
ನವಮಸ್ಕಂದ – ಅಧ್ಯಾಯ – 3
ಸೂರ್ಯವಂಶ ಕಥಾ
ಅಂಬರೀಶ ಪುತ್ರ ಹರಿತ
ನಂತರದಿ ಪುರುಕುತ್ಸ
ಅದೇ ವಂಶದ ಸತ್ಯರ್ವತನ ಪುತ್ರ ತ್ರಿಶಂಕು
ತ್ರಿಶಂಕುವಿಗೆ ಸಶರೀರನಾಗಿ
ಸ್ವರ್ಗಕ್ಕೇರುವ ಅಭಿಲಾಷೆ
ಗುರು ವಸಿಷ್ಠರ ನಿರಾಕರಣೆಯ ಬೇಸರದಿ
ಅವರ ಮಾತ ಮೀರಿ ವಿಶ್ವಾಮಿತ್ರರಲ್ಲಿಗೆ
ಹೋಗಿ ಬೇಡಿದ ನಡೆ ಕಂಡು ಕುಪಿತ ವಸಿಷ್ಠ
ಗುರುದ್ರೋಹಿ ತ್ರಿಶಂಕುವಿಗೆ
ನೀಡಿದ ಚಾಂಡಾಲತ್ವದ ಶಾಪ
ವಿಶ್ವಾಮಿತ್ರರ ಬೆಂಬಲದಿ ಯಾಗ ಮಾಡಿ
ಸ್ವರ್ಗಕ್ಕೇರಿದರೂ ಚಂಡಾಲನನ್ನು ಸ್ವರ್ಗಕ್ಕೇರಲು
ಬಿಡದ ದೇವತೆಗಳಿಗೆ ಸೆಡ್ಡು ಹೊಡೆದ ವಿಶ್ವಾಮಿತ್ರ
ಅಂತರಿಕ್ಷದೇ ಅವಗೆ ಸ್ವರ್ಗನಿರ್ಮಿಸಿ
ತ್ರಿಶಂಕುಸ್ವರ್ಗದ ಇಂದ್ರನನ್ನಾಗಿಸಿದ
ಕಥೆ ರೋಚಕ
ತ್ರಿಶಂಕುವಿನ ಮಗ ಹರಿಶ್ಚಂದ್ರ
ಜಗತ್ತಿನ ಏಕಮಾತ್ರ ಸತ್ಯಸಂಧ
ತನ್ನೆಲ್ಲ ಕರ್ಮಬಂಧದಿಂ ಮುಕ್ತನಾಗಿ
ಸ್ವರ್ಗವೇರಿದ ಹರಿಶ್ಚಂದ್ರ
ರೋಹಿತಾಶ್ವ ಹರಿಶ್ಚಂದ್ರ ಪುತ್ರ
ಬಹುಕಾಲ ಸಂತಾನವಿಲ್ಲದ ಕೊರಗಿನಿಂದ
ಸಂತಾನಪೇಕ್ಷಿ ಹರಿಶ್ಚಂದ್ರ
ವರುಣದೇವನ ಪ್ರೀತ್ಯರ್ಥ ಯಾಗಮಾಡಿ
ಪಡೆದ ಮಗನ ಮೋಹದಿ ವರುಣದೇವಗೆ
ಮಗನ ಯಾಗದ ನರಪಶುವಾಗಿ ಮಾಡ್ಪೆನೆಂಬ
ಹರಕೆಯ ತೀರಿಸದೆ ಶಿಶು ಜನನದಿಂದ ಯೌವನದ ಸ್ಥಿತಿಯವರೆಗೆ
ಒಂದಲ್ಲಒಂದು ಕುಂಟು ನೆಪವ ನೀಡುತಲಿದ್ದ
ಪಿತನ ನಡೆಯ ಅರಿವಾಗಿ ರೋಹಿತಾಶ್ವ ತಾನು
ಯಾಗಪಶುವಾಗುವುದರ ಅನಿವಾರ್ಯತೆಗೆ ಬೆದರಿ
ವನಕೆ ಓಡಿಹೋಗಲು
ವರುಣದೇವ ಕುಪಿತಗೊಂಡು
ಹರಿಶ್ಚಂದ್ರಗೆ ಮಹೋದರ ವ್ಯಾಧಿಯ ಶಾಪವ ನೀಡಿದ
ವ್ಯಾಧಿಯಿಂ ಬಳಲುತಿರ್ಪ
ಪಿತನ ದರ್ಶನಕೆ ಬರುತಿರ್ಪ ರೋಹಿತಾಶ್ವಗೆ
ದಾರಿತಪ್ಪಿಸಲು ದೇವೇಂದ್ರ
”ಹರಿಶ್ಚಂದ್ರ ತನ್ನ ಸುಳ್ಳು ಮಾತಿಂದ
ವರುಣದ ವಂಚಿಸಿದ ಪರಿಣಾಮದ ಯಾತನೆ ನೀಗದು
ಅದ ನಿವಾರಿಸಲು ನೀ ಪುಣ್ಯಕ್ಷೇತ್ರಗಳ ಯಾತ್ರೆ ಮಾಡು “
ಎಂದು ಅವನ ಆರು ವರುಷಗಳ ಯಾತ್ರೆಗೆ ಕಳುಹಿಸಿದ
ಹರಿಶ್ಚಂದ್ರ ಮಗನಿಗೆ ಪ್ರತಿಯಾಗಿ
ಓರ್ವ ಬ್ರಾಹ್ಮಣಕುಮಾರನ ಯಜ್ಞಪಶುವಾಗಿಸಿ ಯಾಗಮಾಡಿ
ಮಹರ್ಷಿ ಉಪದೇಶದ ಮಂತ್ರದಿಂ
ನರಪಶುವ ವಧಿಸದೆ ಯಜ್ಞಸಂಪನ್ನವಾಗಿಸೆ
ದೇವತೆಗಳು ಸಂತುಷ್ಟರಾದರು
ಇದೇ ಸೂರ್ಯವಂಶದ ಕುಡಿ ಭಗೀರಥನು
ಅಪಾರ ಶ್ರಮದಿಂ ಗಂಗೆಯ ಭೂಮಿಗೆ ತಂದು
ಸಕಲ ಜೀವರಾಶಿಗೆ ಗಂಗಾಸ್ನಾನದಿಂ
ಮುಕ್ತಿಪಥವ ನೀಡಿದ
ಸೂರ್ಯವಂಶದ ಕೀರ್ತಿಯ
ಜಗಕ್ಕೆಲ್ಲ ಹರಡಿದ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : http://surahonne.com/?p=43130
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಎಂದಿನಂತೆ ಕಾವ್ಯ ಭಾಗವತ ಓದಿಸಿಕೊಂಡುಹೋಯಿತು.. ಸಾರ್
ಚೆನ್ನಾಗಿದೆ
ಆಸಕ್ತಿದಾಯಕವಾಗಿ ಮೂಡಿಬಂದಿರುವ ಕಾವ್ಯ ಭಾಗವತದ ಭಾಗ ಇದಾಗಿದೆ.