
ನವಮ ಸ್ಕಂದ – ಅಧ್ಯಾಯ -2
ಅಂಬರೀಶ – 1
ಮನುವಿನ ಪುತ್ರ ನಭ
ಅವನ ಕಿರಿಯ ಪುತ್ರ ನಾಭಾಗ
ಅತಿ ದೀರ್ಘಕಾಲವಂ
ಗುರುಕುಲದಿ ಕಳೆದು
ರಾಜ್ಯಕೆ ಹಿಂದಿರುಗಿ ಬಂದು
ಅಣ್ಣಂದಿರೆಲ್ಲ ರಾಜ್ಯವನೆಲ್ಲ
ತಮ್ಮತಮ್ಮಲೇ ಹಂಚಿಕೊಂಡ ಕ್ರಿಯೆಯ ಕಂಡು
ತಂದೆ ನಭನ ಬಳಿಗೈದು ಅರಿಹೆ
ಅವನಿಚ್ಛೆಯಂತೆ ಅಂಗೀರಸ ಮಹರ್ಷಿಯ
ಸತ್ರಯಾಗಕ್ಕೆ ಸೂತ್ರಗಳ ಉಪದೇಶೀಸಿ
ಅವನಿಂದ ಪಡೆದ ಯಜ್ಞಾವಸನ ಕಾಲದ
ಸಾಮಗ್ರಿಗಳ ಅರಸಿ ಬಂದ ರುದ್ರನಿಗೆ
ಲೋಭವಿಲ್ಲದೆ ಸಮರ್ಪಿಸಿದ ನಾಭಾಗನ
ಮೆಚ್ಚಿ ರುದ್ರ ಧನವೆಲ್ಲದರ ಜೊತೆಗೆ
ಬ್ರಹ್ಮಜ್ಞಾನವ ಉಪದೇಶಿಸಿ
ನಾಭಾಗನೇ ಭಗವದ್ಭಕ್ತಾಗ್ರೇಸರ
ಅಂಬರೀಶ ಮಹಾರಾಜನಾದುದು
ಹರಿಲೀಲೆ
ಅಂಬರೀಶನ ರಾಜ್ಯಪಾಲನೆಯ ಭಾವವೊಂದೇ
ಶ್ರೀಹರಿ ಸೇವೆ
ಸಕಲ ಲೌಕಿಕ ವಿಷಯದಿ ನಿರಾಸಕ್ತಿ
ಮನದಲಿ ಸದಾ ಕೃಷ್ಣಮೂರ್ತಿಯ ಪಾದಧ್ಯಾನ
ಹಸ್ತಗಳು ಭಗವದ್ಭಸೇವಾಕಾರ್ಯ ನರತ
ನೇತ್ರಗಳು ಹರಿಯ ದಿವ್ಯ ದರ್ಶನದಿಂದ
ಮಾತ್ರ ತೃಪ್ತ
ಕರ್ಣಗಳಿಗೆ ಕೇವಲ ಹರಿಕಥಾ ಶ್ರವಣ
ಹರಿಭಕ್ತರ ಪಾದಸ್ಪರ್ಶವಲ್ಲದೆ
ಬೇರಾವ ಸ್ಪರ್ಶಸುಖದ ಅಪೇಕ್ಷೆಯಿಲ್ಲ
ಘ್ರಾಣೇಂದ್ರಿಯಕೆ ಕೇವಲ ತುಳಸಿಯ ಪರಿಮಳ
ನಾಲಿಗೆಗೆ ಭಗವನ್ನಿವೇದಿತ ಪದಾರ್ಥಗಳ ರುಚಿಮಾತ್ರ
ಅನೇಕ ಅಶ್ವಮೇಧ ಯಾಗಗಳ ಮಾಡಿ
ಗೌತಮ, ಅತ್ರಿ, ಅಸಿತ, ವಸುಪಾಲ ಮಹರ್ಷಿಗಳ
ಸಹಸ್ರಾರು ಬ್ರಾಹ್ಮಣರ
ಭೂರಿಭೋಜನ ದಕ್ಷಿಣೆಯಿಂ ತೃಪ್ತಿ ಪಡಿಸಿ
ಇಂದ್ರಾದಿ ಲೋಕಪಾಲಕರಿಗೆ
ಯಜ್ಞ ಹವಿರ್ಭಾಗಗಳನರ್ಪಿಸಿ
ಶ್ರೀಹರಿಯೇ ಸಕಲರ ರಕ್ಷಕನೆಂಬ ಭಾವದಿಂ
ಯಾವ ಆಯುಧದ ರಕ್ಷಣೆಯ ಬಯಸದ
ಅಂಬರೀಶಗೆ ಸದಾ ರಕ್ಷಕನಾಗಿ
ಭಗವತ್ ಅನುಗ್ರಹಿತ ಸುದರ್ಶನ ಚಕ್ರದ ಬೆಂಗಾವಲು
ಶ್ರೀಹರಿ ಪ್ರೀತಿಗೊಂದು ನಿದರ್ಶನ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : http://surahonne.com/?p=43046
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಎಂದಿನಂತೆ ಭಾಗವತದ ಕಾವ್ಯ ಭಾಗ ಓದಿ ಸಿಕೊಂಡು ಹೋಯಿತು ಸೊಗಸಾಗಿ ಬರುತ್ತಿದೆ ಸಾರ್
ಚೆನ್ನಾಗಿದೆ
ಕಾವ್ಯ ಭಾಗವತದಲ್ಲಿ ಮೂಡಿಬಂದ ಅಂಬರೀಶನ ಕಥಾ ಭಾಗವು ಎಂದಿನಂತೆ ಸುಂದರ!
ಶ್ರೀಹರಿಯನ್ನು ಕುರಿತಾದ ಅಂಬರೀಶನ ಭಕ್ತಿ ಪರವಶತೆಯು ಅನನ್ಯವಾದುದೆಂದು ಅರುಹುವ ಕಾವ್ಯ ಭಾಗವತದ ಈ ಭಾಗವೂ ಸರಳ ಸುಂದರವಾಗಿದೆ.