
ಹಸಿರಿರಲಿ ಜಗದಲ್ಲಿ ಸಂತಸವ ಚೆಲ್ಲುತಲಿ
ಉಸಿರನ್ನು ನೀಡುವುದು ಹಸಿರೆಂಬ ವರವು
ಕಸಿದಿಹೆವು ಹಸಿರುಸಿರ ಮಾಲಿನ್ಯ ಮಾಡುತ್ತ
ಹಸಿರಿರಲಿ ಜಗಕೆಂದ – ಗೌರಿತನಯ//೧//
ಬೇಯುತಿದೆ ಬುವಿಯೊಡಲು ಅಗ್ನಿಶಿಖೆ ಉರಿದಂತೆ
ನೋಯುತಿದೆ ತಾಯಮನ ಕೆಂಡವನು ಉಂಡು
ಸಾಯುತಿವೆ ಜೀವಚರ ತಾಪಕ್ಕೆ ಕೋಪಕ್ಕೆ
ಬೇಯುತಿರೆ ಸುಖವಿಲ್ಲ – ಗೌರಿತನಯ//೨//
ಸಾಹಿತ್ಯ ಸುಜ್ಞಾನ ವೃದ್ಧಿಪುದು ಬಾಳುವೆಯ
ಮಾಹಿತಿಯ ನೀಡುವುದು ಸಂತಸವ ತುಂಬಿ
ಸಾಹಿತ್ಯ ಮೊಳಕೆಯನು ಬಿತ್ತಿದರೆ ಜನರಲ್ಲಿ
ಸಾಹಿತಿಯು ಬೆಳೆಯುವನು – ಗೌರಿತನಯ//೩//
ಮಲ್ಲಿಗೆಯ ಕಂಪಂತೆ ಹೊರಸೂಸು ಪರಿಮಳವ
ಎಲ್ಲೆಯನು ಮೀರುತ್ತ ಒಳಿತೆಲ್ಲ ಹರಡಿ
ಪಲ್ಲವಿಸು ಸೊಂಪಾಗಿ ಚಿಗುರನ್ನು ಮೊಳೆಯಿಸುತ
ಸಲ್ಲುವುದು ಗೌರವವು – ಗೌರಿತನಯ//೪//
ಮನವೆಂಬ ಮರ್ಕಟಕೆ ಕಡಿವಾಣ ಹಾಕದಿರೆ
ಘನವಾದ ಈತನುವು ಹೊಂದುವುದು ನಾಶ
ಕನಸುಗಳು ಹತವಾಗಿ ಉಳಿಯುವುದು ಬರಿಬೂದಿ
ಮನಕಿರಲಿ ಕಡಿವಾಣ – ಗೌರಿತನಯ//೫//
–ಶುಭಲಕ್ಷ್ಮಿ ಆರ್ ನಾಯಕ್
ಉತ್ತಮ ಸಂದೇಶ ಹೊಂದಿರುವ ಮುಕ್ತ ಕಗಳು..ಚೆನ್ನಾಗಿ ವೆ ಮೇಡಂ
ಧನ್ಯವಾದಗಳು ಮೇಡಮ್
ದೈನಂದಿನ ಜೀವನದ ಆಗುಹೋಗುಗಳ ಹಿನ್ನೆಲೆಯಲ್ಲಿ ಒಡಮೂಡಿದ ಮುಕ್ತಕಗಳು ಮುತ್ತಿನಂತಿವೆ ಮೇಡಂ…ಧನ್ಯವಾದಗಳು.
ಪರಿಸರ ಕಾಳಹಿಯ ಸಾರುವ ಮುಕ್ತಕ ಬಹಳ ಸೂಕ್ತವಾಗಿದೆ. ಇತರ ಮುಕ್ತಕಗಳು ದಾರಿ ದೀಪವಾಗಿವೆ
ಚಂದದ, ಅರ್ಥವತ್ತಾದ ಮುಕ್ತಕಗಳು