಿಗೆ ಮಾಯದ ಗಾಯವಾಗಿ ನಿಂತುಬಿಟ್ಟಿದೆ. ಆವತ್ತು ಶ್ರೀಕೃಷ್ಣ ಪರಮಾತ್ಮ ಹುಟ್ಟುವ ಮೊದಲು ಭವಿಷ್ಯವಾಣಿ ದೇವಕಿಯ ಹೊಟ್ಟೆಯಲ್ಲಿ ಹುಟ್ಟುವ ಮಗು ಮಾವ ಕಂಸನ ಮೃತ್ಯುವಿಗೆ ಕಾರಣನಾಗುತ್ತಾನೆ ಎಂದು ಹೇಳಿದ್ದಕ್ಕೆ ಸ್ವಂತ ಮಾವನೇ ತಂಗಿಗೆ ಹುಟ್ಟಿದ ಮಕ್ಕಳನ್ನೆಲ್ಲ ಹಸುಗೂಸೆನ್ನದೆ ಕೊಂದುಬಿಟ್ಟ. ಇಲ್ಲಿ ಕುಡಿತದ ದಾಸನಾಗಿದ್ದ ಮಾವ ಗೋಪಾಲ ತನ್ನ ದುಷ್ಚಟಕ್ಕೆ ಕಾಸು ಕೊಡಲಿಲ್ಲ ಎಂಬ ಒಂದೇ ಕಾರಣದಿಂದ ಏನೂ ಅರಿಯದ ಕಂದನನ್ನು ಅಮಾನುಷವಾಗಿ ಕೊಂದಂಗಾಯ್ತು ಈ ಕಂಸ, ಪುರಾಣದ ಕತೆ ಮತ್ತೆ ಮುನ್ನೆಲೆಗೆ ಬಂದಗಾಯ್ತು. ಈ ಅಳುಕು ಗೌರಮ್ಮನ ಮನಸ್ಸಿನಲ್ಲಿ ಭದ್ರವಾಗಿ ಉಳಿದುಬಿಟ್ಟಿದೆ. ಇದನ್ನು ಹೋಗಲಾಡಿಸಲು ಗೌರಮ್ಮನನ್ನು ನೀವೊಮ್ಮೆ ನೋಡಿ ಅಶೀರ್ವಾದ ಮಾಡಿ ಬನ್ನಿ. ಈಗವಳು ಮತ್ತೆ ಬಸಿರಾಗವ್ಲೆ. ಮನಸ್ಸಿನಲ್ಲಿರುವ ಅವಳ ಕೊರಗು ದೂರಾಗಿ ಸುಖವಾಗಿ ಮಗು ಮನೆಗೆ ಬರುವಂತಾಗಲಿ. ನಿಮ್ಮನ್ನು ಕರೆದುಕೊಂಡು ಹೋಗೋಣವೆಂದು ನಾವಿಬ್ಬರೂ ಯಾರಿಗೂ ತಿಳಿಸದೇ ಬಂದಿದ್ದೀವಿ. ಗಾಡಿ ತಂದಿದ್ದೀವಿ ಸಿದ್ಧವಾಗಿ ಹೊರಡಿ ನಮ್ಮ ಜೊತೆ” ಎಂದು ಒತ್ತಾಯಪೂರ್ವಕ ಆಹ್ವಾನ ನೀಡಿದರು.

ರಾಚಪ್ಪ, ಶಂಕರಿಗೆ ಎಲ್ಲವೂ ಅಯೋಮಯವಾಗಿ ಕಂಡಿತು. ಬಂದಿದ್ದವರು ಬೇಡವೆಂದರೂ ಇದ್ದ ಹಾಲಿನಲ್ಲಿ ಕಾಫಿ ಮಾಡಿ ಕೊಟ್ಟರು. ಹುರಿಹಿಟ್ಟನ್ನು ಕಲೆಸಿ ಇರುವುದರಲ್ಲಿಯೇ ಉತ್ತಮವಾಗಿದ್ದ ಬಾಳೆಹಣ್ಣುಗಳ ಜೊತೆಯಲ್ಲಿ ತಟ್ಟೆಯಲ್ಲಿ ಮುಂದಿಟ್ಟರು. ತಾವು ಕೈಗೆ ಸಿಕ್ಕಿದ ಒಂದೆರಡು ಬಟ್ಟೆಗಳನ್ನು ಬ್ಯಾಗೊಂದರಲ್ಲಿ ತುರುಕಿಕೊಂಡು ಹೊರಡಲು ಸಿದ್ಧವಾದರು.

“ಗೌರಮ್ಮಾ..ಗೌರಿ ಇದೇನಮ್ಮ ಅಂಗಡಿ ಬಾಗಿಲು ತೆರೆದೇಇಲ್ಲ? ಮಲಗಿಬಿಟ್ಟಿದ್ದೀಯಾ? ಎಂದು ಹೇಳುತ್ತಾ ಬಾಗಿಲು ಬಡಿದಾಗ ತನ್ನ ಆಲೋಚನಾ ಸುಳಿಯಲ್ಲಿದ್ದ ಗೌರಿ ಎಚ್ಚೆತ್ತು ಪೇಪರನ್ನು ಬೇಗನೆ ಒಂದೆಡೆ ಸರಿಸಿ ಬಾಗಿಲು ತೆರೆದಳು.

ಹೊರಗೆ ನಿಂತವರನ್ನು ನೋಡಿದಾಕ್ಷಣ ಅವಳಿಗೆ ಮಾತೇ ಹೊರಡಲಿಲ್ಲ. ಅತ್ತೆ ಮಾವನ ಜೊತೆಯಲ್ಲಿ ತನ್ನ ಅಪ್ಪ, ಅಮ್ಮ ಕೂಡ ಬಂದಿದ್ದಾರೆ. ಓ..ಬೆಳಗ್ಗೇನೇ ಹೋಗಿದ್ದು ಇದಕ್ಕೇನಾ, ಅದನ್ನು ಯಾರ ಹತ್ತಿರಾನು ಹೇಳಿಲ್ಲ. ಅವಳ ಮನಸ್ಸು ಸಂತೋಷದಿಂದ ಉಬ್ಬಿತು. ಅನಂದದಿಂದ ಕಣ್ತುಂಬಿ ಬಂತು. ನಾನೆಂಥಹ ಪುಣ್ಯ ಮಾಡಿದ್ದೆ ನನಗೆ ಇಂಥಹ ಮನೆ ಸಿಕ್ಕಿತು. ಛೇ..ನಾನೇ ಸಣ್ಣ ಮನಸ್ಸಿನವಳಾದೆ. ನನ್ನ ಅತ್ತೆಮಾವನವರು ನನ್ನ ಮನದಲ್ಲಿರುವುದನ್ನು ಅವರೇ ಅರ್ಥ ಮಾಡಿಕೊಂಡು ಅಪ್ಪ ಅಮ್ಮನನ್ನು ಕರೆತಂದಿದ್ದಾರೆ ಅಂದುಕೊಂಡು ಮನದಲ್ಲಿಯೇ ಅವರಿಗೆ ವಂದಿಸುತ್ತಾ ಅಪ್ಪ, ಅಮ್ಮನನ್ನು ತಬ್ಬಿಕೊಂಡು “ನನ್ನನ್ನು ಕ್ಷಮಿಸಿಬಿಡಿ” ಎಂದು ಅತ್ತುಬಿಟ್ಟಳು.

“ಛೀ..ಹುಚ್ಚಿ, ಇಂಥಾ ಹೊತ್ತಿನಲ್ಲಿ ಅಳಬಾರದು, ಆಗಿದ್ದು ಹಣೆಯಲ್ಲಿ ಬರೆದಂಗೆ ಆಗಿಹೋಯಿತು. ಮುಂದೆ ಬರುವುದನ್ನು ಕಾಣಬೇಕು. ಎಲ್ಲಿ ನಗು ಮತ್ತೆ” ಎಂದು ಗೌರಿಯ ಕಣ್ಣೀರು ಒರೆಸುತ್ತ “ನಿನ್ನ ಮನಸಿನಲ್ಲಿರುವ ಕೊರಗನ್ನು ಹೊರಹಾಕಿಬಿಡು. ಚಂದದ ಕೂಸನ್ನು ಹೆತ್ತುಕೊಡು. ನಮಗೆಲ್ಲ ಸಂತೋಷವಾಗುತ್ತದೆ” ಎಂದು ಸಾಂತ್ವನಗೈಯುತ್ತಾ ಅಕೆಯನ್ನು ತಬ್ಬಿ ಹಿಡಿದೇ ಮನೆಯೊಳಕ್ಕೆ ಕಾಲಿಟ್ಟರು ಗೌರಿಯ ತಾಯಿ, ತಂದೆ.

ಇದನ್ನು ಕಂಡ ಅವಳ ಅತ್ತೆ ಮಾವ ತಾವು ಆಲೋಚಿಸಿ ಈ ಯೋಚನೆ ಮಾಡಿದ್ದು, ಹೋಗಿಬಂದದ್ದು, ಫಲ ನೀಡಿದ್ದ ಆನಂದವನ್ನು ಅನುಭವಿಸುತ್ತ ಹೀಗೆಯೇ ಒಳ್ಳೇದನ್ನೇ ನೀಡು ಎಂದು ಭಗವಂತನನ್ನು ಪ್ರಾರ್ಥಿಸಿಕೊಂಡರು.

ಬಿ.ಆರ್.ನಾಗರತ್ನ, ಮೈಸೂರು   

13 Comments on “ಕಂಸ.

  1. ಏನೂ ಅರಿಯದ ಕಂದಮ್ಮನನ್ನು ಕೊಂದ ರಾಕ್ಷಸ ಮಾವ ನಿಜಕ್ಕೂ ಕಂಸನೇ….. ಚೆಂದದ ಕತೆ.

  2. ದುರಂತ ಇದ್ದರೂ. ಸುಂದರ ಹಳ್ಳಿ ಪರಿಸರ, ಸರಳ ಬದುಕನ್ನು ವಿವರಿಸಿದ ಕಥೆ ಸೊಗಸಾಗಿದೆ.

  3. ಸುದ್ದಿ ತುಣುಕೊಂದರಿಂದ ಸುಂದರ ಕಥೆ ಹೆಣೆಯುವುದರಲ್ಲಿ ನಿಸ್ಸೀಮರು ನೀವು… ನಾಗರತ್ನ ಮೇಡಂ. ಅನ್ವರ್ಥ ಶೀರ್ಷಿಕೆಯ ಚಿಕ್ಕಥೆ, ಚೊಕ್ಕಥೆ…ಎಂದಿನಂತೆ ಚಂದ!

  4. ಕಥೆ ಸೊಗಸಾಗಿದೆ.ಸಂಬಂಧಗಳು ಹೇಗೆ ಹದಗೆಡುತ್ತದೆ ಎಂದು ಹೇಳುವುದರ ಜೊತೆಗೆ ಒಳ್ಳೆಯ ಮನಸುಗಳು ಒಳ್ಳೆಯದನ್ನೇ ಬಯಸುತ್ತವೆ ಎಂಬ ಸಂದೇಶವನ್ನೂ ತಿಳಿಸಿದ್ದೀರಿ.

  5. ಪ್ರಾರಂಭದಲ್ಲಿ ಹೃದಯ ಹಿಂಡುವಂತಾಗಿದ್ದರೂ ಕತ್ತಲೆಯ ನಂತರ ಕಂಡು ಬಂದ ಬೆಳಕಿನ ಕಿರಣ ನೆಮ್ಮದಿ ನೀಡಿತು. ಚಂದದ ಕಥೆ.

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *