ಲಹರಿ

ಶ್ರಾವಣ ಹಬ್ಬಗಳ ದಿಬ್ಬಣ

Share Button

ಅಬ್ಬರದ ಮಳೆಯ ಆಷಾಢ ಕಳೆದ ನಂತರ ಬರುವ ಶ್ರಾವಣವೆಂದರೆ ಸಂತೋಷ, ಸಂಭ್ರಮ, ಆಹ್ಲಾದ, ಭಕ್ತಿ ಭಾವ, ರೋಮಾಂಚನ. ಶ್ರಾವಣದಲ್ಲಿ ನೋವು ಕಾಣದು ನಲಿವಿನ ಅರಮನೆಯಂತೆ ಶ್ರಾವಣದ ಋತುಗಾನ. ಹಚ್ಚ ಹಸಿರಿಂದ ಮೈದಳೆದ ಭೂದೇವಿ, ಅಬ್ಬರದ ಮಳೆ ಕೊಂಚ ಕಡಿಮೆಯಾಗಿ ಹಬ್ಬಗಳ ದಿಬ್ಬಣವನ್ನು ತರುವ ಶ್ರಾವಣ ನಿಜಕ್ಕೂ ಉತ್ಸಾಹ, ಚೇತನ. ಒಲವಿನ ಸಂಕೀರ್ತನ. ಬದುಕಿನ ಮಧುರ ಸರಿಗಮ. “ಶ್ರಾವಣಾಬಂತು ಕಾಡಿಗೇ ಬಂತು ನಾಡಿಗೇ” ಎಂದ ವರಕವಿ ಬೇಂದ್ರೆ ವಾಣಿಯಂತೆ ಈ ಶ್ರಾವಣ ಮಾಸ ಕಾಡು , ನಾಡು ಎಲ್ಲೆಲ್ಲೂ ಸೊಬಗಿನ ಸಿರಿಯನ್ನು ಹರಡುವುದು.ಕಾಡನ್ನು ಹಚ್ಚಹಸಿರನ್ನು ಹೊದ್ದ ನವವಧುವಂತೆ ಮಾಡಿದರೆ ನಾಡಿನಲ್ಲಿ ಸಾಲು ಸಾಲು ಹಬ್ಬಗಳ ಸಂಭ್ರಮದ ಸವಿಯೂಟ.

ಆಷಾಢ ಅಮವಾಸ್ಯೆಯ ಭೀಮೇಶ್ವರ ವ್ರತ ಮುಗಿಯುತ್ತಿದ್ದಂತೆ ಶ್ರಾವಣ ಅಡಿಯಿಡುತ್ತದೆ. ” ನಾಗರ ಪಂಚಮಿ ನಾಡಿಗೆ ದೊಡ್ಡದು” ಎಂಬಂತೆ ಪಂಚಮಿ ಹಬ್ಬದಿಂದ ಮೊದಲ್ಗೊಂಡು ಆರಂಭವಾದ ಹಬ್ಬಗಳ ಸಡಗರ ಮನೆ ಮನದಲ್ಲಿ ಸಡಗರವನ್ನು ತರುತ್ತದೆ. ಪ್ರಕೃತಿಯ ಆರಾಧನೆಯನ್ನು ಮಾಡುವ ನಾಗರ ಪಂಚಮಿ ನಾಗನಿಗೆ ತನುವೆರೆದು, ಭಕ್ತಿಯಿಂದ ಪೂಜಿಸುವ ಮೂಲಕ ಪ್ರಕೃತಿಯನ್ನು ಪ್ರೀತಿಸು, ಸಂಕುಲವನ್ನು ಪ್ರೀತಿಸು, ರಕ್ಷಿಸು ಎಂಬ ಸಂದೇಶ ನೀಡುತ್ತದೆ. ಅಲ್ಲದೆ ತವರಿಗೆ ಸಹೋದರಿಯನ್ನು ಕರೆಯುವ ಈ ಹಬ್ಬ ಸಹೋದರ ಸಹೋದರಿಯರ ಒಲವಿನ ಬಾಂಧವ್ಯದ ಸಂಕೇತ. ತಂಬಿಟ್ಟು ಉಂಡೆ ಮಾಡಿ ನಾಗನಿಗೆ ನೈವೇದ್ಯ ಮಾಡುವುದು ಸಂಪ್ರದಾಯ. ನಾಗರ ಪಂಚಮಿಯ ನಂತರ ಬರುವುದೇ ವರಗಳ ನೀಡುವ ವರಮಹಾಲಕ್ಷ್ನಿ ವ್ರತ. ಮಾತೆ ಮಹಾಲಕ್ಷ್ಮಿಯ ಪೂಜೆಯನ್ನು ಮುತ್ತೈದೆಯರು ಭಕ್ತಿಯಿಂದ ಮಾಡಿ ಮುತ್ತೈದೆಯರಿಗೆ ಅರಿಷಿಣ ಕುಂಕುಮ ಫಲ ಪುಷ್ಪ , ಭೋಜನ ನೀಡಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುವ ವ್ರತ.

ಅದರನಂತರ ಶ್ರಾವಣದ ಮಾಸದಲ್ಲಿ ಸಾಲಿನಲ್ಲಿ ಬರುವ ರಕ್ಷಾಬಂಧನ ಪೌರ್ಣಿಮೆಯ ದಿನದಲ್ಲಿ ಅಣ್ಣನಿಗೆ, ತಂಗಿ ” ಅಣ್ಣಾ, ನಿನ್ನ ರಕ್ಷೆ ನನ್ನ ಮೇಲಿರಲಿ” ಎಂದು ರಕ್ಷೆಯನ್ನು ಬಂಧಿಸುವ ಅಣ್ಣತಂಗಿಯರ ಒಲವಿನ ಹಬ್ಬ. ಯಜುರ್ ಹಾಗೂ ಋಗ್ ಉಪಾಕರ್ಮಗಳು ಇದೇಸಂದರ್ಭದಲ್ಲಿ ಬರುತ್ತವೆ. ಓಣಂ ಆಚರಣೆ ಕೂಡ ಶ್ರಾವಣದ ಶುಭ ಸಮಯದಲ್ಲಿ ಬರುವುದು.

PC: Internet

ತದನಂತರ ಶ್ರಾವಣ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ಬರುವ ಶ್ರೀಕೃಷ್ಣ ಜನ್ಮಾಷ್ಠಮಿ, ಉಪವಾಸ ವ್ರತ, ಮಾರನೆಯದಿನ ವಿಟ್ಲಪಿಂಡಿ, , ಮೊಸರು ಕುಡಿಕೆ ಸಂಭ್ರಮಗಳು ಶ್ರೀಕೃಷ್ಣ ಪರಮಾತ್ಮನ ಬಾಲ್ಯವನ್ನು, ಭಗವಂತನ ಅವತಾರದ ಮಹುಮೆಯನ್ನು, ಧರ್ಮದ ಉಳಿಸುವಿಕೆಗಾಗಿ ಅಧರ್ಮದ ನಾಶನಡೆದ ಪರಿ ಈ ಎಲ್ಲವನ್ನು ಮನುಜರಲ್ಲಿ ನೆನಪಿಸುತ್ತ ಭಕ್ತಿಯೊಂದೇ ಪರಮಾತ್ಮನ ಮನವನ್ನು ಗೆಲ್ಲಲು ಇರುವ ಮಾರ್ಗ ಎಂಬುದನ್ನು ತಿಳಿಸುತ್ತದೆ.

ಶ್ರೀಕೃಷ್ಣ ಜನ್ಮಾಷ್ಟಮಿಯೊಂದಿಗೆ ಶ್ರಾವಣ ಮಾಸದ ಹಬ್ಬಗಳ ದಿಬ್ಬಣ ಸಂಪನ್ನವಾದರೂ ಮುಂಬರುವ ಬಾದ್ರಪದ ಶುಕ್ಲದ ಚೌತಿಯನ್ನು , ಗಣಪನನ್ನು ಬರಮಾಡಿಕೊಳ್ಳಲು ನಾಂದಿ ಹಾಡುತ್ತದೆ.

ಹೀಗೆ ಶ್ರಾವಣ ಹಬ್ಬಗಳ ದಿಬ್ಬಣ, ಮನಸಿಗೆ ಸಂತಸ ಸಂಭ್ರಮದ ಭಕ್ತಿಯ ಮಾಸ. ಆದರೆ…… ಇಂದಿನ ಧಾವಂತದ, ಆಡಂಬರದ ,ಹಾಗೂ ವಿಭಕ್ತ ಕುಟುಂಬಗಳ ನೆಲೆಯಲ್ಲಿ ಸಂಸ್ಕೃತಿ, ಸಂಸ್ಕಾರ , ಸಂಪ್ರದಾಯಗಳನ್ನು, ಮೌಲ್ಯಗಳನ್ನು, ಪರಿಸರ ಪ್ರೇಮವನ್ನು, ಬಾಂಧವ್ಯವನ್ನು ಬೆಸೆಯುವ ಹಬ್ಬಗಳ ಕಳೆ ಮಾಸದಿರಲಿ ಎಂಬುದು ಎಲ್ಲರ ಆಶಯ ಹಾಗೂ ಕಳಕಳಿಯಾಗಬೇಕು.

ಶುಭಲಕ್ಷ್ಮಿ ಆರ್ ನಾಯಕ್

3 Comments on “ಶ್ರಾವಣ ಹಬ್ಬಗಳ ದಿಬ್ಬಣ

  1. ಶ್ರಾವಣ ಮಾಸದಲ್ಲಿ ಆಚರಿಸಲ್ಪಡುವ ಹಬ್ಬಗಳ ಕಿರುಪರಿಚಯದೊಂದಿಗೆ ಉತ್ತಮ ಆಶಯವನ್ನು ಹೊಂದಿದ ಲೇಖನ ಚೆನ್ನಾಗಿದೆ ಮೇಡಂ.

  2. ಶ್ರಾವಣದ ಹಬ್ಬಗಳಿಗೆ, ನಿಮ್ಮ ಲೇಖನ ತಳಿರು ತೋರಣದಂತೆ ಸೊಗಸಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *