ಬೆಳಕು-ಬಳ್ಳಿ

ಕೃತಜ್ಞತಾ ಪೂರ್ವಕ ನಮನ

Share Button

ಕಾಡುವ ಅನಾರೋಗ್ಯದ ನಡುವೆ ಕಣ್ಣೀರು ಸುರಿಸುತ್ತಾ
ಆ ಭಗವಂತನ ಕಡೆಗೆ ನೋಡುವೆ
ನನಗ್ಯಾಕೆ ಈ ಸ್ಥಿತಿ ತಂದಿರುವೆ ಎಂದಲ್ಲ
ಅದನ್ನು ಎದುರಿಸುವ ಶಕ್ತಿ ನೀಡಿದೆ ಎಂದು

ನಿಂತ ನೆಲವೇ ನಡುಗಿ ಭರವಸೆಯೇ ಉಡುಗಿ ಹೋಗಿ
ಕುಸಿದು ಕುಳಿತಾಗ ಆ ಭಗವಂತನ ಕಡೆಗೆ ನೋಡುವೆ
ನನ್ನ ನೆಮ್ಮದಿ ಯಾಕೆ ಕಸಿದುಕೊಂಡೇ ಎಂದಲ್ಲ
ಇಂತಹ ಪರಿಸ್ಥಿತಿ ನಿಭಾಯಿಸುವ ಮನಸ್ಥಿತಿ
ಕೊಟ್ಟೆ ಎಂದು

ಅವಕಾಶಗಳೇ ಮುಚ್ಚಿ ಹೋಗಿ ಬೇರೆ ದಾರಿಯೇ ಸಿಗದಾದಾಗ
ಆ ಭಗವಂತನ ಕಡೆಗೆ ನೋಡುವೆ
ಲಭ್ಯ ಭಾಗ್ಯವ ದೂರ ಮಾಡಿದೆಯೆಂದಲ್ಲ
ಎಲ್ಲೋ ಒಂದು ಕಡೆ ಇದಕ್ಕಿಂತ ಒಳ್ಳೆಯ ವ್ಯವಸ್ಥೆ
ಕಲ್ಪಿಸುತ್ತಿರುವೆ ಎಂದು

ಒತ್ತಡದಲಿ ಮನ ಮುಳುಗಿ ಮಾಡಿದ್ದೆಲ್ಲಾ ವಿಫಲವಾಗುತ್ತಿರುವಾಗ
ಆ ಭಗವಂತನ ಕಡೆಗೆ ನೋಡುವೆ
ಯಾಕೀ ಪರೀಕ್ಷೆ ಮಾಡುತ್ತಿರುವೆ ಎಂದಲ್ಲ
ಮಾಡಿದ ಕೆಲಸಕ್ಕೆ ಕರಗದ ಅನುಭವ ನೀಡಿ ಗಟ್ಟಿ
ಮಾಡಿರುವೆ ಎಂದು

ಸ್ಪರ್ಧೆಯಲಿ ಓಡುತ್ತಾ ಎಡವಿ ಬಿದ್ದಾಗ ನಗುವ ಜನರ ಕಂಡು
ಆ ಭಗವಂತನ ಕಡೆಗೆ ನೋಡುವೆ
ನನಗ್ಯಾಕೆ ಈ ಅಪಹಾಸ್ಯ ಎಂದಲ್ಲ
ಬೀಳಿಸಿದರೂ ಒಳ್ಳೆಯ ಗುರಿ ಸೇರಿಸಿರುವೆ ಎಂದು

ಏನೇನು ಅಲ್ಲದ ನನಗೆ ಎಲ್ಲಾ ನೀನೇ ಕೊಟ್ಟಿರುವಾಗ
ನಿನ್ನನೇಕೆ ದೂಷಿಸಲಿ ಹೇ ಸರ್ವಶಕ್ತ
ನೀ ಇಟ್ಟಂತೆ ಇರುವೆ…..ನೀ ಇಟ್ಟಂತೆ ಇರುವೆ……
ನೀ ತೋರಿದ ದಾರಿಯಲ್ಲಿ ನಡೆವೇ…….ದಾರಿಯಲ್ಲಿ ನಡೆವೇ……

ಶರಣಬಸವೇಶ ಕೆ. ಎಂ

6 Comments on “ಕೃತಜ್ಞತಾ ಪೂರ್ವಕ ನಮನ

  1. ಕಷ್ಟಕಾಲದಲ್ಲೂ ತೃಪ್ತಿ, ನೆಮ್ಮದಿಯನ್ನು ಹೊಂದುವ ಮನಸ್ಥಿತಿ ನೀಡಿದ ದೇವನಿಗೆ ಕೃತಜ್ಞತೆಯ ನಮನಗಳನ್ನು ನೀಡುವ
    ಅರ್ಥಪೂರ್ಣ ಕವನ.

  2. ಇದೇ‌ ಅರ್ಥಪೂರ್ಣ ಕೃತಜ್ಞತೆ…. ಚೆನ್ನಾಗಿದೆ ಸರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *